ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪ್ಯಾನಿಷ್ ಊಟದ ವ್ಯಾಪಾರಕ್ಕೂ ಕೈ ಇಟ್ಟ ಚೀನಿಯರು !

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಬಾರ್ಸಿಲೋನಾ ಅಂದರೆ ಬಾರ್. ಪ್ರತಿ ಹತ್ತು ಹೆಜ್ಜೆಗೆ ಒಂದು ಬಾರು ! ಉತ್ಪ್ರೇಕ್ಷೆ ಅಲ್ಲ ನಿಜ . ಐವತ್ತೋ ಅರವತ್ತೋ ಮನೆ ಇರುವ ಕಟ್ಟಡದ ಗ್ರೌಂಡ್ ಫ್ಲೋರ್ ನಲ್ಲಿ 2/3 ಬಾರು ಗ್ಯಾರಂಟಿ ! ., ನೀವು ನಂಬಲ್ಲ , ಜನ ಮನೇಲಿ ಕಾಫೀ , ತಿಂಡಿ ಮಾಡುವ ಬದಲು , ಕೆಳಗೆ ಬಂದು ಘಂಟೆ ಗಟ್ಟಲೆ ಹರಟೆ ಹೊಡೆಯುತ್ತಾ ಕಾಫಿ ಹೀರಿ , ಒಂದೆರಡು ಸಿಗರೇಟು ಸುಟ್ಟು, ಬೋಕಾತ್ತ (bocatta ) ತಿಂದು (ಗಟ್ಟಿ , ಮರದ ತುಂಡು ಹೋಲುವ ಬ್ರೆಡ್ಡು , ನಡುವೆ , ಹಂದಿ /ಹಸು /ಮೇಕೆ ., ನೀವು ಕೇಳಿದ ಪ್ರಾಣಿಯ ಮಾಂಸದ ತುಂಡು ಇಟ್ಟು ತಯಾರಾದ ಒಂದು ಬೆಳಗಿನ ಉಪಾಹಾರ ) ಕೆಲಸಕ್ಕೆ ಹೊರಡುತ್ತಾರೆ.

ಹಂದಿ ಮಾಂಸ , ವೈನ್ ಊಟದಲ್ಲಿ ಇರಲೇಬೇಕಾದವು . ಇಲ್ಲಿನ ಹಂದಿ ಮಾಂಸ, ಯೂರೋಪಿನ ಇತರ ದೇಶಗಳಿಗೆ ರಪ್ತು ಆಗುತ್ತದೆ. ಸ್ಪ್ಯಾನಿಷ್ ವೈನ್ ಕೂಡ ಬಹಳವೇ ಪ್ರಸಿದ್ದಿ. ತಕಿಲ ಎನ್ನುವ ಹೆಸರಿನ ಮದ್ಯ ಬಲು ಪ್ರಸಿದ್ದಿ. ಹಂದಿ ಮಾಂಸ ಬಹಳ ದುಬಾರಿ. ಏಕೆಂದರೆ ಇದನ್ನು 10/12 ವರ್ಷ ಒಣಗಿಸಿ ಇಡುತ್ತಾರೆ, ಕೆಡದಂತೆ ಸಂರಕ್ಷಿಸಿ ! ಇದನ್ನು ಬೇಯಿಸುವುದಿಲ್ಲ, ಹಾಗೆ ತೆಳ್ಳಗೆ ಕಟ್ ಮಾಡಿ ಬ್ರೆಡ್ಡಿನ ಮಧ್ಯೆ ಇಟ್ಟು ಮೆಲ್ಲುತ್ತಾರೆ.

 ಸ್ಪೇನ್‌ನಲ್ಲಿ ಆಹಾರ ಸೇವಿಸುವ ಮುನ್ನಾ ನಿಮಗಿದು ಗೊತ್ತಿರಲಿ! ಸ್ಪೇನ್‌ನಲ್ಲಿ ಆಹಾರ ಸೇವಿಸುವ ಮುನ್ನಾ ನಿಮಗಿದು ಗೊತ್ತಿರಲಿ!

ಹೀಗೆ ಹಂದಿ ಮಾಂಸವನ್ನ ಅತ್ಯಂತ ತೆಳ್ಳಗೆ ಕಟ್ ಮಾಡುವವರಿಗೆ ಇಲ್ಲಿ ಬಹಳ ಬೇಡಿಕೆಯಿದೆ. ಮಷೀನ್ ಬಳಸಿ ತೆಳ್ಳಗೆ ಕಟ್ ಮಾಡಬಹುದು ಆದರೆ ಇಲ್ಲಿನ ಜನ ಈ ವಿಷಯದಲ್ಲಿ ಬಹಳ ಸಂಪ್ರದಾಯವಾದಿಗಳು. ಹೀಗೆ ಅತ್ಯಂತ ತೆಳುವಾಗಿ ಕಟ್ ಮಾಡಲು ಬಹಳ ತಾಳ್ಮೆ ಬೇಕು. ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಈ ರೀತಿಯ ಒಣಗಿಸಿದ ಹಂದಿ ಮಾಂಸ (ಹಾಮೊನ್ )ಕ್ಕೆ ಎಲ್ಲಿಲ್ಲದ ಬೇಡಿಕೆ ಬರುತ್ತದೆ. ಮಾಂಸ ಹಳೆಯದಾದಷ್ಟು ಅದಕ್ಕೆ ಬೇಡಿಕೆ ಮತ್ತು ಬೆಲೆ ಎರಡೂ ಹೆಚ್ಚು.

Barcelona Memories Column By Rangaswamy Mookanahalli Part 68

ಸಸ್ಯಹಾರಿಗಳಿಗೆ ಏನೂ ಇಲ್ಲವೇ ಎಂದು ಪರಿತಪಿಸುವುದು ಬೇಡ. ವಿಧವಿಧದ ಚೀಸ್ ಇಲ್ಲಿ ಸಿಗುತ್ತದೆ. ಫ್ರೆಶ್ ಚೀಸ್ನಿಂದ ಹಿಡಿದು ವರ್ಷಾನುಗಟ್ಟಲೆ ಕ್ಯೂರ್ ಮಾಡಿದ ಗಟ್ಟಿಯಾದ ಒಣಗಿದ ಚೀಸ್ ಕೂಡ ಸಿಕ್ಕುತ್ತದೆ. ಸ್ಪೇನ್ ದೇಶದಲ್ಲಿನ ಒಂದು ಊರು ಮಾಂಚೆಗೂ ಎನ್ನುವುದು ಈ ರೀತಿಯ ಕ್ಯೂರ್ ಮಾಡಿದ ಚೀಸ್ ಗೆ ಬಹಳ ಪ್ರಸಿದ್ದಿ. ನಾನಂತೂ ಬಾರ್ ಹೊಕ್ಕಾಗ ಬೆಳಗಿನ ತಿಂಡಿಗೆ 'ಬೋಕಾತ್ತ ದೆ ಕೇಸೂ ಮಂಚೆಗೂ' ಎನ್ನುವುದನ್ನ ಎಂದಿಗೂ ಮರೆಯುತ್ತಿರಲಿಲ್ಲ. ಭಾರತಕ್ಕೆ ಮರಳಿ ಐದು ವರ್ಷವಾದರೂ ಈ ತಿಂಡಿಯ ಸ್ವಾದವನ್ನ ಮಾತ್ರ ಇಂದಿಗೂ ಮಿಸ್ ಮಾಡಿಕೊಳ್ಳುತ್ತೇನೆ.

ಮೊದಲೇ ಹೇಳಿದಂತೆ ಸ್ಪ್ಯಾನಿಷ್ ಜನರು ಊಟ ತಿಂಡಿಯ ವಿಷಯದಲ್ಲಿ ಸಂಪ್ರದಾಯವಾದಿಗಳು. ಇಲ್ಲಿ ಹಲವು ರೆಸ್ಟೋರೆಂಟ್ ಗಳು ಇಂದಿಗೂ ತಮ್ಮ ಅಡುಗೆಯನ್ನ ಮರವನ್ನ ಉರುವಲಾಗಿ ಬಳಸಿ ಮಾಡುತ್ತಾರೆ. ಅಂದರೆ ಹಳೆಯ ಕಾಲದ ಮರದ ಒಲೆಯಲ್ಲಿ ಅಡುಗೆಯನ್ನ ಮಾಡುತ್ತಾರೆ. ಜಗತ್ತಿನಾದ್ಯಂತ ಜನರಲ್ಲಿ ಹೀಗೆ ಮರವನ್ನ ಉರುವಲಾಗಿ ಬಳಸಿ ಮಾಡಿದ ಅಡುಗೆ ಹೆಚ್ಚು ರುಚಿಯಾಗಿರುತ್ತದೆ ಎನ್ನುವ ನಂಬಿಕೆಯಿದೆ.

ಐನೂರು ವರ್ಷ ಹಳೆಯ ಹಬ್ಬ ; ಲಾಸ್ ಲ್ಯೂಮಿನಾರಿಯಸ್!ಐನೂರು ವರ್ಷ ಹಳೆಯ ಹಬ್ಬ ; ಲಾಸ್ ಲ್ಯೂಮಿನಾರಿಯಸ್!

ಸ್ಪ್ಯಾನಿಶರು ಕೂಡ ಅದಕ್ಕೆ ಹೊರತಾಗಿಲ್ಲ. ಗ್ಯಾಸ್ ನಲ್ಲಿ ಅಥವಾ ಎಲೆಕ್ಟ್ರಿಕ್ ಸ್ಟೋವ್ ನಲ್ಲಿ ಬೇಯಿಸಿದ ಅಡುಗೆಯಲ್ಲಿ ರುಚಿಯಿರುವುದಿಲ್ಲ ಎನ್ನುವುದು ಕೂಡ ಇನ್ನೊಂದು ಬಹಳ ಚಾಲ್ತಿಯಲ್ಲಿರುವ ನಂಬಿಕೆ. ಹೀಗಾಗಿ ಇಂತಹ ಟ್ರಡಿಷನಲ್ ಹೋಟೆಲ್ ಗಳಲ್ಲಿ ಊಟದ ಬೆಲೆ ದುಬಾರಿ. ಸಾಮಾನ್ಯ ರೆಸ್ಟೋರೆಂಟ್ ಗಿಂತ ಸಾಮನ್ಯವಾಗಿ ಎರಡು ಅಥವಾ ಮೂರು ಪಟ್ಟು ಹೆಚ್ಚು ಬೆಲೆ. ಇಂತಹ ಹೋಟೆಲುಗಳು ಪ್ರಸಿದ್ಧವಾಗಿ ಬಿಟ್ಟರಂತೂ ಕೇಳುವುದು ಬೇಡ.

ಬೆಲೆ ಹತ್ತು ಹದಿನೈದು ಪಟ್ಟು ಹೆಚ್ಚಿರುತ್ತದೆ. ಕೇವಲ ಬೆಲೆ ಮಾತ್ರಲ್ಲದೆ , ಇಂತಹ ರೆಸ್ಟೋರೆಂಟ್ ಗಳಲ್ಲಿ ಊಟ ಮಾಡಲು ಐದಾರು ತಿಂಗಳು ಕಾದಿರಿಸಬೇಕಾಗುತ್ತದೆ. ಸಾಮಾನ್ಯ ರೆಸ್ಟೋರೆಂಟ್ ಗಳಲ್ಲಿ ನೀವು ವಾಕ್ ಇನ್ ಮಾಡಬಹುದು. ಆದರೆ ಇಂತಹ ಸಾಂಪ್ರದಾಯಿಕ ಹೋಟೆಲ್ ಗಳಿಗೆ ಕನಿಷ್ಠ ಒಂದೆರೆಡು ದಿನವಾದರೂ ಮುಂಚಿತವಾಗಿ ಸೀಟು ಕಾಯ್ದಿರಿಸುವುದು ಕಡ್ಡಾಯ. ಮ್ಯಾಕ್ ಡೊನಾಲ್ಡ್ ನಂತಹ ಫಾಸ್ಟ್ ಫುಡ್ ನಲ್ಲಿ ತಿನ್ನುವ ಜನರನ್ನ ಇಲ್ಲಿ ತೀರಾ ಸಾಮಾನ್ಯ ಜನವೆಂದು ಪರಿಗಣಿಸಲಾಗುತ್ತದೆ.

ಹೀಗೆ ತನ್ನತನವನ್ನ ಕಾಪಾಡಿಕೊಂಡು, ಬಾರ್ ನಲ್ಲಿ ಬದುಕು ಕಂಡುಕೊಂಡಿದ್ದ ಸಾವಿರಾರು ಸ್ಪ್ಯಾನಿಶರ ಜೀವನ ಇಂದಿಗೆ ಬದಲಾಗಿ ಹೋಗಿದೆ. 2005ರಿಂದ ಈಚೆಗೆ ಚೀನಿಯರು ಬಾರ್ ನಡೆಸುವ ಕಾಯಕದಲ್ಲಿ ನಿಧಾನವಾಗಿ ಕಾಲಿಟ್ಟರು. ಸ್ಪ್ಯಾನಿಷ್ ಉಚ್ಚಾರಣೆ ಸರಿಯಾಗಿ ಮಾಡಲು ಬಾರದ ಚೀನಿಯರು , ಸ್ಪ್ಯಾನಿಷ್ ಅಡುಗೆಯನ್ನ , ಅವರ ಊಟ ತಿಂಡಿಗಳನ್ನ ಮಾಡುವುದು ಮಾತ್ರ ಬೇಗ ಕಲಿತು ಬಿಟ್ಟರು.

ನನ್ನ ಮಟ್ಟಿಗೆ ಚೀನಿಯರು ಮಾಡಿದ ಬೋಕತ್ತ ಅಷ್ಟೊಂದು ಚನ್ನಾಗಿರುವುದಿಲ್ಲ , ಆದರೆ ಚೀನಿಯರು ಒಮ್ಮೆ ಯಾವುದೇ ವಲಯಕ್ಕೆ ಕಾಲಿಟ್ಟರು ಅಂದರೆ ಅದನ್ನ ಅವರು ಟೇಕ್ ಓವರ್ ಮಾಡದೆ ಬಿಡುವುದಿಲ್ಲ ಎಂದೇ ಅರ್ಥ. ಇವತ್ತಿಗೆ ಬಾರ್ಸಿಲೋನಾ , ಮ್ಯಾಡ್ರಿಡ್ ನಂತಹ ದೊಡ್ಡ ನಗರಗಳಿಂದ ಹಿಡಿದು ಸ್ಪೇನ್ ನ ಸಣ್ಣ ಪುಟ್ಟ ನಗರಗಳಲ್ಲಿ ಕೂಡ ಬಾರ್ ನಡೆಸುವುದು ಚೀನಿಯರು ಎನ್ನುವ ಮಟ್ಟಕ್ಕೆ ಇಲ್ಲಿನ ಬದುಕು ಬದಲಾಗಿ ಹೋಗಿದೆ. ಮ್ಯಾಡ್ರಿಡ್ ನಗರದಲ್ಲಿ ಫಲಕಗಳಲ್ಲಿ ಚೀನಿ ಭಾಷೆಯನ್ನ ನೀವು ಕಾಣಬಹುದು. ಚೀನಿಯರು ನಿಧಾನವಾಗಿ ಯುದ್ಧವಿಲ್ಲದೆ ಯೂರೋಪನ್ನ ಆಕ್ರಮಿಸಿಬಿಟ್ಟಿದ್ದಾರೆ.

ಚಿಟಿಕೆ ಅದೃಷ್ಟವಿಲ್ಲದಿದ್ದರೆ ಎಲ್ಲಿದ್ದರೂ ಬದುಕು ಒಂದೇ !ಚಿಟಿಕೆ ಅದೃಷ್ಟವಿಲ್ಲದಿದ್ದರೆ ಎಲ್ಲಿದ್ದರೂ ಬದುಕು ಒಂದೇ !

ಹೀಗೆ ವ್ಯಾಪಾರಕ್ಕೆ ಬಂದ ಚೀನಿಯರು ಇಲ್ಲಿನ ಜೀವನ ಶೈಲಿಗೆ ಎಳ್ಳಷ್ಟೂ ಒಗ್ಗಿಕೊಳ್ಳುವುದಿಲ್ಲ. ಎಲ್ಲರೂ ಒಂದೆಡೆ ಜೀವಿಸಲು ಶುರು ಮಾಡಿ ಅಲ್ಲೊಂದು ಸಣ್ಣ ಚೀನಾ ಟೌನ್ ನಿರ್ಮಾಣ ಮಾಡಿಕೊಂಡು ಬಿಡುತ್ತಾರೆ. ಊಟ ತಿಂಡಿ , ಬದುಕುವ ರೀತಿ ಯಾವುದನ್ನೂ ಬದಲಾಯಿಸಿಕೊಳ್ಳದೆ , ಭಾಷೆಯನ್ನ ಕೂಡ ಕಲಿಯದೇ ಜೀವನ ಸವೆಸಿ ಬಿಡುತ್ತಾರೆ. ಸಾಮಾನ್ಯವಾಗಿ ಇವರು ಇಲ್ಲಿನ ಶಾಲೆಗೆ ಕೂಡ ಕಳಿಸುವುದಿಲ್ಲ , ಇಲ್ಲಿನ ಮುನಿಸಿಪಾಲಿಟಿ ಅನುಮತಿ ಪಡೆದು ಇಲ್ಲೂ ಚೀನಿ ಶಾಲೆಯನ್ನ ತೆಗೆಯುತ್ತಾರೆ. ಇಲ್ಲಿ ಸ್ಪ್ಯಾನಿಷ್ ಭಾಷೆ ಕಡ್ಡಾಯ ಹೀಗಾಗಿ ಎರಡನೇ ತಲೆಮಾರಿನ ಜನ ಸ್ಪ್ಯಾನಿಷ್ ಮಾತನಾಡುವುದು ಕಲಿತ್ತಿದ್ದಾರೆ.

ಚೀನಾ ದೇಶ ತನ್ನ ರಹಸ್ಯವನ್ನ ಕಾಯ್ದುಕೊಳ್ಳುವುದಕ್ಕೆ ಜಗತ್ಪ್ರಸಿದ್ದ. ಇಲ್ಲಿಗೆ ವಲಸೆ ಬಂದಿರುವ ಚೀನಿ ಜನರು ಕೂಡ ಅಷ್ಟೇ ರಹಸ್ಯವನ್ನ ಕಾಯ್ದುಕೊಳ್ಳುತ್ತಾರೆ. ಸಾಮಾನ್ಯ ಸ್ಪ್ಯಾನಿಷ್ ಪ್ರಜೆ ಚೀನಿಯರ ರೆಸ್ಟೋರೆಂಟ್ ನಲ್ಲಿ ಊಟ ಮಾಡುವ ಮುನ್ನ ಹುಷಾರು ಎನ್ನುತ್ತಾರೆ. ಏಕೆ ಎಂದು ಕೇಳಿದರೆ ನೀನು ಇಷ್ಟು ವರ್ಷದಲ್ಲಿ ಯಾವತ್ತಾದರೂ ಒಬ್ಬನೇ ಒಬ್ಬ ಚೀನಿ ವ್ಯಕ್ತಿ ಸತ್ತ ಎನ್ನುವ ವಿಷಯ ಕೇಳಿದ್ದೀಯಾ ಎನ್ನುವ ಮರು ಪ್ರಶ್ನೆ ಮಾಡುತ್ತಿದ್ದರು.

ಇವರ ಪ್ರಕಾರ ಸತ್ತವರನ್ನೂ ಯಾವುದಾದರೂ ಮಾಂಸದ ಜೊತೆ ಬೆರೆಸಿ ಬಿಟ್ಟಿರುತ್ತಾರೆ , ಚೀನಿಯರು ಅಷ್ಟೊಂದು ಧೊರ್ತರು ಎಂದರ್ಥ. ಅವರು ಹೀಗೆ ಮಾಡಿದಕ್ಕೆ ಪುರಾವೆ ಏನಿಲ್ಲ , ಆದರೆ ಯಾವೊಬ್ಬ ಚೀನಿ ಪ್ರಜೆಯ ಮರಣವಾದ ವಿಷಯ ಮಾತ್ರ ನಾನಂತೂ ಕೇಳಲಿಲ್ಲ. ಇದರ ಹಿಂದಿನ ರಹಸ್ಯವೇನಿರಬಹುದು ? ನನಗಂತೂ ಗೊತ್ತಿಲ್ಲ. ಹೀಗೆ ಸದ್ಯದ ಮಟ್ಟಿಗೆ ಸ್ಪ್ಯಾನಿಷ್ ಬಾರ್ಗಳ ಮೇಲಿನ ಅಧಿಪತ್ಯ ಚೀನಿಯರ ಕೈಗೆ ಹಸ್ತಾಂತರವಾಗಿದೆ. ಊಟದ ವಿಷಯದಲ್ಲಿ ಸಾಂಪ್ರದಾಯಿಕತೆಗೆ ಜೋತು ಬೀಳುವ ಸ್ಪ್ಯಾನಿಶರು ಏಕೋ ಎಡವಿದ್ದಾರೆ.

ದೊಡ್ಡ , ಅತಿ ದೊಡ್ಡ , ಪ್ರಸಿದ್ಧ ರೆಸ್ಟೋರೆಂಟ್ ಗಳ ಕಥೆ ಬೇರೆಯದಿದೆ, ಆದರೆ ಜನ ಸಾಮಾನ್ಯ ನಿತ್ಯ ಎಡತಾಕುವ ಬಾರುಗಳು ಚೀನಿಯರ ತೆಕ್ಕೆಗೆ ಸಿಕ್ಕಿವೆ. ಜಗತ್ತಿನ ಎಲ್ಲಾ ದೇಶಗಳಂತೆ ಸ್ಪೇನ್ ನಲ್ಲಿ ಕೂಡ ಜನತೆ ಇಬ್ಬಾಗವಾಗಿದ್ದರೆ. ಒಂದು ಭಾಗ ರಾಷ್ಟ್ರೀಯತೆಗೆ ಒತ್ತು ಕೊಡುತ್ತದೆ. ಇನ್ನೊಂದು ಭಾಗ ಸೋಷಿಯಲಿಸ್ಟ್ ಮನಸ್ಥಿತಿ. ಕರೋನ ಕಾರಣ ಮಂದವಾಗಿದ್ದ ರೆಸ್ಟುರೆಂಟ್ ಬಿಸಿನೆಸ್ ಇಂದಿಗೂ ತನ್ನ ಹಳೆಯ ಉನ್ನತಿಯನ್ನ ಕಂಡಿಲ್ಲ. ಜೊತೆಗೆ ರೆಸ್ಟುರೆಂಟ್ ಚೀನಿಯರಿಗೆ ಸೇರಿದ್ದು ಎಂದ ಮೇಲೆ ಜನ ಇನ್ನಷ್ಟು ಹೆದರುತ್ತಾರೆ.

ಎರಡು ವರ್ಷದಿಂದ ನಷ್ಟದಲ್ಲಿರುವ ಈ ವಲಯ ಇನ್ನಷ್ಟು ಚೇತರಿಕೆ ಕಾಣಲು ಸಮಯ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಮತ್ತಷ್ಟು ಸ್ಪ್ಯಾನಿಷ್ ಬಾರ್ ಗಳು ಸದ್ದಿಲ್ಲದೇ ಚೀನಿಯರ ವಶವಾಗುತ್ತವೆ . ಏಕೆಂದರೆ ಇಂದಿನ ಸಂದರ್ಭದಲ್ಲಿ ಸಾಮಾನ್ಯ ಸ್ಪ್ಯಾನಿಷ್ ಹೊಸ ವ್ಯಾಪಾರ ಮಾಡುವ ಸ್ಥಿತಯಲ್ಲಿಲ್ಲ. ನಷ್ಟದಲ್ಲಿರುವ ಇಂತಹ ಉದ್ದಿಮೆಯನ್ನ ಕೊಳ್ಳುವ ತಾಕತ್ತು ಇಂದು ಚೀನಿಯರಿಗೆ ಬಿಟ್ಟು ಬೇರಾರಿಗೂ ಇಲ್ಲ. ಹೀಗಾಗಿ ಕರೋನ ಅಪರೋಕ್ಷವಾಗಿ ಯೂರೋಪನ್ನ ಮತ್ತಷ್ಟು ಚೀನಿಯರ ತೆಕ್ಕೆಗೆ ದೂಡುತ್ತಿದೆ.

ಬೀಚು ಎಂದ ತಕ್ಷಣ ಜನರಿಗೆ ನೆನಪಾಗುವುದು ಕೆರೆಬಿಯನ್ ಬೀಚುಗಳು. ಅದು ಸಹಜ ಕೂಡ ಏಕೆಂದರೆ ಅವು ವಿಶ್ವ ಪ್ರಖ್ಯಾತ. ಸ್ಪೇನ್ ನಲ್ಲಿನ ಕೋಸ್ಟಾ ಬ್ರಾವಾ (costa brava ) ಜಗತ್ತಿನ ಯಾವುದೇ ಬೀಚುಗಳನ್ನೂ ನಾಚಿಸಬಲ್ಲದು , ಲಾ ತೋರ್ದೆರ (la tordera ) ಎನ್ನುವ ನದಿಯ ತಟದಿಂದ ಶುರುವಾಗಿ ಫ್ರಾನ್ಸ್ ದೇಶದ ಗಡಿ , ಪೋರ್ತಬೌ (portbou ) ಎಂಬಲ್ಲಿ ಕೊನೆಯಾಗುತ್ತದೆ. ಸರಿಸುಮಾರು 214ಕಿಲೋ ಮೀಟರ್ ಬೀಚಿನದ್ದೆ ಸಾಮ್ರಾಜ್ಯ. 55ಕ್ಕೂ ಹೆಚ್ಚು ಕಿಲೋ ಮೀಟರ್ ತಡೆ ಇಲ್ಲದ ಉದ್ದನೆಯ ಬೀಚು ಇಲ್ಲಿದೆ.

ನಾನು ಇಲ್ಲಿಗೆ ಬಂದ ಹೊಸತರಲ್ಲಿ ಬೀಚುಗಳಲ್ಲಿನ ಜನರನ್ನ ನೋಡಿ ಹೌಹಾರಿದ್ದೆ. ಇಲ್ಲಿ ಜನ ದಿಗಂಬರರು ! ಜಗತ್ತಿನ ಅರಿವೇ ಇಲ್ಲದೆ ಬಿಸಿಲು ಕಾಯಿಸುತ್ತಾ ಮಲಗಿ ಬಿಡುತ್ತಾರೆ . ಅದಿರಲಿ , ಸರ್ಫ್ ಪ್ರಿಯರಿಗೆ. ಈಜಾಡುವವರಿಗೆ ಇದು ಸ್ವರ್ಗ. ಪ್ರಕೃತ್ತಿ ಸೌಂದರ್ಯ ಒಂದೇ ಕಡೆ ಮುರಿದುಕೊಂಡು ಬಿದ್ದಿದೆ ಎನ್ನುವಷ್ಟು ಸುಂದರ. ಸ್ಪ್ಯಾನಿಷ್ ಜನತೆಯ ವ್ಯಾಪಾರ , ಹಣ ಎಲ್ಲವನ್ನೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಚೀನಿಯರಿಗೆ ಸ್ಪ್ಯಾನಿಷ್ ಜನರು ನಡೆಸುವ ಜೀವನ ಶೈಲಿ ಮಾತ್ರ ಅರ್ಥವೇ ಆಗಿಲ್ಲ.

ಬದುಕನ್ನ ಆಸ್ವಾದಿಸುವ ಕಲೆಯನ್ನ ಸ್ಪ್ಯಾನಿಶರನ್ನ ನೋಡಿ ಕಲಿಯಬೇಕು. ಏನೆಲ್ಲಾ ಕಾಪಿ ಮಾಡಿದ ಚೀನಿಯರಿಗೆ ಇದು ಮಾತ್ರ ಸಾಧ್ಯವಾಗಿಲ್ಲ. ಶನಿವಾರ , ಭಾನುವಾರ ಎನ್ನುವ ಬದಲಾವಣೆ ಇಲ್ಲದ ದುಡಿತದ , ಜೀತದ ಜೀವನ ಚೀನಿಯರದು.

English summary
Barcelona Memories Column By Rangaswamy Mookanahalli Part 68,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X