ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಪೇನ್‌ನಲ್ಲಿ ಆಹಾರ ಸೇವಿಸುವ ಮುನ್ನಾ ನಿಮಗಿದು ಗೊತ್ತಿರಲಿ!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ನಾವು ಬದುಕುವ ರೀತಿ ಇದೆಯಲ್ಲ ಅದು ಸಮಾಜದಿಂದ ಸಮಾಜಕ್ಕೆ ಬದಲಾಗುತ್ತದೆ, ಸಮಾಜದಲ್ಲಿದ್ದೂ ಮನೆಯ ವಾತಾವರಣ ಕೂಡ ಬದುಕುವ ರೀತಿಯನ್ನ ಬಹಳಷ್ಟು ಪ್ರೇರೇಪಿಸುತ್ತದೆ. ಪೀಣ್ಯದ ತೀರಾ ಬಡ ಮಧ್ಯಮದ ವರ್ಗದಲ್ಲಿ ಬದುಕಿದ ನನಗೆ ಭಾರತದ ನಗರಗಳನ್ನ ನೋಡುವ ಸೌಭಾಗ್ಯ ಕೂಡ ಸಿಕ್ಕಿರಲಿಲ್ಲ, ಒಮ್ಮೆಲೇ ವಿದೇಶಕ್ಕೆ ಹೋಗುವ ಅವಕಾಶ ಸಿಕ್ಕಿತು. ಬಾರ್ಸಿಲೋನಾ ತಲುಪಿದ್ದೆ ಆದರೆ ಅಲ್ಲಿ ಬದುಕುವುದು ಹೇಗೆ? ಅಲ್ಲಿನ ಜನರ ರೀತಿನೀತಿಗಳು ಏನು? ಏನು ಮಾಡಿದರೆ ಸರಿ? ಯಾವುದು ತಪ್ಪು? ಉಹೂ ಇಲ್ಲ ಇದ್ಯಾವುದೂ ನನಗೆ ಗೊತ್ತಿರಲಿಲ್ಲ.

ಸಮಾಜದಲ್ಲಿ, ದಿನ ನಿತ್ಯದ ಬದುಕಿನಲ್ಲಿ ಎದುರಾಗುವ ಜನರನ್ನ ಹೇಗೆ ಫೇಸ್ ಮಾಡುವುದು ಎನ್ನುವ ಅರಿವು ಕೂಡ ಇರಲಿಲ್ಲ. ಸಾಮಾನ್ಯವಾಗಿ ಇಲ್ಲಿ ಎದುರುಗಡೆ ಯಾರದರೂ ಸಿಕ್ಕರೆ ಅವರು ನಿಮಗೆ ತೀರಾ ಪರಿಚಯದವರು ಅಲ್ಲದಿದ್ದರೂ ' ಓಲಾ ' ಎಂದು ಗ್ರೀಟ್ ಮಾಡುವುದು ಸಂಪ್ರದಾಯ. ನಮಗಿಂತ ಹಿಂದೆ ಬಂದವರಿಗೆ ಬಾಗಿಲು ತೆಗೆದು ಅವರು ಹೋದ ನಂತರ ನಾವು ಹೋಗುವುದು ಇಲ್ಲಿ ಶಿಷ್ಟಾಚಾರ. ಮಾತಿನ ಪ್ರಾರಂಭದಲ್ಲಿ, ಅಂತ್ಯದಲ್ಲಿ 'ಪರ್ ಫಾವೊರ್' ಅಂದರೆ ಪ್ಲೀಸ್ ಎನ್ನುವುದು ಬಳಸುವುದು, ಗ್ರಾಸಿಯಾಸ್ ಅಂದರೆ ಧನ್ಯವಾದ ಹೇಳುವುದು ಇಲ್ಲಿ ಅಲಿಖಿತ ನಿಯಮ. ಹೀಗೆ ನಿತ್ಯ ಬದುಕಿನ ಶಿಷ್ಟಾಚಾರಗಳನ್ನು ಬೇಗ ಕಲಿತು ಬಿಟ್ಟೆ ಆದರೆ ನಾವು ನಿತ್ಯವೂ ರೆಸ್ಟುರೆಂಟ್‌ಗೆ ಊಟಕ್ಕೆ ಹೋಗುವುದಿಲ್ಲವಲ್ಲ ? ಹೀಗಾಗಿ ಟಬೇಲ್ ಮ್ಯಾನರ್ಸ್ ಸ್ವಲ್ಪ ವೇಳೆ ತೆಗೆದುಕೊಂಡಿತು.

ಐನೂರು ವರ್ಷ ಹಳೆಯ ಹಬ್ಬ ; ಲಾಸ್ ಲ್ಯೂಮಿನಾರಿಯಸ್!ಐನೂರು ವರ್ಷ ಹಳೆಯ ಹಬ್ಬ ; ಲಾಸ್ ಲ್ಯೂಮಿನಾರಿಯಸ್!

ನೀವು ಸ್ಪೇನ್‌ಗೆ ಪ್ರವಾಸಿಗರಾಗಿ ಹೋಗುವರಿದ್ದರೆ ಈಗ ನಾನು ಬರೆಯುವ ಸಾಲುಗಳು ನಿಮಗೆ ಖಂಡಿತ ಒಂದಷ್ಟು ಕೆಲಸಕ್ಕೆ ಬರುತ್ತವೆ. ಎಲ್ಲಕ್ಕಿಂತ ಮೊದಲಿಗೆ ಹೋಟೆಲ್ ಅಥವಾ ರೆಸ್ಟೋರೆಂಟ್ ಪ್ರವೇಶಿಸಿದಾಗ ' ಓಲಾ ' ಎನ್ನುವುದು ತೀರಾ ಸಾಮಾನ್ಯ. ಆಮೇಲೆ ದಿನದ ಯಾವ ಸಮಯದಲ್ಲಿ ನೀವು ಅಲ್ಲಿಗೆ ಪ್ರವೇಶ ನೀಡಿದ್ದೀರಿ ಎನ್ನುವುದರ ಆಧಾರದ ಮೇಲೆ ಬೋನಸ್ ದಿಯಾಸ್, ತಾರ್ದೇಸ್ ಅಥವಾ ನೋಚೆ ಎನ್ನುವುದನ್ನ ಕೂಡ ಹೇಳಬೇಕಾಗುತ್ತದೆ.

Barcelona Memories Column By Rangaswamy Mookanahalli Part 67

ಉದಾಹರಣೆಗೆ ನೀವು ಮಧ್ಯಾಹ್ನದ ಊಟಕ್ಕೆ ಪ್ರವೇಶಿದ್ದರೆ ಓಲಾ ಬೋನಸ್/, ಬ್ಯುನೆಸ್ ತಾರ್ದೇಸ್ ಎಂದು ಹೇಳಬೇಕಾಗುತ್ತದೆ. ಹಿರಿಯ ನಾಗರಿಕರು ಈ ರೀತಿ ಪೂರ್ಣ ಹೇಳುವ ಪರಿಪಾಠ ಹೊಂದಿಲ್ಲ ಅವರು ಓಲಾ ಬೋನಸ್ ಎನ್ನುತ್ತಾರೆ. ಇದನ್ನ ದಿನದ ಯಾವ ವೇಳೆಯಲ್ಲಿ ಕೂಡ ಬಳಸಬಹುದು. ಎರಡನೆಯದಾಗಿ ಟೇಬಲ್ ಮೇಲೆ ಮೊಣಕೈ ಊರಿ ಕೂರಬಾರದು . ಹೌದು ಇಲ್ಲಿ ಈ ರೀತಿ ಟೇಬಲ್ ಮೇಲೆ ಮೊಣಕೈ ಊರುವುದನ್ನ ಇಲ್ಲಿನ ಜನ ಅಷ್ಟೊಂದು ಚನ್ನಾಗಿ ಸ್ವೀಕರಿವುದಿಲ್ಲ.

ಸ್ಪ್ಯಾನಿಷ್ ಜನತೆಯ ಪ್ರಕಾರ ಅದು ಕೇವಲ ಮುಂಗೈ ಇಡಲು ಇರುವ ಜಾಗ, ಅಲ್ಲಿ ತೂಕ ಹಾಕುವುದು ಮೊಣಕೈ ಊರಿ ಕೂರುವುದು ನಿಷಿದ್ಧ. ಗೊತ್ತಿಲ್ಲದೇ ಮಾಡಿದವರನ್ನ ಮುಲಾಜಿಲ್ಲದೆ ಹೀಗೆ ಕೂರಬಾರದು ಎಂದು ನವಿರಾಗಿ ಎಚ್ಚರಿಸುತ್ತಾರೆ. ಮೂರನೆಯದಾಗಿ ಅಗೆದು ತಿನ್ನುವುದು, ಕುಡಿಯುವ ಶಬ್ದ ಬೇರೆಯವರಿಗೆ ಕೇಳಿಸುವಂತಿರಬಾರದು. ಮೊದಲೇ ಹೇಳಿದಂತೆ ಸಮಾಜದಿಂದ ಸಮಾಜಕ್ಕೆ ಇದರಲ್ಲಿ ಬಹಳ ವ್ಯತ್ಯಾಸವಿದೆ. ಇದನ್ನ ಇಲ್ಲಿ ತಪ್ಪು ಸರಿ ಎನ್ನುವ ಉದ್ದೇಶದಿಂದ ಬರೆಯುತ್ತಿಲ್ಲ. ಎಲ್ಲರಿಗೂ ಅವರದೇ ಆದ ಒಂದು ರೀತಿ ರಿವಾಜು ಬೆಳೆದುಕೊಂಡು ಬಿಟ್ಟಿರುತ್ತದೆ.

ಕೆಲವೊಂದು ಊರುಗಳಲ್ಲಿ ಸೋರ್ರ್ ಎನ್ನುವ ಶಬ್ದ ಮಾಡುತ್ತಾ ಕಾಫಿ, ಟೀ ಅಥವಾ ಇನ್ನಿತರ ಪಾನೀಯ ಹೀರುವುದು ಸಂಪ್ರದಾಯ. ಊಟವನ್ನ ಅಗೆದು, ಚೆನ್ನಾಗಿ ಜಗಿದು ತಿನ್ನುವ ಶಬ್ದವನ್ನ ಕೂಡ ನೀವು ಕೇಳಿರುತ್ತೀರಿ. ಇಲ್ಲಿ ಅಂದರೆ ಸ್ಪೇನ್‌ನಲ್ಲಿ ಈ ರೀತಿ ಶಬ್ದ ಬರುವ ರೀತಿಯಲ್ಲಿ ಪಾನೀಯವನ್ನ ಹೀರುವುದು, ತಿನ್ನುವಾಗ ಶಬ್ದ ಹೊರಡಿಸುವುದು ಕೂಡ ಜನ ಇಷ್ಟಪಡುವುದಿಲ್ಲ. ಇಂತಹ ಕ್ರಿಯೆಯಲ್ಲಿ ತೊಡಗಿದವರನ್ನ ಅನಾಗರೀಕ ಎನ್ನುವ ರೀತಿಯಲ್ಲಿ ಕಾಣಲಾಗುತ್ತದೆ. ಇನ್ನು ತಿನ್ನುವ ರೀತಿಯಲ್ಲೂ ಬಹಳ ನಾಜೂಕುತನವನ್ನ ಇವರು ಪ್ರದರ್ಶಿಸುತ್ತಾರೆ.

ಸಣ್ಣದಾಗಿ ಮೂತಿಯ ಅಕ್ಕಪಕ್ಕ ಆಹಾರ ತಗುಲಿದರೂ ಸಾಕು ನವಿರಾಗಿ ಟಿಶ್ಯೂ ಪೇಪರ್ ಬಳಲಿ ವರೆಸಿಕೊಳ್ಳುತ್ತಾರೆ. ಅತಿ ದೊಡ್ಡ ಬೈಟ್ಸ್ ಅಂದರೆ ತುತ್ತುಗಳನ್ನ ಒಮ್ಮೆಲೇ ತಿನ್ನುವುದನ್ನ ಕೂಡ ಇಲ್ಲಿನ ಜನ ಸಹಿಸುವುದಿಲ್ಲ. ಬಾರ್ಸಿಲೋನಾ ನಗರಕ್ಕೆ ಬರುವ ಕೇವಲ ಒಂದೂವರೆ ವರ್ಷದ ಹಿಂದೆ ನಾನು ಕೇರಳದ ಕಣ್ಣೂರಿನಲ್ಲಿ ಆಡಿಟ್ ಕೆಲಸದ ಮೇಲೆ ಮೂರು ತಿಂಗಳ ಕಾಲ ವಾಸವಿದ್ದೆ. ಅಲ್ಲಿನ ಜನ ತುತ್ತನ್ನ ಕೈ ತುಂಬುವಷ್ಟು ದೊಡ್ಡದು ಮಾಡಿ ಅದನ್ನ ಹತ್ತಾರು ಬಾರಿ ಉಂಡೆಗಟ್ಟಿ ಒಮ್ಮೆಲೇ ಬಾಯಿಗೆ ಎಸೆದುಕೊಳ್ಳುತ್ತಾರೆ.

 ಚಿಟಿಕೆ ಅದೃಷ್ಟವಿಲ್ಲದಿದ್ದರೆ ಎಲ್ಲಿದ್ದರೂ ಬದುಕು ಒಂದೇ ! ಚಿಟಿಕೆ ಅದೃಷ್ಟವಿಲ್ಲದಿದ್ದರೆ ಎಲ್ಲಿದ್ದರೂ ಬದುಕು ಒಂದೇ !

ಅಲ್ಲಿನ ಊಟದ ರೀತಿಯನ್ನ ನೋಡಿದವರಿಗೆ ಇದು ಅರ್ಥವಾಗುತ್ತದೆ. ಇಲ್ಲದವರಿಗೆ ಇದನ್ನ ಹೇಳುವುದು ಸ್ವಲ್ಪ ಕಷ್ಟ. ಒಟ್ಟಿನಲ್ಲಿ ದೊಡ್ಡ ತುತ್ತನ್ನ ಅವರು ತಿನ್ನುತ್ತಾರೆ. ಬೆಂಗಳೂರಿನಿಂದ ಹೋಗಿದ್ದ ನನಗೆ ಅಲ್ಲಿನ ರೀತಿ ರಿವಾಜು ನೋಡಿ ಇದೇನಪ್ಪ ಹೀಗೆ ಆನಿಸಿತ್ತು . ಟೈಮ್ ಟ್ರಾವೆಲ್ ಮಾಡಿದ ರೀತಿಯಲ್ಲಿ ಇಪ್ಪತ್ತು ವರ್ಷ ಮುಂದಕ್ಕೆ ಬಾರ್ಸಿಲೋನಾ ನಗರದ ಜೀವನ ಶೈಲಿಗೆ ಕೂಡ ಒಗ್ಗಿಕೊಳ್ಳಬೇಕಿತ್ತು.

ನಾಲ್ಕನೆಯ ಅಂಶ ಎಲ್ಲಕ್ಕಿಂತ ಅತ್ಯಂತ ಪ್ರಮುಖವಾದದ್ದು, ಬೇರೆ ಯಾವುದಾದರೂ ಅಂಶವನ್ನ ಸ್ಪ್ಯಾನಿಷ್ ಜನ ಕ್ಷಮಿಸಿ ಬಿಟ್ಟಾರು ಆದರೆ ಈ ನಾಲ್ಕನೆಯ ಅಂಶವನ್ನ ಮಾತ್ರ ಎಂದೂ ಕ್ಷಮಿಸುವುದಿಲ್ಲ. ಊಟದ ಮಧ್ಯದಲ್ಲಿ , ಕೊನೆಯಲ್ಲಿ ಒಟ್ಟಿನಲ್ಲಿ ನಾಲ್ಕು ಜನ ಸೇರಿದ ಕಡೆ ತೇಗುವುದು ಇಲ್ಲಿ ನಿಷಿದ್ಧ. ಹಾಗೊಮ್ಮೆ ತೇಗಿದರೆ ಇಡೀ ರೆಸ್ಟುರೆಂಟ್ ಜನ ನಿಮ್ಮನ್ನೇ ನೋಡಲು ಶುರು ಮಾಡಿ ಬಿಡುತ್ತಾರೆ ಹುಷಾರು. ತೇಗುವಿಕೆಯನ್ನ ಇಲ್ಲಿ ಅತ್ಯಂತ ಹೀನವಾದ, ಮತ್ತು ನಾಗರಿಕತೆಯ ಎಳ್ಳಷ್ಟೂ ಅರಿವಿಲ್ಲದ ಜನ ಮಾತ್ರ ಮಾಡುವ ಕ್ರಿಯೆ ಎಂದು ಪರಿಗಣಿಸಲಾಗಿದೆ.

ಹೀಗಾಗಿ ಏನೇ ಮಾಡಿ ಅಥವಾ ಬಿಡಿ, ತೇಗುವುದು ಮಾತ್ರ ಮಾಡಲೇಬೇಡಿ. ನನಗೆ ಇದರ ಅರಿವಿರದೆ ಹೋದರೂ ಪುಣ್ಯಕ್ಕೆ ಯಾವುದೇ ಅಭಾಸಕ್ಕೂ ಸಿಕ್ಕಿಕೊಳ್ಳಲಿಲ್ಲ. ಪ್ರಾರಂಭದ ದಿನದಲ್ಲಿ ಯಾರಾದರೂ ಹೇಳಿದರೆ ಸರಿ ಇಲ್ಲದಿದ್ದರೆ ಇಂತಹ ತಪ್ಪುಗಳಿಂದ ಆಗುವ ಮುಜುಗರವನ್ನ ತಪ್ಪಿಸಿಕೊಳ್ಳುವುದು ಕಷ್ಟ ಸಾಧ್ಯ. ತೇಗುವಿಕೆಯೊಂದಿಗೆ ಅಂಟಿಕೊಂಡಿರುವ ಒಂದು ನೆನಪು ಬೇಡವೆಂದರೂ ಬಿಡದೆ ಕಾಡುತ್ತಿದೆ.

ಹಾಗಾಗಿ ಅದನ್ನ ನಿಮಗೂ ಹೇಳಿ ನಂತರ ಮುಂದುವರೆಸುವೆ, ದುಬೈ ನಿಂದ ಆಡಿಟ್‌ಗೆ ಎಂದು ಹಿರಿಯ ಆಡಿಟರ್ ಒಬ್ಬರನ್ನ ಬಾರ್ಸಿಲೋನಾಕ್ಕೆ , ನಮ್ಮ ಸಂಸ್ಥೆಗೆ ಕರೆಸಿದ್ದರು, ಆತ ಹೇಳಿಕೇಳಿ ಭಾರತೀಯ, ಜೊತೆಗೆ ಮಧ್ಯವಯಸ್ಕ , ಅಲ್ಪಸ್ವಲ್ಪ ಹಣ ಸೇರಿದ ಭಾರತೀಯ ಎಂದ ಮೇಲೆ ಹೇಗಿರಬೇಕು ಥೇಟ್ ಹಾಗೆ ಇದ್ದರು, ಡೊಳ್ಳು ಹೊಟ್ಟೆ, ಎರಡು ಮೂರು ನಿಮಿಷಕ್ಕೆ ತೇಗು! ನಮ್ಮ ಆಫೀಸ್ನಲ್ಲಿನ ಅಂದಿನ ಎಲ್ಲಾ ಸಹೋದ್ಯೋಗಿಗಳು ಅವನನ್ನ ವಿಚಿತ್ರ ಪ್ರಾಣಿಯಂತೆ ಕಂಡರು, ಆತನಿಗೆ ಸ್ಪೇನ್ ದೇಶದ ರೀತಿ ರಿವಾಜುಗಳ ಎಳ್ಳಷ್ಟೂ ಜ್ಞಾನವಿಲ್ಲ .

ನನಗೆ ಅಯ್ಯೋ ಪಾಪ ಅನ್ನಿಸಿ ಹೀಗೆ ತೇಗುವುದು ಇಲ್ಲಿ ಕೆಟ್ಟದಾಗಿ ಕಾಣಲಾಗುತ್ತದೆ ಎಂದು ತಿಳಿ ಹೇಳಿದೆ. ಆತನಿಗೆ ಸಿವಿಯರ್ ಅಸಿಡಿಟಿ , ಆತನಿಗೂ ಆತನ ತೇಗುವಿಕೆ ಬೇಸರ ತರಿಸಿತ್ತು. ಅವನ ಟೀನ್ ಏಜ್ ಮಕ್ಕಳು ಈತನ ತೇಗುವಿಕೆಯಿಂದ ತುಂಬಾ ಕಿರಿಕಿರಿಗೆ ಒಳಗಾಗುತ್ತಾರೆ ಎಂದು ಕೂಡ ಹೇಳಿದ. ಆದರೆ ತೇಗುವಿಕೆ ಕೊನೆಯಾಗಲಿಲ್ಲ. ನನ್ನ ಸಹೋದ್ಯೋಗಿಗಳಿಗೆ ಅವನ ತೊಂದರೆಯ ಬಗ್ಗೆ ಹೇಳಿದೆ , ಅದು ಆತ ಬೇಕೆಂದು ಮಾಡುತ್ತಿರುವುದಲ್ಲ ಆತನಿಗೆ ಅಸಿಡಿಟಿ ತೊಂದರೆಯಿದೆ ಎಂದು ಎಷ್ಟೇ ಹೇಳಿದರೂ ನನ್ನ ಸ್ಪ್ಯಾನಿಷ್ ಸಹೋದ್ಯೋಗಿಗಳಿಗೆ ಅದು ರುಚಿಸಲಿಲ್ಲ, ಅವನನ್ನ ಸೇರ್ದೋ (ಹಂದಿ ) ಎಂದು ಕರೆಯಲು ಶುರು ಮಾಡಿದರು.

ಅಂದರೆ ಅವರವರ ನಡುವಿನ ಮಾತುಕತೆಯಲ್ಲಿ ಅವನಿಗೆ ಸೇರ್ದೋ ಎನ್ನುವ ನಾಮಕರಣ ಮಾಡಿ ಬಿಟ್ಟಿದ್ದರು! ಮುಂದಿನ ಎರಡು ದಿನದಲ್ಲಿ ಆತನನ್ನ ವಾಪಸ್ಸು ದುಬೈಗೆ ಮರಳಿ ಕಳಿಸಲಾಯಿತು. ಹೊಸ ಆಡಿಟರ್ ಬಂದ ಆತನಿಗೆ ಹಾಡುವ ಹುಚ್ಚು ಅದೂ ಶಾಸ್ತ್ರೀಯ ಸಂಗೀತ, ಅದರ ಬಗ್ಗೆ ಇನ್ನೊಮ್ಮೆ ಬರೆಯುವೆ. ಸ್ಪ್ಯಾನಿಷ್ ಊಟವನ್ನ ಅಪ್ಪಿತಪ್ಪಿ ಕೂಡ ಬೇರೆಯ ಊಟದೊಂದಿಗೆ ಹೋಲಿಸಬೇಡಿ, ಇದು ಚೆನ್ನಾಗಿಲ್ಲ ಎಂದು ಹೇಳಬೇಡಿ.

'ಚಲ್ತಾ ಹೈ' ಎನ್ನುವ ಉಡಾಫೆ ಸ್ವಭಾವ ಬಿಟ್ಟರೆ ನಾವು ಯಾರಿಗಿಂತ ಕಡಿಮೆಯಿಲ್ಲ ! 'ಚಲ್ತಾ ಹೈ' ಎನ್ನುವ ಉಡಾಫೆ ಸ್ವಭಾವ ಬಿಟ್ಟರೆ ನಾವು ಯಾರಿಗಿಂತ ಕಡಿಮೆಯಿಲ್ಲ !

ಸ್ಪ್ಯಾನಿಶರಿಗೆ ಅವರ ಅಡುಗೆಯ ಬಗ್ಗೆ ಇನ್ನಿಲ್ಲದ ಹೆಮ್ಮೆ , ಅದಕ್ಕೆ ಕಾರಣವೂ ಉಂಟು, ಪಕ್ಕದ ಬ್ರಿಟಿಷರು , ಜರ್ಮನರು , ಫ್ರೆಂಚರು ಸ್ಪೇನ್ ಊಟವನ್ನ ತಿಂದು ಕೊಂಡಾಡಿ ಹೋಗುತ್ತಾರೆ. ಸ್ಪೇನ್‌ನ ಪೆಯೇಯ್ಯ , ಸಂಗ್ರಿಯಾ, ಪಾನ್ ಕೋನ್ ತಮೋತೆ , ಹಾಮೋನ್ ಕೋನ್ ಕೇಸೂ .. ಎಲ್ಲವೂ ಜಗತ್ ಪ್ರಸಿದ್ಧ. ನಿಮಗೆ ಗೊತ್ತಿರಲಿಲ್ಲ ಸ್ಪೇನ್ ನ ಕೆಲವು ರೆಸ್ಟುರೆಂಟ್ ಗಳಲ್ಲಿ ಊಟ ಮಾಡಲು ಕೆಲವೊಮ್ಮೆ ವರ್ಷದಿಂದ ಎರಡು ವರ್ಷ ಕಾಯಬೇಕಾಗುತ್ತದೆ.

ಮೂರು ತಿಂಗಳಿಗೆ ಅಥವಾ ಆರು ತಿಂಗಳಿಗೆ ಸಿಕ್ಕರೆ ಅದು ಪುಣ್ಯ ಎನ್ನುವಂತೆ ಜನ ಮಾತನಾಡಿಕೊಳ್ಳುತ್ತಾರೆ. ಹೀಗಾಗಿ ಇಲ್ಲಿನ ಜನ ಸಾಮಾನ್ಯನಿಂದ , ಅತಿ ಶ್ರೀಮಂತನ ವರೆಗೆ ಅವರ ಅಡುಗೆಯ ಬಗ್ಗೆ ಅತೀವ ಹೆಮ್ಮೆ. ಊಟ ಚನ್ನಾಗಿಲ್ಲ ಎಂದೂ ನನಗಷ್ಟು ಸೇರಲಿಲ್ಲ ಎಂದೋ ಅವರ ಮುಂದೆ ಹೇಳುವುದನ್ನ ಮಾಡದೆ ಇರುವುದು ಉತ್ತಮ ನಡೆಯಾಗುತ್ತದೆ. ಇನ್ನು ಕೊನೆಯದಾಗಿ ಎಲ್ಲಾ ಮುಗಿದ ಮೇಲೆ ಸಾಮಾನ್ಯವಾಗಿ ಇಲ್ಲಿ ಬಿಲ್ ಅಮೌಂಟ್ ಏನಿರುತ್ತದೆ ಅದನ್ನ ಎಲ್ಲರೂ ಸಮವಾಗಿ ಹಂಚಿಕೊಳ್ಳುವುದು ಸಂಪ್ರದಾಯ.

Recommended Video

ಪೆಗಾಸಸ್ ವಿವಾದ: ಭಾರತ-ಇಸ್ರೇಲ್ ಬಾಂಧವ್ಯದ ಬಗ್ಗೆ ಮೋದಿಗೆ ಟಾಂಗ್ ಕೊಟ್ಟ ಚಿದಂಬರಂ | Oneindia Kannada

ಊಟಕ್ಕೆ ಮುಂಚೆಯೇ ' ತೇ ಇನ್ವಿತೋ ಯೋ ' ( ನಾನು ನಿನ್ನ ಕರೆಯುತಿದ್ದೇನೆ ನನ್ನ ಜೊತೆಗೆ ಬಾ ಎನ್ನುವ ಅರ್ಥ ) ಎಂದಿದ್ದರೆ ಹೀಗೆ ಆಹ್ವಾನ ಕೊಟ್ಟವನು ಬಿಲ್ ಕೊಡುತ್ತಾನೆ ಎಂದರ್ಥ. ಸುಮ್ಮನೆ ಊಟಕ್ಕೆ ಹೋಗೋಣವೆ ಎಂದರೆ , ಜೊತೆಯಲ್ಲಿ ಹೋಗೋಣ ಎಂದರ್ಥ, ಆಗ ಬಿಲ್ ಸಮವಾಗಿ ಡಿವೈಡ್ ಆಗುತ್ತದೆ. ಟಿಪ್ಸ್ ಕೊಡುವುದು ಇಲ್ಲಿ ಕಡ್ಡಾಯವಲ್ಲ , ಅಮೇರಿಕಾ ದಲ್ಲಿ ಸಂಬಳ ನಗಣ್ಯ ಎನ್ನುವಷ್ಟು ಇರುತ್ತದೆ , ಹೀಗಾಗಿ ಅಲ್ಲಿ ಟಿಪ್ಸ್ ಕಡ್ಡಾಯ. ಇಲ್ಲಿ ಸ್ಪೇನ್ ನಲ್ಲಿ ಟಿಪ್ಸ್ ಕಡ್ಡಾಯವಲ್ಲ, ಆದರೂ ಜನ ಸಾದಾರಣ ಮಟ್ಟದ ಟಿಪ್ಸ್ ಕೊಟ್ಟೆ ಹೋಗುತ್ತಾರೆ. ಹೀಗಾಗಿ ಒಂದಷ್ಟು ಟಿಪ್ಸ್ ನೀಡಿ , ನಿಮಗೆ ಸೇವೆ ನೀಡಿದ ಪರಿಚಾರಕನ ಹಾರೈಕೆ ಕೂಡ ಸಿಕ್ಕುತ್ತದೆ.

ಮೊದಲ ಸಾಲುಗಳಲ್ಲಿ ಹೇಳಿದಂತೆ ಮನೆಯಿಂದ ಮನೆಗೆ, ಊರಿಂದ ಊರಿಗೆ ಸಂಪ್ರದಾಯಗಳು, ಬದುಕುವ ಶೈಲಿ ಬದಲಾಗುತ್ತದೆ. ಇನ್ನೂ ದೇಶ , ಖಂಡಾಂತರ ಮಾಡಿದಾಗ ಕಲ್ಚರಲ್ ಶಾಕ್‌ಗಳು ಆಗಿಯೇ ತಿರುತ್ತವೆ. ಒಂದಷ್ಟು ತಿಳುವಳಿಕೆ ಹೆಚ್ಚಿನ ಮಟ್ಟದ ಅನಾಹುತ ಆಗುವುದರಿಂದ ತಪ್ಪಿಸುತ್ತದೆ. ಹೀಗಾಗಿ ಸ್ಪೇನ್‌ಗೆ ನೀವು ಎಂದಾದರೂ ಪ್ರವಾಸ ಹೋಗುವರಿದ್ದರೆ ಮೇಲಿನ ಅಂಶಗಳನ್ನ ನೆನಪಿನಲ್ಲಿ ಇಟ್ಟು ಕೊಂಡಿರಿ, ಖಂಡಿತ ಉಪಯೋಗಕ್ಕೆ ಬರುತ್ತದೆ.

English summary
Barcelona Memories Column By Rangaswamy Mookanahalli Part 67
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X