• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದೇನು ಸ್ಥಿತಿ ಕಪೂರ್‌ ಕುಟುಂಬದ್ದು !

By Staff
|
Ravi Belagere on Thatskannada.com ರವಿ ಬೆಳಗೆರೆ
ಆರ್ಥಿಕವಾಗಿ ಅವರ ಆರ್‌. ಕೆ. ಸ್ಟುಡಿಯೋ ಸರ್ವ ನಾಶವಾಗಿದೆ. ರಾಜ್‌ಕಪೂರರ ಮಕ್ಕಳು ಒಬ್ಬರ ಮುಖ ಒಬ್ಬರು ನೋಡಿಕೊಳ್ಳುವ ಪರಿಸ್ಥಿತಿಯಲ್ಲಿಲ್ಲ. ಬಾಂಬೆಯ ಜುಹು ಠಾಣೆಗೆ ದಿನಕ್ಕೊಮ್ಮೆಯಾದರೂ ಓಡಿ ಬರುವ ನೀತೂ ಸಿಂಗ್‌ ತನ್ನ ಗಂಡ ರಿಷಿಕಪೂರ್‌ನ ಅಮಾನುಷ ಹಲ್ಲೆಗಳ ವಿರುದ್ಧ ಪೊಲೀಸರಿಗೆ ದೂರು ಕೊಟ್ಟು ಎದೆಯಾಡೆದು ಹೋಗುವಂತೆ ಅಳುತ್ತಾಳೆ. ಎಷ್ಟೋ ತಿಂಗಳು ನೀತೂ- ರಿಷಿ ಮಾತೇ ಆಡುವುದಿಲ್ಲ. ಅವರ ಮಕ್ಕಳಾದ ಕರಿಷ್ಮಾ-ಕರೀನಾ ಕೋಟ್ಯಂತರ ದುಡಿಯುತ್ತಾರೆಂಬುದು ನಿಜ. ಆದರೆ ರಾಜ್‌ಕಪೂರ್‌ ಕುಟುಂಬಕ್ಕೆ ಉಳಿದ ಹೆಂಗಸರನ್ನು ಬೆಳ್ಳಿತೆರೆ ಮೇಲೆ ಬೆತ್ತಲೆ ಮಾಡಿ ಗೊತ್ತೇ ಹೊರತು ತಮ್ಮ ಮನೆಯ ಹುಡುಗಿಯರನ್ನು ಅವರು ಬಿಕರಿಗಿಟ್ಟವರಲ್ಲ. ಬಬಿತಾ, ನೀತೂ ಸಿಂಗ್‌ ತಹರದ ನಟಿಯರನ್ನು ಕಪೂರ್‌ ಕುಡಿಗಳು ಮದುವೆಯಾದದ್ದು ಹೌದಾದರೂ, ತಕ್ಷಣ ಅವರನ್ನು ಬಣ್ಣಗೆಡಿಸಿ ಕ್ಯಾಮರಾದಿಂದ ಈಚೆಗೆ ಎಳೆದೊಯ್ಯುತ್ತಿದ್ದರು. ಬಬಿತಾ ಸದ್ದೇ ಇಲ್ಲದೆ ಮಾಸಿ ಹೋದಳಾದರೆ, ನೀತೂ ಸಿಂಗ್‌ಗೆ ಬಾಂಬೆಯಲ್ಲಿ ಒಂದು ತರಕಾರಿ ಅಂಗಡಿ ಇಟ್ಟುಕೊಡಲಾಗಿತ್ತು !

Showman Raj Kapoorಈಗ ಅಂಥ ಕಪೂರ್‌ ಕುಟುಂಬ ತನ್ನ ಸರ್ವನಾಶದಿಂದ ಚೇತರಿಸಿಕೊಳ್ಳುವ ಪ್ರಯತ್ನವಾಗಿ ಅಷ್ಟು ದೂರದ ಮುಂಬಯಿಯಿಂದ ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಸರ್ಪಕಟ್ಟೆಯ ಮುಂದೆ ಮೊಳಕಾಲೂರಿ ಕುಳಿತು ಬಿಟ್ಟಿದೆ. ಈಗೊಂದು ವಾರದ ಹಿಂದೆ ಸುಬ್ರಹ್ಮಣ್ಯಕ್ಕೆ ಬಂದಿದ್ದವರು ರಾಜ್‌ಕಪೂರ್‌ನ ಹೆಂಡತಿ ಕೃಷ್ಣಾ, ರಣಧೀರ್‌ ಕಪೂರ್‌, ರಿಷಿ ಕಪೂರ್‌ ಆತನ ಪತ್ನಿ ನೀತೂ ಸಿಂಗ್‌ ಮತ್ತು ರಾಜ್‌ಕಪೂರ್‌ನ ಕೊನೆಯ ಮಗ ರಾಜೀವ್‌ ಕಪೂರ್‌.

ಭಗವಂತಾ... ನಾಗರಾಜಾ !

ಯಾರ ಮುಖದಲ್ಲೂ ಗೆಲುವು ನಗೆ, ಕಳೆ ಇರಲಿಲ್ಲ. ರಣಧೀರ್‌, ರಿಷಿ ಮತ್ತು ರಾಜೀವ್‌ ಕಪೂರ್‌ರ ಸೇಬು ಗೆನ್ನೆಗಳ ಮೇಲೆ ನಿರಾಸೆಯ ದಾಡಿ. ಅವರೆಲ್ಲರ ತಾಯಿ ಕೃಷ್ಣಾಗೆ ಅಡರಿಕೊಂಡಿರುವುದು ತುಂಬು ವೃದ್ಧಾಪ್ಯ. ಆ ಮನೆತನ ಅಂತಃಕಲಹಗಳಿಂದಾಗಿ ಛಿದ್ರವಾಗಿ ಹೋಗಿದೆ. ಅಣ್ಣ ತಮ್ಮಂದಿರು ಮಾತನಾಡುವುದು ಹಾಗಿರಲಿ, ಒಬ್ಬರನ್ನೊಬ್ಬರು ಭೇಟಿಯಾದದ್ದೇ ಎಷ್ಟೋ ವರ್ಷಗಳ ತರುವಾಯ. ಅದೆಷ್ಟೋ ವರ್ಷಗಳಿಂದ ಪ್ರಯತ್ನ ಪಟ್ಟ ಮೇಲೆ ಈ ಮೂವರನ್ನೂ ಹೀಗೇ ಒಟ್ಟು ಮಾಡಿ ಕಡೆಗೂ ಕರೆದುಕೊಂಡು ಬಂದಿದ್ದೇನೆ. ಭಗವಂತಾ , ನಾಗರಾಜಾ, ಈ ಮನೆತನಕ್ಕೆ ಮುತ್ತಿಕೊಂಡಿರುವ ಶಾಪವನ್ನು ದೂರ ಮಾಡು... ಎಂದು ಸುತ್ತಲಿದ್ದವರೆಲ್ಲರಿಗೂ ಕೇಳಿಸುವಂತೆಯೇ ತನ್ನ ಅಬೋಧ, ಸ್ವಚ್ಛ ಹಿಂದಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯನ ಮುಂದೆ ಕೈಯಾಡ್ಡಿ ನಿಂತುಕೊಂಡು ಬೇಡಿಕೊಂಡಾಕೆ ರಾಜ್‌ಕಪೂರ್‌ ಮಡದಿ, ಹಣ್ಣಣ್ಣು ವೃದ್ಧೆ ಕೃಷ್ಣಾ ಕಪೂರ್‌ !

ಎಂಥ ರಣಧೀರ ?

ತಮ್ಮ ಕುಟುಂಬಕ್ಕೆ ಸರ್ಪದೋಷವಿದೆ ಎಂಬುದು ಅವರಿಗೆ ಮನವರಿಕೆಯಾಗಿದೆ. ತಾವು ಕೈ ಹಾಕಿದ್ದೆಲ್ಲ ಮಣ್ಣು. ಏನು ಮಾಡಲು ಹೋದರೂ ವಿಫಲ. ಒಂದು ಕಾಲಕ್ಕೆ ಜಗದ್ವಿಖ್ಯಾತ ಸಿನೆಮಾ ಮನೆಯಾಗಿ ಮೆರೆದ ಆರ್‌. ಕೆ. ಸ್ಟುಡಿಯೋಸ್‌ ಇವತ್ತು ನೂರಾರು ಅಲಿಗೇಷನ್‌ಗಳ ಪಾಲಾಗಿರುವ ಸ್ಮಶಾನ ಸದೃಶ ಕೊಂಪೆ. ಅಣ್ಣ ತಮ್ಮಂದಿರಲ್ಲಿ ಮೊದಲಿನ ಸಾಮರಸ್ಯ ಉಳಿದಿಲ್ಲ. ಅವನು ತನ್ನ ಶಕ್ತಿಯ ಆಧಾರ ಸ್ತಂಭ !! ಎಂದೇ ರಾಜ್‌ಕಪೂರ್‌ರಿಂದ ಕರೆಯಲ್ಪಡುತ್ತಿದ್ದ ಹಿರಿಯ ಮಗ ರಣಧೀರ್‌ ಕಪೂರ್‌, ಭರಿಸಲಿಕ್ಕೆ ಸಾಧ್ಯವಾಗದಂತಹ ಮದ್ಯ ವ್ಯಸನಿ. ಕುಕ್ಕೇ ಸುಬ್ರಹ್ಮಣ್ಯದಲ್ಲಿ ಆತ ಕುಡಿಯದೇ ನಾಲ್ಕು ಕಳೆದ ಎಂಬುದೇ ದೊಡ್ಡ ಆಶ್ಚರ್ಯ. ಆತನ ಆರ್ಥಿಕ ವ್ಯಾಜ್ಯಗಳು ಕುಟುಂಬದೊಳಗಿನವರೊಂದಿಗೇ ಇವೆ. ಬಾಂಬೆಯ ರಿಯಲ್‌ ಎಸ್ಟೇಟಿನವರೊಂದಿಗಿವೆ. ಮಗಳು ಕರಿಷ್ಮಾ ಕಪೂರ್‌ ಅಷ್ಟು ದೊಡ್ಡ ನಟಿಯಾಗಿ, ಕೋಟ್ಯಂತರ ರೂಪಾಯಿ ದುಡಿದ ಹುಡುಗಿ ಇವತ್ತು ಟೀವಿಗಳಲ್ಲಿ, ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದಾಳೆ ಎಂದರೆ ಅದು ಆ ಕುಟುಂಬದ ಆರ್ಥಿಕ ದುಃಸ್ಥಿತಿಗೆ ಹಿಡಿದ ಕನ್ನಡಿ. ಇದೇ ಕಾರಣಕ್ಕಾಗಿ ಆಕೆಯ ಮದುವೆ ಚಿತ್ರರಂಗದ ಅನಭಿಷಿಕ್ತ ಮಹಾರಾಜ ಅಮಿತಾಬ್‌ ಬಚ್ಚನ್‌ನ ಮಗನೊಂದಿಗೆ ನಿಶ್ಚಿತಾರ್ಥವಾದ ನಂತರ ಮುರಿದು ಬಿತ್ತು. ಇವತ್ತು ರಣಧೀರ್‌ ಸಂಪೂರ್ಣವಾಗಿ ಬ್ರೋಕ್‌ !

ಕೆನ್ನೆ ಮತ್ತು ಕುತ್ತಿಗೆ

Raj Kapoor with his wife Krishna and sons Rishi, Rajeev, Ranadhirಒಂದು ಕಾಲದ ‘ಬಾಬಿ’ ಸಿನೆಮಾದ ನಾಯಕನಾಗಿದ್ದವ ಈ ಹುಡಗನೇನಾ ಎಂದು ಅಚ್ಚರಿಪಡುವಷ್ಟು ರಿಷಿ ಕಪೂರ್‌ ಬದಲಾಗಿದ್ದಾನೆ. ವಯಸ್ಸಾಗಿರುವಂತೆ ಕಾಣುತ್ತಾನೆ. ಸಿನೆಮಾಗಳು ಸಿಕ್ಕುತ್ತಿಲ್ಲ. ಹೀರೋ ಪಾತ್ರಗಳು ಕನಸಿನ ಮಾತು. ಅಪ್ಪನ ಪಾತ್ರದಷ್ಟು ವಯಸ್ಸಾಗಿಲ್ಲ. ಅಣ್ಣ ರಣಧೀರ್‌ನಿಗಾದಂತೆಯೇ ಈತನಿಗೂ ಕೆನ್ನೆ ಮತ್ತು ಕುತ್ತಿಗೆ ಏಕಾಕಾರವಾಗಿ ಇಳಿಬಿದ್ದು ಹೋಗಿದೆ. ವಿಪರೀತ ದಪ್ಪವಾಗಿದ್ದಾನೆ. ಹೆಂಡತಿ ನೀತೂ ಸಿಂಗ್‌ಳೊಂದಿಗೆ ಬಾಂಧವ್ಯ ಉಳಿದಿಲ್ಲ. ಮಾತಿಗೊಮ್ಮೆ ಗಂಡ ಹೆಂಡಂದಿರ ಜಗಳ ಪೊಲೀಸ್‌ ಠಾಣೆಗೆ ಹೋಗುತ್ತದೆ. ಈ ತೆರನಾದ ಸಾಂಸಾರಿಕ ಒಳಗುಟ್ಟು ಬಿಟ್ಟುಕೊಡದಂತೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾಣಿಸಿಕೊಂಡವನೆಂದರೆ ರಾಜ್‌ಕಪೂರ್‌ ಕೊನೆಯ ಮಗ ರಾಜೀವ್‌ಕಪೂರ್‌. ಈ ಹುಡುಗ ನಟಿಸಿದ್ದು ಒಂದೇ ಚಿತ್ರದಲ್ಲಿ. ರಾಮ್‌ತೇರಿ ಗಂಗಾ ಮೈಲಿ !. ಅದೇ ಮೊದಲು ಅದೇ ಕೊನೆ. ಹುಡುಗನ ಭಾಗ್ಯದ ಬಾಗಿಲು ತೆರೆಯಲೇ ಇಲ್ಲ.

ಸರ್ಪ ಸಂಸ್ಕಾರ

ಅದೆಲ್ಲ ಕರ್ಮ, ಮಕ್ಕಳ ಜಗಳ, ಆರ್ಥಿಕ ಮುಗ್ಗಟ್ಟು ಮೊಮ್ಮಕ್ಕಳ ಕುಣಿತ- ಎಲ್ಲವನ್ನೂ ನೋಡಿ ಹೈರಾಣಾಗಿರುವಂತೆ ಕಾಣುತ್ತಿದ್ದಾಕೆ ರಾಜ್‌ಕಪೂರ್‌ನ ಪತ್ನಿ ಕೃಷ್ಣಾ. ಆಕೆ ನಿಜವಾದ ತಾಯಿ. ಬದುಕಿದ್ದಷ್ಟು ದಿನ ಗಂಡನೊಂದಿಗೆ ಹೆಣಗಿದಳು. ಈಗ ಮಕ್ಕಳೊಂದಿಗೆ ಸೊಸೆಯರೊಂದಿಗೆ ಹೆಣಗಬೇಕಿದೆ. ತುಂಬ ವಯಸ್ಸೂ ಆಗಿದೆ. ದಿಕ್ಕಿಗೊಬ್ಬರಂತಾಗಿದ್ದ ಗಂಡು ಮಕ್ಕಳನ್ನು ಒಗ್ಗೂಡಿಸಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಕರೆ ತಂದು ಸರ್ಪ ಪೂಜೆ ಮಾಡಿಸಿದ್ದೇ ಒಂದು ಸಾಹಸ ಅನ್ನುತ್ತಾಳೆ. ಇಷ್ಟಕ್ಕೂ ಉಳಿದೆಲ್ಲ ಬಿಟ್ಟು ಈ ಕಪೂರ್‌ ಕುಟುಂಬ ಸುಬ್ರಹ್ಮಣ್ಯಕ್ಕೇ ಏಕೆ ಬಂತು ಎಂಬುದೊಂದು ಪ್ರಶ್ನೆ. ನಿಮಗೆ ಗೊತ್ತಿರಲಿ. ಭಾರತ ದೇಶದಲ್ಲಿ ನಾಸಿಕ್‌ ಕ್ಷೇತ್ರವೊಂದನ್ನು ಬಿಟ್ಟರೆ ಅತೀ ಹೆಚ್ಚು ಸರ್ಪ ದೋಷ ನಿವಾರಣೆ ನಡೆಯುವುದು ಮತ್ತು ಅದರ ಬಗ್ಗೆ ವ್ಯಾಪಕವಾದ ನಂಬಿಕೆ ಇರುವುದು ಸುಬ್ರಹ್ಮಣ್ಯ ಕ್ಷೇತ್ರದ ಬಗ್ಗೆಯೇ. ಇಡೀ ಕಪೂರ್‌ ಕುಟುಂಬಕ್ಕೆ ಸರ್ಪ ದೋಷ ತಗುಲಿಕೊಂಡಿದೆ ಎಂಬದು ಇವರೆಲ್ಲರ ನಂಬಿಕೆ. ಎಲ್ಲರೂ ಒಟ್ಟಾಗಿ ಬಂದು ನಾಲ್ಕು ದಿನಗಳ ‘ಸರ್ಪ ಸಂಸ್ಕಾರ’ ಮಾಡಿಸದ ಹೊರತು ಕಪೂರ್‌ ಕುಟುಂಬ ಇವತ್ತಿನ ಸರ್ವನಾಶದ ಪರಿಸ್ಥಿತಿಯಿಂದ ಈಚೆಗೆ ಬರಲಾರದು ಎಂಬುದಾಗಿ ಭವಿಷ್ಯ ನುಡಿಯಲಾಗಿತ್ತು. ಹೀಗಾಗಿ ಮೂರೂ ಮಕ್ಕಳನ್ನು ಮನವೊಲಿಸಿ ಆ ತಾಯಿ ಕೃಷ್ಣಾ ಕರೆ ತಂದಿದ್ದಾಳೆ.

ಹೀರೋ ಸೆ ಜೋಕರ್‌...

‘ಹೀರೋ ಸೆ ಜೋಕರ್‌ ಬನ್‌ ಜಾನಾ ಪಡ್ತಾ ಹೈ ’ ಅಂತ ರಾಜ್‌ಕಪೂರ್‌ ತನ್ನ ‘ ಮೇರಾ ನಾಮ್‌ ಜೋಕರ್‌’ನಲ್ಲಿ ಹಾಡಿದ್ದು ಆತ ಬದುಕಿದ್ದಾಗಲೇ ನಿಜವಾಗಿ ಹೋಯಿತು ಎಂಬುದು ಬೇರೆ ಮಾತು. ಕಪೂರ್‌ ಕುಟುಂಬ ಕಾಲಕಾಲಕ್ಕೆ ದಿವಾಳಿ ಎದ್ದಿದೆ. ಸ್ವತಃ ರಾಜ್‌ಕಪೂರ್‌ ಕೈಲಿದ್ದ ದುಡ್ಡು ಮುಗಿದುಹೋಗಿ ಬೀದಿಗೆ ಬೀಳುತ್ತಿದ್ದ. ಆದರೆ ಆತನನಲ್ಲಿ ಒಬ್ಬ ಮಹಾನ್‌ ಕಲಾವಿದನಿದ್ದ. ಅದ್ಭುತ ಕನಸುಗಾರ ಡೈರೆಕ್ಟರನಿದ್ದ. ಬಿದ್ದ ಮಡುವಿನಲ್ಲೇ ಮತ್ತೆ ಚೇತರಿಸಿಕೊಂಡು ನಿಲ್ಲುವ ಸಾಹಸಿಯಿದ್ದ. ಇವತ್ತು ಕುಟುಂಬದ ತುಂಬ ಜೋಕರುಗಳಿದ್ದಾರೆ. ಹೀರೋಗಳಾಗುವ ನಸೀಹತ್ತು ಒಬ್ಬನಿಗೂ ಇಲ್ಲ.

ಒಂದು ಬೆತ್ತಲೆ ಗೊಂಬೆ

The Kapoor Familyಇಷ್ಟಕ್ಕೂ ಕಪೂರ್‌ ಕುಟುಂಬ ಎಲ್ಲಿಯದು ಅಂತ ನಿಮಗೆ ಗೊತ್ತಿರಲಿಕ್ಕಿಲ್ಲ. ಇವರೆಲ್ಲರೂ ಮೂಲತಃ ಅಫಘಾನಿಸ್ತಾನದ ಸರಹದ್ದಿನ ಪೇಶಾವರದವರು. ಈಗ ಪೇಶಾವರ ಪಾಕಿಸ್ತಾನದಲ್ಲಿದೆ. ರಾಜ್‌ಕಪೂರ್‌ನ ತಾಯಿಗೆ ಪಠಾಣ ಹೆಂಗಸರಿಗಿರುವಂತಹ ಸೌಂದರ್ಯ ಮತ್ತು ಮೈಕಟ್ಟು ಇತ್ತು. ಈಕೆಗೆ ಮದುವೆಯಾದಾಗ ಬರೀ ಹದಿನಾರು ವರ್ಷ ವಯಸ್ಸು. ಗಂಡ ಪೃಥ್ವಿರಾಜ್‌ ಕಪೂರ್‌ಗೆ ಹದಿನೆಂಟು. ಪಠಾನ ನಾಡಿನ ಹುಡುಗ ರಾಜ್‌ಕಪೂರ್‌ಗೆ, ಪಠಾಣರಿಗಿರುವಂತಹ ನೀಲಿ ನೀಲಿ ಕಣ್ಣುಗಳಿದ್ದವು. ಮನೆಗೆ ಆತ ಹಿರಿಯ ಮಗ. ಅನ್ನ ಹುಡುಕಿಕೊಂಡು ಅಲೆಯುತ್ತಿದ್ದ ಪೃಥ್ವಿರಾಜ್‌ ಕಪೂರ್‌ನ ಹಿಂದೆ ಆತ ಪೇಶಾವರ, ಕಲ್ಕತ್ತಾ, ಬಾಂಬೆ ಹೀಗೆ ಊರಿಂದ ಊರಿಗೆ ಅಲೆದ. ಆಲಮ್‌ ಆರಾ ಎಂಬ ಮೊತ್ತ ಮೊದಲ ಟಾಕಿ(ಸಂಭಾಷಣೆಯುಳ್ಳ) ಸಿನಿಮಾ ಮಾಡಿದಾಗ ಅದರಲ್ಲಿ ಪೃಥ್ವಿರಾಜ್‌ ಸಂಭಾವನೆಯಿಲ್ಲದೆಯೇ ನಟಿಸಿದ್ದ. ತನ್ನ ಮಗನನ್ನೂ ( ರಾಜ್‌ಕಪೂರ್‌ನನ್ನು) ಅವನ ಕಲಾತ್ಮಕತೆಯನ್ನೂ ತಂದೆ ಪೃಥ್ವಿ ಎಷ್ಟು ಇಷ್ಟಪಡುತ್ತಿದ್ದನೆಂದರೆ, ಮುಂದೊಮ್ಮೆ ಸುಮಾತ್ರಾ- ಬಾಲಿ ದ್ವೀಪಗಳಿಗೆ ಹೋದಾಗ ಅಲ್ಲಿಂದ ಒಂದು ನಗ್ನ ಹುಡುಗಿಯ ಬೊಂಬೆ ತಂದು ಮಗನಿಗೆ ಕೊಟ್ಟು ‘ಸಾರಿ ಮಗನೇ ನಿನಗೆ ಜೀವಂತವಾಗಿರುವುದನ್ನು ತಂದುಕೊಡಲಾಗಲಿಲ್ಲ’ ಅಂದಿದ್ದ. ರಾಜ್‌ಕಪೂರ್‌ ಮೊದಲ ಬಾರಿಗೆ ಕೆಮರಾದ ಮುಂದೆ ನಿಂತು ಥರಗುಟ್ಟುತ್ತಿದ್ದಾಗ, ‘ ನೀನು ಕಪೂರ್‌ ಕಣೋ ನೀನು ಮಾಡಲಾಗದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ ’ ಅಂದಿದ್ದ ಪೃಥ್ವಿ.

ಕಸಗುಡಿಸಿದ್ದ ರಾಜ್‌

ರಾಜ್‌ಕಪೂರ್‌ಗೆ ಅವನ ತಂದೆಯೇ ಬಹುದೊಡ್ಡ ಸ್ಫೂರ್ತಿ. ತನ್ನ ಮಗನನ್ನು ಕರೆದೊಯ್ದು ಆತ ಏಕಾಏಕಿ ಕೆಮರಾದ ಮುಂದೆ ನಿಲ್ಲಿಸಲಿಲ್ಲ. ಇನ್‌ಫ್ಯಾಕ್ಟ್‌, ರಾಜ್‌ ಕಪೂರ್‌ಗೆ ನಟನಾಗಬೇಕೆಂಬ ಆಸೆಯೂ ಇರಲಿಲ್ಲ. ಆತ ನಿರ್ದೇಶಕನಾಗಬಯಸಿದ್ದ. ಹೀಗಾಗಿ ಸ್ಟುಡಿಯೋಗಳಲ್ಲಿ ಕಸಗುಡಿಸುವವನಾಗಿ, ಕ್ಲಾಪರ್‌ಬಾಯ್‌ ಆಗಿ, ಡೈರೆಕ್ಟರನ ಹತ್ತಿರ ಏಳನೇ ಅಸಿಸ್ಟೆಂಟನಾಗಿ ಹತ್ತು ವರ್ಷ ಕೆಲಸ ಮಾಡಿದ. ಅಂದಿನ ನಿರ್ದೇಶಕ ಕಿದಾರ್‌ ಶರ್ಮಾ ಮೊಟ್ಟ ಮೊದಲ ಬಾರಿಗೆ 1944ರಲ್ಲಿ ‘ನೀಲ್‌ ಕಮಲ್‌’ ಚಿತ್ರದಲ್ಲಿ ರಾಜ್‌ಕಪೂರನಿಗೆ ಹೀರೋ ಪಾತ್ರ ಕೊಟ್ಟಿದ್ದ. ಆ ಹೊತ್ತಿಗಾಗಲೇ ರಾಜ್‌ಕಪೂರ್‌, ಹಿಂದಿ ಚಿತ್ರರಂಗದ ಖಳನಟ ಪ್ರೇಮ್‌ನಾಥ್‌ನ ಸೋದರಿ ಕೃಷ್ಣಾಳನ್ನು ಮದುವೆಯಾಗಿದ್ದ.

ಅದೃಷ್ಟ ತಂದವರು

ವಿಪರ್ಯಾಸಗಳು ಹೇಗಿರುತ್ತವೆ ನೋಡಿ? ಇವತ್ತು ಒಬ್ಬ ಕಳ್ಳ ಸ್ವಾಮಿಯನ್ನು ನಂಬಿಕೊಂಡು ಮುಂಬಯಿಯಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಸಾವಿರಗಟ್ಟಲೆ ಖರ್ಚು ಮಾಡಿ ‘ಸರ್ಪ ಸಂಸ್ಕಾರ’ ಮಾಡಿಸುತ್ತಿರುವ ರಾಜ್‌ಕಪೂರ್‌ನ ಈ ಮೂರೂ ಮಕ್ಕಳು, ತಮ್ಮ ತಂದೆಯ ಪಾಲಿನ ಅದೃಷ್ಟದ ಸಂಕೇತಗಳಾಗಿದ್ದರು !

ನಟ ಪ್ರೇಮ್‌ನಾಥ್‌ನ ತಂಗಿ ಕೃಷ್ಣಾಳನ್ನು ರಾಜ್‌ಕಪೂರ್‌ ಮದುವೆಯಾಗಿದ್ದು 1946ರಲ್ಲಿ. ಅವರಿಗೆ ರಣಧೀರ್‌ ಕಪೂರ್‌ ಹುಟ್ಟಿದ್ದು 1947ರ ಫೆಬ್ರುವರಿ 15 ರಂದು ! ಆ ವರ್ಷವೇ ರಾಜ್‌ಕಪೂರ್‌ನ ಮೊದಲ ಸಿನೆಮಾ ‘ಆಗ್‌’ ಬಿಡುಗಡೆಯಾಗಿತ್ತು. ಆ ವರ್ಷವೇ ರಾಜ್‌ಕಪೂರ್‌ ತನ್ನ ಮೊಟ್ಟ ಮೊದಲನೆಯ ಕಾರು ಖರೀದಿಸಿದ್ದ. ಅದರ ಮುಂದಿನ ವರ್ಷವೇ 1948 ಅಕ್ಟೋಬರ್‌ 31ರಂದು, ರಾಜ್‌ಕಪೂರ್‌ನ ಮಗಳು ರೀತೂ ಹುಟ್ಟಿದಳು. ಅದು ಇನ್ನೊಂದು ಅದೃಷ್ಟದ ಸಂಕೇತ ! ರಾಜ್‌ಕಪೂರ್‌ನ ಸ್ವಂತ ಸಂಸ್ಥೆಯಾದ ಆರ್‌.ಕೆ.ಫಿಲ್ಮ್ಸ್‌ ಮೊಟ್ಟ ಮೊದಲ ಬಾರಿಗೆ ತನ್ನ ಸ್ವಂತ ಆಫೀಸು ಹೊಂದಿತು. ಅದೇ ವರ್ಷ 1948ರ ಮೇ ತಿಂಗಳಲ್ಲಿ ರಾಜ್‌ಕಪೂರ್‌ನ ಪ್ರಖ್ಯಾತ ಹಿಟ್‌ ಚಿತ್ರ ‘ಬರಸಾತ್‌’ ಬಿಡುಗಡೆಯಾಗಿ ಹಣದ ಸುರಿಮಳೆ ಸುರಿಸಿತು. ಅದೇ ವರ್ಷ ರಾಜ್‌ಕಪೂರ್‌ ತನ್ನ ಎರಡನೇ ಕಾರು ಖರೀದಿಸಿದ್ದ.

ಜೋಳಿಗೆ ಬರಿದು !

ಮುಂದೆ 1952ರ ಸೆಪ್ಟೆಂಬರ್‌ 4ರಂದು ರಿಷಿ ಹುಟ್ಟಿದ. ಮೊದಲ ಬಾರಿಗೆ ಇಂಡಿಯನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಭಾಗಿಯಾಗಲು ರಾಜ್‌ಕಪೂರ್‌ ಅಮೆರಿಕಕ್ಕೆ ಹೋದ. ಆತನನ್ನು ಜಗತ್ತು ಕೊಂಡಾಡಿತ್ತು. ಆದರೆ 1956 ಸೆಪ್ಟೆಂಬರ್‌ 28ರಂದು ಮಗಳು ರೀಮಾ ಹುಟ್ಟಿದಳು. ಆಗಲೇ ರಾಜ್‌ಕಪೂರ್‌ನ ಮನೆಯಲ್ಲಿ ಬಡತನದ ಕತ್ತಲು ಕವಿದಿತ್ತು. ಆತ ತೀವ್ರವಾದ ಆರ್ಥಿಕ ಸಂಕಟ ಎದುರಿಸುತ್ತಿದ್ದ. ತನ್ನದೇ ಆಯ್ಕೆಯ ಹೀರೋಯಿನ್‌ಗಳನ್ನು ಹಾಕಿಕೊಂಡು, ತನ್ನದೇ ಬ್ಯಾನರ್‌ನಲ್ಲಿ ಚಿತ್ರ ನಿರ್ಮಿಸುತ್ತಿದ್ದ ಆತ ಕಡೆಗೆ ಮಾಲಾ ಸಿನ್ಹಾ, ಸಾಹಿರಾಬಾನು, ನೂತನ್‌ರಂಥ ನಾಯಕಿಯರೊಂದಿಗೆ ಬೇರೆ ಬ್ಯಾನರುಗಳಲ್ಲಿ ನಟಿಸಲು ಒಪ್ಪಿಕೊಂಡ. ರಾಜ್‌ಕಪೂರ್‌ನ ಜೋಳಿಗೆ ಬರಿದಾಗಿತ್ತು. ಅನಂತರವೂ ರಾಜ್‌ಕಪೂರ್‌ ಸಾಕಷ್ಟು ಸಲ ದಿವಾಳಿಯಾದ. ಎರಡು ಇಂಟರ್‌ವೆಲ್‌ಗಳಿದ್ದ ‘ಮೇರಾ ನಾಮ್‌ ಜೋಕರ್‌’ ಚಿತ್ರವನ್ನು ಆರು ವರ್ಷ ನಿರ್ಮಿಸಿ, ಅದು ತೋಪಾದಾಗ ಸರ್ವನಾಶವಾಗಿ ಹೋದ. ಆದರೆ ಮುಂದೆ ಇದೇ ರಿಷಿ ಕಪೂರ್‌ನನ್ನು ಹಾಕಿಕೊಂಡು ಮಾಡಿದ ‘ಬಾಬಿ’ ಕನಕ ವೃಷ್ಟಿಯನ್ನೇ ಸುರಿಸಿತು.

ನಿಧಾನವಾಗಿ ಮರೆತು ಬಿಡು !

ಆದರೆ ರಾಜ್‌ಕಪೂರ್‌ ತುಂಬ ಇಷ್ಟಪಟ್ಟದ್ದು ಹಿರಿಯ ಮಗ ರಣಧೀರ್‌ ಕಪೂರನನ್ನ ! ಅವನನ್ನು pillar of strength ಎಂದೇ ಕರೆಯುತ್ತಿದ್ದ. ಮಗಳು ರೀತೂ ಎಂದರೂ ತುಂಬ ಇಷ್ಟ. ಆಕೆಯ ಮದುವೆಯಾದಾಗ ರಾಜ್‌ಕಪೂರ್‌ ದುಃಖ ತಡೆಯಲಾಗದೆ ಎದೆಯಾಡೆದಂತವನಾಗಿದ್ದ. ‘ನೀನು ಬಿಟ್ಟು ಹೋಗುತ್ತಿರುವ ದುಃಖವಿದೆ ಮಗಳೇ... ಆದರೆ ನಿನ್ನನ್ನು ತುಂಬ ಪ್ರೀತಿಸುತ್ತಿದ್ದೇನೆ. ಈ ದುಃಖ ನೀನೂ ಮರೆಯಬೇಕು. ನಾನೂ ಮರೆಯಬೇಕು. ನೀನು ಗಂಡನ ಮನೆಯಲ್ಲಿ ಸಂತೋಷವಾಗಿ ಇರುತ್ತ ಇರುತ್ತ ನಿಧಾನವಾಗಿ ನನ್ನನ್ನು ಮರೆತುಬಿಡು’ ಎಂದು ಅವಳಿಗೆ ಪತ್ರ ಬರೆದಿದ್ದ. ಎರಡನೆಯ ಮಗ ರಿಷಿ ಕಪೂರ್‌ಗೆ ಅತ್ಯುತ್ತಮ ನಟ ಅಂತ (ಜೋಕರ್‌ ಚಿತ್ರಕ್ಕೆ) ಪ್ರಶಸ್ತಿ ಬಂದಾಗ ಸಂತೋಷದಿಂದ ಉಬ್ಬಿ ಹೋಗಿದ್ದ. ಮಗಳು ರೀತೂಳನ್ನು ರಾಜನ್‌ ನಂದಾ ಎಂಬ ಉದ್ಯಮಿಗೆ ಕೊಟ್ಟು ಮದುವೆ ಮಾಡಿದ. ಎರಡನೇ ಮಗಳು ರೀಮಾ, ರಾಜ್‌ಕಪೂರ್‌ ಸತ್ತ ಏಳು ತಿಂಗಳಿಗೆ ಮನೋಜ್‌ ಜೈನ್‌ ಎಂಬಾತನನ್ನು ಮದುವೆಯಾದಳು.

ಮಗನಿಗೆ ಪತ್ರ

ಹಾಗೆ ಬದುಕಿದ ರಾಜ್‌ಕಪೂರ್‌, ತನ್ನ ಕೊನೆಯ ಮಗ ರಾಜೀವ್‌ ಕಪೂರ್‌ನನ್ನು ಹೀರೋ ಆಗಿ ಹಾಕಿಕೊಂಡು ‘ರಾಮ್‌ ತೇರಿ ಗಂಗಾ ಮೈಲಿ’ ಚಿತ್ರ ಮಾಡಿದಾಗ ಅವನಿಗಾಗಿ ಬರೆದ ಪತ್ರದ ಕೆಲವು ಸಾಲುಗಳನ್ನು ಪ್ರಕಟಿಸುವುದರ ಮೂಲಕ ಈ ಲೇಖನವನ್ನು ಮುಗಿಸುತ್ತೇನೆ. ‘ಪ್ರೀತಿಯ ರಾಜೀವ್‌, ನಾವಿಬ್ಬರೂ ಒಂದು ಗೆರೆಯ ಆಚೀಚೆಗಿದ್ದೇವೆ. ಚರ್ಚೆ ಮಾಡುತ್ತೀಯಾ? ಸಲಹೆ ಕೇಳುತ್ತೀಯಾ? ಸಹಾಯ ಬೇಕಾ? ಗೆರೆಯ ಈಚೆಯಿಂದ ನಿನಗೆ ಎಲ್ಲವೂ ಸಿಗುತ್ತದೆ. ಆದರೆ ನೆನಪಿಟ್ಟುಕೋ; ಆಚೆಗೆ ನಿಂತಿದ್ದೀಯಲ್ಲ? ಅದೆಲ್ಲ ರಂಗಭೂಮಿ ನಿನ್ನದು. ಅದು ನಿನ್ನ ಬದುಕು. ನೀನೇ ಬದುಕಬೇಕೇ ಹೊರತು, ಅದನ್ನು ನಾನು ಬದುಕಲಾರೆ. ನಾನು ಯಾವತ್ತಿಗೂ ನನ್ನ ಮಗನನ್ನು ಹೀರೋನನ್ನಾಗಿ ಮಾಡಬೇಕು ಅಂದುಕೊಂಡು ಒಂದು ಸಿನಿಮಾ ಮಾಡಿಲ್ಲ. ನಾನು ಮೂಲತಃ ಒಬ್ಬ ಫಿಲ್ಮ್‌ ಮೇಕರ್‌. ತಂದೆಯಾಗಿ, ಅಣ್ಣನಾಗಿ, ಗಂಡನಾಗಿ, ಪ್ರಿಯತಮನಾಗಿ- ಉಹುಂ, ಅವೆಲ್ಲ ಪಾತ್ರಗಳೂ ನನಗೆ ಗೌಣ. ನಾನು ಕೆಟ್ಟ ತಂದೆ ಅನ್ನಿಸಿಕೊಂಡರೆ ನನಗೆ ದುಃಖವಿಲ್ಲ. ಆದರೆ ಒಬ್ಬ ಕೆಟ್ಟ ಫಿಲ್ಮ್‌ ಮೇಕರ್‌ ಅನ್ನಿಸಿಕೊಳ್ಳಲಾರೆ. ನಿರ್ದೇಶಕ ರಾಜ್‌ಕಪೂರ್‌ ಅಂತ ತೋರಿಯಾದ ಮೇಲೆ ಅದು ಕೆಟ್ಟ ಸಿನಿಮಾ ಆಗಿದ್ದರೆ ಅದನ್ನು ನಾನು ಸಹಿಸಿಕೊಳ್ಳಲಾರೆ. ಅದಕ್ಕೇ ಹೇಳಿದ್ದು: ನಾನು ಮಕ್ಕಳಿಗಾಗಿ ಸಿನಿಮಾ ಮಾಡುವುದಿಲ್ಲ. ನನ್ನ ಸ್ಕಿೃಪ್ಟಿಗೆ ಸಿನಿಮಾ ಮತ್ತು ಹೀರೋ ಹೊಂದಬೇಕೇ ಹೊರತು, ನಿನ್ನನ್ನು ಹೀರೋ ಮಾಡಬೇಕೆಂಬುದಕ್ಕಾಗಿ ನಾನು ಸ್ಕಿೃಪ್ಟು ಬದಲಾಯಿಸಬೇಕಿಲ್ಲ’- ಅಂತ ಆತ ಬರೆದಿದ್ದ.

ದುರಂತವೆಂದರೆ, ರಾಜ್‌ಕಪೂರ್‌ನ ಹೆಚ್ಚಿನ ಸ್ಕಿೃಪ್ಟುಗಳು, ಸಿನಿಮಾಗಳು ಸಫಲವಾದವು. ಆದರೆ, ಮಕ್ಕಳು ಇವತ್ತು ವಿಫಲರಾಗಿ ಸರ್ಪ ಸಂಸ್ಕಾರ ಮಾಡಿಸಿ ಭವಿತವ್ಯದ ಬದುಕು ಸರಿಯಾದರೆ ಸಾಕೆಂದು ನಮಸ್ಕಾರ ಹಾಕುತ್ತಿದ್ದಾರೆ. ವಿಪರ್ಯಾಸಗಳು ಹೀಗೂ ಇರುತ್ತವಲ್ಲವೆ?

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more