• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತ್ರಾಣ ಬಸಿದು ಹೋದ ಚಳವಳಿಗಳ ನಾಯಕರ ಕುರಿತು

By Staff
|
Ravi Belagere on Thatskannada.com ರವಿ ಬೆಳಗೆರೆ
ನಮ್ಮ ಚಳವಳಿಗಳು ಅದೆಲ್ಲಿ ನಾಪತ್ತೆಯಾದವು ?

ಎಪ್ಪತ್ತರ ಅಂಚಿಗೆ ಬಂದ ಜಾಫರ್‌ ಷರೀಫ್‌, ಬಂಗಾರಪ್ಪ ಅವರಂತಹ ನಾಯಕರು ಒಂದೆಡೆಯಿಂದ ಕೃಷ್ಣಾರ ಚಮ್ಡಾ ನಿಕಾಲಿ ಮಾಡುತ್ತಾ ಆನ್‌ಲೈನ್‌ ಲಾಟರಿ, ಲಿಕ್ಕರ್‌ಗಳ ವಿರುದ್ಧ ಕೂಗೆಬ್ಬಿಸುತ್ತಿರುವುದನ್ನು ನೋಡಿದರೆ ಇಂತಹುದೊಂದು ಪ್ರಶ್ನೆ ಸಹಜವಾಗಿಯೇ ಕಣ್ಣ ಮುಂದೆ ವಕ್ಕರಿಸುತ್ತದೆ.

ಹಾಗೆ ನೋಡಿದರೆ, ಕರ್ನಾಟಕದ ರಾಜಕೀಯ ವ್ಯವಸ್ಥೆಗೆ ದೊಡ್ಡ ಮಟ್ಟದ ಬದಲಾವಣೆ ತಂದದ್ದೇ ಚಳವಳಿಗಳು. ಕನ್ನಡ ಪರ ಚಳವಳಿ ಇರಲಿ, ರೈತ ಪರ ಚಳವಳಿ ಇರಲಿ ಅಥವಾ ದಲಿತಪರ ಚಳವಳಿ ಇರಲಿ . ಅವೆಲ್ಲಾ ಒಗ್ಗೂಡಿ ಹೋರಾಡಿದ ಫಲವೇ 1983ರಲ್ಲಿ ಅಧಿಕಾರದ ಗದ್ದುಗೆ ಏರಿದ ಜನತಾ ರಂಗ ಸರ್ಕಾರ. ಈ ಜನತಾ ಸರ್ಕಾರದ ಬೆನ್ನ ಹಿಂದೆ ಯಾವ್ಯಾವ ಶಕ್ತಿಗಳಿದ್ದವು ? ಅವುಗಳ ಗುರಿ ಏನಿತ್ತು ಎಂಬುದೆಲ್ಲಾ ಅತ್ಲಾಗಿರಲಿ. ಆದರೆ ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ರಾಜಕೀಯ ಪಡಸಾಲೆಯಲ್ಲಿ ಕಾಂಗ್ರೆಸ್ಸೇತರ ಪಕ್ಷವೊಂದು ಅಧಿಕಾರಕ್ಕೆ ಬಂದು ಕೂರಲು ಚಳವಳಿಗಳು ಕೊಟ್ಟ ಕೊಡುಗೆ ದೊಡ್ಡದಿತ್ತು.

Prof. Nanjunda Swamy, Farmers Leaderಆದರೆ ಈಗೇನಾಗಿದೆ ? ದಲಿತ ಚಳವಳಿಯ ನಾಯಕರು ಬಿಜೆಪಿಯ ಈಶ್ವರಪ್ಪ ಆಡಿದ ಹುಂಬ ಮಾತುಗಳ ಬೆನ್ನು ಬಿದ್ದಿದ್ದಾರೆ. ಕನ್ನಡ ಪರ ಚಳವಳಿಯ ವಾಟಾಳ್‌ ನಾಗ್ರಾಜು ಥರದವರು ಎಮ್ಮೆ ಮೆರವಣಿಗೆ, ಕೋಡಂಗಿ ವೇಷ. ಹಲಗೆ ಹೊಡೆತಗಳಲ್ಲಿ ಮುಳುಗಿ ಹೋಗಿದ್ದಾರೆ. ಒಂದಷ್ಟು ಕಸುವಿದ್ದ ರೈತ ಚಳವಳಿಗಾರರ ಪೈಕಿ ನಂಜುಂಡ ಸ್ವಾಮಿಯವರದು ಕ್ಷೀಣವಾಗಿ ಹೋಗಿರುವ ಕೂಗು. ಉಳಿದಂತೆ ಹಳೇ ಮೈಸೂರು ಭಾಗದ ಆಶಾ ಕಿರಣ ಅನ್ನಿಸಿಕೊಂಡ ಪುಟ್ಟಣ್ಣಯ್ಯ ಸೀದಾ ವಿಧಾನ ಸೌಧಕ್ಕೇ ಬಂದು ಕೃಷ್ಣರ ಸಲಹೆಗಾರರಾಗಿ ಕುಳಿತುಬಿಟ್ಟಿದ್ದಾರೆ.

ಇದಲ್ಲವೇ ವಿಪರ್ಯಾಸ !

ಒಂದು ಕಾಲದಲ್ಲಿ ನಂಜುಂಡಸ್ವಾಮಿಯ ಸರ್ವಾಧಿಕಾರಿ ಧೋರಣೆಯ ವಿರುದ್ಧ ಪುಟ್ಟಣ್ಣಯ್ಯ ಬಂಡಾಯವೆದ್ದಾಗ ಅವರನ್ನು ನೆಚ್ಚಿಕೊಂಡು, ಹಾಸನ, ಮೈಸೂರು, ಮಂಡ್ಯ, ಚಾಮರಾಜ ನಗರ, ತುಮಕೂರು ಭಾಗದ ಲಕ್ಷಾಂತರ ರೈತರು ನಂಜುಂಡ ಸ್ವಾಮಿಯ ತೆಕ್ಕೆಯಿಂದ ಹೊರಬಂದಿದ್ದರು. ಜಾಗತೀಕರಣದ ಬಗ್ಗೆ, ರೈತರ ದುಃಸ್ಥಿತಿಯ ಬಗ್ಗೆ, ಅದರಿಂದ ಹೊರಬರಲು ಇರುವ ಮಾರ್ಗೋಪಾಯಗಳ ಬಗ್ಗೆ ಪುಟ್ಟಣ್ಣಯ್ಯ ಮಾತಾಡುತ್ತಿದ್ದರೆ ‘ಸಿಕ್ನಪ್ಪ ಬಹದ್ದೂರ್‌ ಗಂಡು’ ಅನಿಸುತ್ತಿತ್ತು.

ಆದರೆ ಕಳೆದ ಬಾರಿ ಕಾವೇರಿ ಹೋರಾಟ ನಡೆದ ನಂತರ ಪುಟ್ಟಣ್ಣಯ್ಯ ತಮ್ಮ ಕಾವು ಕಳೆದುಕೊಂಡಿದ್ದಾರೆ. ಈ ಕಡೆ ಕೃಷ್ಣ ಸರಕಾರ ಬೀದಿ ಬೀದಿಗೆ ಜುಗಾರಿ ಅಡ್ಡೆಗಳನ್ನು ತಂದು ಕೂರಿಸಿತು. ಪಾನೀಯ ನಿಗಮ ಸ್ಥಾಪಿಸುವ ನೆಪದಲ್ಲಿ ಸಾರಾಯಿ ಹಳ್ಳಿ- ಹಳ್ಳಿಯ ಚರಂಡಿಗಳಿಗೆ ಹರಿಯುವಂತೆ ಮಾಡಿತು. ಇದರ ಪರಿಣಾಮ ನೇರವಾಗಿ ರೈತನ ಮೇಲಾಗುತ್ತಿದ್ದರೆ ರೈತ ನಾಯಕ ಪುಟ್ಟಣ್ಣಯ್ಯ ಕೃಷ್ಣರ ವಿರುದ್ಧ ಕಮಕ್‌ ಕಿಮಕ್‌ ಅನ್ನುತ್ತಿಲ್ಲ.

ಈಗ ಅವರ ಚಳವಳಿ ಏನಿದ್ದರೂ ಸಲಹೆ ಕೊಡುವುದಕ್ಕೆ ಮಾತ್ರ ಸೀಮಿತ. ಹಾಗಂತಲೇ ಮೂರ್ನಾಲ್ಕು ಮಂದಿಯನ್ನು ಎಡ ಬಲಕ್ಕಿಟ್ಟುಕೊಂಡು ಸೀದಾ ವಿಧಾನಸೌಧಕ್ಕೆ ಬರುವ ಪುಟ್ಟಣ್ಣಯ್ಯ ಕೃಷ್ಣರ ಕಾಲ್‌ಶೀಟ್‌ ಪಡೆದು ಒಂದಷ್ಟು ಸಲಹೆ ಕೊಡುತ್ತಾರೆ. ಅಲ್ಲಿಗೆ ಪುಟ್ಟಣ್ಣಯ್ಯನವರ ಚಳವಳಿ ಫಿನಿಷ್‌. ವಿಪರ್ಯಾಸವೆಂದರೆ ಪುಟ್ಟಣ್ಣಯ್ಯನವರ ಗಂಭೀರ ಸಲಹೆಗಳನ್ನು ಕೃಷ್ಣ ಅನುಷ್ಠಾನ ಗೊಳಿಸುವುದೇ ಇಲ್ಲ. ನೆಪಕ್ಕೆ ಒಂದೆರಡನ್ನು ಜಾರಿಗೊಳಿಸಿದಂತೆ ನಾಟಕವಾಡಿ ಕೈ ತೊಳೆದುಕೊಂಡುಬಿಡುತ್ತಾರೆ. ಕಾವೇರಿ ನೀರನ್ನು ತಮಿಳುನಾಡಿಗೆ ಬಿಟ್ಟು, ಮಂಡ್ಯದ ರೈತರಿಗೆ ಮಾಡಿದ ನಷ್ಟದ ಬಗ್ಗೆ ಅಷ್ಟೊಂದು ಕೂಗಿದರಲ್ಲ ? ಇವತ್ತಿನವರೆಗೆ ಕೃಷ್ಣ ಸರಕಾರ ಏನಾದರೂ ಪರಿಹಾರ ಕೊಟ್ಟಿದೆಯೇ ?

ಉಹುಂ. ದುಗ್ಗಾಣಿಯೂ ರೈತರ ಕೈ ಸೇರಿಲ್ಲ. ಕೇಳಿದರೆ ‘ ಎಲ್ಲಾ ಆ ಅಧಿಕಾರಿಗಳದೇ ಪಿತೂರಿ ಕಣ್ರೀ. ಕೃಷ್ಣ ಭೋ ಒಳ್ಳೇ ಮನುಷ್ಯಾ. ಅವರಿಗೆ ಮನಸ್ಸಿದೆ. ಆದರೇನು ಮಾಡೋದು ? ಇವರದೇ ಅಡ್ಡಗಾಲು’ ಅಂತ ಗೊಣಗುತ್ತಾರೆ ಪುಟ್ಟಣ್ಣಯ್ಯ.

ಇವತ್ತು ಕೃಷ್ಣರ ಸರಕಾರ ಈ ಪಾಟಿ ಅನಾಚಾರ ಮಾಡುತ್ತಿದ್ದರೆ ಅದರ ವಿರುದ್ಧ ಚಾವಟಿ ಬೀಸುವುದು ಚಳವಳಿಗಾರನ ಕೆಲಸವೇ ಹೊರತು ವಿಧಾನ ಸೌಧಕ್ಕೆ ಬಂದು ಸಲಹೆ ಕೊಡುವುದಿಲ್ಲ.

ಸರ್ಕಾರಕ್ಕಿರುವ ಅಡ್ಡಿ ನಿವಾರಿಸಲು ‘ಯಾರಿಗೆ ಸೈಟು ಬೇಕ್ರಿ ’ ಅಂತ ಕೂಗಿಕೊಳ್ಳಲು ಕೃಷ್ಣ ಅಧಿಕಾರಿಗಳನ್ನಿಟ್ಟುಕೊಂಡಿದ್ದಾರೆ. ಹಗರಣ ಸುಳಿವು ಸಿಕ್ಕರೆ ಹೇಳಿ ಬಾಯಿ ಮುಚ್ಚಿಕೊಳ್ಳಲು ಇಷ್ಟು ಕೊಡುತ್ತೇವೆ ಎನ್ನುವ ಅವರೆಲ್ಲ ಇರುವಾಗ ಪುಟ್ಟಣ್ಣಯ್ಯ ಅವರಂಥವರಿಗೆ ಅಲ್ಲೇನು ಕೆಲಸ ?

ಇದಕ್ಕಿಂತ ತಮಾಷೆ ಎಂದರೆ ಕೃಷ್ಣ ಸರ್ಕಾರದ ವಿರುದ್ಧ ಹೋರಾಡಲು ಪುಟ್ಟಣ್ಣಯ್ಯ ಎಬಿಪಿಜೆಡಿ ಜತೆ ಕೈ ಜೋಡಿಸಲು ಹೊರಟಿರುವುದು. ಕೇಳಿದರೆ, ‘ನಾನು ಜನವರಿ ತಂಕಾ ಮಾತಾಡಕಿಲ್ಲಾ’ ಅನ್ನುವ ಪುಟ್ಟಣ್ಣಯ್ಯ, ಒಳಗಿಂದೊಳಗೇ ಬೊಮ್ಮಾಯಿ, ನಾಗೇಗೌಡರ ಜತೆ ಕುಂತು ಹೋಳಿಗೆ ಜಡಿಯುತ್ತಾರೆ.

ಇವತ್ತು ಎಬಿಪಿಜೆಡಿ ಅಂದರೆ ಕಾಂಗ್ರೆಸ್‌(ಕೆ) ಎಂಬುದು ಇಡೀ ದೇಶಕ್ಕೇ ಗೊತ್ತಿರುವ ಸಂಗತಿ. ಜನತಾ ಪಕ್ಷದ ವಿಜಯ ಮಲ್ಯನ ಬಳಿ ಗುಲಾಮಗಿರಿ ಶುರುವಿಟ್ಟುಕೊಂಡಿರುವ ನಾಗೇಗೌಡ, ಬೊಮ್ಮಾಯಿ ಅವರಂಥವರು ಕೃಷ್ಣರ ವಿರುದ್ಧ ಹೋರಾಡುತ್ತಾರೆ ಅಂತ ಯಾರಾದರೂ ನಂಬಲು ಸಾಧ್ಯವೇ ?

ಸದ್ಯಕ್ಕೆ ಈ ಎಬಿಪಿಜೆಡಿಯ ಮುಷಂಡಿಗಳ ಉದ್ದೇಶವೆಂದರೆ, ಮುಂದಿನ ಚುನಾವಣೆಯಲ್ಲಿ ಅರ್ಜೆಂಟಾಗಿ ದೇವೇಗೌಡ ಸೋಲಬೇಕು. ಅವರ ಪಕ್ಷ ನೆಲಕಚ್ಚಬೇಕು. ಅದಕ್ಕೆಂದು ಎಬಿಪಿಜೆಡಿಯ ನಾಯಕರಾದ ನಾಗೇಗೌಡ, ಬೊಮ್ಮಾಯಿಯಂಥವರು ಹೇಗಾದರೂ ಮಾಡಿ ಬಿಜೆಪಿಯ ಜೊತೆ ಕೈ ಜೋಡಿಸುವ ಹವಣಿಕೆಯಲ್ಲಿದ್ದಾರೆ. ಹಾಗೆ ಕೈ ಜೋಡಿಸಿದ್ದೇ ಆದರೆ ಬಿಜೆಪಿ ಮೈತ್ರಿ ಕೂಟಕ್ಕೆ ಅತೃಪ್ತ ಲಿಂಗಾಯತರ ಮತ ಒಲಿಯುತ್ತವೆ ಅಂತ ಅವರ ನಂಬಿಕೆ. ಅಲ್ಲಿಗೆ ಸ್ಪರ್ಧೆ ಕೃಷ್ಣ ಹಾಗೂ ಅನಂತ ಕುಮಾರ್‌ ಮಧ್ಯೆ ಎಂಬಂತಾಗಿ ಪುನಃ ಕಾಂಗ್ರೆಸ್ಸೇ ಅಧಿಕಾರಕ್ಕೆ ಬಂದುಬಿಡುತ್ತದೆ. ನಂತರ ಕೃಷ್ಣರ ಉಪಕಾರಕ್ಕೆಂದು ಬದುಕಿರುವ, ಅದಕ್ಕಾಗಿ ಜೀವ ತೇಯಲೂ ಸಿದ್ಧವಾಗಿರುವ ನಾಗೇಗೌಡ ಕಾಂಗ್ರೆಸ್ಸಿಗೆ ಹೋದರೆ, ಬೊಮ್ಮಾಯಿ ರಾಜ್ಯ ಸಭೆಯ ಮೆಟ್ಟಿಲು ಹತ್ತುತ್ತಾರೆ.

ಆದರೆ ಇವರ ಜೊತೆ ಕೈ ಜೋಡಿಸಲು ಹೊರಟಿರುವ ರೈತ ಸಂಘ ಎಲ್ಲಿ ಹೋಗಬೇಕು ? ನೇರ ನೇರವಾಗಿ ಅದು ಕಾಂಗ್ರೆಸ್‌ ಕಡೆ ಹೋಗುವಂತಿಲ್ಲ. ಬಿಜೆಪಿಯ ಪಡಸಾಲೆಗೂ ಕಾಲಿಡುವಂತಿಲ್ಲ. ಅಲ್ಲಿಗೆ ಚಳವಳಿಯ ತ್ರಾಣವೇ ಬಸಿದು ಹೋಗುತ್ತದೆ. ಹೀಗಾಗಿ ಈ ಕಡೆ ಕೃಷ್ಣರಿಗೆ ಸಲಹೆ ಕೊಡುತ್ತಾ, ಅತ್ತ ನಾಗೇಗೌಡರ ಜತೆ ಕುಂತು ಮಾತಿಗಿಳಿಯುವ ಕೆಲಸವನ್ನು ಬಿಟ್ಟು ರೈತರ ಹಿತ ಕಾಯುವ ಕೆಲಸಕ್ಕೆ ಪುಟ್ಟಣ್ಣಯ್ಯನಂಥವರು ರೆಡಿಯಾಗಬೇಕು.

ಇವತ್ತು ಕಾಂಗ್ರೆಸ್‌ನ ಪಡಸಾಲೆಯಲ್ಲಿ ಜಾಫರ್‌ ಷರೀಫ್‌ ಗರ್ಜಿಸುತ್ತಿಲ್ಲವೇ ? ಬಂಗಾರಪ್ಪ ಅಬ್ಬರಿಸುತ್ತಿಲ್ಲವೇ? ಈ ವಯಸ್ಸಿನಲ್ಲಿ ಅವರಿಗಿರುವ ತ್ರಾಣ ಚಳವಳಿಗಳಿಗೇಕಿಲ್ಲ ? ಅವುಗಳಿಗೇನು ಷರೀಫ್‌, ಬಂಗಾರಪ್ಪ ಅವರಷ್ಟು ವಯಸ್ಸಾಗಿದೆಯೇ ?

ತಿರುಗಿಸಿ ಮುರುಗಿಸಿ ನೋಡಿದರೆ ರೈತ ಚಳವಳಿ, ದಲಿತ ಚಳವಳಿಗಳಿಗೆ ಮೂವತ್ತರ ಆಸುಪಾಸು. ಆದರೆ ಎಪ್ಪತ್ತರ ಮುದುಕರು ಹಾಕುತ್ತಿರುವ ಕೂಗು ಅವುಗಳಿಂದ ಹೊರಬರುತ್ತಿಲ್ಲ.

ಅಪಸ್ವರ ಎತ್ತುವವರೇನೋ ತಮ್ಮ ಕೆಲಸ ಆಗಿಲ್ಲ ಅಂತ ಷರೀಫು, ಬಂಗಾರಪ್ಪ, ಕೃಷ್ಣರ ವಿರುದ್ಧ ಸಿಡಿಮಿಡಿಗುಟ್ಟುತ್ತಿದ್ದಾರೆ ಅಂತ ವ್ಯಂಗ್ಯವಾಡಬಹುದು. ಆದರೆ ಅದು ಮುಖ್ಯವಲ್ಲ. ಬದಲಿಗೆ ಪ್ರತಿಭಟನೆ ಮಾಡಲು ಅವರಿಗೆ ತಾಕತ್ತಾದರೂ ಇದೆಯಲ್ಲ ಎಂಬುದು ಮುಖ್ಯ. ಹಾಗೆ ನೋಡಿದರೆ ಕೃಷ್ಣರನ್ನು ಓಲೈಸಲು ರೈತ ಚಳವಳಿಗೆ ಏನು ಕಾರಣವಿದೆ ? ಅವರನ್ನು ಸಮರ್ಥಿಸಿಕೊಳ್ಳಲು ದಲಿತ ಚಳವಳಿಗೂ ಅಂಥ ಕಾರಣಗಳೇನಿಲ್ಲ.

ಅಂದ ಮೇಲೆ ಒಂದು ಸಾತ್ವಿಕ ಪ್ರತಿಭಟನೆಯಾದರೂ ಎದ್ದು ನಿಲ್ಲಬೇಕಲ್ಲವೇ ? ಇಲ್ಲವಾದರೆ ಪ್ರಜಾಪ್ರಭುತ್ವ ಉಳಿಯುವುದು ಹೇಗೆ ? ಕೃಷ್ಣರಂತಹ ಭಂಡರು ತಮ್ಮ ಮಾನ ಮರ್ಯಾದೆಯ ಕುರಿತು ಅರಿತುಕೊಳ್ಳುವುದು ಹೇಗೆ ?

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಪೂರಕ ಓದಿಗೆ-

ಈ ಪ್ರೊಫೆಸರ್‌ರದು ಅವಿವೇಕಿಗಳ,ಅಯೋಗ್ಯರ ರಿಪೇರಿ ಕೆಲ್ಸ !

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more