ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪ್ಪಿಯ ಲಗ್ನದಿಂದ ಹಿಡಿದು ಸದ್ದಾಮನು ಸಿಕ್ಕಿ ಬಿದ್ದ ತನಕ !

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಒಂದಷ್ಟು ವಿಷಯಗಳಿವೆ, ನಿಮ್ಮೊಂದಿಗೆ ಹಂಚಿಕೊಳ್ಳಲಿಕ್ಕೆ. ಅಲ್ಲೆಲ್ಲೋ ಇರಾಕ್‌ನಲ್ಲಿ ಸದ್ದಾಂ ಸಿಕ್ಕಿಬಿದ್ದಿದ್ದಾನೆ. ಇಲ್ಲಿ ಗಿರೀಶ್‌ ಕಾರ್ನಾಡರನ್ನು ದೇಶದ್ರೋಹಿ ಅನ್ನಲಾಗಿದೆ. ಅಧಿಕಾರಕ್ಕೋಸ್ಕರ ಯಾರಿಗೆ ಬೇಕಾದರೂ ಸರಹೊತ್ತಿನಲ್ಲಿ ದ್ರೋಹ ಮಾಡಲು ಸಿದ್ಧವಾಗಿ ಬಿಡುವ ಎಸ್ಸೆಂ. ಕೃಷ್ಣ ತಮ್ಮ ಸಂಪುಟದ ಕೆಲವೇ ಸಮರ್ಥ ಮಂತ್ರಿಗಳ ಪೈಕಿ ಒಬ್ಬರಾದ ಎಚ್‌.ಕೆ.ಪಾಟೀಲರಿಗೆ ಮಹಾದ್ರೋಹ ಮಾಡಿದ್ದಾರೆ. ಸದ್ದಿಲ್ಲದೆ ಬಂಗಾಳಕ್ಕೆ ಹೋಗಿ ಉಪೇಂದ್ರ ಮದುವೆಯಾಗಿದ್ದಾನೆ. ಇದೆಲ್ಲದರ ನಡುವೆ ಗಿರೀಶ್‌ ಮಟ್ಟೆಣ್ಣವರ್‌ಗೆ ನ್ಯಾಯಾಲಯದಲ್ಲಿ ಜಾಮೀನು ಸಿಕ್ಕಿದೆ. ಒಂದೊಂದು ಸಲ ಹೀಗೇ; ಎಲ್ಲ ಸಂಗತಿಗಲೂ ಒಟ್ಟಿಗೇ ಘಟಿಸಿಬಿಡುತ್ತವೆ. ಹ್ಯಾಪೆನಿಂಗ್‌ ಟೈಮ್‌ ಅಂದರೆ ಇದೇನೇನೋ?

ಮೊನ್ನೆ ನನ್ನ ಪುರಾತನ ಮಿತ್ರ, ಚಲನಚಿತ್ರ ಪತ್ರಕರ್ತ ಗಣೇಶ್‌ ಕಾಸರಗೋಡು ಬರೆದ ಪುಸ್ತಕ ‘ಚೆದುರಿದ ಚಿತ್ರಗಳು’ ಬಿಡುಗಡೆಯಾಯಿತು. ಒಂದೇ ವೇದಿಕೆಯ ಮೇಲೆ ಹಿರಿಯ ನಟ ಅಶ್ವಥ್‌, ಲೀಲಾವತಿ. ತೆಲುಗಿನ ಕಾಂಚನಾ, ಶನಿಮಹದೇವಪ್ಪ, ನರಸಿಂಹರಾಜು ಅವರ ಪತ್ನಿ, ದ್ವಾರಕೀಶ್‌, ಜಯಮಾಲಾ, ತಾರಾ, ಸುದೀಪ್‌, ರಮೇಶ್‌, ರಾಜೇಶ್‌ ರಾಮನಾಥ್‌, ನಂಜುಂಡಿ, ವಿನೋದ್‌ ರಾಜ್‌, ಉಪೇಂದ್ರ ಮುಂತಾದವರೆಲ್ಲ ಸೇರಿದ್ದರು. ಪತ್ರಿಕೋದ್ಯಮಿಗಳ ಪೈಕಿ ನನ್ನ ಗುರುಗಳಾದ ಜಯಶೀಲರಾಯರು, ವಿಜಯ ಸಂಕೇಶ್ವರ್‌, ವೆಂಕಟ ನಾರಾಯಣ, ಇಂದ್ರಜಿತ್‌ ಮುಂತಾದವರಿದ್ದರು. ತುಂಬ ದಿನಗಳ ನಂತರ ನಾನೂ ಲಹರಿಗೆ ಬಿದ್ದವನಂತೆ ಒಂದಷ್ಟು ಭಾಷಣ ಕುಟ್ಟಿದೆ.

Upendraಮಧ್ಯೆ ಸಿಗರೇಟು ನೆನಪಾಯಿತು; ಎದ್ದು ಹೋಗಿ ಎಚ್ಚೆನ್‌ ಕಲಾಕ್ಷೇತ್ರದ ವೇದಿಕೆ ಹಿಂದಿನ ಗ್ರೀನ್‌ ರೂಮಿನಲ್ಲಿ ಸಿಗರೇಟು ಸೇದೋಣವೆಂದುಕೊಂಡು ಕೂತೆ. ಉಪೇಂದ್ರನೂ ಅಲ್ಲಿಗೇ ಬಂದ. ಇದ್ದುದು ಒಂದೇ ಸಿಗರೇಟು. ಇಬ್ಬರೂ ಅರ್ಧರ್ಧ ಹಂಚಿಕೊಂಡು ಸೇದಿದೆವು. ಆ ಹೊತ್ತಿಗಾಗಲೇ ಅವನ ಮದುವೆಯ ಸುದ್ದಿ ಸಣ್ಣಗೆ ಹೊರಬಿದ್ದಿತ್ತು . ಆದರೆ ಕಳ್ಳ, ಬಾಯಿ ಬಿಡಲಿಲ್ಲ. ‘ನಿಮಗೆ ಹೇಳದೆ ಮದುವೆ ಆಗ್ತೀನಾ ಗುರುಗಳೇ?’ ಅಂದ. ನೀವು ಮನೆಗೇ ಬರಲಿಲ್ಲ ಎಂದ. ಆತನ ವರ್ತನೆಯಲ್ಲಿ, ಮಾತು-ನಡಿಗೆ ಎಲ್ಲದರಲ್ಲೂ ಒಂದು ಬದಲಾವಣೆ, ಒಂದು ಗಾಂಭೀರ್ಯ ಕಾಣಿಸಿತು. ಚೇಂಜ್‌ ಫಾರ್‌ ದಿ ಬೆಟರ್‌ ಅಂತಾರಲ್ಲ, ಅಂತಹುದು. ಹಾಗೆ ಸ್ವಲ್ಪ ಹೊತ್ತು ಕೂತಿದ್ದು ಅರ್ಧರ್ಧ ಸೇದಿ ಮುಗಿಸಿದ ಸಿಗರೇಟು ಹೊಸಕಿ ಹೊರಬಂದೆವು. ಎರಡು ದಿನ ಬಿಟ್ಟು ದಿನಪತ್ರಿಕೆಗಳನ್ನು ನೋಡಿದರೆ ಉತ್ತರ ಪ್ರದೇಶದ ಹುಡುಗಿ ಪ್ರಿಯಾಂಕಳನ್ನು ಇವನು ಪಶ್ಚಿಮ ಬಂಗಾಳಕ್ಕೆ ಹೋಗಿ ಮದುವೆಯಾಗಿ ಬಂದಿದ್ದಾನೆ! ಉಪೇಂದ್ರನಿಗೂ ಆ ಹುಡುಗಿಗೂ ಒಳ್ಳೆಯದಾಗಲಿ.

*

ಈಗೊಂದು ವರ್ಷ, ಒಂದೂವರೆ ವರ್ಷದ ಹಿಂದಿನ ಮಾತು. ಇಂಡಿ ಶಾಸಕ ರವಿಕಾಂತ ಪಾಟೀಲ ಒಂದಷ್ಟು ಜನ ಗೂಂಡಾಗಳನ್ನು ಕರೆತಂದು ಗಾಂಧೀನಗರದ ಕನಿಷ್ಕಾ ಹೊಟೇಲಿನಲ್ಲಿ ಕುಳಿತು ಅಪ್ಪರ್‌ ಕೃಷ್ಣಾ ಪ್ರಾಜೆಕ್ಟ್‌ನ ಕಾಂಟ್ರಾಕ್ಟರ್‌ಗಳನ್ನು ಸಭೆ ೕಸರಿ, ‘ನೀವು ಯಾರೂ ನನಗೆ ಗೊತ್ತಿಲ್ಲದೆ ಟೆಂಡರ್‌ ಹಾಕಕೂಡದು’ ಅಂತ ಹೆದರಿಸುತ್ತಿದ್ದ . ಕಾಲುವೆ ಕಾಂಟ್ರಾಕ್ಟರ್‌ಗಳ ಭಾಷೆಯಲ್ಲಿ ಅದನ್ನು ‘ರಿಂಗ್‌’ ಅನ್ನುತ್ತಾರೆ. ಇಂಥದೊಂದು ಗೂಂಡಾಗಿರಿ ಮತ್ತು ಅದರೊಂದಿಗೆ ಕೈ ಮಿಲಾಯಿಸಿದ ಅಧಿಕಾರಿಗಳ ಭ್ರಷ್ಟಾಚಾರ ಗಮನಕ್ಕೆ ಬರುತ್ತಿದ್ದಂತೆಯೇ ಕನಿಷ್ಕಾ ಹೊಟೇಲಿನ ಅಷ್ಟೂ ವಿದ್ಯಮಾನಗಳನ್ನು ‘ಹಾಯ್‌ ಬೆಂಗಳೂರ್‌!’ ವರದಿ ಮಾಡಿತು.

ಅದರ ಪರಿಣಾಮ ಅದೆಷ್ಟು ಬೇಗ ಮತ್ತು ಕರಾರುವಾಕ್ಕಾಗಿ ಆಯಿತೆಂದರೆ, ಇಡೀ ಕಾಂಟ್ರಾಕ್ಟೇ ರದ್ದಾಗಿ, ಇಂಟರ್‌ನೆಟ್‌ ಮೂಲಕ ಟೆಂಡರುಗಳನ್ನು ಸಲ್ಲಿಸಬಹುದು ಎಂಬ ಹೊಸ ಪದ್ಧತಿಯೇ ಜಾರಿಗೆ ಬಂದಿತು. ಏನಿಲ್ಲವೆಂದರೂ ಸರಿಸುಮಾರು ಇನ್ನೂರು ಕೋಟಿ ರುಪಾಯಿಗಳ ಭ್ರಷ್ಟಾಚಾರಕ್ಕೆ ತಡೆಬಿತ್ತು . ರವಿಕಾಂತ ಪಾಟೀಲನ ಗ್ಯಾಂಗು ಕನಿಷ್ಠ ಪಕ್ಷ ಏಳೆಂಟು ಕೋಟಿ ರುಪಾಯಿಗಳ ಆದಾಯ ಕಳೆದುಕೊಂಡಿತ್ತು . ಇದೆಲ್ಲ ಆದದ್ದು ಪತ್ರಿಕೆಯ ವರದಿಯಿಂದಲೇ ಆದರೂ, ಸರ್ಕಾರದ ಮಟ್ಟದಲ್ಲಿ ಇಂಥದೊಂದು ಗಟ್ಟಿಯಾದ ತೀರ್ಮಾನ ತೆಗೆದುಕೊಂಡು, ಟೆಂಡರು ಹಾಕುವ-ಘೋಷಿಸುವ ಪದ್ಧತಿಯನ್ನೇ ಬದಲಾಯಿಸಿದವರು ಸಚಿವ ಎಚ್‌.ಕೆ.ಪಾಟೀಲ್‌!

ಇವತ್ತು ಆ ಪ್ರಾಮಾಣಿಕತೆಯೇ ಅವರಿಗೆ ಮುಳುವಾಗಿದೆ. ಕನಿಷ್ಠ ಇನ್ನೂರು ಕೋಟಿ ರುಪಾಯಿಗಳ ಅವ್ಯವಹಾರವನ್ನು ತಡೆದ ‘ತಪ್ಪಿಗೆ’ ಎಸ್ಸೆಂ.ಕೃಷ್ಣ , ಅವರನ್ನು ಖಾತೆಯಿಂದ ವಂಚಿತರನ್ನಾಗಿ ಮಾಡಿದ್ದಾರೆ. ಈ ಬೃಹತ್‌ ಭ್ರಷ್ಟಾಚಾರದ ಹಿಂದಿರುವ ಕಾಂಟ್ರಾಕ್ಟ್‌ದಾರನ ಹೆಸರು ಉಪ್ಪಾರ್‌ ಅಂತ. ಜೊತೆಗೆ ಆಂಧ್ರದ ರೆಡ್ಡಿಗಳೂ ಸೇರಿಕೊಂಡಿದ್ದಾರೆ. ಎಚ್ಕೆ ಪಾಟೀಲರು ಆ ಕುರ್ಚಿಯಲ್ಲಿರುವ ತನಕ ಯು.ಕೆ.ಪಿ. ಕೆಲಸದಲ್ಲಿ ನೂರಾರು ಕೋಟಿ ತಿನ್ನಲು ಸಾಧ್ಯವಿಲ್ಲ . ಪಾಟೀಲರನ್ನು ಪಕ್ಕಕ್ಕೆ ಸರಿಸಿದ ಮುಖ್ಯಮಂತ್ರಿಗಳು ಆ ಜಾಗಕ್ಕೆ ಶಿವಣ್ಣ ಎಂಬ ವದರ ಸನ್ನಿಯ ಮನುಷ್ಯನೊಬ್ಬನನ್ನು ತಂದು ಕೂರಿಸಿದ್ದಾರೆ. ಇನ್ನು ಬೊಕ್ಕಸ ಮಣ್ಣು ತಿಂದಂತೆಯೇ! ಇದ್ದುದರಲ್ಲೇ ಸಂಭಾವಿತರು ಅನ್ನಿಸಿಕೊಂಡಿದ್ದ ಎಚ್ಕೆ ಪಾಟೀಲ್‌ ಈಗ ಮೂಲೆಗುಂಪು. ಕೃಷ್ಣನ ಹೆಸರಿಟ್ಟುಕೊಂಡವರೇ ಭಸ್ಮಾಸುರರಾಗಿಬಿಟ್ಟರೆ ಇನ್ನೇನಾದೀತು?

*

ಜ್ಞಾನಪೀಠ ಪ್ರಶಸ್ತಿ ಬಂದಿತ್ತು ಅನ್ನೋ ಕಾರಣಕ್ಕೆ ಗಿರೀಶ್‌ ಕಾರ್ನಾಡರ ಕೈಗೆ ಸೌಹಾರ್ದ ಚಳವಳಿಯ ನಾಯಕತ್ವ ಕೊಟ್ಟು ಇತರೆ ಬುದ್ಧಿಜೀವಿಗಳು ಫಜೀತಿಯೆದ್ದು ಹೋಗಿದ್ದಾರೆ. ಹಾಸನದಲ್ಲಿ ಇನ್ನೇನು ಘೋಷಣೆ ಕೂಗಿ ಪೊಲೀಸರ ಕೈಯಲ್ಲಿ ಅರೆಸ್ಟ್‌ ಆಗಬೇಕು ಅನ್ನುವಂಥ ಐನ್‌ ಟೈಮಿನಲ್ಲಿ ಕಾರ್ನಾಡರು ಸಡನ್ನಾಗಿ ಬೆಂಗಳೂರಿಗೆ ಅಭಿಮುಖವಾಗಿ ನಿಂತು ‘ನಾನು ಅರೆಸ್ಟ್‌ ಆಗಲಿಕ್ಕೆ ವಲ್ಲೆ . ಮುಖ್ಯಮಂತ್ರಿ ಕೃಷ್ಣ ಅವರ ಕೂಡೆ ಭಾಳ ಸಲ ಮಾತಾಡೇನಿ. ಅವರಿಗೆ ಈ ವಿಷಯದಾಗ ನಾನು ಎಂಬರ್ಯಾಸ್‌ ಮಾಡಬಾರ್ದು’ ಅಂದವರೇ ಚಳವಳಿಯನ್ನು ಜೀಕೆ ಗೋವಿಂದರಾಯರ ಮಡಿಲಿಗೆ ಹಾಕಿ ವಾಪಸು ಬಂದುಬಿಟ್ಟಿದ್ದಾರೆ. ಬಾಬಾ ಬುಡನ್‌ಗಿರಿಯ ತನಕ ಕರೆದೊಯ್ದು ಜ್ಞಾನಪೀಠಿಯಿಂದ ಭಾಷಣ ಮಾಡಿಸಿ, ಭಜರಂಗದಳದವರಿಗೆ ಮುಖ ಮುರಿಯುವಂತೆ ಜವಾಬು ಕೊಡಬೇಕೆಂದಿದ್ದ ಬುದ್ಧಿಜೀವಿಗಳಿಗೆ ಕಾರ್ನಾಡರ ಈ ‘ಹಿಮ್ಮುರಕಿ’ಯನ್ನು ಹೇಗೆ ಎಕ್ಸ್‌ಪೋಸ್‌ ಮಾಡಬೇಕೋ ತಿಳಿಯದಂತಾಗಿತ್ತು. ಕಡೆಕಡೆಗೆ ಕಾರ್ನಾಡರು ಎಲ್ಲಿಯತನಕ ಮಾತು, ಧಾಟಿ ಬದಲಿಸಿದರೆಂದರೆ ‘ಹೇ... ನಾನು ಹಿಂದುತ್ವದ ವಿರೋಧಿ ಅಲ್ಲೇ ಅಲ್ಲ !’ ಎಂದುಬಿಟ್ಟರು.

ಒಂದು ಪ್ರಜಾ ಚಳವಳಿಯನ್ನ ಕಾರ್ನಾಡರಂತಹ ಈಜಿಛೇರ್‌ ‘ಕ್ರಾಂತಿಕಾರಿ’ಗಳ ಕೈಗೆ ಕೊಟ್ಟರೆ ಏನಾದೀತು ಅನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕಾಗಿಲ್ಲ . ಗಿರೀಶ್‌ ಕಾರ್ನಾಡರಿಗೆ ಈ ನಾಡಿನ ನಿಜವಾದ ಜಗಳಗಂಟ ಬುದ್ಧಿಜೀವಿಗಳಾದ ಶಿವರಾಮ ಕಾರಂತ್‌, ಲಂಕೇಶ್‌ ಮುಂತಾದವರಿಗಿದ್ದ ಹಟಮಾರಿತನವೂ ಇಲ್ಲ ; ಒಬ್ಬ mass leader ಗೆ ಇರಬೇಕಾದಂತಹ ನೇರವಂತಿಕೆಯೂ ಇಲ್ಲ . ಇವರನ್ನು ನಂಬಿಕೊಂಡು ಚಳವಳಿಯ ನಾಯಕತ್ವವನ್ನು ಕೊಟ್ಟವರು, ಕಡೇ ಪಕ್ಷ ಮುಂದಿನ ಹಂತದ ಚಳವಳಿಗಳಿಂದಾದರೂ ಕಾರ್ನಾಡರಂಥವರನ್ನು ದೂರವಿಡುವುದು ಅವಶ್ಯಕ.

ಆ ಕಡೆಯ ಇನ್ನೊಂದು ಅತಿರೇಕವೆಂದರೆ, ‘ಕಾರ್ನಾಡರಿಗೆ ಕೊಟ್ಟ ಜ್ಞಾನಪೀಠ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ವಾಪಸು ತಗೋಬೇಕು’ ಎಂಬಂತಹ ಮಹಾನ್‌ ಅವಿವೇಕದ ಮಾತನ್ನು ಶಂಕರಮೂರ್ತಿಯಂಥವರು ಆಡಿರುವುದು. ಅಸಲಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಕೊಡುವುದು ಕೇಂದ್ರಸರ್ಕಾರವಲ್ಲ ಎಂಬುದು ಕೂಡ ಗೊತ್ತಿಲ್ಲದ ಮೂರ್ಖನೊಬ್ಬ ಶಾಸಕನಾದರೆ ಆ ನಾಡು ಮತ್ತು ಆತನ ಪಕ್ಷದ ಹಣೇಬರಹ ಎಂಥದ್ದಿರಬಹುದು? ಬಿಜೆಪಿಯವರ ಹರೆಳೆಣ್ಣೆ ಮುಖಗಳನ್ನು ನೋಡಿದರೆ ಅದು ಸ್ಪಷ್ಟವಾಗುತ್ತದೆ. ಕಾರ್ನಾಡರನ್ನು ದೇಶದ್ರೋಹಿ ಅಂದುಬಿಡೋದು, ಅವರನ್ನು ಗಡೀಪಾರು ಮಾಡಿ, ಕೊಂದೇ ಹಾಕಿ- ಮುಂತಾದ ಧಾಟಿಯಲ್ಲಿ ಮಾತನಾಡುವುದಿದೆಯಲ್ಲ? ಇದು ಶುದ್ಧ ಮುತಾಲಿಕ್‌ ರೋಗ. ಮುತಾಲಿಕನಿಗಾದರೂ ಇದು ಬಂದಿರೋದು, ತೊಗಾಡಿಯಾ ಸೋಂಕಿನಿಂದ. ಸಾರ್ವಜನಿಕ ಭಾಷಣ ಮಾಡುವಾಗ ಯಾರೋ ಒಂದಷ್ಟು ಜನ ತಲೆಮಾಸಿದವರು ಚಪ್ಪಾಳೆ ಹೊಡೆದು ಸಿಳ್ಳೆ ಹಾಕುತ್ತಾರೆ ಅನ್ನೋ ಕಾರಣಕ್ಕೆ ಬಾಯಿಗೆ ಸಿಕ್ಕಿದ್ದನ್ನೇ ಮಾತಾಡುವ ಈ ‘ತೊಗಾಡಿಯಾ-ಮುತಾಲಿಕ್‌ ಸಿಂಡ್ರೋಮ್‌’ ಎಂಬ ಖಾಯಿಲೆ ಇದೆಯಲ್ಲ ? ಇದನ್ನು ಮೊದಲು ಜನತೆ ವಿರೋಧಿಸಬೇಕು. ಶಂಕರಮೂರ್ತಿ ಮತ್ತು ರಾಮಚಂದ್ರೇಗೌಡರಂಥ ಪ್ರಜ್ಞಾವಂತರು ಕೂಡ ಈ ಧಾಟಿಯಲ್ಲಿ ಮಾತನಾಡತೊಗಿದರೆ, ವಿರೋಧ ಪಕ್ಷಕ್ಕಿರುವ ಗೌರವ ಕೂಡ ಹಳ್ಳ ಹಿಡಿದು ಹೋಗುತ್ತದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ಮೈಕಿನ ಮುಂದೆ ನಿಂತು ಅಧಿಕಾರದಲ್ಲಿರುವವರನ್ನು ‘ಅಮ್ಮ ಅಕ್ಕ’ ಅಂತ ಬೈದರೂ ಚಪ್ಪಾಳೆ ಹೊಡೆಯುವ ‘ಅಮ್ಮ ಅಕ್ಕ’ ಮಟ್ಟದ ಮಂದಿ ಇದ್ದೇ ಇರುತ್ತಾರೆ. ತೊಗಾಡಿಯಾ ಮತ್ತು ಮುತಾಲಿಕ್‌ ಮುಸ್ಲಿಮರ ವಿರುದ್ಧ ಮಾತನಾಡುವಾಗ ಅವರಿಗೆ ಚಪ್ಪಾಳೆ ಹೊಡೆಯುವವರೂ ಅದೇ ಜಾಡಿನ ಮಂದಿ.

ಇತ್ತೀಚಿನ ದಿನಗಳಲ್ಲಿ ಏನಾಗುತ್ತಿದೆ ಅಂದರೆ, ಭಜರಂಗಿಗಳಲ್ಲದ ಕೆಲವು ಹಿಂದೂಗಳೇ ತೊಗಾಡಿಯಾ ಮತ್ತು ಮುತಾಲಿಕ್‌ ಭಾಷಣಗಳನ್ನು ಕೆಸೆಟ್‌ ಮಾಡಿ ‘ಪತ್ರಿಕೆ’ಗೆ ಕಳಿಸಿಕೊಡುತ್ತಿದ್ದಾರೆ. ನಿಜಕ್ಕೂ ಅಸಹ್ಯ ಮತ್ತು ತಿರಸ್ಕಾರ ಹುಟ್ಟಿಸುವಂತಹ ಭಾಷಣಗಳವು. ವಿಚಿತ್ರವೆಂದರೆ, ಮಲೇಬೆನ್ನೂರಿನಲ್ಲಿ ಮಾಡಿದ ಭಾಷಣವನ್ನೇ ಮುತಾಲಿಕ್‌ ಚಿಕ್ಕಮಗಳೂರಿನಲ್ಲೂ ಮಾಡುತ್ತಾನೆ. ತೊಗಾಡಿಯಾನ ಇನ್ನೊಂದು ಭಾಷಣ ಕೇಳಬೇಕಾಗಿಲ್ಲ : ಅದು ಮೊದಲ ಭಾಷಣದ ತದ್ರೂಪೇ ಆಗಿರುತ್ತದೆ. ಬೌದ್ಧಿಕವಾಗಿ ಈ ಭಜರಂಗದ ಜನ ಎಷ್ಟು ದಿವಾಳಿಯೆದ್ದು ಹೋಗಿದ್ದಾರೆ ಎಂಬುದಕ್ಕೆ ಬೇರೆ ಉದಾಹರಣೆ ಬೇಕಿಲ್ಲ . ಅಷ್ಟಿಷ್ಟು ಹಿಂದುತ್ವ ಅಂತ ಮಾತನಾಡುವವರು ಕೂಡ ಈ ವಾಚಾಮಗೋಚರಿ ಭಾಷಣಕೋರರ ಬಗ್ಗೆ ಬೇಸತ್ತುಕೊಂಡಿದ್ದಾರೆ.

ಇವರನ್ನು ನಾಡು ದೂರವಿಡಲಿ.

ಸದ್ದಾಮ್‌ ಹುಸೇನ್‌ ಸಿಕ್ಕಿಬಿದ್ದದ್ದಕ್ಕಿಂತ ಆತ ಸಿಕ್ಕಿಬಿದ್ದ ರೀತಿ ದೊಡ್ಡ ಸುದ್ದಿಯಾಗಿದೆ. ಆ ಅಕರಾಳ ಗಡ್ಡ, ಬಾಡಿದ ಮುಖ, ಅವೇ ಹಟಮಾರಿ ಮಾತುಗಳು, ಬಿಲದಿಂದ ಶರಣಾಗಿ ಹೊರಬಂದ ರೀತಿ- ಎಲ್ಲವೂ ಮನುಷ್ಯ ಸಂಕುಲಕ್ಕೆ ಅನಿರೀಕ್ಷಿತ ಅಚ್ಚರಿಗಳೇ. ಈ ಘಟನೆಗಳೇ ಮುಂದೆ ಐತಿಹಾಸಿಕ ಅಚ್ಚರಿಗಳಾಗಿ ದಾಖಲಾಗುತ್ತವೆ. ಹಿಟ್ಲರ್‌, ಹಿಮ್ಲರ್‌, ಈದಿ ಅಮೀನ್‌ ಮುಂತಾದವರೆಲ್ಲರೂ ಇದೇ ಸ್ಥಿತಿಗೆ ಬಂದವರೇ.

ಆದರೆ ಬುಷ್‌ ಮುಖದಲ್ಲಿ ಕಾಣುತ್ತಿರುವ ಮಂದಹಾಸವಿದೆಯಲ್ಲ ? ಇರಾಕ್‌ನ ಒಳ ಕಸುವು ಬಲ್ಲವರಿಗೆ, ಅದು ಬಹುಕಾಲ ಬಾಳುವಂತಹ ಮಂದಹಾಸವಲ್ಲ ಅಂತ ಗೊತ್ತು .

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X