ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಹುಟ್ಟು ಹಬ್ಬಕ್ಕೆ ನಾವೇ ಪ್ರಾಯೋಜಕರು !!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಬಾರ್ಸಿಲೋನಾ ಒಂದೇ ದಿನದಲ್ಲಿ ತನ್ನ ಎಲ್ಲಾ ವಿಷಯಗಳನ್ನ ಬಿಟ್ಟು ಕೊಡುವುದಿಲ್ಲ. ಎಲ್ಲಾ ದೇಶಗಳು , ನಗರಗಳು ಹಾಗೆ ಅಲ್ಲವೇ , ಅಲ್ಲಿ ನೆಲೆ ನಿಲ್ಲಬೇಕು. ಅಲ್ಲಿನ ಸ್ಥಳೀಯರೊಂದಿಗೆ ಬೆರೆಯಬೇಕು. ಕೇವಲ ನಮ್ಮ ಕಣ್ಣಿಗೆ ಕಂಡದ್ದು ಸತ್ಯ ಎನ್ನುವ ಮನೋಭಾವದಿಂದ ಹೊರಬರಬೇಕು. ಎಲ್ಲಕ್ಕೂ ಇದೇನು? ಹೀಗೇಕೆ ? ಎನ್ನುವ ಪ್ರಶ್ನೆಗಳನ್ನ ಮಾಡಬೇಕು. ತಕ್ಷಣ ನಮ್ಮಲ್ಲಿ ಹಾಗೆ ಇಲ್ಲೇಕೆ ಹೀಗೆ ಎನ್ನುವುದು ಅಥವಾ ನಮ್ಮ ದೇಶದ ಸಂಪ್ರದಾಯ ಮೇಲು ಎನ್ನುವುದು ಅಥವಾ ಹೋಲಿಕೆ ಮಾಡುವುದು ಬಿಟ್ಟು ಮುಕ್ತ ಮನಸ್ಸಿನಿಂದ ಬೆರೆಯುತ್ತಾ ಹೋದಂತೆ ಅಲ್ಲಿನ ಜನ , ಸಂಪ್ರದಾಯ ಕೂಡ ಅರ್ಥವಾಗುತ್ತಾ ಹೋಗುತ್ತದೆ.

ಹೀಗೆ ಸ್ಪೇನ್ ನಲ್ಲಿ ಆಚರಣೆಯಲ್ಲಿರುವ ಹಲವು ಸಂಪ್ರದಾಯಗಳು ಅಲ್ಲಿನ ಸ್ಥಳೀಯರಿಗೆ ಮಾತ್ರ ಅರ್ಥವಾಗುವಂತಹವುಗಳು , ಬೇರೆ ದೇಶದಿಂದ ಬಂದವರಿಗೆ ಇದೇನಿದು ? ಎನ್ನಿಸಬಹುದು. ಆದರೆ ಇಲ್ಲಿ ಇರುವುದು ಹೀಗೆ. ಕೆಲವು ಸಂಪ್ರದಾಯಗಳು ನೂರಾರು ವರ್ಷದ ಇತಿಹಾಸ ಹೊಂದಿವೆ ಆದರೆ ಕೆಲವೊಂದು ಹತ್ತಿಪತ್ತು ವರ್ಷದ ಇತಿಹಾಸ ಹೊಂದಿ ಕೂಡ ಬಹಳ ಹಳೆಯ ಸಂಪ್ರದಾಯವೇನೋ ಎನ್ನುವಂತೆ ಜನ ಪಾಲಿಸುತ್ತಾರೆ.

 ರಾಹುಲ್ ಬಜಾಜ್ ಜೊತೆ ಕಳೆದದ್ದು 2 ದಿನ, ಕಲಿತದ್ದು ಅಗಾಧ! ರಾಹುಲ್ ಬಜಾಜ್ ಜೊತೆ ಕಳೆದದ್ದು 2 ದಿನ, ಕಲಿತದ್ದು ಅಗಾಧ!

ಕೆಲವೊಂದು ಸಂಪ್ರದಾಯಗಳು ಎಲ್ಲೆಡೆಯಂತೆ ಜನ ಮಾನಸದಿಂದ ಸರಿದು ಹೋಗುತ್ತಿವೆ. ಇಲ್ಲಿಗೆ ಬಂದ ಹೊಸತರಲ್ಲಿ ಹೀಗೆ ಹಲವು ಇಲ್ಲಿನ ಜನರ ಕಸ್ಟಮ್ಸ್ ನನಗೆ ಅಚ್ಚರಿ ತಂದಿತ್ತು. ಕಾಲಕ್ರಮೇಣ ಅದು ಬದುಕಿನ ಅಂಗವಾಗಿ ಹೋಯ್ತು. ಇವತ್ತು ಅಂತಹ ಒಂದಷ್ಟು ಸಂಪ್ರದಾಯಗಳ ನೆನಪುಗಳನ್ನ ನಿಮಗೂ ಹೇಳುವೆ . ಕಿಯನೆಸ್ ಉಲ್ತಿಮೋ ? : ನಿಮಗೆಲ್ಲಾ ಆಶ್ಚರ್ಯ ಆಗಬಹುದು ಏಕೆಂದರೆ ಜಗತ್ತು ಇಂದಿಗೆ ನವ ನವೀನ ತಂತ್ರಜ್ಞಾನವನ್ನ ಅಳವಡಿಸಿಕೊಂಡು ಸಾಗುತ್ತಿದೆ , ಆದರೆ ಸ್ಪೇನ್ ನಲ್ಲಿ ಇಂದಿಗೂ ಸರದಿಯ ಸಾಲಿನಲ್ಲಿ ನಿಂತಾಗ ಕಿಯನೆಸ್ ಉಲ್ತಿಮೋ ? ಎನ್ನುವ ಪ್ರಶ್ನೆ ಅತ್ಯಂತ ಸಾಮಾನ್ಯ.

Barcelona Memories Column By Rangaswamy Mookanahalli Part 70

ಅಂದರೆ ಕೊನೆಯವರು ಯಾರು ಎನ್ನುವ ಪ್ರಶ್ನೆ. ನಿಮಗೆ ನಂಬಲು ಕಷ್ಟ ಆಗಬಹುದು ಆದರೆ ಅದೆಷ್ಟೇ ದೊಡ್ಡ ಸಾಲಿರಲಿ , ಎಷ್ಟೇ ಜನ ಸಂದಣಿ ಇರಲಿ , ಇಲ್ಲಿ ಇದು ವರ್ಕ್ ಆಗುತ್ತದೆ. ಜನ ತಾವಾಗೇ ಬಂದು ಇಲ್ಲಿ ಕೊನೆಯವರು ಯಾರು ಎನ್ನುವ ಪ್ರಶ್ನೆಯನ್ನ ಜೊರಾಗಿ ಕೂಗಿ ಕೇಳುತ್ತಾರೆ . ಸರದಿಯ ಕೊನೆಯ ವ್ಯಕ್ತಿ ' ಯೋ ' ಅಂದರೆ 'ನಾನು ' ಎಂದು ಮರು ಕೂಗಿ ಕೈ ಎತ್ತುವುದು ಕೂಡ ಸಾಮಾನ್ಯ.

ಆಸ್ಪತ್ರೆ , ಬ್ಯಾಂಕು , ತರಕಾರಿ ಅಂಗಡಿಯ ಸಾಲು , ಹೀಗೆ ಎಲ್ಲೆಲ್ಲಿ ಸಾಲು ನಿಲ್ಲಬಹುದು ಅಲ್ಲೆಲ್ಲ ಇಂತಹ ಪ್ರಶ್ನೆ ಸಾಮಾನ್ಯ. ಇತ್ತೀಚಿಗೆ ಮುನಿಸಿಪಾಲಿಟಿ ಕಛೇರಿಗಳಲ್ಲಿ ಟೋಕನ್ ಸಿಸ್ಟಮ್ ಅಳವಡಿಸಿದ್ದಾರೆ . ಕೆಲವೊಂದು ಆಸ್ಪತ್ರೆಗಳು ಕೂಡ ಬದಲಾಗುತ್ತಿವೆ. ಆದರೆ ಇಂದಿಗೂ ಜನ ಸಾಮಾನ್ಯನ ಜೀವನದಲ್ಲಿ ಸರದಿಯ ಕೊನೆಯವರು ಯಾರು ಎಂದು ಕೇಳುವುದನ್ನ ನೀವು ಕಾಣಬಹುದು.

ಬಾರ್ಸಿಲೋನಾ ಗೆ ಬಂದ ಪ್ರಥಮ ದಿನಗಳಲ್ಲಿ ಇದು ಗೊತ್ತಿರದೆ , ಭಾಷೆಯೂ ಬಾರದೆ ಸರದಿಯ ಸಾಲಿನಲ್ಲಿ ನಿಂತದ್ದು , ನನಗಿಂತ ಹಿಂದೆ ಬಂದವರು ಈ ರೀತಿ ಕೇಳಿದ್ದು ಅದಕ್ಕೆಂದು ಉತ್ತರಿಸಬೇಕು ಎನ್ನುವುದು ತಿಳಿಯದೆ ಸುಮ್ಮನೆ ನಿಂತು ಎಲ್ಲರೂ ಹೋದ ಮೇಲೆ ಕೆಲಸ ಮುಗಿಸಿಕೊಂಡು ಬಂದದ್ದು ಇಂದಿಗೂ ಮರೆಯಲಾಗದು. ನಾನು ಕೊನೆಯವನು ಎಂದು ನೀವು ಹೇಳದಿದ್ದರೆ , ನೀವು ಸಾಲಿನಲ್ಲಿಲ್ಲ ಎಂದು ಅರ್ಥೈಸಿಕೊಳ್ಳುತ್ತಾರೆ. ಹೀಗಾಗಿ ಇಲ್ಲಿ ಭಾಷೆಯೂ ಬರಬೇಕು ಜೊತೆಗೆ ಇಲ್ಲಿನ ಸಂಪ್ರದಾಯಗಳು ಕೂಡ ಗೊತ್ತಿರಬೇಕು ಇಲ್ಲದಿದ್ದರೆ ಇಲ್ಲಿ ಬದುಕು ಸುಲಭವಲ್ಲ.

ನಮ್ಮ ಹುಟ್ಟು ಹಬ್ಬಕ್ಕೆ ನಾವೇ ಪ್ರಾಯೋಜಕರು : ಜಗತ್ತಿನ ಬಹುಪಾಲು ದೇಶದಲ್ಲಿ ನಿಮ್ಮ ಹುಟ್ಟುಹಬ್ಬಕ್ಕೆ ಆಫೀಸ್ ಕೊಲೀಗ್ಸ್ ಅಥವಾ ವಿದ್ಯಾರ್ಥಿ ಯಾಗಿದ್ದರೆ ಸಹಪಾಠಿಗಳು ಹೀಗೆ ಒಟ್ಟಿನಲ್ಲಿ ನಿಮ್ಮ ಸುತ್ತಮುತ್ತಲಿನ ಜನ ಕೇಕ್ ತರಿಸುವುದು ಅದನ್ನ ಕಟ್ ಮಾಡಿಸಿ ಆನಂದಿಸುವುದು ಸಾಮಾನ್ಯ. ಇಲ್ಲವೇ ನಿಮ್ಮನ್ನ ಹೋಟೆಲ್ ಊಟಕ್ಕೆ ಕರೆದುಕೊಂಡು ಹೋಗುವುದು ಕೂಡ ಹಲವೆಡೆ ರೂಢಿಯಲ್ಲಿರುವ ಪದ್ಧತಿ. ಆದರೆ ಸ್ಪೇನ್ ನಲ್ಲಿ ಸಂಪ್ರದಾಯ ತದ್ವಿರುದ್ದ.

ನಮ್ಮ ಹುಟ್ಟು ಹಬ್ಬದ ದಿನ ನಾವೇ ಪಾನದೇರಿಯ ಅಂದರೆ ನಮ್ಮ ಬೇಕರಿಯ ಹೋಲುವ ಅಂಗಡಿಯಲ್ಲಿ ಕ್ರೋಸಾಂತ್ ಎನ್ನುವ ಶಂಕಾಕಾರದಲ್ಲಿರುವ ಬ್ರೆಡ್ ಕೊಂಡು ಹೋಗಬೇಕು. ಕಛೇರಿಯಲ್ಲಿ ಎಷ್ಟು ಜನರಿದ್ದಾರೆ ಅದಕ್ಕಿಂತ ಒಂದಿಪ್ಪತ್ತು ಪ್ರತಿಶತ ಹೆಚ್ಚು ಕೊಂಡು ಹೋಗಬೇಕು. ಏಕೆಂದರೆ ಒಬ್ಬಿಬ್ಬರು ಒಂದಕ್ಕಿಂತ ಹೆಚ್ಚು ತಿನ್ನುವ ಸಾಧ್ಯತೆಯನ್ನ ನೀವು ಅಲ್ಲಗೆಳೆಯಲು ಬಾರದು. ಹೀಗೆ ಕೊಂಡು ಹೋದ ಕ್ರೋಸಾಂತ್ ನಲ್ಲಿ ಕೂಡ ಹಲವು ವಿಧವಿರುತ್ತದೆ. ಪ್ಲೈನ್ , ಚಾಕೊಲೇಟ್ , ಇತ್ಯಾದಿ ಅವುಗಳನ್ನ ವಿಂಗಡಿಸಿ ಅದನ್ನ ಪ್ಯಾಂಟ್ರಿಯಲ್ಲಿಡಬೇಕು.

ಸ್ಪ್ಯಾನಿಷ್ ಊಟದ ವ್ಯಾಪಾರಕ್ಕೂ ಕೈ ಇಟ್ಟ ಚೀನಿಯರು !ಸ್ಪ್ಯಾನಿಷ್ ಊಟದ ವ್ಯಾಪಾರಕ್ಕೂ ಕೈ ಇಟ್ಟ ಚೀನಿಯರು !

ಇಷ್ಟು ಮಾಡಿ ಸುಮ್ಮನೆ ಕೂರುವಂತೆಯೂ ಇಲ್ಲ , ನಮ್ಮ ಸಹೋದ್ಯಗಿಗಳನ್ನ ಕುರಿತು ' ಹೊಯ್ ಎಸ್ ಮೀ ಕುಂಪ್ಲೆ ಆನ್ಯೋ' ಅಂದರೆ ಇಂದು ನನ್ನ ಜನ್ಮ ದಿನ ಎಂದು ಹೇಳಿ ಬರಬೇಕು. ಸಹೋದ್ಯೋಗಿಗಳು ಎದ್ದು ಬಂದು ಫೆಲಿಸಿದಾದೇಸ್ ಅಂದರೆ ಅಭಿನಂದನೆಗಳು ಎಂದು ಹೇಳಲು ಶುರು ಮಾಡುತ್ತಾರೆ. ಅವರಿಗೆಲ್ಲ ಹೀಗೆ ಲಘು ಉಪಹಾರ ತಂದಿದ್ದೇನೆ ಎಂದು ಹೇಳಬೇಕು. ಒಬ್ಬಬ್ಬರು ಒಂದೊಂದು ಸಮಯದಲ್ಲಿ ಅದನ್ನ ತಿನ್ನುತ್ತಾರೆ . ತಿನ್ನುವ ಸಮಯದಲ್ಲಿ ಹೀಗೆ ನಾನು ತಿನ್ನುತ್ತಿದ್ದೆನೆ ಎನ್ನುವುದನ್ನ ಅವರು ಕೂಗಿ ಹೇಳುತ್ತಾರೆ.

ಅದರರ್ಥ ಎದ್ದು ಹೋಗಿ ನಿಮಗೇನು ಬೇಕು ಎಂದು ಕೇಳಿ ಕಾಫಿ , ಹಾಟ್ ಚಾಕೋಲೇಟ್ , ಕಾಫೆಚಿನೋ ಯಾವುದು ಇಷ್ಟಪಡುತ್ತಾರೆ ಅದನ್ನ ಅವರಿಗೆ ಕೊಡಿಸಿ ಬರಬೇಕು. ಇದು ಸಂಪ್ರದಾಯ. ಸಾಮಾನ್ಯವಾಗಿ ಅಂದಿನ ದಿನ ಇಲ್ಲಸಲ್ಲದ ವರ್ಕ್ ಲೋಡ್ , ಡೆಡ್ಲೈನ್ ಹಿಂಸೆಗಳಿಗೆ ರಿಯಾಯ್ತಿ ಕೂಡ ನೀಡಲಾಗುತ್ತದೆ. ತೀರಾ ಆಪ್ತ ಗೆಳೆಯರನ್ನ ಊಟಕ್ಕೆ ಕರೆದುಕೊಂಡು ಹೋದರು ಕೂಡ ಬಿಲ್ ನೀವೇ ಕೊಡಬೇಕು. ಬಾರ್ಸಿಲೋನಾ ನಗರದಲ್ಲಿ ವಾಸ ಮಾಡಿದ್ದು ಹದಿನೇಳು ವರ್ಷವಾದರೂ ನನ್ನ ಇಪ್ಪತ್ತು ಹುಟ್ಟುಹಬ್ಬವನ್ನ ಈ ನಗರದಲ್ಲಿ ಆಚರಿಸಿಕೊಂಡಿದ್ದೇನೆ. ಅದರ ಸವಿ ನೆನಪನ್ನ ಮರೆಯುವುದಾದರೂ ಹೇಗೆ ?

ಹೆಣ್ಣು ಮಗು ಹುಟ್ಟಿದ ತಕ್ಷಣ ಕಿವಿ ಚುಚ್ಚುತ್ತಾರೆ : 21ನೇ ಶತಮಾನದಲ್ಲೂ ಮಗು ಹುಟ್ಟಿದ ತಕ್ಷಣ ಅಂದರೆ ಹೆಣ್ಣು ಮಗು ಹುಟ್ಟಿದ ತಕ್ಷಣ ಕಿವಿಯನ್ನ ಚುಚ್ಚುವುದು ಇಲ್ಲಿನ ಸಂಪ್ರದಾಯ. ಇದಕ್ಕೆ ವಿಶೇಷ ಕಾರಣವೇನೂ ಇಲ್ಲ , ಮಗು ಹೆಣ್ಣೋ ಅಥವಾ ಗಂಡೋ ಎಂದು ಬಹಳಷ್ಟು ಜನ ಪ್ರಶ್ನೆ ಮಾಡುತ್ತಾರೆ. ಹೀಗಾಗಿ ಜಂಡರ್ ಯಾವುದು ಎಂದು ತಿಳಿದುಕೊಳ್ಳಲು ಈ ರೀತಿಯನ್ನ ಅಳವಡಿಸಿಕೊಂಡಿದ್ದಾರೆ.

ಮಗುವಿನ ಹೆಸರೇನು : ಇಲ್ಲಿ ಬೇರೆಯವರ ಮಗುವನ್ನ ಮುಟ್ಟುವುದು , ಗಲ್ಲ ಹಿಂಡುವುದು , ಮುತ್ತು ಕೊಡುವುದು ನಿಷಿದ್ಧ . ಆದರೆ ರಸ್ತೆಯಲ್ಲಿ ಹೋಗುವಾಗ ಮಗುವಿನ ಹೆಸರೇನು ? ಕೆ ತಿಯಂಪು ತಿಯನೆ ? ಅಂದರೆ ಎಷ್ಟು ತಿಂಗಳು , ವರ್ಷ ಎನ್ನುವ ಅರ್ಥದಲ್ಲಿ ಕೇಳುತ್ತಾರೆ. ಮಗುವಿನ ಕಿವಿ ನೋಡಿ ಹೆಣ್ಣು ಅಥವಾ ಗಂಡು ಎನ್ನುವುದರ ನಿರ್ಧಾರ ಮಾಡಿಕೊಂಡು ' ಗಂಡು ಮಗುವಾಗಿದ್ದರೆ ' ಕೆ ವಾಪೋ ' (ಸುಂದರ ) ಎಂದೂ , ಹೆಣ್ಣು ಮಗುವಾಗಿದ್ದರೆ ' ಕೆ ವಾಪ ' (ಸುಂದರಿ ) ಎನ್ನುವ ಉದ್ಘಾರವನ್ನ ಹೊರಡಿಸುತ್ತಾರೆ.

ಇಲ್ಲಿ ಇನ್ನೊಂದು ಅಚ್ಚರಿಯ ವಿಷಯವೆಂದರೆ ಹೀಗೆ ರಸ್ತೆಯಲ್ಲಿ ನಿಮ್ಮನ್ನ ನಿಲ್ಲಿಸಿ ಹತ್ತು ನಿಮಿಷ ಮಾತನಾಡಿಸಿ ಹೋಗುವ ಜನ ನಿಮಗೆ ಪರಿಚಿತರು ಆಗಿರಬೇಕು ಎನ್ನುವ ಯಾವುದೇ ನಿಯಮವಿಲ್ಲ . ಎಳೆಯ ಮಕ್ಕಳನ್ನ ಕರೆದುಕೊಂಡು ಹೋಗುವ ಹೊಸ ಅಪ್ಪ ಅಮ್ಮಂದಿರಿಗೆ ಬಹಳಷ್ಟು ಹೊಸ ಪರಿಚಯ , ಸ್ನೇಹಿತರು ಮಗುವಿನ ಸಲುವಾಗಿ ದೊರೆಯುತ್ತಾರೆ ಎನ್ನುವುದು ಕೂಡ ಸತ್ಯ. ಅನನ್ಯ ಳನ್ನ ಪ್ರಾಮ್ ನಲ್ಲಿ ಮಲಗಿಸಿಕೊಂಡು ಎಲೆ ಬಿಸಿಲಿನಲ್ಲಿ ಸುತ್ತಾಡಿಸಿಕೊಂಡು ಬರುವ ಕಾಯಕ ನನಗೆ ಅತ್ಯಂತ ಖುಷಿ ಕೊಡುವ ಕೆಲಸವಾಗಿತ್ತು.

ಸ್ಪೇನ್‌ನಲ್ಲಿ ಆಹಾರ ಸೇವಿಸುವ ಮುನ್ನಾ ನಿಮಗಿದು ಗೊತ್ತಿರಲಿ!ಸ್ಪೇನ್‌ನಲ್ಲಿ ಆಹಾರ ಸೇವಿಸುವ ಮುನ್ನಾ ನಿಮಗಿದು ಗೊತ್ತಿರಲಿ!

ಹೀಗೆ ಸುತ್ತಾಟ ಮುಗಿಸಿ ಮನೆಗೆ ಹತ್ತಿರವಿದ್ದ ಫಾರ್ಮಸಿಯಲ್ಲಿ ಮಗುವಿಗೆ ಬೇಕಾದ ಅಗತ್ಯ ವಸ್ತುಗಳನ್ನ ಕೊಳ್ಳುತ್ತಿದ್ದೆ . ಫಾರ್ಮಸಿ ನಡೆಸುವಾಕೆ ಅನನ್ಯಳನ್ನ ಕಂಡು ಹೊಗಳಿಕೆಯ ಮಹಾಪೂರವನ್ನೇ ಹರಿಸುತ್ತಿದ್ದಳು. ಹತ್ತಾರು ಹೊಸ ಪದಾರ್ಥಗಳ ಸ್ಯಾಂಪಲ್ ನಾನು ಕೇಳದೆ ಉಚಿತವಾಗಿ ನೀಡುತ್ತಿದ್ದಳು. ಗೊತ್ತಿಲ್ಲದೇ ಬೆಸೆದು ಕೊಳ್ಳುವ ಇಂತಹ ಭಾಂಧವ್ಯಕ್ಕೆ ಏನು ಹೇಳುವುದು ?

ಪಬ್ಲಿಕ್ ನಲ್ಲಿ ಮಗುವಿಗೆ ಹಾಲೂಡಿಸುವುದು ಸಾಮಾನ್ಯ : ಇಲ್ಲಿ ಮಗುವನ್ನ ಹೊತ್ತು ಬರುವ ತಾಯಿಯರನ್ನ ಕಂಡ ತಕ್ಷಣ ಯಾರಾದರೂ ಎದ್ದು ಜಾಗ ಬಿಡುವುದು ಸಾಮಾನ್ಯ. ಅವರಿಗೆ ಎಂದು ಹಲವು ಆಸನಗಳನ್ನ ಬಸ್ , ಟ್ರೈನ್ , ಮೆಟ್ರೋ ಎಲ್ಲದರಲ್ಲೂ ಕಾದಿರಿಸುತ್ತಾರೆ. ಆದರೆ ಹೀಗಿದ್ದೂ ಬೇರೆಯವರು ಕೂಡ ತಕ್ಷಣ ಜಾಗವನ್ನ ಬಿಟ್ಟು ಕೊಡುವುದು ಕೂಡ ಇಲ್ಲಿನ ಸಂಪ್ರದಾಯ. ಹಿರಿಯ ನಾಗರೀಕರನ್ನ ಕಂಡಾಗ ಕೂಡ ಇದೆ ರೀತಿಯ ನಡವಳಿಕೆಯನ್ನ ನೀವು ಗಮನಿಸಬಹುದು.

ಹಾಗೆಯೇ ತಾಯಿಯಾದವಳು ಟ್ರೈನ್ ನಲ್ಲಿ , ಬಸ್ ಹೀಗೆ ಯಾವುದೇ ಪಬ್ಲಿಕ್ ಜಾಗದಲ್ಲಿ ಮಗುವಿಗೆ ಹಾಲೂಣಿಸುವುದು ಇಲ್ಲಿ ಓಕೆ . ಯಾರೊಬ್ಬರೂ ಅದನ್ನ ವಿಶೇಷವಾಗಿ ಗಮನಿಸುವುದು , ದಿಟ್ಟಿಸಿ ನೋಡುವುದು ಮಾಡುವುದಿಲ್ಲ. ಇಲ್ಲಿ ಇದೊಂದು ಸಹಜ ಕ್ರಿಯೆ ಎನ್ನುವಂತೆ ನೋಡಲಾಗುತ್ತದೆ. ಏಷ್ಯಾ ಖಂಡದಿಂದ ಹೋದವರಿಗೆ ಇಲ್ಲಿನ ಕೆಲವು ಸಂಪ್ರದಾಯಗಳು ಅಚ್ಚರಿಗೊಳಿಸುವುದು ಸಹಜ.

ಕಾಗನೇರ್ : ಸ್ಪೇನ್ ನ ಒಂದು ರಾಜ್ಯ ಕತಲೂನ್ಯದಲ್ಲಿ ನೀವು ಯಾವುದೇ ಸೊವಿನೀರ್ ಅಂಗಡಿಯನ್ನ ಪ್ರವೇಶಿದರೆ ಚಿತ್ರದಲ್ಲಿ ಇರುವ ಬೊಂಬೆಗಳನ್ನ ಕಾಣಬಹುದು. ಚಡ್ಡಿ ಅರ್ಧ ತೆಗೆದು , ಅರ್ಧ ಪೃಷ್ಠ ಕಾಣುವಂತೆ ಇರುವ ಈ ಬೊಂಬೆಗಳು ಮೂಲದಲ್ಲಿ ನಾವೆಲ್ಲಾ ಒಂದೇ ಎನ್ನುವುದನ್ನ ಸಾರುವುದಕ್ಕೆ ಮಾಡಿ ಇಡಲಾಗಿದೆ. ಇವುಗಳನ್ನ ಜನರು ಕೊಂಡು ಮನೆಯಲ್ಲಿ ಇಟ್ಟುಕೊಳ್ಳುತ್ತಾರೆ. ಪ್ರವಾಸಿಗಳು ಕೂಡ ಕೊಳ್ಳುತ್ತಾರೆ.

ಆದರೆ ಇದರ ಅರ್ಥ , ಇದೇಕೆ ಹೀಗಿದೆ ಎನ್ನುವುದು ಗೊತ್ತಿರುವುದಿಲ್ಲ. ನೀವು ಯಾರೇ ಆಗಿರಿ , ಎಷ್ಟೇ ಪ್ರಸಿದ್ದರು , ಹಣವಂತರು , ಜ್ಞಾನಿಗಳು , ಮೂಲಭೂತವಾಗಿ ನೀವು ಮನುಷ್ಯರು ಎನ್ನುವುದನ್ನ ಈ ಬೊಂಬೆಗಳು ಜ್ಞಾಪಿಸುತ್ತವೆ. ಇದಕ್ಕೆ ಕಾಗನೇರ್ ಎನ್ನುತ್ತಾರೆ. ಇಂಗ್ಲಿಷ್ ನಲ್ಲಿ ಪೋಪರ್ ಎನ್ನುತ್ತಾರೆ. ಅಚ್ಚ ಕನ್ನಡದಲ್ಲಿ ಹೇಲಲು ಕೂತ ಭಂಗಿಯ ಬೊಂಬೆ ಎನ್ನಲಡ್ಡಿಯಿಲ್ಲ. ಯಾರಾದರೇನು ತಿನ್ನದೆ , ವಿಸರ್ಜಿಸದೆ ಇರಲು ಸಾಧ್ಯವಿಲ್ಲ . ಹೀಗಾಗಿ ನಾನು ಎನ್ನುವ ಅಹಂಭಾವ ನೆತ್ತಿಗೇರದೆ ಇರಲಿ ಎನ್ನುವುದು ಇಂತಹ ಬೊಂಬೆಯ ಸೃಷ್ಟಿಯ ಹಿಂದಿನ ರಹಸ್ಯ.

ಜಗತ್ತು ಅಚ್ಚರಿಗಳ ಆಗರ. ನಮಗೆ ಗೊತ್ತಿಲ್ಲದ ನೂರಾರು , ಸಾವಿರಾರು ಸಂಪ್ರದಾಯಗಳು ಈ ಭೂಮಿಯ ಮೇಲಿದೆ. ಒಳಿತನ್ನ ಸ್ವಾಗತಿಸುತ್ತಾ , ಕೆಡುಕು ಮಾಡುವುದನ್ನ ಅಥವಾ ಇಂದಿನ ಜಗತ್ತಿಗೆ ತೀರಾ ಅನಗತ್ಯ ಎನ್ನಿಸಿದ್ದನ್ನ ಬಿಡುತ್ತಾ ಹೋದರೆ ಜಗತ್ತು ಸುಂದರವಾಗುತ್ತದೆ. ಈ ಬಗ್ಗೆ ನಿಮ್ಮ ನಿಲುವೇನು ?

English summary
Barcelona Memories Column By Rangaswamy Mookanahalli Part 70
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X