• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಜ : ಯಾರೂ ಇಲ್ಲಿ ಶಾಶ್ವತವಾಗಿ ಗೂಟ ಬಡಿದುಕೊಂಡು ಇರುವುದಿಲ್ಲ , ಆದರೆ...

By Staff
|
Ravi Belagere on Thatskannada.com ರವಿ ಬೆಳಗೆರೆ
‘ಬಿಡ್ರೀ, ಎಲ್ಲಾರೂ ಒಂದಲ್ಲಾ ಒಂದು ದಿನ ಸಾಯೋರೇ! ಇಲ್ಲೇ ಯಾರಾದರೂ ಗೂಟ ಬಡ್ಕೊಂಡಿರ್ತಾರಾ!’

‘ಹೋಗೋವಾಗ ಏನ್‌ ಕಟ್ಕೊಂಡು ಹೋಗೋದಿದೆ ತಗಳ್ರೀ...’

‘ಅಯ್ಯೋ, ಓದಿದೋನು ಯಾವನು ಉದ್ಧಾರವಾದ?’

ಮುಂತಾದ ಮಾತುಗಳಿವೆಯಲ್ಲ ? ಅವು ನಮ್ಮ ಆಟಿಟ್ಯೂಡ್‌ನ ಕನ್ನಡಿಗಳು. ಬದುಕಿನೆಡೆಗೆ ನಾವು ಯಾವ ದೃಷ್ಟಿ ಇಟ್ಕೊಂಡಿರ್ತೀವಿ ಅನ್ನೋದರ ಮೇಲೆ ನಮ್ಮ ಮಾತು ಆಧಾರಪಟ್ಟಿರುತ್ತವೆ. ಆ ಮಾತು ಕೆಲವು ಸಲ ನಮ್ಮ ವ್ಯಕ್ತಿತ್ವವನ್ನು ಅತ್ಯಂತ ಸುಲಭವಾಗಿ ಸಿಪ್ಪೆ ಸುಲಿದಂತೆ ಬಿಚ್ಚಿಟ್ಟುಬಿಡುತ್ತದೆ. ಒಬ್ಬ ಉತ್ಸಾಹಿ ಹುಡುಗನನ್ನು ಮಾತನಾಡಿಸಿ ನೋಡಿ? ‘ಲೈಫಿಗೇನಾಗಿದೆ, ಸಕತ್ತಾಗಿದೆ. ಏನಾದ್ರೂ ಅಛೀವ್‌ ಮಾಡಬೇಕು. ಈಸಲ ಟೈಟ್‌ ಆಗಿ ಕೂತ್ಕೊಂಡು ಓದೀ...’ ಅಂತ ರೇಸು ಕುದುರೆಯ ಧರತಿಯಲ್ಲಿ ಮಾತನಾಡುತ್ತಾನೆ.

ಅದೇ ವಯಸ್ಸಿನ ಒಬ್ಬ ರೌಡಿಯನ್ನು ಮಾತಾಡಿಸಿ ನೋಡಿ ?

‘ಎಲ್ಲಾರೂ ಒಂದಲ್ಲ ಒಂದಿನ ಹೋಗೋರೆ. ಇಂದಿರಾಗಾಂಧೀನ ಬಾಡಿಗಾರ್ಡ್ಸೇ ಹೊಡೆದಾಕಲಿಲ್ವಾ? ರಾಜೀವ್‌ಗಾಂಧಿಗೆ ಅಷ್ಟೆಲ್ಲ ಪ್ರೊಟೆಕ್ಷನ್‌ ಇತ್ತಲ್ಲ ? ಏನಾಯ್ತು ?’ ಅನ್ನುತ್ತಾನೆ. ತಮಾಷೆ ಅಂದ್ರೆ ಇಂದಿರಾಗಾಂಧಿಗೆ ಎಷ್ಟು ವಯಸ್ಸಾಗಿತ್ತು? ಆಕೆ ಏನೆಲ್ಲ ಸಾಧಿಸಿದ್ದಳು? ಸಾಧನೆಯಲ್ಲಿನ ಸಾರ್ಥಕತೆಗಳೇನು? ರಾಜೀವ್‌ ಗಾಂಧಿ ಹತ್ಯೆಗಿದ್ದ ಪೊಲಿಟಿಕಲ್‌ ಸೀಕ್ವೆನ್ಸ್‌ಗಳೇನು ಮತ್ತು ಅವರು ಯಾವ ಕಾಸ್‌ಗೆ ಸತ್ತರು? ಈ ಯಾವ ಪ್ರಶ್ನೆಗಳೂ ಆ ಹುಡುಗನನ್ನು ಕಾಡಿರುವುದಿಲ್ಲ . ಅವುಗಳ ಪರಿಚಯ ಕೂಡ ಅವನಿಗಿರುವುದಿಲ್ಲ . ಅವನ ವ್ಯಕ್ತಿತ್ವ ಬದುಕಿನೆಡೆಗಿನ ಅಶ್ರದ್ಧೆಯ ಕಡೆಗೆ, ಕೇರ್‌ಲೆಸ್‌ನೆಸ್‌ ಕಡೆಗೆ ತೆರೆದುಕೊಂಡುಬಿಟ್ಟಿದೆ.

ಯಾವ ಮನುಷ್ಯ ಬದುಕಿನೆಡೆಗೆ ಕೇರ್‌ಲೆಸ್‌ ಆಗಿಬಿಡುತ್ತಾನೋ ಅವನ, ವ್ಯಕ್ತಿತ್ವದಲ್ಲೇ ಒಂದು ನೆಗಟಿವ್‌ ಅಂಶ ಬೆಳೆದುಕೊಂಡುಬಿಡುತ್ತದೆ. ದವಡೆಯಲ್ಲಿ ಹುಳುಕು ಹಲ್ಲು ಇಟ್ಟುಕೊಂಡು ಹಾಗೇ ಬದುಕುತ್ತಿದ್ದೀರಾ ? ಆ ಮಟ್ಟಿಗೆ ನಿಮಗೆ ಅಶ್ರದ್ಧೆಯಿದೆ. ಪ್ರತಿನಿತ್ಯ ಶೇವ್‌ ಮಾಡಿಕೊಳ್ಳುವ, ಇಸ್ತ್ರಿ ಬಟ್ಟೆ ಧರಿಸುವ, ನಿಯಮಿತವಾಗಿ ಹೇರ್‌ಕಟ್‌ ಮಾಡಿಸುವ, ಕರಾರುವಾಕ್ಕಾಗಿ ಆಫೀಸಿನ ಟೈಮಿಗೆ ಹಾಜರಾಗುವ, ಮೊಬೈಕನ್ನು ಪ್ರತಿನಿತ್ಯ ತಾನೇ ನೀಟಾಗಿ ಒರೆಸಿಕೊಳ್ಳುವ, ತಗೊಂಡ ಸಾಲವನ್ನು ಹೇಳಿದ ಡೇಟಿಗೆ ಹಿಂತಿರುಗಿಸುವ- ಹೀಗೆಲ್ಲ ಕ್ರಮಬದ್ಧವಾಗಿ ಬದುಕುವ ಮನುಷ್ಯ ಗ್ರೇಟ್‌ಫೆಲೋ ಅಲ್ಲದಿರಬಹುದು. ಆದರೆ ಅವನು ಶ್ರದ್ಧಾವಂತ. ಯಾವಾಗ ನಿಮಗೆ ಬದುಕಿನೆಡೆಗೆ ತೀವ್ರತರ ಶ್ರದ್ಧೆ ಹುಟ್ಟುತ್ತದೋ, ಆಗ ನೀವು ಒಂದು ಕ್ವಾಲಿಟಿ ಉಳ್ಳಂತಹ ಬದುಕನ್ನು ಅನುಭವಿಸತೊಡಗುತ್ತೀರಿ. ಅಂದರೆ, ಅದೇ!

‘ಲೈಫ್‌ನ ಸಕತ್ತಾಗಿ ಎಂಜಾಯ್‌ ಮಾಡಬೇಕು ಕಣಯ್ಯಾ’ ಅಂತ ಮಾತಾಡುವನನ್ನು,

‘ನಿನಗೆ ಹುಳುಕು ಹಲ್ಲಿದೆಯಾ?’ ಅಂತ ಕೇಳಿ.

ಅದಕ್ಕೂ, ಲೈಫನ್ನು ಎಂಜಾಯ್‌ ಮಾಡುವುದಕ್ಕೂ ಏನು ಸಂಬಂಧ ಅಂತ ನಿಮಗೆ ಅನ್ನಿಸಬಹುದು.

ತುಂಬ ಗಾಢವಾದ ಸಂಬಂಧವಿದೆ. ಲೈಫನ್ನು ಎಂಜಾಯ್‌ ಮಾಡೋದಾಗಲೀ, ಕ್ವಾಲಿಟಿ ಆಫ್‌ ಲೈಫ್‌ನ ನಿರ್ಧರಿಸುವುದಾಗಲೀ ಕೇವಲ ನಮ್ಮ ಮನಸ್ಸಲ್ಲ . ನಮ್ಮ ದುಡ್ಡಲ್ಲ . ನಮ್ಮ ಹುದ್ದೆ , ಕೀರ್ತಿ ಮಾತ್ರವಲ್ಲ. ನಮ್ಮ ದೇಹ ಅವೆಲ್ಲವುಗಳಿಗಿಂತ ಹೆಚ್ಚಾಗಿ ಲೈಫ್‌ನ ಎಂಜಾಯ್‌ ಮಾಡುತ್ತದೆ. ನಮ್ಮ ಆರೋಗ್ಯ ನಮ್ಮನ್ನು ಸುಖಿಸುವಂತೆ ಮಾಡುತ್ತದೆ. ಸುಖಕ್ಕೆ ಪ್ರೇರೇಪಿಸುತ್ತದೆ. ನಮ್ಮ ದೇಹದ ಕಸುವು, ಮೈಯ ಗಂಧ, ಮಾತಿನ ತಂಪು, ಕಣ್ಣ ಹೊಳಪು, ಉಸಿರಿನ ಸ್ವಚ್ಛತೆ- ಇವೆಲ್ಲ ಇಷ್ಟವಾದಾಗಲೇ ಅಲ್ಲವೆ ಆಕೆಗೆ (ಅಥವಾ ಆತನಿಗೆ) ನಾವು ಇಷ್ಟವಾಗೋದು? ಹಾಗೆ ಇಷ್ಟವಾದಾಗಲೇ ಅಲ್ಲವಾ ಒಟ್ಟಿಗಿರುವ ಕಾಲವನ್ನು ನಾವು ಎಂಜಾಯ್‌ ಮಾಡೋದು ?

ಮಧ್ಯಮಧ್ಯಾಹ್ನಕ್ಕೇ ಕುಡಿದು, ಬಾಯ್ತುಂಬ ಪಾನ್‌ ಪರಾಗ್‌ ಹಾಕಿಕೊಂಡು, ಸ್ನಾನವೂ ಮಾಡದೆ, ಹಳಸಲು ಮುಖದಲ್ಲಿ ಹೋಗಿ ಗರ್ಲ್‌ಫ್ರೆಂಡಿಗೆ ‘ಹಲೋ’ ಅನ್ನುವವನು, ತನ್ನ ದೃಷ್ಟಿಯಲ್ಲಿ ಲೈಫ್‌ನ ಎಂಜಾಯ್‌ ಮಾಡುತ್ತಿರಬಹುದು. ರಾತ್ರಿ ಹೊತ್ತಿಗೆ ತೆಕ್ಕೆಮುರಿಯೆ ಕುಡಿದು, ಯಾವುದೋ ಹೊಟೇಲಿನ ರಣಖಾರದ ಮಾಂಸ ತಿಂದು, ಎಲ್ಲೋ ಸಿಗುವ ಹೆಂಗಸನ್ನು ಹುಡುಕಿಕೊಂಡು ಹೋಗಿ ಮಲಗೆದ್ದು ಬರುವವನು- ಅವನೂ ಲೈಫ್‌ ಎಂಜಾಯ್‌ ಮಾಡುತ್ತಿದ್ದೇನೆ ಅಂದುಕೊಂಡಿರಬಹುದು. ಆದರೆ ಮಗುವಿಗೆ ಪಾಠ ಹೇಳಿಕೊಟ್ಟು , ಊಟ ಮಾಡಿ ಮಲಗಿಸಿ, ಹೆಂಡತಿಯಾಟ್ಟಿಗೇ ಊಟ ಮಾಡಿ, ಅಂಗಳದಲ್ಲಿ ಬೆತ್ತದ ಛೇರಿನಲ್ಲಿ ಕುಳಿತು, ಸುರಿವ ಬೆಳದಿಂಗಳಿನಲ್ಲಿ ಪಾನ್‌, ಹರಟೆ, ಗೆಳೆತನ, ಜೋಕು, ಇಡೀ ದಿನದ ಸುಸ್ತು ನಲಿವು ಹಂಚಿಕೊಂಡು, ರಾತ್ರಿಗೆ ನೀರವತೆ ಬೆರೆಯುವ ಘಳಿಗೆಯಲ್ಲಿ ಕೋಣೆ ಸೇರಿಕೊಂಡು ಅವಳಲ್ಲಿ ಬೆರೆಯುವವನು- ಅವನೂ ಎಂಜಾಯ್‌ ಮಾಡುತ್ತಿರುವುದು ಬದುಕನ್ನೇ.

ಇಲ್ಲಿ ಪ್ರಶ್ನೆ ಏನು ಬರುತ್ತದೆಂದರೆ, ನಾವು ಎಂಜಾಯ್‌ ಮಾಡಿದ ಬದುಕಿನ ಕ್ವಾಲಿಟಿ ಎಂಥದಿತ್ತು ? ಎಂಬುದು. ‘ನಾವೇನು ಸಾವಿರ ವರ್ಷ ಬದುಕಿರ್ತೀವಾ? ಅವಕಾಶ ಸಿಕ್ಕಾಗ ಲೈಫ್‌ನ ಎಂಜಾಯ್‌ ಮಾಡಿಬಿಡಬೇಕು’ ಅಂತ ಮಾತಾಡುತ್ತಾನಲ್ಲ ? ಅವನು ಮತಿಹೀನ ಆತುರಗಾರ. ವಿಪರೀತ ಕುಡಿಯುತ್ತಾನೆ, ವಿಪರೀತ ತಿನ್ನುತ್ತಾನೆ, ಗಾತ್ರ ಅಸಹ್ಯಕರವಾಗುತ್ತದೆ. ಹಲ್ಲಿನ ಹುಳುಕು ಬಾಯಲ್ಲೇ ಮರೆಯುತ್ತದೆ, ಮನುಷ್ಯನ ಚೆಂದ ಕೆಡುತ್ತದೆ, ಕ್ರಮೇಣ ಆರೋಗ್ಯ ಕೆಡುತ್ತದೆ! ಒಂದು ಹೊಡೆತ ಬೀಳಬಾರದ ವಯಸ್ಸಿನಲ್ಲಿ ಬಿತ್ತೋ ? ಅವತ್ತಿಗೆ ಲೈಫ್‌ನ ಕ್ವಾಲಿಟಿ ಮತ್ತು ಎಂಜಾಯ್‌ಮೆಂಟ್‌- ಎರಡೂ ಖಲಾಸ್‌! ‘ಈ ಬದುಕನ್ನು ಪುಟ್ಟಪೂರ್ತಿ ನೂರು ವರ್ಷ ಅನುಭವಿಸುತ್ತೇನೆ’ ಅಂದುಕೊಂಡೇ ಪ್ರತಿನಿತ್ಯ ಹಾಸಿಗೆಯಿಂದೇಳುವ ಮನುಷ್ಯ ಆ ಎಂಜಾಯ್‌ಮೆಂಟ್‌ಗಾಗಿ ಪ್ರತಿಕ್ಷಣ ಸಿದ್ಧನಾಗುತ್ತಾನೆ.

ನೆನಪಿರಲಿ, ಸುಖ ಪಡೋಕೂ ಶಕ್ತಿ ಬೇಕು. ಮನಸ್ಸಿಗಷ್ಟೆ ಇದ್ದರೆ ಸಾಲದು. ಅದು ದೇಹಕ್ಕೂ ಬೇಕು. ‘ನಾವೇನು ಸಾವಿರ ವರ್ಷ ಗೂಟ ಬಡ್ಕೊಂಡಿರ್ತೀವಾ?’ ಅಂದುಕೊಂಡು ಇವತ್ತೇ ಅತಿರೇಕ ಸುಖಗಳಿಗೆ ಹೋದರೆ, ಮೂವತ್ತೇ ವರ್ಷಕ್ಕೆ ಬದುಕು ಗೂಟ ಕಿತ್ತುಕೊಂಡು ಹೋಗಿಬಿಡುತ್ತದೆ. ಅಂಥದೊಂದು ನಿರಂತರ ಸುಖ ಅನುಭವಿಸಬೇಕು ಅನ್ನೋ ಆಸೆಯಿದ್ದರೆ, ಅದಕ್ಕಾಗಿ ನಿರಂತರ ದುಡಿಮೆಯೂ ಇರಬೇಕು. ತುಂಬ ದುಡಿಯುವ ಮನುಷ್ಯ ಮಾತ್ರ ಬದುಕಿನ ಕ್ವಾಲಿಟಿಯನ್ನ ತುಂಬ ಚೆನ್ನಾಗಿ ಅನುಭವಿಸುತ್ತಾನೆ. ಕೋಟ್ಯಂತರ ದುಡಿಯುವ ಒಬ್ಬ ಮಿನಿಸ್ಟರನಿಗಿಂತ, ಸಾವಿರಾರು ರುಪಾಯಿ ಸಂಬಳದ ಒಬ್ಬ ಲೆಕ್ಚರರ್‌ ಹೆಚ್ಚು ಸುಖಿ. ತುಂಬ ತಿಳಿದುಕೊಂಡ ಈಜಿಛೇರ್‌ ಮೇಲಿನ ಮಹಾಜ್ಞಾನಿಗಿಂತ, ಬದುಕಿನ ಫಂಡಮೆಂಟಲ್‌ ಸತ್ಯಗಳನ್ನು ಅರಿತುಕೊಂಡು ಬದುಕುವ ಮಧ್ಯಮ ವರ್ಗದವರ ಮನೆಯ ಅಜ್ಜ ಆರೋಗ್ಯವಂತ!

ನಾವೇನೂ ಗೂಟ ಬಡ್ಕೊಂಡು ಇಲ್ಲೇ ಇರಲ್ಲ , ಹೋಗೋವಾಗ ಏನ್ರೀ ತಗೊಂಡು ಹೋಗ್ತೀವಿ- ಮುಂತಾದ ಮಾತುಗಳನ್ನಾಡುವವರು ಬದುಕಿನ ಕ್ವಾಲಿಟಿ ಕಳೆದುಕೊಂಡವರು. ಅವರ ಮಾತಿಗೆ ಸಿಕ್ಕಬೇಡಿ. ಇದೆಲ್ಲ ಮಾಯ, ಈ ಜಗತ್ತೇ ಮಿಥ್ಯೆ, ಈ ಮನೆ ಸುಮ್ಮನೆ- ಅಂತೆಲ್ಲ ಅನ್ನುತ್ತಿರುತ್ತಾರಲ್ಲ ? ಅವರು ಡಿಫೀಟೆಡ್‌ ಫೆಲೋಸ್‌. ಅವರನ್ನು ದೂರವಿಡಿ.

ಇದೊಂದು ವಿಚಾರದಲ್ಲಿ ರಜನೀಶನ ಮಾತನ್ನು ಪೂರ್ತಿಯಾಗಿ ನಂಬಿ. ‘ಬದುಕಿನ ಪ್ರತಿಕ್ಷಣವನ್ನೂ ಅನುಭವಿಸಿ. Enjoy every moment of the life !

ಆತ ತುಂಬ ಸತ್ಯವಾದ ಮಾತು ಹೇಳಿದ್ದ. ಹಲ್ಲ ಹುಳುಕು ಉಳಿಸಿಕೊಂಡಿರಲಿಲ್ಲ . ಆಸೆಗೆ ಬಿದ್ದು ಉಣ್ಣಲಿಲ್ಲ . ಗೂಟ ಬಡಿದುಕೊಂಡು ಸಾವಿರ ವರ್ಷ ಇರುತ್ತೇನೆಂಬ ಭ್ರಮೆ ಆತನಿಗಿರಲಿಲ್ಲ . ಆದ್ದರಿಂದಲೇ, ಬದುಕಿದ ಅಷ್ಟೂ ಕ್ಷಣಗಳನ್ನು ಅದ್ಭುತವಾಗಿ ಸುಖಿಸಿದ. ಅದಕ್ಕಾಗಿ ಆತ ಕೊನೆಯ ಕ್ಷಣದ ತನಕ ದುಡಿಯುತ್ತಿದ್ದ !

(ಸ್ನೇಹ ಸೇತು : ಹಾಯ್‌ ಬೆಂಗಳೂರು)

ಮುಖಪುಟ / ಅಂಕಣಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more