• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೇಹಕ್ಕೆ ಬಲು ಬೇಗ ಮರೆವು ಬರುತ್ತದೆ ಗೊತ್ತಾ ?

By Staff
|
Ravi Belagere on Thatskannada.com ರವಿ ಬೆಳಗೆರೆ
ಅವರಿಬ್ಬರೂ split ಆದರು. ಅವರಿಬ್ಬರ ಮಧ್ಯೆ ದೇಹ ಸಂಬಂಧ ಇರಲಿಲ್ಲ. ಇವರು ಹಾಗಲ್ಲ. ಇಬ್ಬರಲ್ಲೂ ದೈಹಿಕ ಸಂಬಂಧವಿದೆ. split ಆಗಿಬಿಡುವ ಆಗಲೇಬೇಕಾದ, ಇನ್ನೇನು ಆಗಿಯೇ ಹೋಯಿತು ಅಂತ ಅಂದುಕೊಂಡು ಬಿಡುವ ಹಂತಕ್ಕೆ ಅನೇಕ ಸಲ ಬಂದಿದ್ದಾರೆ. ಆದರೆ split ಆಗುತ್ತಿಲ್ಲ. ಯಾಕೆ ? ಇವರಿಬ್ಬರನ್ನೂ ಬೇರೆಯಾಗದಂತೆ, ತೊರೆದು ಹೋಗದಂತೆ ಕಾಯುತ್ತಿರುವುದು ದೇಹ ಸಂಬಂಧವೇನಾ ?‘ಅವನೊಂದಿಗೆ ದೈಹಿಕ ಸಂಬಂಧವೊಂದನ್ನು ಇಟ್ಟುಕೊಳ್ಳದೇ ಹೋಗಿದ್ದಿದ್ದರೆ, ಯಾವತ್ತೋ ಬಿಟ್ಟು ಹೋಗಿಬಿಡುತ್ತಿದ್ದೆ.’ ಅಂತ ಮಾತನಾಡುವ ಅನೇಕ ಹೆಂಗಸರನ್ನು ನಾನು ನೋಡಿದ್ದೇನೆ. ಅಂತೆಯೇ ಸಂಬಂಧ ಬಿಟ್ಟು ಕೊಡಲಾಗದೆ, ಒಬ್ಬೇ ಹೆಂಗಸಿಗೆ (split ಆಗಲು ಸಾಕಷ್ಟು ಕಾರಣಗಳಿದ್ದಾಗ್ಯೂ) ಅಟ್ಯಾಚ್‌ಡ್‌ ಆಗಿರುವ ಗಂಡಸರನ್ನೂ ನೋಡಿದ್ದೇನೆ. ಹಾಗೆ ದೈಹಿಕ ಸಂಬಂಧ ಇಟ್ಟುಕೊಂಡ ನಂತರ ಅವರು ಬೇರೆಯಾಗಲಿಕ್ಕೆ ತುಂಬ ಕಷ್ಟಪಡಬೇಕಾಗುತ್ತದೆ. ಉಳಿದೆಲ್ಲ ತರಹದ ಸಂಬಂಧಗಳನ್ನು ಕತ್ತರಿಸಿಕೊಂಡಷ್ಟು ಸುಲಭವಾಗಿ, ದೇಹ ಸಂಬಂಧವಿದ್ದವರೊಂದಿಗಿನ ಸಂಬಂಧ ಕಡಿದುಕೊಳ್ಳುವುದು ಸೂಕ್ಷ್ಮ ಮನಸ್ಸಿನವರಿಗೆ ತುಂಬ ಕಷ್ಟ. ಅದು ಯಾತನಾದಾಯಕ.

ಯಾಕೆ ಹಾಗೆ ?

ತುಂಬ ಸಲ ಯೋಚಿಸಿದ್ದೇನೆ. ಅದರಲ್ಲೂ ಒಬ್ಬ ವಿವಾಹಿತನೊಂದಿಗೆ ಗೊತ್ತಿದ್ದೂ ಸಂಬಂಧವಿರಿಸಿಕೊಳ್ಳುವ ಅವಿವಾಹಿತೆ, ಅದೆಷ್ಟು ಪ್ರಯತ್ನಿಸಿದರೂ ತನ್ನ ಮನಸು ಕಲ್ಲು ಮಾಡಿಕೊಂಡು ಅವನಿಂದ ದೂರವಾಗಲಾರಳು. ಅವನು ಅಸಡ್ಡೆ ಮಾಡುತ್ತಾನೆ, ಬಯ್ಯುತ್ತಾನೆ, ಹಿಂಸಿಸುತ್ತಾನೆ, ಅನುಮಾನಿಸುತ್ತಾನೆ, ಇನ್ನೊಂದು ಕಡೆ ತನ್ನ ಹೆಂಡತಿಯಾಂದಿಗೆ ದಿವಿನಾಗಿ, ಸಂತೋಷವಾಗಿ ಬದುಕುತ್ತಿರುತ್ತಾನೆ. ಇವಳಿಗೊಂದು ನಿಶ್ಚಿತ ಸ್ಥಾನ ಮಾನ ಅಂತ ಇರುವುದಿಲ್ಲ. ಸಮಾಜದ ದೃಷ್ಟಿಯಲ್ಲಿ ಇವಳು ಹೆಂಡತಿಯಲ್ಲ. ಇವನೊಂದು ಮನೆ ಅಂತಲೂ ಮಾಡಿಕೊಟ್ಟಿರುವುದಿಲ್ಲ. ಯಾವುದೇ ತರನಾದ ಭದ್ರತೆ ಒದಗಿಸಿರುವುದಿಲ್ಲ. ಆದರೂ ಉಹುಂ, ಅವಳು ಇವನನ್ನು ಬಿಟ್ಟು ಹೋಗಲಾರಳು. ಹೆಚ್ಚಿನ ಸಲ ಅವಳು ಕೊಡುವ ಕಾರಣವೆಂದರೆ ‘ಮನಸ್ಸು ಕೊಟ್ಟಾಗಿದೆ. ದೇಹ ಒಪ್ಪಿಸಿಯಾಗಿದೆ. ಬೇರೆಯಾಗೋದು ಹೇಗೆ ?’

ಇಲ್ಲಿ ಮನಸ್ಸು ಒಂದು ನೆಪ. ಅದನ್ನು ಹೇಗೋ ಕಲ್ಲು ಮಾಡಿಕೊಂಡು ಅವನಿಂದ ದೂರ ಇದ್ದುಬಿಡಬಲ್ಲಳು. ಆದರೆ ದೇಹ ನೆಪವಲ್ಲ. ಅದು ಸ್ಪಷ್ಟ ಗೋಚರ. ಅದನ್ನು ಕೊಡಬಹುದು, ತೆಗೆದುಕೊಳ್ಳಬಹುದು, ತಿರಸ್ಕರಿಸಬಹುದು, ನಿರಾಕರಿಸಬಹುದು, ಅಪ್ಪಿ ಆವರಿಸಬಹುದು, ಏಕೆಂದರೆ ಅದು ಅಮೂರ್ತವಲ್ಲ. ನಮ್ಮ ಸಮಾಜ, ಅದರಲ್ಲೂ ನಮ್ಮ ಹೆಣ್ಣು ಮಕ್ಕಳ ಕಲ್ಪನೆಯಲ್ಲಿ ಮಡಿವಂತ ಸಮಾಜ ಮನಸ್ಸಿಗೆ ಕೊಡುವುದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ದೇಹಕ್ಕೆ ಕೊಡುತ್ತದೆ. ದೇಹ ಸಂಬಂಧದ ವಿಷಯಗಳಲ್ಲಿ ಗಂಡು- ಹೆಣ್ಣಿನ ದೇಹಗಳೆರಡೂ ಸಮಪಾಲು ಪಡೆದಿರುತ್ತವಾದರೂ , ಹೆಣ್ಣು ತನ್ನ ದೇಹವನ್ನು ಕೊಟ್ಟೆ- ಅರ್ಪಿಸಿದೆ ಅಂದುಕೊಳ್ಳುತ್ತಾಳೆ. ಗಂಡಸು ಆಕೆಯನ್ನು ಹೊಂದಿದೆ , ದೋಚಿದೆ- I had her ಅಂದುಕೊಳ್ಳುತ್ತಾನೆ. ಸಮಸ್ಯೆ ಉದ್ಭವವಾಗುವುದೇ ಅಲ್ಲಿ. ಯಾವಾಗ ಮಿಲನ ಮಹೋತ್ಸವವನ್ನು ನಾವು ಕೇವಲ ದೇಹಗಳ ಕೂಡಿಕೆ ಅಂದುಕೊಳ್ಳುತ್ತೇವೋ - ಆವಾಗಲೇ ‘ಕೊಟ್ಟೆ ಅಥವಾ ದೋಚಿದೆ’ ಎಂಬ ಕಲ್ಪನೆಗಳು ಉದ್ಭವಿಸುತ್ತವೆ. ಮಿಲನ ಮಹೋತ್ಸವವನ್ನು ಯಾವುದೇ ಸಿದ್ಧತೆಗಳಿಲ್ಲದೆ ಕ್ಯಾಶುವಲ್‌ ಆಗಿ ಒತ್ತಾಯಪೂರ್ವಕವಾಗಿ, ಆ್ಯಕ್ಸಿಡೆಂಟಲ್‌ ಆಗಿ, ಒಬ್ಬರದ್ಯಾರದೋ ಸಮಾಧಾನಕ್ಕಾಗಿ ಆಚರಿಸಿಕೊಂಡಾಗಲೇ ಮೇಲೆ ತಿಳಿಸಿದಂತಹ (ಕೊಟ್ಟೆ , ದೋಚಿದೆ ತರಹದ) ಅಪಸವ್ಯಗಳಾಗುತ್ತವೆ.

ಅದರ ಬದಲು ಸೆಕ್ಸನ್ನು ಅದರ ಪಾಡಿಗದು ಎಂಬಂತೆ ಬಿಟ್ಟು ನೋಡಿ ? Let it happen ಎಂಬಂತೆ (ಅದಾಗಿಯೇ ಸಂಭವಿಸಲಿ ಎಂಬಂತೆ) ಬಿಟ್ಟು ನೋಡಿ ? ಅದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಎರಡು ದೇಹಗಳಿಗಿಂತ ಮುಂಚಿತವಾಗಿ ಎರಡು ಮನಸ್ಸುಗಳನ್ನು, ಎರಡು ಅಭಿರುಚಿಗಳನ್ನು, ಎರಡು ಅಸ್ತಿತ್ವಗಳನ್ನು ಮುಖ್ಯವಾಗಿ ಎರಡು ವ್ಯಕ್ತಿತ್ವಗಳನ್ನು ಅದು ಹತ್ತಿರಕ್ಕೆ ತರುತ್ತದೆ. ಹಾಗೆ ತಂದಾಗ ಮಾತ್ರ ಅದು ಕೇವಲ ಮಿಲನ ಮಹೋತ್ಸವವಾಗದೇ, ದೇಹ ಸಂಧಾನವಾಗದೇ- ಒಂದು ದಿವ್ಯ ಸೆಲಬ್ರೇಷನ್‌ ಆಗುತ್ತದೆ. ಸೆಲಬ್ರೇಷನ್‌ ಆಫ್‌ ಪರ್ಸನಾಲಿಟೀಸ್‌.

ಹೀಗೆ ಎರಡು ವ್ಯಕ್ತಿತ್ವಗಳು ಕೂಡಿ ಮಾಡಿಕೊಂಡ ಸೆಲಬ್ರೇಷನ್‌ಗೆ ‘ಕೊಟ್ಟೆ - ದೋಚಿದೆ’ ಎಂಬಂತಹ ಮುಲಾಜು ಇರುವುದಿಲ್ಲ. ನೀನು ಕೊಡಲೂ ಇಲ್ಲ. ನಾನು ದೋಚಲೂ ಇಲ್ಲ. ನಾವು ಸಂಭ್ರಮಿಸಿದೆವು- ಅಷ್ಟೇ ಎಂಬಂತಹ ಪ್ರಜ್ಞೆ ಇಬ್ಬರಲ್ಲೂ ಮೂಡತ್ತದೆ. ಹೀಗಾದಾಗ, ಹೆಚ್ಚಿನ ಸಲ ಅವರಿಬ್ಬರೂ split ಆಗುವುದಿಲ್ಲ . ಅಕಸ್ಮಾತ್‌ ಬೇರೇನೋ ಕಾರಣಕ್ಕಾಗಿ ದೂರವಾದರೂ, ದೇಹವನ್ನು ಅವನಿಗೆ ಕೊಟ್ಟು ಏನನ್ನೋ ಕಳೆದುಕೊಂಡೆ ಎಂಬಂತಹ ಯಾತನೆ ಇರುವುದಿಲ್ಲ . ಅವರಿಬ್ಬರ ಮಧ್ಯದ split ಕೂಡ ಒಂದು ಒಪ್ಪಂದದಂತಹುದಾಗಿರುತ್ತದೆ.

ಆದರೆ ಎಲ್ಲ ಗಂಡು- ಹೆಣ್ಣುಗಳಿಗೂ ಇಂಥ ವಿವೇಕ ಇರುವುದಿಲ್ಲ . ದೇಹ ಸಂಬಂಧಗಳು ಸಿದ್ಧತೆಗಳೇ ಇಲ್ಲದ ಅಪಘಾತಗಳಂತೆ ಸಂಭವಿಸಿಬಿಟ್ಟಿರುತ್ತವೆ. ಅಲ್ಲಿ ಸಂತಸಕ್ಕಿಂತ ರಿಗ್ರೆಟ್‌ ಹೆಚ್ಚಿರುತ್ತದೆ. ಆನಂದಕ್ಕಿಂತ ಬರ್ಡನ್‌ ವಿಪರೀತವಾಗಿರುತ್ತದೆ. ಇವಳನ್ನು ಹೊಂದಿದೆನಲ್ಲಾ ಎಂಬ ಕಾರಣಕ್ಕಾಗಿ ಇಷ್ಟವಿಲ್ಲದಿದ್ದರೂ ಇವಳನ್ನು ಕಟ್ಟಿಕೊಂಡು ಹೆಣಗುವುದು. ಇವನಿಗೆ ಅರ್ಪಿತಳಾದೆನಲ್ಲಾ ಎಂಬ ಕಾರಣಕ್ಕಾಗಿ, ಇವನನ್ನು ಸಹಿಸಿಕೊಂಡು ಏಗುವುದು. ಅಂಥ ಇಬ್ಬರ ಮಧ್ಯೆ ಸುಖ ಮತ್ತು ನೆಮ್ಮದಿ ಏರ್ಪಡುವುದಾದರೂ ಹೇಗೆ ? ಈ ತೆರನಾದ ಸಂಬಂಧಗಳಲ್ಲಿ ತಲೆದೋರುವ ಅತಿ ದೊಡ್ಡ ಸಮಸ್ಯೆ ‘ಪೊಸೆಸಿವ್‌ನೆಸ್‌’ನದು. ಅವನು ತನ್ನನ್ನು ದೋಚಿದ್ದಾನೆ ಅಂತ ಭಾವಿಸಿಕೊಂಡ ಹುಡುಗಿ, ಅವನ ಬೆನ್ನ ಹಿಂದೆ ಅದ್ಯಾವ ಪರಿ ಬೀಳುತ್ತಾಳೆ ಎಂದರೆ ಅವನು ಮತ್ಯಾರನ್ನೋ ದೋಚಲು ಅಣಿಯಾಗೇ ಇರುತ್ತಾನೆ ಅಂತ ಅನುಮಾನಿಸತೊಡಗುತ್ತಾಳೆ. ಅವನ ಪ್ರತಿ ಸಂಬಂಧವನ್ನು ಕೆಣಕಿ, ಕೆದಕಿ, ಅಲ್ಲಿ ಅಂಥದ್ದೇನೂ ಇಲ್ಲ ಅಂತ ಪದೇ ಪದೇ ಖಚಿತಪಡಿಸಿಕೊಳ್ಳಲು ಚಡಪಡಿಸುತ್ತಿರುತ್ತಾಳೆ. ಅವನದೂ ಅದೇ ಗೋಳು. ತನಗೆ ಸಿಕ್ಕಷ್ಟೇ ಸಲೀಸಾಗಿ ಅವನು ಇನ್ನೊಬ್ಬನಿಗೆ ಸಿಕ್ಕುಬಿಟ್ಟರೆ ಎಂಬ ಆತಂಕ. ಅವಳ ಮೇಲೆ ಅನುಮಾನ ಅಂತ ಇಲ್ಲದಿದ್ದರೂ ಸಣ್ಣದೊಂದು ಅಭದ್ರತೆ. ತನ್ನ ಮೇಲೆ ಪ್ರೀತಿ ಕಡಿಮೆಯಾಯಿತು ಎಂಬುದಕ್ಕಿಂತ ಅವಳು ಇನ್ಯಾರನ್ನೋ ಪ್ರೀತಿಸಿಬಿಟ್ಟರೆ ಗತಿಯೇನು ಎಂಬ ದುಗುಡ. ಒಟ್ಟಿನಲ್ಲಿ ಇಬ್ಬರೂ ಸುಖವಾಗಿರುವುದಿಲ್ಲ. ಅವರು ಪರಸ್ಪರರನ್ನು ಖಂಡಿತ ಪ್ರೀತಿಸುತ್ತಿರುತ್ತಾರೆ. ಆದರೆ ಪ್ರೀತಿಸಿದುದಕ್ಕಿಂತ ಹೆಚ್ಚಾಗಿ ಪರಸ್ಪರರನ್ನು ‘ಕಾಯು’ತ್ತಿರುತ್ತಾರೆ. ಎಷ್ಟು ಅಸಹ್ಯದ ಕೆಲಸವದು ‘ಕಾಯು’ವುದು !

ಇದಕ್ಕಿರುವುದು ಒಂದೇ ದಾರಿ. ಮೊನ್ನೆ ಇಷ್ಟುದ್ದ ಪತ್ರ ಬರೆದು ತನ್ನ ಯಾತನೆ ಹೇಳಿಕೊಂಡ ಮಿತ್ರನೊಬ್ಬನಿಗೆ ಪತ್ರ ಬರೆದೆ - ‘ಮನೆಯಲ್ಲಿ ಆಟಿಗೆ ಮರೆತು ಬಂದು ಅದನ್ನು ಯಾರಾದರೂ ತಗೊಂಡು ಬಿಡ್ತಾರೇನೋ ಅಂತ ಚಡಪಡಿಸುವ ಮಗುವಿನ ಹಾಗೆ ಆಡಬೇಡ. ಅವಳೊಂದಿಗಿನ ನಿನ್ನ ಸಂಬಂಧ ತುಂಬ ಕಾಲ ನಿಲ್ಲುವಂತಹುದಲ್ಲ ಅನ್ನಿಸಿದಾಗ ಆಕೆಯ ಬಗ್ಗೆ ಪೊಸೆಸಿವ್‌ ಆಗುವುದರಲ್ಲಿ ಅರ್ಥವಿಲ್ಲ. ಕ್ರಮೇಣ ಒಂದು ಉದಾಸೀನ ಬೆಳೆಸಿಕೊ. ಬದುಕುವ ಯೋಗ್ಯತೆ ಮತ್ತು ಆಯುಷ್ಯ ಇದ್ದರೆ, ಆ ಸಂಬಂಧ ಕಡೆ ತನಕ ಬದುಕುತ್ತದೆ. ಎರಡರಲ್ಲಿ ಯಾವುದು ಕಡಿಮೆಯಿದ್ದರೂ ಸಂಬಂಧ ಕ್ರಮೇಣ ಸಾಯುತ್ತದೆ. ಸಾಯುವಂಥದರ ಜೊತೆಗೆ ಜಗಳ ಯಾಕೆ ? ಮನಸು ಬೇರೆಡೆಗೆ ತಿರುಗಿಸು. ಆಕೆ ಬರಲಿಲ್ಲ, ಫೋನು ಮಾಡಲಿಲ್ಲ, ಪತ್ರ ಬರೆಯಲಿಲ್ಲ, ಮಾತನಾಡಿಸಲಿಲ್ಲ ಅಂತೆಲ್ಲ ಕೆಲವು ದಿನ ಅನಿಸುತ್ತದೆ. ಕೆಲವು ದಿನ ಮಾತ್ರ. ಏಕೆಂದರೆ, you are use to those things.ಆಕೆಯನ್ನ ಮಿಸ್‌ ಮಾಡಿಕೊಳ್ತೀಯಾ. ಅದು ದೇಹದ ಅಭ್ಯಾಸ. ಆದರೆ ಮಿತ್ರಾ, ದೇಹಕ್ಕೆ ಬೇಗನೆ ಮರೆವು ಬರುತ್ತದೆ. ನಾನು ವಿಸ್ಕಿಯನ್ನೇ ಮರೆತಿದ್ದೇನಂತೆ. ನೀನು ಅವಳನ್ನು ಮರೆಯುವುದು ಯಾವ ಮಹಾ ಕಷ್ಟ ? ಎರಡು ದೇಹಕ್ಕೆ ಸಂಬಂಧಿಸಿದಂಥವೇ. ಇಲ್ಲಿ ಮನಸ್ಸು ಬರೀ ನೆಪ. ನಿನಗೆ ಒಳ್ಳೆಯದಾಗಲಿ’ ಅಂದ ಬರೆದು ಪೋಸ್ಟ್‌ ಮಾಡಿದೆ.

ಅವನಿಂದ ಉತ್ತರ ಬಂದಿಲ್ಲ.

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more