ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುರುಘಾಮಠದ ಬಸವಶ್ರೀ ಪ್ರಶಸ್ತಿ ಮತ್ತು ಆಂಧ್ರದ ವಿಠ್ಠಲರಾವು !

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಗದ್ದರ್‌’ ಅಂತ ಯಾರಂದರೋ ಗೊತ್ತಿಲ್ಲ . ಅದೊಂದು ಕ್ರಾಂತಿಕಾರಿ ಪಕ್ಷದ ಹೆಸರು. ಅದನ್ನು ‘ಗಧ್ರ್‌’ ಅಂತ ಉಚ್ಚರಿಸಬೇಕು. ಇಂಗ್ಲಿಷರ ವಿರುದ್ಧ ಬಂದೂಕೆತ್ತಿಕೊಂಡು ಹೋರಾಡಿದ ಪಕ್ಷ ಅದು. ನನಗೆ ನೆನಪಿರುವ ಮಟ್ಟಿಗೆ, ಆಂಧ್ರದ ಅದ್ಭುತ ಕಲಾವಿದ, ಗಾಯಕ, ಕವಿ ಮತ್ತು ಸಂಘಟನೆಕಾರ ವಿಠ್ಠಲರಾವ್‌ ತೆಲಂಗಾಣಾದ ನಕ್ಸಲ್‌ ಚಳವಳಿಯಿಂದ ಪ್ರಭಾವಿತರಾದ ಸಂದರ್ಭದಲ್ಲಿ ‘ಗದ್ದರ್‌’ ಅನ್ನೋ ಕಾವ್ಯನಾಮ ಇಟ್ಟುಕೊಂಡು ಬರೆಯತೊಡಗಿದರು. ಬರೆದದ್ದನ್ನ ಹಾಡಿದರು. ಒಂದು ಕಡೆ ನಕ್ಸಲ್‌ ಚಳವಳಿ ಬೆಳೆಯುತ್ತಿರುವಂತೆಯೇ ಇನ್ನೊಂದು ಕಡೆ ಗದ್ದರ್‌ ಕೂಡ ಬೆಳೆದರು. ಎಷ್ಟು ಬೆಳೆದರು ಅಂದರೆ, ಒಂದು ಹಂತದಲ್ಲಿ ಅವರು ಚಳವಳಿಯನ್ನೂ ಮೀರಿ ಬೆಳೆದರೆಂಬ ಅಸಮಾಧಾನ ನಕ್ಸಲ್‌ ಮುಖಂಡರಿಗೆ ಆಗಿತ್ತು . ಕೆಲವು ದಿನಗಳ ಮಟ್ಟಿಗೆ ಗದ್ದರ್‌ ಕೂಡ ಚಳವಳಿಯಿಂದ ಹೊರಕ್ಕೆ ಹೋಗಿ, ಸಿನೆಮಾಗಳಿಗೆ ಹಾಡು ಬರೆದು, ಅದೇನಂಥ ತಪ್ಪಲ್ಲ ಎಂದು ವಾದಿಸಿ, ಕಡೆಗೆ ಆತ್ಮ ವಿಮರ್ಶೆ ಮಾಡಿಕೊಂಡು ಮತ್ತೆ ಗಣಪತಿ ಗುಂಪಿನ ಪೀಪಲ್ಸ್‌ ವಾರ್‌ (ಸಿಪಿಎಲ್‌-ಎಂಎಲ್‌) ಪಕ್ಷಕ್ಕೆ ಹಿಂತಿರುಗಿ ಯಥಾ ಪ್ರಕಾರ ಕ್ರಾಂತಿಗೀತೆ ಹಾಡುತ್ತ ಊರೂರು ತಿರುಗತೊಡಗಿದರು.

Gaddarಸ್ವಭಾವತಃ ಗದ್ದರ್‌ ತುಂಬ ತಮಾಷೆಯ ಸೃಜನಶೀಲ ಮನಸ್ಸಿನ ಮನುಷ್ಯ. ಟಿಪಿಕಲ್‌ ಕರ್ಮಠ ಕಮ್ಯುನಿಸ್ಟರಿಗಿರುವ ಮನೋಬಂಜೆತನ ಗದ್ದರ್‌ಗಿಲ್ಲ . ತಮಾಷೆ ಮಾತು, ಗೇಲಿ ಬೈಗುಳ, ಅಶುದ್ಧವಲ್ಲದ ಪೋಲೀತನ, ಹಾಡುವುದರಲ್ಲೊಂದು ಒನಪು, ಸಾಹಿತ್ಯದಲ್ಲಿ ನವಿರು, ಇವೆಲ್ಲದರ ಹಿಂದೊಂದು ಮಾನವೀಯ ಅಂತಃಕರಣ- ಎಲ್ಲವೂ ಇರುವುದರಿಂದಲೇ ಗದ್ದರ್‌ ಕೆಲವೇ ನಿಮಿಷಗಳಲ್ಲಿ ನಿಮಗೆ ಇಷ್ಟವಾಗಿಬಿಡುತ್ತಾರೆ. ಸಾವಿರಾರು ಜನರಿರುವ ವೇದಿಕೆಯಾಗಿರಲಿ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಗದ್ದರ್‌ ನಡೆಯುತ್ತ ಬಂದು ಹಾಡು-ಮಾತು-ನೃತ್ಯ-ಅಭಿನಯ ಆರಂಭಿಸಿ ಬಿಟ್ಟರೆ ಹತ್ತೇ ನಿಮಿಷಗಳಲ್ಲಿ ಇಡೀ ಜನ ಸಮೂಹ ಗದ್ದರ್‌ ವಶ. ಬಹುಶಃ ಎನ್ಟಿ ರಾಮಾರಾವ್‌ ಮತ್ತು ಪಿ.ವಿ.ನರಸಿಂಹರಾವುಗಳನ್ನು ಗೇಲಿ ಮಾಡಿದಷ್ಟು ಗದ್ದರ್‌ ಮತ್ಯಾರನ್ನೂ ಗೇಲಿ ಮಾಡಿರಲಾರರು. ರಾಜಕಾರಣಿಗಳಲ್ಲದವರ ಪೈಕಿ ಪುಟ್ಟಪರ್ತಿಯ ಸಾಯಿಬಾಬಾ ಗದ್ದರ್‌ ಕೈಗೆ ಸಿಕ್ಕು ಇನ್ನಿಲ್ಲದಂತೆ ಗಬ್ಬೆದ್ದು ಹೋಗಿದ್ದ .

ನನ್ನನ್ನು ಗದ್ದರ್‌ ತುಂಬ ಇಂಪ್ರೆಸ್‌ ಮಾಡಿದ್ದು 1980ರ ದಶಕದಲ್ಲಿ . ಆಗ ಆಂಧ್ರ ಪ್ರದೇಶದಲ್ಲಿ ಐವತ್ತೆಂಟು ದಿನಗಳ ಕಾಲ ಪೊಲೀಸ್‌ ಕಾನ್ಸ್‌ಟೇಬಲ್‌ಗಳು ಬಹುದೊಡ್ಡ ಕ್ರಾಂತಿಕಾರಿ ಹೋರಾಟ ಮಾಡಿ, ಸರ್ಕಾರದ ವಿರುದ್ಧ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಸ್ಟ್ರೈಕ್‌ ಮಾಡಿದ್ದರು. ಅದರ ನೇತೃತ್ವ ವಹಿಸಿದ್ದು ಭೂಗತ ಕಮ್ಯುನಿಸ್ಟ್‌ ಪಕ್ಷ. ಪೇದೆಗಳು ಚಳವಳಿ ಹೂಡಿದ್ದರೆ, ಇಡೀ ಸರ್ಕಾರ ಮತ್ತು ಹಿರಿಯ ಪೊಲೀಸ್‌ ತಲೆಗಳು ಕೆಂಡಾಮಂಡಲವಾಗಿದ್ದವು. ಅವೇ ದಿನಗಳಲ್ಲಿ ಗದ್ದರ್‌ ‘ಪೊಲೀಸನ್ನ’ ಅಂತ ಒಂದು ಹಾಡು ಬರೆದು ಹಾಡುತ್ತಿದ್ದುದು ನನಗೆ ನೆನಪಿದೆ. ಅದು ಪೇದೆಗಳನ್ನು ಅವರ ಅಧಿಕಾರಿಗಳ ಶೋಷಣೆಯಿಂದ ರಕ್ಷಿಸಿ, ಹೋರಾಟಕ್ಕೆ ಅಣಿಗೊಳಿಸುವ ಹಾಡು. ‘ಸರ್ಕಾರದ ಕೈಗೊಂಬೆಯಾಗುವ ಬದಲು ಜನರೊಂದಿಗೆ ಬೆರೆತು, ಸರ್ಕಾರದ ವಿರುದ್ಧ ತಿರುಗಿಬೀಳು ಬಾ ಪೊಲೀಸಣ್ಣ’ ಅಂತ ಪೇದೆಗಳಿಗೆ ಕರೆ ನೀಡುವ ಹಾಡು. ಗದ್ದರ್‌ ಅದನ್ನು ಹಾಡುತ್ತಿದ್ದರೆ, ಅವರನ್ನು ಬಂಧಿಸಿ ಕರೆದೊಯ್ಯಲು ಬಂದ ಪೇದೆಗಳೇ ಕಣ್ಣೀರಿಡುತ್ತ ನಿಂತುಬಿಡುತ್ತಿದ್ದರು!

ಗದ್ದರ್‌ ಪ್ರತಿಭೆಯೆಂದರೆ ಅದು. ಅವರು ಯಾವತ್ತಿಗೂ ಆಳುವವರ ವಿರುದ್ಧ ಮತ್ತು ಪ್ರಜೆಗಳ ಪರವಾಗಿ ನಿಂತ ಕಲಾವಿದ. ಸೈದ್ಧಾಂತಿಕವಾಗಿ ಆತ ಪಳಗಿದ ಕಮ್ಯುನಿಸ್ಟ್‌ . ನೂರಕ್ಕೆ ನೂರರಷ್ಟು ನಕ್ಸಲೈಟು. ಆದರೆ ವಿಪರೀತವಾದ ಪೊಲೀಸ್‌ ದಮನವಿರುವುದರಿಂದ, ತಾನೊಬ್ಬ ಕಲಾವಿದನೆಂದೂ, ಜನಪರ ಕಲೆ ಮತ್ತು ಜನಪರ ಹೋರಾಟವಷ್ಟೆ ತನ್ನ ಗುರಿಯೆಂದೂ ಹೇಳಿಕೊಳ್ಳುವ ಗದ್ದರ್‌ ತಾವೊಬ್ಬ ನಕ್ಸಲೈಟು ಎಂಬುದನ್ನು ಒಪ್ಪಿಕೊಳ್ಳುವುದಿಲ್ಲ .

ಇದು ಇಂದು ನಿನ್ನೆಯ ಸಮಸ್ಯೆಯೇನಲ್ಲ . 1960 ರ ದಶಕದಿಂದಲೂ ಆಂಧ್ರದಲ್ಲಿ ಅದೇ ಆಗುತ್ತ ಬಂದಿದೆ. ಒಂದು ಕಡೆ ನಕ್ಸಲೀಯ ಸಂಘಟನೆಗಳು ಬಂದೂಕು ಹಿಡಿದು ಜಮೀನ್ದಾರಿ ಶಕ್ತಿಗಳ ವಿರುದ್ಧ ಹೋರಾಡುತ್ತ ಬರುತ್ತಿದ್ದರೆ ಇನ್ನೊಂದು ಕಡೆ ವಿಪ್ಲವ ರಚಯಿತುಲ ಸಂಘಂ (ವಿ.ರ.ಸಂ), ಜನ ನಾಟ್ಯ ಮಂಡಲಿ, ಪ್ರಜಾ ನಾಟ್ಯ ಮಂಡಲಿ, ರ್ಯಾಡಿಕಲ್‌ ಸ್ಟೂಡೆಂಟ್ಸ್‌ ಯೂನಿಯನ್‌, ರೈತು ಕೂಲಿ ಸಂಘಮ್‌, ಪೀಪಲ್ಸ್‌ ಯೂನಿಯನ್‌ ಫಾರ್‌ ಸಿವಿಲ್‌ ಲಿಬರ್ಟೀಸ್‌ ಮುಂತಾದ ಹೆಸರುಗಳಲ್ಲಿ ಬುದ್ಧಿಜೀವಿಗಳು, ಕಲಾವಿದರು, ಮಾನವ ಹಕ್ಕುಗಳ ಹೋರಾಟಗಾರರು, ಟ್ರೇಡ್‌ ಯೂನಿಯನಿಸ್ಟುಗು ನಾನಾ ತರಹದ ಮಾಸ್‌ ಮೂವ್‌ಮೆಂಟ್‌ಗಳಲ್ಲಿ ತೊಡಗಿಸಿಕೊಂಡು ಅಪ್ರತ್ಯಕ್ಷವಾಗಿ ಎಡಪಂಥೀಯ ಚಳವಳಿಯನ್ನು ಕಾಯುತ್ತ, ಪೊರೆಯುತ್ತ , ಪೋಷಿಸುತ್ತ ಬಂದಿದ್ದಾರೆ. ಆ ಪೈಕಿ ಶ್ರೀಶ್ರೀ, ವರವರರಾವು, ನಿಖಿಲೇಶ್ವರ್‌, ಚೆರಖಂಡರಾಜು, ತಾರ್ಕುಂಡೆ, ಕನ್ನಬೀರನ್‌, ಗದ್ದರ್‌- ಹೀಗೆ ಸಾಲು ಸಾಲು ಹೆಸರುಗಳಿವೆ. ಸೈದ್ಧಾಂತಿಕವಾಗಿ ಎಲ್ಲರೂ ತಂತಮ್ಮ ಮಿತಿಗಳಲ್ಲಿ ನಕ್ಸಲ್‌ ವಾದವನ್ನು ಒಪ್ಪಿಕೊಂಡವರೇ. ಆದರೆ ಬೇರೆ ಬೇರೆ ರೀತಿಯಲ್ಲಿ ತಮ್ಮನ್ನು ತಾವು ಪ್ರಗತಿಪರ ಚಳವಳಿಗಳಲ್ಲಿ ತೊಡಗಿಸಿಕೊಂಡವರೇ.

ಇವತ್ತು ಕರ್ನಾಟಕದಲ್ಲಿ ಎಬಿವಿಪಿಯವರು ಗದ್ದರ್‌ಗೆ ಚಿತ್ರದುರ್ಗದ ಮುರುಘಾಮಠದ ‘ಬಸವಶ್ರೀ’ ಪ್ರಶಸ್ತಿಯನ್ನು ಕೊಡಬಾರದಿತ್ತು ಅಂತ ಚಳವಳಿ ಮಾಡುತ್ತಿದ್ದಾರೆ. ಗದ್ದರ್‌ಗೆ ಪ್ರಶಸ್ತಿ ಕೊಡಬಾರದು ಅಂದರೆ, ಅದರರ್ಥ ಮಾನವೀಯತೆಗೆ, ಅದರ ಪರವಾಗಿ ದನಿಯೆತ್ತುವಿಕೆಗೆ, ಬಡವರ ಪರವಾಗಿ ನಿಲ್ಲುವುದಕ್ಕೆ, ಹೋರಾಟಕ್ಕೆ- ಬೆಂಬಲ ಕೊಡಬಾರದು ಅಂತಲೇ ಅರ್ಥ. ಎಬಿವಿಪಿ ಹುಡುಗರನ್ನು ನಾನು ಒಂದು ವರ್ಗ (ಕ್ಲಾಸ್‌) ಅಂತ ಭಾವಿಸುವುದಿಲ್ಲ . ಅವರನ್ನೊಂದು ‘ಜಾತಿ’ ಅಂತಲೂ ಭಾವಿಸುವುದಿಲ್ಲ . ಯಾವುದೇ ವಿದ್ಯಾರ್ಥಿ ಚಳವಳಿ ಕ್ಲಾಸ್‌ ಮತ್ತು ಕ್ಯಾಸ್ಟ್‌ನಿಂದ ಪ್ರತ್ಯೇಕಗೊಂಡಿರುತ್ತದೆ. ಅದಕ್ಕೆ ವರ್ಗ ಗುಣ ಇರುವುದಿಲ್ಲ . ವರ್ಗಪ್ರಜ್ಞೆಯೂ ಇರುವುದಿಲ್ಲ . ಹೀಗಾಗಿ ಬಿಜೆಪಿ ತಲೆಗಳು ಗದ್ದರ್‌ ವಿರುದ್ಧ ಮಾತಾಡುತ್ತಿದ್ದಂತೆಯೇ ಎಬಿವಿಪಿ ಹುಡುಗರು ಗದ್ದರ್‌ ವಿರುದ್ಧ ಕೂಗೆಬ್ಬಿಸಿಬಿಡುತ್ತಾರೆ. ಇದೇ ಎಬಿವಿಪಿ ಹುಡುಗರನ್ನು ಒಂದೆಡೆ ಕೂರಿಸಿ ಹತ್ತು ನಿಮಿಷ ಅವರನ್ನು ಗದ್ದರ್‌ ಮಾತಿಗೆ ಕಿವಿ ತೆರೆಯಲು ಬಿಡಿ. ಅವರು ಇನ್ನೊಮ್ಮೆ ಯಡಿಯೂರಪ್ಪನ ಭಾಷಣಕ್ಕೆ ಹಾಜರಾದರೆ ಕೇಳಿ? ಇದೇ ಎಬಿವಿಪಿ ಹುಡುಗರು ಚಳವಳಿಯ ಹಾದಿಯಲ್ಲಿ , ಇನ್ನೊಂದು ನಾಲ್ಕು ಹೆಜ್ಜೆ ನಡೆದರೆ, ಅಸಲಿಯತ್ತು ಏನೆಂಬುದನ್ನು ಅರ್ಥ ಮಾಡಿಕೊಳ್ಳುತ್ತಾರೆ. ನಿನ್ನೆ ಮೊನ್ನೆಯತನಕ ಹಿಂದುತ್ವದ ಬಗ್ಗೆ ಮುತಾಲಿಕನಿಗಿಂತ ದೊಡ್ಡ ದನಿಯಲ್ಲಿ ಚೀರಿ ಆರ್ಭಟಿಸುತ್ತಿದ್ದ ಜಗದೀಶ ಕಾರಂತ ಅದೇಕೆ ಸುಮ್ಮನಾಗಿ ಮೂಲೆ ಹಿಡಿದು ಕುಂತುಬಿಟ್ಟ ? ಈ ಪ್ರಶ್ನೆಯನ್ನು ಭಜರಂಗದಳವರಿಗೇ ಕೇಳಿ.

ಗದ್ದರ್‌ರವರನ್ನು ವಿರೋಧಿಸುವವರು, ಮೊದಲು ಗದ್ದರ್‌ ಯಾರೆಂಬುದನ್ನು ಅರಿತುಕೊಳ್ಳಲಿ. ಅವರ ಮಾತಿಗೆ, ಹಾಡಿಗೆ ಒಮ್ಮೆ ಕಿವಿಗೊಡಲಿ. ಜ್ಞಾನಪೀಠ ಪ್ರಶಸ್ತಿ ಕೊಡುವವರು ಯಾರು ಅಂತಲೇ ಗೊತ್ತಿಲ್ಲದೆ ಗಿರೀಶ್‌ ಕಾರ್ನಾಡ್‌ರನ್ನು ತೆಗಳಿ, ಜ್ಞಾನಪೀಠ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ವಾಪಸ್‌ ತೆಗೆದುಕೊಳ್ಳಲಿ ಅಂತ ಮಾತಾಡಿ ಸಾರ್ವಜನಿಕವಾಗಿ ಪ್ಯಾಲಿಗಳಾಗಿ ಹೋದ ಶಂಕರಮೂರ್ತಿ ಮತ್ತು ರಾಮಚಂದ್ರಗೌಡರಂತೆ ಎಬಿವಿಪಿ ಹುಡುಗರು ವರ್ತಿಸದಿರಲಿ. ಕಾರ್ನಾಡರನ್ನು ಖಂಡಿಸಬೇಕಾದವರು, ಮೊದಲು ಕಾರ್ನಾಡರನ್ನು ಓದಬೇಕು. ಅವರ ತಾಕತ್ತು, ಬಲಹೀನತೆ ಎರಡನ್ನೂ ತಿಳಿದುಕೊಂಡು ಯುದ್ಧಕ್ಕಿಳಿಯಬೇಕು. ಗದ್ದರ್‌ರನ್ನು ವಿರೋಧಿಸುವವರು ಕೂಡ ಅಷ್ಟೆ .

Of course, ಗದ್ದರ್‌ಗೆ ಬಸವಶ್ರೀ ಪ್ರಶಸ್ತಿ ಕೊಟ್ಟದ್ದು ತಪ್ಪು ಎಂಬುದನ್ನು ನಾನು ಒಪ್ಪುವುದಿಲ್ಲವಾದರೂ, ಗದ್ದರ್‌ರಂಥವರು ತೀರ ಮುರುಘಾಮಠಕ್ಕೆ ಬಂದು ಪ್ರಶಸ್ತಿ ಸ್ವೀಕರಿಸಬಾರದಿತ್ತು ಎಂಬುದು ನನ್ನ ಅನಿಸಿಕೆ. ಬಹುಶಃ ಗದ್ದರ್‌ಗೆ ಚಿತ್ರದುರ್ಗದ ಮುರುಘಾಮಠವೆಂದರೆ ಏನು ಎಂಬುದೇ ಗೊತ್ತಿಲ್ಲ . ಅದರ ಪೀಠಾಧಿಪತಿ ಅಪ್ರಬುದ್ಧ ಮನುಷ್ಯ. ಯಾರೋ ಫೋನ್‌ ಮಾಡಿ ಕೊಲೆ ಬೆದರಿಕೆ ಹಾಕಿದರು ಅಂದ ಮಾತ್ರಕ್ಕೆ ‘ನನ್ನನ್ನು ಬಾಂಬ್‌ ಬಾಕಿ ಕೊಂದರೂ ಸರಿಯೇ, ನನ್ನ ನಿಲುವನ್ನು ಬದಲಿಸುವುದಿಲ್ಲ’ ಅಂತ ಹೇಳಿಕೆ ಕೊಟ್ಟ ಬಾಲಿಶ ಸ್ವಾಮಿ ಆತ. ಎಲ್ಲ ಬಿಟ್ಟು ಈ ಮುರುಘಾ ಮಠದ ಸ್ವಾಮಿಯನ್ನು ಅದ್ಯಾರು ಬಾಂಬು ಹಾಕಿ ಕೊಂದಾರು? ಮಠದ ಆಸ್ತಿ , ಮಠದ ಹಣದ ಅವ್ಯವಹಾರಗಳು, ಮಠದ ಪಡಸಾಲೆಯಲ್ಲೇ ಲೈಂಗಿಕ ಹಗರಣಗಳು, ಸ್ವಾಮಿಯವೇ ಖುದ್ದು ಬಲಹೀನತೆಗಳು- ಇವೆಲ್ಲ ಗೊತ್ತಿದ್ದಿದ್ದರೆ ಬಹುಶಃ ಗದ್ದರ್‌ ‘ಬಸವಶ್ರೀ’ ಪ್ರಶಸ್ತಿಯನ್ನು ಸ್ವೀಕರಿಸುತ್ತಿರಲಿಲ್ಲ . ಮಠದೊಳಗಿನ ಸರ್ವಾಧಿಕಾರಿ ಮತ್ತು ಮಠದ ನಿಜವಾದ ಆಪತ್ತೇ ಆದ ಎಸ್‌.ಕೆ.ಬಸವರಾಜನ್‌ನನ್ನೇ ಸರಿಪಡಿಸಲಾಗದ ಸ್ವಾಮಿ, ಆತನನ್ನಿನ್ಯಾರು ಬಾಂಬಿಟ್ಟು ಕೊಂದಾರು ಹೇಳಿ? ಗದ್ದರ್‌ಗಿರುವ ಸಾಮಾಜಿಕ ಪ್ರಜ್ಞೆ ಮತ್ತು ಕಳಕಳಿಯಲ್ಲಿ ಒಂದು ಪರ್ಸೆಂಟಿನಷ್ಟಾದರೂ ಈ ಸ್ವಾಮಿಗಿದ್ದಿದ್ದರೆ ಚಿತ್ರದುರ್ಗದ ಪ್ರಾಚೀನ ಮುರುಘಾಮಠ ಇವತ್ತು ಈ ಸ್ಥಿತಿಯಲ್ಲಿರುತ್ತಿರಲಿಲ್ಲ . ಒಂದು ಕಡೆ ಈತ ಕಾವಿ ತೊಡಿಸಿ ಕಳಿಸಿದ ಸ್ವಾಮಿಯಾಬ್ಬ ದಿನಕ್ಕೊಂದು ಬಾರಿ ಉಪ್ಪಾರಪೇಟೆ ಠಾಣೆಯಲ್ಲಿ ಬಿ.ಕೆ.ಶಿವರಾಂ ಕೈಲಿ ಒದೆ ತಿಂದು ಜೈಲು ಸೇರುತ್ತಿದ್ದರೆ, ಇನ್ನೊಂದು ಕಡೆ ತನ್ನ ಶಿಶುಮಗುವನ್ನೇ ಸರಿದಾರಿಗೆ ತರಲಾಗದ ಮುರುಘಾಮಠದ ಸ್ವಾಮಿ ಪ್ರಶಸ್ತಿ ಹಂಚುತ್ತಾ ಕುಳಿತಿರುವುದು ಎಂಥ ವಿಪರ್ಯಾಸವೋ ನೋಡಿ. ಸಿದ್ಧರಾಮ ಶರಣ ಬೆಲ್ಲದಹಾಳ, ಹಿರೇಮಲ್ಲೂರು ಈಶ್ವರನ್‌, ಬಿ.ಆರ್‌.ಹಿಲ್ಸ್‌ನ ಸುದರ್ಶನ್‌, ಅಣ್ಣಾ ಹಜಾರೆ, ಮೇಧಾ ಪಾಟಕರ್‌, ದಲೈಲಾಮಾ ಮುಂತಾದವರಿಗೆ ಇದೇ ‘ಬಸವಶ್ರೀ’ ಪ್ರಶಸ್ತಿ ಕೊಟ್ಟಿತ್ತು ಮುರುಘಾ ಮಠ. ಈ ಬಾರಿ ಗದ್ದರ್‌ಗೆ ಕೊಟ್ಟಿದೆ. ಅದೂ ಒಂದು ಪ್ರಚಾರವೇ. ಅದೂ ಒಂದು ಸ್ಟಂಟೇ.

ಹಿಂದೊಮ್ಮೆ ಗದ್ದರ್‌ ಸಾರ್ವಜನಿಕವಾಗಿ ಹಾಡುವಾಗ ಒಂದಷ್ಟು ತೆಲುಗು ಬೈಗುಳ ಸೇರಿಸಿ ಕ್ರಾಂತಿಗೀತೆಯಾಂದನ್ನು ಹಾಡಿದ್ದರು. ಅದೇ ವೇದಿಕೆಯ ಮೇಲಿದ್ದ ತೆಲುಗು ಮಹಾಕವಿ ಶ್ರೀ ಶ್ರೀ, ‘ಗದ್ದರ್‌, ಜನ ಚಪ್ಪಾಳೆ ತಟ್ಟುತ್ತಾರೆ ಅನ್ನೋ ಕಾರಣಕ್ಕೆ ಬೈಗುಳ ಬಳಸಬೇಡ. ಅದು ಜನರೊಳಗೊಂದು ನೆಗಟಿವ್‌ ಕಲ್ಚರ್‌ನ ಹುಟ್ಟಿಹಾಕುತ್ತೆ’ ಅಂತ ಎಚ್ಚರಿಸಿದ್ದರು.

ಬದುಕಿದ್ದಿದ್ದರೆ, ಚಿತ್ರದುರ್ಗದ ಮುರುಘಾ ಮಠ ಅಥವಾ ಇನ್ನಾವುದೇ ಮಠಮಾನ್ಯಗಳು ಕೊಡುವ ಪ್ರಶಸ್ತಿಯನ್ನು ಸ್ವೀಕರಿಸಬೇಡ ಅನ್ನುತ್ತಿದ್ದರೇನೋ ಮಹಾಕವಿ ಶ್ರೀ ಶ್ರೀ.

ಇದ್ಯಾವುದೂ ಗೊತ್ತಿಲ್ಲದ ಎಬಿವಿಪಿ ಹುಡುಗರು ಮುರುಗಿ ಸ್ವಾಮಿಯ ಭೂತದಹನ ಮಾಡಲು ಹೊರಟಿದ್ದಾರೆ. ನಿಜವಾದ ಭೂತ ಮಠದಲ್ಲೇ ಇನ್ನೊಂದಿದೆ. ಹೆಸರು ಬಸವರಾಜನ್‌. ಹುಡುಗರಿಗಿದು ಗೊತ್ತಿರಲಿ.

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X