• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಹು ಸುಂದರ ಈ ಹಿಸ್ಟಾರಿಕ್ ನಗರ 'ಅಂದೋರ'!

By ರಂಗಸ್ವಾಮಿ ಮೂಕನಹಳ್ಳಿ
|

ಜಗತ್ತು ಸುತ್ತುವ ಆಸೆ, ಹಣ ಎರಡೂ ಇರದ ನನಗೆ ಅವೆರೆಡೂ ಬಯಸದೆ ಬಂದ ಭಾಗ್ಯ. 2000ರ ಮೇ 24ರಂದು ಪ್ರಥಮ ಬಾರಿಗೆ ಸ್ಪೇನ್ ನ ಬಾರ್ಸಿಲೋನಾದ 'ಎಲ್ ಪ್ರಾತ್ ' ವಿಮಾನ ನಿಲ್ದಾಣದಲ್ಲಿ ಇಳಿಯುವ ಮುಂಚೆ ದುಬೈನಲ್ಲಿ ಮೂರು ತಿಂಗಳು ವಾಸ, ಕೆಲಸ ಮಾಡಿದ್ದ ಅನುಭವ ಬಿಟ್ಟರೆ, ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆ ಕೂಡ ನೋಡಿರದ ಬದುಕು ನನ್ನದು.

ಆಗಸ್ಟ್ ಪೂರ್ತಿ ತಿಂಗಳು ಸ್ಪೇನ್ ನಲ್ಲಿ ರಜಾ ಜೊತೆಗೆ ವೇತನ ಡಬಲ್! ಅಂದರೆ ಮಾಮೂಲಿ ತಿಂಗಳಲ್ಲಿ ನಿಮ್ಮ ಸಂಬಳ ಸಾವಿರವಿದ್ದರೆ, ಆಗಸ್ಟ್ ನಲ್ಲಿ ಎರಡು ಸಾವಿರ. 'ಹೋಗಿ ಜಗವ ಸುತ್ತಿ, ಹೊಸ ಹುರುಪಿನೊಂದಿಗೆ ಮರಳಿ ಬನ್ನಿ' ಎನ್ನುವುದು ಇಲ್ಲಿನ ಸರಕಾರದ ಅಲಿಖಿತ ನಿಯಮ. ಸ್ಪ್ಯಾನಿಶರ ಬದುಕುವ ರೀತಿಯೇ ಹಾಗೆ, ಊಟ ಬಿಟ್ಟರೂ ಜಗತ್ತು ಸುತ್ತುವುದ ಬಿಡರು. ಹೋದಲ್ಲಿ ಅವರೊಂದಿಗೆ ಒಂದಾಗುವ ಸಹಜ ಕನ್ನಡ ಮಣ್ಣಿನ ಗುಣದ ನನಗೆ ಜಗತ್ತು ಸುತ್ತುವ ಹುಚ್ಚು ಯಾವಾಗ ಹಿಡಿಯಿತು ತಿಳಿಯಲೇ ಇಲ್ಲ.

ಅಂದೋರ ಅರಸಿ ಹೊರಟಾಗ...

ನಾನಿದ್ದ ಬಾರ್ಸಿಲೋನಾ ನಗರದಿಂದ ಉತ್ತರಕ್ಕೆ 200 ಕಿಲೋಮೀಟರ್ ಪ್ರಯಾಣಿಸಿದರೆ ಸಿಗುವ ದೇಶವೇ ಅಂದೋರ (Andorra). ಯೂರೋಪಿನ ಆರನೇ ಸಣ್ಣ ದೇಶ ಹಾಗು ಜಗತ್ತಿನ 16ನೇ ಸಣ್ಣ ದೇಶ ಎನ್ನುವ ಖ್ಯಾತಿ ಈ ದೇಶದ್ದು. ಯುರೋ ಇಲ್ಲಿನ ಹಣ. ಆದರೆ ಅಂದೋರ ಯೂರೋಪಿಯನ್ ಯೂನಿಯನ್ ನಲ್ಲಿ ಸೇರಿಲ್ಲ. ಅಷ್ಟೇ ಅಲ್ಲದೆ ಷೆಗಂನ್ ಒಕ್ಕೂಟದಲ್ಲೂ ಇಲ್ಲ, ಆದರೂ ಇದು ಯುನೈಟೆಡ್ ನೇಷನ್ ನಿಂದ ಸ್ವತಂತ್ರ ದೇಶ ಎಂದು ಮಾನ್ಯತೆ ಪಡೆದಿದೆ.

ಸರಿ ಸುಮಾರು 85 ಸಾವಿರ ಇಲ್ಲಿನ ಜನಸಂಖ್ಯೆ. 40 ಕಿಲೋಮೀಟರ್ ಆ ಬದಿಯಿಂದ ಈ ಬದಿಗೆ ಸುತ್ತಿದರೆ ದೇಶವನ್ನೇ ಸುತ್ತಿದಂತೆ! ಜಗತ್ತಿನ 14ನೇ ಹಳೆಯ ದೇಶ ಎನ್ನುವ ಖ್ಯಾತಿಗೂ ಇದು ಭಾಜನವಾಗಿದೆ. ಇಂತಹ ಅಂದೋರದಲ್ಲಿ ಏರ್ಪೋರ್ಟ್ ಇಲ್ಲ. ಹೌದು ಇಲ್ಲಿಗೆ ಹೋಗಬೇಕಾದರೆ ಸ್ಪೇನ್ ಮುಖಾಂತರ ಅಥವಾ ಫ್ರಾನ್ಸ್ ಮುಖಾಂತರ ರಸ್ತೆ ಮೂಲಕವೇ ಹೋಗಬೇಕು.

ಮುಕ್ಕಾಲು ಪಾಲು ಪರ್ವತಗಳಿಂದ ಆವೃತ್ತವಾಗಿರುವ ಈ ದೇಶಕ್ಕೆ ಅಂದೋರ ಎನ್ನುವ ಹೆಸರು ಹೇಗೆ ಬಂದಿರಬಹುದು ಎನ್ನುವುದಕ್ಕೆ ಚರಿತ್ರೆಯಲ್ಲಿ ಉತ್ತರವಿದೆ. ಸ್ಪೇನ್ ನ ಪಕ್ಕದಲ್ಲಿ ಇರುವ ಮೊರೊಕ್ಕೋ ಮುಸ್ಲಿಮರು ಐಬೇರಿಯನ್ ಪೆನಿನ್ಸುಲಾ ಆಕ್ರಮಣ ಮಾಡಿದ್ದು, ಸ್ಪೇನ್ ನಲ್ಲಿ ದರಬಾರು ನಡೆಸಿದ್ದು ತಿಳಿದ ವಿಷಯವೇ ಆಗಿದೆ. ಅಲ್ - ದುರ್ರಾ ಎಂದರೆ 'ದಿ ಪರ್ಲ್' ಕನ್ನಡದಲ್ಲಿ 'ಮುತ್ತು' ಎನ್ನುವ ಅರ್ಥ ಕೊಡುತ್ತದೆ. ಅದು ಸ್ಪ್ಯಾನಿಷ್ ಮತ್ತು ಕತಾಲಾನಾರ ಭಾಷೆಯಲ್ಲಿ ಅಂದೋರ ಆಗಿರುವ ಸಾಧ್ಯತೆಗಳು ಹೆಚ್ಚಿವೆ. ಮೂರು ಕಡೆ ಪರ್ವತ ನಡುವೆ ಇರುವ ಈ ಭೂಪ್ರದೇಶವನ್ನ 'ಪರ್ಲ್' ಎಂದು ಕರೆದಿದ್ದರಲ್ಲಿ ಅತಿಶಯೋಕ್ತಿ ಇಲ್ಲ.

ನೋಡಲೇನಿದೆ?

ಇಲ್ಲಿಗೆ ನೀವು ಭೇಟಿ ಕೊಟ್ಟಿದ್ದೆ ಆದರೆ ಒಮ್ಮೆಲೇ ಟೈಮ್ ಬ್ಯಾಕ್ ಟ್ರಾವೆಲ್ ಮಾಡಿದ ಅನುಭವ ನಿಮ್ಮದಾಗುತ್ತದೆ. 13ನೇ ಶತಮಾನದ ಕಟ್ಟಡಗಳನ್ನ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ. ಶಾಪಿಂಗ್ಗೆ ಅಂದೋರ ಬಹಳ ಪ್ರಸಿದ್ದಿ, ಏಕೆಂದರೆ ಇಲ್ಲಿ ಟ್ಯಾಕ್ಸ್ ಇಲ್ಲ. ಹೀಗಾಗಿ ಪಕ್ಕದ ಫ್ರಾನ್ಸ್ ಮತ್ತು ಸ್ಪೇನ್ ನಿಂದ ತಿಂಗಳಿಗೊಮ್ಮೆ ಖರೀದಿಗೆಂದೇ ಬರುವ ಜನರ ಸಂಖ್ಯೆ ಬಹಳಷ್ಟಿದೆ. ಸ್ಕೀಯಿಂಗ್ ಗೆ ಇದು ಬಹಳ ಪ್ರಸಿದ್ದಿ. ಕೇವಲ 85 ಸಾವಿರ ಜನಸಂಖ್ಯೆ ಹೊಂದಿರುವ ಈ ಪುಟ್ಟ ದೇಶ 1 ಕೋಟಿಗೂ ಮೀರಿ ವಾರ್ಷಿಕ ಪ್ರವಾಸಿಗರನ್ನ ಸಳೆಯುತ್ತದೆ. ಇವರಲ್ಲಿ ಬರುವ ಮುಕ್ಕಾಲು ಪಾಲು ಜನ ಸ್ಕೀಯಿಂಗ್ ಗಾಗಿ ಬಂದವರು, ಉಳಿದವರು ಶಾಪಿಂಗ್ ಹುಚ್ಚಿನವರು. ಉಳಿದಂತೆ ದೇಶದ ಪ್ರತಿ ವೃತ್ತ, ರಸ್ತೆ, ಕಟ್ಟಡಗಳನ್ನ ಕೂಡ 'ಹಿಸ್ಟಾರಿಕ್' ಎನ್ನುವಂತೆ ಬಿಂಬಿಸುತ್ತಾರೆ.

ಅಂದೋರ ದೇಶವನ್ನ ಒಂದು ಅಥವಾ ಹೆಚ್ಚೆಂದರೆ ಎರಡು ದಿನದಲ್ಲಿ ಓಡಾಡಿ ಮುಗಿಸಿಬಿಡಬಹದು. ನೀವು ಸ್ಕೀಯಿಂಗ್ ಪ್ರಿಯರೋ ಅಥವಾ ಮದ್ಯ ಮತ್ತು ಶಾಪಿಂಗ್ ಇಷ್ಟಪಡುವವರಾಗಿದ್ದರೆ ವಾರ ಇಲ್ಲಿ ಆರಾಮಾಗಿ ಕಳೆಯಬಹದು.

ಬೆಂಗಳೂರಿನಿಂದ ಅಂದೋರಕ್ಕೆ ಹೋಗಿ ಬರಲು ಒಬ್ಬ ವ್ಯಕ್ತಿಗೆ ಎಪ್ಪತೈದು ಸಾವಿರ ರೂಪಾಯಿ ಪ್ರಯಾಣ ವೆಚ್ಚವೇ ಆಗುತ್ತದೆ. ವಾರ ಇದ್ದು ನೋಡಿ ಬರಲು ಇನ್ನೊಂದು ಲಕ್ಷ ನಿರಾಯಾಸವಾಗಿ ಕೈಬಿಡುತ್ತೆ. ಇಲ್ಲಿನ ಕ್ಯಾಸಿನೊ ಹೊಕ್ಕರೆ ಖರ್ಚಿನ ಲೆಕ್ಕ ನನ್ನಿಂದ ಒಪ್ಪಿಸಲು ಸಾಧ್ಯವಿಲ್ಲ ಕ್ಷಮಿಸಿ. ಅತಿ ಸಾಮಾನ್ಯ ಜೀವನ ನಡೆಸಲು ಕೂಡ ವಾರಕ್ಕೆ ಎರಡು ಲಕ್ಷ ರೂಪಾಯಿ ವ್ಯಕ್ತಿಯೊಬ್ಬರಿಗೆ ತಗಲುತ್ತದೆ. ಸ್ಕೀಯಿಂಗ್ ಮಾಡುವ ಇಚ್ಛೆಯಿದ್ದವರು ಡಿಸೆಂಬರ್ ನಿಂದ ಮಾರ್ಚ್ ವರೆಗೆ ಇಲ್ಲಿಗೆ ಬರಬಹುದು. ಈ ಚಳಿ ತಡೆಯಲು ಸಾಧ್ಯವಿಲ್ಲ, ಆದರೆ ಅಂದೋರದ ಪ್ರಕೃತ್ತಿ ಸಿರಿ ನೋಡಿಯೇ ಸಿದ್ದ ಎನ್ನುವರು ಜುಲೈನಿಂದ ಸೆಪ್ಟೆಂಬರ್ ಇಲ್ಲಿಗೆ ಬರಬಹುದು. ಬೇಸಿಗೆಯಲ್ಲಿ ಮೂರುವರೆ ಗಂಟೆ ಹಾಗೂ ಚಳಿಗಾಲದಲ್ಲಿ ನಾಲ್ಕೂವರೆ ಗಂಟೆ ಭಾರತದ ವೇಳೆಗಿಂತ ಹಿಂದೆ ಇದೆ.

ಅಂದೋರದ ಅಲೆಮಾರಿಯಾಗಿ ಅಲೆದಾಡುವಾಗ ದಕ್ಕಿದ ಒಂದಷ್ಟು ಅಲ್ಲಿನ ವಿಶಿಷ್ಟತೆಗಳು:

# ಅಂದೋರದಲ್ಲಿ ಅಲ್ಲಿನ ಪ್ರಜೆಗಳೇ ಅಲ್ಪಸಂಖ್ಯಾತರು. ಹೌದು ಜನಸಂಖ್ಯೆಯ 43 ಭಾಗ ಸ್ಪ್ಯಾನಿಶರು, 6 ಭಾಗ ಪೋರ್ಚುಗೀಸರು, 17 ಭಾಗ ಫ್ರೆಂಚರು, 3 ಭಾಗ ಅರಬ್ಬರು, 3 ಭಾಗ ಇತರರು, ಮಿಕ್ಕವರು ಅಂದೋರ ನಿಜ ಪ್ರಜೆಗಳು.

# ಅಂದೋರದಲ್ಲಿನ ಪ್ರತಿ ಪುರುಷ 18ರಿಂದ 60ರ ವಯೋಮಾನದವರೆಗೆ ತುರ್ತು ಸ್ಥಿತಿ ಬಂದರೆ ಸೈನಿಕನಂತೆ ಕಾರ್ಯ ನಿರ್ವಹಿಸಬೇಕು. ಪ್ರತಿ ಮನೆಯ ಮುಖ್ಯಸ್ಥ ಗನ್ ಹೊಂದಿರಲೇಬೇಕು.

# ಅಂದೋರ ದೇಶವನ್ನ ಇಬ್ಬರು ರಾಜರು ಪ್ರತಿನಿಧಿಸುತ್ತಾರೆ. ಫ್ರಾನ್ಸ್ ನ ಅಧ್ಯಕ್ಷ ಮತ್ತು ಸ್ಪೇನ್ ನ ಉರ್ಜಲ್ ನ ಆರ್ಚ್ ಬಿಷಪ್ ರನ್ನ ಅಂದೊರದ ರಾಜರೆಂದು ಪರಿಗಣಿಸಲಾಗುತ್ತದೆ. ಆದರೆ ಇವರಿಗೆ ಯಾವುದೇ ಹೆಚ್ಚಿನ ಅಧಿಕಾರ ಇರುವುದಿಲ್ಲ.

# ಕತಲಾನ್ ಭಾಷೆಯನ್ನ ಅಧಿಕೃತ ಭಾಷೆಯಾಗಿ ಹೊಂದಿರುವ ಏಕೈಕ ರಾಷ್ಟ್ರ.

# ಕಳೆದ ಸಾವಿರ ವರ್ಷದಿಂದ ಯಾವುದೇ ರಕ್ತಪಾತ ಇಲ್ಲಿಲ್ಲ. ಆಕಸ್ಮಾತ್ ಯುದ್ಧವಾದರೆ ಫ್ರಾನ್ಸ್ ಮತ್ತು ಸ್ಪೇನ್ ಮಿಲಿಟರಿ ಅಂದೋರಗೆ ರಕ್ಷಣೆ ನೀಡುತ್ತವೆ.

# ಅಂದೋರದಲ್ಲಿ ಕೆಲಸ ಮಾಡುವ ಶಿಕ್ಷಕ /ಶಿಕ್ಷಕಿಗೆ ಸಂಬಳ ಫ್ರಾನ್ಸ್ ಮತ್ತು ಸ್ಪೇನ್ ಸರಕಾರ ನೀಡುತ್ತದೆ.

# ಗಡಿಯಲ್ಲಿ ಪ್ರಯಾಣಿಕರು ಕುಳಿತ ಬಸ್ಸಿಗೆ ಬಂದು ಪಾಸ್ಪೋರ್ಟ್ ಚೆಕ್ ಮಾಡುತ್ತಾರೆ ಆದರೆ ಯಾವುದೇ 'ಮುದ್ರೆ ' ಒತ್ತುವುದಿಲ್ಲ. ನಿಮಗೆ ನೆನಪಿಗೆ ಪಾಸ್ಪೋರ್ಟ್ ನಲ್ಲಿ ಸೀಲ್ ಬೇಕಿದ್ದರೆ ಬಸ್ನಿಂದ ಇಳಿದು ಹೋಗಿ ನೀವೇ ಹಾಕಿಸಿಕೊಂಡು ಬರಬೇಕು.

# ಸರಾಸರಿ 36 ಸಾವಿರ ಯುರೋ ವಾರ್ಷಿಕ ಆದಾಯ ಹೊಂದಿರುವ ಇಲ್ಲಿನ ಜನರಿಗೆ ಇನ್ಕಮ್ ಟ್ಯಾಕ್ಸ್ ಇಲ್ಲ.

# ಅಂದೋರಗೆ ರಾಷ್ಟೀಯ ಬ್ಯಾಂಕ್ ಇಲ್ಲ. ತನ್ನದೇ ಕರೆನ್ಸಿ ಇಲ್ಲ. ಏರ್ಪೋರ್ಟ್ ಇಲ್ಲ. ಏಪ್ರಿಲ್ 1993ರವರೆಗೆ ಸಂವಿಧಾನವೂ ಇರಲಿಲ್ಲ! ಆದರೂ ವಿಶ್ವ ಮಾನ್ಯತೆ ಪಡೆದ ಸ್ವತಂತ್ರ ದೇಶ.

# ಅಂತ್ಯಂತ ಸುರಕ್ಷಿತ ದೇಶಗಳ ಪಟ್ಟಿಯಲ್ಲಿ ಬರುವ ಇಲ್ಲಿ, ಪಿಕ್ ಪಾಕೆಟ್, ಕಾರು ಕಳುವು, ರಸ್ತೆಯಲ್ಲಿ ಅಸಭ್ಯ ವರ್ತನೆ ಪ್ರತಿಶತ ಸೊನ್ನೆ.

# ಅಂದೋರ ದೇಶದ ರಾಜಧಾನಿ ಅಂದೋರ ದೆ ವೇಯ್ಯ (Andorra la Vella) ಜಗತ್ತಿನ ಅತಿ ಎತ್ತರದಲ್ಲಿ ಇರುವ ಯೂರೋಪಿನ ರಾಜಧಾನಿ ಎನ್ನುವ ಹೆಗ್ಗಳಿಕೆ ಪಡೆದಿದೆ. ಸಮುದ್ರ ಮಟ್ಟದಿಂದ 1023 ಮೀಟರ್ ಎತ್ತರದಲ್ಲಿದೆ.

# ಈ ದೇಶದ ಪ್ರಥಮ ಹೈವೇ ಕಟ್ಟಿದ್ದು 1911ರಲ್ಲಿ.

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ವಾಕ್ಯ ಅಂದೋರಕ್ಕೆ ಹೆಚ್ಚು ಒಪ್ಪುತ್ತದೆ. ನೀವು ಸ್ಕೀಯಿಂಗ್ ಪ್ರಿಯರೋ, ಶಾಪೋಲಿಕ್ಕೋ ಅಲ್ಲದಿದ್ದರೂ ಪ್ರಕೃತ್ತಿ ಸೌಂದರ್ಯ ಸವೆಯಲು ಅಂದೋರಕ್ಕೆ ಹೋಗಲು ಅಡ್ಡಿ ಇಲ್ಲ. ಜೇಬು ಭದ್ರವಿದ್ದರೆ ಸಾಕು!

English summary
Andorra, is a beautiful sovereign landlocked microstate in Southwestern Europe, located in the eastern Pyrenees mountains and bordered by France in the north and Spain in the south. It is considered as one of the oldest countries in the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X