ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕ ಊರುಗಳ ಪುಟ್ಟ ಬಾರುಗಳಲ್ಲಿಸತ್ತು ಹೋಗುವ ಪತ್ರಿಕೋದ್ಯಮಂ ಅಂದರೇ...

By Staff
|
Google Oneindia Kannada News
Ravi Belagere on Thatskannada.com ರವಿ ಬೆಳಗೆರೆ

ಯಾಕೋ ಗೊತ್ತಿಲ್ಲ ; ಮನಸು ತುಂಬ ಉದ್ವಿಗ್ನ. ಅವತ್ತು ಬೆಳಗ್ಗೆಯಿಂದಲೇ ಕಣ್ಣಲ್ಲಿ ಗಿರಗಿಟ್ಲೆ ತಿರುಗುವ ನೀರು. ನಿವೇದಿತಾ ಜೊತೆಗೆ ಜಗಳ ಮಾಡಿಕೊಂಡಿದ್ದೆ. ನನ್ನನ್ನು ನನ್ನ ಮಕ್ಕಳಿಗಿಂತ ಚೆನ್ನಾಗಿ ನೋಡಿಕೊಳ್ಳುವ ಸೀನನೊಂದಿಗೆ ಜಗಳ ಮಾಡಿಕೊಂಡಿದ್ದೆ. ಯಶೋಮತಿಯಾಂದಿಗೆ ಜಗಳ ಮಾಡಿದ್ದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಅವತ್ತು ನನ್ನಲ್ಲಿ ನಾನಿರಲಿಲ್ಲ. ಅತ್ತು ಬಿಡೋಣವೆಂದರೆ, ಅದು ಅಳುವಲ್ಲ. ಸುಮ್ಮನಿರೋಣವೆಂದರೆ, ಕಣ್ಣು ಒಣಗುವುದಿಲ್ಲ ; ಅಂಥ ಸ್ಥಿತಿ. ಸಾಮಾನ್ಯವಾಗಿ ಹೀಗೆ ತುಂಬ ತಲ್ಲೀನನಾಗಿ ದಿನಗಟ್ಟಲೆ ಪುಸ್ತಕ ಬರೆಯಲು ಕುಳಿತಾಗ ಮನಸ್ಸು ವಿಪರೀತ sensitive ಆಗಿ ಬಿಡುತ್ತದೆ. ಸಣ್ಣದಕ್ಕೂ ರೇಗುತ್ತೇನೆ. ಮನೆಗೆ ಹೋದರೆ ಮಕ್ಕಳ ಮೇಲೆ ರೇಗುತ್ತೇನೆ ಅಂತ ಹೆದರಿಕೊಂಡು ಆಫೀಸಿನಲ್ಲಿ ಮಕ್ಕಳಂತಹ ಹುಡುಗರ ಮೇಲೆ ರೇಗುತ್ತೇನೆ. ಇಷ್ಟೆಲ್ಲ ಯಾತನೆ ಅನುಭವಿಸಿಯಾದರೂ ಒಂದಷ್ಟು ಪುಸ್ತಕಗಳನ್ನು ಯಾಕೆ ಬರೆಯಬೇಕೋ ಅನ್ನಿಸಿಬಿಡುತ್ತದೆ. ಆದರೆ, ಬರೆಯಲು ಸಾಧ್ಯವಾಗದೆ ಹೋದರೆ ನನಗೆ ನನ್ನ ಮೇಲೆಯೇ ರೇಗುವಂತಾಗುತ್ತದೆ. ಇವು ಬರೆಯುವವನ ಫಜೀತಿಗಳು. ನಾನು ಮನೆಗೆ ಹೋಗಿ ಒಂದು ತಿಂಗಳ ಮೇಲಾಯಿತು.

‘ಇವತ್ತಾದರೂ ಹೋಗೋಣ’ ಅಂದುಕೊಂಡು ಮೊನ್ನೆ ಸೆಪ್ಟೆಂಬರ್‌ 25ರಂದು ಮೇಲೆದ್ದೆ. ಅವತ್ತು ಪತ್ರಿಕೆಯ birthday. ಹುಡುಗರಿಗೆಲ್ಲ ಬೋನಸ್‌ ಕೊಡುವುದಿತ್ತು. ನಿವೇದಿತಾಳೊಂದಿಗೆ ರಾಜಿ ಮಾಡಿಕೊಂಡು ‘ಇವತ್ನಿಂದ say!’ ಅನ್ನುವುದಿತ್ತು. ಹಾಗಂದುಕೊಂಡೇ ಮೇಲೆದ್ದವನಿಗೆ, ನಮ್ಮ ಟೆಲಿಫೋನ್‌ ಆಪರೇಟರ್‌ ಹುಡುಗಿ ಬಂದು ಹೇಳಿದಳು :

‘ನಮ್ಮಲ್ಲಿ ರಿಪೋರ್ಟರ್‌ ಆಗಿದ್ರಲ್ವಾ ಮೆ.ನಾ.ನಾಗರಾಜು ಅಂತ ? ಅವರು ಈಗಷ್ಟೆ ತೀರಿಕೊಂಡರಂತೆ !’

ನೀವು ನಂಬಲಿಕ್ಕಿಲ್ಲ. Of course, ಅತಿ ಮಾನುಷವಾದದ್ದನ್ನು ನಾನೂ ನಂಬುವುದಿಲ್ಲ. ಆದರೆ, ಅದೇಕೋ ಒಂದೇ ಒಂದು ದಿನದ ಮುಂಚೆಯಷ್ಟೆ ನಾನು ವರದಿಗಾರ ನಾಗರಾಜುವಿನ ಬಗ್ಗೆ ಯೋಚಿಸಿದ್ದೆ. ಈ ಹುಡುಗ ಸತ್ತು ಬಿಡುತ್ತಾನಾ? ಅನ್ನಿಸಿತ್ತು. ನನ್ನ ಕಾಕತಾಳೀಯ ಅನುಮಾನ ಸುಳ್ಳಾಗಲಿಲ್ಲ. ಮೆ.ನಾ.ನಾಗರಾಜು ಅನ್ನೋ ಹೆಸರಿನಲ್ಲಿ ನಮ್ಮಲ್ಲಿ ಕೆಲವು ವರದಿಗಳು ಅಚ್ಚಾಗಿದ್ದುದು ನಿಮಗೆ ನೆನಪಿರಲಿಕ್ಕೂ ಸಾಕು. ಬೆಂಗಳೂರು ಗ್ರಾಮಾಂತರ, ದೇವನಹಳ್ಳಿ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ ಇತ್ಯಾದಿ ಊರುಗಳಿಂದ ಆಗೊಂದು- ಈಗೊಂದು ವರದಿ ತಂದುಕೊಡುತ್ತಿದ್ದ ಆತ. ಕಪ್ಪಗಿದ್ದ, ಕುಳ್ಳಗಿದ್ದ, ಹಲ್ಲು ಉಬ್ಬಿದ್ದವು. ಹೀಗಾಗಿ ಸದಾ ನಗುತ್ತಿರುವಂತೆ ಕಾಣುತ್ತಿದ್ದ. ಆದರೆ ನಗುವುದಕ್ಕಿಂತ ಹೆಚ್ಚಾಗಿ ಕುಡಿದಿರುತ್ತಿದ್ದ. ಪದೇಪದೇ ಖಾಯಿಲೆ ಬೀಳುತ್ತಿದ್ದ. ‘ನಂಗೆ ಲಿವರ್ರು ಸಾರ್‌’ ಅಂತ ಒಮ್ಮೆ ಅಂದರೆ, ‘ಲಿವರ್ರಲ್ವಂತೆ ಶುಗರ್ರಂತೆ !’ ಅಂತ ಇನ್ನೊಮ್ಮೆ ಅನ್ನುತ್ತಿದ್ದ. ಇನ್ನೊಂದು ದಿನ ಬಂದು ‘ಕುಡಿಯೋದು ಬಿಟ್ಬಿಟ್ಟೆ ಸಾರ್‌... ಶುಗರ್ರು ವಾಸಿಯಾಗೋಗಿದೆ’ ಅನ್ನುತ್ತಿದ್ದ. ಕೆಲವೊಮ್ಮೆ ‘ನಮ್ತಂದೇಗೆ ಹುಶಾರಿಲ್ಲ’ ಅಂತ ಹೇಳಿಕೊಂಡು ನಾಗರಾಜನ ಮಕ್ಕಳು ಬರುತ್ತಿದ್ದರು.

ಇವ್ಯಾವೂ ನನಗೆ ಹೊಸವಲ್ಲ. ಎಲ್ಲವೂ ನಾನು ಎತ್ತಿ ಮುಗಿಸಿದ ಅವತಾರಗಳೇ. ಮೊದಮೊದಲಿಗೆ ನನ್ನ ವರದಿಗಾರರು ಕುಡಿದರೆ ತುಂಬ ಸಿಟ್ಟು ಮಾಡಿಕೊಳ್ಳುತ್ತಿದ್ದೆ. ಕುಡಿದಾಗ ಅಥವಾ ಕುಡಿಯಲು ಆರಂಭಿಸಿದ ದಿನಗಳಲ್ಲಿ ಅವರು ನಾನಿದ್ದಲ್ಲಿಗೆ ಬರುತ್ತಲೇ ಇರಲಿಲ್ಲ. ಬಂದರೂ ಕೈಯಲ್ಲಿ ವರದಿಗಳಿರುತ್ತಿರಲಿಲ್ಲ. ಒಬ್ಬ ಕುಡುಕನಿಗೆ ಹಾಗೊಂದು ಡಿಸ್‌ ಓರಿಯೆಂಟೆಡ್‌ ಸ್ಥಿತಿ ಬಂದು ಬಿಡುತ್ತದೆಂಬುದು ನನಗೆ ಉಳಿದೆಲ್ಲರಿಗಿಂತ ಚೆನ್ನಾಗಿ ಅರ್ಥವಾಗುತ್ತದೆ. ಕೊಂಚ ಡಿಸ್‌ ಓರಿಯೆಂಟೆಡ್‌ ಆದ ಅನ್ನಿಸಿದ ಕೂಡಲೆ ನಾನು ಅವನ ವರದಿಗಳನ್ನು ನಂಬಲು ನಿರಾಕರಿಸುತ್ತೇನೆ. ತಂದು ಕೊಟ್ಟರೂ ಕಸದ ಬುಟ್ಟಿಗೆ ಹಾಕಿಬಿಡುತ್ತೇನೆ. ಕೊಂಚ ದಿನಗಳ ನಂತರ- ಒಂದೋ ಅವರು ಕುಡಿತ ಬಿಡುತ್ತಾರೆ. ಇಲ್ಲವಾದರೆ ನೌಕರಿ ಬಿಡುತ್ತಾರೆ. ನಾಗರಾಜು ಮಾಡಿದ್ದು ಎರಡನೆಯದನ್ನೇ.

ಹಾಗೆ ಡಿಸ್‌ ಓರಿಯೆಂಟೆಡ್‌ ಆದ ವರದಿಗಾರ ಅದನ್ನು ಮುಚ್ಚಿಟ್ಟುಕೊಳ್ಳಲಿಕ್ಕಾಗಿ, ನನ್ನನ್ನು ಹೀಗೆಲ್ಲ please ಮಾಡಲು ಹವಣಿಸುತ್ತಾನೆ ಗೊತ್ತೆ ? ‘ಸರ್‌, ನಮ್ಮಲ್ಲಿ ಮೊದಲಿದ್ದನಲ್ಲ ವರದಿಗಾರ? ಅವನಿಗೆ ಮೊದಲೊಂದು ಮದ್ವೆ ಆಗಿತ್ತಂತೆ. ಅದರ ಫೊಟೋ ಸಿಗೋದರಲ್ಲಿದೆ. ಒಳ್ಳೆ ಸ್ಟೋರಿ ಆಗುತ್ತಲ್ವಾ?’ ಅನ್ನುತ್ತಾನೆ. ಕೆಲಸ ಬಿಟ್ಟು ಹೋಗಿ, ನನ್ನನ್ನು ಬೈಕೊಂಡು ಓಡಾಡುವ ವರದಿಗಾರನ ಮೊದಲನೇ ಮದುವೆಯ photo ತಂದುಕೊಟ್ಟು ಬಿಟ್ರೆ ನನಗೆ ಸಂತೋಷವಾಗಿಬಿಡುತ್ತೆ ಎಂಬುದು ಅವನ ಡಿಸ್‌ ಓರಿಯೆಂಟೆಡ್‌ ಸ್ಥಿತಿಯ ಚಿಂತನೆ.

‘ನೋಡೂ, ಅವನು ಎರಡಲ್ಲದಿದ್ರೆ ಇಪ್ಪತ್ತೊಂದು ಮದುವೆ ಆಗಿರಲಿ. ಇಲ್ಲಿಂದ ಹೊರಬಿದ್ದ ಮೇಲೆ, ನನ್ನ ದೃಷ್ಟೀಲಿ ಅವನು ಬಿಚ್ಚಿ ಬಿಸಾಡಿದ ಕಾಲು ಚೀಲ. ಅವನ ಸುತ್ತ ನಮ್ಮ ತನಿಖೆ, ನಮ್ಮ ಪತ್ರಿಕೋದ್ಯಮ ತಿರುಗಬಾರ್ದು. ಅದಕ್ಕವನು ಅರ್ಹನಲ್ಲ. ಓದುಗರು ಕುತೂಹಲದಿಂದ ಕಾಯ್ತಿರ್ತಾರೆ. ಅವರಿಗೆ ತಲುಪಿಸಬೇಕಾದ ಸಾವಿರ ಸಂಗತಿಗಳಿರೋವಾಗ ಇದೆಲ್ಲಿ ಹಚ್ಚೀದಿ, ಯಾವನದೋ ಮೊದಲ ಮದುವೆಯ ಫೋಟೊ?’ ಅಂತ ಬೈದು ಕಳಿಸಿದ್ದೆ. ಆಮೇಲೆ ನಾಗರಾಜು ನನಗೆ ಕಾಣಿಸಲಿಲ್ಲ.

ಪತ್ರಿಕೋದ್ಯಮದ ಮೇಜಿನ ಬಳಿಗೆ ಅಂಥವರು ತುಂಬ ಜನ ಬರುತ್ತಾರೆ. ಬರುವಾಗ ಹಾಗಿರದಿದ್ದರೂ, ಬಂದ ಮೇಲೆ ಹಾಗಾಗುತ್ತಾರೆ. ಇಷ್ಟಕ್ಕೂ ಮೆ.ನಾ.ನಾಗರಾಜು ಕಳ್ಳನಲ್ಲ, ಸುಳ್ಳನಲ್ಲ, ಕೆಟ್ಟವನಲ್ಲ, ಸೋಮಾರಿಯೂ ಅಲ್ಲ. ಆದರೆ ಆತ ಪತ್ರಿಕೋದ್ಯಮದ ಹುಲುಸು ಕಾಡಿನಲ್ಲಿ ದಾರಿ ತಪ್ಪಿಸಿಕೊಂಡ ಕುರುಡು ಮೃಗ. ಬೇಗನೆ ಎಚ್ಚರಗೊಂಡೆಯೋ, ನೀನು ಬಚಾವು. ತಪ್ಪಿಸಿಕೊಂಡ ದಾರಿಯಲ್ಲೇ ನಡೆದೆಯೋ ; ಪತ್ರಿಕೋದ್ಯಮ ನಿನ್ನನ್ನು ತಿಂದು ಹಾಕಿಬಿಡುತ್ತೆ.

ನಿಮಗೆ ಅನುಮಾನವಿದ್ದರೆ, ಒಂದು ಚಿಕ್ಕ ಊರಿಗೆ ಹೋಗಿ ಅಲ್ಲಿ ಚಿಕ್ಕ ಚಿಕ್ಕ ಪತ್ರಿಕೆಗಳನ್ನು ಮಾಡಿಕೊಂಡು ಓಡಾಡುತ್ತಿರುವ ಹುಡುಗರನ್ನು ಗಮನಿಸಿ. ಅದರಲ್ಲಿ ಹೆಚ್ಚಿನವರು ತುಂಬ ಕೆಟ್ಟವರೂ, ನೀಚರೂ ಆಗಿರುವುದಿಲ್ಲ. ತುಂಬ ಓದಿಕೊಂಡೂ ಇರುವುದಿಲ್ಲ. ಯಾರನ್ನೋ ಪ್ರೀತಿಸಿರುತ್ತಾರೆ. ಇನ್ನೆಲ್ಲೋ ಒಂದು ಸಂಬಂಧ ಇಟ್ಟುಕೊಂಡಿರುತ್ತಾರೆ. ಒಬ್ಬರೇ ಇದ್ದಾಗ ಪೇಪರು ಹೆಂಗೆ ಇಂಪ್ರೂವ್‌ ಮಾಡಬೇಕು? ಅಂತ ಯೋಚಿಸುತ್ತಿರುತ್ತಾರೆ. ಗುಂಪಿನಲ್ಲಿ ಕುಂತಾಗ ಪೇಪರೊಂದನ್ನು ಬಿಟ್ಟು ಜಗತ್ತಿನ ಸಂಗತಿಗಳನ್ನೆಲ್ಲ ಮಾತನಾಡುತ್ತಿರುತ್ತಾರೆ. ಸಾಯಂಕಾಲವಾದ ಮೇಲೆ ಸೇರಲಿಕ್ಕೆ ಅಂತ ಊರ ಹೊರಗಿನ ವರಚ್ಚಾದ ಬಾರೋ, ಹೊಟೇಲೋ, ರೂಮೋ ನೋಡಿಕೊಂಡಿರುತ್ತಾರೆ. ಅಲ್ಲಿನ ಯಾವುದೋ ಒಂದು dish, ಒಂದ್ಯಾವುದೋ drink ಇಷ್ಟವಾಗಿಬಿಟ್ಟಿರುತ್ತದೆ. ದೊಡ್ಡದೊಂದು ಸೆಳೆತ ತಮ್ಮನ್ನು ಎಳೆಯುತ್ತಿದೆಯೇನೋ ಎಂಬಂತೆ ಅಲ್ಲಿಗೆ ಹೋಗಿ ಕುಳಿತು, ‘ಗೊತ್ತಲ್ಲ ? ನಂದ್ಯಾವುದು ಅಂತ? ಅದನ್ನ serve ಮಾಡಿಬಿಡು’ ಅನ್ನುತ್ತಾರೆ. ಬಾರ್‌ನ ಹುಡುಗ ಇವರು ನಿತ್ಯ ಕುಡಿಯುವ ಡ್ರಿಂಕು, ಅದರೊಂದಿಗೆ ನಿತ್ಯ ತಿನ್ನುವ snack, ನಿತ್ಯ ತಿನ್ನುವ ಊಟ, ನಿತ್ಯದ ಸಿಗರೇಟು- ಎಲ್ಲ ತಂದಿಡುತ್ತಾನೆ. ತಮ್ಮೊಂದಿಗೆ ಕರೆದೊಯ್ದ ಹೊಸಬನತ್ತ ಇವರು ಹುಬ್ಬೆಗರಿಸಿ ನೋಡಿ ಕೇಳುತ್ತಾರೆ : ‘ಎಂಗೆ? ಎಂಗಿಟ್ಟಿದ್ದೀನಿ ನೋಡು ಸಿಸ್ಟಮ್ಮು?’

ಆ ವಯಸ್ಸಿನ, ಆ ಸ್ಥಿತಿಯ, ಆ stageನ ಪತ್ರಿಕೋದ್ಯಮಕ್ಕೆ ಅದೇ ದೊಡ್ಡ ಥ್ರಿಲ್ಲು. ಅವರ ದೃಷ್ಟಿಯಲ್ಲಿ ಯಾವನೋ ಇನ್ನೊಬ್ಬ ಪತ್ರಿಕೋದ್ಯಮಿ ಆದರ್ಶನಾಗಿರುತ್ತಾನೆ. ಅಥವಾ ಒಬ್ಬನ್ಯಾವನೋ ಪತ್ರಿಕೋದ್ಯಮಿ ಅವನಿಗೆ ಬೇಡವಾಗಿರುತ್ತಾನೆ. ಅವನ ಭಜನೆ, ಅವನ ನಿಂದನೆ- ಎರಡರಲ್ಲೊಂದು ಮಾಡುತ್ತ ಚಿಕ್ಕ ಊರಿನ ಚಿಕ್ಕ ರಗಳೆಗಳ ಬಗ್ಗೆಯೇ ಬೃಹತ್ತಾಗಿ ಯೋಚಿಸುತ್ತ, ಇಷ್ಟೆಲ್ಲ ದುಡಿಯುವ (?) ನಾನು ಇಷ್ಟಾದರೂ ಸುಖಪಡಬಾರದೆ ಅಂದುಕೊಳ್ಳುತ್ತ ಮನೆಗೆ ಹೋಗುತ್ತಾರೆ. ಮರುದಿನ ವಿಪರೀತ ತಲೆನೋವು. ಪತ್ರಿಕೆ ಬರುವುದಿಲ್ಲ. ಇವತ್ತು ಬರಲಿಲ್ಲ ಅಂದಮೇಲೆ ಇನ್ಯಾವತ್ತು ಬಂದರೇನಂತೆ ಎಂಬ ಉಡಾಫೆ. ಕೆಲವು ದಿನಗಳಿಗೆ ಪತ್ರಿಕೆ ತಾರದೇನೇ ಹಾಗೇ ಹೀಗೇ ಹರಟುತ್ತ ದಿನಗಳೆದುಬಿಡುವುದು ರೂಢಿಯಾಗುತ್ತದೆ. ತಮ್ಮ ಪತ್ರಿಕೆ ಮುಚ್ಚಿ ಹೋಯಿತು ಎಂಬ ಸಂಗತಿ, ಊರ ಮಂದಿಗೆಲ್ಲ ತಿಳಿದಾದ ಮೇಲೆ ಈ ಸಂಪಾದಕರಿಗೆ ಅರಿವಾಗಿರುತ್ತದೆ. ಆದರೆ ಅದನ್ನು ಒಪ್ಪಿಕೊಳ್ಳಲು ಜರ್ನಲಿಸ್ಟ್‌ ಹಮ್ಮು ಅಡ್ಡ ಬರುತ್ತದೆ : ನಾನಿವಾಗ ಸ್ಟೇಟ್‌ ಲೆವೆಲ್‌ ಪೇಪರಿಗೆ ಬರೀಕಿದೀನಿ ! ಎಂದು ಹೇಳಿಕೊಂಡು ಕೆಲವು ದಿನ ಕೂರುತ್ತಾರೆ. ಆಮೇಲೆ ಬೆಂಗಳೂರಿಗೆ ಬಂದು ಎಲ್ಲಾದರೂ ಕೆಲಸ ಸಿಗಬಹುದಾ? ಅಂತ ವಿಚಾರಿಸತೊಡಗುತ್ತಾರೆ.

ಇದನ್ನು ಯಾಕಿಷ್ಟು ಕರಾರುವಾಕ್ಕಾಗಿ ಬರೆದೆನೆಂದರೆ, ನಾನು ನಡೆಸುತ್ತಿದ್ದ ‘ಬಳ್ಳಾರಿ ಪತ್ರಿಕೆ’ ಮುಚ್ಚಿ ಹೋದದ್ದೇ ಹಾಗೆ. ಸಂಜೆ ಸೇರುತ್ತಿದ್ದುದು ಬಳ್ಳಾರಿಯ ಮುಖ್ಯರಸ್ತೆಯಾಂದರಲ್ಲಿ ಸಾಬ್ಜಾನ್‌ ಸಾಬ್‌ ಎಂಬ ಗೆಳೆಯನ ‘ಶಾಂತಿ ಬಾರ್‌’ನಲ್ಲಿ . ಕುಡಿಯುತ್ತಿದ್ದುದು ರಮ್ಮು. ತಿನ್ನುತ್ತಿದ್ದುದು ‘ತೀತರ್‌’ ಎಂದು ಕರೆಯಲ್ಪಡುವ ಹಕ್ಕಿಯಾಂದರ ಮಾಂಸ ! ಬಾರ್‌ನ ಒಡೆಯ ಸಾಬ್ಜಾನ್‌ ಸಾಬ್‌ ತುಂಬ ಒಳ್ಳೆಯ ಮನುಷ್ಯ. ‘ನೀನೇನು ಬಿಲ್‌ ಕೊಡಬ್ಯಾಡ. ನಮ್ಮ ಬಾರ್‌ದು ಒಂದು ಅಡ್ವರ್ಟೈಸ್‌ಮೆಂಟ್‌ ಹಾಕಿಬಿಡು’ ಅನ್ನುತ್ತಿದ್ದ. ನಂದೇನು ಗಂಟು ಹೋಗಬೇಕು? ಜಾಹಿರಾತು ಹಾಕುತ್ತಿದ್ದೆ. ಹಾಕಿದ ದಿನ ಶಾಂತಿ ಬಾರ್‌ಗೆ ಹಾಜರಾತಿ ಹಾಕುತ್ತಿದ್ದೆ. ಹಾಕಲಾಗದ ದಿನ ‘ನಾಳೆ ಹಾಕ್ತೀನಿ ಬಿಡು’ ಅನ್ನುತ್ತಿದ್ದೆ. ಅವತ್ತು ಪೇಪರ್ರೇ ಬಂದಿಲ್ಲ ಅಂತ ಸಾಬ್ಜಾನ್‌ ಸಾಬ್‌ಗೆ ಗೊತ್ತಿರುತ್ತಿತ್ತು. One fine day, ನನ್ನ ಪತ್ರಿಕೆ ಮತ್ತು ಸಾಬ್ಜಾನ್‌ ಬಾರು- ಎರಡೂ ಮುಚ್ಚಿ ಹೋದವು. ಹಾಕಿದ ಜಾಹಿರಾತಿಗೂ ಲೆಕ್ಕವಿಲ್ಲ, ತಿಂದ ತೀತರ್‌ಗೂ ಲೆಕ್ಕವಿಲ್ಲ. ಅಸಲು ವ್ಯವಹಾರವೇ quits!

ಅನೇಕ ಪತ್ರಿಕೆಗಳೂ, ಪತ್ರಿಕೋದ್ಯಮಿಗಳೂ ಸಾಯುವುದೇ ಹಾಗೆ. ನಮ್ಮ ಮೆ.ನಾ.ನಾಗರಾಜು ಸತ್ತ ಹಾಗೆ. ಕುಡಿತ ಹಾಗೇ ಮುಂದುವರೆಸಿದ್ದಿದ್ದರೆ, ಇದೆಲ್ಲವನ್ನೂ ನನ್ನ ಬಗ್ಗೆ ಇನ್ಯಾವುದೋ ಸಂಪಾದಕ ಬರೆಯುತ್ತಿದ್ದ. ಹಾಗೆ ನಾನು ತುಂಬ ಜನ ಗೆಳೆಯರು ಪತ್ರಿಕೋದ್ಯಮಕ್ಕೆ, ಕುಡಿತಕ್ಕೆ ಆಹುತಿಯಾಗಿ ಹೋಗುವುದನ್ನು ಹತ್ತಿರದಿಂದ ನೋಡಿದ್ದೇನೆ. ನಮ್ಮ ಸುರೇಂದ್ರ, ಸಂಯುಕ್ತ ಕರ್ನಾಟಕದ ವೆಂಕಟರಮಣ, ಮುಂಬಯಿಯಿಂದ ಹೊರಳಿ ಬಂದ ಪ್ರಾಣೇಶ ಕುಲಕರ್ಣಿ, ಶಂಕರ ಲಾಳಾಪುರ- ಉಹುಂ, ಅದು ಒಬ್ಬಿಬ್ಬರ ಮಾತಲ್ಲ. ಅವರಿಗೆಲ್ಲ ಬುದ್ಧಿ ಇತ್ತು. ಎಂಥವರಿಗೂ ಇಷ್ಟವಾಗುವಂತಹ ಗುಣಗಳಿದ್ದವು. ಆದರೆ ಡಿಸ್‌ ಓರಿಯೆಂಟ್‌ ಆಗುತ್ತ ಆಗುತ್ತ ಅಲ್ಲೊಂದು ಇಲ್ಲೊಂದು ಬ್ರಿಲಿಯಂಟ್‌ ಸ್ಪಾಟ್ಸ್‌ ಮಾತ್ರ ಉಳಿದುಕೊಂಡಿದ್ದವು. ಕಡೆಗೆ ಅವೂ ಅಳಿಸಿ ಹೋದ ಮೇಲೆ ಅವರು ತೀರಿ ಹೋದರು !

ಇದನ್ನೆಲ್ಲ ಬರೆಯುತ್ತಿರುವಾಗ ನನಗೆ ಹೊಸಪೇಟೆ ಸಮೀಪದ ಹುಲಿಗಿ ಎಂಬಲ್ಲಿ ‘ಕರ್ನಾಟಕ ದರ್ಶನ’ ಎಂಬ ಪತ್ರಿಕೆ ಮಾಡಿದ್ದ ಒಂದಷ್ಟು ಹುಡುಗರು ನೆನಪಾಗುತ್ತಾರೆ. ‘ಎಲ್ಲ ನಾವಂದುಕೊಂಡಂತೆಯೇ ಆದರೆ ಮುಂದಿನ ತಿಂಗಳ ಎರಡನೇ ತಾರೀಕು ಸಾಯಂಕಾಲ ನೀವೂ ನಮ್ಮೂರಿಗೆ ಬರುತ್ತೀರಿ. ನಮ್ಮ ಪತ್ರಿಕೆ ಬಿಡುಗಡೆ ಮಾಡುತ್ತೀರಿ’ ಅಂತ ಒಂದು ಪತ್ರ ಬರೆದಿದ್ದ ಆ ಪೈಕಿ ಒಬ್ಬ ಹುಡುಗ. ಅವನ ಹೆಸರು ಪಾ.ಯ. ಗಣೇಶ. ಪತ್ರದ ಒಕ್ಕಣೆ ಎಲ್ಲೋ ಓದಿದಂತಿದೆಯಲ್ಲಾ ಅನ್ನಿಸಿ, ಆಮೇಲೆ ನಾನೇ ಅಲ್ಲವೆ ಹಾಗೆ ಒಮ್ಮೊಮ್ಮೆ ಬರೆಯೋದು ಅಂದುಕೊಂಡು ಅವರ ಪತ್ರಿಕೆ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಿ ಬಂದೆ. ಅನಂತರ ಪತ್ರಿಕೆ ಪ್ರಕಟವಾದದ್ದನ್ನು ನಾನು ನೋಡಲಿಲ್ಲ.

ಒಂದು ಮಧ್ಯರಾತ್ರಿ ಪಾ.ಯ.ಗಣೇಶ ಬಂದು ಆಫೀಸಿನ ಬಾಗಿಲು ತಟ್ಟಿದ. ‘ಪೊಲೀಸರು ನನ್ನನ್ನು ಹುಡುಕುತ್ತಿದ್ದಾರೆ. ಡೌರಿ ಕೇಸು !’ ಅಂದ. ‘ಪತ್ರಿಕೆ ಮಾಡಿದೋನು ನೀನೆಂಥ ವರದಕ್ಷಿಣೆ ತಗೊಂಡಿದ್ಯೋ?’ ಅಂತ ರೇಗಿದೆ. ‘ಇಲ್ಲ, ಪತ್ರಿಕೆಗೆ ಆಗಾಗ ಬರೀತಿದ್ದ ಹುಡುಗಿಯಾಬ್ಬಳನ್ನು ಲವ್ವು ಮಾಡಿದ್ದೆ. ಅದು ಗೊತ್ತಾಗಿ ನನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಳು. ಪೊಲೀಸರು ವರದಕ್ಷಿಣೆ ಕೇಸು ಹಾಕಿ, ನನ್ನನ್ನು ಹುಡುಕ್ತಿದಾರೆ. ನೀವೇ ಉಳಿಸಬೇಕು’ ಅಂದ.

ಎಲ್ಲಾ ನಾನಂದುಕೊಳ್ಳದಿದ್ದುದೇ ಆಗಿದೆ- ಅಂತ ಬೈದು, ಬಳ್ಳಾರಿಯ ವಕೀಲ ಮಿತ್ರನೊಬ್ಬನಿಗೆ ಪತ್ರ ಕೊಟ್ಟು ಜೊತೆಗೆ ಮೂರು ಸಾವಿರ ರುಪಾಯಿಯನ್ನೂ ಕೊಟ್ಟು ಗಣೇಶನನ್ನು ಕಳಿಸಿದೆ. ಜಾಮೀನು ಪಡೆದುಕೊಂಡು ಹೊರಬಂದ. ಹೊಸಪೇಟೆಯ ಸುತ್ತಮ್ತುತಲ ಊರುಗಳಲ್ಲಿ ಸುದ್ದಿ ಸಿಕ್ಕರೆ ಕಳಿಸುತ್ತೇನೆಂದು ಓಡಾಡುತ್ತಿದ್ದ. ನಿಧಾನವಾಗಿ ಅವನು ಸಂಜೆ ಹೊತ್ತಿಗೊಂದು ವರಚ್ಚಾದ ಜಾಗ ಹುಡುಕಿಕೊಳ್ಳುತ್ತಿದ್ದಾನೆಂಬ ವರ್ತಮಾನ ಬಂತು. ಇನ್ನೊಮ್ಮೆ ನನ್ನನ್ನು ಸಂಪರ್ಕಿಸಬೇಡ. ನನ್ನ ಹೆಸರು ಹೇಳಿಕೊಂಡು ತಿರುಗಬೇಡ ಅಂತ ಬೈದು ಸುಮ್ಮನಾದೆ. ಮುಂದೆ ನಾನಂದುಕೊಂಡಂತೆಯೇ (!) ಆಯಿತು. ಅವನು ಇನ್ನೊಂದು ಪತ್ರಿಕೆ ಮಾಡಿದ. ನಂತರದ ಕತೆ ವಿವರಿಸಬೇಕಾಗಿಲ್ಲ.

ಪತ್ರಿಕೋದ್ಯಮಂ ಅಂದರೆ ಅದೂ !

(ಸ್ನೇಹಸೇತು- ಹಾಯ್‌ ! ಬೆಂಗಳೂರ್‌)

ಮುಖಪುಟ

/ ಅಂಕಣಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X