• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಷ್ಟಕ್ಕೂ ಅವಳನ್ನು ಮರೆತುಬಿಡುವುದು ಹೇಗೆ ?

By Staff
|
Ravi Belagere on Thatskannada.com ರವಿ ಬೆಳಗೆರೆ
ಅವಳನ್ನು ಮರೆಯೋದು ಹೇಗೆ ?

ನಾನು ಸರಿಸುಮಾರು ಇಪ್ಪತ್ತೆೈದು ವರ್ಷಗಳಿಂದ ನನ್ನನ್ನೇ ಕೇಳಿಕೊಳ್ಳುತ್ತ ಬರುತ್ತಿರುವ ಪ್ರಶ್ನೆ ಇದು. ಕಳೆದ ಏಳೆಂಟು ವರ್ಷಗಳಿಂದ ಸಾವಿರಾರು ಹುಡುಗರು, ಹುಡುಗಿಯರು, ಎಷ್ಟೋ ಸಲ ಪ್ರೌಢರು ಕೂಡ ಕೇಳಿದ ಪ್ರಶ್ನೆಯಿದು. ಇಷ್ಟಕ್ಕೂ ಯಾರನ್ನಾದರೂ ಮರೆಯುವುದು ಹೇಗೆ ?

ಎಂಥ ವಿಚಿತ್ರವೋ ನೋಡಿ. ನನ್ನ ನೆನಪಿನ ಶಕ್ತಿಯನ್ನು ಕಂಗ್ರಾಚ್ಯುಲೇಟ್‌ ಮಾಡುವವರಿದ್ದಾರೆ. ನನ್ನ ನೆನಪಿನ ಶಕ್ತಿಯೇ ನನ್ನ ಪಾಲಿಗೆ ಶಾಪ ಅಂತ ಅನೇಕರಿಗೆ ಗೊತ್ತಿಲ್ಲ . ‘ಇಷ್ಟೊಂದು ವಿಷಯ, ಇಷ್ಟೊಂದು ಘಟನೆ, ಇಷ್ಟೆಲ್ಲ ಡೀಟೈಲ್‌ ಆಗಿ ಹೇಗೆ ನೆನಪಿಟ್ಟುಕೊಳ್ತೀರಿ’ ಅಂತ ಕೇಳುತ್ತಾರೆ. ‘ನೀವು ಅದ್ಹೇಗೆ ಅಷ್ಟು ಸುಲಭವಾಗಿ ಎಲ್ಲವನ್ನೂ ಮರೆತುಬಿಡ್ತೀರಿ?’ ಅಂತ ತಕ್ಷಣ ಕೇಳಬೇಕೆನಿಸುತ್ತದೆ. ನನ್ನ ಪಾಲಿಗೆ ನೆನಪು ವರ. ನೆನಪು ಶಾಪ. ನೆನಪೇ ಆಸ್ತಿ. ನೆನಪು ನನ್ನ ದೌರ್ಭಾಗ್ಯ. ಮರೆಯಲಾಗದ ಲಕ್ಷಾಂತರ ನೆನಪುಗಳಲ್ಲಿ ಅವಳ ನೆನಪೂ ಒಂದು. ಅದನ್ನು ಅಳಿಸಿಕೊಳ್ಳಲು ನಾನು ಇನ್ವೆಸ್ಟ್‌ ಮಾಡಿರುವುದು- ಸರಿಸುಮಾರು ಇಪ್ಪತ್ತೆರಡು ವರ್ಷ. ಇಪ್ಪತ್ತೆರಡು ವರ್ಷಗಳ ಕೊನೆಯಲ್ಲಿ ನಿಂತು ‘ಮರೆತೆಯಾ?’ ಅಂತ ನನ್ನನ್ನು ನಾನು ಕೇಳಿಕೊಂಡರೆ- ಅವಳ ನೆನಪು ತಳಕ್ಕನೆ ನಗುತ್ತದೆ.

ಮನಸ್ಸು ಬಲು ಅನುಕೂಲ ಸಿಂಧು ಟೇಪ್‌ರೆಕಾರ್ಡರು. ಕೆಟ್ಟ ನೆನಪುಗಳನ್ನು ತಂತಾನೇ erase ಮಾಡಿಬಿಡುತ್ತದಂತೆ. ನಮಗೆ ಬೇಡದ್ದು ನಾವು ನೆನಪಿಟ್ಟುಕೊಳ್ಳುವುದಿಲ್ಲ . ಕೆಟ್ಟ ಹಾಡು, ಕೆಟ್ಟ ಸಿನೆಮಾ, ಕೆಟ್ಟ ತಿಂಡಿ, ಕೆಟ್ಟ ಪ್ರಯಾಣ- ಇವ್ಯಾವೂ ತುಂಬಾ ದಿನ ನೆನಪಿಗಿರುವುದಿಲ್ಲ . ಬಸ್ಸಿನಲ್ಲಿ ನಮ್ಮ ಪಕ್ಕ ಕುಳಿತಿದ್ದ ವೃದ್ಧ ಯಾವ ಬಣ್ಣದ ಅಂಗಿ ತೊಟ್ಟಿದ್ದ ಎಂಬುದು ಬಸ್ಸಿಳಿದ ಹದಿನೈದು ನಿಮಿಷಕ್ಕೇ ಮರೆತುಹೋಗುತ್ತದೆ. ಏಕೆಂದರೆ, ಅಲ್ಲಿ ನೀವು ನಿಮ್ಮ ಶ್ರದ್ಧೆಯನ್ನು invest ಮಾಡಿಲ್ಲ . ಎಂದೋ ಬಾಲ್ಯದಲ್ಲಿ ಕೇಳಿದ ಹಾಡು ನೆನಪಿರುತ್ತದೆ. ಆದರೆ, ನಿನ್ನೆ ಓದಿದ text book ಛಾಪ್ಟರು ನೆನಪಿರುವುದಿಲ್ಲ . ಏಕೆಂದರೆ, ಶ್ರದ್ಧೆ invest ಮಾಡಿರುವುದಿಲ್ಲ . ಟೆಕ್ಸ್ಟ್‌ ಬುಕ್ಕು ಮನಸ್ಸಿಗೆ ಆಪ್ತಲ್ಲದ ವಸ್ತು . ಮನಸ್ಸಿಗೆ ಮುದ ನೀಡದ ವಸ್ತು. ಮಗ್ಗಿ ಇಮ್ಮಿಡಿಯೆಟ್ಟಾಗಿ ಮರೆತು ಹೋಗುತ್ತದೆ. ಆದರೆ ಅವಳ ಮನೆಯ ಟೆಲಿಫೋನು ನಂಬರು, ಅದು ಯಾವತ್ತಿಗೂ ಮರೆಯುವುದಿಲ್ಲ ! ಕೆಲವೊಮ್ಮೆ ಅಪ್ಪ ಸತ್ತುಹೋದ ಡೇಟು ಮರೆತುಬಿಡಬಹುದು. ಆದರೆ ಅವಳು ವಂಚಿಸಿದ ದಿನ, ದಿನಾಂಕ, ವಾರ, ಘಳಿಗೆ, ಅವತ್ತು ಅವಳು ಉಟ್ಟಿದ್ದ ಸೀರೆ, ಧರಿಸಿದ್ದ ಬ್ಲೌಸು- no chance, ಯಾವುದೂ ಮರೆತಿರುವುದಿಲ್ಲ . ಯಾಕೆಂದರೆ, ಅಲ್ಲಿ ನಮ್ಮ ಅಷ್ಟೂ ಶ್ರದ್ಧೆ invest ಆಗಿರುತ್ತದೆ.

ಹಾಗಾದರೆ ಇದು ಇಷ್ಟೇನಾ? ಕೇವಲ ಶ್ರದ್ಧೆಯ ಸಂಗತಿಯಷ್ಟೇನಾ? ಅಂತ ನೀವು ಕೇಳಬಹುದು. ಆದರೆ ಇದು ಇಷ್ಟೇ ಅಲ್ಲ . ನಿಮಗೆ ಅವಳು ನೆನಪಿದ್ದಾಳೆ. ಅವಳನ್ನು ಭೇಟಿಯಾದದ್ದು ನೆನಪಿದೆ. ನೀವು ಮೊದಲ ಸಲ ಮಾತನಾಡಿಸಿದ್ದು , ಮೊದಲ ಪತ್ರ ಕೊಟ್ಟಿದ್ದು , ಮೊದಲ ಗಿಫ್ಟ್‌ ಕೊಡಿಸಿದ್ದು- ಎಲ್ಲವೂ ನೆನಪಿಗಿದೆ. ಆದರೆ ನಿಮ್ಮನ್ನು ಕಾಡುತ್ತಿರುವುದು ಅದ್ಯಾವುದೂ ಅಲ್ಲ ! ‘ನನ್ನನ್ನು ಮರ್ತುಬಿಡೋ...’ ಅಂದು ಹೊರಟುಹೋದಳಲ್ಲ ? ನಿಮ್ಮನ್ನು ಕಾಡುತ್ತಿರುವುದು ಅದು! ಅವಳೊಂದಿಗೆ ಕಳೆದ ಮಧುರಾತಿ ಮಧುರ ಕ್ಷಣಗಳನ್ನು ನೀವು ಕಾಲಾಂತರದಲ್ಲಿ ಮರೆತುಬಿಡಬಹುದು. ಆದರೆ ಅವಳು ‘ಮರ್ತು ಬಿಡೋ’ ಅಂದ ಆ ಕ್ಷಣದ ಕಾಠಿಣ್ಯವನ್ನು ಮರೆಯಲಾರಿರಿ. ಯಾಕೆ ಗೊತ್ತೆ ? ನಿಮ್ಮ ಮನಸ್ಸು ನಿಮ್ಮ ಬಗ್ಗೆ ತುಂಬ ಸಿಂಪಥೆಟಿಕ್‌! ಅದು ನಿಮಗೆ ದೊರೆತ ಸಂತೋಷಗಳಿಗಿಂತ, ನಿಮಗೆ ಆದ ಆಘಾತಗಳನ್ನು ಹೆಚ್ಚು ಶ್ರದ್ಧೆಯಿಂದ, ಕರುಣೆಯಿಂದ ನೆನಪಿಟ್ಟುಕೊಳ್ಳುತ್ತದೆ. ಅಭಿನಂದನೆಗಳಿಗಿಂತ, ಆದ ಅವಮಾನಗಳನ್ನೇ ಜಾಸ್ತಿ ನೆನಪಿಟ್ಟುಕೊಳ್ಳುತ್ತದೆ. ಆದ ಉಪಕಾರಗಳಿಗಿಂತ, ಎಲ್ಲೋ ಒಂದೆರಡು ಅಪಚಾರಗಳಾಗಿರುತ್ತವಲ್ಲ ? ಅದನ್ನೇ ನೆನಪಿಟ್ಟುಕೊಳ್ಳುತ್ತದೆ. ಹಾಗಾಗಿಯೇ ಇಬ್ಬರು ಗೆಳೆಯರು ಜಗಳವಾಡಿದಾಗ ‘ನಿಂಗೋಸ್ಕರ ನಾನು ಅಷ್ಟು ಮಾಡಿದೆ... ನೀನು ಮಾಡಿದ್ದೇನು ?’ ಅಂತ ರೊಳ್ಳೆ ತೆಗೆಯುತ್ತದೆ.

ಇದಕ್ಕಿಂತ ಇಂಟರೆಸ್ಟಿಂಗ್‌ ಸಂಗತಿಯೆಂದರೆ, ಅವಳಿಂದ ದೂರವಾಗಿ ನಾನು ಚಡಪಡಿಸಿದಷ್ಟು, ನಾನು ನೊಂದಷ್ಟು, ನಾನು ಕಣ್ಣೀರಿಟ್ಟಷ್ಟು - ಅದ್ಯಾವುದನ್ನೂ ಅವಳು ಅನುಭವಿಸಿಲ್ಲ. ಅವಳು ತನ್ನ ಪಾಡಿಗೆ ತಾನು ಎಂದಿನಂತೆ ಸಂತೋಷವಾಗೇ ಇದ್ದಾಳೆ ಅಂತ ನಮ್ಮ ಮನಸ್ಸು ತಂತಾನೆ ತೀರ್ಮಾನಿಸಿಬಿಟ್ಟಿರುತ್ತದೆ ! ಅದಕ್ಕೆ ಯಾವ ದೊಡ್ಡ ಪ್ರೂಫೂ ಇರುವುದಿಲ್ಲ. ‘ಅವಳಿಗೇನು, ಆರಾಮವಾಗಿದ್ದಾಳೆ’ ಅಂದುಕೊಂಡುಬಿಡುತ್ತೇವೆ. ಯಾಕೆ ಹಾಗಂದುಕೊಳ್ಳುತ್ತೇವೆ ಅಂದರೆ, ಹಾಗೆ ಅಂದುಕೊಳ್ಳುವ ಮೂಲಕ ನಮ್ಮ ದುಃಖ ನಮಗೆ ಹೆಚ್ಚು ಪ್ರಿಯವಾಗುತ್ತದೆ. ನಮ್ಮ ದೃಷ್ಟಿಯಲ್ಲಿ ನಾವು ಹೆಚ್ಚು ‘ಅಯ್ಯೋ ಪಾಪ’ ಆಗುತ್ತೇವೆ. ನಮ್ಮದೇ ಸಿಂಪಥಿಗೆ ನಾವು ಅರ್ಹರಾಗುತ್ತೇವೆ. ಅಷ್ಟರಮಟ್ಟಿಗೆ ನಮ್ಮ ಅಹಂಕಾರ ತಣಿಯುತ್ತದೆ. ಕ್ರಮೇಣ ನಮ್ಮ ದುಃಖ ನಮಗೆ ಆಪ್ಯಾಯಮಾನವಾಗತೊಡಗುತ್ತದೆ. ಬಿಟ್ಟು ಹೋದ ಹೊಸತರಲ್ಲಿ ನಾವು ನಿಜಕ್ಕೂ ಗಾಯಗೊಂಡಿರುತ್ತೇವೆ. ಆದರೆ ಕಾಲಾಂತರಲ್ಲಿ ನಮ್ಮ ಗಾಯವನ್ನು ನಾವು ಮೆಡಲ್‌ನಂತೆ ಧರಿಸಿಕೊಂಡು ತಿರುಗತೊಡಗುತ್ತೇವೆ.

ನಂಗೊತ್ತು , ನೆನಪುಗಳನ್ನು ರೆಸಿಸ್ಟ್‌ ಮಾಡುವುದು ತುಂಬ ಕಷ್ಟ . ಇಡೀ ದಿನ ಯಾವುದೋ ಕೆಲಸದಲ್ಲಿ ತೊಡಗಿಕೊಂಡಿದ್ದರೂ, ಸಂಜೆ ಕೆಲಸವೆಲ್ಲ ಮುಗಿದು ಮನೆಗೆ ಹಿಂತಿರುಗಿ ಒಬ್ಬರೇ ಆದಾಗ ಅವಳ ನೆನಪು ಕೊರಳ ಪಟ್ಟಿಗೆ ಕೈ ಹಾಕುತ್ತದೆ. ಅದನ್ನು ಆಚೆಗೆ ನೂಕಲು ಯತ್ನಿಸಿದಷ್ಟೂ , ಅದು ಗೋಡೆಗೆ ತಾಕಿ ವಾಪಸು ಪುಟಿಯುವ ರಬ್ಬರು ಚೆಂಡು. ಆದ್ದರಿಂದ, ನೆನಪುಗಳನ್ನು ಧಿಕ್ಕರಿಸಲು ಹೋಗಲೇ ಬೇಡಿ. ಅವಳನ್ನು ಮರೆಯಲು ಇರುವ ಏಕೈಕ ಉಪಾಯವೆಂದರೆ ಮರೆಯುವ ಯತ್ನವನ್ನು ಬಿಡುವುದು ! ಎರಡನೇ ಅತ್ಯುತ್ತಮ ಉಪಾಯವೆಂದರೆ, ಒಡನಾಟದ ನೆನಪುಗಳ ಪೈಕಿ ಕೇವಲ ಪಾಸಿಟಿವ್‌ ಆದ, ಸಂತೋಷಕರವಾದ, ಮುದ ನೀಡುವಂಥ ನೆನಪುಗಳನ್ನು ಮಾತ್ರ ಎತ್ತಿ ಸಪರೇಟ್‌ ಆಗಿ ಇಟ್ಟುಕೊಳ್ಳುವುದು. ನಿಜಕ್ಕೂ ಇದರಿಂದ ಸಹಾಯವಾಗುತ್ತದೆ. ಅಲ್ಲಿ ನಮ್ಮ ಒಳ್ಳೆಯತನ, ನಮ್ಮ ಸೌಜನ್ಯ, ನಮ್ಮ ಸಂಭಾವಿತತನ ಪ್ರಮುಖವಾಗಿ ನಮಗೇ ಗೋಚರಿಸತೊಡಗುತ್ತವೆ.

‘ನಿನ್ನೊಂದಿಗೆ ನಾನು ಎಷ್ಟು ಚೆನ್ನಾಗಿದ್ದೆ, ಎಷ್ಟು ಸಭ್ಯನಂತೆ ನಡೆದುಕೊಂಡೆ. ಎಷ್ಟು ಸಂತೋಷವಾಗಿ ನಿನ್ನನ್ನು ಇರಿಸಿದ್ದೆ- ದಡ್ಡೀ, ನನ್ನಂಥವನನ್ನು ಬಿಟ್ಟು ನಡೆದೆಯಲ್ಲ ? ಇಷ್ಟೇನಾ ನಿನ್ನ ಬುದ್ಧಿವಂತಿಕೆ ? I feel sorry for you ’ ಅಂದುಕೊಳ್ಳುವುದಿದೆಯಲ್ಲ . ಅದು ನಿಮ್ಮ ಮೇಲೆ ನಿಮಗೇ ಉಂಟಾಗಿರುವ ಅನುಕಂಪವನ್ನು ಕಡಿಮೆ ಮಾಡುತ್ತದೆ.

ಅವಳನ್ನು ಕಳೆದುಕೊಂಡ ಮೇಲೆ ಮನಸ್ಸು ಯಾಕೆ ಡೆಸ್ಪರೇಟ್‌ ಆಗಿಬಿಡುತ್ತದೆಂದರೆ, ‘ಇವತ್ತಿನಿಂದ ನನ್ನನ್ನು ಮರೆತುಬಿಡು. ನಾವು split ಆಗೋಣ.’ ಎಂಬ ಮಾತನ್ನು ಅವಳೇ ಮೊದಲು ಹೇಳಿರುತ್ತಾಳೆ. ಆಗ ನೊಂದುಕೊಳ್ಳುವುದು ಕೇವಲ ನಮ್ಮ ಮನಸ್ಸಲ್ಲ. ಮನಸ್ಸಿಗಿಂತ ಹೆಚ್ಚಾಗಿ ನಮ್ಮ ಈಗೋ. ನಮ್ಮ ಅಹಂಕಾರ hurt ಆಗಿರುತ್ತದೆ. ‘ಹ್ಞಾಂ, ನನ್ನನ್ನೇ ಬೇಡ ಅಂದ್ಯಾ?’ ಅಂತ ಕೆರಳುತ್ತೇವೆ. ತುಂಬ ದಿನ ನಮ್ಮ ಗಾಯ ಧಗಭಗನೆ ಉರಿಯುವಂತೆ ಮಾಡುವುದೇ ಅದು. ಅವಳು ನನ್ನವಳಾಗಲಿಲ್ಲ ಎಂಬ ನೋವಿಗಿಂತ, ಅವಳು ನನ್ನನ್ನು ತಿರಸ್ಕರಿಸಿದಳಲ್ಲ ಎಂಬ ಅವಮಾನ ನಮಗೇ ಗೊತ್ತಿಲ್ಲದೆ ನಮ್ಮನ್ನು ಹಿಂಡುತ್ತದೆ.

ಇದಕ್ಕಿಂತ ಅಸಹನೀಯವಾದದ್ದೆಂದರೆ, ಅವಳು ಮತ್ಯಾರಿಗೋ ಸಿಕ್ಕುಬಿಟ್ಟಿದ್ದಾಳೆ ಎಂಬ ತಪನೆ. ಇವತ್ತಿನ ತನಕ ನಾನೊಬ್ಬನೇ ಇದ್ದ ಅವಳ ಪ್ರಪಂಚದಲ್ಲಿ , ಅವತ್ತು ಮತ್ಯಾವನೋ ಇದ್ದಾನೆ. ಅವಳನ್ನು ನನಗಿಂತ ಹೆಚ್ಚು ಪ್ರೀತಿಸುತ್ತಾನಾ ? ನನಗಿಂತ ಹೆಚ್ಚು ಸಂತುಷ್ಟಳನ್ನಾಗಿ ಇಡುತ್ತಾನಾ ? ಅವನನ್ನು ಇವಳು ನನಗಿಂತ ಹೆಚ್ಚು ಪ್ರೀತಿಸುತ್ತಾಳಾ ? ಈ ಪ್ರಶ್ನೆಗಳು ಜೀವ ಹಿಂಡಿಬಿಡುತ್ತವೆ. ದುಃಖ ಮಡುಗಟ್ಟುವುದೇ ಆವಾಗ.

ಈ ಸಮಸ್ಯೆಗಿರುವುದು ಒಂದೇ ಪರಿಹಾರ. of course , ಕೊಂಚ ಕಷ್ಟದ ಪರಿಹಾರವೂ ಹೌದು. ಈ ಪರಿಸ್ಥಿತಿಯಲ್ಲಿ ಸಿಕ್ಕಿ ಹಾಕಿಕೊಂಡಾಗ ಏನು ಮಾಡಬೇಕು ಅಂದರೆ ಅವಳು ಮತ್ಯಾವನೊಂದಿಗೋ ಬದುಕು ಬೆಸೆದುಕೊಂಡಿದ್ದಾಳಲ್ಲ ? ಅವನನ್ನು ಮೊದಲು ಸ್ಟಡೀ ಮಾಡಬೇಕು. ಅವನ ತಾಕತ್ತು , ದುಡಿಮೆ, ವ್ಯಕ್ತಿತ್ವ, ಸೆನ್ಸ್‌ ಆಫ್‌ ಹ್ಯೂಮರು, ಗೆಲುವುಗಳು, ವೃತ್ತಿಪರ ವಿಜಯಗಳು ಎಲ್ಲವನ್ನೂ ಗಮನಿಸಬೇಕು. ಅನಂತರ ಒಂದು ಸಲ ಅವುಡುಗಚ್ಚಿ ಎದ್ದು ನಿಂತು ಒಂದೇ ಬೀಸಿನಲ್ಲಿ ಅವೆಲ್ಲವನ್ನೂ ನಾವು ಅವನಿಗಿಂತ ಅದ್ಭುತವಾಗಿ ಸಾಧಿಸಿ ಗುಡ್ಡೆ ಹಾಕಿಬಿಡಬೇಕು. ಆಗ ಮಾತ್ರ ಅಹಂಕಾರ ತನ್ನ ಗಾಯದಿಂದ ಚೇತರಿಸಿಕೊಂಡು ಎದ್ದು ನಿಲ್ಲಲು ಸಾಧ್ಯ. ಒಂದು ಅಂಗಿ, ಒಂದು ನೌಕರಿ, ಒಂದು ಮನೆ, ಒಂದು ಕಾರು, ಕಡೆಗೆ ಒಂದು ಜೊತೆ ಷೂ ಕೂಡ ಅವಳ ಮೇಲಿನ ವೆಂಜೆನ್ಸ್‌ನಿಂದಲೇ ಖರೀದಿಸಬೇಕು, ಪಡೆಯಬೇಕು. ಅಂಥದೊಂದು vengeance ನಮ್ಮಲ್ಲಿ ಹುಟ್ಟದಿದ್ದರೆ, ಕೇವಲ ಆತ್ಮನಿಂದನೆ, ನಮ್ಮೆಡೆಗೆ ನಮಗೇ ಅಯ್ಯೋ ಪಾಪ ಮತ್ತು ನಮ್ಮನ್ನು ನಾವೇ ಹಳಿದುಕೊಳ್ಳುವ ಪರ್ಸಿಕ್ಯೂಷನ್‌ ಕಾಂಪ್ಲೆಕ್ಸ್‌ನಿಂದ ನರಳಬೇಕಾಗುತ್ತದೆ.

ನಮ್ಮನ್ನು ನರಳುವಂತೆ ಮಾಡುವುದು ಕೇವಲ ವೈಫಲ್ಯವಲ್ಲ. ನಮ್ಮ ಘಾಸಿಗೊಂಡ ಅಹಂಕಾರ. ಅಂಥದೊಂದು ಅಹಂಕಾರವನ್ನು ಚೇತರಿಸಿಕೊಳ್ಳುವಂತೆ ಮಾಡಿಬಿಟ್ಟರೆ ಕಡೇ ಪಕ್ಷ ಯಾತನೆ ಕಡಿಮೆಯಾಗುತ್ತದೆ. ಅಷ್ಟರ ಮಟ್ಟಿಗೆ ನಾನು ನನ್ನ ಅಹಂಕಾರವನ್ನು ತುಂಬ ಸಾತ್ವಿಕವಾದ ನಿರುಪದ್ರವಿ ಅಹಂಕಾರವನ್ನು ಚೇತರಿಸಿಕೊಳ್ಳುವಂತೆ ಮಾಡಿದ್ದೇನೆ. ಆದರೆ ಮುಕೇಶನ ಹಾಡು ಕೇಳಿದಾಗ, ತಣ್ಣಗಿನ ಮೊಸರನ್ನದ ತುತ್ತು ಕೈಗೆತ್ತಿಕೊಂಡಾಗ ಅವಳಿಗೇನೋ ತೊಂದರೆಯಾಯಿತಂತೆ ಅಂತ ಸುದ್ದಿ ಬಂದಾಗ ನನಗೇ ಗೊತ್ತಿಲ್ಲದೆ ಕಣ್ಣು ಮಂಜಾಗುತ್ತವೆ.

ಮರೆಯಲು ಸಾಧ್ಯವಾಯಿತಾ ?

ಉತ್ತರವಿಲ್ಲದ ಪ್ರಶ್ನೆಯನ್ನು ಮನಸ್ಸು ಕೇಳಿಕೊಳ್ಳುತ್ತದೆ.

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more