ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರಪರಾಧಿ ಹುಡುಗಿಯರನ್ನು ಕೊಂದು ಮೀಸೆ ಬಾಚಿಕೊಂಡ ಪೊಲೀಸರು !

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಯಾರ ಮನೆಯ ಹೆಣ್ಣು ಮಕ್ಕಳೋ? ಯಾವ ಕನಸು ಹೊತ್ತು ನಡೆದಿದ್ದರೋ? ಉಡುಪಿಯ ಎಸ್ಪಿ ಮುರುಗನ್‌ ಮತ್ತು ನನ್ನದೇ ಗೆಳೆಯ ಇನ್ಸ್‌ಪೆಕ್ಟರ್‌ ಅಶೋಕನ್‌ ಸೇರಿಕೊಂಡು ಆ ಇಬ್ಬರನ್ನೂ ಕೊಂದು ಮೀಸೆ ಬಾಚಿಕೊಂಡಿದ್ದಾರೆ. ಹುಡುಗಿಯರಿಗೆ ಇವರಿಬ್ಬರು ಇಟ್ಟ ಹೆಸರು ನಕ್ಸಲೈಟ್ಸ್‌ !

ಆ ಹುಡುಗಿಯರಾಗಲೀ, ಅವರೊಂದಿಗಿದ್ದ ಇತರೆ ಮೂವರಾಗಲೀ ಈ ತನಕ ಒಂದೇ ಒಂದು ಕಾಡತೂಸೂ ಹಾರಿಸಿದವರಲ್ಲ. ಯಾರದೂ ಪ್ರಾಣ ತೆಗೆದವರಲ್ಲ . ಹಣ ದೋಚಿದವರಲ್ಲ. ಅವರು ಹೋದದ್ದು ಕುದುರೆಮುಖದ ಕಾಡಿನಾಳದಲ್ಲಿ ಬದುಕುತ್ತಿರುವ ನಿಸ್ಸಹಾಯಕರನ್ನು ಸಂಘಟಿಸಲಿಕ್ಕೆ. ಅವರ ಪರವಾಗಿ ಹೋರಾಟ ಮಾಡಲಿಕ್ಕೆ. ಅವರ್ಯಾರೂ ಆಂಧ್ರದಿಂದ ಆಮದಾಗಿದ್ದ ನಕ್ಸಲೈಟರಲ್ಲ. ಇನ್ನೆಲ್ಲೋ ಹತ್ಯೆಗಳನ್ನು ಮಾಡಿ ಬಂದು ಇಲ್ಲಿ ಸೇರಿಕೊಂಡವರಲ್ಲ. ಜನ ದ್ರೋಹಿಗಳಲ್ಲ . ನಿಂತು ಬಡಿದಾಡಬಲ್ಲ ದೊಡ್ಡ ಗಂಡಸರೂ ಅಲ್ಲ . ಕೇವಲ ಗುಬ್ಬಿ ದೇಹದ, ತುಂಬು ಆದರ್ಶಗಳ, ಕಾಳ್ಗಿಚ್ಚಿನ ಬೆನ್ನತ್ತಿದ ನನ್ನ-ನಿಮ್ಮ ಅಕ್ಕತಂಗಿಯರಂತಹ ಪುಟ್ಟ ಹುಡುಗಿಯರು.

ಒಬ್ಬಳ ಹೆಸರು ಪಾರ್ವತಿ. ಇನ್ನೊಬ್ಬಳ ಹೆಸರು ಹಾಜೀಮಾ. ಪಾರ್ವತಿಯದು ಕೊಪ್ಪ ಸಮೀಪದ ಸೂರ್ಯ ದೇವಸ್ಥಾನವೆಂಬ ಊರು. ಅವಳ ತಂದೆ ರಾಮನಾಯಕ ಬಡ ಕೂಲಿಕಾರ. ಪಾರ್ವತಿ, ಶಿವಮೊಗ್ಗದಲ್ಲಿ ಬಿ.ಎ. ಪತ್ರಿಕೋದ್ಯಮ ಮಾಡಿಕೊಂಡವಳು. ಹೆಣ್ಣು ಮಕ್ಕಳ ಪರವಾಗಿ ನಿರಂತರ ಹೋರಾಟ ಮಾಡಿದವಳು. ಆನಂತರ ರಾಯಚೂರಿಗೆ ಹೋಗಿ ಭೂಗತಳಾದಳು. ಅಲ್ಲೇ ನಕ್ಸಲೀಯ ಚಳವಳಿ ಕಟ್ಟುತ್ತಿದ್ದ ಬೆಂಗಳೂರಿನ ಶ್ರೀರಾಂಪುರದ ಕ್ರಾಂತಿಕಾರಿ ಹುಡುಗ ರಮೇಶ್‌ನನ್ನು ಮದುವೆ ಕೂಡ ಆಗಿದ್ದಳು. ರಾಯಚೂರು ಸುತ್ತಲಿನ ಉಗ್ರ ನಕ್ಸಲೀಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಳು. ಅಷ್ಟರಲ್ಲೇ ರಾಯಚೂರಿನಲ್ಲೊಂದು ಪೊಲೀಸ್‌ ಎನ್‌ಕೌಂಟರ್‌ ಆಯಿತು. ರಮೇಶ್‌-ಪಾರ್ವತಿ ದಂಪತಿಗಳ ಜೊತೆಯಲ್ಲೇ ಇದ್ದ ಭಾಸ್ಕರ್‌-ಸುಮ ದಂಪತಿಗಳು ಸಿಕ್ಕುಬಿದ್ದರು. ರಾಯಚೂರು ಪೊಲೀಸರ ದಯಾಗುಣ(!) ನೋಡಿ. ಅವರು, ಶರಣಾಗಿ ಕೈಯೆತ್ತಿದ ಭಾಸ್ಕರ್‌ನನ್ನು ಕೊಂದರು. ಸುಮಾಳನ್ನು ಜೈಲಿಗೆ ಕಳಿಸಿದರು. ಮುಂದೆ ರಮೇಶ್‌ ಕೂಡ ಜೈಲು ಪಾಲಾದ. ಎದೆಗುಂದದ ಕ್ರಾಂತಿಕಾರಿ ಹೆಣ್ಣುಮಗಳು ಪಾರ್ವತಿ, ವಾಪಸು ಕುದುರೆಮುಖದ ಕಾಡಿಗೆ ಬಂದು ಇಲ್ಲಿನ ಆದಿವಾಸಿಗಳನ್ನು ಸಂಘಟಿಸತೊಡಗಿದಳು.

ಹೇಳಿ, ಇಂಥ ಹುಡುಗಿಯನ್ನು ಆ ಪರಿ ಗುಂಡಿಕ್ಕಿ ಕೊಲ್ಲುವ ಜರೂರತ್ತು ಇತ್ತೇ ? ಪಾರ್ವತಿಯಾಂದಿಗೇ ಸತ್ತಿರುವ ಹುಡುಗಿಯ ಹೆಸರು ಹಾಜೀಮಾ. ಆಕೆ ಸಿಂಧನೂರಿನವಳು. ಗುಂಡೇಟು ತಿಂದು ಆಸ್ಪತ್ರೆ ಸೇರಿರುವ ಮೂರನೆಯ ಹುಡುಗಿ ಕೂಡ ಕರ್ನಾಟಕದವಳೇ.

ರಾತ್ರಿ ಕಾರ್ಕಳದ ಬಳಿಯ ‘ಈದು’ ಗ್ರಾಮದ ಬೊಳ್ಳುಟ್ಟು ಕೈದರೆಯ ರಾಮಪ್ಪ ಪೂಜಾರಿ ಎಂಬುವವರ ಮನೆಯಲ್ಲಿ ನಕ್ಸಲೀಯ ದಳದ ಐವರು ಹುಡುಗ ಹುಡುಗಿಯರು ಮಲಗಿದ್ದುದು ಹೌದು. ಹಿಂದಿನ ದಿನವೇ ಬಂದು ಕುದುರೇಮುಖ ಕಾಡಿನ ಕುರಿತಾದ ತಮ್ಮ ಹೋರಾಟವನ್ನು ಆ ಮನೆಯವರಿಗೆ ವಿವರಿಸಿ, ಅವರ ಬೆಂಬಲ ಕೇಳಿ, ಅವರ ಮನೆಯಲ್ಲೇ ವಿನಂತಿಸಿ ಊಟ ಮಾಡಿ ಮಲಗಿದ್ದ ಗುಂಪು ಅದು. ಒಂದು ಹೊತ್ತಿನಲ್ಲಿ ಪಾರ್ವತಿ ಮನೆ ಕಾಯುವ ‘ಸೆಂಟ್ರಿ ಡ್ಯೂಟಿ’ ಮಾಡುತ್ತಿದ್ದಳು. ಹಾಗೆ ಉಳಿದವರು ಮಲಗಿರುವಾಗ ಒಬ್ಬರಾದ ಮೇಲೊಬ್ಬರು ಸರದಿಯಂತೆ ಪಹರೆಗೆ ನಿಲ್ಲುವುದು ನಕ್ಸಲ್‌ ದಳಗಳಲ್ಲಿ ಕಡ್ಡಾಯ. ಮೊಟ್ಟಮೊದಲು ಗುಂಡು ಬಿದ್ದಿದ್ದೂ ಅವಳಿಗೇ. ಆನಂತರ ಇತರರು ಓಡಿಹೋಗಲು ಯತ್ನಿಸಿದರು. ‘ಅವರು ಹಾಗೆ ತಪ್ಪಿಸಿಕೊಳ್ಳುವಾಗ ವಾಪಸು ನಮ್ಮ ಮೇಲೆ ಗುಂಡು ಹಾರಿಸಿದ್ದುದರಿಂದ ನಾವು ಮೂವರಿಗೆ ಗುಂಡಿಕ್ಕಿದೆವು. ಅದರಲ್ಲಿ ಇಬ್ಬರು ಹುಡುಗಿಯರು ಸತ್ತು , ಒಬ್ಬಳು ಬದುಕುಳಿದಿದ್ದಾಳೆ’ ಎಂಬುದು ಮುರುಗನ್‌ ಎಂಬ ಎಸ್ಪಿ ಹೇಳುತ್ತಿರುವ ಹರಿಕಥೆ.

ನಡೆದದ್ದೇನೆಂದರೆ, ಆ ರಾತ್ರಿಯ ಮಟ್ಟಿಗೆ ನೇತ್ರಾವತಿ ಸ್ಕ್ವಾಡ್‌ ಅಂತ ಕರೆಯಲ್ಪಡುತ್ತಿದ್ದ ಐವರು (ಅಥವಾ ಎಂಟು ಜನ) ಸದಸ್ಯರಿದ್ದ ಆ ದಳ ಈದು ಗ್ರಾಮದ ರಾಮಪ್ಪ ಪೂಜಾರಿಯ ಮನೆಯಲ್ಲಿ ತಂಗುತ್ತದೆ ಎಂಬ ಖಚಿತವಾದ ಟಿಪ್‌ ಉಡುಪಿಯ ಎಸ್ಪಿ ಮುರುಗನ್‌ಗೆ ಸಿಕ್ಕಿತ್ತು . ಅವರು ತಮ್ಮೊಂದಿಗೆ ಅಶೋಕನ್‌ರನ್ನು ಕರೆದುಕೊಂಡು ಮಧ್ಯರಾತ್ರಿಯ ಹೊತ್ತಿಗೆ ಮಾರುತಿ ವ್ಯಾನ್‌ ಮತ್ತು ಜೀಪುಗಳಲ್ಲಿ ‘ಈದು’ ಗ್ರಾಮ ತಲುಪಿಕೊಂಡಿದ್ದಾರೆ. ಕೊಂಚ ಮಾತ್ರದ ಮಾನವೀಯತೆ, ಸಹನೆ ತೋರಿಸಿದ್ದಿದ್ದರೆ ಮುರುಗನ್‌ ಆ ಐದೂ ಜನರನ್ನು ಬಂಧಿಸಬಹುದಿತ್ತು . ಆದರೆ ಅಧಿಕಾರಿ ನಿರ್ದಯಿ. ಮುರುಗನ್‌ ಆಗಲೀ, ಅಶೋಕನ್‌ ಆಗಲೀ ಭ್ರಷ್ಟರಲ್ಲ . ಮಾನವೀಯ ನಿಲುವು ಉಳ್ಳವರೂ ಅಲ್ಲ . ರಾಮಪ್ಪ ಪೂಜಾರಿಯ ಮಗನೊಬ್ಬ ಕೊಟ್ಟ ಟಿಪ್‌ ಹಿಡಿದು ಬಂದವರು ಏಕಾಏಕಿ ಮನೆಯಾಳಕ್ಕೆ ನುಗ್ಗಿದ್ದಾರೆ. ಮುಂದಲ ಭಾಗದಲ್ಲೇ ಮಲಗಿದ್ದ ಪಾರ್ವತಿ, ಹಾಜೀಮಾ ಮತ್ತು ಯಶೋದಾ ಎಂಬ ಮೂವರು ಹುಡುಗಿಯರಿಗೂ ವಿಚಕ್ಷಣೆಯಿಲ್ಲದೆ ಗುಂಡಿಕ್ಕಿದ್ದಾರೆ. ಒಳಮನೆಯಲ್ಲಿದ್ದ ಹುಡುಗರಿಬ್ಬರೂ ಗುಂಡಿನ ಸದ್ದು ಕೇಳಿ ಪರಾರಿಯಾಗಿದ್ದಾರೆ. ನಡೆದಿರುವುದು ಇಷ್ಟು . ನಕ್ಸಲ್‌ ದಳದ ಹುಡುಗರಿಗೆ ಗುಂಡು ಹಾರಿಸುವ ಅವಕಾಶವೇ ಸಿಕ್ಕಿಲ್ಲ . ಅವರಲ್ಲಿದ್ದುದು ಒಂದು ತೀರ ಮಾಮೂಲಿಯಾದ ಕೋವಿ ಮತ್ತು ಎರಡು ನಾಡಬಂದೂಕುಗಳೇ ಹೊರತು, ಅವುಗಳಿಂದ ಒಂದೇ ಒಂದು ಗುಂಡು ಹಾರಿಲ್ಲ .

ನಿಸ್ಸಾಯಕ ಹಾಗೂ ನಿದ್ರೆಯಲ್ಲಿದ್ದ ಹುಡುಗಿಯರನ್ನು ಕೊಂದು ಹಾಕಿ ನಕ್ಸಲೀಯ ಹಾವಳಿಯನ್ನು ದಮನ ಮಾಡಿಬಿಟ್ಟಿದ್ದೇವೆ ಎಂದು ಮೀಸೆ ತೀಡಿಕೊಂಡು ಮಾತನಾಡುತ್ತಿರುವ ಮುರುಗನ್‌ ಮುಂತಾದವರು ಒಂದು ವಿಷಯವನ್ನು ಒಪ್ಪಿಕೊಳ್ಳಲೇಬೇಕಾಗಿದೆ. ಏನೆಂದರೆ, ಇದು ಅವರು ಮಾಡಿದ ಅವಸರದ, ಅನವಶ್ಯಕ ಮತ್ತು ಅಮಾನವೀಯ ಕಾರ್ಯಾಚರಣೆ. ಆಫ್‌ಕೋರ್ಸ್‌, ನಕ್ಸಲ್‌ ಸ್ಕ್ವಾಡ್‌ಗಳು ತೀವ್ರ ಹಿಂಸಾಚಾರಕ್ಕಿಳಿದಾಗ ಆಂಧ್ರ, ಮಧ್ಯಪ್ರದೇಶ, ಪಶ್ಚಿಮ ಬಂಗಾಲಗಳಲ್ಲಿ ಪೊಲೀಸರು ಅನಿವಾರ್ಯವೆಂಬಂತೆ ಈ ತೆರನಾದ ಎನ್‌ಕೌಂಟರ್‌ಗಿಳಿಯುತ್ತಾರೆ. ಆದರೆ ಈತನಕ ‘ನೇತ್ರಾವತಿ ದಳ’ವಾಗಲೀ, ಕುದುರೆಮುಖದ ಯಾವುದೇ ನಕ್ಸಲೀಯ ದಳವಾಗಲೀ ಒಂದೇ ಒಂದು ಹಿಂಸಾಚಾರಕ್ಕಿಳಿದಿಲ್ಲ . ಕೊಲ್ಲುವ, ದೋಚುವ ಮಾತು ಹಾಗಿರಲಿ ; ಅವರು ಎಲ್ಲೆಲ್ಲೂ ಹಿಂಸಾಚಾರಕ್ಕಿಳಿಯುವ ಲಕ್ಷಣಗಳೂ ಕಾಣಿಸಿರಲಿಲ್ಲ . ಅವರ ಸಂಘಟನೆ ಇನ್ನಾದರೂ ಭ್ರೂಣಾವಸ್ಥೆಯಲ್ಲಿತ್ತು . ತೀರ ಇತ್ತೀಚೆಗೆ ರಾಂಪುರ ಎಸ್ಟೇಟ್‌ನಲ್ಲಿ ಕಾವಲುಗಾರನೊಬ್ಬ ಈ ತಂಡದ ಮೇಲೆ (ಇವರನ್ನು ಡಕಾಯಿತರೆಂದು ತಿಳಿದು ಗಾಬರಿಗೊಂಡು) ಗುಂಡು ಹಾರಿಸಿದ್ದ. ಆಗಲೂ ಈ ಹುಡುಗ ಹುಡುಗಿಯರ ಕೈಗಳಲ್ಲಿ ಬಂದೂಕುಗಳಿದ್ದವು. ಆದರೆ ಒಂದೆ ಒಂದೂ ಗುಂಡು ಹಾರಿಸದ ಪಾರ್ವತಿ, ವಿಷ್ಣು ಮುಂತಾದವರು ಅದೇ ಕಾವಲುಗಾರನನ್ನು ಕೂಡಿಸಿ ತಾವು ಬಡವರ ಪರವಾಗಿ ಹೋರಾಡಲು ಬಂದ ಕ್ರಾಂತಿಕಾರಿಗಳು ಅಂತ ವಿವರಿಸಿ, ಅವನ ಗೆಳೆತನ ಸಂಪಾದಿಸಿ ಅಲ್ಲಿಂದ ಮುಂದಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಸ್ವತಃ ಕಾಮ್ರೇಡ್‌ ಪಾರ್ವತಿ ಒಂದು ಪತ್ರ ಬರೆದು ಅದರ ಝೆರಾಕ್ಸ್‌ ಪ್ರತಿಗಳನ್ನು ಎಲ್ಲ ಪತ್ರಿಕೆಗಳಿಗೂ ತಲುಪಿಸಿದ್ದಳು. ಸಂಘಟನೆ ಇಂಥ ಭ್ರೂಣಾವಸ್ಥೆಯಲ್ಲಿರುವಾಗ ಅದರ ಇಬ್ಬರು ಕಾರ್ಯಕರ್ತರನ್ನು ಒಂದೇ ಬಾರಿಗೆ ಆಹುತಿ ತೆಗೆದುಕೊಂಡಿರುವುದು ಮುರುಗನ್‌ ಮತ್ತು ಅಶೋಕನ್‌ರ ದುಡುಕು ಮತ್ತು ನಿರ್ದಯತೆಗಳಿಗೆ ಸಾಕ್ಷಿಯಷ್ಟೆ.

ಈ ಬಗ್ಗೆ ಮಾನವ ಹಕ್ಕುಗಳ ಆಯೋಗದ ಬಾಗಿಲು ತಟ್ಟಬೇಕು ಎಂಬ ಪ್ರಯತ್ನ ಒಂದೆಡೆ ಆರಂಭವಾಗಿದೆ. ಇನ್ನೊಂದೆಡೆ ನಕ್ಸಲ್‌ ಸಂಘಟನೆಯ ಇತರೆ ಮೂರು squadಗಳು ಅದೇ ಕುದುರೆಮುಖ ಕಾಡಿನ ವಿವಿಧೆಡೆಗಳಲ್ಲಿದ್ದು ಅವರೊಂದು ನಿರ್ಧಾರಕ್ಕೆ ಬರುತ್ತಿರುವಂತಿದೆ. ಎಸ್ಪಿ ಮುರುಗನ್‌ಗೆ tip ಕೊಟ್ಟು, ತನ್ನ ಮನೆಯಲ್ಲೇ ನಕ್ಸಲ್‌ ಹುಡುಗರನ್ನು ಮಲಗಿಸಿಕೊಂಡು, ಅವರ ಬರ್ಬರ ಹತ್ಯೆಗಳಿಗೆ ಕಾರಣನಾದ ರಾಮಪ್ಪ ಪೂಜಾರಿಯ ಮಗನ ಮೇಲೆ ಪ್ರತೀಕಾರವೆಸಗುವ ಆಲೋಚನೆ ಮಾಡುತ್ತಿರುವಂತಿದೆ.

ಇದು ಒತ್ತಟ್ಟಿಗಿರಲಿ: ನಕ್ಸಲ್‌ ಸಂಘಟನೆಯಾದ CPIML (PWG) ಗುಂಪಿನ ಯುವತಿ ಯುವಕರು ಕೂಡ ಕೊಂಚ ಅವಸರ ಪಟ್ಟು ಕುದುರೆಮುಖದ ಕಾಡಿನೊಳಕ್ಕೆ ಬಂದೂಕು ಹೊತ್ತೊಯ್ದರಾ ಎಂಬ ಬಗ್ಗೆ ಜಿಜ್ಞಾಸೆ ನಡೆಯತೊಡಗಿದೆ. ಸಾಮಾನ್ಯವಾಗಿ ಕಾಡ ನಡುವಿನ ಗಿರಿಜನರನ್ನು ಸಂಘಟಿಸುವಾಗ, ಮೊದಲು ಬರಿಗೈಲಿ ಹೋಗಬೇಕೆಂಬುದು ನಿಯಮ. ಆರಂಭದಲ್ಲಿ ಹಾಡು, ನಾಟಕ, ಭಾಷಣ, ಮನೆ ಮನೆಗೆ ತೆರಳುವಿಕೆ, ಒಂದು Mass movement ಕಟ್ಟುವ ಕೆಲಸ- ಇದೆಲ್ಲ ಆಗಬೇಕು. ಆ ಜನ ಸಮೂಹದ ಹೋರಾಟ ದೊಡ್ಡ ಸ್ಥಾಯಿಗೆ ಏರಿದಾಗ ಪೊಲೀಸರ ದಮನ ಕಾಂಡ ಆರಂಭವಾಗುತ್ತದೆ. ಅದನ್ನು ವ್ಯವಸ್ಥಿತವಾಗಿ ಪ್ರತಿಭಟಿಸಲಿಕ್ಕೆ ಆ ಹಂತದಲ್ಲಿ ಕಾಡಿನೊಳಕ್ಕೆ ಬಂದೂಕು- ಕಾಡತೂಸು ಒಯ್ಯುವ ಅವಶ್ಯಕತೆಯಿರುತ್ತದೆ. ಅಂಥದೊಂದು Mass movement ಕುದುರೆಮುಖದ ಕಾಡಿನಲ್ಲಿ ಬೆಳೆದಿರಲಿಲ್ಲ. ಜನರಲ್ಲಿ ಸಶಸ್ತ್ರ ಹೋರಾಟದ ಸ್ಪಷ್ಟ ಕಲ್ಪನೆಯೇ ಉಂಟಾಗಿರಲಿಲ್ಲ. ಕಾಡಮಧ್ಯೆ ಈ squad ಸದಸ್ಯರಿಗೆ ಊಟಕ್ಕೆ, ನಿದ್ರೆಗೆ ಸರಿಯಾದ shelterಗಳೂ ರಚಿತವಾಗಿರಲಿಲ್ಲ. ಅಲ್ಲಿನ ಗಿರಿಜನರು ಕೂಡ ಅವರನ್ನು ಅಚ್ಚರಿ, ಆತಂಕಗಳಿಂದಲೇ ನೋಡುತ್ತಿದ್ದರು. ಅಲ್ಲದೆ ಘಟ್ಟದ ಮೇಲೆ ಸಂಘಟನೆ ಮಾಡುವುದಕ್ಕೂ, ಈಗ ಎನ್‌ಕೌಂಟರ್‌ ನಡೆದಿರುವ ಘಟ್ಟದ ಕೆಳಗಿನ ಊರುಗಳಲ್ಲಿ ಸಂಘಟನೆ ಮಾಡುವುದಕ್ಕೂ ತುಂಬ ವ್ಯತ್ಯಾಸಗಳಿವೆ. ಇಲ್ಲಿನ ಜನತೆ ಹಾಗಿರಲಿ; ಪತ್ರಕರ್ತರಿಗೇನೇ ನಕ್ಸಲೀಯ ಹೋರಾಟಗಳ ಬಗ್ಗೆ ಸ್ಪಷ್ಟ ಪರಿಕಲ್ಪನೆ ಇರಲಿಲ್ಲ. ಅಂಥದರಲ್ಲಿ ವ್ಯವಸ್ಥಿತವಾದುದೊಂದು base ನಿರ್ಮಿಸಿಕೊಳ್ಳದೆ ಏಕಾಏಕಿ ಬಂದೂಕು ಒಯ್ದದ್ದು ತೀರ ಅವಸರವಾಯಿತೇನೋ?

ಈ ಹತ್ಯೆಗಳು ನಿಜಕ್ಕೂ ಒಂದು ಹೋರಾಟವನ್ನು ಆರಂಭವಾಗುವ ಮೊದಲೇ ಕೊಂದು ಹಾಕಿವೆ. ಇದ್ದ squadಗಳ ಪೈಕಿ ತುಂಬ ಚಟುವಟಿಕೆಯಿಂದಿದ್ದವಳೇ ಪಾರ್ವತಿ. ಆಕೆಯೇ ಗುಂಡಿಗೆ ಬಲಿಯಾಗಿದ್ದಾಳೆ. ಚಳವಳಿಯ ಮುಂದಿನ ದಿನಗಳಿನ್ನು ಕಷ್ಟಕರವೇ. ಈ ಮಧ್ಯೆ ಪಾರ್ವತಿಯ ಗಂಡ ಕಾಮ್ರೇಡ್‌ ರಮೇಶ್‌, ನ್ಯಾಯಾಲಯದ ಅನುಮತಿ ಪಡೆದು ತನ್ನ ಪತ್ನಿಯ ಅಂತ್ಯ ಸಂಸ್ಕಾರಕ್ಕೆ ಪೊಲೀಸರ ಕಾವಲಿನಲ್ಲಿ ಕೊಪ್ಪಕ್ಕೆ ಬರುತ್ತಿದ್ದಾನೆ.

ಆ ಬಡಪಾಯಿ, ಆದರ್ಶವಂತ ಯುವತಿಯರ ಚಿತ್ರಗಳು ಮಾತ್ರ ಕಣ್ಣಿಂದ ಮರೆಯಾಗುತ್ತಿಲ್ಲ.

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X