ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆತ್ತಿಗೇರಿದೆ ದತ್ತ ಪಿತ್ಥ :ಆದರೆ ಹಿಂದೂಗಳನ್ನು ಬೈಯುವುದೇ ಪ್ರಗತಿಪರತೆ ಅಲ್ಲ !

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಎತ್ತ ಕಡೆಯಿಂದ ನೋಡಿದರೂ ಇದು ‘ದತ್ತ ಪಿತ್ಥ’ವಲ್ಲದೆ ಮತ್ತೇನೂ ಅಲ್ಲ. ಕರ್ನಾಟಕದಲ್ಲಿ ದಶಕಗಳಿಂದಲೂ ಜನಸಂಘ- ಬಿಜೆಪಿ ಇದೆ. ಆರೆಸ್ಸೆಸ್ಸಿದೆ. ಭಜರಂಗ ದಳದ ಜನನ ಇತ್ತೀಚಿನದು. ಆರೆಸ್ಸೆಸ್ಸನ್ನು ಖಂಡಿಸುವವರು ಕೂಡ ಅದರ ಶಿಸ್ತು, ಸಾಮಾಜಿಕ ಸಂಕಟಗಳು ಒದಗಿ ಬಂದಾಗ ಅದು ನಿರ್ವಹಿಸುವ ಜವಾಬ್ದಾರಿ ಮುಂತಾದವುಗಳನ್ನು ಮೆಚ್ಚಿಕೊಳ್ಳುತ್ತಾರೆ.

ಆದರೆ ಈಗ್ಗೆ ಮೂರ್ನಾಲ್ಕು ವರ್ಷಗಳಿಂದ ಹೊರ ಚಾಚಿಕೊಂಡಿರುವ ಹಿಂದುತ್ವ ವಿಕಾರ ಚಳವಳಿ ಇದೆಯಲ್ಲ? ಅದನ್ನು ಖುದ್ದು ಬಿಜೆಪಿಗಳೇ ಬೇಸರದಿಂದ, ಆತಂಕದಿಂದ ನೋಡತೊಡಗಿದ್ದಾರೆ. ಅದರಲ್ಲೂ ಚಿಕ್ಕಮಗಳೂರಿನ ದತ್ತ ಪೀಠದ ವಿವಾದ ಅನೇಕ ಪ್ರಜ್ಞಾವಂತ ಬಿಜೆಪಿಗಳಿಗೆ, ಆರೆಸ್ಸೆಸ್ಸಿಗರಿಗೆ ಬೇಡವಾಗಿದೆ. ಈ ಹಿನ್ನೆಲೆಯಲ್ಲಿ ಬಾಬಾ ಬುಡನ್‌ಗಿರಿ ಸುತ್ತ ಉದ್ಭವವಾಗಿರುವ ವಿವಾದವನ್ನು ನೋಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

Dattathreyam Tavasharanam !ಶ್ರೀಗುರು ಬಾಬಾ ಬುಡನ್‌ಗಿರಿ ದತ್ತಾತ್ರೇಯ ಸ್ವಾಮಿ ದರ್ಗಾದ ಸುತ್ತ ಹಬಬ್ಬು ಶುರುವಾಗಿರುವುದು 1997ರಿಂದ ಈಚೆಗೆ. ಅಯೋಧ್ಯೆಯಲ್ಲಿ ಮಸೀದಿ ಬಿತ್ತು : ಅದರಿಂದ ರಾಜಕೀಯ ಲಾಭವೂ ಆಯಿತು. ಅಂಥದ್ದೇ ಒಂದು ವಿವಾದ ದಕ್ಷಿಣದಲ್ಲೂ ಹುಟ್ಟು ಹಾಕಬೇಕಿತ್ತು. ಆ ಅವಕಾಶ್ಕಕಾಗಿ ಕಾಯುತ್ತಿದ್ದವರ ಕಣ್ಣಿಗೆ ಬಿದ್ದದ್ದೇ ಈ ಬಾಬಾ ಬುಡನ್‌ಗಿರಿ ! ಇತಿಹಾಸದಲ್ಲಿ ಇಂತ ಪ್ರಕರಣಗಳು ಅನೇಕ ಸಲ ಆಗಿವೆ. ಒಳ್ಳೆಯದಕ್ಕೂ ಆಗಿವೆ. ಕೆಟ್ಟದಕ್ಕೂ ಆಗಿವೆ. ಪಾಶ್ಚಿಮಾತ್ಯ ಇತಿಹಾಸದಲ್ಲಿ ವೀರ ಮಹಿಳೆ ಜೋನ್‌ ಆಫ್‌ ಆರ್ಕ್‌ಳ ಚಿತ್ರಣ ಓದಿದವರು, ಭಾರತದಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿಯನ್ನು ಚಿತ್ರಿಸಿದರು. ಬೆನ್ನಿಗೆ ಮಗುವನ್ನು ಕಟ್ಟಿಕೊಂಡು ಕುದುರೆಯ ಮೇಲೆ ಕುಳಿತು ಬ್ರಿಟಿಷರೊಂದಿಗೆ ಲಕ್ಷ್ಮೀಬಾಯಿ ಬಡಿದಾಡಿದಳು ಅಂದರು. ಕನ್ನಡಿಗರು ಸುಮ್ಮನೆ ಕೂಡಲಿಲ್ಲ. ಕಿತ್ತೂರು ರಾಣಿ ಚೆನ್ನಮ್ಮನನ್ನು ಕುದುರೆಯ ಮೇಲೆ ಕೂಡಿಸಿ ಜಯಕಾರ ಹಾಕಿದರು ! ಉಲ್ಲಾಳದ ರಾಣಿ ಅಬ್ಬಕ್ಕ ದೇವಿ, ಬೆಳವಡಿ ಮಲ್ಲಮ್ಮ ಮುಂತಾದ ಹೆಣ್ಣುಮಕ್ಕಳೆಲ್ಲ ಹೀಗೇ ಮಹಾನ್‌ ನಾಯಕಿಯರಾಗಿ ಸೃಷ್ಟಿಯಾದವರು. ನೆನಪಿರಲಿ, ಝಾನ್ಸಿರಾಣಿಯೂ ಸೇರಿದಂತೆ ಈ ಹೆಣ್ಣು ಮಕ್ಕಳ್ಯಾರೂ ಕತ್ತಿ ಹಿಡಿದು, ಕುದುರೆ ಹತ್ತಿ ಯುದ್ಧ ಮಾಡಿದವರಲ್ಲ.

ಆದರೂ ಐತಿಹಾಸಿಕ ಕಾರಣಗಳಿಗಾಗಿ ಇಂಥ ಪಾತ್ರಗಳ ಸೃಷ್ಟಿ ಆಗಿ ಬಿಡುತ್ತದೆ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಾಂದೋಲನ ನಡೆದಾಗ, ಹೆಣ್ಣು ಮಕ್ಕಳಲ್ಲಿ ಸ್ಫೂರ್ತಿ ತುಂಬುವ ಸದುದ್ದೇಶದಿಂದ ಈ ತೆರನಾದ ಪಾತ್ರಗಳನ್ನೂ, ಘಟನೆಗಳನ್ನೂ ಸೃಷ್ಟಿ ಮಾಡಿದರಷ್ಟೆ.

ಈಗ ಅಂಥದ್ದೇ ಮರುಸೃಷ್ಟಿಯ ವಿಕಾರ ಪ್ರಯತ್ನವೊಂದನ್ನು ಭಜರಂಗದಳ ಆರಂಭಿಸಿದೆ. ಅಲ್ಲಿ ಅಯೋಧ್ಯೆಯ ವಿವಾದವಾದರೆ, ಇಲ್ಲಿ ಬುಡನ್‌ಗಿರಿಯ ವಿವಾದ ! ಇದರಿಂದ ರಾಜಕೀಯ ಲಾಭ ನಿಜಕ್ಕೂ ಆಗುತ್ತದಾ? ಹಾಗಂತ ಯೋಚಿಸುವ ಮಟ್ಟಿಗಿನ ಅರಿವುಳ್ಳವರೂ ಭಜರಂಗದಳದವರ ಗುಂಪಿನಲ್ಲಿಲ್ಲ. ದತ್ತ ಪೀಠದ ವಿವಾದ ಬಿಜೆಪಿಗಳ, ಆರೆಸ್ಸೆಸ್ಸಿಗರ ಕೈಯಿಂದಲೂ ತಪ್ಪಿ ಹೋಗಿ, ಕೇವಲ ಪುಂಡಾಟಿಕೆಯ ಹುಡುಗರ, ಸ್ಮಗರುಗಳ ಕೈಗೆ ಸಿಕ್ಕು ಹೋಗಿದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗಿದೆ.

1997ರಲ್ಲಿ ಮೊದಲ ಬಾರಿಗೆ ಶ್ರೀ ದತ್ತ ಪೀಠ ಸಂವರ್ಧನಾ ಸಮಿತಿ ಹುಟ್ಟಿಕೊಂಡಿತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತ ಪಾದುಕಾ ಯಾತ್ರೆ ನಡೆಯಿತು. ಜನ ಸ್ಪಂದಿಸಲಿಲ್ಲ. ಮುಂದೆ 1998ರಲ್ಲಿ ಇದಕ್ಕೊಂದು ರಾಜ್ಯವ್ಯಾಪಿ ಸ್ವರೂಪ ನೀಡಲಾಯಿತು. ರಾಜ್ಯದ ನಾಲ್ಕು ದಿಕ್ಕಿನಿಂದ ದತ್ತ ಯಾತ್ರೆ ನಡೆಯಿತು. ಅಲ್ಲಿ ಮೊದಲ ಬಾರಿಗೆ ಭಜರಂಗದಳದ ನೇತಾರರು ಮುಸ್ಲಿಂ ನಿಂದನೆ ಆರಂಭಿಸಿದರು. ತಕ್ಷಣ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದು ಶಿವಮೊಗ್ಗದ ಪ್ರಗತಿಪರರು. ಮೊನ್ನೆ ಕಾರ್ಕಳದ ಬಳಿಯ ಈದುವಿನಲ್ಲಿ ಪೊಲೀಸರು ಇಬ್ಬರು ಹುಡುಗಿಯರನ್ನು ಕೊಂದು ಹಾಕಿದರಲ್ಲ ? ಆ ಇಬ್ಬರು ಹುಡುಗಿಯರೂ ಸೇರಿದಂತೆ ‘ಕರ್ನಾಟಕ ವಿಮೋಚನಾ ರಂಗ’ದ ಯುವಕರು ಕುದುರೆಮುಖ ಗಣಿಗಾರಿಕೆ ವಿರುದ್ಧ ಒಂದು ಹೋರಾಟ ರೂಪಿಸಿದ್ದರು. ಅದೇ ವೇದಿಕೆ ಭಜರಂಗದಳದವರ ಅತಿರೇಕಿ ಕೋಮುವಾದವನ್ನು ಖಂಡಿಸಿ ಪ್ರತಿಭಟಿಸಿತು. 1999ರಲ್ಲಿ ಇದೇ ವೇದಿಕೆಯ ನೇತೃತ್ವದಲ್ಲಿ ಚಿಕ್ಕಮಗಳೂರಿನಲ್ಲಿ ಬೃಹತ್ತಾದ ಒಂದು ರ್ಯಾಲಿ ನಡೆಯಿತು.

ಈ ವೇಳೆಗಾಗಲೇ ದತ್ತ ಭಕ್ತಿ (!) ಒಂದರ್ಥದಲ್ಲಿ ಅಯ್ಯಪ್ಪ ಸ್ವಾಮಿ ವ್ರತ, ನಿಯಮ- ನೇಮಗಳ ಸ್ವರೂಪ ಪಡೆಯತೊಡಗಿತ್ತು. once again, ಅದೂ ಇಮಿಟೇಷನ್ನೇ. ಕೇಸರಿ ಪಂಚೆ, ಕೊರಳಲ್ಲಿ ದತ್ತ ಮಾಲೆ, ತಲೆಯ ಮೇಲೆ ಅಕ್ಕಿ ಮುಡಿ- ಹೀಗೆ ಕರ್ನಾಟಕದಲ್ಲಿ ಇನ್ನೊಂದು ಅಯ್ಯಪ್ಪ ಕೇಂದ್ರ ಹುಟ್ಟಿಕೊಂಡತಾಗಿತ್ತು. ಆತನಕ ದತ್ತ ಪಾದುಕೆ, ದತ್ತ ಮಾಲೆ ಅಂತೆಲ್ಲ ಮಾತಾಡುತ್ತಿದ್ದವರು 1999ರಿಂದೀಚೆಗೆ ಬಾಬಾಬುಡನ್‌ಗಿರಿಯ ವಿಮೋಚನೆಯ ಕುರಿತು ಮಾತಾಡತೊಡಗಿದರು. ಇದು ಯಾವ ಮಟ್ಟಕ್ಕೆ ಹೋಯಿತೆಂದರೆ, ಮುತಾಲಿಕ್‌ರಂತಹ ಅತಿರೇಕಿ ಭಜರಂಗ ಮುಖಂಡರು ಇನ್ನು ಮೇಲೆ ಪತ್ರಕರ್ತರು ಬಾಬಾ ಬುಡನ್‌ಗಿರಿ ಅಂತ ಬರೆಯಕೂಡದು ! ಇದನ್ನು ದತ್ತ ಪೀಠ ಅಂತ ಬರೆಯಬೇಕು ಎಂದು ಫರ್ಮಾನು ಹೊರಡಿಸಿದರು.

ಒಂದು ಧಾರ್ಮಿಕ ಚಳವಳಿ ಮುತಾಲಿಕ್‌ ಮತ್ತು ಜಗದೀಶ ಕಾರಂತರಂತಹ ಅತಿರೇಕಿಗಳ ಕೈಗೆ ಸಿಕ್ಕು ಬಿಟ್ಟರೆ ಏನೆಲ್ಲ ಅವಿವೇಕ ಆರಂಭವಾಗಿ ಬಿಡಬಹುದು ಎಂಬುದಕ್ಕೆ ದತ್ತ ಪೀಠದ ಚಳವಳಿಗಿಂದ ಬೇರೆ ಉದಾಹರಣೆ ಬೇಕಿಲ್ಲ. ಮೊದಲು ಭಜರಂಗ ದಳದವರು ಹಿಂದೂಗಳಿಗೆ ಪೂಜೆಗೆ ಅವಕಾಶ ಕೊಡಿ ಅಂದರು. ಆ ಬಗ್ಗೆ ಬುಡನ್‌ಗಿರಿಯಲ್ಲಿರುವ ಮುಸ್ಲಿಂ ಅರ್ಚಕರಿಗೂ ತಕರಾರಿರಲಿಲ್ಲ. ಬಂದು ಪೂಜೆ ಮಾಡಿಕೊಂಡು ಹೋಗಿ ಅಂದರು. ಆದರೆ ಭಜರಂಗ ಕಾಂಕ್ಷೆ ಅಲ್ಲಿಗೆ ನಿಲ್ಲಲಿಲ್ಲ. ಅಲ್ಲಿರುವ ಗೋರಿಗಳನ್ನು ತೆಗೆಯಿರಿ ಅಂತ ಶುರುಮಾಡಿದರು. ಹಿಂದೂ ಅರ್ಚಕರನ್ನು ನೇಮಿಸಿ, ದತ್ತ ವಿಗ್ರಹ ಸ್ಥಾಪಿಸಿ, ಅಲ್ಲಿ ದತ್ತ ದೇವಾಲಯ ಕಟ್ಟಬೇಕು ಅನ್ನುವ ಮಟ್ಟಕ್ಕೆ ಇವರ ಪುಂಡುವಾದ ಬೆಳೆಯಿತು.

ಇಷ್ಟೆಲ್ಲ ಮಾಡಿದರೂ ಭಜರಂಗ ಚಳವಳಿ ಹೆದರಿಕೆ ಹುಟ್ಟಿಸುವಂತಹ ಚಳವಳಿಯಾಗಿರಲಿಲ್ಲ. ಅದು ವರ್ಷಕ್ಕೊಂದಾವರ್ತಿ ನಡೆಯುವ ಪುಂಡಾಟಿಕೆಯಂತೆ ಮಾತ್ರ ಕಾಣುತ್ತಿತ್ತು. ಆದರೆ ಯಾವಾಗ ಪದೇಪದೇ ಶೋಭಾಯಾತ್ರೆಗಳು, ದತ್ತನಿಗೆ ಮುಡಿಯಾಪ್ಪಿಸುವ ಯಾತ್ರೆಗಳು ಹೆಚ್ಚಾಗತೊಡಗಿದವೋ, ಭಜರಂಗದಳದ ನಾಯಕರು ಚಿಕ್ಕಮಗಳೂರು ಜಿಲ್ಲೆಯ ಸ್ಮಗ್ಲರುಗಳನ್ನು ಕರೆಕರೆದು ಮಣೆಹಾಕತೊಡಗಿದರು. ಜಿಲ್ಲೆಯಾದ್ಯಂತ ಭಜರಂಗ ದಳದ unit ಗಳನ್ನು ಮಾಡಿ ಅವುಗಳ ನೇತೃತ್ವವನ್ನು ಅಕ್ಷರಶಃ ಕಳ್ಳ ಸಾಗಣೆದಾರರ ಕೈಗೆ ಕೊಟ್ಟರು. ಇದಕ್ಕಿದ್ದ ಏಕೈಕ ಕಾರಣವೆಂದರೆ, ಚಿಕ್ಕಮಗಳೂರು ಜಿಲ್ಲೆಯ ಮುಸ್ಲಿಂ ಮರಗಳ್ಳರ ವಿರುದ್ಧ ಸೆಟೆದು ನಿಲ್ಲಬಲ್ಲ ತಾಕತ್ತು ಹಿಂದೂ ಮರಗಳ್ಳರಿಗೆ ಇತ್ತು ! ಅಲ್ಲಿಂದ ಮುಂದಕ್ಕೆ ಆರಂಭವಾದದ್ದೇ ಮುಸ್ಲಿಂ ವಿರೋಧಿ ಫೂತ್ಕಾರ. ದುರಂತವೆಂದರೆ, ಈ ಭಜರಂಗದಳದ unit ಗಳನ್ನು ಬೆಂಬಲಿಸಿದ್ದು ಚಿಕ್ಕಮಗಳೂರು ಜಿಲ್ಲೆಯ ಶ್ರೀಮಂತ ಒಕ್ಕಲಿಗರ ಹುಡುಗರು ಮತ್ತು ಹಿಂದುಳಿದ ಜಾತಿಗಳ ಹುಡುಗರು. ಇವರ ಹಿಂದೆ ವ್ಯವಸ್ಥಿತವಾಗಿ ಕೆಲಸ ಮಾಡಿದ್ದು ಬ್ರಾಹ್ಮಣ ಭಜರಂಗ ಮನಸ್ಸುಗಳು.

ಇಂಥದೊಂದು ಅಪಾಯಕಾರಿ ಬೆಳವಣಿಗೆಯನ್ನು ಗುರುತಿಸಿ ಅದನ್ನು ಮಟ್ಟ ಹಾಕಬೇಕಾಗಿದ್ದುದು ಕಾಂಗ್ರೆಸ್‌ ಸರಕಾರ. ಸಚಿವೆ ಮೋಟಮ್ಮ ಕೊಂಚ ಮಟ್ಟಿಗೆ ಆ ನಿಟ್ಟಿನಲ್ಲಿ ದನಿಯೆತ್ತಿದರು. ಆದರೆ ಡಿ.ಬಿ.ಚಂದ್ರೇಗೌಡ ಮಾತ್ರ ದೊಡ್ಡ ನಾಟಕಕಾರನಾಗಿಬಿಟ್ಟರು. ಒಂದು ಕಡೆ ತಮ್ಮದು ಅಲ್ಪಸಂಖ್ಯಾತರ ಕಡೆಗಿರುವ ಪಕ್ಷ ಅಂತ ವಗಲು ಮಾತಾಡಿದರು. ಇನ್ನೊಂದು ಕಡೆ ತಮ್ಮದೇ ನೆಂಟರಿಷ್ಟರಿದ್ದ ಭಜರಂಗದಳವನ್ನು ಸಂಪ್ರೀತಗೊಳಿಸಲು, ತಾವೇ ಕಚ್ಚೆ ಪಂಚೆಯುಟ್ಟು ದತ್ತ ಹೋಮದಲ್ಲಿ ಭಾಗವಹಿಸಿ ಬಿಟ್ಟರು. ಇಲ್ಲಿ ಕಾಂಗ್ರೆಸ್ಸು ಮುಸ್ಲಿಂ ಓಟೂ ಬೇಕು, ಹಿಂದೂ ಓಟೂ ಬೇಕು ಅಂತ ತಕ್ಕಡಿ ತೂಗಿತು. ಬಿಜೆಪಿ ಎಂದಿನಂತೆ ಸಾರಾಸಗಟು ಮುಸ್ಲಿಮರನ್ನು ಧಿಕ್ಕರಿಸಿ ದೂರವಿಟ್ಟ ಹಿಂದೂ ಓಟುಗಳನ್ನು ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ಮಾಡಿತು. ಹಾಗೆ ಇಬ್ಬರೂ ಸೇರಿಯೇ ದತ್ತ ಪೀಠ ವಿವಾದವನ್ನು ಈ ಮಟ್ಟಕ್ಕೆ ಬೆಳೆಸಿದ್ದಾರೆ.

ಇದ್ದುದರಲ್ಲಿಯೇ ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರಜ್ಞಾವಂತಿಕೆಯಿಂದ ನಡೆದುಕೊಂಡಿರುವವರೆಂದರೆ- ರಾಜ್ಯದ ಪ್ರಗತಿಪರರು. ಕಳೆದ ವರ್ಷ ಭಜರಂಗದಳದವರ ಚಟುವಟಿಕೆಗಳು ಅತಿರೇಕಕ್ಕೆ ಹೋದಾಗ, ಪ್ರಗತಿಪರರು ನಡೆಸಿದ ಸೌಹಾರ್ದ ಸಮಾವೇಶ ನಿಜಕ್ಕೂ ಭಜರಂಗದಳದವರ ಉನ್ಮಾದಕ್ಕೆ ಕೊಂಚ ಕಡಿವಾಣ ಹಾಕಿತ್ತು. ಆದರೆ ಇದೇ ಸಮಾವೇಶದಲ್ಲಿ ಇನ್ನೊಂದು ರೀತಿಯ ಅತಿರೇಕಿಗಳು ತಲೆಯೆತ್ತಿ ನಿಂತರು. ಅವರ ಭಾಷಣಗಳನ್ನು ಕೇಳಿದವರ್ಯಾರಿಗೂ, ಇವರು ದತ್ತಪೀಠ ವಿವಾದ ಬಗೆಹರಿಸಿ ಹಿಂದೂ- ಮುಸ್ಲಿಮರ ಮಧ್ಯೆ ಸೌಹಾರ್ದ ಬಿತ್ತಲು ಬಂದಿದ್ದಾರೆ ಅಂತ ಖಂಡಿತ ಅನ್ನಿಸುತ್ತಿರಲಿಲ್ಲ. ಕೈಗೆ ಮೈಕು ಸಿಕ್ಕ ಕೂಡಲೆ ಮುತಾಲಿಕ್‌ ಕಾರಂತ ಯಾವ ಪರಿ ಉನ್ಮಾದಿಗಳಾಗುತ್ತಾರೋ, ಈ ಪ್ರಗತಿಪರರ ಗುಂಪಿನ ಜಿ.ಕೆ.ಗೋವಿಂದರಾವ್‌ ಥರದವರೂ ಅಷ್ಟೇ ಉನ್ಮಾದಿಗಳಾಗುತ್ತಾರೆ. ತಾವು ಯಾರನ್ನು ಬೈಯಲು ಬಂದಿದ್ದೇವೆಂಬುದನ್ನೇ ಮರೆತು, ಇಡೀ ಹಿಂದೂ ಸಂಕುಲವನ್ನೇ ಅಮ್ಮ ಅಕ್ಕ ಎಂಬ ಧಾಟಿಯಲ್ಲಿ ಬಯ್ಯತೊಡಗುತ್ತಾರೆ. ವೈಯಕ್ತಿಕವಾಗಿ ನಾನಾಗಲೀ, ಗೋವಿಂದರಾಯರಾಗಲೀ ದೇವರನ್ನು ನಂಬಲಿಕ್ಕಿಲ್ಲ. ಕುಂಕುಮ ಹಚ್ಚಿಕೊಳ್ಳಲಿಕ್ಕಿಲ್ಲ. ಆದರೆ ಕುಂಕುಮ ಹಚ್ಚಿಕೊಳ್ಳುವುದೇ ಅಪರಾಧ, ಕುಂಕುಮ ಹಚ್ಚಿಕೊಂಡ ಹಿಂದೂಗಳೆಲ್ಲ ದುಷ್ಟರು ಅಂತ ಮಾತಾಡಿಬಿಟ್ಟರೆ ಅದರ ಪರಿಣಾಮ ಏನಾದೀತು? ಕಳೆದ ಬಾರಿಯ ಸೌಹಾರ್ದ ಸಮಾವೇಶದಲ್ಲಿ ಆದದ್ದೇ ಅದು. ಹಿಂದೂಗಳನ್ನು, ದೇವರನ್ನು, ಧರ್ಮವನ್ನು ಬಯ್ಯುವುದೇ ಪ್ರಗತಿಪರತೆ ಎಂಬರ್ಥದಲ್ಲಿ ಗೋವಿಂದರಾವ್‌ ಥರದವರು ಮಾತಾಡಿಬಿಟ್ಟರು.

ನೆನಪಿರಲಿ, ಬಾಬಾ ಬುಡನ್‌ಗಿರಿಗೆ ಬರುವವರೆಲ್ಲರನ್ನೂ ಭಜರಂಗದಳದವರು ಕರೆದುಕೊಂಡು ಬಂದಿರುವುದಿಲ್ಲ. ಬಂದವರೆಲ್ಲರಿಗೂ ಮುಸ್ಲಿಮರ ಮೇಲೆ ದ್ವೇಷ ಇರುವುದಿಲ್ಲ. ಇವತ್ತಿಗೂ ಕರ್ನಾಟಕದ ಶೇಕಡ ತೊಂಬತ್ತರಷ್ಟು ಹಿಂದೂಗಳು ಬಾಬಾ ಬುಡನ್‌ಗಿರಿ ವಿವಾದವನ್ನು ಬೆಂಬಲಿಸುತ್ತಿಲ್ಲ. ಅದಕ್ಕೆ ಕಾರಣಣವೂ ಇದೆ. ಹಿಂದೂಗಳಿಗೆ ಇರುವ ಶ್ರದ್ಧಾ ಕೇಂದ್ರಗಳಾದ ಧರ್ಮಸ್ಥಳ, ಮಂತ್ರಾಲಯ, ಕೊಲ್ಲೂರು, ತಿರುಪತಿ ಇತ್ಯಾದಿಗಳಂತೆ ಯಾವತ್ತಿಗೂ ಬಾಬಾ ಬುಡನ್‌ಗಿರಿ ಎಂಬುದು ಧಾರ್ಮಿಕ ಶ್ರದ್ಧಾ ಕೇಂದ್ರ ಆಗಿರಲಿಲ್ಲ. ಅವರು ಭಜರಂಗದಳದವರ ಅತಿರೇಕಿ ಕರೆಗಳಿಗೆ ಕಿವಿಗೊಡುವುದೂ ಇಲ್ಲ. ತಮ್ಮ ಹಿಂದೂ ಧರ್ಮಕ್ಕೆ ಬುಡನ್‌ಗಿರಿಯಲ್ಲಿ ಆಪತ್ತು ಬಂದಿದೆ ಅಂತ ಭಾವಿಸುವುದೂ ಇಲ್ಲ.

ಇಂಥದೊಂದು ದೊಡ್ಡ ಹಿಂದೂ ಸಮೂಹ ಕಣ್ಣೆದುರಿಗಿದೆ. ಅದನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹೋದರೆ ಪ್ರಗತಿಪರರು ದತ್ತಪೀಠ ವಿವಾದವನ್ನು ಬಗೆಹರಿಸಲಾರರು. ಇಲ್ಲಿ ಇನ್ನೂ ಸೂಕ್ಷ್ಮ ಸಮಸ್ಯೆಯೇನೆಂದರೆ, ಬಾಬಾ ಬುಡನ್‌ಗಿರಿ ಎಂಬುದು ಹೇಗೆ ಬಹುತೇಕ ಹಿಂದೂಗಳ ಪಾಲಿಗೆ ಶ್ರದ್ಧಾ ಕೇಂದ್ರ ಅಲ್ಲವೋ, ಹಾಗೆಯೇ ಕಟ್ಟರ್‌ ಮುಸಲ್ಮಾನರಿಗೂ ಶ್ರದ್ಧಾ ಕೇಂದ್ರವಲ್ಲ ! ಅವರ್ಯಾರೂ ಬುಡನ್‌ಗಿರಿಯನ್ನು ಶತಾಯಗತಾಯ ಉಳಿಸಿಕೊಳ್ಳಬೇಕೆಂಬ ಹೋರಾಟಕ್ಕೆ ಸಜ್ಜಾಗಿ ಬರುವುದಿಲ್ಲ. ಅವರು ಯಾವತ್ತೂ ಸೂಫಿ ಚಳವಳಿಯನ್ನು ಬೆಂಬಲಿಸಿದವರಲ್ಲ. ಅವರ ಅಜೆಂಡಾಗಳೇ ಬೇರೆ ಇವೆ. ಹೀಗಾಗಿ, ಪ್ರಗತಿಪರರು face ಮಾಡಬೇಕಾಗಿರುವುದು ಕೇವಲ ಭಜರಂಗದಳದ ಅತಿರೇಕಿಗಳನ್ನ, ಅದೂ ಏಕಾಂಗಿಯಾಗಿ ! ಹೀಗಿರುವಾಗ ವಿನಾ ಕಾರಣ ಹಿಂದೂ ಸಮೂಹ, ಹಿಂದೂ ಧರ್ಮ ಮುಂತಾದವುಗಳನ್ನು ಬೈದು ಭಾಷಣ ಮಾಡಿದರೆ, ನಿಜವಾದ ಪ್ರಗತಿಪರ ಆಶಯಗಳನ್ನಿಟ್ಟುಕೊಂಡು ಬರುವವರೂ ಹೆದರಿ ಹಿಂದಕ್ಕೆ ಹೋದಾರು. ವೈಯಕ್ತಿಕ ಮಟ್ಟದಲ್ಲಿ ದೇವರನ್ನು ಗೇಲಿ ಮಾಡಿದ ಚಳವಳಿಗಳ್ಯಾವೂ ಗೆದ್ದಿಲ್ಲ, ಎಲ್ಲೂ ಗೆದ್ದಿಲ್ಲ ಎಂಬುದು ಪ್ರಗತಿಪರರ ಮಧ್ಯದ ನಾಸ್ತಿಕರಿಗೆ ನೆನಪಿರಲಿ. ದೇವರ ವಿರುದ್ಧ, ಧರ್ಮದ ವಿರುದ್ಧ ಅವರು ಮಾಡುವ ಒಂದೊಂದು ಭಾಷಣವೂ ನೂರಾರು normal ಹಿಂದೂಗಳನ್ನು ಭಜರಂಗ ದಳಕ್ಕೆ ಸೇರಿಸುತ್ತದೆ.

ಅದೇ ರೀತಿ, ವಿಪರೀತವಾದ ಮುಸ್ಲಿಂ ಓಲೈಸುವಿಕೆಯೂ ಬೇಕಾಗಿಲ್ಲ, ಭಜರಂಗದಳದ ಕೇಡಿಗಳನ್ನು ಖಂಡಿಸಿದಷ್ಟೇ ತೀವ್ರವಾಗಿ ಪ್ರಗತಿಪರರು ಚಿಕ್ಕಮಗಳೂರಿನ ಕಿಡಿಗೇಡಿ ಮುಸ್ಲಿಂ ಸ್ಮಗ್ಲರುಗಳನ್ನೂ ಖಂಡಿಸಲಿ. ಅಲ್ಲೂ ಕೂಡ ಮುಸ್ಲಿ ಧರ್ಮದ ವಿರುದ್ಧ ಗೇಲಿ ಬೇಡ. ಎರಡೂ ಕೋಮುಗಳ ಅತಿರೇಕಿಗಳನ್ನು ದೊಡ್ಡ ದನಿಯಲ್ಲಿ ಖಂಡಿಸದಿದ್ದರೆ, ಪ್ರಗತಿಪರರನ್ನು ಯಾರೂ ನಂಬಲಾರರು. ಇಬ್ಬರನ್ನೂ ದೂರವಿಡದಿದ್ದರೆ ವೇದಿಕೆಗೆ ಅರ್ಥ ಸಿಗದು.

ಇನ್ನು ದತ್ತ ಜಯಂತಿಯನ್ನೇ ನಿಷೇಧಿಸುತ್ತೇವೆ ಎಂದು ಹೊರಡುವುದರಲ್ಲಿ ಅರ್ಥವಿಲ್ಲ. ಈ ಜಯಂತಿಯನ್ನು ಎರಡೂ ಜನಾಂಗಗಳ ಅತಿರೇಕಿಗಳಿಂದ ತಪ್ಪಿಸಿ ದತ್ತನನ್ನೂ- ಬಾಬಾ ಬುಡನ್‌ನನ್ನೂ ಭಾವುಕವಾಗಿ ಒಪ್ಪಿಕೊಂಡವರ ಕೈಗೆ ಒಪ್ಪಿಸುವ ಅವಶ್ಯಕತೆ ಇದೆ. ಭಜರಂಗದಳದವರ ಅತಿರೇಕಕ್ಕೆ ಇದಕ್ಕಿಂತ ಬೇರೆ ಉತ್ತರವಿಲ್ಲ. ಇವತ್ತಿನ ತನಕ ಎಲ್ಲ ಪ್ರಗತಿಪರರೂ ದತ್ತ ಪೀಠದ ವಿವಾದಕ್ಕೆ ಸಂಬಂಧಿಸಿದಂತೆ ಮಾಡಿರುವ ಪ್ರಯತ್ನಗಳು ಚಿಕ್ಕಮಗಳೂರು ಜಿಲ್ಲೆಯನ್ನು ರಕ್ತಪಾತದಿಂದ ಪಾರು ಮಾಡಿವೆ. ಭಜರಂಗದಳದವರು ನಾಡಿನಾದ್ಯಂತ ಅಮಾಯಕರನ್ನು ಸಾವಿರ ಸುಳ್ಳು ಹೇಳಿ ಕರೆದುಕೊಂಡು ಬಂದಿರುತ್ತಾರೆ. ಅಂಥವರ ನಡುವೆ ನಿಂತು ಒಂದು ಶಾಶ್ವತ ಸತ್ಯವನ್ನು ಹೇಳುವುದು ನಿಜಕ್ಕೂ ಕಷ್ಟದ ಕೆಲಸ. ಆದರೆ ಎರಡೂ ಧರ್ಮಗಳೆಡೆಗಿನ ಗೇಲಿ ಕೈಬಿಟ್ಟು, ಎರಡೂ ಗುಂಪುಗಳಲ್ಲಿರುವ ಪಾಖಂಡಿಗಳನ್ನು ಖಂಡಿಸಿ ದತ್ತಪೀಠವನ್ನು ಹಸಿರು ಮತ್ತು ಕೇಸರಿಗಳೆರಡರಿಂದಲೂ ಮುಕ್ತಗೊಳಿಸಿಬಿಟ್ಟರೆ, ಅದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ.

(ಸ್ನೇಹಸೇತು- ಹಾಯ್‌ ಬೆಂಗಳೂರ್‌ !)

ಮುಖಪುಟ / ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X