ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಬ್ಬಚ್ಚಿಯೇ ಇಲ್ಲದ ಬೆಂಗಳೂರಿನಂತಾದರೆ ಬದುಕು?

By ರವಿ ಬೆಳಗೆರೆ
|
Google Oneindia Kannada News

When did this Sparrow fly from our heart ?
ಲೇಖನವೊಂದನ್ನು ಓದುತ್ತಿದ್ದೆ : ಇದ್ದಕ್ಕಿದ್ದಂತೆ ‘ಹೌದಲ್ಲಾ ?’ ಅನ್ನಿಸಿತು. ಸುಮ್ಮನೆ ಕುಳಿತು ನೆನಪು ಮಾಡಿಕೊಂಡೆ- ನಾನು ಗುಬ್ಬಿ ನೋಡಿ ಎಷ್ಟು ದಿನಗಳಾದವು ?

ಬರೆಯುವಾಗ ಅನೇಕ ಸಲ ಅದರ ಬಗ್ಗೆ ಪ್ರಸ್ತಾಪವಾಗುತ್ತದೆ. ಗುಬ್ಬಿ ಗಾತ್ರದ ಅಜ್ಜಿ , ಗುಬ್ಬಚ್ಚಿಯಂಥ ಹುಡುಗಿ, ಗುಬ್ಬಿ ಗೂಡಿನಂಥ ಮನೆ, ಗುಬ್ಬಿ ಎದೆ ಢವಗುಟ್ಟಿದಂತೆ- ಹೀಗೇ. ಆದರೆ ನಮ್ಮ ಮನೆಗಳಿಂದ, ಮನೆಯ ಹೆಂಚು-ಜಂತಿ-ಕಿಟಕಿಯ ಸಂದಿಗಳಿಂದ ಗುಬ್ಬಚ್ಚಿಯೆಂಬ ನಿರುಪದ್ರವಿ ಹಕ್ಕಿ ಸದ್ದಿಲ್ಲದೆ ಹಾರಿಹೋಗಿ ಎಷ್ಟೋ ವರ್ಷಗಳಾಗಿವೆ. ನಮಗೆ ಗೊತ್ತೇ ಆಗಿಲ್ಲ . ಬೆಂಗಳೂರಿನಂಥ ಊರುಗಳಲ್ಲಂತೂ ಕಣ್ಣಿಗೆ ಬೀಳುವುದೇ ಇಲ್ಲ ಗುಬ್ಬಚ್ಚಿ.

ಮುಖ್ಯವಾಗಿ ಹೆಂಚಿನ ಮನೆಗಳಿಲ್ಲ . ಗೂಡು ಕಟ್ಟಲು ಈ ಕಾಂಕ್ರೀಟು ಕಾಡಿನಲ್ಲಿ ಅವಕ್ಕೆ ತೊಲೆಗಳು ಸಿಗುವುದಿಲ್ಲ . ಹುಲ್ಲು ಕಡ್ಡಿ ಅಪರೂಪ. ಮೊದಲಾದರೆ ಮನೆಗಳಲ್ಲಿ ಅಕ್ಕಿ ಹಸನು ಮಾಡುತ್ತಿದ್ದರು. ಅದರ ನಡುವಿನ ನೆಲ್ಲು , ಬಿಳೀ ಹುಳು ತಿನ್ನಲು ಗುಬ್ಬಚ್ಚಿ ಬರುತ್ತಿದ್ದವು. ಅವರೆ ಕಾಳು ಬಿಡಿಸಿದರೆ, ಅದರಲ್ಲೂ ಹುಳು ಇರುತ್ತಿತ್ತು . ಈಗ ಎಲ್ಲವೂ ಪ್ಲಾಸ್ಟಿಕ್‌ ಪಾಕೀಟುಗಳಲ್ಲಿ ಹಸನುಗೊಂಡೇ ಬರುತ್ತವೆ. ಗುಬ್ಬಚ್ಚಿಯ ಹೊಟ್ಟೆಗೆ ಆಹಾರವೆಲ್ಲಿ ? ಮೇಲಾಗಿ ಗುಬ್ಬಚ್ಚಿ ಬಲು ಸಂಕೋಚದ, ತುಂಬಾ ಸ್ವಚ್ಛವಾಗಿರುವ ಪುಟ್ಟ ಪಕ್ಷಿ . ಅದು ಕಾಗೆಯಂತೆ ಎಂಜಲು ತಿಂದಾದರೂ ಬದುಕುತ್ತೇನೆ ಎಂದು ಹಟ ಮಾಡುವುದಿಲ್ಲ . ಗೂಡು ಕಟ್ಟಿಕೊಳ್ಳಲಾಗದ ಬೋಳು ಗೋಡೆ-ಸೂರುಗಳಿರುವ ಮನೆಗಳಲ್ಲಿ ಜಿರಳೆಯಂತೆ, ಇಲಿಗಳಂತೆ, ನಾಯಿಗಳಂತೆ, ಬೆಕ್ಕಿನಂತೆ ಹಟಕ್ಕೆ ಬಿದ್ದು ಉಳಿಯುವುದಿಲ್ಲ . ಗುಬ್ಬಚ್ಚಿ ಬಲು ಸಂಕೋಚಿ. ಸ್ವಲ್ಪ ಯಡವಟ್ಟಾದರೂ ಸದ್ದಿಲ್ಲದೆ ಹಾರಿಹೋಗುತ್ತದೆ ; ಸೂಕ್ಷ್ಮ ಮನಸ್ಸುಗಳ ನಡುವಿನ ಸಂಬಂಧದಂತೆ !

ಎಲ್ಲಕ್ಕಿಂತ ನನ್ನನ್ನು ಗಾಬರಿಗೊಳಿಸಿದ ಸಂಗತಿಯೆಂದರೆ, ಗುಬ್ಬಚ್ಚಿ ಕಣ್ಮರೆಯಾಗಲು ಮೊಬೈಲುಗಳೂ ಕಾರಣವಂತೆ ! ಅವುಗಳ ತರಂಗಗಳಿಗೆ ಗುಬ್ಬಚ್ಚಿ ಗಾಬರಿಗೊಳ್ಳುತ್ತದೆ. ಅಥವಾ ಸತ್ತುಹೋಗುತ್ತದೆ. ಆ ಬಗ್ಗೆ ಸಂಶೋಧನೆ ನಡೆದಿದೆ.

ಮನುಷ್ಯ- ಮನುಷ್ಯನ ಕೆಲವು ಸೂಕ್ಷ್ಮ ಸಂಬಂಧಗಳು ಎಷ್ಟೊಂದು ಈ ಗುಬ್ಬಚ್ಚಿಯನ್ನು ಹೋಲುತ್ತವಲ್ಲವೆ ? ನಮಗೆ ಊರ ಪಕ್ಕದ ನದಿಯಲ್ಲಿ ಸಾವಿರಾರು ಮೀನು ಸತ್ತುಹೋಗುವುದು ಗೊತ್ತಾಗುತ್ತದೆ. ನೀರಿಲ್ಲದೆ ಕೋತಿಗಳು ಸಾಯೋದು, ಬೇಟೆಗಾರರ ಕೈಗೆ ಸಿಕ್ಕು ಆನೆ ಸಾಯೋದು, ಯಾವುದೋ ದೇಶದಲ್ಲಿ ಸಯಾಮಿ ಅವಳಿಗಳು ಸಾಯೋದು- ಎಲ್ಲ ಗೊತ್ತಾಗುತ್ತದೆ. ಆದರೆ ಮನೆಯಾಳಗೇ ಇದ್ದ ಗುಬ್ಬಚ್ಚಿ ಹಾರಿ ಹೋದದ್ದು ಗೊತ್ತಾಗುವುದಿಲ್ಲ . ನಮಗೆ ನಮ್ಮದೇ ಅಬ್ಬರ, ನಮ್ಮದೇ ಪ್ರಪಂಚ. ನಾವಾಡಿದ ಮಾತಿನಿಂದ ಪಕ್ಕದ ಮನೆಯ ಮಗುವಿಗೆ ನೋವಾಯಿತಾ ? ತಂಗಿ ಘಾಸಿಗೊಂಡಳಾ? ಪ್ರತಿನಿತ್ಯ ಸುಮ್ಮನೆ ಒಮ್ಮೆ ‘ಹಲೋ’ ಅನ್ನುತ್ತಿದ್ದ ಎದುರು ಬೀದಿಯ ಹುಡುಗ ಈ ಮಧ್ಯೆ ಯಾಕೆ ಕಾಣುತ್ತಿಲ್ಲ ? ಹಾಸ್ಟೆಲಿನಲ್ಲಿ ಒಟ್ಟಿಗೆ ಒಂದೇ ರೂಮಿನಲ್ಲಿದ್ದ ಗೆಳೆಯನಿಗೆ ಫೋನು ಮಾಡಿ ಎಷ್ಟು ದಿನಗಳಾದವು ?

ಕೇಳಿಕೊಂಡು ನೋಡಿ ?

ಎಲ್ಲವೂ ಸದ್ದಿಲ್ಲದೆ ಹಾರಿ ಹೋದ ಗುಬ್ಬಿಗಳೇ. ಕೆಲವರು ಯಾಕೋ ಏನೋ ಮರೆತೇ ಹೋಗಿರುತ್ತಾರೆ. ಇದಿರಾದಾಗ ಎಲ್ಲೋ ನೋಡಿದ್ದೇನಲ್ಲಾ ಅನಿಸುತ್ತದೆ. ಜಪ್ಪಯ್ಯ ಅಂದರೂ ಹೆಸರು, ಭೇಟಿಯಾದ ಸನ್ನಿವೇಶ ನೆನಪಿಗೆ ಬಾರದು. ಅವರು ಮಾತ್ರ ಪ್ರೀತಿಯಿಂದ ಮಾತನಾಡಿಸುತ್ತಲೇ ಇರುತ್ತಾರೆ : ನಾವು ಚಡಪಡಿಸುತ್ತ ನಿಂತಿರುತ್ತೇವೆ. ಅಂಥದೊಂದು ನಿರುಪದ್ರವಿ ಸಂಬಂಧದ, ಪರಿಚಯದ ನೆನಪಿನ ಗುಬ್ಬಚ್ಚಿ ಹಾರಿಹೋದದ್ದು ಯಾವಾಗ ?

ಕಾರಣವಿಷ್ಟೆ : ನಮ್ಮನ್ನು ಕೇವಲ ನಾವೇ occupy ಮಾಡಿಕೊಂಡು ಬದುಕುತ್ತಿರುತ್ತೇವೆ. ಉಳಿದವರ್ಯಾರೂ ನಮ್ಮ ಚಿಂತನೆ, ನೆನಪು, ಮೆಲುಕು ಇತ್ಯಾದಿಗಳಲ್ಲಿ ಹಾದುಹೋಗುವುದಿಲ್ಲ . ಹೀಗಾದಾಗ ತೀರ ಆತ್ಮೀಯರ ಹುಟ್ಟುಹಬ್ಬದ ಡೇಟು ಮರೆಯುತ್ತೇವೆ. ನಮ್ಮದೇ ಮದುವೆಯ ಆ್ಯನಿವರ್ಸರಿ ಮರೆಯುತ್ತೇವೆ. ಅಮ್ಮ ಸತ್ತ ದಿನ ನೆನಪಾಗುವುದಿಲ್ಲ . ಅದನ್ನೆಲ್ಲ ನಾವು ನಮ್ಮ ಬ್ಯುಸಿ ಲೈಫಿಗೆ ಆರೋಪಿಸಿ ಸುಮ್ಮನಾಗಬಹುದು. ಆದರೆ, ಸಂಬಂಧಗಳನ್ನು ಕಳೆದುಕೊಂಡದ್ದಕ್ಕೆ ಮುಖ್ಯ ಕಾರಣ ನಮ್ಮ ಬೇಜವಾಬ್ದಾರಿತನ ಎಂಬುದನ್ನು ಅಲ್ಲಗಳೆಯಲು ಖಂಡಿತ ಸಾಧ್ಯವಿಲ್ಲ .

ಬೇಕಾದರೆ ನೀವು ಗಮನಿಸಿ ನೋಡಿ. ಕುಡಿತಕ್ಕೆ ಬಿದ್ದ ಮನುಷ್ಯ, ಹೆಣ್ಣಿನ ಮೋಹದಲ್ಲಿ ಮುಳುಗಿದ ಮನುಷ್ಯ ಮತ್ತು ದುಡ್ಡು ಮಾಡುವುದಕ್ಕೊಂದು ಟಾರ್ಗೆಟ್‌ ಇಟ್ಟುಕೊಂಡು ಹೊರಡುವ ಮನುಷ್ಯ- ಅವನ ಸೂಕ್ಷ್ಮ ಸಂವೇದನೆಗಳೇ ಮೊಟಕಾಗಿ, ಮೊಂಡಾಗಿ blunt ಆಗಿ ಹೋಗಿರುತ್ತವೆ. ಬೇರೆ ಯಾವುದರೆಡೆಗೂ ಅವನಿಗೆ ಆಸಕ್ತಿಯಿರುವುದಿಲ್ಲ . ಮುಖ್ಯವಾಗಿ, ಒಂದು ಸಂಬಂಧದ ಬಿಸುಪು- ಮೃದುತ್ವ ಉಳಿಸಿಕೊಳ್ಳಬೇಕೆಂಬುದರೆಡೆಗೆ ಅವನಿಗೆ ಸಹನೆಯಿರುವುದಿಲ್ಲ . ಅವನ ಪಕ್ಕದಲ್ಲಿದ್ದವರಿಗೆ ಸದಾ ಓಡುವ ಕುದುರೆ ಆಗೊಮ್ಮೆ ಈಗೊಮ್ಮೆ ಕಾಲ್ತುಳಿವ ಅನುಭವ.

ಇಂಥ ತಪ್ಪುಗಳನ್ನು ಸಾಮಾನ್ಯವಾಗಿ ನಾವೆಲ್ಲರೂ ಮಾಡಿರುತ್ತೇವೆ. ಆದರೆ ನಮ್ಮಲ್ಲೇ ಕೊಂಚ ಸೂಕ್ಷ್ಮ ಮಾನಸರು, ತಕ್ಷಣ ತಪ್ಪು ತಿದ್ದಿಕೊಳ್ಳುತ್ತೇವೆ. Hurt ಆದ ತಂಗಿಗೊಂದು sorry ಹೇಳಿರುತ್ತೇವೆ. ವಿನಾಕಾರಣ ಮಾತು ಬಿಟ್ಟ ಬೆಳತಿಗೆ ಫೋನು ಮಾಡಿರುತ್ತೇವೆ. ನಮಗೇ ಗೊತ್ತಿಲ್ಲದೆ ಕಳಚಿಕೊಂಡ ಪುಟ್ಟ ಪುಟ್ಟ ಸಂಬಂಧಗಳನ್ನು ಮತ್ತೆ ನಾವೇ ನೆನಪುಮಾಡಿಕೊಂಡು ಹೋಗಿ renew ಮಾಡಿಕೊಂಡಿರುತ್ತೇವೆ. ದೊಡ್ಡ ದೊಡ್ಡ ಜಗಳಗಳಾಗಿ ಕೆಲವು ಸಂಬಂಧಗಳು ಮೈಯೆಲ್ಲ ಗಾಯ ಮಾಡಿ ಸತ್ತು ಹೋಗುತ್ತವಲ್ಲ ? ಅವಕ್ಕಿಂತಲೂ, ಈ ಗುಬ್ಬಚ್ಚಿಯಂಥ ನಿರುಪದ್ರವಿ ಸಂಬಂಧಗಳು ಮನಸ್ಸಿಗೆ ಎಷ್ಟೋ ನೆಮ್ಮದಿ ಕೊಡುತ್ತವೆ. ನಾನು ಬೇಕೆಂತಲೇ ಅಂಥ ಕೆಲವು ಸಂಬಂಧಗಳನ್ನು ಹುಡುಕಿಕೊಂಡು ಹೋಗಿ ಆನಂದಪಟ್ಟು ಹಿಂತಿರುಗುತ್ತೇನೆ. ಬೆಂಗಳೂರಿಗೆ ಬಂದ ಹೊಸತರಲ್ಲಿ ರೂಮು ಮಾಡಿಕೊಂಡಿದ್ದೆನಲ್ಲ ? ರಾತ್ರಿ ಸರಿಹೊತ್ತಿನಲ್ಲಿ ಒಂದಷ್ಟು ಕುಡಿದು ಊಟಕ್ಕೆ ಕಾಸಿಲ್ಲದೆ ರೂಮಿಗೆ ವಾಪಸು ಬಂದರೆ, ಕೋಣೆಯೆದುರು ಇಡ್ಲಿ ಮಾರುವ ಅಜ್ಜಿ ಒಂದಷ್ಟು ಬಿಸೀ ಇಡ್ಲಿ ಎಲೆಗೆ ಹಾಕಿ ಕೊಡುತ್ತಿದ್ದಳು. ಪಕ್ಕದ ತಳ್ಳುಗಾಡಿಯ ತಮಿಳರ ಹೆಂಗಸು ಎರಡು ಬಾಳೆ ಹಣ್ಣು ಕೊಡುತ್ತಿದ್ದಳು. ಮಾರನೆಯ ದಿನ ಅವರಿಗೆ ನಾನು ಹಣ ಕೊಟ್ಟಿರಬಹುದು. ಆದರೆ ಅವತ್ತಿನ ಅರ್ಧ ರಾತ್ರಿಯ ಹಸಿವೆಗೆ ಅವರೇ ಅಮ್ಮಂದಿರು ! ಈಗಲೂ ಅವರ ನೆನಪಾದಾಗ ಒಬ್ಬನೇ ಹೋಗಿ ಕತ್ತಲ ಮೂಲೆಯಲ್ಲಿ ಎರಡು ಇಡ್ಲಿ , ಒಂದು ಬಾಳೆ ಹಣ್ಣು ತಿಂದು ಇಬ್ಬರಿಗೂ ಎರಡೆರಡು ಸೀರೆ ಕೊಂಡುಕೊಳ್ಳುವಷ್ಟು ಹಣ ಕೊಟ್ಟು ಬಂದುಬಿಡುತ್ತೇನೆ. ಇದು ದೊಡ್ಡಸ್ತಿಕೆಯ ಸಂಗತಿಯಲ್ಲ . ಮರೆತುಹೋಗಿದ್ದರೆ, ತಕರಾರಿಲ್ಲದೆ ಮರೆತುಬಿಡಬಹುದಾದ ಸಂಬಂಧಗಳವು. ಆದರೆ ಮರೆಯದೆ ಇರುವುದು ನನ್ನ ಜರೂರತ್ತು . ಅದು ನನ್ನ ಸ್ವಾರ್ಥದ ಜರೂರತ್ತು . ಅಂಥ ಸಂಬಂಧಗಳಿಲ್ಲದ ಬದುಕು- ಅದು ಗುಬ್ಬಚ್ಚಿಯಿಲ್ಲದ ಬೆಂಗಳೂರಿನಂತಹುದು !

ಹಾಗಂತ, ಇಂಥ ಸಂಬಂಧಗಳು ಯಾರೋ ಇಡ್ಲಿ , ಹಣ್ಣು , ಹಾಲು ಇತ್ಯಾದಿ ಮಾರುವಂತಹವರೊಂದಿಗೆ ಮಾತ್ರ ಇರುತ್ತವೆ ಅಂದುಕೊಳ್ಳಬೇಡಿ. ಎಷ್ಟೋ ಸಲ ನಮ್ಮದೇ ಅಪ್ಪ ಅಮ್ಮ, ಅಕ್ಕ ತಂಗಿ, ಹೆಂಡತಿ ಮಕ್ಕಳೊಂದಿಗೆ ನಾವು ಹೀಗಾಗಿಬಿಟ್ಟಿರುತ್ತೇವೆ. ತೀರ ಅಣ್ಣ- ತಮ್ಮ ಅನ್ನಿಸಿಕೊಂಡವರು ಒಂದೇ ಊರಿನಲ್ಲಿದ್ದೂ ವರ್ಷಗಟ್ಟಲೆ ಭೇಟಿಯಾಗಿರುವುದಿಲ್ಲ . ಮನೆಯಲ್ಲೇ ಇರುವ ಅಪ್ಪನೊಂದಿಗೆ ಮಾತಾಡಿರುವುದಿಲ್ಲ . ಮಗುವಿಗೆ ಕತೆ ಹೇಳಿರುವುದಿಲ್ಲ . ಆದರೆ ದಿನವಿಡೀ ಆಫೀಸಿನಲ್ಲಿರುವವರೊಂದಿಗೆ ಸಂಜೆ ಬಾರಿನಲ್ಲೂ ಕುಳಿತು ಮಧ್ಯರಾತ್ರಿಯ ತನಕ ಕೆಲಸಕ್ಕೆ ಬಾರದ್ದನ್ನೇ ಮಾತನಾಡಿ ಬಂದಿರುತ್ತೇವೆ. ಮನೆಗೆ ಬಂದು ಯಾರೊಂದಿಗೂ ಮಾತನಾಡದೆ ಗುಮ್ಮಂತ ಉಂಡು ಮಲಗಿರುತ್ತೇವೆ. ಈ ಸೂಚನೆಗಳನ್ನು ತಕ್ಷಣ ಗಮನಿಸಿಕೊಳ್ಳಬೇಕು. ನಾವು ಸಂಬಂಧಗಳೆಡೆಗೆ blunt ಆಗುತ್ತಿದ್ದೇವೆ ಎಂಬುದರ ಮೊದಲ ಸೂಚನೆಗಳಿವು.ಆದರೆ ಹೆಣ್ಣು , ಕುಡಿತ, ದುಡ್ಡು , ಕೀರ್ತಿ, ಟಾರ್ಗೆಟ್ಟು ಇತ್ಯಾದಿಗಳಲ್ಲಿ ನಮಗೇ ಗೊತ್ತಿಲ್ಲದೆ ತೊಡಗಿಕೊಂಡು ಬಿಡುವ ನಾವು ಹೇಗೆ ಕಾಲಾಂತರದಲ್ಲಿ ನಮ್ಮ blunt ವರ್ತನೆಯಿಂದಾಗಿಯೇ ಸಂಬಂಧಗಳನ್ನು ಕೊಂದುಕೊಂಡಿರುತ್ತೇವೆ ಗೊತ್ತಾ ? ಹೆಂಡತಿಯಾಂದಿಗಿನ ಸೆಕ್ಸ್‌ ಸತ್ತುಹೋಗಿರುತ್ತದೆ. ಮಕ್ಕಳು ದಿನವಿಡೀ ಏನು ಮಾಡುತ್ತಿರುತ್ತಾರೆ ಎಂಬುದೇ ಗೊತ್ತಿರುವುದಿಲ್ಲ . ಯಾರೊಂದಿಗೂ ಒಂದು ಮಮಕಾರಯುತ ಸಂಬಂಧ ಉಳಿದಿರುವುದಿಲ್ಲ . ಫ್ರೆಂಡ್ಸ್‌ ಕಳೆದುಹೋಗಿರುತ್ತಾರೆ. ಎಲ್ಲ ಅನುಭವಿಸಿ, ಸಾಮ್ರಾಜ್ಯ ಗೆದ್ದು , ಟಾರ್ಗೆಟ್‌ ತಲುಪಿ, ಕೀರ್ತಿ ಕಿರೀಟ ಧರಿಸಿ ಹಿಂತಿರುಗಿ ನೋಡಿದರೆ, ಅಲ್ಲೇನಿದೆ ?ಅದು ಗುಬ್ಬಚ್ಚಿಯಿಲ್ಲದ ಬೆಂಗಳೂರು! (ಸ್ನೇಹ ಸೇತು : ಹಾಯ್‌ ಬೆಂಗಳೂರ್‌)

English summary
Soorya Shikari Ravi Belagere reader. A Monday column by Ravi, Editor, Hai Bangalore. Editorial note about launching Ravi Belageres column Soorya Shikari
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X