ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Column: ಬದುಕಿನ ಬಂಡಿಯ ದೆಸೆ ಬದಲಿಸಿದ ಸಮಯಪಾಲನೆ!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಶಿಸ್ತು ಎನ್ನುವುದು ಜೀವನದಲ್ಲಿ ಬಹುಮುಖ್ಯವಾದದ್ದು ಎನ್ನುವುದರಲ್ಲಿ ಸಂಶಯವಿಲ್ಲ. ಒಂದು ರೀತಿಯ ಶಿಸ್ತು ಬದ್ದ ಜೀವನ ಬಹಳಷ್ಟು ಮಹತ್ಕಾರ್ಯಗಳನ್ನು ಸಾಧಿಸಲು ಕೂಡ ಸಹಕಾರಿ. ಶಿಸ್ತು ಇಲ್ಲದಿದ್ದರೆ ಅದೆಷ್ಟೇ ಬುದ್ದಿವಂತರಾಗಿದ್ದರೂ ಅಂದುಕೊಂಡದ್ದ ಮಾಡಲಾಗುವುದಿಲ್ಲ. ಹೀಗಾಗಿ ಬದುಕಿಗೆ ಶಿಸ್ತು ಬೇಕೇ ಬೇಕು. ಆದರೆ ನಮ್ಮಲ್ಲಿ ಒಂದು ಗಾದೆ ಮಾತಿದೆ, ಅತಿಯಾದರೆ ಅಮೃತವೂ ವಿಷ ಎನ್ನುತ್ತದೆ ಆ ಮಾತು. ಅತಿಯಾದ ಶಿಸ್ತು , ಇನ್ನೊಬ್ಬರಿಗೆ ಕಿರಿ ಕಿರಿ ಎನ್ನುವ ಮಟ್ಟದ ಶಿಸ್ತು ಒಳ್ಳೆಯದಲ್ಲ ಎನ್ನುವುದು ಇಂದಿಗೆ ನನಗೆ ಅರಿವಾಗಿದೆ. ಆದರೂ ಕೆಲವೊಮ್ಮೆ ನನ್ನ ಶಿಸ್ತುಬದ್ಧ ಜೀವನ ಕೆಲವೊಮ್ಮೆ ಕಿರಿಕಿರಿ ಮಾಡುವುದುಂಟು, ಸಾಧ್ಯವಾದಷ್ಟೂ ಇನ್ನೊಬ್ಬರಿಗೆ ತೊಂದರೆಯಾಗದಂತೆ ನನ್ನ ಶಿಸ್ತು ಪಾಲಿಸುವ ಕಲೆಯನ್ನು ಇನ್ನೂ ಕಲಿಯುತ್ತಿದ್ದೇನೆ. ಶಿಸ್ತು ಎಂದ ಮಾತ್ರಕ್ಕೆ ಅದು ಕೇವಲ ಬೆಳಗ್ಗೆ ಬೇಗ ಎದ್ದು ವಾಕಿಂಗ್ ಹೋಗುವುದು, ಕಸರತ್ತು ಮಾಡುವುದಲ್ಲ, ಶಿಸ್ತು ಎನ್ನುವುದಕ್ಕೆ ಬಹಳ ದೊಡ್ಡ ಅರ್ಥವಿದೆ.

ಸಾಮಾನ್ಯವಾಗಿ ದೈಹಿಕ ಕಸರತ್ತು ಮಾಡುವ, ಬೆಳಗ್ಗೆ ಬೇಗ ಏಳುವ ಜನರನ್ನು ಕುರಿತು ಅವರು ತುಂಬಾ ಶಿಸ್ತು ಎನ್ನುವುದನ್ನ ಕೇಳಿರುತ್ತೇವೆ, ಇಲ್ಲವೇ ಹೆಚ್ಚು ಮಾತನಾಡದೆ ತಮ್ಮ ಕೆಲಸದಲ್ಲಿ ತಾವು ಮಗ್ನರಾಗಿರುವ, ವೇಳೆ ಬದಲಿಸಿದೆ ತಮ್ಮ ದೈನಂದಿನ ಕೆಲಸಗಳನ್ನ ಮಾಡುವವರಿಗೂ ಕೂಡ ಈ ಪಟ್ಟವನ್ನು ಸಮಾಜ ಕಟ್ಟಿಬಿಡುತ್ತದೆ. ಆದರೆ ಶಿಸ್ತು ಎನ್ನುವ ವ್ಯಾಖ್ಯೆ ಬಹು ದೊಡ್ಡದು. ಶಿಸ್ತಿನಲ್ಲಿ ಆರ್ಥಿಕ ಶಿಸ್ತು, ದೈಹಿಕ ಶಿಸ್ತು, ಬೌದ್ಧಿಕ ಶಿಸ್ತು. ಹೀಗೆ ಹಲವಾರು ವಿಧಗಳಿವೆ. ಎಲ್ಲರೂ ಎಲ್ಲಾ ರೀತಿಯ ಶಿಸ್ತುಗಳನ್ನು ಪಾಲಿಸುತ್ತಿರುತ್ತಾರೆ ಎನ್ನುವಂತಿಲ್ಲ. ಹೀಗಾಗಿ ಅವನು ಅಥವಾ ಅವಳು ಬಹಳ ಶಿಸ್ತು ಎಂದು ಜನ ಅಥವಾ ಸಮಾಜ ಹೇಳಿದರೆ ಅದು ಎಂದಿಗೂ ಸೀಮಿತ ಅರ್ಥವನ್ನ ಮಾತ್ರ ಪಡೆದುಕೊಳ್ಳುತ್ತದೆ.

ಶ್ರೀನಾಥ್ ಭಲ್ಲೆ ಅಂಕಣ: ಮುಂದೆ ಬನ್ನಿ ಇನ್ನಾದರೂ ಜೀವನದಲ್ಲಿ ಮುಂದೆ ಬನ್ನಿಶ್ರೀನಾಥ್ ಭಲ್ಲೆ ಅಂಕಣ: ಮುಂದೆ ಬನ್ನಿ ಇನ್ನಾದರೂ ಜೀವನದಲ್ಲಿ ಮುಂದೆ ಬನ್ನಿ

ಶಿಸ್ತಿನ ಬಗ್ಗೆ ಇಷ್ಟೊಂದು ವ್ಯಖ್ಯಾನ ನೀಡಲು ಕಾರಣವಿದೆ. ಸಮಯ ಪಾಲನೆಯಲ್ಲಿರುವ ಶಿಸ್ತು ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡಿದೆ. ಅದೇ ಸಮಯಪಾಲನೆಯ ಬಗೆಗಿನ ಅತಿಯಾದ ವ್ಯಾಮೋಹ ಉತ್ತಮ ವ್ಯಕ್ತಿಗಳ ಪರಿಚಯದಿಂದ ವಂಚಿತನನ್ನಾಗಿಸಿವೆ. ಅವುಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳುವೆ. ಕೊನೆಗೂ ಬದುಕೆಂದರೆ ಸರಿಯಾದ ಸಮತೋಲನ ಕಾಪಾಡಿಕೊಳ್ಳುವುದರಲ್ಲಿದೆ. ಇಂಚು ಹೆಚ್ಚು ಕಡಿಮೆಯಾದರೂ ಅಡುಗೆಯಲ್ಲಿ ಉಪ್ಪಿನ ಪಾತ್ರವನ್ನ ಶಿಸ್ತು ಬದುಕಿನಲ್ಲಿ ವಹಿಸುತ್ತದೆ. ಹೀಗಾಗಿ ಹೆಚ್ಚು ನಿಗಾವಹಿಸುವುದು ಅವಶ್ಯಕ.

How Punctuality Has Changed the Life

ಪರೀಕ್ಷೆಗೆ ವೇಳೆಯನ್ನು ನಿಗದಿ ಪಡಿಸಿರುತ್ತಾರೆ ಅಲ್ಲವೇ, ಬಾಲ್ಯದಿಂದಲೂ ಪರೀಕ್ಷೆಯ ವೇಳೆಗೆ ಬಹಳ ಮುಂಚೆ ಹೋಗಿ ಶಾಲೆಯ ಆವರಣದಲ್ಲಿ ಕಾಯುವುದು ನನಗೆ ಬಂದಿರುವ ಅಭ್ಯಾಸ. ಶಾಲೆಯ ಗೇಟು ತೆಗೆಯುವುದಕ್ಕೆ ಮುಂಚೆ ಬಂದು ನಿಂತಿರುತ್ತಾನೆ ಎಂದು ನನ್ನ ಬಗ್ಗೆ ಗೆಳೆಯರು ಕಿಚಾಯಿಸುತ್ತಿದ್ದರು. ಅದೇ ಅಭ್ಯಾಸ ಎಲ್ಲ ಕಡೆಯಲ್ಲೂ ಮುಂದುವರಿದಿದೆ. ನನಗೆ ಸರಿಯಾಗಿ ನೆನಪಿದೆ ಅದು ನನ್ನ ಆರನೆಯ ಅಥವಾ ಏಳನೆಯ ಸಂದರ್ಶನ. ಕೆಲಸಕ್ಕಾಗಿ ಅಲೆದಾಡುತ್ತಿದ್ದ ದಿನಗಳವು. ನನಗೆ ಬೆಂಗಳೂರಿನ ಸುತ್ತಮುತ್ತ ಬಿಟ್ಟು ಬೇರೆಲ್ಲೂ ಹೋಗಲು ಇಷ್ಟವಿರಲಿಲ್ಲ ಹೀಗಾಗಿ ಕೆಲಸಕ್ಕೆ ಗುಜರಾಯಿಸುವ ಅರ್ಜಿಯಲ್ಲಿ ಬೆಂಗಳೂರು ಮಾತ್ರ, ನಾಟ್ ರೆಡಿ ಟು ರಿಲೋಕೇಟ್ ಎಂದು ಬರೆದಿದ್ದೆ.

ಆದರೂ ಅದೊಂದು ದಿನ ಮ್ಯಾನ್ ಪವರ್ ಏಜೆನ್ಸಿ ಅವರಿಂದ ಫೋನ್ ಬಂದಿತ್ತು. ನನಗೆ ವಿದೇಶಕ್ಕೆ ಹೋಗುವ ಇಚ್ಚೆಯಿಲ್ಲ ಹೀಗಾಗಿ ನಾನು ಈ ಸಂದರ್ಶನಕ್ಕೆ ಹೋಗಲು ಸಿದ್ಧನಿಲ್ಲ ಎಂದು ಹೇಳಿದೆ. ಆದರೂ ಬಿಡದೆ ಸುಷ್ಮಾ ಎನ್ನುವ ಏಜೆನ್ಸಿ ಮಹಿಳೆ 'ಇಲ್ಲ ಸಂದರ್ಶನಕ್ಕೆ ಹಾಜರಾಗಿ , ಕೆಲಸಕ್ಕೆ ಹೋಗದಿದ್ದರೂ ಪರವಾಗಿಲ್ಲ, ನಿಮಗೊಂದು ಅನುಭವಾಗುತ್ತದೆ' ಎಂದು ಹೇಳಿದರು. ಹೌದಲ್ಲ ಅನುಭವ ಪಡೆದುಕೊಳ್ಳಲು ಅಡ್ಡಿಯಿಲ್ಲ ಎಂದುಕೊಂಡು ಯಸ್ ಎಂದಿದ್ದೆ.

ದಾವಣಗೆರೆ ವಿಶೇಷ; ಮಕ್ಕಳನ್ನು ಬದುಕಿನ ದಡ ಸೇರಿಸಿದ ತಾಯಿ! ದಾವಣಗೆರೆ ವಿಶೇಷ; ಮಕ್ಕಳನ್ನು ಬದುಕಿನ ದಡ ಸೇರಿಸಿದ ತಾಯಿ!

ಅವರು ಹೇಳಿದ ಸ್ಥಳಕ್ಕೆ, ಹೇಳಿದ ಸಮಯಕ್ಕೆ ಅರ್ಧ ತಾಸು ಮುಂಚೆಯೆ ಹೋಗಿದ್ದೆ. ನನಗದು ಅಭ್ಯಾಸ. ನಾನೊಬ್ಬನೇ ಕುಳಿತ್ತಿದ್ದೆ, ನನ್ನ ಬಳಿಗೆ ಅಜಾನುಬಾಹು ವ್ಯಕ್ತಿಯೊಬ್ಬರು ಬಂದರು, ನೀನ್ಯಾರು ಎಂದರು . ಅವರಿಗೆ ನನ್ನೆಲ್ಲಾ ಪ್ರವರವನ್ನು ಒಪ್ಪಿಸಿದೆ. ಆತ ಸಂದರ್ಶನ ಇರುವುದಕ್ಕಿಂತ ಅರ್ಧ ತಾಸು ಮುಚೆಯೇಕೆ ಬಂದಿದ್ದೀರಿ? ಎಂದರು. ನಾನು ಸಹಜವಾಗೇ' ನನ್ನ ಜೀವನದ ಮುಖ್ಯವಾದ ಎಲ್ಲಾ ವಿಷಯಗಳಿಗೆ ಸಂಬಂದಿಸಿದ ಎಲ್ಲಾ ಕಡೆಗೂ ಹೀಗೆ ಮುಂಚೆ ಹೋಗುವುದು ಅಭ್ಯಾಸ ಹೀಗಾಗಿ ಇಲ್ಲಿಗೂ ಬೇಗ ಬಂದಿದ್ದೇನೆ' ಎಂದಿದ್ದೆ. ಆ ನಂತರದ್ದು ಸಿನಿಮೀಯ ಘಟನೆಗಳು.

ಹೌದು ಯಾರು ನನ್ನ ಮಾತ್ನಾಡಿಸಿದ್ದರೂ ಅವರೇ ಸಂಸ್ಥೆಯ ಚೇರ್ಮನ್ ಆಗಿದ್ದರು ಎನ್ನುವುದು ನಂತರ ತಿಳಿಯಿತು. ಸಂದರ್ಶನದ ಕೊಠಡಿಯಲ್ಲಿ ಇದ್ದ ಅವರು, ಯಾರಿಗೂ ಪ್ರಶ್ನೆ ಕೇಳಲು ಬಿಡಲೇ ಇಲ್ಲ! ನೇರವಾಗಿ ನೇಮಕಾತಿ ಪತ್ರವನ್ನ ಕೈಗಿತ್ತರು. ಪಾಸ್ಪೋರ್ಟ್ ಕೂಡ ಬಳಿಯಿರದ ನನಗೆ ನೇರವಾಗಿ ಬಾರ್ಸಿಲೋನಾಗೆ ಈ ಸಂದರ್ಶನ ಕರೆದುಕೊಂಡು ಹೋಗುತ್ತದೆ ಎನ್ನುವುದರ ಅರಿವು ನನಗಿರಲಿಲ್ಲ. ವೇಳೆಯ ಬಗೆಗಿನ ನನ್ನ ಶಿಸ್ತು ಆತನಿಗೆ ಬಹಳ ಇಷ್ಟವಾಗಿತ್ತು. ಹೀಗಾಗಿ ನನಗೆ ಸಲೀಸಾಗಿ ನೇಮಕಾತಿ ಸಿಕ್ಕಿತ್ತು. ಈ ಘಟನೆ ಬದುಕನ್ನ ಬದಲಿಸಿ ಬಿಟ್ಟಿತು. ಕನ್ನಡ ಬಿಟ್ಟು ಬೇರಾವ ಭಾಷೆಯ ಮೇಲೂ ಹೇಳಿಕೊಳ್ಳುವ ಹಿಡಿತವಿಲ್ಲದ ನನಗೆ ಹಲವು ಭಾಷೆ ಕಲಿಸಿತು. ಮ್ಯಾಪ್ ನಲ್ಲಿ ಕಂಡಿರದ ದೇಶಗಳನ್ನ ಸುತ್ತುವ ಅವಕಾಶ ಒದಗಿಸಿತು.

ಶಿಸ್ತು ಎಲ್ಲಾ ಸಮಯದಲ್ಲೂ ಲಾಭವಲ್ಲ

ಶಿಸ್ತು ಎಲ್ಲಾ ಸಮಯದಲ್ಲೂ ಲಾಭವಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ಇನ್ನೊಂದು ಘಟೆನಯನ್ನ ನಿಮಗೀಗ ಹೇಳುತ್ತೇನೆ . ಬಾರ್ಸಿಲೋನಾ ನಗರ ವಾಸಿಯಾಗಿ ಆಗಲೇ ನಾಲ್ಕೈದು ವರ್ಷವಾಗಿತ್ತು. ತಮ್ಮ ಲಕ್ಷ್ಮೀಕಾಂತ ಕೂಡ ಡಾಕ್ಟರೇಟ್ ಪದವಿಯನ್ನ ಪಡೆಯಲು ಬಂದು ನನ್ನನ್ನ ಸೇರಿಕೊಂಡಿದ್ದ, ಮೊದಲ ಮೂರು ತಿಂಗಳು ಜೊತೆಗಿದ್ದವನು ನಂತರ ಯೂನಿವರ್ಸಿಟಿಗೆ ಹತ್ತಿರ ಮನೆಯನ್ನು ಬಾಡಿಗೆಗೆ ಹಿಡಿದು ಸ್ವತಂತ್ರವಾಗಿ ಜೀವಿಸಲು ಶುರು ಮಾಡಿದ್ದ. ನಾವಿಬ್ಬರೂ ಎರಡು ದೇಹ ಒಂದು ಜೀವ ಎನ್ನುವಂತೆ ಬದುಕಿದ್ದವರು., ಹೀಗಿದ್ದೂ ಹಲವು ವಿಷಯಗಳಲ್ಲಿ ನಾವಿಬ್ಬರೂ ಉತ್ತರ ದಕ್ಷಿಣ ಎನ್ನುವಷ್ಟು ಬಿನ್ನವಾಗಿದ್ದೆವು. ಸಮಯಪಾಲನೆಗೆ ನಾನು ಅತಿ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದೆ. ಕಾಂತನಿಗೆ ಐದು ನಿಮಿಷ ಆಚೀಚೆ ಆದರೆ ಆಕಾಶವೇನೂ ಕಾಲ್ಚಿ ಬೀಳುವುದಿಲ್ಲ ಎನ್ನುವ ಮನೋಭಾವ. ಈ ವಿಷಯದಲ್ಲಿ ಆಗೊಮ್ಮೆ, ಹೀಗೊಮ್ಮೆ ಅವನಿಗೆ ಬೈದದ್ದು ಇತ್ತು.

ಅವತ್ತು ಹೀಗೆ ಆಯ್ತು, ಅದು 2004ರ ನವೆಂಬರ್ ತಿಂಗಳ ಒಂದು ದಿನ. ಕೊರೆಯುವ ಚಳಿ ಬಾರ್ಸಿಲೋನಾ ನಗರವನ್ನು ಮುದುಡಿಸಿ ಬಿಟ್ಟಿತ್ತು. ಭಾನುವಾರದ ಬೆಳಗು ಕಾಂತ ಫೋನ್ ಮಾಡಿ ಮಧ್ಯಾಹ್ನ ಒಂದುವರೆಗೆ ಊಟಕ್ಕೆ ಸಿಕ್ಕೋಣ , ಪ್ಲಾಜಾ ಕತಲೋನ್ಯ ಬಳಿಯಿರುವ ಕೆಫೆ ಜ್ಯೂರಿಚ್ ಬಳಿ ನಿಂತಿರು ಬರುತ್ತೇನೆ. ಅಂದಹಾಗೆ ನನ್ನ ಜೊತೆಗೊಬ್ಬರು ಬರುತ್ತಿದ್ದಾರೆ, ಅವರನ್ನು ನಿನಗೆ ಪರಿಚಯ ಮಾಡಿಸಿಕೊಡುತ್ತೇನೆ ಎಂದಿದ್ದ. ಕಾಂತನಿಗೆ ನನ್ನ ಸಮಯಪಾಲನೆ ಬಗ್ಗೆ ಚನ್ನಾಗಿ ಗೊತ್ತಿತು. ಹೀಗಾಗಿ ಸಾಧ್ಯವಾದಷ್ಟು ಹೇಳಿದ ಸಮಯಕ್ಕೆ ಬಂದಿರುತ್ತಿದ್ದ.

ಕೆಲವೊಮ್ಮೆ ತಡವಾಗುವುದಿದ್ದರೆ ಸಂದೇಶ ಕಳಿಸುತ್ತಿದ್ದ. ನನಗೂ ಹೇಳಿ ಕೇಳಿ ನಿಗದಿಯಾದ ಸಮಯಕ್ಕಿಂತ ಹತ್ತು ಅಥವಾ ಹದಿನೈದು ನಿಮಿಷ ಮುಂಚೆ ಹೋಗುವುದು ಅಭ್ಯಾಸ. ಅಂದು ಕೂಡ ಒಂದು ಗಂಟೆ ಇಪ್ಪತ್ತು ನಿಮಿಷಕ್ಕೆ ಕೆಫೆ ಜ್ಯೂರಿಚ್ ಮುಂದೆ ನಿಂತಿದ್ದೆ. ಒಂದೂವರೆ ಆಯ್ತು, ಮುಕ್ಕಾಲಾಯ್ತು, ಎರಡಾಯ್ತು ಕಾಂತನ ಸುಳಿವಿಲ್ಲ, ಸಂದೇಶವೂ ಇಲ್ಲ. ನನಗೆ ಕಾಯಲು ಶುರು ಮಾಡಿ ೪೦ ನಿಮಿಷವಾಯ್ತು ಎನ್ನುವ ಕೋಪ ಬೇರೆ ಜೋರಾಗಿತ್ತು, ಜೊತೆಗೆ ಹೊಟ್ಟೆ ಕೂಡ ಚುರುಗುಟ್ಟಲು ಪ್ರಾರಂಭಿಸಿತ್ತು. ಅಲ್ಲಿಂದ ಹೊರತು ಹೋಗೋಣ ಎಂದಿತು ಮನಸ್ಸು, ಇನ್ನೊಂದು ಮನಸ್ಸು ಕಾದು ಅವನು ಬಂದ ನಂತರ ಅವನ ತಪ್ಪನ್ನ ಹೇಳಿ ಊಟ ಮಾಡದೆ ಹೋಗಬೇಕು ಎಂದಿತು. ಅಂದಿನ ದಿನದ ಬುದ್ದಿಮಟ್ಟದ ಚಿಂತನೆ ಅಷ್ಟಿತ್ತು .

ಕೊನೆಗೆ ಎರಡೂ ಕಾಲಿನ ಸಮಯಕ್ಕೆ ಕಾಂತ ಇನ್ನೊಬ್ಬ ಭಾರತೀಯನ ಜೊತೆಯಲ್ಲಿ ನಾನಿದ್ದ ಜಾಗಕ್ಕೆ ಬಂದ, ಅವನು ಬಂದ ತಕ್ಷಣ ' ಕಾಂತ ನಾನು ಕಾಯಲು ಶುರು ಮಾಡಿ ಆಲ್ಮೋಸ್ಟ್ ಒಂದು ತಾಸಾಯ್ತು , ಐ ಆಮ್ ಸಾರೀ, ಒಂದು ಸಂದೇಶ ಕೂಡ ನೀನು ಕಳಿಸಲಿಲ್ಲ, ನಿನ್ನೊಂದಿಗೆ ಊಟಕ್ಕೆ ಬರಲು ಸಾಧ್ಯವಿಲ್ಲ, ಇದನ್ನ ನಿನಗೆ ಹೇಳಲು ಕಾಯುತ್ತಿದ್ದೆ; ಎಂದವನೇ ನನ್ನ ಪಾಡಿಗೆ ನಾನು ಹೊರತು ಬಿಟ್ಟೆ. ಅವನ ಜೊತೆಗೆ ಬಂದಿದ್ದ ವ್ಯಕ್ತಿಯ ಮುಖವನ್ನ ನೋಡುವ, ಅವರನ್ನ ಮಾತನಾಡಿಸುವ ಸೌಜನ್ಯ ಕೂಡ ನಾನು ತೋರಿಸಲಿಲ್ಲ. ತಲೆಯಲ್ಲಿ ತಮ್ಮ ಹೇಳಿದ ಸಮಯಕ್ಕೆ ಬರಲಿಲ್ಲ ಎನ್ನುವ ಕೋಪ ತುಂಬಿಕೊಂಡು ಪರ್ಯಾಯ ಚಿಂತನೆಗೆ ಅದು ಜಾಗವನ್ನ ಬಿಟ್ಟುಕೊಟ್ಟಿರಲಿಲ್ಲ.

ಸಾಯಂಕಾಲ ಕಾಂತ ಫೋನ್ ಮಾಡಿದ ನಾನು ತಡವಾಗಿ ಬಂದದ್ದು ತಪ್ಪು ಮೊದಲು ಅದಕ್ಕೆ ಕ್ಷಮೆ ಇರಲಿ ಎಂದ, ನಂತರ ನೀನು ಹೇಗೆ ಎನ್ನುವುದು ನನಗೆ ಗೊತ್ತು ಅಲ್ಲವೇ? ಹೀಗಿದ್ದೂ ನಾನು ನಿನಗೆ ಕಾಲ್ ಮಾಡಿಲ್ಲ ಅಥವಾ ಮೆಸೇಜ್ ಕಳಿಸಿಲ್ಲ ಎಂದರೆ ಅದಕ್ಕೂ ಏನಾದರೂ ಕಾರಣವಿರಬೇಕಲ್ಲವೇ ? ಅಷ್ಟು ಯೋಚನೆ ಮಾಡದೆ, ನನ್ನ ಜೊತೆಗೆ ಬಂದವರನ್ನ ಮಾತನಾಡಿಸದೆ ಹೊರಟು ಹೊದೆಯಲ್ಲ ನನ್ನ ಜೊತೆಗೆ ಬಂದಿದ್ದವರು ಯಾರು ಗೊತ್ತೇ? ಎಂದು ಪ್ರಶ್ನಿಸಿದ. ನನ್ನಲಿರುವ 'ನಾನು' ಪೆಟ್ಟು ತಿಂದಿದ್ದ ಆದರೂ ಅದನ್ನ ಒಪ್ಪಿಕೊಳ್ಳುವ ಮನಸ್ಸು ಇರದ ಕಾರಣ ಉತ್ತರ ಹೇಳಲಿಲ್ಲ. ಕಾಂತನೇ ಮುಂದುವರೆದು ದೆಹಲಿಯ ಪ್ರಸಿದ್ಧ ಶ್ರೀರಾಂ ಕಾಲೇಜಿನ ಪ್ರೊಫ್ಫೆಸರ್, ಬಾರ್ಸಿಲೋನಾ ಬಿಸಿನೆಸ್ ಸ್ಕೂಲ್‌ನಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಒಂದು ವಾರಕ್ಕೆ ಬಂದಿದ್ದಾರೆ, ನಿನ್ನ ಬಗ್ಗೆ ಬಹಳ ಹೇಳಿದ್ದೆ. ಅವರನ್ನು ಮಾತನಾಡಿಸುವ ಅವಕಾಶ ಕಳೆದುಕೊಂಡೆ ಎಂದ.

Recommended Video

KL Rahul ಗೆ ಟಕ್ಕರ್ ಕೊಟ್ಟ Sanju ಪಡೆ | Oneindia Kannada

ನನ್ನ ಸಮಯಪಾಲನೆ ಮತ್ತು ಶಿಸ್ತು ಎನ್ನುವ ಜಿದ್ದಿಗೆ ಒಬ್ಬ ಉತ್ತಮ ವ್ಯಕ್ತಿಯನ್ನು ಭೇಟಿ ಮಾಡುವುದರಿಂದ ನಾನು ವಂಚಿತನಾಗಿದ್ದೆ. ವಾರದ ನಂತರ ಮತ್ತೆ ಸಿಕ್ಕಾಗ ಕಾಂತ ಅವನ ಮೊಬೈಲ್ ಇದ್ದಕಿದ್ದಂತೆ ಕೆಲಸ ಮಾಡುವುದು ನಿಲ್ಲಿಸಿದ ಕಾರಣ ಕಾಲ್ ಮಾಡಲು ಮೆಸೇಜ್ ಮಾಡಲು ಆಗಲಿಲ್ಲ ಎನ್ನುವ ಕಾರಣವನ್ನ ಹೇಳಿದ. ಅದೇ ದಿನ ಹೇಳಿದ್ದರೆ ನಾನು ಬಹಳ ಬೇಜಾರು ಮಾಡಿಕೊಳ್ಳುತ್ತೇನೆ ಎಂದು ಹೇಳಿರಲಿಲ್ಲವಂತೆ. ನಿಜವಾದ ಕಾರಣ ತಿಳಿದು ಮನಸ್ಸು ಮರುಗಿತು. ಸಮಯಪಾಲನೆ , ಶಿಸ್ತು ಎಲ್ಲವೂ ಒಳ್ಳೆಯದೇ ಆದರೆ ಬೇರೊಬ್ಬ ವ್ಯಕ್ತಿಯ ಜೀವನದಲ್ಲಿ ಏನಾಗುತ್ತಿರಬಹುದು ಎನ್ನುವ ಯೋಚನೆ ಮಾಡುವುದು ಕೂಡ ಒಳ್ಳೆಯದು. ಏಕಾಏಕಿ ನನ್ನ ಸಮಯಕ್ಕೆ ಅಂದುಕೊಂಡದ್ದು ಆಗಲಿಲ್ಲ ಎಂದ ಮಾತ್ರಕ್ಕೆ ಬೇರೆಯವರು ಬೇಕೆಂದು ಸಮಯಪಾಲನೆ ಮಾಡಿಲ್ಲ, ಅಥವಾ ಹೇಳಿದ ಸಮಯಕ್ಕೆ ಬರಲಿಲ್ಲ ಎಂದು ಒಮ್ಮುಖ ತೀರ್ಮಾನಕ್ಕೆ ಬರುವುದು ತಪ್ಪು ಎನ್ನುವುದನ್ನ ಬದುಕು ಕಲಿಸಿತು. 2005ರಲ್ಲಿ ಮತ್ತೆ ಬಾರ್ಸಿಲೋನಾಗೆ ಮರಳಿ ಅದೇ ಶ್ರೀರಾಂ ಕಾಲೇಜಿನ ಪ್ರೊಫ್ಫೆಸರ್ ಬಂದಿದ್ದರು. ಈ ವೇಳೆಗೆ ರಮ್ಯಾ ಕೂಡ ಜೊತೆಯಾಗಿದ್ದಳು. ಅವರನ್ನ ಮನೆಗೆ ಕರೆದು ಅವರಿಷ್ಟದ ಇಡ್ಲಿ, ಸಾಂಬಾರ್ ತಿನ್ನಿಸಿ ಕಳುಹಿಸಿದೆವು. ಅದು ಬೇರೆಯದೇ ಕಥೆ. ಅದನ್ನೂ ನಿಧಾನವಾಗಿ ಹೇಳುವೆ.

English summary
How Punctual lifestyle has changed the life, Why quality of being on time is much need to be successful writes Rangaswamy mookanahalli
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X