ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂಟಿತನ ಎನ್ನುವುದು ಸಮುದ್ರದ ಮೇಲಿನ ಪ್ರಯಾಣವಿದ್ದಂತೆ! ಹುಷಾರು

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಒಂಟಿತನ ಎನ್ನುವುದು ಬಹು ದೊಡ್ಡ ಸಮಸ್ಯೆ. ಬಾರ್ಸಿಲೋನಾಕ್ಕೆ ಬಂದ ಹೊಸತರಲ್ಲಿ ಸುತ್ತಮುತ್ತ ಜನರಿದ್ದರೂ ಒಂಟಿತನವನ್ನು ಅನುಭವಿಸಿದ ನೆನಪು ಇನ್ನೂ ಹಸಿರಾಗಿದೆ. ಯೂರೋಪಿನ ದೇಶಗಳಲ್ಲಿ ಒಂಟಿತನ ಎನ್ನುವುದು ಸಾಮಾನ್ಯವಾಗಿದೆ, ಹೀಗೆ ಒಂಟಿಯಾಗಿರುವವರಲ್ಲಿ ವಯಸ್ಸಾದವರ ಸಂಖ್ಯೆ ಹೆಚ್ಚು. ಇಂತಹವರ ಜೊತೆಗೆ ಒಂದಷ್ಟು ವೇಳೆ ಇದ್ದು ಅವರ ಒಂಟಿತನವನ್ನ ನೀಗಿಸಿಸಲು ಸಂಸ್ಥೆಗಳು ಹುಟ್ಟಿಕೊಂಡಿವೆ.

ಯೂರೋಪಿನ ಕಥೆಗಿಂತ ದಾರುಣ ಕಥೆ ಜಪಾನ್ ದೇಶದ್ದು. ಇಲ್ಲಿ ಒಂಟಿತನ ಎನ್ನುವುದು ಬಹಳ ಕ್ರೂರ ಮಟ್ಟದಲ್ಲಿದೆ. ಒಂಟಿತನದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಮೊದಲೇ ಒಂಟಿತನದಲ್ಲಿ ಬೆಂದಿದ್ದ ಜನತೆಗೆ ಕೋವಿಡ್ ಅಗ್ನಿಗೆ ತುಪ್ಪ ಸುರಿಯುವ ಕೆಲಸ ಮಾಡಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಅಲ್ಲಿ ಹೆಚ್ಚಾಗಿದೆ.

ಟಾಯ್ಲೆಟ್ ಉಪಯೋಗಿಸಬೇಕೇ ? ಹಾಗಾದರೆ ಕಾಫಿ ಖರೀದಿಸಿ !!ಟಾಯ್ಲೆಟ್ ಉಪಯೋಗಿಸಬೇಕೇ ? ಹಾಗಾದರೆ ಕಾಫಿ ಖರೀದಿಸಿ !!

ಸಹಜವಾಗೇ ಇದರಿಂದ ಆತಂಕಕ್ಕೆ ಒಳಗಾಗಿರುವ ಅಲ್ಲಿನ ಸರಕಾರ 2021ರ ಫೆಬ್ರವರಿಯಲ್ಲಿ 'ಲೋನ್ಲಿನೆಸ್ಸ್ ಮಿನಿಸ್ಟರ್ ' ಎನ್ನುವ ಹೊಸ ಸಚಿವಾಲಯ ತೆರೆದು ಅದಕೊಬ್ಬ ಸಚಿವನನ್ನ ನೇಮಿಸಿದೆ. ಜನರ ಒಂಟಿತನದ ಕೊರತೆಯನ್ನು ನೀಗಿಸುವುದು ಮತ್ತು ಕುಸಿಯುತ್ತಿರುವ ಜನನ ಪ್ರಮಾಣ ಸಂಖ್ಯೆಯನ್ನ ಹೆಚ್ಚಿಸುವುದು ಈ ಸಚಿವಾಲಯದ ಕೆಲಸವಾಗಿದೆ. ನಿಮಗೆ ನೆನಪಿರಲಿ ಸ್ಪೇನ್ ಜಗತ್ತಿನಲ್ಲಿ 'ಸೆಕ್ಸ್ ಮಿನಿಸ್ಟ್ರಿ' ತೆರೆದ ಪ್ರಥಮ ದೇಶವಾಗಿದೆ. ಕುಸಿಯುತ್ತಿರುವ ಜನಸಂಖ್ಯೆ ವೃದ್ಧಿಸುವುದು ಈ ಸಚಿವಾಲಯದ ಕೆಲಸ.

Barcelona Memories Column By Rangaswamy Mookanahalli Part 75

ಒಂಟಿತನ ಎನ್ನುವುದು ಅದೆಷ್ಟು ದೊಡ್ಡ ಸಮಸ್ಯೆ ಎನ್ನುವುದು ಮುಕ್ಕಾಲು ಪಾಲು ಭಾರತೀಯರಿಗೆ ಹಾಸ್ಯಾಸ್ಪದ ಎನ್ನಿಸಬಹದು. ಮನೆಯಿಂದ ಹೊರಬರುತ್ತಲೆ ಸಿಗುವ ಜನ, ನೀವು ಬಯಸದಿದ್ದರೂ ಬಂದು ಮಾತನಾಡಿಸುವ ಜನ, ಗಿಜಿಗುಡುವ ಮಾಲ್, ಹೋಟೆಲ್, ಥಿಯೇಟರ್ ಇತ್ಯಾದಿಗಳು ಇದಕ್ಕೆ ಕಾರಣವಿರಬಹದು. ಇಲ್ಲಿ ಕಷ್ಟಪಟ್ಟು ಸ್ವಲ್ಪ ಸಮಯವಾದರೂ ಏಕಾಂತದಲ್ಲಿ ಇರಬೇಕು ಎಂದು ಬಯಸುವ ಸ್ಥಿತಿಯಿದೆ.

ಅಯ್ಯೋ ಇಲ್ಲಿ ಜನ ಜಾಸ್ತಿ ಎನ್ನುವುದಕ್ಕೆ ಮುಂಚೆ ಜಪಾನ್ ಮತ್ತು ಯೂರೋಪಿನ ದೇಶಗಳನ್ನ ನೆನಪಿಸಿಕೊಳ್ಳಿ, ಅಬ್ಬಾ ನಾವೆಷ್ಟು ಪುಣ್ಯವಂತರು ಎನ್ನುವ ಉದ್ಘಾರ ನಿಮ್ಮ ಬಾಯಿಂದ ತಾನಾಗಿಯೇ ಬರುತ್ತದೆ. ಒಂಟಿತನ ಎನ್ನುವುದು ಸಮುದ್ರದ ಮೇಲಿನ ಪ್ರಯಾಣವಿದ್ದಂತೆ! ಹೇಗೆ ಉಪ್ಪು ನೀರು ಕುಡಿಯಲು ಸಾಧ್ಯವಿಲ್ಲವೂ ಹಾಗೆ ಜನರಿದ್ದೂ ಅವರೊಂದಿಗೆ ಬೇರೆಯಲಾಗದ , ಮಾತನಾಡಲಾಗದ ಮನಸ್ಥಿತಿ ಒಂದಾದರೆ, ಮಾತನಾಡುವ ಇಚ್ಛೆಯಿದ್ದೂ ಮಾತನಾಡಲು ಜನರೇ ಸಿಗದ ಪರಿಸ್ಥಿತಿ ಇನ್ನೊಂದು.

ಸ್ಪೇನ್‌ನಲ್ಲಿ ಪ್ರಥಮ ದಿನಗಳು ನನ್ನದು ಎರಡನೇ ಸ್ಥಿತಿ ಯಾಗಿತ್ತು. ಹೇಗೋ ಒಂಟಿತನದ ಕರಾಳ ಮುಖವನ್ನ ನಾನು ಕಂಡಿದ್ದೇನೆ. ದೊಡ್ಡ ಮನೆ, ಓಡಾಡಲು ದೊಡ್ಡ ಕಾರುಗಳು ಇರಲಿ ಓಕೆ, ಆದರೆ ರಸ್ತೆ ಬದಿಯಲ್ಲಿ ಸೊಪ್ಪು ಮಾರುವ ಮುನಿಯಮ್ಮ, ಹೂವ ಮಾರುವಾಕೆ, ತರಕಾರಿ ಎಂದು ಕೂಗುತ್ತಾ ಬರುವ ತಳ್ಳುವ ಗಾಡಿಯ ಜನ ಇವರುಗಳು ಎಲ್ಲಕ್ಕಿಂತ ಬಹಳ ಮುಖ್ಯ. ಇವರಿಲ್ಲದೆ ಇದ್ದಿದ್ದರೆ ಬದುಕು ಅದೆಷ್ಟು ನಿರಸವಾಗಿರುತ್ತಿತ್ತು ಗೊತ್ತೇ?

ಜಪಾನ್ ಇರಬಹದು, ಅಮೇರಿಕಾ ಅಥವಾ ಯೂರೋಪ್, ಇಲ್ಲೆಲ್ಲಾ ಒಂಟಿತನಕ್ಕೆ ಸಾಕಷ್ಟು ದೇಣಿಗೆ ನೀಡಿರುವ ಮತ್ತು ನೀಡುತ್ತಿರುವುದು ಇಲ್ಲಿನ ಹವಾಮಾನ. ಅರ್ಥಾತ್ ಚಳಿ. ಹೌದು ಹಿಮ ಮತ್ತು ಚಳಿ ಮೊದಲೇ ಕಡಿಮೆ ಜನಸಂಖ್ಯೆಯ ದೇಶಗಳಲ್ಲಿ ಅವರ ಓಡಾಟವನ್ನು ಕೂಡ ನಿಯಂತ್ರಣದಲ್ಲಿ ಇಟ್ಟಿವೆ. ಹೀಗಾಗಿ ಒಂಟಿತನದ ಕ್ರೂರತೆ ಇನ್ನಷ್ಟು ಹೆಚ್ಚಾಗುತ್ತಾ ಹೋಗುತ್ತದೆ. ಭಾರತ ಎನ್ನುವುದು ಎಂತಹ ಪುಣ್ಯಭೂಮಿ ಎನ್ನುವುದು ತಿಳಿಯಬೇಕಾದರೆ ಒಂದಷ್ಟು ವರ್ಷವಾದರೂ ವಿದೇಶ ವಾಸ ಮಾಡಿ ಬರಬೇಕು.

ಬೆಂಗಳೂರಿನಲ್ಲಿ ಜನರ ಬಳಿ ಸಮಯವಿಲ್ಲ ಹೀಗಾಗಿ ವಾಕ್ ನಲ್ಲಿ ಹಾಯ್ ಎನ್ನುವುದು ಬಿಟ್ಟರೆ ಬೇರೆ ಬಾಂಧವ್ಯಕ್ಕೆ ಜಾಗವಿಲ್ಲ. ಮೈಸೂರಿನಲ್ಲಿ ಅವರಾಗೇ ಬಂದು ಮಾತನಾಡಿಸುತ್ತಾರೆ. ಅವರ ಪ್ರವರ ಹೇಳಿಕೊಂಡು, ನಮ್ಮದನ್ನು ಕೂಡ ಸಾವಧಾನವಾಗಿ ಕೇಳುತ್ತಾರೆ. ಧಾವಂತವಿಲ್ಲದ ತೃಪ್ತ ಜನರಿವರು. ಒಂಟಿತನ ಚಾಮುಂಡಿ ಬೆಟ್ಟವನ್ನ ದಾಟಿ ಬರುವುದು ಬಹಳ ಕಷ್ಟ. ಸದ್ಯದ ಮಟ್ಟಿಗಂತೂ ಇಲ್ಲಿ ಒಂಟಿತನ ಒಂಟಿಯಾಗಿದೆ, ಯೂರೋಪು ಮತ್ತು ಜಪಾನ್ ದೇಶದಲ್ಲಿ ಅದಕ್ಕಿರುವ ಸಾಂಗತ್ಯ ಇಲ್ಲಿ ಸಿಗುವುದು ಸಂದೇಹ.

 500ರ ಯುರೋ ನೋಟಿಗೆ ಬಿನ್ ಲಾಡೆನ್ ಎನ್ನುವ ಹಿಂದಿನ ರಹಸ್ಯ! 500ರ ಯುರೋ ನೋಟಿಗೆ ಬಿನ್ ಲಾಡೆನ್ ಎನ್ನುವ ಹಿಂದಿನ ರಹಸ್ಯ!

ಹಿಂದೊಂದು ಕಾಲವಿತ್ತು ಜನ 'ಹಾಸಿಗೆ ಇದ್ದಷ್ಟು ಕಾಲು ಚಾಚು' ಎನ್ನುವ ತತ್ವವನ್ನ ನಂಬಿದ್ದರು, ಪಾಲಿಸುತ್ತಿದ್ದರು . ಇದೀಗ ಎಲ್ಲವೂ ಶರವೇಗ ಪಡೆದುಕೊಂಡಿದೆ . ಇವತ್ತೇನಿದ್ದರೂ 'ಗಂಡಾಗುಂಡಿ ಮಾಡಿಯಾದರೂ ಸರಿಯೇ ಗಡಿಗೆ ತುಪ್ಪ ಕುಡಿಯಬೇಕು' ಎನ್ನುವ ತತ್ವದ ಬೆನ್ನ ಹಿಂದೆ ಬಿದಿದ್ದಾರೆ . ಜಗತ್ತಿನ ಬಹುಪಾಲು ಜನ ಹಣದ ಕೊರತೆಯಿಂದ ಬಳಲುವುದು ಸಾಮಾನ್ಯ ವಿಷಯವಾಗಿದೆ. ಹತ್ತು ಅಥವಾ ಹದಿನೈದು ಸಾವಿರ ರೂಪಾಯಿ ಸಂಬಳ ಪಡೆಯುವನಿಂದ ಲಕ್ಷಾಂತರ ಮಾಸಿಕ ಸಂಬಳ ಪಡೆಯುವ ವ್ಯಕ್ತಿಯದು ಅದೇ ಗೋಳು.

Recommended Video

ಒಂದೂ ಪಂದ್ಯವನ್ನ ಗೆದ್ದಿಲ್ಲಾ ಇವ್ರು !! | Oneindia Kannada

ಇಂತಹ ಸ್ಥಿತಿ ಏಕೆ ಬಂದಿತು? ಎನ್ನುವ ವಿಶ್ಲೇಷಣೆಗೆ ಹೋದರೆ ಅತ್ಯಂತ ಸಾಮಾನ್ಯವಾಗಿ ಕಂಡು ಬರುವ ವಿಷಯವೆಂದರೆ 'ಆದ್ಯತೆ'ಯ ಕೊರತೆ ಮತ್ತು ನಮಗೇನು ಬೇಕು ಅಥವಾ ಬೇಡ ಎನ್ನುವ ಅರಿವು ಇಲ್ಲದೆ ಇರುವುದು ಸಾಮಾನ್ಯವಾಗಿ ಎಲ್ಲರೂ ಹಣಕಾಸಿನ ಕೊರತೆ ಎದುರಿಸಲು ಇರುವ ಮುಖ್ಯ ಕಾರಣ. ಆರ್ಥಿಕ ಸಾಕ್ಷರತೆ ಬರದೆ ಹಣಕಾಸಿನ ಕೊರತೆ ನೀಗುವುದಿಲ್ಲ. ಇದೊಂದು ಅತ್ಯಂತ ಸೂಕ್ಷ್ಮ ವಿಷಯವಾಗಿದೆ. ಒಂದು ಸಣ್ಣ ತಪ್ಪು ಜೀವನ ಪೂರ್ತಿ ಅನುಭವಿಸಬೇಕಾದೀತು ಎಚ್ಚರ.

ಕಳೆದ ಎರಡು ದಶಕದಲ್ಲಿ ನಮ್ಮ ಬದುಕು ಪೂರ್ಣ ಬದಲಾಗಿ ಹೋಗಿದೆ. ನಾವು ಜಾತಿ, ಧರ್ಮ, ಭಾಷೆ ಇವುಗಳ ಮೀರಿ ಪಾಶ್ಚಾತ್ಯ ಜೀವನ ಶೈಲಿಗೆ ಒಗ್ಗಿಕೊಂಡಿದ್ದೇವೆ . ಇದೆಲ್ಲಾ ಆಗುತ್ತಿರುವುದು ನಾವು ನಮ್ಮದಲ್ಲದ ಜೀವನಶೈಲಿಯನ್ನ ಅನುಕರಿಸುತ್ತಿರುವುದರಿಂದ! ಭಗವಂತನ ಸೃಷ್ಟಿಯಲ್ಲಿ ಪ್ರತಿಯೊಬ್ಬರಿಗೂ ಅವರದೇ ಅದ ಪ್ರಶ್ನೆ ಪತ್ರಿಕೆಯಿದೆ. ಒಬ್ಬರ ಉತ್ತರ ಇನ್ನೊಬ್ಬರಿಗೆ ಸರಿಯಾಗುವುದಿಲ್ಲ . ಅರ್ಥವಿಷ್ಟೆ ನಾವು ಪಾಶ್ಚ್ಯಾತರ ಅಂಧಾನುಕರಣೆ ಮಾಡುತ್ತಾ ನಮ್ಮ ಜೀವನಶೈಲಿಯನ್ನ ಕೀಳು ಎನ್ನುವ ಭಾವನೆ ಬೆಳೆಸಿಕೊಂಡಿದ್ದೇವೆ.

ನೀವು ನಮ್ಮ ಹಿಂದಿನವರು ಬದುಕುತ್ತಿದ್ದ ರೀತಿಯನೊಮ್ಮೆ ಅವಲೋಕಿಸಿ . ಅಲ್ಲಿ ಕಸ ಎನ್ನುವ ಪದಕ್ಕೆ ಅರ್ಥವಿರಲಿಲ್ಲ . ಸಂಪನ್ಮೂಲಗಳ ಪೂರ್ಣವಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು. ಅವಶ್ಯಕತೆಗೆ ಮೀರಿದ ಯಾವುದನ್ನೂ ಅವರು ಬಳಸುತ್ತಿರಲಿಲ್ಲ. ಅಲ್ಲಿ ಸಾಮಾಜಿಕ ಸಾಮರಸ್ಯವಿತ್ತು . ಇಂದು ಆ ಜಾಗವನ್ನ ಸಾಮಾಜಿಕ ಒತ್ತಡ ಕಸಿದುಕೊಂಡಿದೆ. ಏಲ್ಲವೂ, ಎಲ್ಲರೂ ಇದ್ದು ಒಂಟಿತನದ ಭಾವ, ಬೇಸರ, ಜಿಗುಪ್ಸೆ, ಖಿನ್ನತೆ ಮನೆಮಾಡುತ್ತಿದೆ.

ನಾವಿದ್ದ ಊರಿನಲ್ಲಿ ಅಪ್ಪ -ಅಮ್ಮ ಆಗುವುದಕ್ಕೆ ಕೂಡ ಸೆಮಿನಾರ್ ಇಡುತ್ತಾರೆ ಅನಂತರ ಅಂದರೆ ಸತಿ ಪತಿ, ಅಪ್ಪ ಅಮ್ಮನಾಗಿ ಬದಲಾಗುತ್ತಾರೆ ಎನ್ನುವುದು ತಿಳಿದ ನಂತರ, ಒಂದು ವಾರ ' ಅಪ್ಪ ಅಮ್ಮನ ಕಾರ್ಯ ನಿರ್ವಹಿಸುವ' ಬಗ್ಗೆ ಆಸ್ಪತ್ರೆಯವರೇ ಇನ್ನೊಂದು ಸಣ್ಣ ಸೆಮಿನಾರ್ ನಡೆಸುತ್ತಾರೆ. ಇದು ಕಾಡ್ದಯ. ಯಾರೂ ತಪ್ಪಿಸುವಂತಿಲ್ಲ. ಸರಕಾರವೂ ಈ ವಿಷಯದಲ್ಲಿ ಸಾಥ್ ನೀಡುತ್ತದೆ. ಏಕೆಂದರೆ ಮುಕ್ಕಾಲು ಪಾಲು ಜನತೆ ಬದುಕುವುದು ಹೀಗೆ, ಅಪ್ಪ ಅಮ್ಮ , ಬಂಧು ಬಳಗ ಎಂದು ಯಾರೂ ಹೆಚ್ಚಿನ ಸಹಾಯಕ್ಕೆ ಬರುವುದಿಲ್ಲ, ಯಾರೂ ನನಗೆ ಗೊತ್ತು ಎಂದು ರಿಸ್ಕ್ ತೆಗೆದುಕೊಳ್ಳುವುದಿಲ್ಲ.

 ಊಟ , ನೋಟ ,ಮೋಜಾಟ ಸ್ಪೇನ್ ಪ್ರವಾಸಿಗಳಿಗೆ ರಸದೂಟ ! ಊಟ , ನೋಟ ,ಮೋಜಾಟ ಸ್ಪೇನ್ ಪ್ರವಾಸಿಗಳಿಗೆ ರಸದೂಟ !

ಮೂರು ತಿಂಗಳ ವೇಳೆಗೆ ಗರ್ಭವನ್ನು ಪರೀಕ್ಷಿಸಿ ಮಗು ಹೆಣ್ಣೋ ಅಥವಾ ಗಂಡೋ ಎನ್ನುವುದನ್ನು ಕೂಡ ಹೇಳುತ್ತಾರೆ. ಮಗುವಿನ ಹೆಸರನ್ನು ಇಟ್ಟು ಕೊಳ್ಳಲು ಕೂಡ ಸೂಚಿಸುತ್ತಾರೆ. ನಾವು ಮಗುವಿನ ಹೆಸರನ್ನ ಹೇಳಿದರೆ ಸಾಕು, ಮಗುವಿನ ಹೆಸರಲ್ಲಿ ಆ ತಕ್ಷಣವೇ ಒಂದು ಹೆಲ್ತ್ ಬುಕ್ ಸಿದ್ದಪಡಿಸುತ್ತಾರೆ. ಪ್ರತಿ ಬಾರಿ ತಪಾಸಣೆಗೆ ಹೋದಾಗ ಮಗುವಿನ ಬೆಳವಣಿಗೆಯನ್ನ ದಾಖಲಿಸುತ್ತ ಹೋಗುತ್ತಾರೆ. ಇದೊಂದು ವಿಶೇಷ ಅನುಭವ.

ಇನ್ನು ಇಲ್ಲಿ ಅಂದರೆ ಬಾರ್ಸಿಲೋನಾದಲ್ಲಿ ಅಪ್ಪನನ್ನು ಕೂಡ ವೈದ್ಯರ ಜೊತೆಗೆ ಹೆರಿಗೆಯಲ್ಲಿ ಭಾಗವಹಿಸಲು ಬಿಡುತ್ತಾರೆ. ಅನನ್ಯಳನ್ನು ಮತ್ತು ರಮ್ಯಳನ್ನು ಸ್ವಲ್ಪ ಹೆಚ್ಚು ಎನ್ನುವಷ್ಟು ಸೂಕ್ಷ್ಮವಾಗಿ ನೋಡಿಕೊಂಡಿದ್ದೇನೆ. ಇದಕ್ಕೆ ಕಾರಣ ಅಲ್ಲಿ ನಮ್ಮವರು ಎನ್ನುವರು ಯಾರೂ ಇರಲಿಲ್ಲ. ಮಗು ಜನಿಸಿದ ತಕ್ಷಣ ಒಂದಷ್ಟು ಮಾತ್ರ ಸ್ವಚ್ಛಗೊಳಿಸಿ ' ತೋಮ ಪಾಪಿ ತು ಹೀಹಾ' (ಅಪ್ಪ , ನಿನ್ನ ಮಗಳನ್ನ ತೆಗೆದು ಕೋ ) ಎಂದು ವೈದ್ಯರು ಅನನ್ಯಳನ್ನು ನನ್ನ ಕೈಗಿತ್ತ ದಿನವನ್ನು ಮರೆಯುವುದಾದರೂ ಹೇಗೆ?

ವ್ಯಕ್ತಿಯಾಗಿ ಅತ್ಯಂತ ಬಿಡುಬೀಸಾಗಿದ್ದ ನನಗೆ 'ಅನನ್ಯ' ಳ ಬರುವಿಕೆ ಗೊತ್ತಾಗದಂತೆ ನನ್ನ ಪ್ರಜ್ಞಾವಂತ ಸ್ಥಿತಿಗೆ ದೂಡಿಬಿಟ್ಟಿತು. ಕಾರನ್ನ ಚಲಾಯಿಸುವದರಿಂದ, ಇತರ ಸಹಜೀವಿಗಳೊಂದಿಗೆ ವ್ಯವಹರಿಸುವ ರೀತಿ ಕೂಡ ಬದಲಾಯ್ತು. ಮೊದಲಿದ್ದ ಕೋಪ, ಎಲ್ಲವೂ ಕ್ಷಣಾರ್ಧದಲ್ಲಿ ಆಗಿಬಿಡಬೇಕು ಎನ್ನುವ ಆತುರ ಎಲ್ಲಿ ಹೋದವು ಎನ್ನುವಷ್ಟು ಬದಲಾವಣೆ. ಇದಕ್ಕೆಲ್ಲ ಕಾರಣ ನಮ್ಮ ಮನೆಗ ಅನನ್ಯಳ ಆಗಮನವಾಗುತ್ತದೆ ಎನ್ನುವುದು.

ಹೆಣ್ಣು ಮಗುವೊಂದು ಬೇಕು ಎನ್ನುವುದು ನನ್ನಪ್ಪ ಅಮ್ಮನ ಆಸೆಯಾಗಿತ್ತು. ಆದರೆ ನಾವು ಮೂವರೂ ಗಂಡು ಮಕ್ಕಳು, ಹೀಗಾಗಿ ನಮ್ಮ ಮನೆಯಲ್ಲಿ ಜನಿಸಿದ ಪ್ರಥಮ ಹೆಣ್ಣು ಮಗು ಅನನ್ಯ. ಮಗು ಹುಟ್ಟುವ ಮುನ್ನವೇ ನಾನೊಬ್ಬ ಬದಲಾದ ವ್ಯಕ್ತಿಯಾಗಿದ್ದೆ. ಇನ್ನು ಅನನ್ಯ ಹುಟ್ಟಿದ ಮೇಲಿನ ಕಥೆಯೇ ಬೇರೆ. ಯಾವುದೇ ಮಗುವನ್ನ ನೋಡಲಿ ಆ ಮಗುವಿನಲ್ಲಿ ನಾನು ಅನನ್ಯಳನ್ನು ಕಾಣಲು ಶುರು ಮಾಡಿದೆ. ಅಬ್ಬಾ ಅದೆಂತಹ ಶಕ್ತಿಯಿದೆ ಈ ಮಮಕಾರದಲ್ಲಿ ಎನ್ನಿಸಿದ್ದು ಉಂಟು. ಅಲ್ಲಿಯವರೆಗೆ ಎಷ್ಟೋ ಮಕ್ಕಳನ್ನು ನೋಡಿದ್ದೆ .

ನನ್ನ ಮನೆಯಲ್ಲಿ ನನ್ನ ಅಣ್ಣನ ಮಗುವನ್ನು ಕೂಡ ಕಂಡವನು.., ಉಹೂ ಅದ್ಯಾವುದೂ ನಮಗೆ ಮಗುವಾದಾಗ ಅನುಭವದ ಮುಂದೆ ಸೊನ್ನೆ. ಆ ಮಕ್ಕಳನ್ನು ಪ್ರೀತಿಸಲಿಲ್ಲ ಎಂದಲ್ಲ . ಆದರೆ ಇದು ಅಕ್ಷರದಲ್ಲಿ ಬರೆಯಲಾಗದ ಸಂವೇದನೆ. ಯಾವುದೇ ಕೆಲಸವಿರಲಿ, ಅದೆಷ್ಟೇ ಮುಖ್ಯವಾಗಿರಲಿ ಮೊದಲು ಮಗಳು ನಂತರ ಎಲ್ಲವೂ ಎನ್ನುವ ಮಟ್ಟಕ್ಕೆ ಬದುಕು ಬದಲಾಗಿ ಹೋಯ್ತು. ಅನನ್ಯಳನ್ನ ಮೊದಲ ಬಾರಿಗೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಈಜಾಡಲು ಬಿಟ್ಟಾಗ ಅವಳಿಗೆ ಕೇವಲ ಹದಿನೆಂಟು ತಿಂಗಳು.

ಅವಳ ಪ್ರೀ ಸ್ಕೂಲ್ ಟೀಚರ್ ಅವಳಿಗೆ ಸ್ವಿಮ್ಮಿಂಗ್ ಕಲಿಸುವ ಜವಾಬ್ದಾರಿ ಕೂಡ ಹೊತ್ತಿದ್ದರು. ಅವರು ಸರಾಗವಾಗಿ ಮಗುವನ್ನ ನೀರಿಗೆ ಹಾಕಿ ಕೈಕಾಲಾಡಿಸಲು ಹೇಳುತ್ತಿದ್ದರು. ಅನನ್ಯ ಖುಷಿಯಿಂದ ಇರುತ್ತಿದ್ದಳು. ನನಗೆ ಮಾತ್ರ ಜೀವ ಬಾಯಿಗೆ ಬಂದಿರುತ್ತಿತ್ತು . ಒಂದೆರೆಡು ತರಗತಿಯ ನಂತರ ರಮ್ಯ ಒಬ್ಬಳೇ ಹೋಗುತ್ತಿದ್ದಳು. ಶಾಲೆಗೆ ಬಿಡುವುದಕ್ಕೆ ನನ್ನ ಮತ್ತು ರಮ್ಯಳ ನಡುವೆ ಪುಟಾಣಿ ಕದನ ಏರ್ಪಡುತ್ತಿತ್ತು. ಶಾಲೆಗೆ ಬಿಡುವಾಗ ಕಣ್ತುಂಬ ನೀರು ತುಂಬಿಕೊಂಡು 'ಪಪ್ಪಾ ಬಿಟ್ಟು ಹೋಗಬೇಡ' ಎಂದಾಗ ಕರುಳು ಕಿತ್ತು ಬರುತ್ತಿತ್ತು . ರಮ್ಯ ಮಾತ್ರ ನಿತ್ಯವೂ ಶಾಲೆಯಿಂದ ಕರೆತರುವ ಕೆಲಸವನ್ನ ಹೊತ್ತಿದ್ದಳು. ಬರುವಾಗ ಮಕ್ಕಳು ಬಹಳ ಖುಷಿಯಾಗಿರುತ್ತವೆ.

ರಮ್ಯಳಿಗೆ ಅನನ್ಯಳನ್ನು ಬೆಂಗಳೂರಿನಲ್ಲಿ ಓದಿಸಬೇಕು , ಕನಿಷ್ಠ ಪ್ರಾಥಮಿಕ ಶಿಕ್ಷಣ ಭಾರತದಲ್ಲಿ ಆದರೆ ಮಗುವಿಗೆ ಸರಿ ತಪ್ಪುಗಳ ನಡುವಿನ ಅಂತರವನ್ನು ಕಲಿಸಲು ಸಾಧ್ಯ ಎನ್ನುವ ಮನೋಭಾವ. ಅವರಿಬ್ಬರೂ ಬೆಂಗಳೂರನ್ನು ಸೇರಿದರು. ಕೆಲಸದ ನಿಮಿತ್ತ ನಾನು ತಕ್ಷಣ ಬರಲಾಗಲಿಲ್ಲ. ಆ ಒಂದು ವರ್ಷ ನನ್ನ ಜೀವನದ ಅತ್ಯಂತ ಕಠಿಣ ವರ್ಷ. ನನ್ನ ಕೆರಿಯರ್‌ನ ಉತ್ತುಂಗ ಸ್ಥಿತಿಯನ್ನ ಬಿಟ್ಟು ಮರಳಿ ಭಾರತಕ್ಕೆ ಬರಲು ನನ್ನ ಮಗಳು ಕಾರಣ. ನನ್ನ ಮುಂದೆ ಎರಡು ಆಯ್ಕೆಯಿತ್ತು ಒಂದು ಹಣ, ಕೆರಿಯರ್ ಮತ್ತು ಎರಡನೆಯದಾಗಿ ನನ್ನ ಪರಿವಾರ , ಮಗಳು. ನಾನು ಎರಡನೇಯದನ್ನ ಆಯ್ಕೆ ಮಾಡಿಕೊಂಡೆ.

ಹೀಗೆ ಆಯ್ಕೆ ಮಾಡಿಕೊಳ್ಳುವ ಮುಂಚೆ ಒಂದೆರೆಡು ವರ್ಷ ಪರಿವಾರವನ್ನ ಬಿಟ್ಟು ಬಾರ್ಸಿಲೋನಾ ದಲ್ಲಿ ಕಳೆದ ಒಂಟಿ ದಿನಗಳ ನೆನಪು ಮಾಡಿಕೊಳ್ಳುವುದು ಕೂಡ ಇಷ್ಟಪಡುವುದಿಲ್ಲ. ಒಂಟಿತನ ಎನ್ನುವುದು ಯಾರೂ ಇಂದಿಗೂ ಹೆಚ್ಚು ಗಮನಿಸಿದ ಅತ್ಯಂತ ದೊಡ್ಡ ಕಾಯಿಲೆ. ಅದು ನಿಧಾನಕ್ಕೆ ಭಾರತಕ್ಕೂ ಕಾಲಿಡುತ್ತಿದೆ, ಹುಷಾರು.., ಒಂಟಿ ಒಂಟಿ ಯಾಗಿರುವುದು ಬೋರೊ ಬೋರು ಆದರೆ ಕೇಳುವರಾರು?

English summary
Barcelona Memories Column By Rangaswamy Mookanahalli Part 75
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X