ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐವತ್ತಾರು ವರ್ಷದಿಂದ ಒಂದು ಜವಾಬ್ದಾರಿ ತಪ್ಪಿಸಿಕೊಂಡವರು ನಾವು

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಅವರ ಬಗ್ಗೆ ಬರೆಯುತ್ತಾ , ಒಮ್ಮೆ ಅವರನ್ನು ಕೃಷ್ಣರ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಸಿಡಿದು ನಿಂತ ಕ್ರುದ್ಧ ಜಂಗಮ ಅಂತ ಬರೆದದ್ದು ನನಗೆ ನೆನಪಿದೆ. ಅವರು ನಿವೃತ್ತ ಡಿ. ಜಿ. ಪಿ. ರೇವಣಸಿದ್ಧಯ್ಯನವರು. ಅವರಿಗೆ ಕೃಷ್ಣರ ವಿರುದ್ಧ ಅಸಹನೆಯಿತ್ತು. ಸಿಟ್ಟಿತ್ತು. ನಾಗಪ್ಪನವರ ಹತ್ಯೆಯಾದಾಗ ರೇವಣಸಿದ್ಧಯ್ಯನವರು ಎಲ್ಲ ಪ್ರಮುಖ ಲಿಂಗಾಯತ ಮಠಗಳನ್ನೂ ಒಂದೆಡೆ ಸೇರಿಸಿ ಕೃಷ್ಣರನ್ನು ಆಹುತಿ ತಗೆದುಕೊಳ್ಳಲು ಓಡಾಡಿದ್ದರು. ಫೈನ್‌ !

ರೇವಣಸಿದ್ಧಯ್ಯನವರನ್ನು ನಾನು ಒಬ್ಬ ದಕ್ಷ ಪೊಲೀಸ್‌ ಅಧಿಕಾರಿಯಾಗಿ ತುಂಬ ಹತ್ತಿರದಿಂದ ನೋಡಿದ್ದೇನೆ. ಬೆಂಗಳೂರು ನಗರ ಕಂಡ ಪ್ರೊಫೆಷನಲ್‌ ಪೊಲೀಸುಗಾರಿಕೆ ಅಂದರೆ, ಅದು ರೇವಣಸಿದ್ಧಯ್ಯನವರ ಕಾಲದ್ದು. ಅವರು ತೀರ ಅಪ್ರಮಾಣಿಕರಾಗಿರಲಿಲ್ಲ. ತೀರ ಜಾತಿವಾದಿಯೂ ಆಗಿರಲಿಲ್ಲ. ಇಲ್ಲಿ ‘ತೀರ’ ಎಂಬುದು ಗಮನಾರ್ಹ ಶಬ್ದ. ಮುಂದೆ ಅವರು ರಾಜ್ಯದ ಪೊಲೀಸ್‌ ಮಹಾ ವರಿಷ್ಠರಾಗಿ ರಿಟೈರಾಗಬೇಕಿತ್ತು. ಅದಕ್ಕೆ ಕೃಷ್ಣ ಕಲ್ಲು ಹಾಕಿದರು. ‘ನಾನು ನಿಮ್ಮ ಸರ್ಕಾರವನ್ನೇ ಆಹುತಿ ತಗೋತೀನಿ’ಅಂತ ಹೊರಟರು ರೇವಣಸಿದ್ಧಯ್ಯ. ನಾಗಪ್ಪ ಹತ್ಯೆ ಪ್ರಕರಣ ಅವರ ಕೈಗೆ ಅದ್ಭುತವಾಗಿ ಸಿಕ್ಕಿತ್ತು. ಜೊತೆಗೆ ಮೊದಲಿಂದಲೂ ಮಠಾಧೀಶರ ನಡುವೆಯೇ ಬೆಳೆದವರಾದ್ದರಿಂದ ರೇವಣಸಿದ್ಧಯ್ಯನವರಿಗೆ ಸುತ್ತೂರು ಮಠದ ಸಖ್ಯ, ಬೆಂಬಲ ಬಲವಾಗಿಯೇ ಸಿಕ್ಕಿತು. ಅದೂ ಫೈನ್‌ ! ಅವತ್ತು ನಾನು ರೇವಣಸಿದ್ಧಯ್ಯನವರನ್ನಾಗಲೀ ಸುತ್ತೂರು ಸ್ವಾಮಿಯನ್ನಾಗಲೀ ಪ್ರಬಲ ಲಿಂಗಾಯತ ಮುಖಂಡರು ಅಂತ ನೋಡಲಿಲ್ಲ. ಕೃಷ್ಣರ ಭ್ರಷ್ಟ ಸರ್ಕಾರಕ್ಕೆ ಒಂದು ವಿರೋಧ ಅಂತಾದರೂ ಹುಟ್ಟಿಕೊಂಡಿತಲ್ಲ ಎಂಬ ಅಚ್ಚರಿಯಿಂದ, ಪ್ರೀತಿಯಿಂದ ಅವರನ್ನು ನೋಡಿದ್ದೆ.

ಆದರೆ ಇವತ್ತೇನಾಗಿದೆ ನೋಡಿ ? ರೇವಣ ಸಿದ್ಧಯ್ಯನವರು ಎಸ್ಸೆಂ ಕೃಷ್ಣರ ಬಿಸಿಯೂಟದ ಪಾಕಶಾಲೆಯಲ್ಲಿ ಮುಖ್ಯ ಬಾಣಸಿಗ ! ಸುತ್ತೂರು ಸ್ವಾಮಿಯ ಪಕ್ಕದಲ್ಲಿ ಖುದ್ದು ಸೋನಿಯಾ. ನಾಗಪ್ಪನವರ ಶವವಿನ್ನೂ ಸಮಾಧಿಯಲ್ಲಿ ಕರಗಿರಲಿಕ್ಕಿಲ್ಲ-‘ಈ ಸಲ ಲಿಂಗಾಯತರು ಕಾಂಗ್ರೆಸ್ಸಿಗಂತೆ’ ಎಂಬ ಮಾತು ಹುಟ್ಟತೊಡಗಿದೆ. ಇನ್ನೊಂದೆಡೆ ಜನತಾ ದಳದ ಅವಿವೇಕಿಗಳು ವಿಲೀನ ಎಂಬುದನ್ನು ಹಾದರಗಿತ್ತಿಯರ ಜಗಳಕ್ಕಿಂತ ಕಡೆ ಎಂಬಂತೆ ಮಾಡಿಕೊಂಡು ಕುಳಿತಿರುವಾಗ, ಕೃಷ್ಣರ ಬೊಚ್ಚು ಮುಖದಲ್ಲಿ ಸಂತೃಪ್ತಿಯ ನಗೆ.

ಇನ್ನೊಂದೂವರೆ ವರ್ಷದಾಚೆಗೆ ಚುನಾವಣೆ ಇಟ್ಟುಕೊಂಡು ‘ಈ ಸಲ ಲಿಂಗಾಯತರು ಕಾಂಗ್ರೆಸ್ಸಿಗಂತೆ’ ಎಂದು ಮಾತನಾಡುವುದು, ಆ ಮಾತಿಗೆ ಪುಷ್ಟಿಯೆಂಬಂತೆ ರೇವಣಸಿದ್ಧಯ್ಯ ಮತ್ತು ಸುತ್ತೂರು ಸ್ವಾಮಿಯನ್ನು ತೋರಿಸುವುದು- ಇದು ಭಾರತದಂತಹ ದೇಶದ ಹೊರತಾಗಿ ಮತ್ತೆಲ್ಲಾದರೂ ಸಾಧ್ಯವಾ ?

ಸುತ್ತೂರು ಸ್ವಾಮಿಗೆ ದುಡ್ಡಿದೆ. ಕಾಲೇಜುಗಳಿವೆ. ಹಳೇ ಮೈಸೂರು ಪ್ರದೇಶದ ಅನೇಕ ಮಠಗಳ ಮೇಲೆ ಹೋಲ್ಡ್‌ ಇದೆ. ಇಂಥ ಸ್ವಾಮಿಯ ಆಶೀರ್ವಾದ ರೇವಣಸಿದ್ಧಯ್ಯನವರ ಬೆನ್ನಿಗಿದೆ. ಅಂದ ಮಾತ್ರಕ್ಕೆ ‘ಈ ಸಲ ಲಿಂಗಾಯತರು ಕಾಂಗ್ರೆಸ್ಸಿಗಂತೆ’ ಎಂಬ ಮಾತು ಹುಟ್ಟಿದ್ದಾದರೂ ಹೇಗೆ ? ಸುತ್ತೂರು ಸ್ವಾಮಿಯ ಮಾತು ಕೇಳಿ ಇಡೀ ಲಿಂಗಾಯತ ಸಮೂಹ ಕಾಂಗ್ರೆಸ್ಸಿಗೆ ಓಟು ಹಾಕುತ್ತದಾ ? ಹಾಗಾದರೆ ಪರ್ಯಾಯ ಮಠ ಕಟ್ಟಿದ ದೇವೇಗೌಡರು ಇಡೀ ವಕ್ಕಲಿಗ ಸಮೂಹವನ್ನು ಒಡೆದು ಬಿಟ್ಟಿದ್ದಾರಾ ?

ನಂಗೊತ್ತು. ‘ಖಂಡಿತಾ ಇಲ್ಲ’ ಅಂತ ನೀವಂತೀರಿ. ಹಾಗಾದರೆ ಇಂಥ ಮಾತು, ಜಾತಿ ಲೆಕ್ಕಾಚಾರ, ಈ ಸಲ ಇಂಥ ಜಾತಿಯವರು ಇಂಥ ಪಕ್ಷಕ್ಕೇನಂತೆ- ಎಂಬ ಉದ್ಧಟ ಘೋಷಣೆಗಳು ಯಾಕೆ ಹೊರಡುತ್ತವೆ ? ಆ ಬಗ್ಗೆ ಯಾವತ್ತಾದರೂ ಯೋಚಿಸಿದ್ದೀರಾ ? ಸುತ್ತೂರು ಸ್ವಾಮಿ ಹೇಳಿಬಿಟ್ಟ ಮಾತ್ರಕ್ಕೆ ಲಿಂಗಾಯತರ ಮತಗಳು ಕಾಂಗ್ರೆಸ್ಸಿಗೇ ಬೀಳ್ತವೆ ಎಂಬ ಮಾತಿನಲ್ಲಿ ತಿರುಳೇ ಇಲ್ಲ ಅಂತ ನಿಮಗನಿಸುತ್ತಿದೆಯಾ ?

ನಂಗೊತ್ತು. ನಿಮ್ಮಲ್ಲಿ ಅರ್ಧಕ್ಕರ್ಧ ಜನ ಈ ಬಗ್ಗೆ ಯೋಚಿಸಿಯೇ ಇರುವುದಿಲ್ಲ. ಯಾವನು ಯಾವನಿಗಾದರೂ ಓಟು ಹಾಕ್ಕೊಂಡು ಹಾಳು ಬಿದ್ದು ಹೋಗಲಿ ಅಂತ ನಿರ್ಧರಿಸಿ ಸುಮ್ಮನಾಗಿರುವವರೂ ಇದ್ದೀರಿ. ಇನ್ನರ್ಧ ಜನ ಇದರ ಬಗ್ಗೆಯೆಲ್ಲ ತುಂಬ ತಲೆಕೆಡಿಸಿಕೊಳ್ಳುತ್ತಾರೆ. ನಮ್ಮ ಸಮಾಜ ಹೇಗೆ ಜಾತಿಗಳಲ್ಲಿ , ಮಠಗಳಲ್ಲಿ, ದುಡ್ಡಿನ ಹೊಡೆತ- ಹೊಳಪುಗಳಲ್ಲಿ ಸಿಕ್ಕು ಛಿದ್ರ ಛಿದ್ರವಾಗುತ್ತಿದೆಯಲ್ಲಾ ಅಂತ ಬೇಸರಿಸಿಕೊಳ್ಳುತ್ತಾರೆ. ಪ್ರಜಾ ಪ್ರಭುತ್ವವೆಂಬುದು ನಾಯಿ ನರಿಗಳ ಕೈಗೆ ಸಿಕ್ಕೋಯ್ತು ಕಣ್ರೀ ಅಂತ ಹಲುಬುತ್ತಾರೆ. ಯಾವ ಸರ್ಕಾರ ಅಧಿಕಾರಕ್ಕೆ ಬರಬೇಕು ಮತ್ತು ಯಾವ ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಒಬ್ಬ ಸ್ವಾಮಿ ನಿರ್ಧರಿಸುವಂತಾಯಿತಲ್ಲಾ ಅಂತ ಬೇಸರಪಡುತ್ತಾರೆ. ಆದರೆ ಹೀಗೆಲ್ಲ ಯೋಚಿಸುವವರ್ಯಾರೂ ಆವತ್ತಿನ ದಿನ ಓಟೇ ಹಾಕುವುದಿಲ್ಲವಾದ್ದರಿಂದ ಅವರ ಯೋಚನೆಗೆ, ಹಲುಬಾಟಕ್ಕೆ, ಚಿಂತನೆಗೆ ಅರ್ಥವೇ ಇಲ್ಲ. ಕಿಮ್ಮತ್ತು ಅಸಲೇ ಇಲ್ಲ.

ಯೋಚಿಸಿ ನೋಡಿ. ನಮ್ಮ ಪ್ರಜಾಪ್ರಭುತ್ವ ನಾಯಿ ನರಿಗಳ ಪಾಲಾಗಿರುವುದು ನಮ್ಮಂಥವರಿಂದಲೇ ಹೊರತು ರಾಜಕಾರಣಿಗಳಿಂದ ಅಲ್ಲ. ನಾವು ಓದಬಲ್ಲೆವು.ಅರ್ಥ ಮಾಡಿಕೊಳ್ಳಬಲ್ಲೆವು. ಸ್ಪಂದಿಸಬಲ್ಲೆವು, ಗಾಂಧಿ- ಗೋಡ್ಸೆಯಿಂದ ಹಿಡಿದು ಖರ್ಗೆ ಕೃಷ್ಣರ ತನಕ ಎಲ್ಲವನ್ನೂ ಚರ್ಚಿಸಬಲ್ಲೆವು. ನಾವು ಬೆಳಗಿನ ಜಾವದಿಂದ ಇಳಿ ಸಂಜೆಯ ತನಕ ನಟ್ಟು ಕಡಿಯಬೇಕಾಗಿಲ್ಲ. ಮೂಟೆ ಹೊರಬೇಕಾಗಿಲ್ಲ. ಬರುತ್ತಿರುವುದು ಮಳೆಯೋ, ಕೃಷ್ಣ ಮಾಯೆಯಂಥ ಮೋಡ ಬಿತ್ತನೆಯೋ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳುವವರೂ ಅಲ್ಲ. ಮಳೆ ಬಾರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವವರೂ ಅಲ್ಲ. ನಾವು ಯವತ್ತೂ ಆರಕ್ಕೇರದ ಮೂರಕ್ಕಳಿಯದ ಅದೃಷ್ಟವಂತರು. ನಾವು ಮಧ್ಯಮ ವರ್ಗಿಗಳು ! ನಮಗೆ ಯೋಚಿಸಲು ಟೈಮಿದೆ. ಯೋಚಿಸುವಷ್ಟು ಬುದ್ಧಿಯಿದೆ. ಇರುವ ಬುದ್ಧಿಗೆ ಎಲ್ಲವನ್ನೂ ಅರ್ಥ ಮಾಡಿಕೊಳ್ಲುವ ಕೆಪ್ಯಾಸಿಟಿ ಇದೆ. ನೆನಪು ಮಾಡಿಕೊಳ್ಳಿ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧಿಯಿಂದ ಹಿಡಿದು ಕೊನೆಯ ಯೋಧನ ತನಕ- ಎಲ್ಲರೂ ಮಧ್ಯಮವರ್ಗದವರೇ. ನಮ್ಮ ಕವಿಗಳೂ ಅವರೇ. ಚಿಂತನಶೀಲ ಕ್ರಾಂತಿಕಾರಿಗಳೂ ಅವರೇ. ಕ್ಲರ್ಕುಗಳು, ಶಿಕ್ಷಕರು, ನಟರು, ಪತ್ರಕರ್ತರು, ಸಾಫ್ಟ್‌ವೇರ್‌ ಇಂಜಿನಿಯರ್‌ಗಳು, ಡ್ರೆೃವರ್‌ಗಳು- ಕಂಡಕ್ಟರ್‌ಗಳು, ವಕೀಲರು, ಗುಮಾಸ್ತರು- ಸಮಸ್ತರೂ ಮಧ್ಯಮವರ್ಗದವರೇ. ರಾಜ್ಯವಾಳುವ ಐಎಎಸ್‌ ಬಾಬುಗಳಿಂದ ಹಿಡಿದು ಡಿಕೇಶಿಯಂಥವನಿಗೆ ರೊಕ್ಕ ಹೊಡೆಯುವ ಐಡಿಯಾ ಹುಡುಕಿಕೊಡುವವನ ತನಕ ಎಲ್ಲೆಡೆಗೂ ಇರುವವರು ನಾವೇ !

ಭಾರತವು ಹಳ್ಳಿಗಳ ದೇಶ ಅಂತ ಏನೇ ಲಬ್ಬಗುಟ್ಟಿ ಬಾಯಿ ಬಡಿದುಕೊಂಡರೂ ನಾವಿದ್ದೇವಲ್ಲ ಮಧ್ಯಮವರ್ಗದವರು ? ನಮ್ಮನ್ನು ಬಿಟ್ಟು ದೇಶವಿಲ್ಲ.

ಆದರೆ ಮಿತ್ರರೇ, ನನ್ನದು ಒಂದೇ ಪ್ರಶ್ನೆ. ಇಷ್ಟೆಲ್ಲ ಕಡೆ ಇರುವವರು, ಇಷ್ಟೆಲ್ಲ ಮಾಡಬಲ್ಲವರು, ಚೈತನ್ಯ ಮತ್ತು ಟೈಮು ಎಲ್ಲವೂ ಉಳ್ಳವರು, ನಾವೇಕೆ ಒಂದೇ ಒಂದು ದಿನ ನಮ್ಮ ಜವಾಬ್ದಾರಿ ಮರೆಯುತ್ತೇವೆ ? ಬೆಳಗ್ಗೆಯಿಂದ ಸಂಜೆಯ ತನಕ ಟೈಮಿರುತ್ತದೆ. ಆವತ್ತು ರಜೆಯೂ ಇರುತ್ತದೆ. ನಮ್ಮ ಮನೆ ಆ ಜಾಗಕ್ಕೆ ಹತ್ತಿರವಾಗಿಯೂ ಇರುತ್ತದೆ. ಆದರೆ ನಾವೇಕೆ ಎದ್ದು ಹೋಗಿ ಓಟು ಹಾಕುವುದಿಲ್ಲ ? ನನ್ನ ಮಟ್ಟಿಗೆ ಇದು ಉತ್ತರ ಸಿಗದ ಪ್ರಶ್ನೆ.

ನಮ್ಮ ಬೀದಿಗೆ ದೀಪವಿಲ್ಲ ಎಂಬುದರಿಂದ ಹಿಡಿದು, ಪಾಕಿಸ್ತಾನಿ ಕೂಸು ನೂರ್‌ಗೆ ಕೊಟ್ಟ ಪಬ್ಲಿಸಿಟಿ ಅತಿಯಾಯಿತು ಎಂಬಲ್ಲಿಯ ತನಕ ಪತ್ರಿಕೆಗಳಿಗೆ ಓದುಗರ ಪತ್ರ ಬರೆಯುವವರು ಕೇವಲ ಮಧ್ಯಮವರ್ಗದವರು. ಜಾಗತೀಕರಣದ ಅನಾಹುತದಿಂದ ತಗೊಂಡು, ಸ್ವಾತಂತ್ರ್ಯೋತ್ಸವದ ದಿನ ಝಂಡಾ ಉಲ್ಟಾ ಹಾರಿಸಿದ್ದು ತಪ್ಪು ಅಂತ ಫರ್ಮಾನು ಹೊರಡಿಸುವವರೂ ಮಧ್ಯಮವರ್ಗದವರೇ. ಆಸ್ಪತ್ರೆಗಳಲ್ಲಿ ಕಂಪ್ಲೇಂಟ್‌ ಬಾಕ್ಸು , ಪತ್ರಿಕೆಗಳಲ್ಲಿ ಕಂಪ್ಲೇಂಟು ಕಾಲಮ್ಮು ತುಂಬಿಸುವವರೂ ನಾವೇ. ನಾವು ನಮ್ಮದೇ ಆದ ಟೈಲರು, ಬಾರ್ಬರು, ಹೊಟೇಲು, ಸಿಗರೇಟಿನ ಬ್ರ್ಯಾಂಡು, ಓದುವ ಪೇಪರು, ಪಂಥದ ಲೇಖಕ, ಹೀಗೆ ಎಲ್ಲವನ್ನೂ ಆಯ್ಕೆಯ ಒಬ್ಬ ಸಭ್ಯನನ್ನು ವಿಧಾನಸಭೆಗೆ ಕಳುಹಿಸುವುದಿಲ್ಲ ? ಅಕಸ್ಮಾತ್‌ ನಾವೆಲ್ಲ ಮಧ್ಯವರ್ಗದವರು ನಿರ್ಧರಿಸಿ ಮತಗಟ್ಟೆಯ ತನಕ ಹೋಗಿ ಓಟು ಹಾಕಿದ್ದೇ ಆದಲ್ಲಿ ‘ಈ ಸಲ ಲಿಂಗಾಯತರು ಕಾಂಗ್ರೆಸ್ಸಿಗಂತೆ’ ಅಂತಲೋ ‘ಕುರುಬರ ಓಟು ಜನತಾದಳಕ್ಕೇ’ ಅಂತಲೋ ಯಾರಿಗಾದರೂ ಮಾತನಾಡಲು ಸಾಧ್ಯವಾಗುತ್ತಿತ್ತಾ ?

ನೆನಪಿರಲಿ, ಐವತ್ತಾರು ವರ್ಷಗಳ ಕಾಲ ಒಂದು ಅತಿ ಮುಖ್ಯ ಜವಾಬ್ದಾರಿಯಿಂದ ತಪ್ಪಿಸಿಕೊಂಡ ಏಕೈಕ ಜನ ಸಮೂಹ ನಮ್ಮದು. ನಾವು ಮಧ್ಯಮ ವರ್ಗದವರು ! ನಮ್ಮ ದೇಶದ ರೈತರು ಓಟು ಹಾಕುತ್ತಾನೆ. ಕೂಲಿ ಹೆಂಗಸು, ನಿರಕ್ಷರಿ ವೃದ್ಧ, ಅಂಗವಿಕಲ ಬಡವ, ಕ್ಯಾಂಡಿಡೇಟಿನ ಹೆಸರೇ ಗೊತ್ತಿಲ್ಲದ ಅಮಾಯಕ- ಎಲ್ಲರೂ ಓಟು ಮಾಡುತ್ತಾರೆ. ನಾವೇಕೆ ಮಾಡುವುದಿಲ್ಲ ಹೇಳಿ ಸ್ವಾಮಿ ? ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಸಿನಿಮಾ ನೋಡುತ್ತೇವೆ. ಪಿಡ್ಝಾ ತಿನ್ನುತ್ತೇವೆ. ಶ್ರದ್ಧೆಯಿಂದ ಮೊಬೈಲಿನಿಂದ ಮೊಬೈಲಿಗೆ ಮೇಸೇಜು ಕಳಿಸುತ್ತೇವೆ. ದಿನವಿಡೀ ಕುಂತು ಕ್ರಿಕೆಟ್ಟು ನೋಡಿ, ‘ಷಾರ್ಜಾ ಮ್ಯಾಚಲ್ಲಿ ಏನಾಗಿತ್ತೋ ಅಂದ್ರೆ...’ ಅಂತ ರಣ ಭಾಷಣ ಹೊಡೆಯುತ್ತೇವೆ. ಆರೆಸ್ಸೆಸ್ಸಿಗೆ ಬಯ್ಯುತ್ತೇವೆ. ‘ಅಯ್ಯೋ ಅವರಿರೋದಕ್ಕೆ ಇನ್ನೂ ಈ ಮುಸಲ್ಮಾನರು ಕಂಟ್ರೋಲಲ್ಲಿದ್ದಾರೆ ಕಣ್ರೀ’ ಅಂತ ಸಿದ್ಧಾಂತ ಮಂಡಿಸುತ್ತೇವೆ. ‘ಏನೇ ಹೇಳಿ, ಅಮೆರಿಕಾದಲ್ಲಿರೋ ಸಿಸ್ಟಮ್ಮು ನಮ್ಮಲ್ಲಿ ಇಲ್ವೇ ಇಲ್ಲ’ ಅನ್ನುತ್ತೇವೆ. ನಾವು ಸ್ವಾಮಿಯಾಬ್ಬರ ‘ಮನಸ್ಸೇ ರಿಲ್ಯಾಕ್ಸ್‌ ಪ್ಲೀಸ್‌’ಕೂಡ ಓದುತ್ತೇವೆ. ಅವಕಾಶ ಸಿಕ್ಕಾಗ ಗುಟ್ಟಾಗಿ ಸೆಕ್ಸ್‌ ಪಿಕ್ಚರ್ರೂ ನೋಡುತ್ತೇವೆ. ಉಹುಂ, ಓಟು ಮಾತ್ರ ಹಾಕಲ್ಲ.

ಈ ಮಾತನ್ನು ನಾಳೆ ಮತದಾನವಿದೆ ಅನ್ನುವಾಗ ಆಡಿ ಪ್ರಯೋಜನವಿಲ್ಲ. ಚಿಕ್ಕದೊಂದು ಎಕ್ಸ್‌ಪರಿಮೆಂಟನ್ನು ಬೆಂಗಳೂರಿನ ಒಂದು ಏರಿಯಾದಲ್ಲಿ ಮಾಡಿ ನೋಡೋಣ ಅಂದುಕೊಂಡಿದ್ದೇನೆ. ಯಾವ ಪಕ್ಷಕ್ಕೂ ಸೇರದ ಒಂದಷ್ಟು ಜನ ಸಮಾನ ಮನಸ್ಕ ಹುಡುಗ- ಹುಡುಗಿಯರ ಗುಂಪು ಕಟ್ಟಿಕೊಂಡು ಮನೆ ಮನೆಗೂ ಹೋಗಿ, ಬೀದಿ ಬೀದಿಗಳಲ್ಲೂ ನಿಂತು, ಪ್ರತಿ ಆಫೀಸಿಗೂ ತಲುಪಿ ‘ಈ ಸಲ ಓಟು ಹಾಕಿ’ ಅಂತ ಹೇಳಿ ಬರೋದು. ಯಾರಿಗೆ ಹಾಕ್ತೀರಿ ಅಂತ ಕೇಳುವಂತಿಲ್ಲ. ಇಂಥವರಿಗೆ ಹಾಕಿ ಅಂತ ಹೇಳುವಂತಿಲ್ಲ. ದಯವಿಟ್ಟು ಅವತ್ತು ಮನೆಯಿಂದ ಹೊರಬೀಳಿ. ಮತಗಟ್ಟೆಗೆ ಬಂದು ಓಟು ಮಾಡಿ- ಅಂತ ಮಾತ್ರ ಹೇಳೋದು. ಅದನ್ನೊಂದು ವ್ಯವಸ್ಥಿತ ಅಭಿಯಾನವನ್ನಾಗಿ ಬೆಳೆಸೋದು. ಬರಲಿರುವ ಚುನಾವಣೆಗಳಲ್ಲಿ ಪ್ರತಿ ಮಧ್ಯಮವರ್ಗದ ಜೀವಿಯೂ ಮತ ಚಲಾಯಿಸುವ ಹಾಗೆ ನೋಡಿಕೊಳ್ಳುವುದು, ಈ ಎಕ್ಸ್‌ಪರಿಮೆಂಟು ಯಶಸ್ವಿಯಾದರೆ, ಅಲ್ಲಿಗೆ ಅರ್ಧ ಸಮಸ್ಯೆ ಮುಗಿದಂತೆಯೇ. ಬೆಂಗಳೂರಿನಲ್ಲಿ ಈ ಅಭಿಯಾನಕ್ಕೆ ಯಾವ ಪ್ರತಿಕ್ರಿಯೆ ಸಿಗುತ್ತೆ ಅಂತ ನೋಡಿಕೊಂಡು ನಿಮ್ಮೂರುಗಳಿಗೂ ಬಂದರೆ ಬಂದೆ. ಜೊತೆಗೆ ನೀವಿರುತ್ತೀರಲ್ಲ ? ನಂಗೊತ್ತು. ನಾವ್ಯಾರೂ ಲಿಂಗಾಯತರಲ್ಲ, ವಕ್ಕಲಿಗೆ, ಬ್ರಾಹ್ಮಣ, ಕುರುಬ, ಮುಸಲ್ಮಾನ, ಜೈನ, ಕ್ರೆೃಸ್ತ, ಉಹುಂ, ನಾವು ಅಕ್ಷರ ಬಲ್ಲವರು, ನಾವು ಮಧ್ಯಮ ವರ್ಗಿಗಳು.

( ಸ್ನೇಹ ಸೇತು : ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X