ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಯ್ಲೆಟ್ ಉಪಯೋಗಿಸಬೇಕೇ ? ಹಾಗಾದರೆ ಕಾಫಿ ಖರೀದಿಸಿ !!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಪ್ರತಿಯೊಂದು ದೇಶ ಕೂಡ ಹಲವಾರು ರೀತಿ ರಿವಾಜುಗಳನ್ನ ರೊಢಿಸಿಕೊಂಡಿರುತ್ತದೆ. ಅವುಗಳನ್ನ ಸರಿ ತಪ್ಪು ಎನ್ನುವ ತಕ್ಕಡಿಯಲ್ಲಿ ಹಾಕಿ ತೂಗಲು ಮಾತ್ರ ಎಂದಿಗೂ ಹೋಗಬಾರದು. ನಮಗೆ ಅವರು ಮುಂಜಾನೆಯ ಆರು ಅಥವಾ ಏಳು ಗಂಟೆಗೆ ಅರ್ಧ ಲೀಟರ್ ಬಿಯರ್ ಕೈಲಿಡಿದು ಕುಳಿತುಕೊಳ್ಳುವುದು ಅಸಹಜ ಎನ್ನಿಸಿದರೆ, ಬೆಳಗ್ಗೆ ನಾವು ತಿಂಡಿಗೆ ಚಿತ್ರಾನ್ನ ತಿನ್ನುವುದು ಕೂಡ ಅವರಿಗೆ ಅಷ್ಟೇ ಸಹಜವಾಗಿ ಕಾಣುತ್ತದೆ.

ಪ್ರಾಚೀನ ಕಾಲದಲ್ಲಿ ಭಾರತ ವಿಶ್ವಗುರುವಾಗಿತ್ತು ಎನ್ನುವುದನ್ನ ನಾವು ಕೇಳುತ್ತಾ ಬೆಳೆದಿದ್ದೇವೆ. ವಾಸ್ತವದ ನೆಲೆಗಟ್ಟಿನಲ್ಲಿ ನೋಡಿದಾಗ ಕೆಲವೊಂದು ವಿಚಾರದಲ್ಲಿ ಪಾಶ್ಚಾತ್ಯರು ಬಹಳಷ್ಟು ಮುಂದಿದ್ದಾರೆ ಎನ್ನುವುದು ತಿಳಿದು ಬರುತ್ತದೆ. ಆ ನಿಟ್ಟಿನಲ್ಲಿ ನೋಡಿದಾಗ ಇಲ್ಲಿನ ಜನ ಯಾರನ್ನೂ ಬೇಗೆ ಜಡ್ಜ್ ಮಾಡುವುದಿಲ್ಲ . ಸ್ಪೇನ್ ದೇಶದಲ್ಲಿ 'ಕಾದ ಉನೊ ಕೊಮೊ ಏಸ್' ಎನ್ನುವುದು ಸಾಮಾನ್ಯ ಮಾತು.

500ರ ಯುರೋ ನೋಟಿಗೆ ಬಿನ್ ಲಾಡೆನ್ ಎನ್ನುವ ಹಿಂದಿನ ರಹಸ್ಯ!500ರ ಯುರೋ ನೋಟಿಗೆ ಬಿನ್ ಲಾಡೆನ್ ಎನ್ನುವ ಹಿಂದಿನ ರಹಸ್ಯ!

ಅಂದರೆ ಪ್ರತಿಯೊಬ್ಬರೂ ಅವರವರಂತೆ ಇರುತ್ತಾರೆ ಎಂದರ್ಥ. ಅಂದರೆ ನಾವೆಲ್ಲಾ, ಪ್ರತಿಯೊಬ್ಬರೂ ಒಬ್ಬರಂತೆ ಒಬ್ಬರಿಲ್ಲ, ಅಂದಮೇಲೆ ನಮ್ಮ ಅಭ್ಯಾಸಗಳು, ಆಹಾರ, ವಿಚಾರ ಪದ್ದತಿಗಳು ಹೇಗೆ ಹೊಂದಾವಣಿಕೆಯಾದೀತು ಅಲ್ಲವೇ? ಅವರವರನ್ನ ಅವರವರ ಇಷ್ಟಕ್ಕೆ ಬಿಡುವುದು ಲೇಸು. ದೇಶದ ಸಮಗ್ರತೆಗೆ ಚ್ಯುತಿ ಬರುವಂತಹ ವಿಷಯಗಳ ವಿಷಯದಲ್ಲಿ ರಿಯಾಯತಿ ಅವಶ್ಯಕತೆ ಇಲ್ಲ. ಉಳಿದಂತೆ ಯಾವುದನ್ನೂ ನಾವು ಕೇವಲ ನಮ್ಮ ದೃಷ್ಟಿಯಿಂದ ನೋಡಿ ಇಷ್ಟೇ ಸರಿ ಎಂದು ಹೇಳಲು ಬರುವುದಿಲ್ಲ. ಅಂತಹ ಒಂದಷ್ಟು ವಿಷಯಗಳು ಇಲ್ಲಿವೆ.

Barcelona Memories Column By Rangaswamy Mookanahalli Part 74

ಇಲ್ಲಿ , ಅಂದರೆ ಬಾರ್ಸಿಲೋನಾ ಸಹಿತ ಯೂರೋಪಿನ ಎಲ್ಲಾ ನಗರಗಳಲ್ಲಿ ನಿಮಗೆ ಪಬ್ಲಿಕ್ ಟಾಯ್ಲೆಟ್ ಸಿಕ್ಕುವುದಿಲ್ಲ. ಆಶ್ಚರ್ಯ ಎನ್ನಿಸಬಹುದು ಆದರೆ ಇದು ನಿಜ. ಬಸ್ ಸ್ಟಾಂಡ್, ರೈಲ್ವೆ ನಿಲ್ದಾಣ, ಸರಕಾರಿ ಕಛೇರಿಗಳಲ್ಲಿ ಇರುವ ಸೌಲಭ್ಯ ನಿಮಗೆ ನಗರದ ಇತರ ಕಡೆಯಲ್ಲಿ ಸಾರ್ವಜನಿಕರಿಗೆ ಇರುವುದಿಲ್ಲ. ಹಾಗಾದರೆ ಶೌಚ ಬಂದರೆ ಏನು ಮಾಡಬೇಕು? ಪ್ರತಿ ಹತ್ತು ಹೆಜ್ಜೆಗೆ ಸಿಕ್ಕುವ ಕಾಫಿ ಬಾರ್‌ಗಳಲ್ಲಿ ಶೌಚಾಲಯಗಳಿವೆ, ಆದರೆ ಬಹುತೇಕ ಬಾರ್‌ಗಳಲ್ಲಿ ಗ್ರಾಹಕರಿಗೆ ಮಾತ್ರ ಎನ್ನುವ ಬೋರ್ಡ್ ತೂಗು ಹಾಕಿರುತ್ತಾರೆ.

ಹೀಗಾಗಿ ಈ ಭಾಗದಲ್ಲಿ ನೀವು ಶೌಚವನ್ನು ಉಪಯೋಗಿಸಲು ಹಣವನ್ನು ಖರ್ಚು ಮಾಡಬೇಕು. ಅಂದರೆ ನಿಮಗೆ ಇಷ್ಟವಿರಲಿ, ಬಿಡಲಿ ಒಂದು ಕಾಫಿ ಕೊಳ್ಳಬೇಕಾಗುತ್ತದೆ. ಒಂದು ಕಾಫಿ ಬೆಲೆ ಒಂದೂವರೆ ಯುರೋ ಅಂದರೆ 120/130 ರೂಪಾಯಿ. ಹೀಗೆ ನೀವು ಕಾಫಿ ಕೊಂಡರೆ ನೀವು ಟಾಯ್ಲೆಟ್ ಉಪಯೋಗಿಸಲು ಅರ್ಹರಾಗುತ್ತೀರಿ. ಇದಲ್ಲದೆ ಬೇರೆ ಯಾವ ಉಪಾಯವೂ ಇಲ್ಲ. ಹತ್ತಿರದಲ್ಲಿ ಮಾಲ್‌ಗಳು ಇದ್ದರೆ ಮತ್ತು ಸುತ್ತಿ ಬಳಸಿ ನೀವು ಮಾಲ್‌ನಲ್ಲಿರುವ ಟಾಯ್ಲೆಟ್ ತಲುಪುವ ವರೆಗೆ ತಾಳಿಕೊಳ್ಳುವ ತಾಕತ್ತು ಇದ್ದರೆ ಬೇರೆ ಕಥೆ ಇಲ್ಲದಿದ್ದರೆ ನೀವು ವಿಸರ್ಜನೆಗೆ ಹಣ ವ್ಯಯಿಸದೆ ವಿಧಿಯಿಲ್ಲ.

ಊಟ , ನೋಟ ,ಮೋಜಾಟ ಸ್ಪೇನ್ ಪ್ರವಾಸಿಗಳಿಗೆ ರಸದೂಟ !ಊಟ , ನೋಟ ,ಮೋಜಾಟ ಸ್ಪೇನ್ ಪ್ರವಾಸಿಗಳಿಗೆ ರಸದೂಟ !

ಬಾರ್ಸಿಲೋನಾ, ರೋಮ್, ಫ್ರಾನ್ಸ್, ವ್ಯಾಟಿಕನ್ ಹೀಗೆ ಬಹುತೇಕ ನಗರಗಳಲ್ಲಿ ಕುಡಿಯುವ ನೀರು ಅಲ್ಲಲ್ಲಿ ಬೀದಿ ಬದಿಯಲ್ಲಿ ಸಿಗುತ್ತದೆ. ಕೆಲವೊಂದು ಕಡೆ ನೀರು ಸದಾ ಸುರಿಯುತ್ತಲೆ ಇರುತ್ತದೆ. ಇವು ಕುಡಿಯಲು ಅರ್ಹವಾಗಿವೆ. ಭಾರತೀಯ ಟೂರಿಸ್ಟ್ ಗಳು ನೀರಿಗೆ ಹಣವನ್ನ ತೆತ್ತು ಕುಡಿಯುತ್ತಾರೆ, ಅದರ ಅವಶ್ಯಕತೆ ಖಂಡಿತ ಇಲ್ಲ. ಅಲ್ಲದೆ ಇಲ್ಲಿ ಬಿಯರ್ ಬಾಟಲ್ ನೀರಿಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಹೀಗೆ ಪುಕ್ಕಟೆ ಅಥವಾ ಕಡಿಮೆ ಬೆಲೆಗೆ ಸಿಗುವ ಬಿಯರ್ ಸೇವಿಸಿದ ಮೇಲೆ ವಿಸರ್ಜನೆಗೆ ಮಾತ್ರ ಹಣ ತೆರಬೇಕಾಗುತ್ತದೆ.

ಇಲ್ಲಿಗೆ ಬಂದ ಮೊದಲ ದಿನಗಳಲ್ಲಿ ಇದು ನನಗೆ ಬಹಳ ಆಶ್ಚರ್ಯ ತರಿಸಿತ್ತು. ಇಲ್ಲಿ ಇವರು ಎರಡು ಕಾರ್ಯವನ್ನ ಸಿದ್ಧಿಸಿಕೊಂಡಿದ್ದಾರೆ. ಒಂದು ನಗರದ ಸ್ವಚ್ಛತೆಯನ್ನ ಕಾಪಾಡಿಕೊಂಡಿದ್ದಾರೆ , ಎರಡು ಸ್ಥಳೀಯ ವ್ಯಾಪಾರ ಅಭಿವೃದ್ಧಿ ಕೂಡ ಆಯ್ತು. ಬಾರ್ಸಿಲೋನಾ ನಗರದಲ್ಲಿ ಕೆಲವೇ ಕೆಲವು ಕಡೆ ಇತ್ತೀಚಿಗೆ ಪೇ ಅಂಡ್ ಯೂಸ್ ತರಹದ ಟಾಯ್ಲೆಟ್ ಸೌಲಭ್ಯಗಳು ಬಂದಿವೆ. 2014/2016ರ ಆಸುಪಾಸಿನಲ್ಲೇ ಇಟಲಿಯಲ್ಲಿ ಇದೊಳ್ಳೆ ವ್ಯವಹಾರವಾಗಿ ಬೆಳೆದಿತ್ತು.

ನೀರನ್ನ ಪುಕ್ಕಟೆ ಅಥವಾ ಸಸ್ತಾ ಕೊಟ್ಟು ನಂತರ ವಿಸರ್ಜಿಸಲು ಶುಲ್ಕ ಪಡೆಯಲು ಶುರು ಮಾಡಿದರೆ ಅದು ಲಾಭದಾಯಕ ಬಿಸಿನೆಸ್ ಮಾಡೆಲ್ ಆಗದೆ ಇನ್ನೇನಾದೀತು ಅಲ್ಲವೇ ? ಒಂದು ನಗರದಿಂದ ಇನ್ನೊಂದು ನಗರಕ್ಕೆ ಪ್ರಯಾಣ ಮಾಡುವಾಗ ನಿಮ್ಮ ಮುಂದೆ ಮೂರು ಆಯ್ಕೆಗಳಿವೆ. ಒಂದು ರೋಡ್, ಬಸ್ ಮೂಲಕ, ಎರಡು ರೈಲ್ ಮೂಲಕ ಮೂರು ವಿಮಾನದ ಮೂಲಕ. ವಿಮಾನ ಅತ್ಯಂತ ಚೀಪ್ ಆಯ್ಕೆ, ನಂತರ ರೈಲು ನಂತರ ಬಸ್.

ವಿಮಾನ ಮತ್ತು ರೈಲಿನಲ್ಲಿರುವಂತೆ ಬಸ್ ಗಳಲ್ಲಿ ಕೂಡ ಸಣ್ಣ ಟಾಯ್ಲೆಟ್ ವ್ಯವಸ್ಥೆ ಇರುತ್ತದೆ. ಆದರೆ ಕೆಲವೊಮ್ಮೆ ಅತ್ಯಂತ ಶೀತದ ಸಮಯದಲ್ಲಿ ನೀರು ಮಂಜು ಗಡ್ಡೆಕಟ್ಟುವ ಕಾರಣ ಇವುಗಳನ್ನ ಬಳಸಲು ಬಿಡುವುದಿಲ್ಲ. ಇಂತಹ ಸಮಯದಲ್ಲಿ ಇನ್ನೊಂದು ನಿರ್ದಿಷ್ಟ ತಂಗುದಾಣ ಬರುವವರೆಗೆ ನೀವೆಷ್ಟೇ ಜಪ್ಪಯ್ಯ ಎಂದರೂ ಡ್ರೈವರ್ ಬಸ್ ನಿಲ್ಲಿಸುವುದಿಲ್ಲ. ಭಾರತದಲ್ಲಿ ಆದಂತೆ ರಸ್ತೆ ಬದಿಯಲ್ಲಿ ನಿಲ್ಲಿಸಿ ಎಲ್ಲೆಂದರಲ್ಲಿ ವಿಸರ್ಜನೆ ಮಾಡುವುದು ಕನಸಿನ ಮಾತು. ಹೀಗಾಗಿ ಪ್ರವಾಸಿಗರು ಈ ಅಂಶವನ್ನ ಕೂಡ ಗಮನದಲ್ಲಿರಿಸಿಕೊಳ್ಳುವುದು ಉತ್ತಮ.

ಇರುವುದೊಂದು ಜೀವನ ಅದನ್ನು ಖುಷಿಯಿಂದ ಕಳೆಯೋಣ ಎನ್ನುವುದು ಸ್ಪ್ಯಾನಿಷ್ ಜೀವನ ನಿಯಮ !ಇರುವುದೊಂದು ಜೀವನ ಅದನ್ನು ಖುಷಿಯಿಂದ ಕಳೆಯೋಣ ಎನ್ನುವುದು ಸ್ಪ್ಯಾನಿಷ್ ಜೀವನ ನಿಯಮ !

ಹೀಗೆ ತಮ್ಮ ನಗರವನ್ನ ಸ್ವಚ್ಛವನ್ನಾಗಿರಿಸಿಕೊಳ್ಳುವ ತವಕ, ಉಮೇದಿನ ಕಾಲುಭಾಗ ಕೂಡ ಕೆಟ್ಟ ವಲಸಿಗರನ್ನ ನಿಯಂತ್ರಣ ಮಾಡುವುದರಲ್ಲಿ ಇಲ್ಲಿನ ಜನಕ್ಕೆ ಮತ್ತು ಸರಕಾರಕ್ಕೆ ಇಲ್ಲದೆ ಇರುವುದು ನನ್ನ ಮಟ್ಟಿಗೆ ಇಂದಿಗೂ ಕೌತುಕವಾಗೇ ಉಳಿದಿದೆ. 2003/2004ರ ನಂತರ ಬಾರ್ಸಿಲೋನಾ ನಗರಕ್ಕೆ ಬರುವ ಇಲ್ಲಿಗಲ್ ಇಂಮಿಗ್ರಂಟ್ ಗಳ ಸಂಖ್ಯೆ ಹೆಚ್ಚಾಯಿತು. ಬಂದವರಿಗೆ ಭಾಷೆ ಬರುವುದಿಲ್ಲ , ಕೆಲಸ ಸಿಕ್ಕುವುದಿಲ್ಲ ಆದರೆ ಇದನ್ನೆಲ್ಲಾ ಹೊಟ್ಟೆ ಕೇಳಬೇಕಲ್ಲ?

ಹೀಗೆ ಕಾನೂನುಬಾಹಿರವಾಗಿ ವಲಸೆ ಬಂದವರಲ್ಲಿ ಮೊರೊಕ್ಕಿ ಜನ , ಪಾಕಿಸ್ತಾನಿಗಳು ಬಂದು ಬಾಂಗ್ಲಾದೇಶಿಗಳು ಮತ್ತು ರೊಮೇನಿಯಾ ಜನರು ಬಹಳವಿದ್ದರು. ಇತ್ತೀಚಿಗೆ ಈ ಪಟ್ಟಿಗೆ ಆಫ್ರಿಕನ್ ವಲಸಿಗರು ಕೂಡ ಸೇರಿದ್ದಾರೆ. ಪಾಕಿಸ್ತಾನಿಗಳು ಇಂದಿಗೆ ಮೊಬೈಲ್ ರಿಪೇರಿ, ಕಿರಾಣಿ ಅಂಗಡಿ , ಮಾಂಸದ ಅಂಗಡಿ ಹೀಗೆ ಹಲವಾರು ವೃತ್ತಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಾಂಗ್ಲಾದೇಶಿಗಳು ಕೂಲಿ ಜೊತೆಗೆ ಹೋಟೆಲ್‌ನಲ್ಲಿ ಕ್ಲೀನಿಂಗ್ ಇತ್ಯಾದಿ ಕೆಲಸಗಳಲ್ಲಿ ಬದುಕು ಕಟ್ಟಿಕೊಂಡಿದ್ದಾರೆ.

ಆಫ್ರಿಕನ್ ವಲಸಿಗರು ರಸ್ತೆ ಬದಿಯಲ್ಲಿ ಇಮಿಟೇಷನ್ ಬ್ರಾಂಡೆಡ್ ವಸ್ತುಗಳನ್ನು ಮಾರುವುದರಲ್ಲಿ ನಿರತರಾಗಿದ್ದಾರೆ. ಆದರೆ ಮೂರಕ್ಕಿಗಳು ಮತ್ತು ರುಮೇನಿಯನ್ನರು ಮಾತ್ರ ವಲಸಿಗರಿಗೆಲ್ಲಾ ಕೆಟ್ಟ ಹೆಸರು ತರುತ್ತಿದ್ದಾರೆ. ಬಾರ್ಸಿಲೋನಾ ನಗರಕ್ಕೆ ಬರುವ ಪ್ರವಾಸಿಗಳು ದೃಷ್ಟಿ ಸ್ವಲ್ಪ ಅತಿತ್ತವಾದರೂ ಸಾಕು ಕ್ಷಣದಲ್ಲಿ ಅವರ ಬಳಿ ಇದ್ದ , ಬ್ಯಾಗ್ ಮತ್ತಿತರೇ ಬೆಲೆಬಾಳುವ ವಸ್ತುಗಳನ್ನ ಕದ್ದು ಬಿಡುತ್ತಾರೆ.

ಜನ ದಟ್ಟಣೆಯಿರುವ ರಸ್ತೆಗಳು ಮೆಟ್ರೋ, ಬಸ್‌ಗಳು ಇವರ ಕೆಲಸವನ್ನ ಸುಲಭ ಮಾಡುತ್ತವೆ. ಎಲ್ಲವನ್ನೂ ಕಳೆದುಕೊಂಡ ಪ್ರವಾಸಿಗರ ಮುಖಭಾವ, ಅವರ ನೋವು, ಇಡೀ ಪ್ರವಾಸವನ್ನೇ ಹಾಳು ಮಾಡಿದ ಕೆಟ್ಟ ಅನುಭವವನ್ನ ವಿವರಿಸುವುದು ಹೇಗೆ? ನೀವು ಪ್ಯಾರೀಸ್, ಬಾರ್ಸಿಲೋನಾ, ಇಟಲಿಯ ಹಲವು ನಗರಗಳಿಗೆ ಪ್ರವಾಸ ಹೋಗುವರಿದ್ದರೆ ಹುಷಾರು, ಏಕೆಂದರೆ ನೀವೆಂದುಕೊಂಡಂತೆ ಇಲ್ಲಿ ಎಲ್ಲವೂ ಸರಿಯಿಲ್ಲ . ಪಿಕ್ ಪಾಕೆಟ್ ಇಲ್ಲಿ ಅತಿ ಸಾಮಾನ್ಯ.

ಎಲ್ಲಕ್ಕಿಂತ ಅತಿ ಹೆಚ್ಚು ಬೇಜಾರು ಮಾಡಿಸುವ ಸಂಗತಿ ಏನೆಂದರೆ ನೀವು ಪೊಲೀಸು ಕಂಪ್ಲೇಂಟ್ ಕೊಡಲೇಬೇಕು ಇಲ್ಲದಿದ್ದರೆ ನಿಮ್ಮ ಕಳೆದು ಹೋದ ಪಾಸ್ಪೋರ್ಟ್ ಮತ್ತೆ ಮಾಡಿಸುವುದು ಹೇಗೆ ? ಇಲ್ಲಿನ ಪೊಲೀಸರು ಬಹಳ ಒಳ್ಳೆಯವರು ನಿಮಗೆ ಯಾವುದೇ ತರಹದ ಕೆಟ್ಟ ಅನುಭವವಾಗುವುದಿಲ್ಲ , ಆದರೆ ಇವರೆಷ್ಟು ಒಳ್ಳೆಯವರು ಎಂದರೆ ನಿತ್ಯದ ಗೋಳಾದ ಇಂತಹ ಕಳ್ಳರನ್ನ ಹಿಡಿಯಲು ಮತ್ತು ಅವರನ್ನ ದಂಡಿಸುವ ಕೆಲಸ ಮಾತ್ರ ಮಾಡುವುದಿಲ್ಲ.

ಈ ಕಳ್ಳರು ಬಹಳ ಬುದ್ದಿವಂತರು, ಕದ್ದ ಮರುಗಳಿಗೆಯಲ್ಲಿ ಅದು ಕೈಯಿಂದ ಕೈಗೆ ಬದಲಾಗುತ್ತಾ ಹೋಗುತ್ತದೆ. ಹೀಗಾಗಿ ಪ್ರವಾಸಿಗರು ಒಬ್ಬ ಕಳ್ಳನನ್ನ ಹಿಡಿದುಕೊಂಡರು ಕೂಡ ಅದರಿಂದ ಪ್ರಯೋಜನವಿಲ್ಲ, ಅವರ ಬಳಿ ಏನೂ ಸಿಕ್ಕುವುದಿಲ್ಲ.ಪೊಲೀಸರು ಕೂಡ ಇವರನ್ನ ಹೊಡೆಯುವುದು ಮಾಡುವುದಿಲ್ಲ. ಹೀಗಾಗಿ ಇವರದು ನಿತ್ಯ ಕಾಯಕ. ಪ್ರವಾಸಿಗಳಿಗೆ ಇದು ಅತ್ಯಂತ ದೊಡ್ಡ ತಲೆನೋವಿನ ವಿಷಯ.

ಹೀಗಾಗಿ ಬಾರ್ಸಿಲೋನಾ, ಪ್ಯಾರೀಸ್‌ನಂತಹ ದೊಡ್ಡ ಮತ್ತು ಹೆಸರುವಾಸಿ ನಗರಗಳನ್ನ ಭೇಟಿ ಮಾಡುವಾಗ ಸ್ವಲ್ಪ ಎಚ್ಚರವಿರಲಿ. ರುಮೇನಿಯನ್ನರು ಮತ್ತು ಮೊರೊಕ್ಕಿಗಳು ಇಂದಿಗೂ ಈ ಕಾಯಕದಲ್ಲಿ ಅಗ್ರಗಣ್ಯರು. ಇಲ್ಲಿಗೆ ಬಂದ ಹೊಸತರಲ್ಲಿ ಒಂದಷ್ಟು ಸಂಯಮದಿಂದ ವರ್ತಿಸುವ ವಲಸಿಗರು ದಿನಗಳೆದಂತೆ ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ತಲೆನೋವಾಗಿದ್ದಾರೆ. ಆದರೂ ಇಲ್ಲಿನ ಸರಕಾರ ಮತ್ತು ಜನತೆ ಇವರನ್ನ ಸಹಿಸಿಕೊಂಡಿದೆ.

ಮೊದಲ ಸಾಲುಗಳಲ್ಲಿ ಹೇಳಿದಂತೆ ಇಲ್ಲಿ ನಾನು ಯಾವುದಕ್ಕೂ ತೀರ್ಪನ್ನು ನೀಡಲು ಹೋಗುವುದಿಲ್ಲ. ಏಕೆಂದರೆ ನನಗೆ ಬಾರ್ಸಿಲೋನಾ ಜೀವನದಲ್ಲಿ ದೊರೆತ ದೊಡ್ಡ ಉಪಲಬ್ಡಿ ಅದೇ, ಯಾರನ್ನೂ, ಯಾವುದನ್ನೂ ಇಷ್ಟೇ ಎಂದು ತೀರ್ಪು ಕೊಡದೆ ಇರುವುದು, ಪ್ರತಿಯೊಬ್ಬರೂ ಅವರವರ ಜೀವನದ ಹಾದಿಯಲ್ಲಿ ಇರುತ್ತಾರೆ. ಅವರ ಹಾದಿಯಲ್ಲಿ ಹೂವಿದೆಯೋ, ಮುಳ್ಳಿದೆಯೋ ಬಲ್ಲವರಾರು? ಆದರೂ ವಲಸಿಗರು ತಾವು ವಲಸೆ ಬಂದ ನೆಲದ ಬಗ್ಗೆ ಗೌರವವಿಟ್ಟುಕೊಳ್ಳಬೇಕು.

ಅಲ್ಲಿನ ಸಂಸ್ಕೃತಿಯನ್ನು ಮತ್ತು ಅಲ್ಲಿನ ಬದುಕುವ ರೀತಿಯನ್ನು ತನ್ನದಾಗಿಕೊಳ್ಳಬೇಕು. ಅಷ್ಟಾದರೆ ಉಳಿದ ಬದುಕು ಕಟ್ಟುಕೊಳ್ಳುವುದು ಕಷ್ಟವೇನಲ್ಲ. ಹೇಳಿಕೇಳಿ ಸ್ಪ್ಯಾನಿಶರು ಬಹಳ ಉದಾರಿಗಳು.
ಇಡೀ ಯೂರೋಪಿನಲ್ಲೇ ಬಾರ್ಸಿಲೋನ ನಗರಕ್ಕೆ ವಿಚಿತ್ರ ಕಳೆಯಿದೆ. ಸಹಸ್ರಾರು ವರ್ಷಗಳ ಚರಿತ್ರೆ ಹೆಪ್ಪುಗಟ್ಟಿ ಈಗಲೂ ತನ್ನ ಮೂಲ ಬೇರುಗಳನ್ನು ಬಿಟ್ಟುಕೊಡದೆ ಹೊಸ ಜಗತ್ತಿನ ಬದಲಾವಣೆಗಳಿಗೆ ಸ್ಪಂದಿಸುತ್ತಿದೆ.

ಸಾಮ್ರಾಜ್ಯಶಾಹಿ ಧೋರಣೆಗಳನ್ನು ನೆನಪಿಸಿಕೊಳ್ಳುತ್ತಲೇ ವರ್ತಮಾನಕ್ಕೆ ಜಿಗಿಯುವ ಈ ನಗರಕ್ಕೆ ಮೆಡಿಟರೇನಿಯನ್ ಸಮುದ್ರ ಮೂಕಸಾಕ್ಷಿಯಾಗಿದೆ. ಅದರ ಕಿರುನಗೆಗೆ ತೆರೆದುಕೊಂಡಿದೆ ಬಾರ್ಸಿಲೋನ. ಸ್ಪೇನ್ ನಲ್ಲಿದ್ದರೂ ಕತಲುನ್ಯ ಭಾಷೆಯನ್ನು ಬಿಟ್ಟುಕೊಡದೆ, ಆಧುನಿಕ ವಿದ್ಯಮಾನಗಳಿಗೆ ಮುಖ ಮಾಡಿರುವ ಈ ನಗರವನ್ನು ಶತಶತಮಾನಗಳ ಕಾಲ ಮುಸ್ಲಿಮರು ಆಳಿದ್ದುಂಟು. ಆ ಸಂಸ್ಕೃತಿಯನ್ನು ಸಹಿಸುತ್ತಲೇ ದಾಪುಗಾಲು ಹಾಕುತ್ತ ನಗರ ಬೆಳೆಯಿತು.

ಸದ್ದಿಲ್ಲದೆ ಅನಾವರಣಗೊಳ್ಳುವ ಗೋತಿಕ್ ಶೈಲಿಯ ಚರ್ಚುಗಳಿದ್ದರೂ, ಕ್ಯಾಥೊಲಿಕ್ ಪಂಥದ ಭದ್ರ ಬುನಾದಿಯ ಮೇಲೆ ಬೆಳೆದಿದ್ದರೂ ಬಾರ್ಸಿಲೋನಿಯನ್ನರು ಲಿಬರಲ್ ಮನೋಭಾವದವರು. ಎಲ್ಲೆಲ್ಲೂ ಮ್ಯೂಸಿಯಂ, ಪಾರ್ಕು, ಶಿಲ್ಪಕಲೆಯಿಂದ ಹೊಸ ರೂಪ ಪಡೆದ ಈ ನಗರದಲ್ಲಿ ಪುತ್ಥಳಿಗಳೇ ರೂಪದರ್ಶಿಗಳಾಗಿ ಕಾಣುತ್ತವೆ. ಪಾದಚಾರಿಗಳೇ ಇಲ್ಲಿ ಗೌರವಾನ್ವಿತ ನಾಗರಿಕರು ಎಂದು ತೀರ್ಮಾನಿಸಿರುವ ಈ ನಗರ ನೂರು ಚದರ ಕಿಲೋ ಮೀಟರು ಹಬ್ಬಿರಬಹುದು ಅಷ್ಟೇ.

ಇನ್ನು ಜನಸಂಖ್ಯೆ ಹದಿನೇಳು ಲಕ್ಷ ಮೀರಿಲ್ಲ. ಅದ್ಭುತ ವಾಸ್ತುಶಿಲ್ಪಿ ಗೌದಿಯ ಕೈಯ್ಯಲ್ಲಿ ಅರಳಿರುವ ಕಲಾಕೃತಿಗಳೆಷ್ಟೊ? ಸಗ್ರದಾ ಫೆಮಿಲಿಯ ಎಂಬ ಸ್ಮಾರಕ ವರ್ಷಕ್ಕೆ ಇಪ್ಪತ್ತು ಲಕ್ಷ ಮಂದಿ ಪ್ರವಾಸಿಗಳನ್ನು ಸೆಳೆಯುತ್ತದೆ. ವಿಚಿತ್ರವೆಂದರೆ ಭಾರತದಿಂದ ಯೂರೋಪು ಪ್ರವಾಸ ಕೈಗೊಳ್ಳುವ ಬಹುತೇಕ ಪ್ರವಾಸಿಗರು ಸ್ಪೇನ್ ಹೊರತು ಉಳಿದೆಲ್ಲವನ್ನೂ ನೋಡುತ್ತಾರೆ. ಮಾವಿನಹಣ್ಣಿನ ತಿರುಳನ್ನಷ್ಟೇ ತಿಂದರೆ ಸಾಕೆ? ಓಟೆ ಚೀಪುವ ಅನುಭವ? ಬೇಡವೇ ?

English summary
Barcelona Memories Column By Rangaswamy Mookanahalli Part 74,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X