ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶ ಕೋಶ : ವಿಶ್ವ ಪರ್ಯಟನೆಯ ಹೊಸ ಅಂಕಣ ಆರಂಭ

By ಶಾಮ್
|
Google Oneindia Kannada News

ದೇಶ ಸುತ್ತು, ಕೋಶ ಓದು ಎನ್ನುತ್ತದೆ ಗಾದೆ. ಹೌದು, ದೇಶ ಸುತ್ತಿದವರುಂಟು, ಕೋಶ ಓದಿದವರುಂಟು. ಆದರೆ ದೇಶ ಸುತ್ತಿದವರೆಲ್ಲ ಕೋಶ ಬರೆಯುವುದಿಲ್ಲ, ಕೋಶ ಬರೆದವರೆಲ್ಲ ದೇಶ ಸುತ್ತಲಾಗುವುದಿಲ್ಲ. ಇವೆರಡನ್ನೂ ಏಕಕಾಲಕ್ಕೆ ಮಾಡುತ್ತಿರುವ ವಿರಳರಲ್ಲಿ ವಿರಳ ಕನ್ನಡಿಗ ರಂಗಸ್ವಾಮಿ ಮೂಕನಹಳ್ಳಿ. ಕಾಲಿಗೆರಡು ಏರೋಪ್ಲೇನ್ ಚಕ್ರಗಳನ್ನು ಕಟ್ಟಿಕೊಂಡು ಛಪ್ಪನ್ನಾರು ದೇಶಗಳನ್ನು ಸುತ್ತಿದ, ಸುತ್ತುತ್ತಿರುವ ಈ ಮೂಕನಹಳ್ಳಿ ಈಗ ನಮ್ಮ ತಾಣದಲ್ಲಿ ಮಾತನಾಡಲು ಶುರುಹಚ್ಚಿಕೊಂಡಿದೆ.

ವೈನು, ಫುಟ್ಬಾಲು, ಬುಲ್ ಫೈಟು ಮತ್ತು ರುಚಿಕಟ್ಟಾದ ಆಹಾರ ಪದಾರ್ಥಗಳಿಗೆ ಹೆಸರುವಾಸಿಯಾದ ಸ್ಪೇನಿನಲ್ಲಿ ಒಂದು ಗಾದೆ ಇದೆ - He who walks a lot and reads a lot, sees a lot and knows a lot. ಸ್ಪೇನಿನ ಜನ ಹುಟ್ಟಾ ಪ್ರವಾಸಿಗರು, ಕ್ರೊಕೆಟ್ (ಸ್ಪೇನಿನ ಜನಪ್ರಿಯ ಆಹಾರ ಪದಾರ್ಥ) ಬಿಟ್ಟರೂ ಪ್ರವಾಸ ಮಾಡುವುದನ್ನು ಬಿಡರು ಎನ್ನುವಷ್ಟು ಅಲೆಮಾರಿಗಳು. ಇಂಥ ದೇಶದಲ್ಲಿ ಎರಡು ದಶಕದಿಂದ ಆಂತರಿಕ ಲೆಕ್ಕ ಪರಿಶೋಧಕರಾಗಿ ಸ್ಪೇನಿನ ವಿತ್ತಪ್ರಪಂಚದಲ್ಲಿ ಬದುಕು ಕಂಡುಕೊಂಡಿರುವ ರಂಗಸ್ವಾಮಿ, ದೇಶ ಪರ್ಯಟನೆ ಮಾಡುವುದರಲ್ಲಿ ಸ್ಪಾನಿಶರೇ ಆಗಿಬಿಟ್ಟಿದ್ದಾರೆ!

ಕನ್ನಡ ಲೇಖನ ವ್ಯವಸಾಯ ಮಾಡುವುದರಲ್ಲಿ ರಂಗಸ್ವಾಮಿ ಒಬ್ಬ ಪಳಗಿದ ಕೃಷಿಕ. ಜಗತ್ತಿನ ಆರ್ಥಿಕ ಸ್ಥಿತಿಗತಿ ಬಗ್ಗೆ ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿಗೆ ಲೇಖನಗಳನ್ನು ಬರೆದಿದ್ದಾರೆ. ಕಂಡುಂಡ ದೇಶಗಳ ಪ್ರವಾಸಿ ಕಥನ ತರಂಗ, ವಿಜಯ ನೆಕ್ಸ್ಟ್ ಮತ್ತು ಡಿಜಿಟಲ್ ಕನ್ನಡದಲ್ಲಿ ಲೇಖನ ಮತ್ತು ಸರಣಿ ರೂಪದಲ್ಲಿ ಪ್ರಕಟವಾಗಿವೆ. ಒನ್ಇಂಡಿಯಾ ಕನ್ನಡ ತಾಣದಲ್ಲೂ ಹಲವು ಹತ್ತು ಬಿಡಿ ಲೇಖನಗಳನ್ನ ಬರೆದಿದ್ದಾರೆ. ನಮ್ಮ ತಾಣದಲ್ಲಿ ಇದೀಗ ಅಂಕಣಕಾರರಾಗಿ ಅಲಂಕೃತರಾಗಿರುವ ರಂಗಸ್ವಾಮಿಯವರು ಪ್ರತಿ ಮಂಗಳವಾರ ಬರೆಯುವ ಲೇಖನ ಮಾಲೆ - 'ದೇಶ-ಕೋಶ'.

Rangaswamy personal travelogue Desha Kosha world tour weekly column

ರಂಗಸ್ವಾಮಿಯವರು ಗೂಗಲ್ ಓದಿ ಲೇಖನ ಬರೆಯುತ್ತಿಲ್ಲ ಎನ್ನುವುದನ್ನು ನೀವು ಮೊದಲು ಮನಗಾಣಬೇಕು. ಅವರು ಸ್ವತಃ ಸುತ್ತಿದ ದೇಶಗಳ ಪಟ್ಟಿಯೇ ಒಂದು ಲೇಖನಕ್ಕೆ ಆಹಾರವಾದೀತು. ಒಂದು ದೇಶವನ್ನು ಪ್ರವಾಸಿ ತಾಣದಂತೆ ನೋಡದೆ, ಆ ದೇಶದ ಹಣ? ಅಲ್ಲಿಗೆ ಹೋಗಲು ವೀಸಾ ಬೇಕೇ? ಖರ್ಚಿನ ಕತೆಯೇನು? ಅಲ್ಲಿನ ಭಾಷೆ ಯಾವುದು? ಅಲ್ಲಿಗೆ ಹೋಗಲು ಸೂಕ್ತ ಸಮಯ ಯಾವುದು? ಹೀಗೆ, ಪ್ರವಾಸಿಗನ ಮನಸ್ಸಿನಲ್ಲಿ ಏಳಬಹುದಾದ ಹತ್ತಾರು ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸುವ ಧಾಟಿಯಲ್ಲಿ ಲೇಖನ ರೂಪುಗೊಂಡಿರುತ್ತದೆ.

ನಾನು ರೀಡರ್ಸ್ ಡೈಜೆಸ್ಟ್ ಓದುತ್ತಾ ಬೆಳೆದವನು. ಮಾಸ ಪತ್ರಿಕೆ ಅಷ್ಟೇ ಅಲ್ಲ. Readers Digest ಪ್ರಕಟಣೆಗಳಾದ Complete A to Z of Medicine & Health, Symptom Sorter, When to go to a doctor.. ಜತೆಗೆ Guide to Places of The World ಪುಸ್ತಕವನ್ನು ಆಸಕ್ತಿಯಿಂದ ಓದಿದವನು. ಹಾಗಾಗಿ ದೇಶಕೋಶಗಳ ಬಗ್ಗೆ ಕನ್ನಡದಲ್ಲಿ ಬರೆಯುವ ಉತ್ಸಾಹವನ್ನು ರಂಗಸ್ವಾಮಿ ಅವರು ವ್ಯಕ್ತಪಡಿಸಿದಾಗ ಇಲ್ಲಾ ಎನ್ನುವೆನೇ?

ಮಂಗಳವಾರದ ಈ ಅಂಕಣದಲ್ಲಿ ಮೊದಲಿಗೆ ಫ್ರಾನ್ಸಿನ ಒಂದು ಚಿಕ್ಕ ಹಳ್ಳಿ ಲೋದ್ಸ್ ಬಗ್ಗೆ ಬರೆಯುತ್ತಿದ್ದಾರೆ ಲೇಖಕರು. "ಎಲ್ಲಾ ಬಿಟ್ಟು ಈ ಹಳ್ಳಿಯಿಂದಲೇ ಲೇಖನ ಮಾಲೆ ಆರಂಭವಾಗುತ್ತಿರುವುದು ಏಕೆ?" ಎಂದು ರಂಗಸ್ವಾಮಿಯವರನ್ನು ಕೇಳಿದೆ. "ಕಳೆದ ಹದಿನೈದು ವರ್ಷದಲ್ಲಿ ಮೂಕನಹಳ್ಳಿಗೆ ಭೇಟಿ ನೀಡಿರುವುದಕ್ಕಿಂತ ಹೆಚ್ಚಿನ ಸಲ ಲೋದ್ಸ್ ಹಳ್ಳಿಗೆ ಹೋಗಿದ್ದೇನೆ. ಅದು ನನ್ನದೇ ಹಳ್ಳಿಯೇನೋ ಎನ್ನುವ ಆಪ್ತ ಭಾವ ಅಲ್ಲಿನ ನೆಲ ನನಗೆ ನೀಡಿದೆ. ಹೀಗಾಗಿ ಅದನ್ನೇ ಮೊದಲ ಲೇಖನದ ಮಣ್ಣಾಗಿ ಆಯ್ಕೆ ಮಾಡಿಕೊಂಡೆ, ಸಾರ್" ಎಂದರು ತಮ್ಮ ಹೆಸರಲ್ಲೇ ಹಳ್ಳಿಯನ್ನೂ ಕಾಪಾಡಿಕೊಂಡಿರುವ ಲೋಕಸಂಚಾರಿ, ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಮೂಕನಹಳ್ಳಿ ರಂಗಸ್ವಾಮಿ!

- ಶಾಮ್

English summary
Rangaswamy Mookanahalli from Karnataka takes you on a digital journey across the world. The author, a Chartered Accountant in Barcelona/Bengaluru peeps through countries in its natural habitat. A Must read Tuesday travel writing on widely read Indian language portal, Oneindia Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X