ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊಟ , ನೋಟ ,ಮೋಜಾಟ ಸ್ಪೇನ್ ಪ್ರವಾಸಿಗಳಿಗೆ ರಸದೂಟ !

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಜೀವಮಾನದಲ್ಲಿ ಸಾಧ್ಯವಾದರೆ ಸ್ಪೇನ್ ದೇಶವನ್ನ ಒಮ್ಮೆ ನೋಡಬೇಕು. ಅದಕ್ಕೆ ಕಾರಣಗಳು ಅನೇಕ. ವಯೋಮಾನಕ್ಕೆ ತಕ್ಕಹಾಗೆ ಅವರವರಿಗೆ ಬೇಕಾದ ಎಲ್ಲವನ್ನೂ ಸ್ಪೇನ್ ನೀಡುತ್ತದೆ. ಅದರಲ್ಲೂ ನೀವು ಇಪ್ಪತ್ತರಿಂದ ಮೂವತ್ತು ವರ್ಷದ ಆಸುಪಾಸಿನವರಾಗಿದ್ದರೆ ಇದು ಸ್ವರ್ಗ. ಸ್ಪೇನ್ ದೇಶದಲ್ಲಿನ 'ಇಬಿಸ' ಎನ್ನುವ ಐಲ್ಯಾಂಡ್ ಹೀಗೆ ಯುವಕ ಯುವತಿಯರು ನಡೆಸುವ ಪಾರ್ಟಿಗೆ ವಿಶ್ವ ಪ್ರಸಿದ್ಧ.

ಯೂರೋಪಿನ ಎಲ್ಲಾ ದೇಶಗಳಿಂದ , ಅಮೇರಿಕಾ , ಆಸ್ಟ್ರೇಲಿಯಾ , ನ್ಯೂಜಿಲ್ಯಾಂಡ್ ಹೀಗೆ ಜಗತ್ತಿನ ಎಲ್ಲಾ ಕಡೆಯಿಂದ ಯುವ ಜನತೆ ಇಲ್ಲಿಗೆ ಮೋಜು ಮಾಡಲು ಬರುತ್ತಾರೆ. ಅಂದಹಾಗೆ ಸ್ಪೇನ್ ನಲ್ಲಿ ಐದಾರು ಗ್ರಾಂ ತನಕ ಮಾರಿವನ ಎನ್ನುವ ಮಾದಕ ವಸ್ತುವನ್ನ ಕೊಳ್ಳುವುದು , ಸೇವಿಸುವುದು ಕಾನೂನು ಬದ್ಧವಾಗಿದೆ. ಹೀಗಾಗಿ ಇಲ್ಲಿ ಎಗ್ಗಿಲ್ಲದೆ ಎಲ್ಲೆಡೆಯಿಂದ ಕೇವಲ ತಿನ್ನುವುದಕ್ಕೆ , ಕುಡಿಯುವುದಕ್ಕೆ ಮತ್ತು ಮೋಜು ಮಾಡುವುದಕ್ಕೆ ಯುವ ಜನತೆ ಬಂದು ಸೇರುತ್ತಾರೆ.

ಇರುವುದೊಂದು ಜೀವನ ಅದನ್ನು ಖುಷಿಯಿಂದ ಕಳೆಯೋಣ ಎನ್ನುವುದು ಸ್ಪ್ಯಾನಿಷ್ ಜೀವನ ನಿಯಮ !ಇರುವುದೊಂದು ಜೀವನ ಅದನ್ನು ಖುಷಿಯಿಂದ ಕಳೆಯೋಣ ಎನ್ನುವುದು ಸ್ಪ್ಯಾನಿಷ್ ಜೀವನ ನಿಯಮ !

ಎಲ್ಲಿಗೆ ಹೊರಟೆ ಎಂದು ಯಾರಾದರೂ ಕೇಳಿದರೆ ಮತ್ತು ನಿಮ್ಮ ಉತ್ತರ ಸ್ಪೇನ್ , ಇಬಿಸ ಎಂದು ಹೇಳಿದರೆ , ಹುಬ್ಬೇರಿಸಿ , ಮಜಾ ಮಾಡಿ ಎಂದು ಹೇಳುವುದು ಖಚಿತ. ಊರು ಯಾವುದಾದರೂ ಆಗಿರಲಿ ಅದು ನನ್ನ ಜೀವನ ಶೈಲಿಯನ್ನ ಬದಲಿಸಲು ಆಗಿಲ್ಲ. ಪೀಣ್ಯ ಮನೆಯಲ್ಲಿದ್ದಾಗ ನೀರಿಗಾಗಿ ಪಟ್ಟ ಪರಿಪಾಟಲು ಒಂದೆರೆಡಲ್ಲ , ನೀರಿಗಾಗಿ ಬೆಳಿಗ್ಗೆ ನಾಲ್ಕು ಗಂಟೆಗೆ ಎದ್ದು ಅಭ್ಯಾಸವಾಗಿ ಹೋಗಿತ್ತು. ಹೀಗಾಗಿ ಅದು ಇಂದಿಗೂ ಮುಂದುವರಿದಿದೆ. ರಾತ್ರಿ ಒಂಬತ್ತು ಅಥವಾ ಒಂಬತ್ತುವೆರೆಗೆ ನಿದ್ದೆ .

Barcelona Memories Column By Rangaswamy Mookanahalli Part 72

ಹೀಗಾಗಿ ಯಾವುದೇ ದೇಶದಲ್ಲಿದ್ದರೂ ಅದೇ ನಿಯಮಾವಳಿಗಳನ್ನ ಪಾಲಿಸಿಕೊಂಡು ಬಂದಿದ್ದೇನೆ. ಒಂದು ಔನ್ಸ್ ಬಿಯರ್ ಕೂಡ ಕುಡಿಯದ , ಒಂದು ತುಂಡು ಮೊಟ್ಟೆ ತಿನ್ನದ , ರಾತ್ರಿ ಒಂಬತ್ತಕ್ಕೆ ನಿದ್ರಾದೇವಿಯ ತೆಕ್ಕೆಯಲ್ಲಿ ಪವಡಿಸುವ ನನ್ನಂತಹವರಿಗೆ ಇಬಿಸ ಅಲ್ಲವೇ ಅಲ್ಲ. ಅಲ್ಲಿನ ಬದುಕು ಶುರುವಾಗುವುದೇ ರಾತ್ರಿ ಹನ್ನೊಂದು ಗಂಟೆಯ ನಂತರ ! ಬೆಳಗ್ಗಿನ ಐದೂವರೆ ಅಥವಾ ಆರಕ್ಕೆ ಪಾರ್ಟಿ ಮುಗಿಯುತ್ತದೆ.

ಬೆಳಗಿನ ಜಾವ ಮೂರು ಅಥವಾ ನಾಲ್ಕರಿಂದ ಜನ ನಿಧಾನವಾಗಿ ಹೋಟೆಲ್ ರೂಮ್ ಸೇರಿಕೊಳ್ಳುತ್ತಾರೆ. ಹೆಚ್ಚು ದೈಹಿಕ ಶಕ್ತಿ ಇದ್ದವರು ಬೆಳಿಗ್ಗೆ ಆರರವರೆಗೆ ಪಾರ್ಟಿ ಮಾಡುತ್ತಲೆ ಇರುತ್ತಾರೆ. ನನಗೆ ಇಬಿಸ ಗೆ ಹೋಗಬೇಕು ಎನ್ನುವ ಮನಸ್ಸು ಇರಲಿಲ್ಲ. ಏಕೆಂದರೆ ಅಲ್ಲಿ ಬರಿ ಗಲಾಟೆ ಮತ್ತು ಗದ್ದಲ ಬಿಟ್ಟು ಬೇರೇನೂ ಇಲ್ಲ. ಹೀಗೆ ಯುವ ಜನತೆ ಸೇರಿದ ಮೇಲೆ ಮತ್ತು ಹೇಳಿಕೇಳಿ ಅದು ಮೋಜಿಗೆ ಪ್ರಸಿದ್ಧ ಎಂದ ಮೇಲೆ ಅಲ್ಲಿ ಹೊಡೆದಾಟ ಮತ್ತು ಕಿತ್ತಾಟ ಕೂಡ ಇದ್ದೆ ಇರುತ್ತದೆ.

ಹೀಗಾಗಿ ಈ ಎಲ್ಲಾ ಗದ್ದಲಗಳಿಂದ ನಾನು ಮಾರುದೂರ. ಹೀಗಿದ್ದೂ ಎರಡು ದಿನದ ಮಟ್ಟಿಗೆ ಅಲ್ಲಿ ವಾಸ ಮಾಡಿದ ಅನುಭವ ಮರೆಯುವಂತಿಲ್ಲ. ಸಾಮಾನ್ಯವಾಗಿ ಸ್ಪ್ಯಾನಿಶರು ಎಂದಲ್ಲ ಎಲ್ಲಾ ಯೂರೋಪಿಯನ್ನರು ಹದಿನಾರು ವರ್ಷದಿಂದ 30 ಅಥವಾ 35ವರ್ಷದ ವರೆಗೆ ಜೀವನ ಎಂದರೆ ಮೋಜಿಗಾಗಿ ಇರುವುದು ಎನ್ನುವಂತೆ ಕಳೆಯುತ್ತಾರೆ. ಎಲ್ಲರೂ ಅಂತಲ್ಲ ಬಹುತೇಕರು ಕಳೆಯುವುದು ಹೀಗೆ. ಜೀವನ ವೆಂದರೆ ಕುಣಿಯುವುದು , ಕುಡಿಯುವುದು ಮತ್ತು ತಿನ್ನುವುದು ಎನ್ನುವಂತೆ ಕಳೆಯುತ್ತಾರೆ.

ನಮ್ಮ ಹುಟ್ಟು ಹಬ್ಬಕ್ಕೆ ನಾವೇ ಪ್ರಾಯೋಜಕರು !!ನಮ್ಮ ಹುಟ್ಟು ಹಬ್ಬಕ್ಕೆ ನಾವೇ ಪ್ರಾಯೋಜಕರು !!

ಸಂಬಂಧಗಳ ಬಗ್ಗೆ ಕೂಡ ಸೀರಿಯಸ್ ಆಗಿರುವವರ ಸಂಖ್ಯೆ ಈ ವಯೋಮಾನದಲ್ಲಿ ಕಡಿಮೆ. ಇನ್ನೊಂದು ಇದೆ ರೀತಿ ಜರ್ಮನ್ ಮತ್ತು ಬ್ರಿಟಿಷ್ ಜನರಿಗೆ ಇಷ್ಟವಾದ ಮೋಜಿನ ತಾಣ ಯೋರೆತ್ ದೆ ಮಾರ್ . ಇಲ್ಲಿ ಕೂಡ ಸದಾ ಕಾಲ ಅಂದರೆ ಚಳಿಗಾಲ ಒಂದು ಬಿಟ್ಟು ಮಿಕ್ಕ ಸಮಯದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಇಬಿಸ ದಲ್ಲಿನ ಮಟ್ಟದ ಮೊಜಿಗಿಂತ ಒಂದಿಪತ್ತು ಪ್ರತಿಶತ ಕಡಿಮೆ ಎನ್ನಬಹುದು, ಮಿಕ್ಕಂತೆ ಉಳಿದೆಲ್ಲ ಇಲ್ಲೂ ಸೇಮ್ .

ಹೀಗಾಗಿ ಮೋಜನ್ನ ಬಯಸುವ ವಿಶ್ವದ ಎಲ್ಲೆಡೆಯಿಂದ ಇಂತಹ ಸ್ಥಳಕ್ಕೆ ಯುವ ಜನತೆ ಹಿಂಡುಹಿಂಡಾಗಿ ಬರುತ್ತಾರೆ. ಯೋರೆತ್ ದೆ ಮಾರ್ ನಲ್ಲಿ ಸಂಸಾರ ಸಮೇತ ಹಲವಾರು ತಿಂಗಳು ಕಳೆದಿದ್ದೇನೆ. ಅವರು ಮಾಡುವ ಯಾವುದನ್ನೂ ಮಾಡದೆ ನಮ್ಮದೇ ಆದ ಜೀವನವನ್ನ ಎಲ್ಲಿ ಬೇಕಾದರೂ ಕಟ್ಟಿ ಕೊಳ್ಳಬಹುದು ಎನ್ನುವುದನ್ನ ಅನುಭವಿಸಿ ಕಲಿತ್ತಿದ್ದೇನೆ. ಮೊದಲ ಸಾಲಿನಲ್ಲಿ ಸ್ಪೇನ್ ಗೆ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಸಾಧ್ಯವಾದರೆ ಭೇಟಿ ಕೊಡಬೇಕು ಎನ್ನುವ ಸಲಹೆಯನ್ನ ನೀಡಲು ನನ್ನ ಪ್ರಕಾರ ಕೆಲವು ಕಾರಣಗಳಿವೆ ಅವುಗಳನ್ನ ನಿಮಗಾಗಿ ಪಟ್ಟಿ ಮಾಡುತ್ತೇನೆ.

ರಾಹುಲ್ ಬಜಾಜ್ ಜೊತೆ ಕಳೆದದ್ದು 2 ದಿನ, ಕಲಿತದ್ದು ಅಗಾಧ!ರಾಹುಲ್ ಬಜಾಜ್ ಜೊತೆ ಕಳೆದದ್ದು 2 ದಿನ, ಕಲಿತದ್ದು ಅಗಾಧ!

ಫುಡ್ : ಸ್ಪ್ಯಾನಿಷ್ ಆಹಾರ ಜಗತ್ ವಿಖ್ಯಾತ. ಅದರಲ್ಲೂ ಸ್ಪ್ಯಾನಿಷ್ ತಾಪಸ್ , ಪಿಕಾಪಿಕಾ ಬಹಳ ಪ್ರಸಿದ್ಧವಾಗಿದೆ. ಭಾರತೀಯರಂತೆ ಇಲ್ಲಿ ಕೂಡ ಹಲವಾರು ರೀತಿಯ ಖಾದ್ಯಗಳನ್ನ ತಯಾರಿಸುತ್ತಾರೆ. ಇಷ್ಟು ರೀತಿಯ ಆಹಾರ ಯೂರೋಪಿನ ಇತರ ನಗರಗಳಲ್ಲಿ ಅಥವಾ ದೇಶಗಳಲ್ಲಿ ಕಾಣಲು ಸಾಧ್ಯವಿಲ್ಲ. ಅಲ್ಲದೆ ಯೂರೋಪಿನ ಇತರ ನಗರಗಳಿಗೆ ಹೋಲಿಸಿದರೆ ಸ್ಪೇನ್ ನ ಯಾವುದೇ ನಗರವೂ ಅಷ್ಟೊಂದು ದುಬಾರಿಯಲ್ಲ. ಆಹಾರದ ಗುಣಮಟ್ಟದ ಮುಂದೆ ನಾವು ನೀಡುವ ಹಣ ಏನೂ ಅಲ್ಲ ಎನ್ನಿಸುತ್ತದೆ.

ವೈನ್ : ಸ್ಪೇನ್ ದೇಶದಲ್ಲಿ ತಯಾರಾಗುವ ವೈನ್ ವಿಶ್ವಮಾನ್ಯತೆ ಪಡೆದಿದೆ. ಇಲ್ಲಿ ವೈನ್ ಟೂರಿಸಂ ಎನ್ನುವುದು ಕೂಡ ಪ್ರಸಿದ್ಧವಾಗಿದೆ. ಇಲ್ಲಿನ ಹಳ್ಳಿ ಪ್ರದೇಶದಲ್ಲಿನ ಜೀವನ ಶೈಲಿಗೆ ಮರುಳಾಗದವರೇ ಕಡಿಮೆ.

ಬೀಚುಗಳು : ಬೀಚುಗಳು ಎಂದ ತಕ್ಷಣ ನಿಮಗೆ ಕೆರೆಬಿಯನ್ ಬೀಚುಗಳು ನೆನಪಿಗೆ ಬರುತ್ತದೆ ಅಲ್ಲವೇ ? ಅದು ಸತ್ಯ ಕೂಡ . ಹಾಗೆಯೇ ಸ್ಪೇನ್ ದೇಶದ ಬೀಚುಗಳು ಕೂಡ ವಿಶ್ವಮಾನ್ಯ. ಕೋಸ್ಟಾ ಬ್ರಾವಾ ವನ್ನ ಸ್ಪೇನ್ ದೇಶದ ಬೀಚುಗಳ ಮುಕುಟಮಣಿ ಎಂದು ಕರೆಯಲಾಗುತ್ತದೆ . ಅಲ್ಲಿನ ಪ್ರಕೃತ್ತಿ ಸೌಂದರ್ಯವನ್ನ ಅನುಭವಿಸಿಯೇ ತಿರಬೇಕು. ಅಲ್ಲದೆ ಸ್ಪೇನ್ ನ ಹಲವಾರು ಬೀಚುಗಳು ನ್ಯೂಡ್ ಬೀಚುಗಳು. ಹೀಗಾಗಿ ವಿಶ್ವದಾದಂತ್ಯ ಜನ ಇಲ್ಲಿಗೆ ಬರುತ್ತಾರೆ.

ಸಾಮಾನ್ಯ ಬೀಚಿಗೂ ಮತ್ತು ನುಡಿ ಬೀಚಿಗೂ ಮಧ್ಯೆ ಗೆರೆಯೇನೂ ಎಳೆದಿರುವುದಿಲ್ಲ , ಹೀಗಾಗಿ ಸ್ವಲ್ಪ ದೂರದಿಂದ ಎಲ್ಲರಿಗೂ ಎಲ್ಲವೂ ಕಾಣುತ್ತಿರುತ್ತದೆ. ಹೀಗೆ ಅಪ್ಪ ಅಮ್ಮನನ್ನ ಬಾರ್ಸಿಲೋನಾ ಬೀಚಿಗೆ ಕರೆದುಕೊಂಡು ಹೋಗಿದ್ದೆ. ಹುಟ್ಟುಡುಗೆಯಲ್ಲಿದ್ದ ಅಲ್ಲಿನ ಜನರನ್ನ ಕಂಡು ಅಮ್ಮ ' ಪ್ರಾರಬ್ಧ ಮುಂಡೇದೆ ಇದೆಲ್ಲಿಗೆ ಕರೆದುಕೊಂಡು ಬಂದೆ ?' ಎಂದು ಗದರಿದ್ದಳು. ಆಮೇಲೆ ಅವರನ್ನ ಎಂದೆದಿಗೂ ಬೀಚಿಗೆ ಕರೆದುಕೊಂಡು ಹೋಗುವ ಸಾಹಸ ಮಾಡಲಿಲ್ಲ.

ಫೆಂಟಾಸ್ಟಿಕ್ ಫೀಯಸ್ತಾಸ್ : ಸ್ಪೇನ್ ನಲ್ಲಿ ಒಂದಲ್ಲ ಎರಡಲ್ಲ ಅನೇಕ ಹಬ್ಬಗಳಿವೆ , ಹಬ್ಬ ಎಂದ ತಕ್ಷಣ ಯಾವುದೋ ಧರ್ಮಕ್ಕೆ ಸಂಬಂಧ ಪಟ್ಟ ಆಚರಣೆ ಇರುತ್ತದೆ ಎನ್ನುವ ಭಾವನೆ ಬೇಡ. ಇವು ಫನ್ ಹಬ್ಬಗಳು , ಉದಾಹಣೆಗೆ ಗೂಳಿ ಓಟ ಅಥವಾ ಬುಲ್ ರನ್ , ತಮಾತಿನ (ಟೊಮೋಟಿನ ), ಕೊರ್ರೆ ಫೋಕ್ , ಹೀಗೆ ಧಾರ್ಮಿಕ ಹಬ್ಬಗಳ ಹೊರತು ಪಡಿಸಿ ಎಲ್ಲರೂ ಸೇರಿ ಕುಣಿಯಬಹುದಾದ ಹಬ್ಬಗಳಿಗೆ ಸ್ಪೇನ್ ನಲ್ಲಿ ಕೊರತೆಯಿಲ್ಲ.

ಇಲ್ಲೇನಿದ್ದರೂ , ಕೊಮೆರ್ , ಕಾಂತರ್ ಮತ್ತು ಬೈಲಾರ್ ಅಂದರೆ ತಿನ್ನುವುದು , ಹಾಡುವುದು ಮತ್ತು ಕುಣಿಯುವುದು ಮುಖ್ಯವಾಗುತ್ತದೆ. ಜಗತ್ತಿನ ಬೇರಾವ ಭಾದೆಗಳು ಇಲ್ಲಿ ಬಾಧಿಸುವುದಿಲ್ಲ ಎನ್ನುವ ಮಟ್ಟದಲ್ಲಿ ಮೋಜು ಮಾಡುತ್ತಾರೆ.

ಯುನೆಸ್ಕೋ ಹೆರಿಟೇಜ್ ಸ್ಥಳಗಳು : ಸ್ಪೇನ್ ದೇಶದಲ್ಲಿ ಒಟ್ಟು 45ಯುನೆಸ್ಕೋ ದಿಂದ ಮಾನ್ಯತೆ ಪಡೆದಿರುವ ಪ್ರೇಕ್ಷಣೀಯ ಸ್ಥಳಗಳಿವೆ. ಒಂದಕ್ಕಿಂತ ಒಂದನ್ನ ಜತನದಿಂದ ಕಾಯ್ದಿಟ್ಟಿದ್ದಾರೆ. ಜಗತ್ತಿನೆಲ್ಲೆಡೆ ಯಿಂದ ಜನ ಇವುಗಳ ವೀಕ್ಷಣೆಗೆ ಬರುತ್ತಾರೆ. ಫ್ರಾನ್ಸ್ ದೇಶದ ಪ್ಯಾರಿಸ್ ನಗರ ಮತ್ತು ಇಂಗ್ಲೆಂಡ್ ದೇಶದ ಲಂಡನ್ ನಂತರ ಯೂರೋಪಿನಲ್ಲಿ ಅತಿ ಹೆಚ್ಚು ಜನ ಭೇಟಿ ನೀಡಿರುವ ಜಾಗ ಎನ್ನುವ ಕೀರ್ತಿಗೂ ಬಾರ್ಸಿಲೋನಾ ಭಾಜನವಾಗಿದೆ.
https://kannada.oneindia.com/column/rangaswamy/barcelona-memories-column-by-rangaswamy-mookanahalli-part-69-rahul-bajaj-247702.html

ಫುಟಬಾಲ್ : ಬಾರ್ಸಿಲೋನಾ ಫುಟಬಾಲ್ ಕ್ಲಬ್ ಮತ್ತು ರಿಯಲ್ ಮ್ಯಾಡ್ರಿಡ್ ಫುಟ್ ಬಾಲ್ ಕ್ಲಬ್ ನಡುವಿನ ಆಟ ಅದು ಆಟವಲ್ಲ ಕದನ ಎನ್ನುವಂತಿರುತ್ತದೆ. ಸ್ಟೇಡಿಯಂ ನಲ್ಲಿನ ವಾತಾವರಣ ಕೂಡ ಭಾರತ ಮತ್ತು ಪಾಕಿಸ್ತಾನದ ನಡುವಿನ ಆಟದ ನೆನಪನ್ನ ತರಿಸುವಂತಿರುತ್ತದೆ. ಈ ಭಾಗದಲ್ಲಿ ಕ್ರಿಕೆಟ್ ಮತ್ತು ಇಂಗ್ಲಿಷ್ ಎರಡಕ್ಕೂ ಕವಡೆ ಕಿಮ್ಮತ್ತು ಇಲ್ಲ. ಇಲ್ಲಿ ಏನಿದ್ದರೂ ಅವರ ಭಾಷೆ ಅವರಿಗೆ ದೊಡ್ಡದು. ಇನ್ನು ಕ್ರಿಕೆಟ್ ಇಲ್ಲಿನ ಆಡುವುದೇ ಇಲ್ಲ. ಫುಟಬಾಲ್ ಇಲ್ಲಿನ ಪ್ರಮುಖ ಕ್ರೀಡೆ.

ವಿಶ್ವವಿಖ್ಯಾತ ಪ್ರವಾಸಿ ತಾಣಗಳು : ಸ್ಪೇನ್ ದೇಶದಲ್ಲಿ ಟೆನೆರಿಫ್ ಎನ್ನುವ ದ್ವೀಪವಿದೆ , ಇಬಿಸ ದ್ವೀಪವಿದೆ. ಮಯೋರ್ಕ , ಮೆನೊರ್ಕ , ಬಾರ್ಸಿಲೋನಾ , ಗ್ರನಾದ , ಅಲಿಕಾಂತೆ , ವಾಲೆನ್ಸಿಯಾ , ಮ್ಯಾಡ್ರಿಡ್ , ಬಿಲ್ಬಾವ್ ಹೀಗೆ ವಿಖ್ಯಾತ ಸ್ಥಳಗಳ ಪಟ್ಟಿ ಬಹಳ ದೊಡ್ಡದಿದೆ. ಪ್ರತಿ ನಗರದಲ್ಲೂ ವಾರಗಟ್ಟಲೆ ಕಳೆಯಬಹುದಾದ ಅಂದರೆ ನೋಡಲು ಅಷ್ಟು ಸ್ಥಳಗಳಿವೆ. ಸ್ಪೇನ್ ದೇಶ ಪೂರ್ತಿ ಇಂಚಿಂಚೂ ನೋಡಲು ಅರ್ಹ ಸ್ಥಳಗಳಿಂದ ತುಂಬಿದೆ ಎಂದರೆ ಅದು ಅತಿಶಯೋಕ್ತಿ ಎನ್ನಿಸಿಕೊಳ್ಳುವುದಿಲ್ಲ.

ಇವೆಲ್ಲಕ್ಕಿಂತ ಅತ್ಯಂತ ಮುಖ್ಯವಾದ ಇನ್ನೊಂದು ಕಾರಣ ಇಲ್ಲಿನ ಜನ . ಹೌದು ಇಲ್ಲಿನ ಜನ ಬಹಳ ಒಳ್ಳೆಯವರು. ಅಲ್ಪಸ್ವಲ್ಪ ಸ್ಪ್ಯಾನಿಷ್ ಮಾತನಾಡಿದರೂ ಸಾಕು ನಮ್ಮವನು ಎಂದು ಅಪ್ಪಿಕೊಳ್ಳುವ ಮನೋಭಾವದವರು. ಸ್ಪೇನ್ ನಲ್ಲಿ ಕಳೆದ ಒಂದೂವರೆ ದಶಕಕ್ಕೂ ಮೀರಿದ ವೇಳೆಯಲ್ಲಿ ನನಗೆ ರೇಸಿಸಂ ಕಾಡಿದ್ದು ಇಲ್ಲವೇ ಇಲ್ಲ ಎನ್ನಬಹುದು. ಆದ್ರೆ ಪಕ್ಕದಲ್ಲೇ ಇರುವ ಇಂಗ್ಲೆಂಡ್ ನಲ್ಲಿ ಒಂದಲ್ಲ ಹಲವಾರು ಬಾರಿ ನಾನು ರೇಸಿಸಂ ಕಣ್ಣಾರೆ ಕಂಡಿದ್ದೇನೆ.

ಟೀನ್ ಏಜ್ ಹುಡುಗ ಹುಡುಗಿಯರ ಗುಂಪು , ಅಂದರೆ 8 ರಿಂದ ಹತ್ತು ಜನರ ಗುಂಪು ಯಾವಾಗ ನಿಮ್ಮ ಮೇಲೆ ಅಟ್ಯಾಕ್ ಮಾಡುತ್ತದೆ ಹೇಳಲು ಬಾರದು. ವಿದ್ಯೆಗೆ ನೇವೇದ್ಯ ಹೇಳಿರುವ ಇಂತಹ ಮಕ್ಕಳಿಂದ ಬೇರೇನೂ ನಿರೀಕ್ಷಿಸಲು ಸಾಧ್ಯವಿಲ್ಲ. ಇಂಗ್ಲೆಂಡ್ ನ ರಸ್ತೆಗಳಲ್ಲಿ ಒಂದಲ್ಲ ಹತ್ತಾರು ಬಾರಿ ಯು ಬ್ಲ .. ಇಂಡಿಯನ್ ಎಂದು ಕಿರುಚಿ ನಾವು ತಿರುಗಿ ನೋಡುವ ಮುಂಚೆ ಏನೂ ಆಗದಂತೆ ಸಾಗಿ ಹೋಗುವ ಜನರನ್ನ ಕಂಡಿದ್ದೇನೆ. ನೇರಾನೇರಾ ನೀವು ಬಂದು ನಮ್ಮ ಉದ್ಯೋಗ , ಬದುಕು ಕಸಿದು ಬಿಟ್ಟಿರಿ ಎನ್ನುವ ಆರೋಪವನ್ನ ಕೂಡ ಕೇಳಿದ್ದೇನೆ.

ಆ ಕಾರಣಕ್ಕೆ ಮತ್ತು ಅಲ್ಲಿನ ಸದಾ ಮೋಡ ಕವಿದ ವಾತಾವರಣದ ಕಾರಣ ಇಂಗ್ಲೆಂಡ್ ಎಂದರೆ ನನ್ನ ಮಟ್ಟಿಗೆ ಅಷ್ಟಕಷ್ಟೇ. ಇಂತಹ ಕೆಟ್ಟ ಅನುಭವ ನನಗೆ ಬಾರ್ಸಿಲೋನಾ ದಲ್ಲಿ ಆಗಲೇ ಇಲ್ಲ. ಇಲ್ಲಿನ ಜನ ಪ್ರವಾಸಿಗರನ್ನ ಕೂಡ ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ.

ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಸೌಂದರ್ಯ ಇದ್ದೆ ಇರುತ್ತದೆ. ನಾವೇಕೆ ಅಲ್ಲಿಗೆ ಹೋಗಬೇಕು ಎನ್ನುವುದಕ್ಕೆ ಸಬಲ ಕಾರಣಗಳು ಇರುತ್ತವೆ. ಒಳ್ಳೆಯದು ಮತ್ತು ಕೆಟ್ಟದ್ದು ಎರಡೂ ಇದ್ದೆ ಇರುತ್ತದೆ. ಒಳಿತನ್ನ ತನ್ನದಾಗಿಸಿಕೊಳ್ಳುತ್ತಾ , ಕೆಟ್ಟದನ್ನ ಬಿಟ್ಟು ಮುಂದೆ ಸಾಗುವ ಪ್ರಯಾಣವೇ ಬದುಕು. ಅಂತಹ ಬದುಕು ನಮ್ಮದಾಗಲಿ.

English summary
Barcelona Memories Column By Rangaswamy Mookanahalli Part 72,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X