• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೆಣ್ಣು ಸಿಕ್ಕರೆ ಸಾಕು, ಅವಳು ನಕ್ಕರೆ ಸಾಕು ಎಂಬ ವಯಸು

By Staff
|
Ravi Belagere on Thatskannada.com ರವಿ ಬೆಳಗೆರೆ
‘ಅವನೊಬ್ಬ ಗೂಬೆ ನನ್ಮಗ. ಒಂಟಿಯಾಗಿ ಇರಕ್ಕಾಗಲ್ಲ ಇರಕ್ಕಾಗಲ್ಲ ಅಂತ ತನ್ನೊಳಗೆ ತಾನೇ ಅಂದ್ಕೊಂಡು, ಈ ಹುಡ್ಗೀನ ಮದುವೆಯಾಗಿಬಿಟ್ಟ. ಅವನಿಗೆ ಇನ್ನೂ ಒಳ್ಳೆ ಹುಡುಗಿ ಸಿಗಬಹುದಿತ್ತು.’ ಅಂತ ಗೆಳೆಯರು ಮಾತಾಡುವುದನ್ನು ಕೇಳಿದ್ದೀರಾ ?

‘ನೀನೇನೇ ಹೇಳು, ಇವಳೇ ಅವಸರ ಮಾಡ್ಕೊಂಡ್ಲು. ಇಲ್ದೆ ಇದ್ರೆ ಇವಳಿಗೆ ಇನ್ನೂ ಒಳ್ಳೆ ಹುಡುಗ ಸಿಗ್ತಿದ್ದ. ’ ಅನ್ನೋ ಮಾತನ್ನೂ ಅಲ್ಲಲ್ಲಿ ಕೇಳಿರುತ್ತೀರಿ. ಎರಡರ ಹಿಂದೆಯೂ ಇರುವುದು ಒಬ್ಬೇ ವಿಲನ್‌. ಅದರ ಹೆಸರು ಅವಸರ. ಯೌವನದ ಇನ್ನೊಂದು ಹೆಸರೇ ಅವಸರ. ಮನಸ್ಸಿಗೆ ಬಂದದ್ದು ಈ ಕ್ಷಣದಲ್ಲಿ ಆಗಿಬಿಡಬೇಕು. ಕೈ ಚಾಚಿದ್ದು ಸಿಕ್ಕು ಬಿಡಬೇಕು. ಅಂದುಕೊಂಡದ್ದು ದಕ್ಕಿಬಿಡಬೇಕು. ಆಫ್‌ ಕೋರ್ಸ್‌, ಅದು ಅಂದುಕೊಂಡದ್ದನ್ನೆಲ್ಲಾ ದಕ್ಕಿಸಿಕೊಳ್ಳುವಂಥ ತಾಕತ್ತಿರುವ ವಯಸ್ಸು ಅನ್ನುವುದೂ ನಿಜವೇ. ಆದರೆ ‘ಅಂದುಕೊಳ್ಳುತ್ತಿರುವುದರಲ್ಲೇ’ ಯಡವಟ್ಟಾಗಿ ಹೋದರೆ ಮಾತ್ರ ಬದುಕು ದಿಕ್ಕು ತಪ್ಪಿಬಿಡುತ್ತದೆ.

ನೀವು ಪ್ರೇಮ ವಿವಾಹವಾದ ಒಂದಷ್ಟು ಜೋಡಿಗಳನ್ನು ಎದುರಿಗಿಟ್ಟುಕೊಂಡು ಪರೀಕ್ಷಿಸುತ್ತಾ, ವಿಶ್ಲೇಷಿಸುತ್ತಾ ಹೋಗಿ. ‘ಹೇಳಿ ಮಾಡಿಸಿದ ಹಾಗಿದ್ದಾರೆ’ ಅನ್ನಬಹುದಾದ ದಾಂಪತ್ಯಗಳು ನಿಜಕ್ಕೂ ಅಪರೂಪವೇ. ರೂಪ ಕುರೂಪಗಳ ಬಗ್ಗೆ ನಾನು ಮಾತನಾಡುತ್ತಿಲ್ಲ. ಅರೇಂಜ್ಡ್‌ ಮದುವೆಗಳಲ್ಲಾದರೆ ರೂಪ- ಕುರೂಪ ಕೂಡ ಅರೇಂಜ್ಡ್‌ ಆಗಿರುತ್ತವೆ. ಹುಡುಗ ಸ್ಫುರದ್ರೂಪಿ. ಅವನು ಅನುರೂಪವತಿಯನ್ನೇ ಹುಡುಕುತ್ತಾನೆ. ಲಕ್ಷಣವಂತ ಹುಡುಗಿ, ಕೊಂಚ ಕಪ್ಪಗಿನ ಹುಡುಗನಾದರೆ ‘ಒಲ್ಲೆ’ ಅಂದುಬಿಡುತ್ತಾಳೆ. ಅರೇಂಜ್ಡ್‌ ಮದುವೆಗಳಲ್ಲಿ ಅಂಥದೊಂದು ಆಯ್ಕೆಗೆ ಅವಕಾಶವಿರುತ್ತದೆ. ಆದರೆ ಯಾವುದೇ ಛಾನ್ಸು ಕೊಡದೇ ಪಿಗ್ಗಿ ಬೀಳಿಸುವುದು- ಎರಡೂವರೆ ಅಕ್ಷರದ ಪ್ರೇಮ ! ಅದು ಯಾಕೆ ಹುಟ್ಟುತ್ತದೋ , ಎಂಥ ಹೊತ್ತಿನಲ್ಲಿ, ಇಂಥವರ ಮೇಲೆಯೇ, ಇಷ್ಟೇ ತೀವ್ರತೆಯಾಂದಿಗೆ ಯಾಕೆ ಹುಟ್ಟುತ್ತದೋ - ಭಗವಂತನೇ ಬಲ್ಲ. ಏನನ್ನೂ ಅರೇಂಜ್‌ ಮಾಡಲಿಕ್ಕಾಗದೇ ಸಂಭವಿಸಿ ಹೋಗುವ ಮಧುರ ಅನಾಹುತವದು- ಪ್ರೇಮ.

ಒಂದು ಹಂತದಲ್ಲಿ ಅವನಿಗೇ ಅನ್ನಿಸೋಕೆ ಶುರುವಾಗುತ್ತದೆ. ಇವಳು ಹೀಗಿರಬಾರದಿತ್ತು. ಇವಳು ಬದಲಾಗುವವಳಲ್ಲ. ಹೇಳಿದರೆ ತಿದ್ದಿಕೊಳ್ಳುವವಳಲ್ಲ. ಹೇಳದೆಯೇ ಅರ್ಥ ಮಾಡಿಕೊಳ್ಳುವ ಸೂಕ್ಷ್ಮಮತಿಯಲ್ಲ. ನನ್ನ ಇಂಟಲೆಕ್ಚುಯಲ್‌ ಕೆಪ್ಯಾಸಿಟಿಗಳಿಗೆ ಇವಳು ಸಾಟಿಯಲ್ಲ. ಹೀಗೊಂದು ‘ಅಲ್ಲ, ಅಲ್ಲ, ಅಲ್ಲ’ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಆದರೆ ಅವನು ನಿಸ್ಸಾಹಯಕ. ಅವಳನ್ನು ಪ್ರೀತಿಸಿಬಿಟ್ಟಾಗಿದೆ. ದೂರವಾಗುವಂತಿಲ್ಲ. ಡಂಪ್‌ ಮಾಡಿದರೆ ತನಗೇ ನೋವಾಗುತ್ತದೆ. ತಾನೂ ಅವಳನ್ನು ಬಿಟ್ಟಿರಲಾರ. ಅವಳು ತಾನಂದುಕೊಂಡಷ್ಟು ಬುದ್ಧಿವಂತೆಯಲ್ಲ. ಅಂದುಕೊಂಡಷ್ಟು ಕ್ರಿಯೇಟಿವ್‌ ಅಲ್ಲ. ಅಂದುಕೊಂಡಷ್ಟು ಪ್ರಾಮಾಣಿಕಳೂ ಅಲ್ಲ. ಹಾಗಂತ ಗೊತ್ತಾದ ಮೇಲೆ ಅವನು ಅವಳ ಕೈ ಬಿಟ್ಟು ದೂರವಾಗಲಾರ. ದೂರವಾಗಬೇಕು ಅಂತ ಅಂದುಕೊಂಡರೂ ಅವನು ನಿಸ್ಸಹಾಯಕ. ಇಂಥ ಪ್ರಕರಣದಲ್ಲಿ ಅವನು ಮಾಡಿದ ಮೊದಲ ತಪ್ಪೇನು ಅಂತ ಹುಡುಕಿ ನೋಡಿ ?

ಅದು ಅವಸರ.

ವಿನಾ ಕಾರಣ ಅವಸರಕ್ಕೆ ಬಿದ್ದು ಅವಳೆಡೆಗಿನ ಪ್ರೀತಿಯನ್ನು ವ್ಯಕ್ತಪಡಿಸಿಬಿಟ್ಟ. ‘ಐ ಲವ್‌ ಯೂ’ ಅಂತ ಪತ್ರ ಬರೆದು ಕೊಟ್ಟಾಗ ಆ ಕ್ಷಣದಲ್ಲಿ ಅವಳು ಒಪ್ಪಿಕೊಂಡರೆ ಅದೇ ಸೌಭಾಗ್ಯ ಎಂಬುವಂತಿತ್ತು ಇವನ ಮನಸ್ಥಿತಿ. ಅವಳು ಪೆದ್ದಿ, ತನ್ನ ಕಲ್ಚರ್‌ನವಳಲ್ಲ, ಚಿಂತನೆಯಲ್ಲಿ ಸಾಮ್ಯವಿಲ್ಲ, ರೂಪು ಕೂಡ not all that great - ಮುಂತಾದ ಅಂಶಗಳೆಲ್ಲ ಅವನಿಗೆ ದೊಡ್ಡ ಸಂಗತಿಗಳು ಅಂತ ಅನಿಸಲೇ ಇಲ್ಲ. ಅದು ಹೆಣ್ಣು ಸಿಕ್ಕರೆ ಸಾಕು, ಅವಳು ನಕ್ಕರೆ ಸಾಕು ಅಂತ ಹಂಬಲಿಸುವ ವಯಸ್ಸು.

ಸಾಮಾನ್ಯವಾಗಿ ಎಲ್ಲರೂ ಮಾಡುವ ತಪ್ಪನ್ನೇ ಅವನೂ ಮಾಡಿರುತ್ತಾನೆ. ನಾವೆಲ್ಲ ನಮ್ಮ ನಮ್ಮ ಪ್ರೀತಿಯನ್ನು ಎಲ್ಲಿ ಹುಡುಕುತ್ತೇವೆ ಅಂತ ಗಮನಿಸಿ. ನಮ್ಮ ಕ್ಲಾಸು, ನಮ್ಮ ಬೀದಿ, ನಮ್ಮ ಊರು, ನಮ್ಮ ಆಫೀಸು, ನಮ್ಮ ವಠಾರ, ನಾವು ಓಡಾಡುವ ಬಸ್ಸು ರೈಲು... ಇಲ್ಲೇ ತಾನೇ ಪ್ರೀತಿ ಪ್ರೇಮ ಘಟಿಸುವುದು. ನಮ್ಮ ಕ್ಲಾಸಿನಲ್ಲಿ the best ಅನ್ನುವಂತಿರುವವಳನ್ನು ಪ್ರೀತಿಸುತ್ತೇವೆ. ಅವಳು ಒಪ್ಪಿಕೊಂಡು ಬಿಟ್ಟರೆ, ಜಗತ್ತಿನಲ್ಲಿ the best ಹುಡುಗಿ ಸಿಕ್ಕಳು ಅಂತ ಸಂಭ್ರಮಿಸುತ್ತೇವೆ. ಕ್ಲಾಸಿನಿಂದಾಚೆಗೆ, ವಠಾರದಿಂದಾಚೆಗೆ ನಾವು ನೋಡುವುದೇ ಇಲ್ಲ. ಅಂಗಡಿಯಲ್ಲಿ ಸಿಕ್ಕ the best ಮಿಠಾಯಿ ಕೊಂಡ ಹೆಮ್ಮೆ ಅನುಭವಿಸುತ್ತೇವೆಯೇ ಹೊರತು ಅದು the best ಅಂಗಡಿಯಾ ಅಂತ ಯೋಚಿಸುವುದಿಲ್ಲ. ಹಾಗೆ ನಮ್ಮನ್ನು ಪಕ್ಕದಲ್ಲೇ ಇರುವ ಒಂದು ಮುತ್ತು ಎತ್ತಿ ಧರಿಸಿಕೊಳ್ಳುವಂತೆ ಮಾಡಿಬಿಡುವುದು ಮತ್ಯಾವುದೂ ಅಲ್ಲ. ಅದು ಅವಸರ.

ಅದು ಕಾಮಕ್ಕೆ ಸಂಬಂಧಪಟ್ಟ ಅವಸರವಾಗಿರಬೇಕೆಂದಿಲ್ಲ. ಪ್ರೇಮಕ್ಕೆ ಸಂಬಂಧಪಟ್ಟ ಅವಸರವೂ ಆಗಿರಬೇಕಿಲ್ಲ. ಹೆಚ್ಚಿನ ಸಲ ಅದು ‘ನಮ್ಮನ್ನು ಯಾರಾದರೂ ಪ್ರೀತಿಸಲಿ’ ಎಂದು ಚಡಪಡಿಸುವಂತಹ ಐಡೆಂಟಿಟಿ ಕ್ರೆೃಸಿಸ್‌ಗೆ ಸಂಬಂಧಿಸಿದ ಅವಸರವಾಗಿರುತ್ತದೆ. ಯಾರನ್ನಾದರೂ ಪ್ರೀತಿಸಿಬಿಡಬೇಕು ಎಂಬುದಕ್ಕಿಂತ ಯಾರಿಂದಲಾದರೂ ಪ್ರೀತಿಸಲ್ಪಡಬೇಕು ಎಂಬ ಕಾರಣಕ್ಕೇ ಜಗತ್ತಿನ ಅತಿ ಹೆಚ್ಚಿನ ಹುಡುಗಿಯರು ಲವ್‌ ಅಫೇರ್‌ಗಳಿಗೆ ಹಾತೊರೆಯುತ್ತಿರುತ್ತಾರೆ. ಅಂತಹ ಹಾತೊರೆಯುವಿಕೆಯಲ್ಲಿ ತಾವು ಆರಿಸಿಕೊಂಡವನ ನ್ಯೂನತೆ, ರೂಪು, ದುಡಿಯಲಾಗದತನ, ಅಪ್ರಾಮಾಣಿಕತೆ, ಅಸಭ್ಯತೆ- ಇವೆಲ್ಲವೂ ಕಣ್ಣಿಗೆ ಬೀಳದೆ ಕೇವಲ ಪ್ರೇಮವೊಂದೇ ಆವರಿಸಿಕೊಂಡಂತಾಗಿ ಅಂಥವರನ್ನು ಪಿಗ್ಗಿ ಬೀಳಿಸಿಬಿಟ್ಟಿರುತ್ತದೆ.

ಆದ್ದರಿಂದಲೇ, ಪ್ರೇಮ ವಿವಾಹಗಳಲ್ಲಿ ವಿಪರೀತವಾದ ಇಜ್ಜೋಡುಗಳು ಕಾಣಿಸಿಕೊಳ್ಳುತ್ತವೆ. ತುಂಬ ಓದಿಕೊಂಡ ಹುಡುಗನಿಗೊಬ್ಬ ಶತಪೆದ್ದಿ ಹೆಂಡತಿ, ಸ್ಫುರದ್ರೂಪಿ ಹುಡುಗಿಗೊಬ್ಬ ಅಷ್ಟವಂಕ ಗಂಡ, ಅಪ್ಪಟ ಪ್ರಾಮಾಣಿಕ ಹುಡುಗಿಗೆ ಪರಮ ಕಚ್ಚೆ ಹರುಕ ಪತಿ- ಹೀಗೆ ಸಿಕ್ಕುಬಿಟ್ಟಿರುತ್ತಾರೆ. ‘ಪ್ರೀತಿ ಅನ್ನೋದು ಹೇಳಿ ಕೇಳಿ ಹುಟ್ಟುತ್ತಾ ? ಜಾತಿ, ಧರ್ಮ, ಹಣ, ರೂಪು, ದೇಶ, ವಯಸ್ಸು- ಎಲ್ಲವನ್ನೂ ಮೀರಿದ್ದು ಕಣ್ರೀ ಪ್ರೀತಿ- ಅಂತ ನಾವು ದೊಡ್ಡ ದೊಡ್ಡ ಮಾತುಗಳನ್ನಾಡಿ ನಮ್ಮ ಅವಿವೇಕವನ್ನು ಸಮರ್ಥಿಸಿಕೊಳ್ಳಬಹುದು. ಆದರೆ ನಾವು ಪಟ್ಟ ಅವಸರ ನಮ್ಮದೇ ಕಣ್ಣಿಗೆ ಜೀವನದುದ್ದಕ್ಕೂ ರಾಚುತ್ತಿರುತ್ತದೆ. ಸರಿಪಡಿಸಿಕೊಳ್ಳುವುದು ಸಾಧ್ಯವಾಗದ ಮಾತು.’

ಹೀಗಾಗಿ, ಹುಡುಗರಿಗೆ- ಹುಡುಗಿಯರಿಗೆ ನಾನು ಪದೇ ಪದೆ ಹೇಳುತ್ತಿರುತ್ತೇನೆ, ನೀವು ಮಹಾನ್‌ ಪ್ರೇಮ, ಅಮರ ಪ್ರೇಮ ಅಂತೆಲ್ಲ ನಂಬಿಕೊಂಡಿರುವುದಿದೆಯಲ್ಲ ? ಅದು ನಿಮ್ಮ ಈವತ್ತಿನ ಅವಸರ - ಅಷ್ಟೆ. ಸ್ವಲ್ಪ ನಿಧಾನಿಸಿ. ಎರಡು ಸಲ ಮುಗುಳ್ನಕ್ಕ ಕೂಡಲೇ ಅವಳೇ ನನ್ನ ‘ಮಿಸ್ಸೆಸ್ಸು’ ಎಂಬಂತೆ ಬೀಗಬೇಡಿ. ಮೂರನೆಯ ಪತ್ರ ಬರೆಯುವ ಹೊತ್ತಿಗಾಗಲೇ ‘ನಿಮ್ಮವಳೇ ಆದ ನಿಮ್ಮ ಪತ್ನಿ !’ ಅಂತೆಲ್ಲ ಸಹಿ ಹಾಕಬೇಡಿ. ಬದುಕು ತುಂಬ ದೊಡ್ಡದಿದೆ. ಅವಕಾಶಗಳೂ ಸಾಕಷ್ಟಿವೆ. ಕ್ಲಾಸಿನಾಚೆಗೆ, ವಠಾರದಾಚೆಗೆ ಕಣ್ಣು ವಿಸ್ತರಿಸಿಕೊಳ್ಳಿ. ಇವತ್ತು ಸಿಕ್ಕವಳು ಗೆಳತಿಯಾಗಿದ್ದರೆ ಅವಳನ್ನು ಇನ್ನಷ್ಟು ದಿನ ಗೆಳತಿಯನ್ನಾಗೇ ಇಟ್ಟುಕೊಳ್ಳಿ. ಅವಸರಕ್ಕೆ ಬಿದ್ದು ಹೆಂಡತಿಯನ್ನಾಗಿಸಿಕೊಂಡು ಬಿಟ್ಟರೆ, ಆಮೇಲೆ ಏನು ಹರ ಪ್ರಯತ್ನ ಮಾಡಿದರೂ ಅವಳನ್ನು ಗೆಳತಿಯನ್ನಾಗಿಸಿಕೊಳ್ಳಲಾಗುವುದಿಲ್ಲ. ಒಂದಷ್ಟು ದಿನ, ಯಾವುದೇ ಕಮಿಟ್‌ಮೆಂಟುಗಳಿಲ್ಲದೆ ಗೆಳತನದಲ್ಲೇ ಗಿರಕಿ ಹೊಡೆಯಿರಿ. ಅವಳ ಸ್ಥಿರತೆ, ಚೆಂದ, ಬುದ್ಧಿವಂತಿಕೆ, ಕ್ರಿಯೇಟಿವಿಟಿ, ಮಾನಸಿಕ ಪ್ರಾಮಾಣಿಕತೆ, ದೇಹದ ಒನಪು, ಮನೆಯ ಸಂಸ್ಕೃತಿ, ಬದಲಿಸಿಕೊಳ್ಳಬಲ್ಲ ತಾಕತ್ತು, ಸಹನ ಶೀಲತೆ, ಧೈರ್ಯ- ಕಡೆಗೆ ಅವಳಿಗೆ ನಿಮ್ಮೆಡೆಗಿರುವ ಪ್ರೀತಿಯ ನಿಜವಾದ ಆಳ- ವಿಸ್ತಾರ ಎಲ್ಲವೂ ಮನದಟ್ಟಾಗಲಿ. ಅದೆಲ್ಲ ಖಚಿತಪಡಿಸಿಕೊಂಡ ನಂತರವೂ ಇವಳನ್ನು ಬಿಟ್ಟರೆ ಇನ್ನೊಬ್ಬಳು ಸಿಗಲಿಕ್ಕಿಲ್ಲ ಅಂತ ನಿಮಗೆ ನಿಜವಾಗ್ಯೂ ಅನಿಸಿದರೆ ಮಾತ್ರ - ಅವಳೆಡೆಗೆ ಕೈ ಚಾಚಿ.

ನೆನಪಿರಲಿ - ‘ಇನ್ನೊಬ್ಬಳು ಸಿಗಲಿಕ್ಕಿಲ್ಲ’ ಎಂಬುದು ಪ್ರೇಮ ಪ್ರಪಂಚದ ಅತಿ ದೊಡ್ಡ ಮೂಢ ನಂಬಿಕೆ! ಇವಳನ್ನು ಬಿಟ್ಟುಬಿಟ್ಟರೆ ಅನ್ಯಾಯ ಮಾಡಿದಂತಾಗುತ್ತದಲ್ಲಾ ಅಂತ ಯೋಚಿಸಬೇಡಿ. ‘ಅನ್ಯಾಯವಾಗುವಷ್ಟು’ ಅವಳಿಗೆ ಹತ್ತಿರಾಗಲೇ ಬೇಡಿ. ಹತ್ತಿರಾಗುವ ಮುನ್ನ, ಅವಳೆದುರು ನಿಮ್ಮ ಒಳ ಮನಸ್ಸು ಬೆತ್ತಲಾಗುವ ಮುನ್ನ ಇದೊಂದು ಪ್ಯಾರಾ ಇನ್ನೊಂದು ಸಲ ಓದಿಕೊಳ್ಳಿ.

ಈ ಮಾತು ಹುಡುಗಿಯರಿಗೂ (ಅಲ್ಲಲ್ಲ, ಹುಡುಗಿಯರಿಗೇ) ಜಾಸ್ತಿ ಅನ್ವಯಿಸುತ್ತದೆ

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more