• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊಚ್ಚ ಹೊಸ ಮಿನಿಸ್ಟರನ ಕ್ಷೇತ್ರದಲ್ಲಿ ಹಸಿವಿನಿಂದ ಸತ್ತವರು

By ರವಿ ಬೆಳಗೆರೆ
|

ದುರ್ವಾರ್ತೆ ನನ್ನೂರಿನಿಂದಲೇ ಬಂದಿದೆ. ಅಲ್ಲಿ ಹರಿಜನ ಹೊನ್ನೂರಪ್ಪ ತಿನ್ನಲಿಕ್ಕೆ ಏನೂ ಇಲ್ಲದೆ ಸತ್ತು ಹೋಗಿದ್ದಾನೆ. ಇಲ್ಲಿ ಬೆಂಗಳೂರಿನಲ್ಲಿ ನಿನ್ನೆ ಅಲ್ಲಂ ವೀರಭದ್ರಪ್ಪ ಮಂತ್ರಿಯಾದರು. ಪ್ರಮಾಣ ಸ್ವೀಕರಿಸಿದಾಗ ಸೂಟು, ಕೂಲಿಂಗ್‌ ಗ್ಲಾಸು ಧರಿಸಿದ್ದರು. ಸುತ್ತ ಇದ್ದವರಿಗೆಲ್ಲ ಸ್ವೀಟು ಕೊಟ್ಟರು. ರಾತ್ರಿ ಹೊಟ್ಟೆಗೆ ಏನು ತಿಂದು ಮಲಗಿದರೋ ಗೊತ್ತಿಲ್ಲ. ಕೃಷ್ಣನ ರಾಜ್ಯದಲ್ಲಿ ಉಂಡವನೇ ಜಾಣ. ಉಣ್ಣಲಾಗದೆ ಪ್ರಾಣ ಬಿಟ್ಟವನು ಸೋನಿಯಾಗಾಂಧಿಯನ್ನು ಗೆಲ್ಲಿಸಿ ದಿಲ್ಲಿಗೆ ಕಳಿಸಿದ ಆಫ್ಟರಾಲ್‌ ಮತದಾರ. ಹೆಸರು ಹರಿಜನ ಹೊನ್ನೂರಪ್ಪ. ಮೇರಾ ಭಾರತ್‌ ಮಹಾನ್‌ !

ನೀವು ಬಳ್ಳಾರಿಯ ಅತಿ ಎತ್ತರದ ಕಟ್ಟಡವೊಂದನ್ನು ಹತ್ತಿ ನಿಂತರೆ ಬರಿಗಣ್ಣಿಗೇ ಕಂಡೀತು ಹರಗಿನ ದೋಣಿ ಎಂಬ ನತದೃಷ್ಟಗ್ರಾಮ. ಇದನ್ನು ನಮ್ಮೂರಿನ ಜನ ಅರಗಿಂಡೋಣಿ ಎನ್ನುತ್ತಾರೆ. ಬಳ್ಳಾರಿಯಲ್ಲಿ ‘ಅರಂಗಿಡೋಣ್ಯೋರು' ಅನ್ನಿಸಿಕೊಳ್ಳುವ ಶ್ರೀಮಂತ ಕುಟುಂಬವೊಂದು ಇರುವುದು ಬಿಟ್ಟರೆ- ಶ್ರೀಮಂತಿಕೆಗೂ ಹರಗಿನದೋಣಿ ಗ್ರಾಮಕ್ಕೂ ಸುತರಾಂ ಸಂಬಂಧವಿಲ್ಲ. ಇದು ಕುರುಗೋಡು ವಿಧಾನ ಸಭಾ ಕ್ಷೇತ್ರಕ್ಕೆ ಸೇರಿದ ಹಳ್ಳಿ. ನಿನ್ನೆಯಷ್ಟೇ ಮಂತ್ರಿಯಾದ ಅಲ್ಲಂ ವೀರಭದ್ರಪ್ಪ ಧಣೀ ಇದೇ ಕ್ಷೇತ್ರದಿಂದ ಮೂರು ಸಲ ಶಾಸಕರಾಗಿದ್ದಾರೆ. ಹಿಂದೆ ಇವರಪ್ಪ ಅಲ್ಲಂ ಕರಿಬಸಪ್ಪ ಇಲ್ಲಿ ಶಾಸಕ. ಇವರ ತಾಯಿ ಅಲ್ಲಂ ಸುಮಂಗಳಮ್ಮ ಕೂಡ ಇಲ್ಲಿ ಶಾಸಕಿ. ಹರಗಿನದೋಣಿಯ ಮತದಾರನಿಗೆ ತಂದೆ ಕರಿಬಸಪ್ಪನೂ ಧಣಿಯೇ, ತಾಯಿ ಸುಮಂಗಳಮ್ಮನೂ ಒಡತಿಯೇ, ಮಗ ಅಲ್ಲಂ ವೀರಭದ್ರಪ್ಪನೂ ಧಣಿಯೇ. ಉಣ್ಣಲು ಮಾತ್ರ ತುತ್ತು ಕೂಳಿಲ್ಲ. ಇಪ್ಪತ್ತೆೈದು ವರ್ಷ ಅಲ್ಲಂ ಧಣಿಗಳ ಆಡಳಿತ ಕಂಡ ಕ್ಷೇತ್ರ.

ನೀವೊಮ್ಮೆ ಹೋಗಿ ನೋಡಬೇಕು. ಬಳ್ಳಾರಿಯಿಂದ ಬರೀ 20 ಕಿಲೋ ಮೀಟರ್‌ ದೂರದಲ್ಲಿರುವ ಹರಗಿನದೋಣಿಗೆ ರಸ್ತೆಯೇ ಇಲ್ಲ. ಹೇಗೋ ತಲುಪೋಣ ಎಂದು ಹೊರಟರೆ ಒಂದೂವರೆ ಗಂಟೆ ಸಮಯ ಬೇಕು. ಇಲ್ಲಿ ಬರಗಾಲವೆಂಬುದು 1985ರಿಂದಲೂ ಖಾಯಂ ಆಗಿದೆ. ಮೂರು ಸಾವಿರ ಎಕರೆ ಕೃಷಿ ಯೋಗ್ಯ ಭೂಮಿ ಇದ್ದರೂ, ಅದರಲ್ಲಿ 1600 ಎಕರೆ ಬೀಳು ಬಿದ್ದಿದೆ. ನಾಲ್ಕೂವರೆ ಸಾವಿರ ಜನಸಂಖ್ಯೆ ಇದೆ. ದಲಿತರು, ಬ್ಯಾಡರು, ಲಿಂಗಾಯತರು ಸಮಸಮ ಇದ್ದಾರೆ. ಯಾರೂ ಶ್ರೀಮಂತರಲ್ಲ. ಚುನಾವಣೆ ಬಂದಾಗೊಮ್ಮೆ ಕಾಂಗ್ರೆಸ್ಸಿನವರು ಬರುತ್ತಾರೆ. ಹೆಂಡ ಹಂಚುತ್ತಾರೆ. ಅನಂತರ ತಿರುಗಿ ನೋಡುವುದಿಲ್ಲ. ಹಸಿವು ಭರಿಸಲಾಗದಂತಾದರೆ ಜನ ಸತ್ತು ಹೋಗುತ್ತಾರೆ. ಹರಿಜನ ಹೊನ್ನೂರಪ್ಪನದು ಹಸಿವಿನಿಂದಾದ ಸಾವೋ ? ಸ್ವಾಭಾವಿಕ ಮರಣವೋ ಅಂತ ಕೇಳಿಕೊಳ್ಳುವುದೇ ನಿರ್ಲಜ್ಜತನದ ಪರಮಾವಧಿ. ಈ ಹರಗಿನದೋಣಿ ಗ್ರಾಮ ಮನುಷ್ಯ ಮಾತ್ರರಿಗೆ ಆವಾಸ ಯೋಗ್ಯವಾಗಿದೆಯಾ ಅಂತ ಕೇಳಿಕೊಳ್ಳಬೇಕಾಗಿರುವುದು ಕೃಷ್ಣರ ಜವಾಬ್ದಾರಿ. ಆತ ಮೈ ಮರೆತು ಯಾವ ಕಾಲವಾಯಿತು ?

ಹರಗಿನದೋಣಿಯ ದುರಂತ ಹೇಗಿದೆ ನೋಡಿ. ಒಂದು ಕಾಲಕ್ಕೆ ಇದು ಉಳಿದೆಲ್ಲ ಹಳ್ಳಿಗಳಂತೆ ಸಮೃದ್ಧವಾಗಿಯೇ ಇತ್ತು. ಇದ್ದಕ್ಕಿದ್ದಂತೆ ಇಲ್ಲಿ ಮ್ಯಾಂಗನೀಸ್‌ ಅದಿರಿನ ನಿಕ್ಷೇಪ ಪತ್ತೆಯಾಯಿತು. ಊರ ಮಂದಿಗೆ ಮುಳುವಾದದ್ದೇ ಅದು. ಈಗ್ಗೆ ಆರು ವರ್ಷದ ಹಿಂದೆ ಧಣಿ ಅಲ್ಲಂ ವೀರಭದ್ರಪ್ಪ ಈ ಊರಿಗೆ ಬಂದು ಇಲ್ಲೊಂದು ಕೆರೆ ಕಟ್ಟಿಸುತ್ತೇನೆ ಅಂದ. ಅದಕ್ಕೆ ಸ್ಥಳ ಪರಿಶೀಲನೆ ಮಾಡುತ್ತೇನೆ ಅಂದ. ಊರ ಮಂದಿ ಧಣಿಯನ್ನು ನಂಬಿದರು. ಆದರೆ ಅಲ್ಲಂ ವೀರಭದ್ರಪ್ಪ ಬಂದಿದ್ದು ಕೆರೆ ಕಟ್ಟಿಸಲಿಕ್ಕಾಗಿ ಅಲ್ಲ. ಊರಿನ 450 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಮಾಡಿಸಲು! ಮೊದಲಿಂದಲೂ ಅಲ್ಲಂ ಕುಟುಂಬ ಮ್ಯಾಂಗನೀಸ್‌ ಮತ್ತು ಕಬ್ಬಿಣದ ಅದಿರುಗಳ ಗಣಿಗಾರಿಕೆ ಮಾಡಿದಂತಹುದು. ಇನ್ನೇನು ಅದರಲ್ಲಿ ಪೂರ್ತಿ ಲಾಸೆದ್ದು ಮನೆ ಮಠ ಮಾರಿಕೊಳ್ಳಬೇಕು ಎಂಬ ಹಂತದಲ್ಲಿ ಅದೃಷ್ಟ ಖುಲಾಯಿಸಿ ಬರೀ ಅದಿರಿನ ಪುಡಿಗೆ ಪ್ರಚಂಡ ರೇಟು ಬಂದು ಉದ್ಧಾರವಾದವರು. ಅಂಥ ಧಣಿಗಳು ಹರಗಿನದೋಣಿಯಲ್ಲಿ ನೆಲ ಅಗೆಯಲು ಬಾರದೆ ಇರುತ್ತಾರೆಯೇ ? ಆದರೆ ಇವರಿಗೆ ಕೇಂದ್ರ ಸರ್ಕಾರ ಗಣಿ ಅಗೆಯಲು ಪರವಾನಗಿ ಕೊಡಲಿಲ್ಲ. ಇದು ಕಂದಾಯ ಇಲಾಖೆಗೆ ಸೇರಿದ ಭೂಮಿಯಾಗಿತ್ತು. ಗಣಿಗಾರಿಕೆಯನ್ನು ಜನತಾದಳದ ಶಿವರಾಮ ರೆಡ್ಡಿ ಮತ್ತು ಊರ ಜನ ವಿರೋಧಿಸಿ ಹೋರಾಡಿದರು. ಕೆಲವು ದಿನ ಸುಮ್ಮನಿದ್ದ ಧಣಿಗಳು ಕಡೆಗೂ ಗುದ್ದಲಿ ಇಕ್ಕಿಯೇ ಬಿಟ್ಟರು. ಅಂದಿನಿಂದ ಈವತ್ತಿನ ತನಕ ಗಣಿಗಾರಿಕೆ ಅವ್ಯಾಹತವಾಗಿ ನಡೆದೇ ಇದೆ. ಊರು ಮಾತ್ರ ಉದ್ಧಾರವಾಗಲೇ ಇಲ್ಲ.

ಕೆಲ ದಿನ ಊರ ಮಂದಿಗೆ ಕೂಲಿ ಸಿಕ್ಕಿತು. ಅನಂತರ ಗಣಿಗಾರಿಕೆಗೆ ಯಂತ್ರಗಳು ಬಂದವು. ಕಾರ್ಮಿಕರು ಗುಡಿಸಲುಗಳಿಗೆ ವಾಪಾಸಾದರು. ಅನಂತರ ಗಣಿಗಳೂ ಖಾಲಿಯಾಗಿ ಮುಚ್ಚಿ ಹೋದವು. ಹರಗಿನಡೋಣಿಯಲ್ಲಿರುವ ಮೂರು ಗಣಿಗಳ ಪೈಕಿ ಎರಡು ಮುಚ್ಚಿವೆ. ಆ ಪೈಕಿ ಒಂದು ಟಿಫೈನ್‌ ಬ್ಯಾರಿಟೀಸ್‌ ಎಂಬ ಕಂಪೆನಿ ಇಲ್ಲಿನ ಅದಿರು ಒಯ್ದು ಬಳ್ಳಾರಿಯಲ್ಲಿ ರೆಡ್‌ ಆಕ್ಸೈಡ್‌ ಮಾಡಿ ಉದ್ಧಾರವಾಯಿತು. ಆದರೆ ಕಾರ್ಮಿಕರಿಗೆ ಅನಾಮತ್ತು ಮೂರು ಲಕ್ಷ ರೂಪಾಯಿಯಷ್ಟು ವಂಚನೆ ಮಾಡಿತು. ತಾನು ಕಟ್ಟಬೇಕಾದ ಐದು ಲಕ್ಷ ರೂಪಾಯಿಗಳ ಪ್ರಾವಿಡೆಂಟ್‌ ಫಂಡ್‌ ವಂತಿಗೆಯನ್ನೂ ಕಟ್ಟಲಿಲ್ಲ. ಈಗ ಕಂಪೆನಿ ಅಸ್ತಿತ್ವದಲ್ಲೇ ಇಲ್ಲ. ಎರಡನೆಯ ಕಂಪೆನಿಯದೂ ಇದೇ ಕತೆ. ಸದ್ಯಕ್ಕೆ ಹರಗಿನದೋಣಿಯಲ್ಲಿ ಉಳಿದಿರುವುದು ಸ್ವತಃ ಮಿನಿಸ್ಟರ್‌ ಅಲ್ಲಂ ವೀರಭದ್ರಪ್ಪನವರ ಒಡೆತನದ ಒಂದು ರೋಗಗ್ರಸ್ತ ಕಂಪೆನಿ ಮಾತ್ರ. ಯಾವತ್ತಿಗೂ ಅಲ್ಲಂ ಧಣಿಗಳು ವೈಜ್ಞಾನಿಕ ಗಣಿಗಾರಿಕೆ ಮಾಡಲಿಲ್ಲ. ಹೀಗಾಗಿ ಕೃಷಿಯೋಗ್ಯ ಭೂಮಿ ಹಾಳಾಗಿದೆ. ಇವರ ಚೇಲಾಗಳು ಮಾಡುವ ಗೂಂಡಾಗಿರಿಗೆ ಊರು ಕೇರಿ ಬೆದರಿ ಕುಳಿತಿವೆ. ಗಣಿಯಿಂದ ತೆಗೆದ ಕರಕಲು ಪುಡಿಯನ್ನು ಅಲ್ಲಂ ಕಂಪೆನಿಯವರು ಹತ್ತು ಎಕರೆ ವಿಸ್ತಾರದಲ್ಲಿ ಹೇಗೆಂದರೆ ಹಾಗೆ ಹರಿವಿದ್ದಾರೆ. ಗುಡ್ಡೆ ಹಾಕಿದ್ದಾರೆ. ಹೀಗಾಗಿ ಅದಿಷ್ಟೂ ಭೂಮಿ ಕೃಷಿಗೆ ಅಯೋಗ್ಯ. ಈ ಗ್ರಾಮದ ದೊಡ್ಡ ದುರಂತವೆಂದರೆ ರೈತರು ತೋಡಿಸಿಕೊಂಡ 120 ಕೊಳವೆ ಬಾವಿಗಳ ಪೈಕಿ 80 ಬಾವಿಗಳು ಒಣಗಿ ಹೋಗಿವೆ. ಇರುವ ಕೊಂಚ ನೀರಿನಲ್ಲೂ ಫ್ಲೋರೈಡ್‌ ಇದೆ. ಹಸಿವಿನಿಂದ ಸತ್ತ ಹೊನ್ನೂರಪ್ಪನನ್ನು ಜನ ಮಣ್ಣಿಗಿಟ್ಟು ಬರುವ ಹೊತ್ತಿಗಾಗಲೇ ಇಂದು(ಜೂನ್‌23) ಹರಿಜನ ಮಾರೆಣ್ಣ ಎಂಬಾತ ತೀರಿಕೊಂಡಿದ್ದಾನೆ. ಆತನಿಗಿದ್ದ ಖಾಯಿಲೆಯ ಹೆಸರು ಫ್ಲೋರೋಸಿಸ್‌. ಈಗ ಹೇಳಿ- ಹರಗಿನದೋಣಿಯಲ್ಲಿ ಮನುಷ್ಯರು ಬದುಕುವುದು ಸೇಫಾ ?

ಹರಗಿನದೋಣಿಯಿಂದ ಬಳ್ಳಾರಿಗೆ ಬಂದು ಹೋಗಲು ಬಸ್ಸಿಗೆ 11 ರೂಪಾಯಿಯಾಗುತ್ತದೆ. ಅದನ್ನು ಎಲ್ಲಿಂದಲೋ ಹೊಂಚಿಕೊಂಡು ಕೂಲಿ ಹುಡುಕಿಕೊಂಡು ಬಳ್ಳಾರಿಗೆ ಬರುವ ಜನ ಇಡೀ ದಿನ ಬಿಸಿಲಿನಲ್ಲಿ ಅಲೆಯುತ್ತಾರೆ. ಕೂಲಿ ಸಿಕ್ಕರೆ ಉಂಟು. ಸಿಗದಿದ್ದರೆ ಬಸ್‌ ಛಾರ್ಜಿನ ಹನ್ನೊಂದು ರೂಪಾಯಿ ಕೂಡ ವೇಸ್ಟು ಎಂಬಂಥ ಪರಿಸ್ಥಿತಿ. ಮೊನ್ನೆ ಹಸಿವಿನಿಂದ ವಿಲಗುಟ್ಟಿ ಸತ್ತ ಹರಿಜನ ಹೊನ್ನೂರಪ್ಪ ಅಂಥ ಮುಪ್ಪಾನು ಮುದುಕನಲ್ಲ . ಸಾಯುವಂಥ ರೋಗವಿದ್ದವನೂ ಅಲ್ಲ . ಅವನಿಗಿನ್ನೂ ಅರವತ್ತು ವರ್ಷ ವಯಸ್ಸು . ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳೂ ಇದ್ದಾರೆ. ಒಬ್ಬ ಮಗ ಬುದ್ಧಿ ಬೆಳೆಯದ ಮಾಂದ್ಯ ರೋಗಿ. ಇನ್ನೊಬ್ಬನು ಬಳ್ಳಾರಿಯಲ್ಲಿ ಸಣ್ಣದೊಂದು ಕೆಲಸ ಮಾಡುತ್ತಾನೆ. ಅಲ್ಲಿ ಸಿಗುವ ಕೂಲಿ ಅವನಿಗೇ ಸಾಲದು. ಅವನು ತನ್ನ ತಂದೆಗಿನ್ನೆಲ್ಲಿಂದ ಕಳಿಸುತ್ತಾನೆ ? ಹರಿಜನ ಹೊನ್ನೂರಪ್ಪ ಮತ್ತು ಅವನ ಹೆಂಡತಿಯೇ ದುಡಿಯಲು ಹೋಗಬೇಕು. ಕೂಲಿ ಸಿಗದಿದ್ದರೆ ರಾತ್ರಿ ಹೊಟ್ಟೆ ತುಂಬ ನೀರು. ಹಾಗೆ ನೀರು ಕುಡಿದು ಕಳೆದ ರಾತ್ರಿಗಳೇ ಹೆಚ್ಚು . ಅದರಿಂದಾಗಿ ಹೊನ್ನೂರಪ್ಪ ನವೆದು ಹೋಗಿದ್ದಾನೆ. ಮೊನ್ನೆ ಭಾನುವಾರ, ಇಲ್ಲಿ ಅಲ್ಲಂ ವೀರಭದ್ರಪ್ಪ ಮಂತ್ರಿ ಪದವಿ ಸ್ವೀಕಾರ ಮಾಡಲೆಂದು ಸೂಟು ಹೊಲೆಸಿಕೊಳ್ಳುತ್ತಿರುವಾಗ, ಅಲ್ಲಿ ಹರಿಜನ ಮುದುಕ ಹಸಿವು ತಾಳಲಾರದೆ ಪ್ರಾಣ ಬಿಟ್ಟಿದ್ದಾನೆ.

ನನ್ನ ಊರು ಬಳ್ಳಾರಿಯ ದುರಂತಮಯ ಸ್ಥಿತಿಯಿದು. ಹರಗಿನದೋಣಿ ಗ್ರಾಮದ ಹುಡುಗರು ಏಳು ಕಿಲೋಮೀಟರು ದೂರದ ‘ಕುಡಿತಿನಿ' ಗ್ರಾಮದ ಹೈಸ್ಕೂಲಿಗೆ ಹೋಗಬೇಕೆಂದರೆ, ನಡೆದೇ ಹೋಗಬೇಕು. ಆ ದಿಕ್ಕಿಗೆ ಬಸ್ಸಿಲ್ಲ . ಊರಿನಲ್ಲಿ ವಾರಕ್ಕೆ ಐದರಿಂದ ಆರು ತಾಸು ಮಾತ್ರ ಕರೆಂಟಿರುತ್ತದೆ. ಬೋರ್‌ವೆಲ್‌ನಲ್ಲಿರುವ ನೀರೂ ಕುಡಿಯಲು ಸಿಕ್ಕುವುದಿಲ್ಲ . ಮೇವಿಲ್ಲವಾದ್ದರಿಂದ ದನಗಳು ಸಾಯುವ ಸ್ಥಿತಿಯಲ್ಲಿವೆ. ಹದಿನಾರು- ಹದಿನೆಂಟು ಸಾವಿರ ಕೊಟ್ಟು ಒಂದು ಜೊತೆ ಎತ್ತು ತಂದುಕೊಂಡ ರೈತರು, ಅವು ಉಪವಾಸ ಕುಸಿಯುವುದನ್ನು ಕಂಡು ಕಣ್ಣೀರಾಗುತ್ತಾರೆ. ಅದ್ಯಾರದು ಎಸ್ಸೆಂ.ಕೃಷ್ಣ ಈ ಜಿಲ್ಲೆಗೆ ಮೂರು ಸಾವಿರ ಕೋಟಿ ರುಪಾಯಿ ಮಂಜೂರು ಮಾಡುತ್ತೇನೆ ಅಂದದ್ದು ? ಆಕೆ ಯಾರು ಸೋನಿಯಾ ಗಾಂಧಿ ಇಲ್ಲಿಂದ ಗೆದ್ದು ಹೋಗಿ ದಿಲ್ಲಿಯಲ್ಲಿ ಕೂತದ್ದು ?

ಇದು ಇವತ್ತು ನಿನ್ನೆ ಬಿದ್ದ ಬರಗಾಲದ ಪ್ರತಿಫಲಾಗಿ ಆದ ಸಾವಷ್ಟೇ ಆಗಿದ್ದರೆ, ಆ ಮಟ್ಟಿಗೆ ಅಲ್ಲಂ ಧಣಿಯನ್ನು ಕ್ಷಮಿಸಬಹುದಿತ್ತು . ಆದರೆ ಈ ಸಾವು 1985ರಿಂದಲೂ ಹರಗಿನದೋಣಿಗೆ ಬಿದ್ದ ಕೃತಕ- ಕಲ್ಪಿತ ಬರದ ಪರಿಣಾಮ. ಅಸಲು ಜಿಲ್ಲಾಧಿಕಾರಿಗಳು ಇಲ್ಲಿಗೆ ಕಾಲಿಡುವುದೇ ಇಲ್ಲ . ಹೋದ ವರ್ಷ ಬರ ಪರಿಹಾರ ಕಾಮಗಾರಿಯ ಹೆಸರಿನಲ್ಲಿ ಜನಕ್ಕೆ ಕೊಟ್ಟಿದ್ದು ಬರೀ ಒಂಬತ್ತು ದಿನದ ಕೆಲಸ ಮತ್ತು ಕೂಲಿ. ಈ ವರ್ಷ ಬರಗಾಲ ಭೀಕರವಿದೆ. ಈ ತನಕ ಜಿಲ್ಲಾ ಆಡಳಿತ ಕೊಟ್ಟಿರುವ ಕೂಲಿ ನಾಲ್ಕು ದಿನಗಳದು ! ಇಲ್ಲಿನ ಜನಕ್ಕೆ ಕೊಡಮಾಡಲಾದ ಹುಳು ಬಿದ್ದ ಅಕ್ಕಿಯನ್ನು ಮಂತ್ರಿಯಾದ ಹರ್ಷದಲ್ಲಿರುವ ಅಲ್ಲಂ ವೀರಭದ್ರಪ್ಪನವರಿಗೇ ಪರಮಾನ್ನ ಮಾಡಿ ತಿನ್ನಿಸಬೇಕು. ಅವರಿವತ್ತು ಪರಿಸರ ಮಂತ್ರಿ! ತಮ್ಮ ಅನಧಿಕೃತ ಗಣಿಗಳನ್ನು ಅಧಿಕೃತ ಗಣಿಗಳನ್ನಾಗಿ ಮಾಡಿಕೊಳ್ಳುವುದೇ ಧಣಿಯ ಸದ್ಯದ ಗುರಿ.

ಸ್ವಭಾವತಃ ಅಲ್ಲಂ ವೀರಭದ್ರಪ್ಪ ಕೆಟ್ಟವರಲ್ಲ . ಬಳ್ಳಾರಿ ಜಿಲ್ಲೆಯ ಉಳಿದ ಮಂತ್ರಿಗಳಂತೆ ಒರಟರಲ್ಲ . ದೊಡ್ಡ ಲಂಚಕೋರರಲ್ಲ . ತಮ್ಮದೇ ತಂದೆಯಂತೆ, ಕೋಳೂರು ಬಸವನಗೌಡರಂತೆ ಗೋಪೀ ಪ್ರಿಯವಲ್ಲಭರೂ ಅಲ್ಲ . ಊರ ಮಂದಿಗೆ ಮಾರಿಯೂ ಅಲ್ಲ . ಪಕ್ಷದ ಅಧ್ಯಕ್ಷರಾಗಿದ್ದರು : ಪಕ್ಷ ಕಟ್ಟಲಿಲ್ಲ . ತೋಟಗಾರಿಕಾ ಸಚಿವರಾಗಿದ್ದರು : ಮಾಡಿದ್ದು ಜಾಡಮಾಲಿಯ ಕೆಲಸ. ಈ ಹರಗಿನದೋಣಿ ಗ್ರಾಮವಿರುವ ಕುರುಗೋಡು ಕ್ಷೇತ್ರಕ್ಕೆ ಒಂದೇ ಅಲ್ಲಂ ಮನೆತನ 25 ವರ್ಷ ನಾಯಕತ್ವ ವಹಿಸಿದೆ. ಇಲ್ಲಿ ರಸ್ತೆ ಇಲ್ಲ , ನೀರಿಲ್ಲ , ಕೂಲಿಯಿಲ್ಲ , ಬಸ್ಸಿಲ್ಲ - ಇದು ಅಲ್ಲಂ ರಾಜ್ಯವಲ್ಲ : ಇಲ್ಲಂ ರಾಜ್ಯ.

ಇನ್ನಾದರೂ ಅಲ್ಲಂ ವೀರಭದ್ರಪ್ಪ ರಾಜಕೀಯ ಬಿಟ್ಟು ತೊಲಗಬಹುದಲ್ಲವೆ ?

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The ministers who swear in the name of people and god allam veerabhadrappa, a case study
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more