• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಲ್ಲಿ ಸೀತೆಯ ಮಗಳು, ಅಲ್ಲೊಬ್ಬ ಅನಿರುದ್ಧ - ಯಾವ ಜನ್ಮದ ನಂಟಿದು ?

By Staff
|
Ravi Belagere on Thatskannada.com ರವಿ ಬೆಳಗೆರೆ
ಯಾಕೋ ಈ ವಾರವೆಲ್ಲ ಆತಂಕಕಾರಿ ವರ್ತಮಾನಗಳೇ. ನಟ ವೆಂಕಿಯ ಸಾವಿನ ಸುದ್ದಿ ಕೇಳಿ ಡಿಪ್ರೆಸ್‌ ಆಗಿದ್ದೆ. ಆತ ನನಗಿಂತ ತುಂಬ ಚಿಕ್ಕವನು. ಒಂದೆರಡು ಸಲ ಭೇಟಿಯಾಗಿದ್ದ. ಯಾಕೋ ತುಂಬ ದಪ್ಪವಾಗಿಬಿಟ್ಟಿದ್ದಾನೆ ಅಂತ ಅನ್ನಿಸಿತ್ತು. ಕುಡೀತಾನಾ ಅಂತ ಕೇಳಬೇಕೆಂದುಕೊಂಡವನು ಸುಮ್ಮನಾದೆ. ಕುಡಿತಕ್ಕಿಂತ ಹೆಚ್ಚಾಗಿ ಬದುಕಿನ ಅಭದ್ರತೆ ಮತ್ತು ಸಿಗರೇಟು ಅವನನ್ನು ಕೊಂದಿವೆ. ಒಬ್ಬ ಕಲಾವಿದ ಅದರಲ್ಲೂ ನಗೆಗಾರ ಸತ್ತು ಹೋಗುವುದು ತುಂಬ ಯಾತನಾದಾಯಕ ವಿಷಯ.

ನಟ ಶಂಕರ್‌ನಾಗ್‌ ಈ ಹುಡುಗನನ್ನು ತುಂಬ ಹಚ್ಚಿಕೊಂಡಿದ್ದ ಅಂತಾರೆ. ಶಂಕರನ ಸ್ವಭಾವವೇ ಹಾಗೆ. ಎಲ್ಲರನ್ನೂ ಹಚ್ಚಿಕೊಳ್ಳುತ್ತಿದ್ದ. ಆತನೊಂದಿಗೆ ನನ್ನದು ತುಂಬ ಸ್ವಲ್ಪಕಾಲದ ಸ್ನೇಹ. ನಾನು ಸದಾ ಶಂಕರನನ್ನು ಒಂದು ವಿಸ್ಮಯ ಬೆರೆತ ಅಸೂಯೆಯಾಂದಿಗೆ ನೋಡುತ್ತಿದ್ದೆ. ದಿನಕ್ಕೆ ಇಪ್ಪತ್ನಾಲ್ಕು ಗಂಟೆ ಸಾಲದೇನೋ ಎಂಬಂತೆ ಬದುಕುತ್ತಿದ್ದ ಶಂಕರ. ಮೊದಲ ಬಾರಿಗೆ ಶಂಕರನನ್ನು ನನಗೆ ಮಿತ್ರರ್ಯಾರೋ ಕಲಾಕ್ಷೇತ್ರದ ಅಂಗಳದಲ್ಲಿ ಪರಿಚಯ ಮಾಡಿಕೊಟ್ಟಿದ್ದರು. ಅಷ್ಟು ಹೊತ್ತಿಗಾಗಲೇ ‘ಒಂದಾನೊಂದು ಕಾಲದಲ್ಲಿ’ ಸಿನಿಮಾ ಬಿಡುಗಡೆಯಾಗಿ, ಪ್ರಶಸ್ತಿ ಬಂದು ಶಂಕರ ಸ್ಟಾರ್‌ ಆಗಿದ್ದ. ‘ಒಂದಾನೊಂದು...’ ಸಿನಿಮಾ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣಗೊಂಡಿತ್ತು. ನನ್ನೊಂದಿಗೆ ಧಾರವಾಡದಲ್ಲಿ ಓದುತ್ತಿದ್ದ ಕೆಲವು ಗೆಳೆಯರು ಅದರಲ್ಲಿ ಚಿಕ್ಕ ಪುಟ್ಟ ಪಾತ್ರ ಮಾಡಿದ್ದರು. ಅದೇ ಸಿನೆಮಾದ ಚಿತ್ರೀಕರಣದ ಸಂದರ್ಭದಲ್ಲಿ ನಾನು ನಟ ಸುಂದರ್‌ರಾಜ್‌ನನ್ನು ನೋಡಿದ್ದು. ಆ ದಿನಗಳಲ್ಲಿ ಸುಂದರ್‌ ತುಂಬ ಟ್ರಿಮ್‌ ಆಗಿ, ಕಟ್ಟುಮಸ್ತಾಗಿ, ಹೊಳೆವ ಕಣ್ಣುಗಳ ಹುಡುಗನಾಗಿದ್ದ. ಮುಂದೆ ಗೋಕಾಕ್‌ ಚಳವಳಿಯಲ್ಲಿ ಶಂಕರ್‌ನಾಗ್‌ ಬಳ್ಳಾರಿಗೆ ಬಂದಿದ್ದ. ಅರ್ಧ ಗಂಟೆ ಇಬ್ಬರೇ ಕುಳಿತು ಹರಟಿದ್ದೆವು. ಆಮೇಲೆ ನಾನೇ ಬೆಂಗಳೂರಿಗೆ 1988ರಲ್ಲಿ ವಲಸೆ ಬಂದೆ. ಚಿಕ್ಕದೊಂದು ರೂಮು ಮಾಡಿಕೊಂಡು ಒಬ್ಬನೇ ಇರುತ್ತಿದ್ದೆ. ಒಂದು ಸಲ ಕಂಟ್ರಿ ಕ್ಲಬ್‌ನಿಂದ ಸರ ಹೊತ್ತಿನಲ್ಲಿ ನನ್ನ ಡ್ರಾಪ್‌ ಮಾಡಲು ಬಂದಿದ್ದ ಶಂಕರ ಆ ಕೋಣೆಯನ್ನು ಎಷ್ಟು ಕರಾರುವಾಕ್ಕಾಗಿ ನೆನಪಿಟ್ಟುಕೊಂಡಿದ್ದನೆಂದರೆ ಅದೆಷ್ಟೋ ದಿನಗಳ ನಂತರ ಅದೇ ಸರ ಹೊತ್ತಿನಲ್ಲಿ ಕೈಯಲ್ಲೊಂದು ಬಾಟಲಿ ರಮ್‌ ಹಿಡಿದುಕೊಂಡು ಬಂದು ಕದ ತಟ್ಟಿ, ‘let us celebrate the night’ ಅನ್ನುತ್ತಾ ನನ್ನ ರೂಮಿನ ಚಾಪೆಯ ಮೇಲೆ ಕಳಿತು ಗೋಡೆಗೆ ಒರಗಿಕೊಂಡು ಕುಳಿತವನು ಬೆಳತನಕ ಕುಡಿದಿದ್ದ. ಕುಡಿಸಿದ್ದ. ವೆಂಕಿಯ ಸಾವಿನ ಸುದ್ದಿ ಕೇಳಿದವನಿಗೆ ಯಾಕೋ ತೀವ್ರವಾಗಿ ನೆನಪಾದದ್ದು, ಮತ್ತಷ್ಟು ಖಿನ್ನನನ್ನಾಗಿಸಿದ್ದು ಶಂಕರನ ನೆನಪು.

ವೆಂಕಿಯ ಸಾವಿಗಿಂತ ಮುಂಚೆಯೇ ಬಂದ ನಾಲ್ಕು ಸುದ್ದಿಗಳು ನನ್ನನ್ನೂ ಸೇರಿದಂತೆ ನಮ್ಮ ಇಡೀ ಗೆಳೆಯರ ಗುಂಪನ್ನು ಕಸಿವಿಸಿಗೆ ಈಡು ಮಾಡಿದ್ದವು. ಆವತ್ತು ಆಗಸ್ಟ್‌ 15ರಂದು ಪ್ರಾರ್ಥನಾ ಶಾಲೆಯ ವೇದಿಕೆಯ ಮೇಲಿದ್ದಾಗಲೇ ನನ್ನ ಫೋಟೋಗ್ರಾಫರ್‌ ಗೆಳೆಯರಾದ ದಿನೇಶ್‌ ಒಂದು ಚೀಟಿ ಕಳಿಸಿದ್ದರು. ‘ಕಾರ್ಯಕ್ರಮ ಮುಗಿದ ಕೂಡಲೇ ಎರಡೇ ಎರಡು ನಿಮಿಷದ ಮಟ್ಟಿಗೆ ಸಿಗುತ್ತೀರಾ ?’ ಅಂತ ಬರೆದಿತ್ತು. ಹಿಂದಿನ ದಿನವಷ್ಟೇ ಮಧ್ಯರಾತ್ರಿ ಫೋನು ಮಾಡಿ ಅವರ ಮನೆಯಾಕೆಗೆ ಡೆಲಿವರಿ ಆಗಿ ಹೆಣ್ಣು ಮಗು ಅಂತ ಹೇಳಿದ್ದರು. ‘ ಆಗಸ್ಟ್‌ 14ರ ಮಧ್ಯರಾತ್ರಿ ಸ್ವಾತಂತ್ರ್ಯ ಕುಮಾರಿ ಹುಟ್ಟಿದಳಲ್ಲ ದಿನೇಶ್‌’ ಅಂತ ತಮಾಶೆ ಮಾಡಿ ಕಂಗ್ರಾಟ್ಸ್‌ ಹೇಳಿದ್ದೆ. ಅವರ ಪತ್ನಿ ಸೀತಾ ಕೂಡ ನಮಗೆಲ್ಲ ಪರಿಚಿತರು. ಒಳ್ಳೆ ಗೆಳತಿ. ಅನೇಕ ಭಾಷೆಗಳು ಗೊತ್ತಿರುವಾಕೆ. ಚೆಂದಗೆ ಹಾಡುತ್ತಾರೆ. ಸಾಫ್ಟ್‌ವೇರ್‌ ಸಂಬಂಧಿ ಕಂಪೆನಿಯಾಂದರಲ್ಲಿ ಕೆಲಸಕ್ಕಿದ್ದಾರೆ. ಗಂಡ ಹೆಂಡತಿಯರಿಬ್ಬರೂ ಚಿಕ್ಕಮಗಳೂರು ಕಡೆಯವರು. ಇಬ್ಬರಿಗೂ ನನ್ನ ಮನೆಯ ಎಲ್ಲರೊಂದಿಗೂ ಗೆಳೆತನವಿದೆ. ಆವತ್ತು ಚೀಟಿ ಓದಿಕೊಂಡ ನಾನು ದಿನೇಶ್‌ ಕಡೆಗೆ ನೋಡಿದರೆ ಮುಖದಲ್ಲಿ ಏನೋ ಧಾವಂತವಿತ್ತು. ವೇದಿಕೆಯಿಳಿದು ಬಂದವನಿಗೆ,

‘ಮಗೂಗೆ ಹುಶಾರಿಲ್ಲವಂತೆ. ನಂಗೆ ಏನೂ ತೋಚ್ತಿಲ್ಲ. ಈಗ ಫೋನು ಬಂತು. ನಂಗೊಂದು ಕಾರು ಮಾಡಿಕೊಡ್ತೀರಾ ?’ ಅಂದರು ದಿನೇಶ್‌. ಆಗಲೇ ಅವರ ಗಂಟಲು ಕಟ್ಟಿತ್ತು. ಕಣ್ಣಲ್ಲಿ ಸಣ್ಣ ತೆರೆಯಷ್ಟೇ ನೀರು.

‘ರೀ, ದಿನೇಶ್‌ ಇದೇನು ಹಿಂಗಾಡ್ತಿದೀರಾ ? ಕಾರು ತಗೊಂಡು ಹೋಗ್ರೀ. ಮಗೂಗೆ ಏನೂ ಆಗಿರೋದಿಲ್ಲ. ಊರು ತಲುಪಿದ ಮೇಲೆ ಫೋನ್‌ ಮಾಡಿ. ನೀವೊಳ್ಳೆ...ಹೆಣ್ಮಕ್ಕಳ ಥರ ಅಳ್ತೀರಲ್ರೀ’ ಎಂದು ಗದರುವ ದನಿಯಲ್ಲಿ ಧೈರ್ಯ ಹೇಳಿ ಮೆರವಣಿಗೆಗೆ ಹೊರಟು ಬಿಟ್ಟೆನಾದರೂ ಅಳುಕು ನನಗೆ ಇದ್ದೇ ಇತ್ತು. ಒಬ್ಬರನ್ನೊಬ್ಬರು ತುಂಬ ಪ್ರೀತಿಸಿ ಮದುವೆಯಾದವರು ಸೀತಾ ಮತ್ತು ದಿನೇಶ್‌. ಮನೆಯಲ್ಲಿ ವಿರೋಧಗಳಿದ್ದವು. ಮದುವೆಯಾಗಿ ಕೆಲ ವರ್ಷ ಮಕ್ಕಳಿರಲಿಲ್ಲ. ಗಂಡ ಹೆಂಡತಿ ಬೇರೆ ಬೇರೆ ಊರುಗಳಲ್ಲಿರುವ ಅನಿವಾರ್ಯತೆಯಿತ್ತು. ಈಗೊಂದು ಮಗುವಾಯಿತಲ್ಲಾ ಅಂದುಕೊಳ್ಳುವಷ್ಟರಲ್ಲಿ ಇದೆಲ್ಲಿಯ ಸಮಸ್ಯೆ ಬಂತಪ್ಪಾ ಅಂದುಕೊಳ್ಳುತ್ತಿದ್ದೆ. ಇಂಥದೊಂದು ದುಗುಡವನ್ನು ನಾನು ಇಪ್ಪತ್ಮೂರು ವರ್ಷಗಳ ಹಿಂದೆ ಅನುಭವಿಸಿದ್ದು ನನಗೆ ನೆನಪಿದೆ. ಮೊದಲ ಕಂದ ನಮಗೆ ದಕ್ಕದೆ ಹೋದಾಗ ಬಳ್ಳಾರಿಯ ಆಸ್ಪತ್ರೆಯ ಕಲ್ಲಿನ ಕಂಬಕ್ಕೆ ಹಣೆ ಹಣೆ ಚಚ್ಚಿಕೊಂಡು ಅತ್ತುಬಿಟ್ಟಿದ್ದೆ. ಒಳಗೆ ಲೇಬರ್‌ ವಾರ್ಡ್‌ನಲ್ಲಿ ಲಲಿತೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಳು. ಮುಂದೆ ಚೇತನಾ ಹುಟ್ಟಿದಾಗ ನಾನು ಅದೆಷ್ಟು ಟೆನ್ಸ್‌ ಆಗಿದ್ದೇನೆಂದರೆ ‘ಇದೇನು ನಿಂಗೇ ಹೆರಿಗೆ ನೋವು ಬಂದಂಗೆ ಆಡ್ತಿದೀಯಲ್ಲ ?’ ಅಂತ ಬಳ್ಳಾರಿಯ ಡಾ. ಶಾಂತಾ ಸೀತಾರಾಂ ತಮಾಷೆ ಮಾಡಿದ್ದರು. ಪ್ರಸೂತಿ ಕೋಣೆಯ ಹೊರಗೆ ಬೆಂಚಿನ ಮೇಲೆ ಕುಳಿತವನಿಗೆ ‘ಜಗತ್ತಿನಲ್ಲಿ ನಂಗಿನ್ನೇನೂ ಬೇಕಿಲ್ಲ. ಲಲಿತೆ ಮತ್ತು ಮಗು ಬದುಕಿ ಹೊರ ಬಂದರೆ ಸಾಕು’ ಅನ್ನಿಸಿತ್ತು. ಹೆಣ್ಣು ಮಗು ಆಯ್ತು ಅಂತ ನರ್ಸ್‌ ಬಂದು ಹೇಳಿದ ತಕ್ಷಣ ಹಸರತ್‌ ಜೈಪುರಿ ಎಂಬ ಕವಿಯ ಹಾಡಿನ ನಾಲ್ಕು ಸಾಲುಗಳನ್ನು ಹರಕು ಕಾಗದವೊಂದರ ಮೇಲೆ ಬರೆದು ಲಲಿತಳಿದ್ದ ಹೆರಿಗೆ ವಾರ್ಡಿನೊಳಕ್ಕೆ ಕಳಿಸಿದ್ದೆ :

ಜೋ ಖುಷಿ ಮಿಲೀ ಹೈ

ಮುಝ್‌ಕೋ

ಮೈ ಖುಷೀ ಸೆ ಮರ್‌ ಜಾವೂಂ...

ನನಗಾಗ ಬರೀ ಇಪ್ಪತ್ತೆರಡೂವರೆ ವರ್ಷ ವಯಸ್ಸು. ಅದೇನೂ ನಮ್ಮದು ಅಮರ ಪ್ರೇಮ ಅಂತಲ್ಲ. ಒಂದು sense of security ಒದಗಿಸುವುದರ ಹೊರತಾಗಿ ಗಂಡಸು ಬೇರೇನು ತಾನೆ ಮಾಡಬಲ್ಲ ? ಆಗಸ್ಟ್‌ ಹದಿನೈದರ ಮೆರವಣಿಗೆಯಲ್ಲಿ ನಡೆಯುತ್ತಿದ್ದರೆ ನನಗೆ ಅದೇ ನೆನಪು. ರಾತ್ರಿ ಹೊತ್ತಿಗೆ ಊರು ತಲುಪಿಕೊಂಡ ದಿನೇಶ್‌ ಫೋನು ಮಾಡಿದ್ದರು. ‘ಮಗುವಿಗೆ ಬೇರೆ ತೊಂದರೆಯೇನೂ ಇಲ್ಲ. ಆರೋಗ್ಯವಾಗಿದೆ. ಎರಡೂ ಕೈಗಳಲ್ಲಿ ಆರು ಬೆರಳಿವೆ. ಒಂದು ಪಾದ ನಲವತ್ತೆೈದು ಡಿಗ್ರಿಗಳಷ್ಟು ಒಳಕ್ಕೆ ತಿರುಗಿಕೊಂಡು ಬಿಟ್ಟಿದೆ. ಇಲ್ಲಿ ತುಂಬ ಮಳೆ. ಬಾಣಂತನ ಕಷ್ಟ . ಸೀತಾ ತುಂಬ ಡಿಪ್ರೆಸ್‌ ಆಗಿದ್ದಾಳೆ. ಮಾತಾಡಿ ನೀವೇ ಸಮಾಧಾನ ಹೇಳಿ.’ ಅನ್ನುತ್ತಾ ಅವರ ಮನೆಯಾಕೆಗೆ ಕೊಟ್ಟರು. ಮಾತಾಡುತ್ತಾ ಆಡುತ್ತಾ ಸೀತಾ ಅತ್ತೇ ಬಿಟ್ಟರು.

ಅದೊಂದು ಸ್ಥಿತಿ ಇದೆಯಲ್ಲ ? ಹೆಣ್ಣು ಮಕ್ಕಳನ್ನು ತುಂಬ ಬಲಹೀನ ಗೊಳಿಸುವ ಮತ್ತು ಅವರ ಬಗ್ಗೆ ನನ್ನಲ್ಲಿ ಅಪಾರವಾದ ಪ್ರೀತಿ, ಗೌರವ, ಕರುಣೆ- ಎಲ್ಲವೂ ಮೂಡಿ ನಿಲ್ಲುವ ಘಳಿಗೆಯದು. ಹೆಣ್ಣು ಆ ಸ್ಥಿತಿಯಲ್ಲಿ ಎಷ್ಟು ಬಲಹೀನಳಾಗಿರುತ್ತಾಳೆಂದರೆ ಆಕೆಗೆ ತಕ್ಷಣಕ್ಕೆ ಅಮ್ಮ ಬೇಕು! ತಕ್ಷಣಕ್ಕೊಬ್ಬ ಅಕ್ಕ ಬೇಕು. ಗಂಡ ಜೊತೆಯಲ್ಲೇ ಇರಬೇಕು. ಇವರೆಲ್ಲ ಇದ್ದಾರಾದ್ದರಿಂದ ತನ್ನ ಮಗುವಿಗೆ ಏನೂ ಆಗುವುದಿಲ್ಲ ಬಿಡು ಎಂಬ ಧೈರ್ಯ ಬರಬೇಕು. ‘ದಿನೇಶ್‌, ನೀವು ಸೀತನನ್ನೂ ಮಗೂನೂ ಕರಕೊಂಡು ತಕ್ಷಣ ಹೊರಟು ಬಂದುಬಿಡಿ. ಮೊದಲು ಬೆಂಗಳೂರಿಗೆ ಬಂದುಬಿಡಿ. ಬೆಂಗಳೂರಿಗೆ ಬಂದವರೇ ನಮ್ಮ ಮನೇಗೇ ಬಂದುಬಿಡಿ. ಮಗೂ ಕಾಲಿನ ವಿಷಯವಾಗಿ ನಾನು ಡಾಕ್ಟರ ಹತ್ತಿರ ಮಾತಾಡಿಟ್ಟಿರ್ತೇನೆ’ ಅಂದೆ. ಅಂದವನೇ ಲಲಿತೆಗೆ ಫೋನು ಮಾಡಿ, ‘ಸೀತಾ ಬರ್ತಿದ್ದಾರೆ, ಮಗೂನ ಕರ್ಕೊಂಡು’ಅಂತ ಹೇಳಿದೆ.

ಅಷ್ಟು ಪುಟ್ಟ ಮಗು. ಕೆಲವೇ ದಿನಗಳ ಮಗು. ಆ ಬೊಮ್ಮಟೆ ಬೊಮ್ಮಟೆ ಕಾಲಿನ, ಪುಟ್ಟ ಕಣ್ಣಿನ ಮೆತ್ತನೆಯ ತಲೆಯ, ಛಣ್ಣ ಪಾಪಚ್ಚಿಯಂಥ ಮಗು ನಮ್ಮ ಮನೆಗೆ ಬಂದು ಅವೆಷ್ಟು ವರ್ಷಗಳಾಗಿದ್ದವೋ ? ಲಲಿತೆಗೂ ಸಡಗರ. ಅವಳಿಗಿಂತ ಅವಳ ತಾಯಿ ಇದ್ದಾರಲ್ಲ ? ನನ್ನ ಅತ್ತೆ ಶಾರದಮ್ಮನೋರು. ಅವರ ಮಕ್ಕಳೇ ಏಳು ಜನ. ಮೊಮ್ಮಕ್ಕಳು ಅವೆಷ್ಟೋ. ಎಷ್ಟು ಬಾಣಂತನ ಮಾಡಿದ್ದಾರೋ ? ಈಗ ಅವರಿಧಿಗೆ ಸರಿ ಸುಮಾರು 70 ವರ್ಷ. ಆದರೆ ಈ ಕ್ಷಣಕ್ಕೊಂದು ಮಗು ತಂದು ಅವರ ಕೈಲಿಡಿ. ಯಥಾ ಪ್ರಕಾರ ಆಕೆ ಅಮ್ಮನೇ ಅಮ್ಮ. ಊರಿಂದ ಸೀತಾ ಬರುವ ಹೊತ್ತಿಗೆ ತಾಯಿ ಮಗುವಿಗೆ ಬಾಣಂತಿ ಸಾರು, ಮಗುವಿಗೆ ಫ್ರಾಕು, ಅದೇನೋ ಶಾಸ್ತ್ರ....

‘ಲಲಿತಕ್ಕನ ಮನೇಗೆ ಬಂದ್ರೆ ತಾಯಿ ಮನೇಗೆ ಬಂದ್ಹಂಗಾಯ್ತು’ ಅಂದರಂತೆ ಸೀತಾ. ಮಾರನೆಯ ದಿನ ನಾನು ಹೋಗಿ ಮಗುವಿಗೆ ಗೆಜ್ಜೆ, ಕಡಗ, ಕಿವಿಗೆ ಲೋಲಕ್ಕು ಎಲ್ಲ ಕೊಟ್ಟು ಮಗುವಿನೊಂದಿಗೆ ಒಂದಷ್ಟು ಹೊತ್ತು ಆಟವಾಡಿ, ನನ್ನ ಮುಚ್ಚಟೆ ತೀರಿಸಿಕೊಂಡು ಬಂದೆ. ಇಂಥ ಸಂದರ್ಭಗಳಲ್ಲಿ ನನಗೆ ನೆನಪಾಗುವ ಏಕೈಕ ವ್ಯಕ್ತಿ ಎಂದರೆ ಆಶಾ. ಡಾ.ಆಶಾ ಬೆನಕಪ್ಪ. ಆಕೆಯಷ್ಟು ಬುದ್ಧಿವಂತ ಅಕ್ಕರೆಯ ವೈಜ್ಞಾನಿಕ ರೀತಿಯಲ್ಲಿ ಮಕ್ಕಳನ್ನು ನೋಡುವ ಇನ್ನೊಬ್ಬ ಮಕ್ಕಳ ಡಾಕ್ಟರನ್ನು ನಾನು ನೋಡಿಲ್ಲ. ಆಶಾಗೆ ಫೋನು ಮಾಡಿ ವಿಷಯವೆಲ್ಲ ವಿವರಿಸಿ, ಮಗುವಿನ ಜವಾಬ್ದಾರಿ ನಿಮ್ಮದೇ ಡಾಕ್ಟರೇ ಅಂದೆ. ಅಂದದ್ದಷ್ಟೆ. ಬೆಂಗಳೂರಿನ ಅಷ್ಟೂ ಮಕ್ಕಳ ಸ್ಪೆಷಲಿಸ್ಟುಗಳು ಸೀತಾಳ ಮಗುವಿನ ಸುತ್ತ ನೆರೆದಿದ್ದರು. ಮೂರು ತಿಂಗಳ ಮೇಲಾಗಿದಿದ್ದರೆ ಪಾದದ ಆಪರೇಷನ್‌ ಮಾಡಬೇಕಾಗುತ್ತಿತ್ತು. ಈಗ ಸುಮ್ಮನೆ ಪ್ಲಾಸ್ಟರು ಹಾಕಿದರೆ ಸಾಕು ಅಂದದ್ದೇ ಹದಿನೈದು ದಿನಗಳ ಕಂದನ ಪಾದಕ್ಕೂ ಪ್ಲಾಸ್ಟರ್‌ ಹಾಕಿ ಕಳಿಸಿದ್ದಾರೆ. ಅದಿನ್ನು ಕದನ ಗೆದ್ದಂತೆಯೇ.

ಈ ಮಧ್ಯೆ ನನ್ನ ಬಾಲ್ಯದ ಗೆಳೆಯ ಕೃಷ್ಣ ಪ್ರಸಾದನ ಸೋದರ ಸೊಸೆಯಾಬ್ಬ ಹುಡುಗಿ ಒಂದು ವರ್ಷದಿಂದ ಅಪ್ಪಾಜಿ, ಅಪ್ಪಾಜಿ ಅನ್ನುತ್ತಾ ನನ್ನ ಆಫೀಸು ಮನೆಯ ಸುತ್ತ ಓಡಾಡುತ್ತಿದ್ದಳು. ಅವಳ ಎರಡು ಬಲು ಜಾಣ ಮಕ್ಕಳಿಗೆ ಪ್ರಾರ್ಥನಾ ಶಾಲೆ ಸೀಟು, ಯೂನಿಫಾರ್ಮು, ಫೀಜು ಎಲ್ಲವನ್ನೂ ಕೊಟ್ಟಿದೆ. ಅಂಥ ಹುಡುಗಿಯನ್ನು ಕರೆದು ‘ನಂಗೊಂದು ಹೆಲ್ಪ್‌ ಮಾಡ್ತೀಯಾ ಮಗಳೇ’ ಅಂತ ಕೇಳಿದೆ. ಸೀತಾಗೆ ಕೆಲವು ತಿಂಗಳ ಮಟ್ಟಿಗೆ ನೆರವಾಗು ಅಂದೆ. ತಕ್ಷಣ ಸಂತೋಷದಿಂದ ಒಪ್ಪಿಕೊಂಡಳು. ಈಗ ದಿನೇಶ್‌ ಮನೆಯಲ್ಲಿ ನೆಮ್ಮದಿ, ಸಂಭ್ರಮ, ಕಂದನ ಕೇಕೆ. ದಂಪತಿಗಳ ಕಣ್ಣಲ್ಲಿ ಇಷ್ಟಗಲ ನಗೆ. ನಮಗೆ ಗೊತ್ತು- ಆ ಮಗು ಲಲಿತಳನ್ನೂ ನನ್ನನ್ನೂ ದೊಡ್ಡಪ್ಪ ದೊಡ್ಡಮ್ಮ ಅಂತಲೋ ಅತ್ತೆ ಮಾಮಾ, ಅಜ್ಜ- ಅಜ್ಜಿ ಅಂತಲೋ ಅನ್ನುತ್ತಾ ನಮ್ಮನ್ನು ಕಚ್ಚಿಕೊಂಡೇ ಬೆಳೆಯುತ್ತದೆ. ಅದು ಕೊಡುವ ಅಷ್ಟೂ ಸಂತೋಷಗಳೂ ನಮ್ಮವೇ. ನಾವು ಮಾಡಿದ್ದು ಏನೇನೂ ಅಲ್ಲ. ಅಕ್ಕರೆಯ, ಧೈರ್ಯದ, ನಾವಿದ್ದೇವೆ ಬಿಡು ಅನ್ನುವ ಧಾಟಿಯ ನಾಲ್ಕು ಮಾತು. ಇಂಥ ಉಪಕಾರವನ್ನು ನಮ್ಮ ಗೆಳೆಯರು, ನಮ್ಮ ಹಿರಿಯರು ನಮಗೆ ಅದೆಷ್ಟು ಸಲ ಅದೆಷ್ಟು ರೀತಿಗಳಲ್ಲಿ ಮಾಡಿದ್ದಾರೋ ? ಅದನ್ನೆಲ್ಲ ನಿವೇದಿತಾಳಿಗೆ ಹೇಳುತ್ತಾ ಕುಳಿತಿದ್ದಾಗಲೇ ಮೈಸೂರಿನ ನನ್ನ ಪತ್ರಕರ್ತ ಮಿತ್ರ ಹಾಗೂ ನಂಜನಗೂಡಿನ ನಮ್ಮ ಏಜೆಂಟ್‌ ಕೂಡ ಆದ ಮೋಹನ್‌ಗೆ ಹೃದಯಾಘಾತ ಆಗಿದೆ ಎಂಬ ಸುದ್ದಿ ಬಂತು. ಮೋಹನ ನನಗೆ, ನಿವೇದಿತಂಗೆ, ನಮ್ಮ ಸಂತೋಷ್‌ಗೆ - ಎಲ್ಲರಿಗೂ ತುಂಬ ಬೇಕಾದ ಗೆಳೆಯ. ಭಯಂಕರ ಹಾಸ್ಯ ಪ್ರಜ್ಞೆ ಇರುವ ಸಾತ್ವಿಕ ಮನುಷ್ಯ. ಮನೆಯಿಂದ ಹೊರಬಿದ್ದನೆಂದರೆ ತೊಟ್ಟು ಕಾಫಿಯೂ ಕುಡಿಯದ ಕರ್ಮಠ ಮಡಿವಂತ. ಅಂಥವನಿಗೆ ಇದೆಂಥ ಹಾರ್ಟ್‌ ಅಟ್ಯಾಕು ಅಂತ ನಾವೆಲ್ಲಾ ತಲೆ ಕೆಡಿಸಿಕೊಂಡಿದ್ದಾಗಲೇ ನಿವೇದಿತಾ ಮೈಸೂರಿಗೆ ಹೊರಟೇ ಬಿಟ್ಟಳು. ಹಿಂತಿರುಗಿದವಳ ಕಣ್ತುಂಬ ನೀರು. ಮೋಹನನ ಮಗ, ಹತ್ತು ವರ್ಷದ ಅನಿರುದ್ಧನಿಗೆ ಮಿದುಳಿನಲ್ಲೆಂಥದ್ದೋ ಇನ್‌ಫೆಕ್ಷನ್‌ ಅಂತೆ. ಅವನು ಪ್ರಜ್ಞೆ ತಪ್ಪಿ ಒಂದು ತಿಂಗಳಾಗಿದೆ. ಮಗನ ಅನಾರೋಗ್ಯದ ಘಾತ ತಡೆಯಲಾಗದೆ ಮೋಹನ್‌ಗೆ ಹಾರ್ಟ್‌ ಅಟ್ಯಾಕ್‌ ಆಗಿದೆ.... ಅಂದವಳೇ ಬಿಕ್ಕತೊಡಗಿದಳು. ಯಾವತ್ತೂ ಯಾರಿಗೂ ತೊಂದರೆ ಕೊಡದ ಮೋಹನ್‌ಗೆ ಇದೆಂಥ ಹಿಂಸೆ ಅಂತ ಬೇಸರ ಮಾಡಿಕೊಂಡು ಕುಳಿತಿದ್ದೆ. ಅಷ್ಟರಲ್ಲಿ ಧಾರವಾಡದ ಗೆಳೆಯರೊಬ್ಬರ ಮಗನಿಗೆ ಕ್ಯಾನ್ಸರು ಅಂತ ಸುದ್ದಿ ಬಂತು. ಇನ್ನೊಬ್ಬ ಗೆಳೆಯ ಈಗಷ್ಟೆ ಕ್ಯಾನ್ಸರು ಪೀಡೆ ಕಳೆದುಕೊಂಡು ಚೇತರಿಸಿಕೊಂಡು ಬಂದು ಎದುರಿಗೆ ಕುಳಿತಿದ್ದ. Ofcourse, ಈಗೆಲ್ಲ ಕ್ಯಾನ್ಸರ್‌ ದೊಡ್ಡ ಕಾಯಿಲೆಯೇ ಅಲ್ಲ. ಅದರಲ್ಲೂ ಜಯನಗರದ ವೃದ್ಧ ಹೋಮಿಯೋಪತಿ ವೈದ್ಯರೊಬ್ಬರು ಅದಕ್ಕೆ ಅದ್ಭುತ ಚಿಕಿತ್ಸೆ ನೀಡುತ್ತಿದ್ದಾರೆ. ಸ್ವತಃ ಅವರಿಗೇ ತೊಂಬತ್ತು ವರ್ಷ ವಯಸ್ಸು. ನಿರ್ದೇಶಕ ಜಿ.ವಿ.ಅಯ್ಯರ್‌ಗೆ ಕ್ಯಾನ್ಸರ್‌ ಆಗಿಯೇ ಒಂದೂವರೆ ದಶಕಗಳ ಮೇಲಾಗಿದೆ. ಪುಣ್ಯಾತ್ಮ ಬಿಡುಬೀಸಾಗಿ ಓಡಾಡಿಕೊಂಡಿದ್ದಾರೆ. ನನ್ನ ಗೆಳೆಯನ ಮಗನೂ ಹಾಗೇ ಹುಶಾರಾಗಿಬಿಡಲಿ. ನನ್ನ ಗೆಳೆಯನೂ ಪೂರ್ತಿ ಚೇತರಿಸಿಕೊಂಡು ಬಿಡಲಿ. ಮೋಹನ ಮತ್ತೆ ನಮ್ಮ ಆಫೀಸಿಗೆ ಬಂದು ಪಕ್ಕೆ ಹಿಡಿಯುವಂತೆ ನಮ್ಮನ್ನೆಲ್ಲ ನಗಿಸಲಿ. ಅವನ ಮಗ ಅನಿರುದ್ಧ ಪ್ರಾರ್ಥನಾ ಶಾಲೆಗೆ ಬಂದುಬಿಡಲಿ. ಹಾಗಂತ ಆಶಿಸುತ್ತೇನೆ.

ನಾನು ಹಠಮಾರಿ. ಆಸೆಗಳನ್ನು ಈಡೇರಿಸಿಕೊಂಬುದು ನನಗೆ ಗೊತ್ತು.

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more