ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಹುಲ್ ಬಜಾಜ್ ಜೊತೆ ಕಳೆದದ್ದು 2 ದಿನ, ಕಲಿತದ್ದು ಅಗಾಧ!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ವಯಸ್ಸು 23 ಆದರೂ ನಾನು ರಕ್ತ ಪರೀಕ್ಷೆ ಮಾಡಿಸಿರಲಿಲ್ಲ. ನನ್ನ ಬ್ಲಡ್ ಗ್ರೂಪ್ ಯಾವುದು ಎನ್ನುವುದು ಗೊತ್ತಿರಲಿಲ್ಲ. ಬದುಕು ಬಂದತ್ತ ಮುಖ ಮಾಡಿ ಹೊರಟಿದ್ದ ನನಗೆ ಅಚಾನಕ್ಕಾಗಿ ವಿದೇಶದಲ್ಲಿ ಕೆಲಸದ ಆಫರ್ ಸಿಗಬೇಕೇ? ಪಾಸ್ಪೋರ್ಟ್ ಇಲ್ಲದ, ಬ್ಲಡ್ ಗ್ರೂಪ್ ಕೂಡ ತಿಳಿಯದ ನನಗೆ ಎಲ್ಲವೂ ಹೊಸದು. ನನ್ನ ಕೆಲಸಕ್ಕೆ ತೆಗೆದುಕೊಂಡಿದ್ದ ಸಂಸ್ಥೆ ಬ್ಲಡ್ ರಿಪೋರ್ಟ್ ಸಲ್ಲಿಸುವಂತೆ ಹೇಳಿತ್ತು.

ಅದನ್ನ ಮಾಡಿಸಿದ ಅನುಭವವೇ ಒಂದು ಕಥೆಯಾದೀತು. ಅಂದಿಗೆ ಅಗಾಧ ದೇಹದ ಮಾಲೀಕನಾಗಿದ್ದ ನನ್ನ ಬಿಪಿ 125/79 ತೋರಿಸಿತ್ತು. 120/80 ಇರಬೇಕು ಎಂದು ಓದಿದ್ದ ನನಗೆ ಅಯ್ಯೋ ಇದೇನು 15 ಪಾಯಿಂಟ್ ಹೆಚ್ಚಿದೆ ನನ್ನ ರಿಜೆಕ್ಟ್ ಮಾಡಿಬಿಟ್ಟರೆ ಹೇಗೆ ಎಂದು ಪೂರ್ಣ ರಾತ್ರಿ ನಿದ್ದೆ ಮಾಡದೆ ಯೋಚಿಸಿದ್ದೇನೆ. ಇಂದಿಗೆ ಅದೆಷ್ಟು ಸಣ್ಣ ಕಾರಣಗಳಿಗೆ ಮನಸ್ಸು ಟೆನ್ಸ್ ಆಗುತ್ತಿತ್ತು ಎನ್ನುವುದು ನೆನದು ನಗು ಬರುತ್ತದೆ. ಬಟ್ ಅನುಭವವಿಲ್ಲದ ಆ ದಿನಗಳಲ್ಲಿ ಸಣ್ಣ ವಿಷಯಗಳು ಕೂಡ ಬೆಟ್ಟದ ಹಾಗೆ ತೋರುತ್ತಿದ್ದವು.

ಸ್ಪ್ಯಾನಿಷ್ ಊಟದ ವ್ಯಾಪಾರಕ್ಕೂ ಕೈ ಇಟ್ಟ ಚೀನಿಯರು !ಸ್ಪ್ಯಾನಿಷ್ ಊಟದ ವ್ಯಾಪಾರಕ್ಕೂ ಕೈ ಇಟ್ಟ ಚೀನಿಯರು !

ಅವರಿವರ ಕಾಡಿಬೇಡಿ ವಾರದಲ್ಲಿ ಪಾಸ್ಪೋರ್ಟ್ ಮಾಡಿಕೊಂಡದ್ದು ಇನ್ನೊಂದು ಕಥೆ. ನಿಮಗೆಲ್ಲಾ ಗೊತ್ತಿರಲಿ ಅಂದಿನ ದಿನಗಳಲ್ಲಿ ಪಾಸ್ಪೋರ್ಟ್ ವಿಲೇವಾರಿ ಕುರಿತು ನ್ಯೂಸ್ ಪೇಪರ್ ನಲ್ಲಿ ಮಾಹಿತಿ ನೀಡುತ್ತಿದ್ದರು. ತತ್ಕಾಲ್ ಸ್ಕೀಮ್‌ನಲ್ಲಿ ಅಂದಿನ ದಿನಕ್ಕೆ 1,500 ರೂಪಾಯಿ ಫೀಸ್ ಕಟ್ಟಿ, ಪೀಣ್ಯ ಸ್ಲಮ್ ನಲ್ಲಿ ಇದ್ದ ನಾಗರಾಜಪ್ಪ ಎನ್ನುವ ಪೊಲೀಸ್ ಅವರ ಸಹಾಯ ಪಡೆದು ನೇರವಾಗಿ ಕಮಿಷನರ್ ಸಹಿ ಪಡೆದು ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಪಡೆದಿದ್ದೆ. ಆಮೇಲೆ ಮೂರು ತಿಂಗಳು ದುಬೈ, ಅಲ್ಲಿಂದ ಬಾರ್ಸಿಲೋನಾ ಬದುಕಾಯ್ತು.

Barcelona Memories Column By Rangaswamy Mookanahalli Part 69 on Rahul Bajaj

ಬಾರ್ಸಿಲೋನಾ ದಲ್ಲಿ ವರ್ಷಕೊಮ್ಮೆ ಸಂಸ್ಥೆಯ ಕಡೆಯಿಂದ ಈ ರಕ್ತ ಪರೀಕ್ಷೆ ಕಡ್ಡಾಯವಾಗಿ ಮಾಡಿಸುತ್ತಿದ್ದರು. ಸಣ್ಣ ಪುಟ್ಟ ಜ್ವರ, ಇತ್ಯಾದಿಗಳಿಗೆ ಹೋದಾಗ ಕೂಡ ಸ್ಥಳೀಯ ಆಸ್ಪತ್ರೆಯಲ್ಲಿ ಬ್ಲಡ್ ಟೆಸ್ಟ್‌ಗೆ ಬರೆದು ಕೊಡುತ್ತಿದ್ದರು. ಹೀಗೆ ಒಮ್ಮೆ ಸ್ಥಳೀಯ ಆಸ್ಪತ್ರೆಗೆ ಬ್ಲಡ್ ಕೊಡಲು ಹೋಗಿದ್ದೆ. ಹೋಗುವ ಮುನ್ನ ಬೆಳಿಗ್ಗೆ ಎಂದಿನಂತೆ ವ್ಯಾಯಾಮ, ನಡಿಗೆ ಮುಗಿಸಿ, ಪುಳಿಯೋಗರೆ ಮಾಡಿಕೊಂಡು (ಮಾಡುವುದೇನು ಬಂತು ಬಿಡಿ, ಅನ್ನ ಮಾಡಿದರೆ ಸಾಕಾಗುತ್ತಿತ್ತು, ಅಮ್ಮ ಕೊಟ್ಟ ಪುಳಿಯೋಗರೆ ಗೊಜ್ಜು ಸದಾ ತಲೆಕಾಯುವ ದೈವದಂತೆ ಜೊತೆಯಾಗಿರುತ್ತಿತ್ತು) ಹೊಟ್ಟೆ ತುಂಬಾ ತಿಂದು ಹೋಗಿದ್ದೆ.

ಅಲ್ಲಿ ರಕ್ತವನ್ನ ಸ್ಯಾಂಪಲ್ ಪಡೆಯುವಾಕೆ ' ಆಸ್ ದಿಸಾಯುನದೋ ' ಎಂದಳು. ಅಂದರೆ ತಿಂಡಿಯಾಯ್ತೆ ಎಂದರ್ಥ. ನಾನು 'ಸಿ ' (ಯಸ್ ) ಎಂದೇ. ಕೆ ಆಸ್ ಕೊಮಿದೋ? ಅಂದರೆ ಏನು ತಿಂದೆ ಎಂದರ್ಥ. ನಾನು ಇವಳಿಗೆ ಪುಳಿಯೋಗರೆ ಹೆಸರು ಹೇಳಿದರೆ ಏನು ಅರ್ಥವಾದೀತು ಎಂದು 'ಅರೋಸ್ ' (ಅನ್ನ ) ಎಂದೇ . ಆಕೆ ಒಂದು ಕ್ಷಣ ಹಾವನ್ನ ತುಳಿದವಳಂತೆ ಬೆಚ್ಚಿ ಬಿದ್ದಳು ' ಎಲ್ ಕೆ ? ಅರೋಸ್ ಪೊರ್ಲಾ ಮಾನ್ಯನ ' ? ಎಂದು ಹುಬ್ಬೇರಿಸದಳು. ಏನು ಬೆಳಿಗ್ಗೆ ಅನ್ನವೇ ಎನ್ನುವ ಆಶ್ಚರ್ಯಭರಿತ ಧ್ವನಿಯಲ್ಲಿ ಕೇಳಿದ್ದಳು.

ಇಲ್ಲಿನ ಜನರ ಮುಖ್ಯ ಆಹಾರ ಗೋಧಿಯಿಂದ ಮಾಡುವ ಬ್ರೆಡ್ಡು , ಚೀಸು , ತರಹಾವರಿ ಮಾಂಸಗಳು. ಅದರಲ್ಲೂ ಹಂದಿ ಮತ್ತು ದನದ ಮಾಂಸವನ್ನ ಬಹಳ ಇಚ್ಛೆ ಪಟ್ಟು ತಿನ್ನುತ್ತಾರೆ. ಅನ್ನ ತಿನ್ನುವುದು ಕೇವಲ ಬಡವರು ಎನ್ನುವ ಭಾವನೆ ಇಲ್ಲಿದೆ. ಇಲ್ಲಿ ಅನ್ನವನ್ನ ಬಳಸಿ ಮಾಡುವ ಪೆಯೆಯ್ಯ ಎನ್ನುವ ಖಾದ್ಯ ಬಹಳ ಪ್ರಸಿದ್ಧ ಆದರೂ ಬೆಳಿಗ್ಗೆಗೆ ಯಾರು ನಮ್ಮಂತೆ ಅನ್ನವನ್ನ ತಿನ್ನುವುದಿಲ್ಲ.

ಪೀಣ್ಯದಲ್ಲಿ ಇದ್ದ ವರ್ಷವಗಳಷ್ಟೂ ಅಮ್ಮ ಬೆಳಗ್ಗಿನ ತಿಂಡಿಗೆ ಅನ್ನ ಮಾಡುತ್ತಿದ್ದರು. ಹೆಸರು ಮಾತ್ರ ಬಿಸಿಬೇಳೆ ಬಾತ್ , ಪುಳಿಯೋಗರೆ, ಚಿತ್ರಾನ್ನ, ವಾಂಗೀಬಾತ್ ಹೀಗೆ ಬದಲಾಗುತ್ತಿತ್ತು ಆದರೆ ಅದು ಅನ್ನವೇ ಆಗಿರುತ್ತಿತ್ತು. ರೊಟ್ಟಿ, ದೋಸೆ,ಇಡ್ಲಿ , ಉಪ್ಪಿಟ್ಟು ಕೂಡ ಅನ್ನದ ರೂಪಾಂತರವೇ ಆಗಿರುತ್ತಿತ್ತು. ಹೀಗಾಗಿ ಅನ್ನವಿಲ್ಲದೆ ಬದುಕುವುದು ಅಸಾಧ್ಯ ಎನ್ನುವ ಮಟ್ಟಕ್ಕೆ ಬದುಕಿನಲ್ಲಿ ಅನ್ನ ಹಾಸುಹೊಕ್ಕಿತ್ತು. ಅದೇ ಬಾರ್ಸಿಲೋನಾ ದಲ್ಲೂ ಮುಂದುವರೆದಿತ್ತು. ಬ್ರೆಡ್ಡು , ಚೀಸು ಕೂಡ ಹೊಸದಾಗಿ ಸೇರ್ಪಡೆ ಗೊಂಡಿದ್ದವು.

ಆದರೂ ಅನ್ನದ ಮುಂದೆ ಎಲ್ಲವೂ ಮಂಕಾಗಿ ಬಿಡುತ್ತಿದ್ದವು. ಏನೂ ಮಾಡಲು ಮನಸಿಲ್ಲದ ದಿನ ಕೈ ಹಿಡಿಯುತ್ತಿದ್ದದು ನಮ್ಮ ಪೊಂಗಲ್. ಎಲ್ಲಾ ಪದಾರ್ಥಗಳನ್ನ ಕುಕ್ಕರಿನಲ್ಲಿ ಹಾಕಿ ಒಂದೆರೆಡು ವಿಷಲ್ ಹೊಡೆಸಿಬಿಟ್ಟರೆ ಅಲ್ಲಿಗೆ ಮುಗಿಯಿತು ನೋಡಿ! ಹೊಟ್ಟೆಗೂ ತಂಪು , ಮನಸ್ಸಿಗೂ ಹಿತ.

ಸ್ಪೇನ್‌ನಲ್ಲಿ ಆಹಾರ ಸೇವಿಸುವ ಮುನ್ನಾ ನಿಮಗಿದು ಗೊತ್ತಿರಲಿ!ಸ್ಪೇನ್‌ನಲ್ಲಿ ಆಹಾರ ಸೇವಿಸುವ ಮುನ್ನಾ ನಿಮಗಿದು ಗೊತ್ತಿರಲಿ!

ರಕ್ತ ಸ್ಯಾಂಪಲ್ ತೆಗೆದುಕೊಳ್ಳುವಾಕೆ ನಾನು ಅನ್ನ ತಿಂದು ಬಂದಿರುವುದು ತಿಳಿದು ರಕ್ತ ಪರೀಕ್ಷೆಗೆ ಏನೂ ತಿನ್ನದೇ ಖಾಲಿ ಹೊಟ್ಟೆಯಲ್ಲಿ ಬರಬೇಕು ಎನ್ನುವ ಸಾಮಾನ್ಯ ಜ್ಞಾನ ನಿನಗಿಲ್ಲವೇ? ಎಂದು ಮತ್ತೆ ನಾಳೆ ಬರಲು ಹೇಳಿ ಸಾಗಹಾಕಿದ್ದಳು. ನನಗೋ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಕಾಫಿ ಕುಡಿದು ಅಭ್ಯಾಸ. ತಿಂಡಿ ನನ್ನ ಮಟ್ಟಿಗೆ ದೊಡ್ಡ ವಿಷಯವಲ್ಲ ಅದಿಲ್ಲದೆ ಇರಬಹುದಾಗಿತ್ತು. ಆದರೆ ರಕ್ತ ಪರೀಕ್ಷೆಗೆ ಸಮಯ ಏಳೂವರೆ ಅಥವಾ ಎಂಟಕ್ಕೆ ಕೆಲವೊಮ್ಮೆ ಎಂಟೂವರೆಗೆ ಕೊಡುತ್ತಿದ್ದರು.

ಬೆಳಗ್ಗಿನ ಬೇಗಿನ ಸ್ಲಾಟ್ ಗಳು ಶುಗರ್ ಇದ್ದವರಿಗೆ ಮೀಸಲಾಗಿದ್ದವು. ಹೀಗಾಗಿ ಸಾಮಾನ್ಯರ ಬಾರಿ ಬರುವಷ್ಟರಲ್ಲಿ ೮ ಗಂಟೆ ಆಗಿರುತ್ತಿತ್ತು. ಬೆಳಗ್ಗೆ ಐದಕ್ಕೆ ಏಳುತ್ತಿದ್ದ ನನಗೆ ಎಂಟರ ವೇಳೆಗೆ ತಲೆನೋವು ಶುರುವಾಗುತ್ತಿತ್ತು. ಬ್ಲಡ್ ಕೊಟ್ಟ ಮರುಗಳಿಗೆ ಕಾಫಿ ಬಾರ್ ನಲ್ಲಿ ಕಾಫಿ ಹೀರುತ್ತಾ ಕುಳಿತು ಬಿಡುತ್ತಿದ್ದೆ.

ಬಾರ್ಸಿಲೋನಾದಲ್ಲಿ ಭಾರತೀಯರ ಸಂಖ್ಯೆ ತೀರಾ ಕಡಿಮೆ ಹೀಗಾಗಿ ಕೇವಲ ಭಾರತಕ್ಕೆ ಸೀಮಿತವಾದ ಸಂಘ ಸಂಸ್ಥೆಗಳಿಲ್ಲ . ' ಕಾಸ ಆಸಿಯಾ ' ಅಂದರೆ ಏಷ್ಯನ್ ಹೌಸ್ ಎಂದರ್ಥ . ಏಷ್ಯಾ ದೇಶದ ಜನರೆಲ್ಲಾ ಇಲ್ಲಿ ಸೇರುತ್ತಾರೆ . ಭಾರತದಿಂದ ಯಾವುದೇ ಪ್ರಸಿದ್ಧ ವ್ಯಕ್ತಿ ಬಾರ್ಸಿಲೋನಾ ಕ್ಕೆ ಬಂದರೆ ನನ್ನ ತಮ್ಮ ಕಾಂತನಿಗೆ ಅಥವಾ ನನಗೆ ಕರೆ ಮಾಡುತ್ತಿದ್ದರು . ಮುಕ್ಕಾಲು ಪಾಲು ಫೋನ್ ಕಾಲ್ ಕಾಂತನಿಗೆ ಬರುತ್ತಿತ್ತು . ಅದಕ್ಕೆ ಕಾರಣ ಕಾಂತ ಕಾಸ ಆಸಿಯಾ ದಲ್ಲಿ ಹೆಚ್ಚು ಸಕ್ರಿಯನಾಗಿದ್ದ .

ಜೊತೆಗೆ ಭಾರತೀಯ ಹಬ್ಬಗಳು, ಭಾರತೀಯ ಅಡುಗೆಗಳು, ಭಾರತೀಯ ಉಡುಗೆ ತೊಡುಗೆಗಳು ಹೀಗೆ ಹಲವಾರು ವಿಷಯಗಳನ್ನ ಅಡಿಯಲ್ಲಿ ಕತಲೂನ್ಯ ರೇಡಿಯೋ ದಲ್ಲಿ , ಟಿವಿಯಲ್ಲಿ ಅನೇಕ ಕಾರ್ಯಕ್ರಮಗಳನ್ನ ನೀಡಿದ್ದ . ಒಮ್ಮೆ ನನ್ನ ಅಪಾರ್ಟ್ಮೆಂಟ್ ನ ಲಿಫ್ಟ್ನಲ್ಲಿ ಸಿಕ್ಕ ನನ್ನ ನೈಬರ್ ಒಬ್ಬರು ನೀನು.. ನೀನು? ಎಂದಿದ್ದರು . ನಾನು ಅವನಲ್ಲ , ಅವನು ನನ್ನ ತಮ್ಮ ಎಂದಿದ್ದೆ . ಹಿಂದಿನ ದಿನವಷ್ಟೇ ಕತಲಾನ್ ಟಿವಿಯಲ್ಲಿ ಉಪ್ಪಿಟ್ಟು ಮಾಡುವುದು ಹೇಗೆ ಅಂತ ಹೇಳಿಕೊಟ್ಟಿದ್ದ . ಇರಲಿ .

ಹೀಗೆ ಬಾರ್ಸಿಲೋನಾ ಗೆ ಬಂದ ಪ್ರಸಿದ್ಧರ ಬೇಕು ಬೇಡ, ಅವರ ಸುತ್ತಾಟ ನಮ್ಮ ಹೆಗೆಲೇರುತ್ತಿತ್ತು . ಯಾವಾಗಲೂ ಅಂತಲ್ಲ ಕೆಲವರು ಬಂದು ಹೋದದ್ದು ಗೊತ್ತು ಕೂಡ ಆಗುತ್ತಿರಲಿಲ್ಲ !! ಕೆಲವರು ಇಲ್ಲಿನ ಸ್ಥಳೀಯ ಭಾರತೀಯನನ್ನ ಅವಲಂಬಿಸುತ್ತಿದ್ದರು. ಇಲ್ಲಿ ಯಾರೇ ಬರಲಿ ಭಾಷೆ ಎನ್ನುವುದು ಬಹಳ ದೊಡ್ಡ ತೊಡಕಾಗುತ್ತಿತ್ತು . ಹೀಗಾಗಿ ಅವರಿಗೆ ಸ್ಥಳೀಯ ಭಾರತೀಯ, ಸ್ಪ್ಯಾನಿಷ್ ಭಾಷೆ ಬಲ್ಲವನ ಸಹಾಯ ಬೇಕಾಗುತ್ತಿತ್ತು . ಇದು ಪ್ರತಿಫಲವಿಲ್ಲದೆ ಮಾಡುತಿದ್ದ ಕೆಲಸ . ಹಲವು ಸೆಲೆಬ್ರೆಟಿಗಳಿಗೆ ತಲೆ ನಿಲ್ಲುತ್ತಿರಲಿಲ್ಲ, ಹಣ, ಅಧಿಕಾರ, ಪ್ರಸಿದ್ದಿ ಅವರನ್ನ ಕಡಿಮೆ ಮನುಷ್ಯರನ್ನಾಗಿ ಮಾಡಿದ್ದವು .

ಹೀಗೆ ಒಮ್ಮೆ ಬಜಾಜ್ ಗ್ರೂಪ್‌ನ ಅಂದಿನ ಮುಖ್ಯಸ್ಥ ನನ್ನ ಹೆಗೆಲೇರಿದ್ದರು. ಅದು 2003ರ ಸಮಯ ಆಗಿನ್ನೂ ಪೂರ್ಣ ಬಜಾಜ್ ಅವರ ಹೆಗಲ ಮೇಲಿತ್ತು . 2008ರಲ್ಲಿ ಅಧಿಕಾರವನ್ನ ರಾಹುಲ್ ಜಿ ಮಕ್ಕಳಿಗೆ ಹಸ್ತಾಂತರ ಮಾಡಿದರು. ಅದು ಬೇರೆಯದೇ ಕಥೆ. ಸುತ್ತಾಟದ ನಡುವೆ ನನ್ನ ವೃತ್ತಿಯ ಬಗ್ಗೆ ಕೇಳಿ ತಿಳಿದುಕೊಂಡರು. ಹಿರಿಯರು ಎನ್ನುವ ಕಾರಣಕ್ಕೆ ಮತ್ತೆ ಭಾಷೆ ಕೂಡ ಬಾರದು ಎನ್ನುವ ಕಾರಣಕ್ಕೆ ನಾನು ಅವರೊಂದಿಗೆ ಬಹಳ ನಯ -ವಿನಯದಿಂದ ನೆಡೆದುಕೊಂಡೆ .

ಎರಡು ದಿನದಲ್ಲಿ ಕನಿಷ್ಠ ಪಕ್ಷ 16/18 ತಾಸು ಅವರೊಂದಿಗೆ ಕಳೆದಿದ್ದೆ . ಅವರಿಗೆ ನನ್ನ ಗುಣ , ನಾನು ಇಷ್ಟವಾಗಿದ್ದೆ . ' ಆಪ್ಕೋ ಮಾಲೂಮ್ ಹೈ , ಇಂಡಿಯಾ ಪೆ ಮುಜೆ ಮಿಲ್ನ ಬಹುತ್ ಮುಷ್ಕಿಲ್ ಹೈ , ಮೈ ಕೌನ್ ಹು ಆಪ್ ಕೋ ಪತಾ ಹೈ ? ಎಂದರು . ನಾನು 'ಜಿ ಸರ್ ಮಾಲೂಮ್ ಹೈ' ಎಂದಷ್ಟೇ ಹೇಳಿದೆ. ಮನುಷ್ಯ ಎಷ್ಟೇ ದೂಡ್ಡವನಾದರೂ ಎದುರಿನ ವ್ಯಕ್ತಿ ನನ್ನ ಗೌರವಿಸಲಿ, ಇನ್ನು ಹೆಚ್ಚಿನ ಮರ್ಯಾದೆ ಕೊಡಲಿ ಎನ್ನುವ ಬಯಕೆಗೆ ಏಕೆ ಬೀಳುತ್ತಾನೆ ನನಗಂತೂ ತಿಳಿಯದು.

ಐನೂರು ವರ್ಷ ಹಳೆಯ ಹಬ್ಬ ; ಲಾಸ್ ಲ್ಯೂಮಿನಾರಿಯಸ್!ಐನೂರು ವರ್ಷ ಹಳೆಯ ಹಬ್ಬ ; ಲಾಸ್ ಲ್ಯೂಮಿನಾರಿಯಸ್!

' ಇದರ್ ಕಿತ್ನಾ ಕಮಾತೆವೋ ... ? ದಸ್ ಹಸಾರ್ ಯುರೋ ಮೈನೆಪೆ ? ಮೇರಾ ಸಾಥ್ ಮುಂಬೈ ಆಜಾವ್ ದುಗುನ ದೊಂಗ ' ಎಂದರು ಅವರ ಧ್ವನಿಯಲ್ಲಿ ನನ್ನ ಇಲ್ಲಿಂದ ಖರೀದಿ ಮಾಡಿ ಕರೆದುಕೊಂಡು ಹೋಗಬೇಕು ಎನ್ನುವ ಭಾವವಿತ್ತು .ಐದು ವರ್ಷ ಸ್ವಂತಂತ್ರ್ಯದ ಗಾಳಿ ಕುಡಿದಿದ್ದೆ . ಮೇಲಾಗಿ ಅವರು ಕೇಳಿದ ರೀತಿ ನನಗೆ ಇಷ್ಟವಾಗಲಿಲ್ಲ . ಅವರಿಗೆ ತಣ್ಣಗೆ ಹೇಳಿದೆ' ಸರ್ ಜಿ ಸದ್ಯಕ್ಕೆ ನಾನು ಕಾರಿನಿಂದ ಇಳಿದು ಹೋದರೆ ನೀವಿಲ್ಲಿ ಅನಕ್ಷರಸ್ಥ ' . ಅವರ ಮುಖದಲ್ಲಿ ಇವನಾರು ನನ್ನ ಆಫರ್ ತಿರಸ್ಕರಿಸುತ್ತಿದ್ದಾನಲ್ಲ ಎನ್ನುವ ಭಾವ ಕಂಡಿತು .

ಅಂದು ಬಜಾಜ್ ಅವರ ಆಫರ್‌ಗೆ ಯಸ್ ಎಂದಿದ್ದರೆ ಇಂದಿಗಿಂತ ಹೆಚ್ಚು ಹಣವಂತನಾಗಿರುತ್ತಿದ್ದೆ ನಿಜ ಆದರೆ ಸ್ವಂತಂತ್ರ್ಯ? ಅದು ಇರುತ್ತಿತ್ತೇ? ಗೊತ್ತಿಲ್ಲ . ಕಾರ್ಪೊರೇಟ್ ಫೈನಾನ್ಸ್ ಎನ್ನುವ ಸುಳಿಯಿಂದ ಹೊರಬಂದ ಮೇಲಷ್ಟೇ ಇಷ್ಟೆಲ್ಲಾ ಬರೆಯಲು, ಸಂವಹನ ಮಾಡಲು ಸಾಧ್ಯವಾಗುತ್ತಿರುವುದು. ಮನಸ್ಸಿಗೆ ಯಾವುದೂ ಹೆಚ್ಚು ಹತ್ತಿರವೋ , ಯಾವುದೋ ಖುಷಿ ನೀಡುತ್ತದೋ ಅದನ್ನ ಮಾಡಬೇಕು .

ಇದದ್ದ ಇದ್ದ ಹಾಗೆ ಹೇಳಿದರೆ ಅದನ್ನ ಸ್ವೀಕರಿಸುವ ಸಂಖ್ಯೆ ಇಂದಿನ ಜಗತ್ತಿನಲ್ಲಿ ಬಹಳ ಕಡಿಮೆ. ಇವನೇನು ನಮಗೆ ಹೇಳುವುದು ಎನ್ನುವ ದಾಷ್ಟಿಕತೆ ! . ಆದರೆ ರಾಹುಲ್ ಜಿ ಅಂತವರಲ್ಲ, ಅವರ ತಪ್ಪು ಅರಿತುಕೊಂಡರು ಪ್ರೀತಿಯಿಂದ ನನ್ನ ರಂಗ ಭಾಯ್ ಅಂದರು .

ಜೂನ್ 10, 2021ಕ್ಕೆ ರಾಹುಲ್ ಜೀ ಗೆ ಬರೋಬ್ಬರಿ 82 ತುಂಬಿತ್ತು . ತೊಡ ಟಿಕಾ ಜಾದ ಬೂಲ್ದೂ ಎನ್ನುತ್ತಾ , ರೋಟಿ ಕರ್ರಿಯನ್ನ ಮೇಲುತ್ತಿದ್ದ , ಟಾರ್ಗೆಟ್ ರೀಚ್ ಆಗದಿದ್ದರೆ ನಿತ್ಯ ಇಷ್ಟು ವಹಿವಾಟು ಆಗಲೇಬೇಕು ಎನ್ನುವ ಟಾರ್ಗೆಟ್ ಪನಿಷಮೆಂಟ್ ರೂಪದಲ್ಲಿ ರಾತ್ರಿ ಊಟ ಬಿಡುತ್ತಿದ್ದ ಸಾವಿರಾರು ಕೋಟಿ ವಹಿವಾಟಿನ ಉದ್ಯಮದ ಅಂದಿನ ನಾಯಕನ ಗುಣ ಆಶ್ಚರ್ಯ ತರಿಸಿತ್ತು . ಅಂದಿಗೆ ಅವರಿಗೆ 69 ನನಗೆ 28 , ಅವರೊಂದಿಗೆ ಇದದ್ದು ಕೇವಲ ಎರಡು ದಿನ . ಕಲಿತದ್ದು ಮಾತ್ರ ಬದುಕಿನಲ್ಲಿ ಮರೆಯಲಾಗದ್ದು.

ರಾಹುಲ್ ಜೀ ಅವರು ಫೆಬ್ರವರಿ 12, 2022 ರಲ್ಲಿ 82ರ ಹರಯದಲ್ಲಿ ಇಹಲೋಕಕ್ಕೆ ಬಾಯ್ ಹೇಳಿ ಹೋಗಿದ್ದಾರೆ. ಇಂತಹ ಮಹಾನ್ ಆತ್ಮದ ಜೊತೆಗೆ ಬಾರ್ಸಿಲೋನಾ ನಗರದಲ್ಲಿ ಒಂದಷ್ಟು ತಾಸುಗಳು ಓಡಾಡಿದ ನೆನಪುಗಳು ಸದಾ ಹಸಿರು.

English summary
Barcelona Memories Column By Rangaswamy Mookanahalli Part 69
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X