India
 • search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರುವುದೊಂದು ಜೀವನ ಅದನ್ನು ಖುಷಿಯಿಂದ ಕಳೆಯೋಣ ಎನ್ನುವುದು ಸ್ಪ್ಯಾನಿಷ್ ಜೀವನ ನಿಯಮ !

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಯುದ್ಧ ಯಾರಿಗೆ ಬೇಕು ಹೇಳಿ? ಹೌದು ಯುದ್ಧ ಜಗತ್ತಿನಲ್ಲಿ 99.99 ಪ್ರತಿಶತ ಜನರಿಗೆ ಬೇಡದ ವಿಷಯ. ಆದರೆ ಆ ಉಳಿದ .001 ಪ್ರತಿಶತ ಜನರಿದ್ದಾರಲ್ಲ ಅವರು ಮಹತ್ವಕಾಂಕ್ಷಿಗಳು. ಜಗತ್ತನ್ನ ತಮ್ಮ ಕಪಿ ಮುಷ್ಟಿಯಲ್ಲಿ ಇಟ್ಟು ಕೊಳ್ಳಬೇಕು ಎನ್ನುವ ಹಂಬಲದವರು. ಅವರ ವಿಷಯವನ್ನು ಬದಿಗಿಟ್ಟು ನೋಡಿದರೆ ಜಗತ್ತಿನ ಉಳಿದೆಲ್ಲಾ ಜನರ ಭಾವನೆ ಮುಕ್ಕಾಲು ಪಾಲು ಒಂದೇ ಇದೆ. ಅವರಿಗೆ ಬೇಕಿರುವುದು ಒಂದು ಶಾಂತಿಯುತ, ಉತ್ತಮ ಗುಣಮಟ್ಟದ ಜೀವನ.

ಯುದ್ಧದ ಸಮಯದಲ್ಲಿ ಮಾತ್ರ ಜನರ ಜೀವನ ಅಸ್ತವ್ಯಸ್ತವಾಗುತ್ತದೆ ಎಂದು ನೀವೆಂದು ಕೊಂಡಿದ್ದರೆ ಅದು ಪೂರ್ಣ ಸತ್ಯವಲ್ಲ. ಮುಂದುವರೆದ ದೇಶಗಳಲ್ಲಿ ಎಲ್ಲಕ್ಕೂ ಹೆಚ್ಚಿನ ಬೆಲೆಯನ್ನ ತೆರಬೇಕಾಗುತ್ತದೆ. ಹೀಗಾಗಿ ಜಗತ್ತಿನಲ್ಲಿ ಆಗುತ್ತೆ ಸಣ್ಣ ಪುಟ್ಟ ವ್ಯತ್ಯಾಸಗಳು ಜನ ಸಾಮಾನ್ಯನ ಬದುಕಿಗೆ ಹೆಚ್ಚಿನ ಹೊಡೆತವನ್ನ ನೀಡುತ್ತದೆ. ಬಹುಪಾಲು ಜನರಿಗೆ ಯೂರೋಪ್ ಎಂದರೆ ಅದೊಂದು ಸ್ವರ್ಗ ಎನ್ನುವ ಭಾವನೆಯಿದೆ, ಅದು ನಿಜ.

 ನಮ್ಮ ಹುಟ್ಟು ಹಬ್ಬಕ್ಕೆ ನಾವೇ ಪ್ರಾಯೋಜಕರು !! ನಮ್ಮ ಹುಟ್ಟು ಹಬ್ಬಕ್ಕೆ ನಾವೇ ಪ್ರಾಯೋಜಕರು !!

ಜೋಬಿನ ತುಂಬಾ ಹಣವನನು ತುಂಬಿಕೊಂಡು ಪ್ರವಾಸಿಗರಾಗಿ ಹೋದಾಗ ಅದು ನಿಜಕ್ಕೂ ಸ್ವರ್ಗದಂತೆ ಕಂಡರೆ ಮತ್ತು ಪ್ರವಾಸಿಗರು ಅದನ್ನ ನಿಜವೆಂದು ನಂಬಿದರೆ ಅದರಲ್ಲಿ ಅವರ ತಪ್ಪು ಹೆಚ್ಚೇನೂ ಇಲ್ಲ ಎನ್ನಬಹುದು. ವಾಸ್ತವದಲ್ಲಿ ಇಲ್ಲಿ ಹಿರಿಯ ನಾಗರಿಕರ ಸಂಖ್ಯೆ ಬಹಳ ಹೆಚ್ಚಾಗುತ್ತಿದೆ. ಸಾಮಾನ್ಯ ಪಿಂಚಣಿದಾರನಿಗೆ ಸಿಗುವ ಪಿಂಚಣಿ ಹೊಟ್ಟೆಗಾದರೆ ಬಟ್ಟೆಗಿಲ್ಲ, ಬಟ್ಟೆಗಾದರೆ ಹೊಟ್ಟೆಗಿಲ್ಲ ಎನ್ನುವಂತಿದೆ.

ಬಾರ್ಸಿಲೋನಾ ಮಹಾನಗರದಲ್ಲಿ ಕಸದ ಬುಟ್ಟಿಯಲ್ಲಿ ಅವರಿವರು ಎಸೆದಿರುವ ಆಹಾರವನ್ನ ಹೆಕ್ಕುವ ಬಹಳಷ್ಟು ಹಿರಿಯ ನಾಗರೀಕರನ್ನು ಕಂಡ ಅನುಭವ ನನ್ನದು. ಈ ರೀತಿಯ ಬಡತನ ಅನುಭವಿಸುತ್ತಿರುವ ಜನರ ಸಂಖ್ಯೆ ಒಂದೆಡೆಯಾದರೆ, ಹೊಟ್ಟೆಬಟ್ಟೆಗೆ ಅಷ್ಟೊಂದು ತತ್ವಾರವಿಲ್ಲದ ಇನ್ನೊಂದು ವರ್ಗವಿದೆ. ಆದರೆ ಈ ವರ್ಗದ ಬಡತನವನ್ನು ನೀವು ಚಳಿಗಾಲದಲ್ಲಿ ಕಾಣ ಬಹುದು. ಅಂದರೆ ಗಮನಿಸಿ ಚಳಿಗಾಲದಲ್ಲಿ ಪೂರ್ಣ ದಿನ ಮನೆಯಲ್ಲಿ ಉಳಿದುಕೊಂಡರೆ ಚಳಿ ತಡೆಯಲಾಗದೆ ಹೀಟರ್ ಹಾಕಬೇಕಾಗುತ್ತದೆ. ರಾತ್ರಿ ಬೇರೆ ದಾರಿಯಿಲ್ಲ.

ಆದರೆ ದಿನದಲ್ಲಿ ಕೂಡ ಹೀಟರ್ ಹಾಕಿದರೆ 300/350 ಯುರೋ ಎಲೆಕ್ಟ್ರಿಸಿಟಿ ಬಿಲ್ ಮಾಸಿಕ ಬರುವುದು ಗ್ಯಾರಂಟಿ. ಒಬ್ಬ ಹೆಚ್ಚಿನ ಸಂಬಳಕ್ಕೆ ಕೆಲಸ ಮಾಡದ ಅತಿ ಸಾಧಾರಣ ವ್ಯಕ್ತಿಗೆ ಬರುವ ಪೆನ್ಷನ್ 450 ರಿಂದ 600 ಯುರೋ ಮಾಸಿಕ, ಇದರಲ್ಲಿ 350 ಎಲೆಕ್ಟ್ರಿಸಿಟಿ ಬಿಲ್ ಕಟ್ಟಿದರೆ ತಿನ್ನುವುದೇನು? ಬೇರೆ ಖರ್ಚುಗಳ ಬಾಬತ್ತು ನಿಭಾಯಿಸುವುದು ಹೇಗೆ? ಹೀಗಾಗಿ ಇಲ್ಲಿನ ಹಿರಿಯ ನಾಗರಿಕರು ಒಂದು ವಿಧಾನವನ್ನ ಕಂಡು ಕೊಂಡಿದ್ದಾರೆ. ನೀವು ಯಾವುದೇ ದೊಡ್ಡ ಮಾಲ್‌ಗಳಲ್ಲಿ ಹೋಗಿ ಅಲ್ಲೆಲ್ಲಾ ನಿಧಾನವಾಗಿ ಅತ್ತಿತ್ತ ಸುತ್ತಾಡುವ ಹಿರಿಯ ನಾಗರಿಕರ ದಂಡು ಕಾಣಬಹುದು.

ಹೇಗಾದರೂ ಮಾಡಿ ದಿನದಲ್ಲಿನ ಎಂಟತ್ತು ಗಂಟೆ ಹೊರಗಡೆ ಕಳೆಯಬೇಕು ಎನ್ನುವ ದರ್ದಿಗೆ ಇವರು ಬಿದ್ದಿರುತ್ತಾರೆ. ಹೀಗೆ ಅಚ್ಚುಕಟ್ಟಾಗಿ ಸೂಟ್‌ನಲ್ಲಿ ಓಡಾಡುವ ಹಿರಿಯ ನಾಗರಿಕರ ಹಿಂದೆ ಇರುವ ಈ ಕರಾಳ ಬಡತನದ ಛಾಯೆ ಹೊರಗಿನವರಿಗೆ ತಿಳಿಯುವುದಿಲ್ಲ. ಖುಷಿಗೆ ಒಂದೆರೆಡು ದಿನ ಮಾಲ್‌ನಲ್ಲಿ ಸುತ್ತಾಡುವುದಕ್ಕೂ ವರ್ಷದ 8 ತಿಂಗಳು ಕಾಡುವ ಚಳಿಯಿಂದ ಬಚಾವಾಗುವ ಕಾರಣಕ್ಕೆ ಮಾಲ್ ನಲ್ಲಿ ಸುತ್ತಾಡುವುದಕ್ಕೂ ಬಹಳ ವ್ಯತ್ಯಾಸವಿದೆ.

ಯುದ್ಧದ ವಿಷಯ ಹೇಳುತ್ತಾ ಇದೇನಿದು ಬಾರ್ಸಿಲೋನಾದಲ್ಲಿನ ಹಿರಿಯ ನಾಗರಿಕರ ವಿದ್ಯುದ್ಛಕ್ತಿ ಬಡತನದ ಬಗ್ಗೆ ಹೇಳಲು ಕಾರಣವಿದೆ. ಮೇಲೆ ಹೇಳಿದ ಸ್ಥಿತಿ ಸಾಮಾನ್ಯ ದಿನಗಳದ್ದು ಯುದ್ಧದ ಸಮಯದಲ್ಲಿ ಬೆಲೆ ಏರಿಕೆಯಾಗುತ್ತದೆ. ಜಗತ್ತಿನಾದ್ಯಂತ ಸಾಮಾನ್ಯ ಜನರ ಬದುಕು ಬಹಳ ಕಷ್ಟವಾಗುತ್ತದೆ. ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಹವಾಮಾನ ಬದುಕಿಗೆ ಬಹಳ ಪೂರಕವಾಗಿದೆ. ಹೀಗಾಗಿ ವರ್ಷದ ಹನ್ನೆರೆಡು ತಿಂಗಳು ನಾವು ಬಿಡುಬೀಸಾಗಿ ಓಡಾಡಿಕೊಂಡಿರಬಹುದು.

 ರಾಹುಲ್ ಬಜಾಜ್ ಜೊತೆ ಕಳೆದದ್ದು 2 ದಿನ, ಕಲಿತದ್ದು ಅಗಾಧ! ರಾಹುಲ್ ಬಜಾಜ್ ಜೊತೆ ಕಳೆದದ್ದು 2 ದಿನ, ಕಲಿತದ್ದು ಅಗಾಧ!

ರಾಗಿಮುದ್ದೆ, ಗೊಜ್ಜು ತಿಂದು ದಿನ ಕಳೆದುಬಿಡಬಹುದು. ಇಲ್ಲಿ ಕಾಸ್ಟ್ ಆಫ್ ಲಿವಿಂಗ್ ಅಂದರೆ ಬದುಕಲು ಬೇಕಾಗುವ ಹಣ ಬಹಳ ಕಡಿಮೆ. ಯೂರೋಪಿನಲ್ಲಿ ಹೊಟ್ಟೆಗೆ ಊಟವಿಲ್ಲದಿದ್ದರೂ ಬಟ್ಟೆಯ ಮೇಲೆ ಸೆಂಟ್ ಸಿಂಪಡಿಸುವುದು ಮಾತ್ರ ತಪ್ಪಿಸುವಂತಿಲ್ಲ. ನನಗಿನ್ನೂ ಚನ್ನಾಗಿ ನೆನಪಿದೆ 2014ರ ಫೆಬ್ರವರಿಯಲ್ಲಿ ಉಕ್ರೇನ್ ದೇಶದ ಕ್ರಿಮಿಯಾ ಎನ್ನುವ ಜಾಗವನ್ನು ಆಕ್ರಮಿಸಿಕೊಳ್ಳುತ್ತದೆ. ಅಂದಿಗೆ ಇದು ಬಹು ದೊಡ್ಡ ಅಂತಾರಾಷ್ಟ್ರೀಯ ಸುದ್ದಿಯಾಗಲಿಲ್ಲ.

ಅಂದರೆ ಇಂದಿನ ಮಟ್ಟದ ಸುದ್ದಿಯಾಗಲಿಲ್ಲ , ಮಾರ್ಚ್ ತಿಂಗಳಲ್ಲಿ ಅದನ್ನ ರಷ್ಯಾದ ಭಾಗ ಎಂದು ಕೂಡ ಹೇಳಿಕೊಂಡಿತು. ನಿಮಗೆಲ್ಲಾ ಗೊತ್ತಿರಲಿ ರಷ್ಯಾದ ಮೂಲಕ ಬರುವ ಆಯಿಲ್ ಅಂಡ್ ಗ್ಯಾಸ್ ನಾಲ್ಕು ದಿನ ಬರದೇ ನಿಂತು ಹೋದರೆ ಅರ್ಧ ಯೂರೋಪು ಚಳಿಯಲ್ಲಿ ಸತ್ತು ಹೋಗುತ್ತದೆ. ಇಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ ಜೀವನ ನಡೆಸಲು ಕೂಡ ಹೆಚ್ಚಿನ ಹಣದ ಅವಶ್ಯಕತೆಯಿದೆ. ಇಲ್ಲಿ ಕಾಸ್ಟ್ ಆಫ್ ಲಿವಿಂಗ್ ಬಹಳ ಹೆಚ್ಚು. ಸಾಮಾನ್ಯನ ಬದುಕು ಕೂಡ ಇಲ್ಲಿ ದುಬಾರಿ.

ಅಂದಿನ ದಿನಗಳಲ್ಲಿ ಉಂಟಾದ ಅವ್ಯವಸ್ಥೆ ಯೂರೋಪಿನ ಜನರ ಬದುಕನ್ನ ಎಷ್ಟರಮಟ್ಟಿಗೆ ತಲ್ಲಣಕ್ಕೆ ತಳ್ಳಿತ್ತು ಎನ್ನುವುದನ್ನ ಪ್ರತ್ಯಕ್ಷ ಕಂಡ ಅನುಭವ ಇನ್ನೂ ಮಸ್ತಕದಲ್ಲಿ ಹಾಗೆ ಇದೆ. ಈಗ ಇನ್ನೊಂದು ಯುದ್ಧದ ಸನ್ನಿವೇಶದಲ್ಲಿ ನಾವಿದ್ದೇವೆ. ಯಾರೋ ಒಂದಿಬ್ಬರು ತೆಗೆದುಕೊಳ್ಳುವ ನಿರ್ಧಾರಕ್ಕೆ ಜಗತ್ತಿನ ಬಹಳಷ್ಟು ಮಂದಿಯ ಜೀವನ , ಬದುಕುವ ರೀತಿ ಬದಲಾಗುವುದು ಮಾತ್ರ ಸಹಿಸಿಕೊಳ್ಳುವುದು ಕಷ್ಟ.

ಮೊದಲೇ ಹೇಳಿದಂತೆ ಸಾಮಾನ್ಯ ದಿನದಲ್ಲಿ ಯೂರೋಪಿನ ಬಹಳಷ್ಟು ಮನೆಗಳಲ್ಲಿ ಎನರ್ಜಿ ಕೊರತೆಯಿದೆ. ಅಂದರೆ ಎನರ್ಜಿ, ಎಲೆಕ್ರಿಸಿಟಿ ಬಹಳವಿದೆ ಆದರೆ ಅದನ್ನ ಕೊಳ್ಳುವ ಶಕ್ತಿ ಇವರಿಗಿಲ್ಲ , ಇಂತಹ ಸನ್ನಿವೇಶವನ್ನ ಇಲ್ಲಿ 'ಪೊಬ್ರೇಸ ಏನೇರ್ಜೆಟಿಕ' ಎಂದು ಕರೆಯುತ್ತಾರೆ. ಹೊರಗಿನಿಂದ ನಿಂತು ನೋಡಿದಾಗ ಅಥವಾ ಪ್ರವಾಸಿಗರಾಗಿ ಬಂದು ನೋಡಿದಾಗ ಕಾಣದ ನಗ್ನ ಸತ್ಯ ಇಲ್ಲಿ ಬದುಕಲು ಶುರು ಮಾಡಿದಾಗ ಅನಾವರಣವಾಗುತ್ತ ಹೋಗುತ್ತದೆ.

ಇನ್ನು ಯುದ್ಧದ ಇನ್ನೊಂದು ಕರಾಳ ಸತ್ಯವನ್ನ ಕೂಡ ಹೇಳುತ್ತೇನೆ. ಇಂತಹ ವಿಷಯಗಳನ್ನ ಕೂಡ ಇಲ್ಲಿನ ಸಮಾಜದಲ್ಲಿ ನೇರವಾಗಿ ಕಂಡ ಅನುಭವ ನನ್ನದು. ಯುಎಸ್ಎಸ್ಆರ್ ಪತನವಾಗಿ ಅಲ್ಲಿದ್ದ 15ರಾಜ್ಯಗಳು ದೇಶಗಳಾಗಿ ಬದಲಾಗಿ ಹೋದವು. ಹೀಗೆ ರಷ್ಯಾದಿಂದ ಬೇರ್ಪಟ್ಟ ದೇಶಗಳಲ್ಲಿ ಉಕ್ರೇನ್ ಅತಿ ದೊಡ್ಡ ದೇಶ. ಅಂದಿನ ದಿನದಲ್ಲಿ ಆರ್ಥಿಕವಾಗಿ ಬಹಳಷ್ಟು ಜರ್ಜರಿತವಾಗಿದ್ದ ಈ ದೇಶಗಳ ಗಂಡು ಮಕ್ಕಳು ಯೂರೋಪು ಮತ್ತು ಜಗತ್ತಿನ ಇತರ ಭಾಗಗಳಿಗೆ ಕೂಲಿಗಳಾಗಿ ಕೆಲಸ ಅರಸಿ ಹೋಗುತ್ತಾರೆ.

ಹೆಣ್ಣು ಮಕ್ಕಳು ಕೂಡ ದೇಶ, ಮನೆ ಬಿಟ್ಟು ಹೊರಡುತ್ತಾರೆ. ಹೆಚ್ಚಿನ ವಿದ್ಯಾಭ್ಯಾಸವಿಲ್ಲದ ಬೇರೆ ರೀತಿಯ ಕೌಶಲ್ಯ ಇಲ್ಲದ ಇವರಿಗೆ ವೇಶ್ಯಾವೃತ್ತಿ ಹಣಗಳಿಸುವ ಸುಲಭದ ದಾರಿಯಾಗುತ್ತದೆ. ಕೆಲವು ಆರ್ಗನೈಸ್ಡ್ ಕ್ರೈಂ ನಲ್ಲಿ ಬೊಂಬೆಗಳಂತೆ ಬಳಸಲ್ಪಟ್ಟರೆ, ಬಹಳಷ್ಟು ಜನ ತಮ್ಮ ಇಚ್ಚೆಯಂತೆ ಈ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಯೂರೋಪಿನ ಉದ್ದಗಲಕ್ಕೂ, ದುಬೈ ನಂತಹ ನಗರಗಳಲ್ಲೂ ಎರಡು ಸಾವಿರ ಮತ್ತು ಆ ನಂತರದ ದಿನಗಳಲ್ಲಿ ಹೀಗೆ ರಷ್ಯಾ ಮತ್ತು ಬ್ರೇಕ್ ಅವೇ ರಷ್ಯಾ ದೇಶಗಳ ಬಹಳಷ್ಟು ಯುವಕ/ಯುವತಿಯರನ್ನ ಈ ರೀತಿಯ ಕೆಲಸಗಳಲ್ಲಿ ಕಾಣಬಹುದಿತ್ತು. ಇಂದಿಗೂ ಉಕ್ರೇನ್ ಈ ಹಳೆಯ ವ್ಯಾಪರದಲ್ಲಿ ಮುಂದಿದೆ.

ಸ್ಪ್ಯಾನಿಷ್ ಊಟದ ವ್ಯಾಪಾರಕ್ಕೂ ಕೈ ಇಟ್ಟ ಚೀನಿಯರು !ಸ್ಪ್ಯಾನಿಷ್ ಊಟದ ವ್ಯಾಪಾರಕ್ಕೂ ಕೈ ಇಟ್ಟ ಚೀನಿಯರು !

ಸೋವಿಯತ್ ಯೂನಿಯನ್ ಛಿದ್ರವಾದದ್ದು ಎಲ್ಲರಿಗೂ ತಿಳಿದಿರುವ ವಿಷಯ. ಅಮೆರಿಕಾ ಇದರ ಹಿಂದಿನ ಶಕ್ತಿ ಎನ್ನುವುದು ಕೂಡ ರಹಸ್ಯವೇನಲ್ಲ. ಹೀಗೆ ಸೋವಿಯತ್ ಯೂನಿಯನ್ ನಿಂದ ಬೇರ್ಪಟ್ಟು 15 ಹೊಸ ದೇಶಗಳು ನಿರ್ಮಾಣವಾದವು. ನಮಗೆ ಇಷ್ಟು ವಿಷಯ ಮಾತ್ರ ತಿಳಿದಿರುತ್ತದೆ. ಜಾರ್ಜಿಯಾ , ಉಕ್ರೈನ್ ಮುಂತಾದ ದೇಶಗಳಲ್ಲಿ ಆಂತರಿಕ ಕಲಹ ಶುರುವಾಗಿ ಆ ದೇಶಗಳು ಇನ್ನಿಲ್ಲದ ಸಾವು ನೋವಿನ ಜೊತೆಗೆ ಇಡೀ ನಗರವೇ ಸ್ಮಶಾನ ಎನ್ನುವ ಮಟ್ಟಿಗೆ ಹಾಳಾದವು.

ಹೀಗೆ ಅಂದಿನ ಶಕ್ತಿಶಾಲಿ ಒಕ್ಕೊಟ್ಟವನ್ನ ಛಿದ್ರಗಳೊಸಿದರ ಪರಿಣಾಮ ಸೋವಿಯತ್ ಯೂನಿಯನ್ ನ ಹೃದಯವಾಗಿದ್ದ ರಷ್ಯಾ ಬಹಳ ಪೆಟ್ಟು ತಿಂದಿತು. ಈ ರೀತಿಯ ವಿಭಜನೆ 1991ರಲ್ಲಿ ಆಗುತ್ತದೆ. ಆ ನಂತರ ರಷ್ಯಾ ಹಲವು ವರ್ಷ ಯಾವುದೇ ಸಿದ್ದಾಂತವಿಲ್ಲದೆ ವೇಳೆಯನ್ನ ಕಳೆಯುತ್ತದೆ. 2000 ಇಸವಿಯ ವೇಳೆಗೆ ಪುಟಿನ್ ಅಧಿಕಾರವನ್ನ ಪಡೆಯುತ್ತಾರೆ. ಒಂದೆರೆಡು ವರ್ಷದಲ್ಲಿ ತೈಲದ ಮೇಲಿನ ಹಿಡಿತವನ್ನ ಸಂಪಾದಿಸುತ್ತಾರೆ. ಜಗತ್ತಿಗೆ ಬೇಕಾದ ಎನರ್ಜಿ ಮೂಲಗಳ ಮೇಲೆ, ತೈಲದ ಮೇಲಿನ ಹಿಡಿತ ರಷ್ಯವನ್ನ ಮತ್ತೆ ಒಂದಷ್ಟು ಆರ್ಥಿಕವಾಗಿ ಪುನರ್ಜೀವನಗೊಳಿಸುತ್ತವೆ.

ರಷ್ಯಾ ಮತ್ತೆ ಬಲಶಾಲಿಯಾಗಿದೆ, ಚೀನಾದ ಜೊತೆಗೆ ಉತ್ತಮ ಬಾಂಧವ್ಯ ಕೂಡ ಹೊಂದಿದೆ. ಇದು ದೊಡ್ಡಣ್ಣನ ಕಣ್ಣು ಕೆಂಪಗಾಗಿಸಿದೆ. ಮತ್ತೆ ಛಿದ್ರಗೊಳಿಸುವ ಕೆಲಸಕ್ಕೆ ಅದು ಇಳಿದಿದೆ. ಈ ಮಧ್ಯೆ ಯೂರೋಪಿನ ಮತ್ತು ಬ್ರೇಕ್ ಅವೇ ರಷ್ಯಾ ದೇಶದ ಜನರ ಬದುಕು ಮೂರಾಬಟ್ಟೆಯಾಗುತ್ತದೆ. ದೂರದಲ್ಲಿರುವ ನಮಗೂ ಅದರ ಬಿಸಿ ತಟ್ಟುತ್ತದೆ. ಕರೋನ ಕಾರಣ ಆಗಲೇ ಕುಸಿದಿರುವ ಟ್ರಾವೆಲ್ ಇಂಡಸ್ಟ್ರಿ ಗತಿಯೇನು? ಅನುಭವವೇ ಜೀವನ ಎನ್ನುವ ತತ್ವ ಹೊಂದಿರುವ ನನ್ನಂತಹ ಲಕ್ಷಾಂತರ ಜನರ ಓಡಾಟವನ್ನ ಇದು ಕಸಿದಿದೆ.

ಸ್ಪೇನ್ ಕೂಡ ಆಂತರಿಕ ಯುದ್ಧವನ್ನ ಕಂಡಿದೆ. ಎರಡನೇ ಮಹಾಯುದ್ಧದಲ್ಲಿ ಸ್ಪೇನ್ ಭಾಗವಹಿಸಲಿಲ್ಲ. ಸ್ವ ಇಚ್ಚೆಯಿಂದ ಬೇಕಾದವರು ಹೋಗಿ ಜರ್ಮನ್ ಸೇನೆಯನ್ನ ಸೇರಿಕೊಳ್ಳಬಹುದು ಎಂದು ಅಂದಿನ ದಿನದಲ್ಲಿ ಸರಕಾರ ಹೇಳಿತ್ತು. ಹೀಗಾಗಿ ಸ್ಪ್ಯಾನಿಷ್ ಜನತೆಗೆ ಯುದ್ಧದ, ಆಂತರಿಕ ಕಲಹದ ನೋವು ಅಂದರಿಂದ ದೀರ್ಘಕಾಲದಲ್ಲಿ ಆಗುವ ಪರಿಣಾಮಗಳ ಅರಿವಿದೆ. ಹೀಗಾಗಿ ಅವರು ಎಂದಿಗೂ ಯುದ್ಧದ ಪರವಲ್ಲ.

ಸ್ಪೇನ್ ದೇಶದ ಒಂದು ರಾಜ್ಯ ಅಂದಲೂಸಿಯಾ ದಿಂದ ಹೆಚ್ಚು ಶ್ರೀಮಂತ ರಾಜ್ಯ ಕತಲೂನ್ಯ ಕ್ಕೆ ಜನರು ವಲಸೆ ಬರುವಾಗ ಅವರನ್ನ ರೈಲಿಂದ ಇಳಿಯಲು ಬಿಡದೆ ಹೊಡೆದು ವಾಪಸ್ಸು ಕಳಿಸುತ್ತಿದ್ದರು ಎಂದು ಇಲ್ಲಿನ ನನ್ನ ಹಿರಿಯ ನಾಗರೀಕ ಗೆಳೆಯರು ಇಂದಿಗೂ ಜ್ಞಾಪಿಸಿಕೊಳ್ಳುತ್ತಾರೆ. ಒಂದೇ ದೇಶದಲ್ಲಿ ಇದ್ದೂ ದೇಶದ ಇತರ ರಾಜ್ಯದಿಂದ ಬರುವ ಜನರನ್ನ ಸೇರಿಸಿಕೊಳ್ಳಲು ಜನರು ಇಷ್ಟಪಡುತ್ತಿರಲಿಲ್ಲ. ಯಾವಾಗ ಸಮಾಜದಲ್ಲಿ ಒತ್ತಡ ಮತ್ತು ಕೊರತೆ ಉಂಟಾಗುತ್ತದೆ ಆಗೆಲ್ಲಾ ಇವು ಸಾಮಾನ್ಯ .

ಸ್ಪೇನ್ ದೇಶದಲ್ಲಿ ಇಂದಿಗೂ ಶಾಲೆಗೆ ಹೋಗುತ್ತಾ, ಕಲಿಯುತ್ತಾ , ಕುಣಿಯುತ್ತಾ ಬಾಲ್ಯ ಕಳೆಯಲಾಗದೇ ಜೀವನ ಸಂಧ್ಯಾಕಾಲಕ್ಕೆ ಕಾಲಿಟ್ಟಿರುವ ಸಾವಿರಾರು ಜನರನ್ನ ನೀವು ಕಾಣಬಹುದು. ಹತ್ತು ಹನ್ನೆರಡನೇ ವಯಸ್ಸಿಗೆ ದುಡಿಯಲು ಶುರು ಮಾಡಿದ್ದೆವು , ಹೊಟ್ಟೆ ತುಂಬಾ ಊಟ ಮಾಡಿದ ದಿನ ನಾವು ಅದೆಷ್ಟು ಖುಷಿಯಿಂದ ಇರುತ್ತಿದ್ದೆವು ಗೊತ್ತೇ? ಎಂದು ತಮ್ಮ ಬಾಲ್ಯವನ್ನ, ಸ್ಪೇನ್ ದೇಶದ ಅಂದಿನ ಆರ್ಥಿಕತೆಯನ್ನ ನನ್ನ ಹಲವಾರು ಗೆಳೆಯರು ವಿವರಿಸಿದ್ದಾರೆ. ಅದು ಕೇಳಿದ್ದಲ್ಲ , ಅವರೇ ಅನುಭವಿಸಿದ ಜೀವನ, ಹೀಗಾಗಿ ಆಗಿನ ಕಾಲಘಟ್ಟದಲ್ಲಿ ಅಂದಿನ ಸನ್ನಿವೇಶದಲ್ಲಿ ಭಾಗಿಯಾಗಿದ್ದ ಜನರಿಂದ ಅದನ್ನ ಕೇಳುವ ಮತ್ತು ಅದರ ಕಲ್ಪನೆ ಮಾಡಿಕೊಳ್ಳುವ ಅವಕಾಶ ನನ್ನದಾಗಿತ್ತು.

ಇಂತಹ ಯುದ್ಧದ ಪ್ರತಿಕೂಲ ಪರಿಣಾಮ ಗೊತ್ತಿರುವ ಕಾರಣ ಸ್ಪ್ಯಾನಿಶರು ಯುದ್ಧದಲ್ಲಿ ಆಸಕ್ತಿ ಹೊಂದಿಲ್ಲ. ಪಕ್ಕದ ಜರ್ಮನಿ, ಫ್ರಾನ್ಸ್, ಇಟಲಿ ದೇಶಗಳು ಮಿಲಿಟರಿಗೆ, ಅಣು ಬಾಂಬ್ ಇತ್ಯಾದಿಗಳಿಗೆ ಹೆಚ್ಚಿನ ಹಣವನ್ನ ವ್ಯಯಿಸುತ್ತಿದ್ದರೆ , ಸ್ಪೇನ್ ಮಾತ್ರ ಆ ರೇಸ್ ನಲ್ಲಿ ಸಿಲುಕಿಲ್ಲ. ಇಲ್ಲೇನಿದ್ದರೂ ಇರುವುದೊಂದು ಜೀವನ ಅದನ್ನು ಖುಷಿಯಿಂದ ಕಳೆಯೋಣ ಎನ್ನುವುದು ಅಲಿಖಿತ ನಿಯಮ. ಇದೆ ನಿಯಮ ಎಲ್ಲರಿಗೂ ಇಷ್ಟವಾಗಿದಿದ್ದರೆ? ಜಗತ್ತು ಇನ್ನಷ್ಟು ಸುಂದರವಾಗಿರುತ್ತಿತ್ತು.

   ಏನಿದು!!ಟ್ರೋಫಿಯನ್ನು ಟೀಂಗೆ ಕೊಡದೆ ರೋಹಿತ್ ಹಿಂಗ್ಯಾಕ್ ಮಾಡಿದ್ರು | Oneindia Kannada
   English summary
   Barcelona Memories Column By Rangaswamy Mookanahalli Part 71
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X