• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಸನದ ಬಯಲ ಮೂಲೆಯ ಡೇರೆಯಲ್ಲಿ ಅಣ್ಣನಂಥವನೊಂದಿಗೆ ಕುಳಿತು...

By Staff
|
Ravi Belagere on Thatskannada.com ರವಿ ಬೆಳಗೆರೆ
ಎಷ್ಟು ದಿನವಾದವು ಎಲ್ಲಿಗಾದರೂ ಹೋಗಿ! ಕಡೇ ಪಕ್ಷ, ದಿಲ್ಲಿಗೆ ಹೋಗಿ? ಈಗ ಹೋಗಬೇಕು ದಿಲ್ಲಿಗೆ, ಚಳಿ ತಾಕಿ ಬರಲಿಕ್ಕೆ. ನನ್ನ ಪರಮಗುರುವು ಹೇಗಿದ್ದಾರೋ ಗೊತ್ತಿಲ್ಲ. ಅವರ ಮನೆಯ ಅಗ್ಗಿಷ್ಟಿಕೆ, ಹೆಸರಿಲ್ಲದ ಬೆಕ್ಕುಗಳು, ಮುದಿಮುದಿ ಅಜ್ಜ, ಬ್ಲಾಕ್‌ಲೇಬಲ್‌ವಿಸ್ಕಿ, ರವೆ ರವೆ ತಂಬಾಕು ಬೆರೆತ ಪಾನ್‌ ಮಸಾಲಾ ಮತ್ತು ದೊಡ್ಡ ನಗೆ! ಮನಸ್ಸು ನಾಸ್ಟಾಲ್ಜಿಕ್‌ ಆಗುತ್ತದೆ. ಮೊದಲಿಂದಲೂ ನಾನು ಸೆಲೆಬ್ರೆಟಿಗಳನ್ನ, ದೊಡ್ಡವರು ಅನ್ನಿಸಿಕೊಂಡವರನ್ನ ಹತ್ತಿರದಿಂದ ನೋಡಲಿಕ್ಕೆ, ಮಾತನಾಡಿಸಲಿಕ್ಕೆ ಚಡಪಡಿಸಿದವನಲ್ಲ. ಕಲಾವಿದರ ವಿಷಯಕ್ಕೆ ಬಂದರೆ ಮಾತ್ರ ಕೊಂಚ ಆಸೆಬುರುಕನಾಗುತ್ತೇನೆ. ಅದಕ್ಕೆಂದೇ ಮೊನ್ನೆ ಇದ್ದ ಕೆಲಸವೆಲ್ಲ ಬಿಟ್ಟು ಹಾಸನಕ್ಕೆ ಹೋಗಿದ್ದುದು. ಒಂದು ಸಲ ಉಷಾ ಉತ್ತುಪ್‌ಳನ್ನ ಭೇಟಿಯಾಗಿ ಮಾತನಾಡಿಸಬೇಕಿತ್ತು. ಆಕೆಯದೊಂದು ತೆರನಾದ ಆಮೇಜಿಂಗ್‌ ವ್ಯಕ್ತಿತ್ವ. ಆಕೆಯ ಹಾಡು, ಅವುಗಳ ಜಾಯಮಾನಗಳಿಗೂ ಆಕೆಯ ದಿರಿಸು, ಮುಖಭಾವಗಳಿಗೂ ಸಂಬಂಧವೇ ಇಲ್ಲ. ಮೈಕ್ರೋ ಮಿನಿ ಸ್ಕರ್ಟು ಹಾಕಿದ ಹುಡುಗಿ ಚಕ್ಕಂಬಕ್ಕಳ ಹಾಕಿ ಕುಳಿತು ದೇವರನಾಮ ಹಾಡಿದಂತೆ! ಪಾಪ್‌ ಹಾಡುವ ಉಷಾ ಅಪ್ಪಟ ರೇಶಿಮೆ ಸೀರೆಯುಟ್ಟು, ರುಪಾಯಗಲದ ಕುಂಕುಮವಿಟ್ಟುಕೊಂಡು, ತನ್ನ ಕಾಲು ಪೋಲಿಯೋದಿಂದ ಬಳಲಿದೆ ಎಂಬುದನ್ನೆಲ್ಲೂ ತೋರಗೊಡದೆ ಖುಷ್ಷಿಯಾಗಿ ಮೈಕೇಲ್‌ಜಾಕ್ಸನ್‌ಗಿಂತ ಚೆಂದಾಗಿ ಹಾಡುತ್ತಾಳೆ, ಕುಣಿಯುತ್ತಾಳೆ, ಕುಣಿಸುತ್ತಾಳೆ.

S. P. Balasubramaniam : Great Singer, Great Personಅವತ್ತು ಆಕೆ, ಎಸ್ಪಿ ಬಾಲಸುಬ್ರಹ್ಮಣ್ಯಂ, ಚಿತ್ರ, ಹರಿಹರನ್‌ ಮುಂತಾದವರೆಲ್ಲರ ಜೊತೆಗೆ ನನ್ನನ್ನು ‘ಈ ಟೀವಿ’ಯವರು ವೇದಿಕೆಯ ಹಿಂದಿದ್ದ ಗ್ರೀನ್‌ರೂಮಿನಲ್ಲಿ ಕೂಡಿಸಿದ್ದರು. ನನ್ನ ಪಕ್ಕದಲ್ಲಿ ಅರ್ಚನಾ ಉಡುಪ ಕೂತಿದ್ದಳು. ಅಷ್ಟೆಲ್ಲ ದೊಡ್ಡ ಗಾಯಕರ ಜೊತೆಯಲ್ಲಿ ನಾನೂ ಹಾಡುತ್ತಿದ್ದೇನೆಲ್ಲಾ ಎಂಬ ಸಂಭ್ರಮ ಅವಳದು. ಅರ್ಚನಾ ಉಡುಪ ನನ್ನನ್ನು ‘ಚಿಕ್ಕಪ್ಪ ’ ಅಂತ ಕರೆಯುತ್ತಾಳೆ. ಕೂಸಿನ್ನ ಬಿಟ್ಟು ಕಾರ್ಯಕ್ರಮಗಳಿಗೆ ಬರೋದೆಲ್ಲ ಎಷ್ಟು ಕಷ್ಟ ಅಂತ ವಿವರಿಸುತ್ತಿದ್ದಳು. ನಾವು ಕನ್ನಡದಲ್ಲೇ ಮಾತನಾಡುತ್ತಿದ್ದೆವಾದರೂ, ನನ್ನ ಪಕ್ಕದ ಕುರ್ಚಿಯಲ್ಲಿದ್ದ ಉಷಾ ಉತ್ತುಪ್‌ಗೆ ನಾವು ಮಗುವಿನ ಬಗ್ಗೆ ಏನೋ ಮಾತಾಡ್ತಿದೀವಿ ಅನ್ನಿಸಿ,‘ಏನು ವಿಷ್ಯ?’ಅಂತ ಕೇಳಿದರು.

ಏನಿಲ್ಲ , ಅವಳೇ ನನ್ನ ದೃಷ್ಟೀಲಿ ಇನ್ನೂ ಚಿಕ್ಕವಳು. ಇವಳಿಗಾಗಲೇ ಒಂದು ಕೂಸು. ಅದನ್ನ ಸಂಭಾಳಿಸಬೇಕಲ್ಲ ? she is a young mother... ಅಂದೆ. ಘಲ್ಲನೆ ನಕ್ಕರು ಉಷಾ.

I’m a young grand mother! ನಾನು ಚಿಕ್ಕ ವಯಸ್ಸಿನ ಅಜ್ಜಿ ಗೊತ್ತಾ ? ಮೊಮ್ಮಕ್ಕಳನ್ನು ಬಿಟ್ಟು ಬರೋದು ಎಷ್ಟು ಕಷ್ಟ ಅಂತ ನನ್ನ ಕೇಳು ಹೇಳ್ತೀನಿ. ನನ್ನ ಒಂದು ಮೊಮ್ಮಗುವಿಗೆ ಏಳು ವರ್ಷ. ಇನ್ನೊಂದಕ್ಕೆ ಈಗ ನಾಲ್ಕು ತಿಂಗಳು. ಅದನ್ನ ನೋಡಕ್ಕೆ ಅಂತಲೇ ಈಗ ಕೊಚ್ಚಿನ್‌ಗೆ ಹೋಗ್ತಿದೀನಿ... Young grand mother... ಅಂದು ಗಲಗಲನೆ ನಗತೊಡಗಿದಾಗ ನನಗೆ ಆಕೆಯೇ ‘ಮಗು’ ಅನ್ನಿಸಿದಳು.

ಆದರೆ ನಿಜಕ್ಕೂ ದೊಡ್ಡ ಮನುಷ್ಯ ಅನ್ನಿಸಿದ್ದು ಎಸ್ಪಿ ಬಾಲಸುಬ್ರಹ್ಮಣ್ಯಂ. ಅವರನ್ನು ನಾನು ಮುಖತಃ ಭೇಟಿಯಾಗಿ ಎಂಟು ವರ್ಷಗಳಾಗಿವೆ. ಪತ್ರಿಕೆಯ ಎರಡನೇ ವರ್ಷದ ವಾರ್ಷಿಕೋತ್ಸವಕ್ಕೆ ಅವರು ಅತಿಥಿಯಾಗಿ ಬಂದಿದ್ದರು. ಅನಂತರ ಒಂದೆರಡು ಸಂದರ್ಭದಲ್ಲಿ ಇಬ್ಬರೂ ಫೋನ್‌ನಲ್ಲಿ ಮಾತನಾಡಿಕೊಂಡಿದ್ದು ಬಿಟ್ಟರೆ ಬಾಲು ನನ್ನನ್ನು ಗುರುತಿಟ್ಟುಕೊಳ್ಳಲು ಕಾರಣವೇ ಇಲ್ಲ. ಆದರೆ ಎದುರಿಗೆ ಸಿಕ್ಕ ತಕ್ಷಣ,

‘ಕುಲಾಸಾನಾ? (ಚೆನ್ನಾಗಿದ್ದೀರಾ?) ಪತ್ರಿಕೆ ಹೇಗೆ ನಡೀತಿದೆ. ಹುಶಾರು ಮಾರಾಯಾ, ದುಷ್ಟರ ಸಹವಾಸ. ವಿಪರೀತ ಶತ್ರುಗಳನ್ನ ಕಟ್ಟಿಕೊಂಡಿದ್ದೀಯ. ಟೀವಿ ಪ್ರೋಗ್ರಾಮಿನಲ್ಲೂ ದುಷ್ಟರ ಬಗ್ಗೆನೇ ಮಾತಂತೆ ....’ ಅಂತ ಮಾತನಾಡತೊಡಗಿದವರು ಅದೆಷ್ಟು ಹೊತ್ತು ಹಾಗೆ ಕುಳಿತಿದ್ದೆವೋ! ಮನುಷ್ಯನನ್ನು ಪಾಂಡಿತ್ಯ, ಗೆಲುವು, ಅಛೀವ್‌ಮೆಂಟುಗಳು ಮತ್ತಷ್ಟು ಮತ್ತಷ್ಟು ಮಾಗಿಸುತ್ತವೆ ಅಂತಾರೆ. ಎಸ್ಪಿಯನ್ನು ನೋಡಿದಾಗ ಹಾಗನ್ನಿಸಿತು. ಅವರಿಗೀಗಾಲೇ ಐವತ್ತೆಂಟು ವರ್ಷವಂತೆ. ಮೂವತ್ತಾರು ಸಾವಿರ ಹಾಡುಗಳನ್ನು ಹಾಡಿದ್ದಾರೆ. ಕನ್ನಡದ ಜನ ನನ್ನನ್ನು ಸ್ವೀಕರಿಸಿದ್ದು ಎಂಥ ಪುಣ್ಯ ಮಾರಾಯಾ ಎಂಬಂತೆ ಮಾತನಾಡುತ್ತಾರೆ. ಅದಲ್ಲ ನನಗೆ ಆಶ್ಚರ್ಯವಾಗಿದ್ದು :

ಬಾಲು ಅಣ್ಣಾ, ನೀವು ಪ್ರವರ್ಧಮಾನಕ್ಕೆ ಬಂದದ್ದು 1966ರ ಸುಮಾರಿಗಲ್ವೆ? ತೆಲುಗಿನಲ್ಲಿ ಆಗ ‘ರಂಗುಲ ರಾಟ್ನಂ’ ಸಿನಿಮಾ ಬಂದಿತ್ತು. ಅದರಲ್ಲಿ ಚಂದ್ರಮೋಹನ್‌ ಅಂತ ಒಬ್ಬಅದ್ಭುತ ನಟ ರಾಷ್ಟ್ರಪತಿ ಪದಕ ತಗೊಂಡಿದ್ದ...’ ಎನ್ನುತ್ತಿದ್ದಂತೆಯೇ,

‘ರವೀ, ಆ ಚಂದ್ರಮೋಹನ್‌ ನನ್ನ ಸೋದರ. ಫಸ್ಟ್‌ ಕಸಿನ್‌. ನಾನು, ಚಂದ್ರಮೋಹನ್‌ ಮತ್ತು ವಿಶ್ವನಾಥ್‌ ಒಟ್ಟಿಗೇ ಬಂದವರು. ನಿಂಗೆ ‘ಕನ್ನ ವಯಸು’ ಸಿನೆಮಾ ನೆನಪಿದೆಯಾ ? ಕನ್ನಡದ ‘ಗಾಂಧೀನಗರ’ ಸಿನೆಮಾದ ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೇ... ಹಾಡು ತೆಲುಗಿನಲ್ಲಿ ‘ಏ ದಿವಿಲೋ ವಿರಿಸಿನ ಪಾರಿಜಾತವೋ’ ಆಗಿತ್ತು. ನಂಗೆ ಬ್ರೇಕ್‌ ಕೊಟ್ಟದ್ದೇ ಅದು. ಅವತ್ತಿನ ತನಕ ಯಾರೋ ಬಾಲು ಅಂತ ಹಾಡ್ತಾನಂತೆ ಅಂತಿದ್ದರು ಜನ. ಆ ಹಾಡು ಜನ ಕೇಳಿದ ಮೇಲೆ ನಂಗೆ ನನ್ನದೇ ಸ್ಥಾನ ಸಿಕ್ಕಿತು...’ ಬಾಲು ಮಾತಾಡುತ್ತ ಹೋದರು. ಅಷ್ಟೇ ಅಲ್ಲ. ಪಕ್ಕದಲ್ಲಿ ಕುಳಿತು, ನನ್ನ ಹೆಗಲ ಮೇಲೆ ಕೈ ಹಾಕಿ ‘ಏ ದಿವಿಲೋ ವಿರಿಸಿನ ಪಾರಿಜಾತವೋ’ ಹಾಡಿನ ಪಲ್ಲವಿಯನ್ನು ಪೂರ್ತಿಯಾಗಿ ಹಾಡಿಯೂ ಬಿಟ್ಟರು.

ಯಾಕೋ ಕಣ್ಣು ತುಂಬಿ ಬಂದವು. ಅಷ್ಟು ದೊಡ್ಡ ಗಾಯಕ ಹಾಸನದ ಆ ಮೈದಾನದ ಮೂಲೆಯ ಗ್ರೀನ್‌ರೂಮಿನಲ್ಲಿ ಕುಳಿತು ಆ ಅನಾಮಧೇಯ ಮಿತ್ರನಿಗಾಗಿ ಅದನ್ನೆಲ್ಲ ಯಾಕೆ ಹಾಡಬೇಕು? ಅದಷ್ಟೆ ಅಲ್ಲ : ‘ಕನ್ನೆ ವಯಸು’ ಸಿನಿಮಾದ ಆ ಹಾಡು ನನ್ನ ನೆರಿಗೆ ಲಂಗದ ಹುಡುಗಿಯಾಂದಿಗೆ ನಾನು ಕಳೆದ ಅಷ್ಟೆಲ್ಲ ವರ್ಷಗಳ ಕಹಿ ಸಿಹಿ ಬದುಕಿನ ನೆನಪುಗಳಿಗೆ ಒಂದು ತಾಮ್ರಪತ್ರದಂತಹುದು. ಬಳ್ಳಾರಿಯ ಮುಬಾರಕ್‌ ಥೇಟರಿನಲ್ಲಿ ನಾನೊಬ್ಬನೇ ಕುಳಿತು‘ಕನ್ನೆ ವಯಸು’ ಸಿನಿಮಾ ನೋಡಿದ್ದೆ. ಅದರ ನಾಯಕಿ ರೋಜಾ ರಮಣಿ. ಲಂಗ ಜಾಕೀಟಿನ ಸಂಪ್ರದಾಯವಿದ್ದ ದಿನಗಳವು. ಮುಂದೆ ಎಷ್ಟೋ ಸಲ ಆಕೆಯನ್ನು ನಾನು ನೋಡಿದಾಗ ಸೀರೆ ಉಟ್ಟಿದ್ದಳು, ನೈಟಿ ಹಾಕಿದ್ದಳು. ಆದರೆ ನನ್ನ ಕಣ್ಣಲ್ಲಿ ಇವತ್ತಿಗೂ ಚಿತ್ರವಾಗಿ ಉಳಿದಿರುವುದು, ಅದೇ ಕಡು ಹಸಿರು ನೆರಿಗೆ ಲಂಗ, ಬಿಳೀ ಜಾಕೀಟು. ಅಲ್ಲಿ ಇಲ್ಲಿ ಚಿಲ್ಲರೆ ಜೋಡಿಸಿ, ಅರವತ್ತು ಪೈಸೆ ಕೊಟ್ಟಿದ್ದೆ ; ಹತ್ತತ್ತು ಪೈಸೆಗಳ ಆರು ಬಿಳ್ಳೆ. ‘ಕನ್ನೆ ವಯಸು’ ನೋಡಿ ಬಾ ಅಂತ. ಆ ಮೇಲೆ ತುಂಬ ವರ್ಷ ಅವಳು ಆ ಹಾಡನ್ನು ನನಗೋಸ್ಕರ ಹಾಡುತ್ತಿದ್ದಳು: ಹೊಸ ಹಾಡಿನ ಹಂಬಲು ಹಾಯುವ ತನಕ.

ಹಾಗೆ ಬಾಲು ಪಕ್ಕದಲ್ಲಿ ಕೂತು ಹಾಡುತ್ತಿದ್ದರೆ ಇನ್ನೊಂದು ಹಾಡು ತೀರ ಗಂಟಲಿಗೆ ಬಂದು ಅಲ್ಲೇ ಅಟಿಯುತ್ತಿತ್ತು. ನನಗೆ ಹಾಡು ಗೊತ್ತು. ಅದರ lyric ಗೊತ್ತು. ರಾಗವೂ ಗೊತ್ತು. ಆದರೆ ಎಸ್ಪಿಯಂಥ ಮಹಾನ್‌ ಗಾಯಕನ ಪಕ್ಕದಲ್ಲಿ ಕೂತು ಅದನ್ನು ಗುನುಗಿ ತೋರಿಸುವುದಾದರೂ ಹೇಗೆ ? ಧೈರ್ಯವಾಗಲಿಲ್ಲ. ಎರಡು ಸಾಲು lyric ಹೇಳಿದೆ.‘ ಓ ಅದಾ’ ಅಂದವರೇ ಗುನುಗ ತೊಡಗಿದರು:

‘‘ಚಿಲಿಪಿ ನವ್ವುಲ

ನಿನು ಚೂಡಗಾನೇ

ವಲಪು ಪೊಂಗಿಂದಿ

ನಾಲೋನೇ......’’

ಹಾಗೆ ಹಾಸನದ ಮೈದಾನದ ಮೂಲೆಯ ಡೇರೆಯಲ್ಲಿ ಕುಳಿತು ಎಸ್ಪಿಯ ಹಾಡು ಕೇಳುತ್ತಿದ್ದಾಗಲೇ ರಾಮಚಂದ್ರ ಚಿತಲಕರ್‌ರ ಬಗ್ಗೆ ಚರ್ಚೆ ಬಂದಿದ್ದು. ಅದನ್ನು ಆರಂಭಿಸಿದ್ದೂ ಎಸ್ಪಿಯೇ.‘ಎಷ್ಟು ಒಳ್ಳೆಯ ಸಂಗೀತ ನಿರ್ದೇಶಕ ಆತ. ನಂಗೆ, ಪಿ.ಸುಶೀಲ ಅವರಿಗೆ ಎದುರಾ ಎದುರು ಕೂತು ಧಾಟಿ ಹೇಳಿಕೊಡುತ್ತಿದ್ದರು. ಕೈಯಲ್ಲಿ ಹಾರ್ಮೋನಿಯಮ್ಮು. ಆದರೆ ಅದರ ಮೇಲೆ ಅವರ ಬ್ರಾಂದಿ ತುಂಬಿದ ಲೋಟ ಇರುತ್ತಿತ್ತು. ಎಷ್ಟೇ ಗುರುವು ಅಂದುಕೊಂಡರೂ... ಹಾರ್ಮೋನಿಯಂ ಮೇಲೆ ಬ್ರಾಂದಿ... ಉಹುಂ !’ ಅಂದರು ಎಸ್ಪಿ.

ಮತ್ತೆ ನನ್ನ ನೆನಪುಗಳು ಗತಕ್ಕೆ ತಿರುಗಿದವು. ಎದುರಿಗೆ ಎರಡೆರಡು ಕ್ವಾರ್ಟರು ಸರಾಯಿ ಇಟ್ಟುಕೊಂಡು ನಾನು ಮತ್ತು ಧಾರವಾಡದ ಮಿಶ್ರ ಸುರೇಶ್‌ ಕುಲಕರ್ಣಿ ಇದೇ ಸಿ.ರಾಮಚಂದ್ರರ ಬಗ್ಗೆ ಅದೆಷ್ಟು ಮಾತನಾಡುತ್ತಿದ್ದೇವೋ? ಹಿಂದಿ ಚಿತ್ರರಂಗ ಕಂಡ ಅನೇಕ ವಿಕ್ಷಿಪ್ತ ಕಲಾ ಪ್ರತಿಭೆಗಳ ಪೈಕಿ ಸಿ.ರಾಮಚಂದ್ರನೂ ಒಬ್ಬ.‘ಅನಾರ್ಕಲಿ’ ಸಿನಿಮಾದ ‘ಅಲ್‌ವಿದಾ....ಅಲ್‌ವಿದಾ.....’ ಹಾಡನ್ನು ರಾತ್ರಿಯಿಡೀ ಹಾಡಿಕೊಂಡ ತಲೆಮಾರು ನಮ್ಮದು. ಅಂಥ ಅದ್ಭುತ ಸಂಗೀತ ಸೃಷ್ಟಿಸಿದ ಸಿ.ರಾಮಚಂದ್ರ ಖುದ್ದಾಗಿ ಹಾಡುತ್ತಲೂ ಇದ್ದ. ಹಾಡುವಾಗ ಹೆಸರು ಬದಲಿಸಿಕೊಂಡು ‘ಚಿತಲ್ಕರ್‌’ ಅಂತ ಇಟ್ಟುಕೊಳ್ಳುತ್ತಿದ್ದ. ಒಮ್ಮೆ ಆತನ ಗುರುವೊಬ್ಬ ಎಲ್ಲೋ ಒಂದು ಹಾಡು ಕೇಳಿಬಂದು ‘ಎಂಥ ಛಂದಾಗಿ ಹಾಡುತ್ತಾನೆ ನೋಡು, ಅವನ್ಯಾರೋ ಚಿತಲ್ಕರ್‌ ಅಂತೆ. ನೀನೂ ಇದ್ದೀ, ಏನುಪಯೋಗ’ ಅಂತ ಸಿ.ರಾಮಚಂದ್ರರನ್ನ ಬೈದಿದ್ದನಂತೆ. ಸಿ.ರಾಮಚಂದ್ರ ‘ಕಿಕ್‌ ಚಾಕೊಲೇಟ್‌’ ಎಂಬ ವಿಚಿತ್ರ ಹೆಸರಿನಲ್ಲೂ ಒಂದೆರಡು ಚಿತ್ರಗಳಿಗೆ ಸಂಗೀತ ಮಾಡಿದ್ದ. ಚಿತ್ರರಂಗಕ್ಕೆ ನಟನಾಗಬೇಕು ಅಂದುಕೊಂಡು ಬಂದು, ಏನೇನೋ ಆಗಿ, ಕಡೆಗೆ ಏನೂ ಆಗದೆ ಬದುಕನ್ನಷ್ಟೂ ಬಾಟಲಿಗೆ ಸುರುವಿ ಸತ್ತು ಹೋದ ಅಮರ ಕಲಾವಿದ ಆತ.

ಚಿತಲ್ಕರ್‌ ಒಬ್ಬರೇ ಯಾಕೆ, ನೀವು ಭೂಪೇನ್‌ ಹಜಾರಿಕಾ ಕುಡಿಯೋದನ್ನ ನೋಡಬೇಕು. ಬೆಳಿಗ್ಗೆ ಸ್ಟುಡಿಯೋಗೆ ಬಂದ ಕೂಡಲೇ ಹಾಯ್‌ ಉಷಾ... ಹೇಂಗಿದ್ದೀ ಅಂತೆಲ್ಲ ಮಾತಾಡುತ್ತಿರುತ್ತಾರೆ, fresh ಆಗಿ. ಹತ್ತು ಗಂಟೆಯಾಗಲಿಕ್ಕಿಲ್ಲ : ಟಾಯ್ಲೆಟ್‌ನೊಳಕ್ಕೆ ಹೋಗಿ, ಕಿಸೆಯಿಂದ ಬಾಟಲಿ ತೆಗೆದು, ಎರಡು ಗುಕ್ಕು ಏರಿಸಿಬಿಡುತ್ತಾರೆ. ಆ ಮೇಲಿನ ಅವರ ಲಹರಿಯೇ ಬೇರೆ, ಧಾಟಿಯೇ ಬೇರೆ. ಅಷ್ಟಾದರೂ he is a nice person ಅಂತ ದನಿಗೂಡಿಸಿದಳು ಉಷಾ.

ನಾನು ಅಪ್ಪಗೆರೆ ತಿಮ್ಮ ರಾಜುವಿನಿಂದ ಹಿಡಿದು ಭೀಮಸೇನ ಜೋಶಿಯವರ ತನಕ ಈ ಹಾಡಿನ ಲಹರಿಯ ಮಂದಿ ಧಾರಾಕಾರವಾಗಿ ಕುಡಿಯುವುದನ್ನು ನೋಡಿದ್ದೇನೆ. ಅವರು ಹಾಗೆ ಕುಡಿಯುತ್ತಾರೆಂಬುದಕ್ಕೇ ಹಾಡುತ್ತಾರಾ? ಅಥವಾ ಹಾಗೆ ಹಾಡಲೆಂದೇ ಕುಡಿಯುತ್ತಾರಾ? ಗೊತ್ತಿಲ್ಲ. ಯಾಕೆ ಈ ಹಾಡು, ಬರವಣಿಗೆ, ಚಿತ್ರಕಲೆ, ನಟನೆ- ಇವೆಲ್ಲ ಕುಡಿತದೊಂದಿಗೆ ಈ ಪರಿ ತಳುಕು ಹಾಕಿಕೊಂಡಿದೆಯೋ ಗೊತ್ತಿಲ್ಲ . ಆದರೆ ಕುಡಿಯದೇ ಇದ್ದ ಕಾಲದಲ್ಲೇ ನಾನು ಚೆನ್ನಾಗಿ ಬರೆದೆ, ಅಷ್ಟು ಗೊತ್ತು.

ಹಾಸನದಿಂದ ಹಿಂತಿರುಗಿದ ಎಷ್ಟೋ ದಿನಗಳ ನಂತರವೂ ನನ್ನ ಮನಸ್ಸಿನಿಂದ ಎಸ್ಪಿ ಬಾಲಸುಬ್ರಹ್ಮಣ್ಯಂ ಕದಲುತ್ತಿಲ್ಲ. ಅವರ ಜೊತೆಯಲ್ಲೇ ಇದ್ದ ಹರಿಹರನ್‌ ನನ್ನನ್ನು ಅಷ್ಟಾಗಿ ಇಂಪ್ರೆಸ್‌ ಮಾಡಲಿಲ್ಲ. ಆತನ ಗಝಲುಗಳಾದರೂ ಅಷ್ಟೇ. ಆರಂಭದ ದಿನಗಳಲ್ಲಿ ಹಾಡಿದಂಥವು ಕೆಲವು ಚೆನ್ನಾಗಿದ್ದವು. ಆ ನಂತರದ್ದವೆಲ್ಲ ಮೊನಾಟನಿಗಳೇ. ತುಂಬ ವರ್ಷ ಒಂದೇ ದನಿ ಕೇಳುವುದು ಕಷ್ಟ . ಎಲ್ಲೋ ಒಬ್ಬ ಕಿಶೋರ್‌, ಒಬ್ಬ ಎಸ್ಪಿ, ಒಬ್ಬ ಆಶಾ ಭೋಂಸ್ಲೆ ಥರದವರು ಮಾತ್ರ ಅಂಥದೊಂದು ವೈವಿಧ್ಯತೆಯನ್ನು ಕಾಯ್ದುಕೊಂಡು ಬರುತ್ತಾರೆ. ಅಷ್ಟು ಸಾವಿರ ಸಲ ಕೇಳಿದರೂ ನನಗೆ ಕನ್ನಡದ ‘ಬೆರೆತ ಜೀವ’ ಚಿತ್ರದ ‘ನನ್ನ ಧಾಟಿಯ ನೀನರಿಯೇ’ ಹಾಡು ಬೋರಾಗುವುದಿಲ್ಲ. ‘ಆನಂದ ಕಂದ ’ ಚಿತ್ರದ ‘ನೀನಿದ್ದರೇನು ಹತ್ತಿರ’ ಹಾಡು ಕೇಳಿದರೆ ಕಂಪಿತನಾಗುತ್ತೇನೆ. ನಮ್ಮ ಮನೆಯ ಸದಸ್ಯೆಯೇ ಆಗಿ ಹೋಗಿರುವ ಗಾಯಕಿ ಬಿ.ಆರ್‌.ಛಾಯಾ ಎದುರಿಗೆ ಸಿಕ್ಕರೆ ಸಾಕು ‘ಅದೊಂದು ಹಾಡಿ ಬಿಡವ್ವಾ..’ ಅಂತ ಗಂಟು ಬೀಳುತ್ತೇನೆ. ಈ ಹಳೆಯ ಹಾಡುಗಳ ಹುಚ್ಚಿಗೆ ಇತ್ತೀಚೆಗೆ ಸಿಕ್ಕಿರುವ ವೇದಿಕೆಯೆಂದರೆ ‘ಈ ಟೀವಿ’. ಈಗ್ಗೆ ಮೂರು ತಿಂಗಳ ಕೆಳಗೆ ‘ಎಂದೂ ಮರೆಯದ ಹಾಡು’ ಅಂತ ‘ಈ ಟೀವಿ’ಗಾಗಿ ಒಂದು ಕಾರ್ಯಕ್ರಮ ಮಾಡಿಕೊಟ್ಟೆ. ಅದು ನವೆಂಬರ್‌ 1ರಂದು telecast ಆಯಿತು.

ಕ್ರೆೃಂ ಡೈರಿಯಲ್ಲಿ ಆ ಪರಿ ಆರ್ಭಟಿಸುವ ರವಿ ಬೆಳಗೆರೆ ಮಧುರವಾದ ಹಾಡುಗಳ ಕಾರ್ಯಕ್ರಮವನ್ನ ಹೀಗೆಲ್ಲ ಅಂತ ಯಾರೋ ಕಾಮೆಂಟ್‌ ಮಾಡಿದರಂತೆ.

ಅವರಿಗೆ ಗೊತ್ತಿಲ್ಲ. ಈ ಹಾಡುಗಳಲ್ಲೇ ಕಳೆದುಹೋಗಿ ಬದುಕಿನ ಎಲ್ಲವನ್ನೂ ಮರೆತಿದ್ದ ಕಾಲವೊಂದಿತ್ತು. ಆಗ ನನ್ನನ್ನು ನೋಡಿದವರು ಕ್ರೆೃಂ ಡೈರಿ ನೋಡಿದರೆ, ಅಷ್ಟು ಮಧುರವಾದ ಹಾಡುಗಳಲ್ಲಿ ಅಲೆಯುತ್ತಿದ್ದ ಆ ಹುಡುಗ ಇದೆಲ್ಲಿಂದ ಬಂದ ಕ್ರೆೃಮು ಸಾಮ್ರಾಜ್ಯದೊಳಕ್ಕೆ ಅನ್ನುತ್ತಾರೆ! ಬದುಕು ಹೇಗೂ ಬದಲಾಗಬಹುದು. ಯಾವತ್ತೋ ಒಂದು ದಿನ ಕ್ರೆೃಮೆಲ್ಲ ಮುಗಿದು ಹೋಗಿ ಹಾಡಷ್ಟೆ ಉಳಿಯಬಹುದು.

ಅಂದ್ಹಾಗೆ, ಮತ್ತೆ ‘ಎಂದೂ ಮರೆಯದ ಹಾಡು’ ಕಾರ್ಯಕ್ರಮ ಏರ್ಪಡುವ ಸೂಚನೆಗಳಿವೆ. ‘ಈ ಸಲ mostly ಮೈಸೂರಿನಲ್ಲಿ ಮಾಡೋಣ ಅಂದ್ಕೊಂಡಿದೀನಿ’ ಅಂದರು ಈ ಟೀವಿಯ ಹಿರಿಯ ಮಿತ್ರರಾದ ಸೂರಿ. ಬರಲಿರುವ ವ್ಯಾಲಂಟೈನ್ಸ್‌ ಡೇ ದಿವಸ ಅದು telecast ಆದದ್ದೇ ಆದರೆ - ಹಳೆಯ ಪ್ರೇಮಗೀತೆ, ವಿರಹಗೀತೆ, ದಾಂಪತ್ಯ ಗೀತೆ, ಯುಗಳ ಗೀತೆಗಳ ಭರ್ಜರಿ ಸಂಭ್ರಮ. ನಾನು ಈಗಾಗಲೇ ಗುನುಗುನಿಸುತ್ತಿದ್ದೇನೆ:

ನೀ ಮೊದಲು ಮೊದಲು

ನನ್ನ ನೋಡಿದಾಗಾ

ಏನು ಹೇಳಿತೂ.....

(ಸ್ನೇಹಸೇತು : ಹಾಯ್‌ ಬೆಂಗಳೂರ್‌!)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more