ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಚಿತ್ರಗಳು ಜಾಗತಿಕವಾಗಿ ಗೆಲ್ಲುತ್ತಿವೆ ಏಕೆ ಗೊತ್ತೇ?

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಬದುಕು ಬಹಳ ದೊಡ್ಡದು. ಅದರ ಅರ್ಥ ಕೂಡ ವಿಶಾಲ ವ್ಯಾಪ್ತಿಯನ್ನ ಹೊಂದಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಇದರ ಅರ್ಥ ಬದಲಾಗುತ್ತಾ ಹೋಗುತ್ತದೆ. ಇಂತಹ ನೂರಾರು ಕೋಟಿ ಜನರ ಬದುಕನ್ನ ಒಳಗೊಂದು ಸೃಷ್ಟಿಯಾಗಿರುವ ಈ ಸಮಾಜ ಅತ್ಯಂತ ಕ್ಲಿಷ್ಟವಾದ ಅರ್ಥವನ್ನ ಪಡೆದುಕೊಂಡಿದೆ. ಇಲ್ಲಿ ಒಬ್ಬರಂತೆ ಒಬ್ಬರಿಲ್ಲ. ಇಂದಿನ ಡಿಜಿಟಲ್ ಯುಗದಲ್ಲಂತೂ ಎಲ್ಲದರಲ್ಲೂ ಎರಡಕ್ಕಿಂತ ಹೆಚ್ಚು ವಾದಗಳು ಹುಟ್ಟಿಕೊಂಡು ಬಿಡುತ್ತವೆ. ಒಂದಷ್ಟು ಜನ ಆ ಕಡೆ, ಒಂದಷ್ಟು ಜನ ಈ ಕಡೆ, ಹಗ್ಗಜಗ್ಗಾಟ ಶುರುವಾಗಿ ಬಿಡುತ್ತದೆ. ಈ ಮಾತು ಇಲ್ಲಿ ಉಲ್ಲೇಖಿಸಲು ಕಾರಣ ಕೂಡ ಇದೆ.

ನಿಮಗೆಲ್ಲಾ ಕೆಜಿಎಫ್ ಭಾಗ ಎರಡು ಅತ್ಯಂತ ಯಶಸ್ವಿ ಚಿತ್ರ ಎನ್ನಿಸಿಕೊಂಡಿರುವುದು ಗೊತ್ತೇ ಇದೆ. ಇದರ ಜೊತೆಗೆ ಆರ್ ಆರ್ ಆರ್ ಮತ್ತು ಪುಷ್ಪ ಎನ್ನುವ ಚಿತ್ರಗಳು ಕೂಡ ಸೂಪರ್ ಹಿಟ್ ಎನ್ನಿಸಿಕೊಂಡು ಚಿತ್ರರಂಗದಲ್ಲಿ ದೊಡ್ಡ ಕಣಿವೆಯನ್ನ ಸೃಷ್ಟಿಸಿ ಬಿಟ್ಟಿವೆ. ಇಲ್ಲಿಯವರೆಗೆ ಸೌತ್ ಸಿನಿಮಾಗಳು ಎಂದರೆ ರಜನಿಕಾಂತ್ ಬಿಟ್ಟರೆ ಮತ್ತೇನೂ ಇಲ್ಲವೆನ್ನುವಂತೆ ,ದಕ್ಷಿಣ ಭಾರತವೆಂದರೆ ಇಡ್ಲಿ , ದೋಸೆ ಎನ್ನುವಂತೆ ತಮ್ಮ ಚಿತ್ರಗಳಲ್ಲಿ ತೋರಿಸುತ್ತಿದ್ದ ಬಾಲಿವುಡ್ ಎನ್ನುವ ಹಿಂದಿ ಜನರ ಬಗ್ಗೆ ದಕ್ಷಿಣ ಭಾರತೀಯ ಮಂದಿಯಲ್ಲಿ ಸುಪ್ತವಾಗಿದ್ದ ಅಸಹನೆ ಇದೀಗ ಲಾವಾ ರೂಪ ಪಡೆದುಕೊಂಡಿದೆ.

ಬೇಕು ಎನ್ನುವುದು ಹಿತವಾಗಿರಬೇಕು, ಮಿತವಾಗಿರಬೇಕು: ಬೇಕು ಎನ್ನುವುದು ಬೇಕೇ ಬೇಕು!ಬೇಕು ಎನ್ನುವುದು ಹಿತವಾಗಿರಬೇಕು, ಮಿತವಾಗಿರಬೇಕು: ಬೇಕು ಎನ್ನುವುದು ಬೇಕೇ ಬೇಕು!

ಸೌತ್ ಮತ್ತು ನಾರ್ತ್ ಅಥವಾ ಬಾಲಿವುಡ್ ನಡುವೆ ದೊಡ್ಡ ಕಂದಕ ಸೃಷ್ಟಿಯಾಗಿದೆ. ಇದಕ್ಕೆಲ್ಲ ನಾವು ದಕ್ಷಿಣ ಭಾರತೀಯ ನಾಯಕ ನಟರನ್ನ ದೂಷಿಸಲು ಬರುವುದಿಲ್ಲ. ಇಂತಹ ಒಂದು ಕಿಡಿ ದೊಡ್ಡ ಜ್ವಾಲೆಯಾಗಿ ಬೆಳೆದು ನಿಲ್ಲಲು ಬಾಲಿವುಡ್ ಮಂದಿಯ ಬುದ್ಧಿಯಿಲ್ಲದ ಸ್ಟಿರಿಯೋಟೈಪ್ ಮನಸ್ಥಿತಿ ಕಾರಣ. ಇದರಲ್ಲಿ ಎರಡು ಮಾತಿಲ್ಲ. ಆದರೆ ಗಮನಿಸಿ ಸಿನಿಮಾ ಎನ್ನುವುದು ಸಮಾಜವನ್ನ ಒಂದುಗೂಡಿಸುವ ಕೆಲಸ ಮಾಡಬೇಕು.

Barcelona Memories Column By Rangaswamy Mookanahalli Part 80

ಅದು ಸಮಾಜವನ್ನು ಇಬ್ಬಾಗ ಮಾಡುವ ಕೆಲಸಕ್ಕೆ ಇಳಿಯಬಾರದು. ದಕ್ಷಿಣ ಭಾರತೀಯ ಚಿತ್ರಗಳು ಕೇವಲ ಉತ್ತರ ಭಾರತದ ಜನತೆಯ ಮನಸ್ಸು ಮಾತ್ರವಲ್ಲ ಜಗತ್ತಿನ ಬಹಳಷ್ಟು ದೇಶಗಳ ಜನರ ಮನಸ್ಸನ್ನ ಕೂಡ ಗೆಲ್ಲುತ್ತಿದೆ. ಇದರ ಅರ್ಥವೇನು? ದೇಶ, ಭಾಷೆ, ವೇಷ ಬದಲಾದರೂ ಮೂಲತಃ ಮನುಷ್ಯ ಭಾವನೆಯಿದೆಯಲ್ಲ ಅದು ಒಂದೇ, ಯಾರು ಒಪ್ಪಲಿ ಬಿಡಲಿ ನಮ್ಮನ್ನ ಬೇರ್ಪಡಿಸುವ ಅನೇಕ ಗುಣಗಳ ಜೊತೆಗೆ ಕೂಡ ನಾವೆಲ್ಲಾ ಒಂದೇ ಎನ್ನುವುದಕ್ಕೆ ಸಿನಿಮಾ ಕೂಡ ಒಂದು ದೊಡ್ಡ ಉದಾಹರಣೆ.

ಆಗಲೇ ಸೌತ್ ವರ್ಸಸ್ ಬಾಲಿವುಡ್ ಹೆಸರಿನಲ್ಲಿ ಸೃಷ್ಟಿಯಾಗಿರುವ ಬೆಂಕಿಗೆ ತೆಲುಗು ಚಿತ್ರ ನಟ ಮಹೇಶ್ ಬಾಬು ಇನ್ನಷ್ಟು ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ. ಇಂದಿನ ಇಲ್ಲಿನ ಕಚ್ಚಾಟ ನನ್ನ ದಶಕಗಳ ಹಿಂದೆ ಬಾರ್ಸಿಲೋನಾ ದಲ್ಲಿ ನಡೆದ ಘಟನೆಯನ್ನ ನೆನಪಿಸುತ್ತಿದೆ. ತೋಮಸ್ (ಥಾಮಸ್ ನಮ್ಮ ಉಚ್ಚಾರಣೆಯಲ್ಲಿ) ಬಾಲಿವುಡ್ ಹಾಡುಗಳ ಬಹುದೊಡ್ಡ ಅಭಿಮಾನಿ. ಬಾರ್ಸಿಲೋನಾ ನಗರದಲ್ಲಿ ಇರುವ 'ರಾಜ' ಎನ್ನುವ ಇಂಡಿಯನ್ ರೆಸ್ಟೋರೆಂಟ್ ಒಂದರಲ್ಲಿ ಒಬ್ಬನೇ ಆಹಾರ ಸೇವಿಸುತ್ತಾ, ಅಲ್ಲಿ ಟಿವಿ ಪರದೆಯ ಮೇಲೆ ಬರುತ್ತಿದ್ದ ಬಾಲಿವುಡ್ ಹಾಡುಗಳನ್ನ ತದೇಕಚಿತ್ತದಿಂದ ನೋಡುತ್ತಿದ್ದವನು, ಅತಿ ಸಾಮಾನ್ಯ ಓಲಾ ಹೇಳುವುದರೊಂದಿಗೆ ಪರಿಚಿತನಾಗಿದ್ದ. ಮಜಾ ಎಂದರೆ ತೋಮಸ್‌ಗೆ ಚಲನಚಿತ್ರ ಪೂರ್ತಿ ನೋಡುವ ಆಸೆ, ಆಸಕ್ತಿ ಎರಡೂ ಇರಲಿಲ್ಲ.

ಸ್ಥಳೀಯ ಭಾವನೆಗಳಿಗೆ ಬೆಲೆ ಕೊಡದೆ ಬದುಕು ಸುಂದರ ಹೇಗಾದೀತು?ಸ್ಥಳೀಯ ಭಾವನೆಗಳಿಗೆ ಬೆಲೆ ಕೊಡದೆ ಬದುಕು ಸುಂದರ ಹೇಗಾದೀತು?

ಅವನಿಗೆ ರಿದಮಿಕ್ ಬೀಟ್ ಗಳಿಗೆ ಹೆಜ್ಜೆಹಾಕುವ ದೇಹಗಳನ್ನ ನೋಡುತ್ತಾ ಮೈಕೈ ಕುಣಿಸುವುದರಲ್ಲಿ ಮಾತ್ರ ಖುಷಿ. ಹೀಗೆ ಕೇವಲ ಬಾಲಿವುಡ್ ಹಾಡುಗಳನ್ನ ನೋಡಲು ಎಂದು ಆತ ರೆಸ್ಟೋರೆಂಟ್‌ಗೆ ಬರುತ್ತಿದ್ದ. ಅವನ ಪ್ರಕಾರ ರೆಸ್ಟೋರೆಂಟ್ ಊಟ, ಅದು ಊಟವಲ್ಲ ಬಾಂಬ್! ಖಾರವನ್ನೇ ತಿನ್ನದ ಅವನ ನಾಲಿಗೆಗೆ ರೆಸ್ಟೋರೆಂಟ್ ನವರು ಎಷ್ಟೇ ಕಡಿಮೆ ಖಾರ ಹಾಕಿ ಮಾಡಿಕೊಟ್ಟರು ಅದು ಹೆಚ್ಚು ಎನ್ನಿಸುತ್ತಿತ್ತು. ಆದರೂ ಹಾಡುಗಳನ್ನ ನೋಡುವ ಸಲುವಾಗಿ, ಒಂದು ಗಂಟೆಯನ್ನ ತನ್ನಿಚ್ಛೆಯಂತೆ ಕಳೆಯುವ ಸಲುವಾಗಿ ಅಲ್ಲಿಗೆ ಬರುತ್ತಿದ್ದ.

ಹೀಗೆ ಮಾತಿಗೆ ಮಾತು ಹೆಚ್ಚಾಗಿ, ಗೆಳೆತನ ಕೂಡ ಒಂದು ಹಂತಕ್ಕೆ ಬಂದಿತು. ನಾನು ಅಲ್ಲ ತೂಮಿ ನಿನಗೆ ಕೇವಲ ಹಾಡುಗಳನ್ನು ನೋಡಲು ಇಚ್ಛೆ ಇದ್ದರೆ ನಾನು ನಿನಗೆ ಹಾಡುಗಳ ಡಿವಿಡಿ ಕೊಡಿಸಬಲ್ಲೆ, ನಿನ್ನ ಮನೆಯಲ್ಲಿ, ನಿನ್ನಿಷ್ಟದ ಸಮಯದಲ್ಲಿ ನೋಡಬಹುದು ಎಂದಿದ್ದೆ. ಅವನಿಗೆ ನನ್ನ ಮಾತುಗಳನ್ನ ನಂಬಲಾಗಲಿಲ್ಲ. ಹೌದಾ? ಗ್ಯಾರಂಟಿನ ಎನ್ನುವ ಮುಖಭಾವ ಮಾಡಿದ್ದ. ಅವನಿಗೆ ಲಾಸ್ ರಾಂಬ್ಲಾ ದಲ್ಲಿನ ಗಲ್ಲಿಗಳಲ್ಲಿ ಚಿತ್ರ ಬಿಡುಗಡೆಗೆ ಮುನ್ನವೇ ಡಿವಿಡಿ ತಯಾರಿಸಿ ಮಾರುವ ಪುಟ್ಟ ಪಾಕಿಸ್ತಾನಿ ಅಂಗಡಿಗಳನ್ನ ತೋರಿಸಿಕೊಟ್ಟಿದ್ದೆ.

ಪೈರೆಸಿ ಇಲ್ಲದ ಒರಿಜಿನಲ್ ಡಿವಿಡಿಗಳಲ್ಲಿ ಸ್ಪ್ಯಾನಿಷ್ ಸಬ್ ಹೆಡಿಂಗ್ ಕೂಡ ಇರುತ್ತಿತ್ತು. ಹೀಗಾಗಿ ಅವನು ವರ್ಷದಲ್ಲಿ ಭಾರತೀಯ ಚಿತ್ರಗಳ ದೊಡ್ಡ ಫ್ಯಾನ್ ಆಗಿ ಬದಲಾಗಿದ್ದ. ಭಾರತವೆಂದರೆ ಬಡಕಲು ದೇಹದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು, ಬಡತನ ಎಂದುಕೊಂಡಿದ್ದೆ, ಬಟ್ ಭಾರತ ಬಹಳ ಮುಂದುವರೆದಿದೆ ಎಂದು ಕೆಲವು ಚಿತ್ರಗಳನ್ನ ನೋಡಿದ ನಂತರ ಹೇಳುತಿದ್ದ. ಮಜಾ ಇರುವುದು ಇಲ್ಲೇ, ನೋಡಿ ದೃಶ್ಯ ಮಾಧ್ಯಮಕ್ಕೆ ಇರುವ ತಾಕತ್ತು ಅದು.

Barcelona Memories Column By Rangaswamy Mookanahalli Part 80

ಒಂದು ದೇಶ, ಭಾಷೆಯ ಬಗ್ಗೆ ಇರುವ ಭಾವನೆಯನ್ನ ಬದಲಾಯಿಸುವ ತಾಕತ್ತು ಅದಕ್ಕಿದೆ. ಇದನ್ನ ಸರಿಯಾದ ದಾರಿಯಲ್ಲಿ ಬಳಸುವ ಜವಾಬ್ದಾರಿ ಎಲ್ಲರ ಮೇಲಿದೆ. ಹೀಗೆ ಭಾರತೀಯ ಚಿತ್ರಗಳನ್ನ ಸ್ಪ್ಯಾನಿಷ್ ಸಬ್ ಹೆಡಿಂಗ್‌ನಲ್ಲಿ ನೋಡಿದ ತೊಮಿ ಒಂದಲ್ಲ ಎರಡು ಮೂರು ಬಾರಿ ಭಾರತಕ್ಕೆ ಭೇಟಿಕೊಟ್ಟ. ನಾವೆಲ್ಲಾ ಇಲ್ಲಿನ ವ್ಯವಸ್ಥೆಯನ್ನ ಹಳಿದುಕೊಂಡು ತಿರುಗಾಡುತ್ತಿದ್ದರೆ, ದೂರದಿಂದ ಬಂದಿದ್ದ ಅವನ ಕಣ್ಣಿಗೆ ಇದು ಸ್ವರ್ಗವಾಗಿ ಕಂಡಿತ್ತು.

Column: ಬದುಕಿನ ಬಂಡಿಯ ದೆಸೆ ಬದಲಿಸಿದ ಸಮಯಪಾಲನೆ!Column: ಬದುಕಿನ ಬಂಡಿಯ ದೆಸೆ ಬದಲಿಸಿದ ಸಮಯಪಾಲನೆ!

ನೋಡಿ ನಮ್ಮ ಚಿತ್ರಗಳನ್ನ ಜಗತ್ತಿನ ಬಹಳ ದೇಶಗಳಲ್ಲಿ ಜನರು ಬಹಳ ಆಸಕ್ತಿಯಿಂದ ನೋಡುತ್ತಾರೆ. ನಾನು ಕಂಡ ದೇಶಗಳ ಪಟ್ಟಿ ಮಾಡುವುದಾದರೆ ಪೂರ್ಣ ಅರಬ್ ದೇಶಗಳು ನಮ್ಮ ಸಿನಿಮಾವನ್ನು ಇನ್ನಿಲ್ಲದೆ ಪ್ರೀತಿಸುತ್ತಾರೆ. ರುಮೇನಿಯ, ಟರ್ಕಿ, ರಷ್ಯಾ, ಇಂಗ್ಲೆಂಡ್ , ಸ್ಕಾಟ್ಲೆಂಡ್ ಮಲೇಶಿಯಾ, ಸಿಂಗಪುರ ಹೀಗೆ ದೇಶಗಳ ಪಟ್ಟಿ ಬಹಳ ದೊಡ್ಡದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಈ ಎಲ್ಲಾ ದೇಶಗಳಲ್ಲಿ ಇರುವ ಭಾರತೀಯರು ಮಾತ್ರ ಈ ಚಿತ್ರವನ್ನು ನೋಡುತ್ತಾರೆ ಎಂದಲ್ಲ, ಅದು ಜಗತ್ತಿನ ಯಾವ ದೇಶದಲ್ಲಿ ಇದ್ದರೂ ಮಾಡುವ ಸಾಮಾನ್ಯ ಕೆಲಸ.

ಈ ದೇಶಗಳ ಸಾಮಾನ್ಯ ಪ್ರಜೆಗಳು ಕೂಡ ನಮ್ಮ ಚಿತ್ರವನ್ನ ಇಷ್ಟಪಟ್ಟು ನೋಡುತ್ತಾರೆ. ಜಪಾನ್ ದೇಶದಲ್ಲಿ ರಜನಿ ಕಾಂತ್ ಬಹಳ ಪ್ರಸಿದ್ದರು. ಇದೇಕೆ ಎಂದು ಒಂದಷ್ಟು ಹುಡುಕಾಡಿದಾಗ ತಿಳಿದದ್ದು , ಜಪಾನೀಯರ ಸಂಸ್ಕಾರದಲ್ಲಿ ತ್ಯಾಗಕ್ಕೆ ಹೆಚ್ಚು ಮಹತ್ವವನ್ನ ನೀಡುತ್ತಾರೆ. ರಜನಿ ಕಾಂತ್ ಅವರ ಚಿತ್ರಗಳಲ್ಲಿ ತ್ಯಾಗ ಮಾಡುವ ಅವರ ಗುಣ ಜಪಾನಿಯರ ಮನಸನ್ನು ಗೆದ್ದಿದೆ. ಒಟ್ಟಿನಲ್ಲಿ ಒಂದೊಂದು ದೇಶದಲ್ಲಿ ಒಂದೊಂದು ಕಾರಣಕ್ಕೆ ಭಾರತೀಯ ಚಿತ್ರಗಳು ಸದ್ದು ಮಾಡುತ್ತಿವೆ. ಜಗತ್ತು ನಮ್ಮನ್ನು ನಿಬ್ಬೆರಗಾಗಿ ನೋಡುವ ಸಮಯದಲ್ಲಿ ಭಾರತದಲ್ಲಿ ಉತ್ತರ -ದಕ್ಷಿಣ ಎನ್ನುವ ಬೇಕಿಲ್ಲದ ತಗಾದೆ ಬೇಗ ಅಂತ್ಯ ಕಾಣಬೇಕಿದೆ.

ದಶಕಗಳಿಂದ ಭಾರತೀಯ ಸಿನಿಮಾ ಮತ್ತು ಭಾರತೀಯ ಆಹಾರ ಎರಡೂ ಜಗತ್ತಿನ ಬಹುತೇಕ ದೇಶಗಳಲ್ಲಿ ತಮ್ಮ ಛಾಪನ್ನ ಮೂಡಿಸುತ್ತಿವೆ. ಎಷ್ಟೋ ಜನರಿಗೆ ಭಾರತೀಯ ಸಂಸ್ಕೃತಿಯ ಪರಿಚಯವಾಗುವುದೇ ಈ ಎರಡು ಕಾರಣಗಳಿಂದ ಎನ್ನುವುದು ಸುಳ್ಳಲ್ಲ. ಹೀಗಾಗಿ ಈ ಎರಡೂ ಕ್ಷೇತ್ರದಲ್ಲಿ ನಿಜವಾದ ಭಾರತೀಯತೆ ತೋರಿಸುವ ಕೆಲಸವಾಗಬೇಕಿದೆ. ಕೇವಲ ಪಂಜಾಬಿ ತಿನಿಸುಗಳನ್ನ ಉಣಬಡಿಸಿ ಇದು ಭಾರತೀಯ ಆಹಾರ ಎನ್ನುವುದನ್ನ ಹೇಗೆ ಒಪ್ಪಿಕೊಳ್ಳಲಾದೀತು?

ಹಾಗೆಯೇ ಕೇವಲ ಉತ್ತರ ಭಾರತೀಯ ಸಿನಿಮಾ ತೋರಿಸಿ ಇದನ್ನ ಭಾರತೀಯ ಸಿನಿಮಾ ಎನ್ನುವುದನ್ನ ಕೂಡ ಸಾಧ್ಯವಿಲ್ಲ. ಇಲ್ಲಿಯವರೆಗೆ ಬಹುದೊಡ್ಡ ತಪ್ಪನ್ನ ಸದಾ ಮಾಡಿಕೊಂಡು , ಅದನ್ನ ಗಣನೆಗೆ ಕೂಡ ತೆಗೆದುಕೊಳ್ಳದೆ ನಡೆದು ಬಂದು ಬಿಟ್ಟಿದ್ದೇವೆ. ಇನ್ನಾದರೂ ಎಚ್ಚೆತ್ತು ಕೊಳ್ಳುವ ಸೂಕ್ಷ್ಮ ಮನಸ್ಸು ಎಲ್ಲರದೂ ಆಗಲಿ. ಏಳು ಕೋಟಿ ಜನರು ಆಡುವ ಭಾಷೆಯ ಬಗ್ಗೆ ಕೇವಲವಾಗಿ ಮಾತನಾಡುವ ಮುನ್ನ , ಹಿಂದಿಯನ್ನ ರಾಷ್ಟ್ರಭಾಷೆ ಎನ್ನುವ ಮುನ್ನ ಯೋಚಿಸುವಂತಾಗಲಿ. ನಾವೆಲ್ಲಾ ಭಾರತೀಯರು, ನಾವೆಲ್ಲಾ ಒಂದು ಎನ್ನುವ ಭಾವನೆ ಎಲ್ಲರಲ್ಲೂ ಬರಬೇಕು. ಅದು ಒಮ್ಮುಖವಾದಾಗ ಮಾತ್ರ ಅದು ಇಂದಿನ ದಿನದ ಘರ್ಷಣೆಗಳಿಗೆ ಕಾರಣವಾಗುತ್ತದೆ.

ಕತ್ತಲ ನಂತರ ಬೆಳಕಾಗಲೇ ಬೇಕಲ್ಲವೇ? ಇದೆಂತಹ ಪ್ರಶ್ನೆ ಅದು ಸಹಜವಲ್ಲವೇ? ಹಾಗೆಯೇ ಬದುಕಿನಲ್ಲಿ ಏರಿಳಿತಗಳು ಕೂಡ! ಇಂದಿನ ದಿನದ ಸ್ಥಿತಿ ಸದಾ ಇರುವುದಿಲ್ಲ . ಬದುಕಿನಲ್ಲಿ ಬದಲಾವಣೆಯೊಂದೇ ನಿರಂತರ. ಬದುಕಿನ ಹಾದಿಯಲ್ಲಿ ನಮಗೆ ತೀರಾ ಬೇಕಾದವರನ್ನ ಕಳೆದುಕೊಳ್ಳುತ್ತೇವೆ ಅಂದಿನ ದಿನದ ದುಃಖ ಸದಾ ಇದ್ದಿದ್ದರೆ? ನಾವು ಜೀವನದಲ್ಲಿ ಹೆಚ್ಚಿನದನ್ನು ಸಾಧಿಸಲಾಗದೆ ಅದೇ ದುಃಖದಲಿ ನಮ್ಮ ಜೀವನ ಪಯಣವನ್ನೂ ಮುಗಿಸಬೇಕಿತ್ತು ಅಲ್ಲವೇ? ಆದರೆ ಬದುಕು ಜೀವನ್ಮುಖಿ ಹಾಗೆ ಆಗಲು ಬಿಡುವುದಿಲ್ಲ.

ನೋವಿನ ನಂತರ ಏನಾದರೊಂದು ಬದುಕಿಗೆ ಆಶಾಭಾವನೆಯನ್ನು ನೀಡುತ್ತದೆ. ನಾವು ಬದುಕಲೇ ಬೇಕು ಎನ್ನುವುದಕ್ಕೊಂದು ಕಾರಣವನ್ನೂ ಕೊಡುತ್ತದೆ . ಸುಖವೇ ಇರಲಿ ದುಃಖವೇ ಇರಲಿ ಯಾವುದೂ ಈ ಬದುಕಿನಲ್ಲಿ ಶಾಶ್ವತವಲ್ಲ. ಹೀಗಾಗಿ ದಕ್ಷಿಣ -ಉತ್ತರ ಎನ್ನುವ ಜಟಾಪಟಿಗೆ ಬೀಳದೆ ನಾವೊಂದು ಎಂದು ಹೊರಟರೆ ಜಾಗತಿಕವಾಗಿ ನಮ್ಮ ಆಹಾರ ಮತ್ತು ನಮ್ಮ ಸಿನಿಮಾ ಎರಡೂ ರೂಲ್ ಮಾಡಬಹುದು. ಜಗತ್ತಿನ ಯಾವುದೇ ದೇಶವಾಗಿರಲಿ ಅವರ ಭಾಷೆ ಯಾವುದೇ ಇರಲಿ ಅವರಲ್ಲಿರುವ ಮೂಲಭೂತ ಮನುಷ್ಯ ಗುಣಗಳು ಮಾತ್ರ ಒಂದೇ ! ಮೇಲ್ನೋಟಕ್ಕೆ ನಾವೆಲ್ಲಾ ಬಹಳಷ್ಟು ಭಿನ್ನರೆನಿಸಿದರೂ ಮೂಲದಲ್ಲಿ ನಾವೆಲ್ಲಾ ಒಂದೇ!.

ಇನ್ನಷ್ಟು ಸರಳವಾಗಿ ಹೇಳಬೇಕೆಂದರೆ ಇಂದು ಜಗತ್ತು ಪೂರ್ತಿ ಆಶಾಭಾವದೆಡೆಗೆ ಕಣ್ಣು ಬಿಟ್ಟು ನೋಡುತ್ತಾ ಕುಳಿತಿದೆ. ಬದುಕಿನ ಎಲ್ಲಾ ಮಜಲುಗಳಲ್ಲಿ ಒಬ್ಬ ನಾಯಕನ ಬರುವಿಕೆಯನ್ನ ಕಾಯುತ್ತ ಕುಳಿತಿದೆ. ಮುಕ್ಕಾಲು ಪಾಲು ದೇಶಗಳ ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ ಸಣ್ಣ ಹುಲ್ಲುಕಡ್ಡಿ ಕೂಡ ಅವರ ಪಾಲಿಗೆ ಆಶಾದೀಪದಂತೆ ಕಾಣುತ್ತದೆ. ಜಗತ್ತು ಇಂತಹ ವಿಷಮ ಪರಿಸ್ಥಿತಿಯಲ್ಲಿರುವಾಗ ನಮ್ಮಲ್ಲಿ ಕಚ್ಚಾಡಿಕೊಂಡು ಇಬ್ಬಾಗವಾಗುವುದಕ್ಕಿಂತ ಜಗತ್ತು ನೀಡುತ್ತಿರುವ ಹೊಸ ಅವಕಾಶಗಳ ಕಡೆಗೆ ಮುಖಮಾಡಿ ನಿಲ್ಲಬೇಕಾಗಿದೆ. ಇವತ್ತಿಗೆ ಭಾರತದಲ್ಲಿ ಸಮಸ್ಯೆಗಳಿಗೆ ಕೊರತೆಯೇನಿಲ್ಲ, ಹೊಸದಾಗಿ ಉತ್ತರ -ದಕ್ಷಿಣ ಎನ್ನುವ ಸಮಸ್ಯೆ ಖಂಡಿತ ನಮಗೆ ಬೇಕಿಲ್ಲ. ನಾವು ಒಂದು ಭಾರತವಾಗಿ ಮಾತ್ರ ಜಗತ್ತನ್ನ ಗೆಲ್ಲಬಲ್ಲೆವು.

English summary
Barcelona Memories Column By Rangaswamy Mookanahalli Part 80,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X