• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಲ್ಲ ಪ್ರಾಮಾಣಿಕರೂ ಏಕೆ ವಿಧಾನ ಸೌಧಕ್ಕೆ ಬಾಂಬಿಡಲ್ಲ ?

By Staff
|
Ravi Belagere on Thatskannada.com ರವಿ ಬೆಳಗೆರೆ
‘ನಿಮ್ಮಂಥ ಭ್ರಷ್ಟ ರಾಜಕಾರಣಿಗಳನ್ನು ಖಡ್ಗದಿಂದ ಕತ್ತರಿಸಿ ನರಿ ನಾಯಿಗಳಿಗೆ ಹಾಕುತ್ತೇನೆ ?’ ಎಂದು ಹೀರೋ ಅಬ್ಬರಿಸಿದಾಗ ಥಿಯೇಟರಿನ ಜನ ಕಿವಿಗಡಚಿಕ್ಕುವಂತೆ ಚಪ್ಪಾಳೆ ಹೊಡೆಯುತ್ತಾರಲ್ಲಾ ?

ಹಾಗೆ ವರ್ತಿಸಿತು ನಮ್ಮ ಮೀಡಿಯಾ.

ಗಿರೀಶ್‌ ಮಟ್ಟೆಣ್ಣನವರ್‌ ಎಂಬ ವಾರ್ತೆ ಕಳೆದ ವಾರ ಪತ್ರಿಕೆ ಅಚ್ಚಿಗೆ ಹೋಗುವ ಕೊನೇ ಗಳಿಗೆಯಲ್ಲಿ ನನ್ನ ಕಿವಿಗೆ ಬಿದ್ದಿತ್ತು. ತಕ್ಷಣ ಹುಡುಗರನ್ನು ಅಲರ್ಟ್‌ ಮಾಡಿ, ಅದರ ವಿವರಗಳನ್ನು ಬರೆದುಕೊಡಿ ಅಂದಿದ್ದರೆ, ನನ್ನ ವರದಿಗಾರರು ಬಾಂಬ್‌ ಪ್ರಸಂಗದ ಕುರಿತು ಬರೆದುಕೊಡುತ್ತಲೂ ಇದ್ದರು.

ಆದರೆ, ಅದು ದಿನ ಪತ್ರಿಕೆಗಳು ಮಾಡುವ ಕೆಲಸ. ಸುದ್ದಿಯ ಹಿಂದಿನ ಸುದ್ದಿಯನ್ನು ವಾರ ಪತ್ರಿಕೆಗಳು ತನಿಖೆ ಮಾಡಿ ತೆಗೆಯಬೇಕು. ಅದಕ್ಕಿನ್ನೂ ಸಮಯವಿದೆ ಅಂದುಕೊಂಡು, ಗಿರೀಶ್‌ ಬಗ್ಗೆ ಏನೂ ಬರೆಯದೆ ಕಳೆದ ವಾರದ ಸಂಚಿಕೆಯನ್ನು ಅಚ್ಚಿಗೆ ಕಳಿಸಿ ಕುಳಿತೆ. ‘ನೀವು ಈತನ ಬಗ್ಗೆ ಬರೀತೀರಿ ಅಂದುಕೊಂಡಿದ್ವಿ. ನಿರಾಶೆಯಾಯಿತು’ ಅಂತ ಒಂದಿಬ್ಬರು ಓದುಗರು ಅಂದೂಬಿಟ್ಟರು. ಅವಸರದಲ್ಲಿ ಏನೋ ಒಂದಿಷ್ಟು ಬರೆದು ತಳ್ಳುವುದಕ್ಕಿಂತ, ಓದುಗರ ಕೈಲಿ ಹೀಗೆ ತಿವಿಸಿಕೊಳ್ಳುವುದೇ ಬೆಟರು ಅಂದುಕೊಂಡು ಸುಮ್ಮನಾದೆ.

Girish Lokanath Mattannanavarಅತ್ತ ನಿಧಾನವಾಗಿ ಗಿರೀಶ್‌ ಮಟ್ಟೆಣ್ಣನವರ್‌ ಪ್ರಕರಣ ಟೇಕ್‌ ಆಫ್‌ ಆಗತೊಡಗಿತ್ತು. ಅದಕ್ಕೆ ಮೊದಲು ಚಾಲನೆ ಕೊಟ್ಟವರೇ ಬೆಂಗಳೂರಿನ ಹತ್ತಾರು ಪೊಲೀಸ್‌ ಅಧಿಕಾರಿಗಳು. ‘ ಎಂಥ ಹುಡುಗ ಕಣ್ರೀ. ನಾನು ಹೇಳಿ ಬಿಟ್ಟೆ- ಲೋ ತಮ್ಮಾ, ನೀನು ಚಿಕ್ಕೋನು ಆದರೂ ನಿಂಗೊಂದು ಸೆಲ್ಯೂಟ್‌ ಕಣೋ.. ಅಂತ ಅಂಥ ಕೆಲಸ ಮಾಡಿಬಿಟ್ಟಿದ್ದಾನೆ...’ ಎಂಬ ಧಾಟಿಯಲ್ಲಿ ಅವರು ಮಾತನಾಡತೊಡಗಿದರು. ಆಗಲೇ ಅಂದುಕೊಂಡೆ ಇದೇ ಧಾಟಿಯನ್ನ ಪತ್ರಿಕೆಗಳು ಮತ್ತು ಟೀವಿಗಳು ನಾಳೆಯಿಂದ ಪಿಕ್‌ ಮಾಡಿಕೊಂಡು ಬಿಡ್ತವೆ ಅಂತ. ಅದು ಹಾಗೇ ಆಯಿತು. ಪ್ರತಿಪತ್ರಿಕೆಯೂ ಗಿರೀಶ್‌ ಪ್ರಕರಣವನ್ನು ಧಾರಾವಾಹಿಯಂತೆ ಪ್ರಕಟಿಸಿತು. ಟೀವಿ ಚಾನೆಲ್‌ಗಳಿಗಂತೂ ಆ ಹುಡುಗ ಅತ್ಯಂತ ರುಚಿಕರ visual ಆಗಿ ಹೋದ.

‘ಶಾಸಕರ ಭವನಕ್ಕೇ, ವಿಧಾನ ಸೌಧಕ್ಕೇ ಬಾಂಬಿಡಲು ಒಬ್ಬ ಎಸ್ಸೈ ತಯಾರಾಗಿ ಬಿಟ್ಟನೆಂದರೆ ನಮ್ಮ ಸರ್ಕಾರ ಎಷ್ಟು ಕೆಟ್ಟಿರಬೇಕು ? ರಾಜಕಾರಣಿಗಳು ಅದಿನ್ನೆಂಥ ಭ್ರಷ್ಟರಿರಬೇಕು. ಈ ಹುಡುಗ ನೋಡ್ರೀ ಗಂಡು ಅಂದ್ರೆ ! ಎಂಥ ಸಾಹಸ ಮಾಡಿದಾನೆ. ಶಭಾಷ್‌ !’ ಅಂತ ಜನ ಸಾಮಾನ್ಯರು ಮಾತನಾಡತೊಡಗಿದರು. ಖ್ಯಾತ ಕವಿ ಸುಮತೀಂದ್ರನಾಡಿಗರು ಗಿರೀಶ್‌ ಕುರಿತು ಪದ್ಯವನ್ನೇ ಬರೆದು ಬಿಟ್ಟರು. (ಥ್ಯಾಂಕ್ಸ್‌) ಸಾಮಾನ್ಯವಾಗಿ ನಾಡಿಗರು ಯಾರಾದರೂ ಸತ್ತ ಮೇಲೆ ಅವರೊಂದಿಗೊಂದು Ghost ಸಂದರ್ಶನ ಬರೆಯುವ ತಮ್ಮ ಮಾಮೂಲಿ ವಾಡಿಕೆ ಬಿಟ್ಟು ಗಿರೀಶ್‌ ಜೈಲಿನಲ್ಲಿರಬೇಕಾದರೇನೇ ಕವಿತೆ ಬರೆದು ಛಾಪಿಸಿಬಿಟ್ಟರು. ಎಲ್ಲವನ್ನೂ ಗಮನಿಸುತ್ತಾ ಕೂತರೆ ಇಡೀ ನಾಡಿನಲ್ಲಿ ಒಂದು ಯುಫೋರಿಯಾ, ಒಂದು ಉನ್ಮಾದ ಉಂಟಾಗಿರುವುದು ಸ್ಪಷ್ಟವಾಗುತ್ತಿತ್ತು. ಈ ಉನ್ಮಾದ ಹೇಗಿರುತ್ತೆ ಮತ್ತು ಹೇಗೆ ಹುಟ್ಟುತ್ತೆ ಎಂಬುದು ನಿಮಗೂ ಗೊತ್ತಿರುತ್ತದೆ. ‘ಶಿವಾಜಿ ಮಹಾರಾಜ್‌, ಭಗತ್‌ ಸಿಂಗ್‌ ಇವರೆಲ್ಲ ಪಕ್ಕದ ಮನೇಲಿ ಹುಟ್ಟಲಿ’ ಎಂದು ಹಾರೈಸುವವರ ಉನ್ಮಾದವಿದು. ನಾನು ಮಾಡಲಾಗದ ಕೆಲಸವನ್ನು ಗಿರೀಶ್‌ ಮಾಡಿಬಿಟ್ಟನಲ್ಲಾ ?

ಇರಲಿ, ಅವನಿಗೊಂದು ಜೈಕಾರ ಎಂಬಂಥ ಮೆಂಟಾಲಿಟಿ. ಹಾಸನ ಜಿಲ್ಲೆಯ ಮಹಾತ್ಮನ್ಯಾರೋ, ಗಿರೀಶ್‌ನ ಮನೆಯವರೆಲ್ಲರ ಜೀವನ ನಿರ್ವಹಣೆಗೆ ಹಣ ಕೊಡುತ್ತೇನೆ ಅಂದ. ಇನ್ನೊಬ್ಬರ್ಯಾರೋ ಗಿರೀಶ್‌ಗೆ ಒಂದು ಲಕ್ಷ ಕೊಡುತ್ತೇನೆ ಎಂದರು. ಫೈನ್‌. ಇದೆಲ್ಲವೂ ಬಾಂಬ್‌ ಪ್ರಕರಣದಂತಹ ಸಡನ್‌ ಸ್ಫೋಟಗಳು ಉಂಟು ಮಾಡುವ ಉನ್ಮಾದಗಳಷ್ಟೇ. ಅಲ್ದೇ ಎಂಥದ್ರೀ ? ಅದೇ ಹಾಸನ ಜಿಲ್ಲೆಯಲ್ಲಿ ಡಜನ್‌ಗಟ್ಟಲೆ ರೈತರು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಅವರ್ಯಾರ ಮನೆಗೂ ಅರೆ ಪಾವು ಅಕ್ಕಿ ಕಳಿಸದ ಮನುಷ್ಯ ವಿಧಾನ ಸೌಧಕ್ಕೆ ಬಾಂಬಿಕ್ಕಿದಾತನ ಇಡೀ ಕುಟುಂಬವನ್ನು ಸಾಕಲು ತಯಾರಾಗುವುದು ತಕ್ಷಣದ ಉನ್ಮಾದವಲ್ಲದೆ ಮತ್ತೇನು ?

ಗಿರೀಶ್‌ ಮಟ್ಟೆಣ್ಣನವರ್‌ ಒಬ್ಬ ದಾರಿ ತಪ್ಪಿದ ದೇಶಭಕ್ತ. ಅವನದು ಅಪ್ಪಟ split personality. ಅವನಿಗೆ ಬೇಕಾಗಿರುವುದು ಬೇರೆಯೇ ತರಹದ ನೆರವು. ಈ ಪಬ್ಲಿಸಿಟಿ ವ್ಯರ್ಥ ಎಂಬಂಥ ಸರಳ ಸಂಗತಿಗಳು ಅನೇಕರಿಗೆ ಹೊಳೆಯಲಿಲ್ಲ. ಬದುಕು ‘ಷೂಲ್‌’ ಸಿನಿಮಾ ಅಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ ವ್ಯವಸ್ಥೆ ಏನೇ ಭ್ರಷ್ಟ ಗೊಂಡಿದ್ದರೂ, ಜನ ಸಾಮಾನ್ಯರ ಕಣ್ಣಿಗೆ ಇವತ್ತಿಗೂ ಪೊಲೀಸ್‌ ಅಧಿಕಾರಿ ಜೀವ ರಕ್ಷಕ ಮಹಾಬಲಿಷ್ಠ ಜನಮಿತ್ರನಾಗಿ ಕಾಣಿಸುತ್ತಾನೆ. ಅವನು ರಕ್ಷಣೆಯ ಪ್ರತೀಕ. ಅಂಥವನೇ ಭ್ರಷ್ಟಾಚಾರ ಕಂಡು ಹತಾಶನಾಗಿ ವಿಧಾನ ಸೌಧಕ್ಕೆ ಬಾಂಬು ತಂದ ಅಂದರೆ - ವಿಧಾನ ಸೌಧ ಇನ್ನೆಷ್ಟು ಕೆಟ್ಟಿರಬೇಕು ಅಂತ ಜನ ಸಾಮಾನ್ಯನ ಮನಸ್ಸು ಅಮಾಯಕವಾಗಿ ಕೇಳಿ ಬಿಡುತ್ತದೆ. ಗಿರೀಶ್‌ ಪ್ರಕರಣದಲ್ಲಿ ಆದದ್ದೇ ಅದು. ಜನ ಸಾಮಾನ್ಯನಿಗಿಂತ ಮುಂಚಿತವಾಗಿ ಪತ್ರಿಕೆಗಳು ಮತ್ತು ಟೀವಿಗಳೇ ಆ ಕೆಲಸ ಮಾಡಿಬಿಟ್ಟವು. ಅರ್ಧ ಗಂಟೆಗೊಮ್ಮೆ ಎಕ್ಸೈಟ್‌ ಆದವರ ಹಾಗೆ ಚೀರತೊಡಗಿದವು.

ಈ ಹಂತದಲ್ಲಿ ಕೊಂಚ ಕೂಲ್‌ ಆಗಿ ಯೋಚನೆ ಮಾಡಿ. ಗಿರೀಶ್‌ ಪೊಲೀಸು ನೌಕರಿಗೆ ಬಂದು ಎಷ್ಟು ಮಹಾ ವರ್ಷಗಳಾದವು ? ನೋಡಿದ್ದರೆ ಅವನು ಅದಿನ್ಯಾವ ಪಾಟಿ ಭ್ರಷ್ಟಾಚಾರ ನೋಡಿದ್ದಾನು ? ಇದೇ ಪೊಲೀಸ್‌ ಇಲಾಖೆಯಲ್ಲಿ ಇವತ್ತಿಗೂ ಎ.ಸಿ.ಪಿ. ಗಣಪತಿಯಂಥವರು ಅನೇಕರಿದ್ದಾರೆ. ಒಂದೇ ಒಂದು ಪೈಸೆ ಲಂಚ ತಿಂದವರಲ್ಲ. ಕಾನೂನಿನ ಲಕ್ಷ್ಮಣರೇಖೆ ದಾಟಿದವರಲ್ಲ. ನೀವು ಚಹ ಕುಡಿಸಿದರೆ, ತಮ್ಮ ಪಾಲಿನ ಒಂದು ರೂಪಾಯಿ ನಿಮ್ಮೆದುರಿಗೆ ಇಟ್ಟು ಎದ್ದು ಹೋಗಿ ಬಿಡುವಂಥ ನಿಸೂರು ಅಧಿಕಾರಿಗಳವರು.

ನಿಮಗೆ ಗೊತ್ತಿರಲಿ ಅಂತ ಹೇಳ್ತೀನಿ. ಬಳ್ಳಾರಿ ಜಿಲ್ಲೆಯಲ್ಲಿ ಬಾಗೇವಾಡಿ ಅಂತ ಒಬ್ಬ ಎಸ್ಸೈ ಇದ್ದರು. ( ಅವರೀಗ ನಿವೃತ್ತಿಯಾಗಿದ್ದಾರೆ). ಮನೆಯಲ್ಲಿ ಊಟಕ್ಕೆ ಕುಳಿತಾಗ ಸಾರಿನಲ್ಲಿ ಕರಿಬೇವು ಕಾಣಿಸಿದರೆ ‘ನಾನು ಕರಿಬೇವು ತಂದಿರಲಿಲ್ಲವಲ್ಲ ? ಇದೆಲ್ಲಿಂದ ಬಂತು’ ಅಂತ ಪತ್ನಿಯನ್ನು ಕೇಳುತ್ತಿದ್ದರು. ‘ಪಕ್ಕದ ಮನೆಯವರು ಕೊಟ್ಟದ್ದು’ ಅಂತ ಉತ್ತರಿಸಿದರೆ ಊಟವಾದ ನಂತರ ಮಕ್ಕಳನ್ನು ಕರೆದು ‘ಪಕ್ಕದ ಮನೆಯ ಕರಿಬೇವಿನ ಗಿಡಕ್ಕೆ ಹದಿನೈದು ದಿನ ನೀರು ಹಾಕಿ’ ಅಂತ ಅಪ್ಪಣೆ ಕೊಡುತ್ತಿದ್ದರು ಬಾಗೇವಾಡಿ. ಆತ ಆರ್ಡಿನರಿ ಪೇದೆಯಾಗಿ ನೌಕರಿಗೆ ಸೇರಿ ಎಸ್ಸೈ ಆಗಿ ನಿವೃತ್ತರಾದರು. ಬಾಂಬ್‌ ಇಡುವುದೊಂದೇ ಏಕೆ, ಇಡೀ ರಾಜಕಾರಣೀ ಸಮೂಹವನ್ನು ಖಡ್ಗ ಹಿಡಿದು ಚೆಂಡಾಡಬಹುದಾದಷ್ಟು ಭ್ರಷ್ಟಾಚಾರವನ್ನು ಅವರು ಇಡೀ 35 ವರ್ಷಗಳ ಸರ್ವೀಸಿನುದ್ದಕ್ಕೂ ನೋಡಿದ್ದರು. ಅವರೇಕೆ ವಿಧಾನ ಸೌಧಕ್ಕೆ ಬಾಂಬಿಡಲಿಲ್ಲ ? ಹೀಗೆ ಉದಾಹರಣೆಗಳಾಗಿ ಪೊಲೀಸ್‌ ಇಲಾಖೆಯಾಂದೇ ಅಲ್ಲ. ನಾನಾ ಇಲಾಖೆಗಳ ಸಾವಿರಾರು ಪ್ರಾಮಾಣಿಕರು ನಿಮಗೆ ಸಿಗುತ್ತಾರೆ. ಅವರೆಲ್ಲ ತಂತಮ್ಮ ಮಟ್ಟದಲ್ಲಿ ಭ್ರಷ್ಟಾಚಾರದ ವಿರುದ್ಧ ಬಡಿದಾಡುತ್ತಲೇ ಪ್ರಾಮಾಣಿಕರಾಗಿ ಉಳಿದವರು. ಬಾಂಬ್‌ ಇಡಲು ಅವರ್ಯಾವತ್ತೂ ಮುಂದಾದವರಲ್ಲ. ನೆನಪಿರಲಿ, ಅವರು ಗಿರೀಶನಷ್ಟೇ ಶುದ್ಧ ಹಸ್ತರು. ಆದರೆ ಅವರದು ದಾರಿ ತಪ್ಪಿದ ಉನ್ಮಾದೀ ಪ್ರಾಮಾಣಿಕತೆಯಲ್ಲ.

ಇನ್ನು ಭ್ರಷ್ಟರ ವಿರುದ್ಧ ಬಾಂಬಿಡುವವರು- ಅವರು ಬೇರೆಯೇ ಇದ್ದಾರೆ. ಅವರನ್ನು ನಕ್ಸಲೈಟರೆನ್ನುತ್ತೇವೆ. ಇಂಥ ಭ್ರಷ್ಟನನ್ನು ಬಾಂಬಿಕ್ಕಿ ಉಡಾಯಿಸಬೇಕು ಅಂತ ಅವರ ಸಂಘಟನೆ ಒಂದು ತೀರ್ಮಾನ ಕೈಗೊಳ್ಳುತ್ತದೆ. ಅದನ್ನು ಕಾರ್ಯಕರ್ತರು ಜಾರಿಗೆ ತರುತ್ತಾರೆ. ಅವರ್ಯಾರಿಗೂ ತಮ್ಮ ಬಗ್ಗೆ ಭ್ರಮೆಗಳಿರುವುದಿಲ್ಲ. ಒಂದು ಡೆಮಾಕ್ರೆಟಿಕ್‌ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. ತಾವು ಹೀರೋಗಳಾಗಬೇಕು ಅಂದುಕೊಂಡಿರುವುದಿಲ್ಲ. ಭ್ರಾಮಕ ಜಗತ್ತನ್ನು ತಮ್ಮ ಸುತ್ತ ಸೃಷ್ಟಿಸಿಕೊಂಡಿರುವುದಿಲ್ಲ. ಅವರು ಪಕ್ಕಾ ಸೈನಿಕರಂತೆ ಕೆಲಸ ಮಾಡುತ್ತಾರೆ. ಅವರು ಶಾಸಕರ ಭವನದಂತಹ ಸಾಫ್ಟ್‌ ಟಾರ್ಗೆಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ. ಅವರದು ಬೇರೆಯದೇ ಮನಸ್ಥಿತಿ.

ಆದರೆ ಗಿರೀಶ್‌ ಈ ಎರಡೂ ಗುಂಪುಗಳಿಗೆ ಸೇರುವ ಹುಡುಗನಲ್ಲ. ಅವನು ಆ ಕ್ಷಣದ ಉನ್ಮಾದ, ಆ ಕ್ಷಣದ ಇಂಪಲ್ಸ್‌ಗಳ ಭಾವುಕತೆಯ ಆದೇಶದ ಅನುಸಾರವಾಗಿ ಕೆಲಸ ಮಾಡುತ್ತಾನೆ. ಅವನಿಗೆ ಫ್ರೇಮ್‌ ಇಲ್ಲ. ಸಂಘಟನೆಯಿಲ್ಲ. ಒಳ್ಳೆಯತನವಿದೆ. ನಿಜ. ಆದರೆ ಅದಕ್ಕೊಂದು ಡೈರೆಕ್ಷನ್‌ ಇಲ್ಲ. ಅಲ್ರೀ ಇದೇ ಹುಡುಗ ನಾಳೆ ರಾಷ್ಟ್ರಪತಿ ಅಬ್ದುಲ್‌ ಕಲಾಮ್‌ ಅವರಿಗೆ ಅಂಗರಕ್ಷಕನಾಗಿ ಹೋಗಬೇಕಾಗಿ ಬಂದಿದ್ದರೆ ಗತಿಯೇನಾಗುತ್ತಿತ್ತು ? ಯೋಚಿಸಿ ನೋಡಿ. ‘ಜಗತ್ತನ್ನೇ ಕೊಲ್ಲುವ ಅಣುಬಾಂಬು ಸಿದ್ಧಪಡಿಸಿದ ಕಲಾಮ್‌. ಅದಕ್ಕಾಗಿ ಆತನನ್ನು ಕೊಂದು ಬಿಟ್ಟು ಜಗತ್ತನ್ನು ರಕ್ಷಿಸಲು ತೀರ್ಮಾನಿಸಿದೆ ’ ಎಂಬಂಥ ಹೇಳಿಕೆ ನೀಡಿ ಸುಮ್ಮನಾದರೆ, ಗಿರೀಶ್‌ನಂತಹ ಪ್ರಾಮಾಣಿಕ ಅಧಿಕಾರಿಯನ್ನು ಕಟ್ಟಿಕೊಂಡು ಏನು ಮಾಡೋಣ ?

ಭ್ರಷ್ಟಾಚಾರ ಅನ್ನೋದು ವಿಧಾನ ಸೌಧದಲ್ಲಿಲ್ಲ. ಶಾಸಕರ ಭವನದಲ್ಲಿಲ್ಲ. ಅದು ಅಲ್ಲಿಂದಲೇ ಹುಟ್ಟಿರಬಹುದು. ಆದರೆ ಅವೆರಡೇ ಭ್ರಷ್ಟಾಚಾರದ ಉಗಮಗಳಾಗಿ ಇವತ್ತು ಉಳಿದಿಲ್ಲ. ಲಂಚಕೋರತನ ಎಲ್ಲ ರಂಗಗಳಿಗೂ ತೆವಳಿ ಬಂದಿದೆ. ಒಬ್ಬ ಗಿರೀಶ್‌ ಅಲ್ಲ. ಲಕ್ಷಾಂತರ ಗಿರೀಶ್‌ಗಳು ಇಲ್ಲಿ ಪ್ರತಿದಿನ ಪ್ರತಿಕ್ಷಣ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕಿದೆ. ಒಂದು ಬಾಂಬಿಟ್ಟು ಜೈಲಿಗೆ ಹೋದರೆ ನಿರ್ನಾಮವಾಗುವ ಪೀಡೆಯಲ್ಲ ಇದು.

ಇಷ್ಟೆಲ್ಲ ವಾದಿಸಿದ ನಂತರವೂ ‘ಪತ್ರಿಕೆ’ ಗಿರೀಶ್‌ ಪರವಾಗಿ ನಿಲ್ಲುತ್ತದೆ. ಅವನು ಅಮಾಯಕ, ಉನ್ಮಾದಿ, ಆದರ್ಶವಿರುವಾತ. ಯಾವ ಕಡೆಯಿಂದ ನೋಡಿದರೂ ಕೃಷ್ಣರಿಗಿಂತ, ಧರಮ್‌ಸಿಂಗ್‌ಗಿಂತ ಹೆಚ್ಚು ಮಾನವೀಯ. ಅಂಥವನ ಬಗ್ಗೆ ಸಲ್ಲದ ಸುದ್ದಿ ಹರಡುತ್ತಿರುವವರಿಗೆ ಧಿಕ್ಕಾರವಿರಲಿ.

ಮನೆಯ ಹುಡುಗ ರೇಗಿ ಮುನಿಸಿಕೊಂರೆ ಅಣ್ಣಂದಿರಾದವರು ಅವನ ನೆರವಿಗೆ ಹೋಗಿ ಅಕ್ಕರೆಯಿಂದ ಅವನನ್ನು ಸಮಾಧಾನ ಪಡಿಸುವುದಿಲ್ಲವೇ ?

ಪತ್ರಿಕೆ ಮತ್ತು ಓದುಗರು ಆ ಕೆಲಸ ಮಾಡಬೇಕಿದೆ.

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more