ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಟಿಕೆ ಅದೃಷ್ಟವಿಲ್ಲದಿದ್ದರೆ ಎಲ್ಲಿದ್ದರೂ ಬದುಕು ಒಂದೇ !

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ದೇಶ ಯಾವುದೇ ಇರಲಿ , ಹೊಸದಾಗಿ ಹೋದಾಗ ಎಲ್ಲವೂ ಸುಂದರವಾಗೇ ಕಾಣುತ್ತದೆ. ಅಲ್ಲಿನ ಜನರ, ಸಮಾಜದ, ವ್ಯವಸ್ಥೆಯಲ್ಲಿನ ಹುಳುಕುಗಳು ಕಾಣುವುದಿಲ್ಲ. ನೀವು ಯಾವುದೆ ಪ್ರವಾಸಿ ಕಥನವನ್ನ ನೋಡಿ ಅಲ್ಲೆಲ್ಲ ಲೇಖಕರು ತಾವು ಕಂಡ ದೇಶದ ಗುಣಗಾನ ಮಾಡುತ್ತಾರೆ. ಅಲ್ಲಿ ಎಲ್ಲವೂ ಚನ್ನಾಗಿದೆ ಭಾರತದಲ್ಲಿ ಮಾತ್ರ ಅವ್ಯವಸ್ಥೆ ಎನ್ನುವ ರೀತಿಯ ಹೇಳಿಕೆಗಳು ಹೇರಳವಾಗಿರುತ್ತವೆ.

ಹತ್ತಾರು ವರ್ಷ ಹೊರ ದೇಶದಲ್ಲಿ ನೆಲಸಿರುವ ಅನಿವಾಸಿಗಳು ಕೂಡ ಭಾರತಕ್ಕೆ ಬಂದಾಗ ಅಲ್ಲಿನ ಹುಳುಕುಗಳನ್ನ ಹೇಳುವುದಿಲ್ಲ, ಬದಲಿಗೆ ತಾವೇನೋ ಮಹತ್ತರ ಸಾಧನೆ ಮಾಡಿದ್ದೇವೆ ಎನ್ನುವಂತೆ ವರ್ತಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಭಾರತೀಯರು ಹೊರ ದೇಶಗಳಿಗೆ ಕೆಲಸದ ನಿಮಿತ್ತ ಅಥವಾ ಪ್ರವಾಸಕ್ಕೆ ಎಂದು ಹೋಗುವುದು ಹೆಚ್ಚಾಗಿದೆ. ಹೀಗೆ ಕಡಿಮೆ ಅವಧಿಗೆ ಹೋದಾಗ ಅವರಿಗೆ ಎದುರಾಗುವ ತೊಂದರೆಗಳನ್ನ ಅವರು ಗಮನಿಸುತ್ತಾರೆ.

'ಚಲ್ತಾ ಹೈ' ಎನ್ನುವ ಉಡಾಫೆ ಸ್ವಭಾವ ಬಿಟ್ಟರೆ ನಾವು ಯಾರಿಗಿಂತ ಕಡಿಮೆಯಿಲ್ಲ ! 'ಚಲ್ತಾ ಹೈ' ಎನ್ನುವ ಉಡಾಫೆ ಸ್ವಭಾವ ಬಿಟ್ಟರೆ ನಾವು ಯಾರಿಗಿಂತ ಕಡಿಮೆಯಿಲ್ಲ !

ಆದರೂ ತಮ್ಮ ಮಕ್ಕಳ ವಿದ್ಯಾಭ್ಯಾಸದ ಸಮಯದಲ್ಲಿ ವಿದೇಶಿ ಯೂನಿವರ್ಸಿಟಿ ಎಂದ ತಕ್ಷಣ ಹೆಚ್ಚು ಅದರ ಬಗ್ಗೆ ರಿಸರ್ಚ್ ಮಾಡದೆ ಒಪ್ಪಿಕೊಂಡು ಬಿಡುತ್ತಾರೆ. ನಿಮಗೆಲ್ಲ ಒಂದು ವಿಷಯ ಗೊತ್ತಿರಲಿ, ವಿದೇಶಗಳಲ್ಲಿ ಕೂಡ ನಮ್ಮಲ್ಲಿ ಇದ್ದಂತೆ ಸಣ್ಣ ಪುಟ್ಟ ಕಾಲೇಜುಗಳು ಗಲ್ಲಿಗೊಂದಿವೆ. ವೆಬ್ ಸೈಟ್‌ನಲ್ಲಿ ಎಲ್ಲವೂ ಸುಂದರ ಮತ್ತು ಸುಸಜ್ಜಿತವಾಗಿ ಕಾಣುತ್ತದೆ. ದೂರವಿದ್ದಾಗ ಪರಿಮಳ, ಹತ್ತಿರ ಬಂದರೆ ಕಟು ವಾಸನೆ ಎನ್ನುವಂತೆ ಅಲ್ಲಿಗೆ ಹೋದ ಮೇಲೆ ಮಾತ್ರ ನಿಜ ಬಣ್ಣ ಬಯಲಾಗುತ್ತದೆ.

Barcelona Memories Column By Rangaswamy Mookanahalli Part 65

ಸ್ಪೇನ್ ಸೇರಿದ ಮೊದಲ ವರ್ಷಗಳಲ್ಲಿ ಅಲ್ಲಿನ ಎಲ್ಲವೂ ಪರ್ಫೆಕ್ಟ್ ಎನ್ನಿಸುತ್ತಿತ್ತು. ನಿಧಾನವಾಗಿ ಈ ಸಮಾಜದಲ್ಲಿ ಬೆರೆಯುತ್ತಾ ಹೋದಂತೆ ಅಯ್ಯೋ ಇವರು ಕೂಡ ನಮ್ಮಂತೆ ಎನ್ನಿಸಲು ಶುರುವಾಯಿತು. ನಮ್ಮಲ್ಲಿ ಇರುವಂತೆ ಇಲ್ಲಿಯೂ ನೆಂಟರು , ಮಿತ್ರರು ಬದುಕಿನಲ್ಲಿ ಮೂಗು ತೂರಿಸುತ್ತಾರೆ. ನೀವು ಕೇಳಲಿ ಬಿಡಲಿ ಸಲಹೆ ಕೊಡುತ್ತಾರೆ. ನೀವು ಕೊಂಡ ಮನೆ, ಕಾರು, ಸೈಕಲ್ ಕೊನೆಗೆ ಕಾಲಿನ ಪಾದರಕ್ಷೆ ಬೆಲೆ ಜಾಸ್ತಿ ಎನ್ನುತ್ತಾರೆ.

ಅವರು ಕೊಂಡ ವಸ್ತು ಯಾವಾಗಲೂ ಚೀಪ್ ಅಂಡ್ ಬೆಸ್ಟ್. ಅಂದಹಾಗೆ ಇಲ್ಲಿಯೂ ಕೂಡ ಅತ್ತೆ ಸೊಸೆ ಜಗಳವಿದೆಯಲ್ಲ ಅದು ಇದ್ದೆ ಇದೆ. ಅತ್ತೆಯನ್ನ ಸ್ವಯಾಗ್ರ ಎಂದು ಸ್ಪ್ಯಾನಿಷ್ ಭಾಷೆಯಲ್ಲಿ ಕರೆಯುತ್ತಾರೆ. ಮಾವನನ್ನ ಸ್ವಯಾಗ್ರೋ ಎಂದು ಕರೆಯಲಾಗುತ್ತದೆ. ಅಳಿಯನನ್ನ ಎರ್ನೊ ಎನ್ನುತ್ತಾರೆ. ಮಗಳಿಗೆ ಹೀಹ ಎಂದರೆ ಸೊಸೆಗೆ ಹಿಹಾಸ್ತ್ರ ಎನ್ನಲಾಗುತ್ತದೆ. ಮೊಮ್ಮಗನಿಗೆ ನಿಯತೋ ಎಂದೂ ಮೊಮ್ಮಗಳಿಗೆ ನಿಯತ ಎಂದೂ ಕರೆಯಲಾಗುತ್ತದೆ.

ಇಲ್ಲಿನ ಕುಟುಂಬ ವ್ಯವಸ್ಥೆ ಕೂಡ ನಮ್ಮಂತೆಯೇ ಇದೆ. ಇಲ್ಲಿನ ಜನರಿಗೆ ಕೌಟುಂಬಿಕ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ ಎನ್ನುವುದು ಸುಳ್ಳು. ಆರ್ಥಿಕವಾಗಿ ಸಬಲರಾಗಿರುವ ಕಾರಣ ಇನ್ನೊಬ್ಬರ ಮೇಲೆ ಅವಲಂಬನೆ ಕಡಿಮೆ. ಹೀಗಾಗಿ ಇರುವ ಜನಸಂಖ್ಯೆಗೆ ಹೋಲಿಸಿದರೆ ಡೈವರ್ಸ್ ರೇಟ್ ಹೆಚ್ಚಿದೆ. ನಾವು ಬದುಕಿನಲ್ಲಿ ನೂರಾರು ಜನರ ಸಂಪರ್ಕಕ್ಕೆ ಬರುತ್ತೇವೆ. ಹಲವರು ಒಳ್ಳೆಯವರು ,ಹಲವರು ಕೆಟ್ಟವರು. ಎಲ್ಲರನ್ನೂ ಒಳ್ಳೆಯವರು ಎಂದು ತೀರ್ಮಾನಿಸುವ ಹಾಗಿಲ್ಲ .

ನೋಡಲು ಸುಭಗರಂತೆ ಕಂಡರೂ ಕೆಲವೊಮ್ಮೆ ಮೋಸ ಹೋಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ .ನೋಡಲು ಎಲ್ಲರೂ ಬೆಳ್ಳಗೆ, ಒಳ್ಳೆಯ ಬಟ್ಟೆ ಧರಿಸುತ್ತಾರೆ ಆದರೆ ಹೀಗೆ ಸಂಪರ್ಕಕ್ಕೆ ಬಂದವರನೆಲ್ಲ ಒಳ್ಳೆಯವರು ಎಂದು ಕೊಂಡರೆ ನಾವು ಮೂರ್ಖರು. ಇಲ್ಲಿಯ ಜನರು ಕೂಡ ಟೋಪಿ ಹಾಕಿಸಿಕೊಳ್ಳುವರು ಸಿಕ್ಕರೆ ಖಂಡಿತ ಹಾಕುತ್ತಾರೆ. ನಮ್ಮಲ್ಲಿ ಬೆಳ್ಳಗಿರುವುದೆಲ್ಲ ಹಾಲಲ್ಲ ಎಂದು ಮಾರ್ಮಿಕವಾಗಿ ನುಡಿದರು. ಅರ್ಥ ಇಷ್ಟೇ ನಮ್ಮ ಸಂಪರ್ಕಕ್ಕೆ ಬಂದವರೆಲ್ಲ ಒಳ್ಳೆಯವರಲ್ಲ ಎನ್ನುವುದು.

ಅಥವಾ ಯಾವುದಕ್ಕೂ ಸ್ವಲ್ಪ ಹೆಚ್ಚಿನ ಜಾಗ್ರತೆಯಿಂದ ಇರುವುದು ಒಳ್ಳೆಯದು ಎನ್ನುವ ಉದ್ದೇಶ. ಈ ಮಾತು ಎಷ್ಟೇ ನಮಗೆ ಜಾಗ್ರತೆಯಾಗಿ ಇರಲು ಹೇಳಿದರೂ ನಾವು ಹಲವು ಸಲ ಜನರನ್ನ ನಂಬುತ್ತೇವೆ ನಂತರ ಅವರಿಂದ ನಮಗೆ ನಷ್ಟ ಅಥವಾ ನಂಬಿಕೆ ದ್ರೋಹವಾದಾಗ ನಾವು ಮರಳಿ ಈ ಮಾತನ್ನ ಉಚ್ಛರಿಸುತ್ತೇವೆ. ಇಂದಿನ ದಿನದಲ್ಲಿ ಎಲ್ಲವೂ ಎಷ್ಟು ಚನ್ನಾಗಿ ನಕಲು ಮಾಡುತ್ತಾರೆ ಎಂದರೆ ಅಸಲಿ ಯಾವುದು? ನಕಲಿ ಯಾವುದು? ಎನ್ನುವ ಸಂಶಯ ಬರುವಷ್ಟು. ಇರಲಿ .

 'ಸೋಭ್ರೆ ಮೇಸ ' - ಊಟದ ಮಧ್ಯದ ಮಾತುಕತೆ! ಮಾತು ಸ್ಪ್ಯಾನಿಶರ ಬಹು ಪ್ರಮುಖ ಗುಣ !! 'ಸೋಭ್ರೆ ಮೇಸ ' - ಊಟದ ಮಧ್ಯದ ಮಾತುಕತೆ! ಮಾತು ಸ್ಪ್ಯಾನಿಶರ ಬಹು ಪ್ರಮುಖ ಗುಣ !!

ಇನ್ನು ಇದನ್ನ ನಮ್ಮ ಸ್ಪಾನಿಷ್ ಜನತೆ No todo lo que brilla es oro ( ನೊ ತೊದೊ ಲೊ ಕೆ ಬ್ರಿಯ್ಯ ಈಸ್ ಓರೋ ) ಎನ್ನುತ್ತಾರೆ. ಅಂದರೆ ಹೊಳೆದದ್ದೆಲ್ಲ ಚಿನ್ನವಲ್ಲ ಎನ್ನುವುದು ಯಥಾವತ್ತು ಅನುವಾದದ ಅರ್ಥ. ಗಾಜಿನ ತುಂಡು ಕೂಡ ಸೂರ್ಯನ ಬೆಳಕು ಬಿದ್ದಾಗ ಪ್ರಜ್ವಲಿಸುತ್ತದೆ ಅಲ್ಲವೇ ? ಹಾಗೆಯೇ ಕೆಲವೊಂದು ಸಂಧರ್ಭದಲ್ಲಿ ವ್ಯಕ್ತಿ ಅತ್ಯಂತ ದಕ್ಷನೂ , ಬುದ್ದಿವಂತನೂ ಮತ್ತು ಸಭ್ಯಸ್ತನೂ ಆಗಿ ಕಾಣುತ್ತಾನೆ . ಆದರೆ ಆತ ಯಾವಾಗಲು ಹಾಗೆಯೇ ಇರುತ್ತಾನೆಯೇ? ಅಥವಾ ಇದ್ದಾನೆಯೇ? ಎಂದು ವಿವೇಚಿಸಿ ಒಂದಷ್ಟು ಪೂರ್ವಾಪರಗಳ ತಿಳಿದುಕೊಳ್ಳುವುದು ಒಳ್ಳೆಯದು . ಇಲ್ಲದಿದ್ದರೆ ನಂತರ ಭ್ರಮನಿರಸನ ಕಟ್ಟಿಟ್ಟ ಬುತ್ತಿ. ಮನುಷ್ಯನ ನಿಜ ಸ್ವಭಾವ ತಿಳಿದುಕೊಳ್ಳದೆ ಅವರು ಒಳ್ಳೆಯವರು ಎಂದು ನಿರ್ಧರಿಸುವುದು ಒಳ್ಳೆಯದಲ್ಲ.

ಇಂಗ್ಲಿಷ್ ಭಾಷಿಕರು All that glitters is not gold ಎನ್ನುತ್ತಾರೆ. ಇದು ಸ್ಪಾನಿಷ್ ಭಾಷೆಯ ಯಥಾವತ್ತು ಅನುವಾದದಂತಿದೆ. ಹೊಳೆಯುವುದೆಲ್ಲ ಚಿನ್ನವಲ್ಲ ಎನ್ನುವುದು ಅರ್ಥ. ಗಮನಿಸಿ ಭಾಷೆ ಯಾವುದೇ ಇರಲಿ ಉಪಮೆಯಾಗಿ ವಸ್ತುವನ್ನ ಬಳಸುತ್ತಾರೆ ಆದರೆ ಅದರ ನಿಜವಾದ ಅರ್ಥ ನಮ್ಮ ಜೀವನದೊಂದಿಗೆ ಬೆಸುಗೆ ಹಾಕಿ ಕೊಂಡಿರುತ್ತದೆ. ಇವತ್ತಿನ ಸಾಮಾಜಿಕ ಜಾಲ ತಾಣ ಯುಗದಲ್ಲಿ ಈ ಗಾದೆ ಮಾತು ಹೆಚ್ಚು ಸಮಂಜಸ.

ನೀವು ಈಗ ನಾನು ಹೇಳಲು ಹೊರಟ ವಿಷಯವನ್ನ ನಂಬಲು ಕಷ್ಟವಾಗಬಹುದು, ಆದರೆ ಇದು ಸತ್ಯ. ಭಾರತದಲ್ಲಿ ನಾವು ಯಾವುದೇ ವಸ್ತುವನ್ನ ಖರೀದಿ ಮಾಡಲು ಹೋದಾಗ ಬಿಲ್ ಬೇಡ ಎಂದೋ ಅಥವಾ ಅರ್ಧಕ್ಕೆ ಬಿಲ್ ಹಾಕಿಸಿಕೊಂಡು ಉಳಿದರ್ಧ ನಗದು ರೂಪದಲ್ಲಿ ನೀಡಿ ಬರುತ್ತೇವೆ ಅಲ್ಲವೇ? ಈ ರೀತಿಯ ಖರೀದಿಯಿಂದ ಸರಕಾರಕ್ಕೆ ಕೊಡಬೇಕಾಗಿದ್ದ ತೆರಿಗೆ ಹಣವನ್ನ ಉಳಿಸುವುದು ಆ ಮೂಲಕ ವಸ್ತುವಿನ ಬೆಲೆಯಲ್ಲಿ ಕಡಿಮೆಯಾಯಿತು ಎಂದು ಬೀಗುವುದು. ಇದು ಸ್ಪೇನ್ ದೇಶದಲ್ಲೂ ಉಂಟು. ಇಲ್ಲಿನ ಜನ ಕೂಡ ರಾಜಾರೋಷವಾಗಿ ತೆರಿಗೆಯನ್ನ ವಂಚಿಸುತ್ತಾರೆ.
ದೊಡ್ಡ ಮಳಿಗೆಗಳಲ್ಲಿ , ಸೂಪರ್ ಮಾರ್ಕೆಟ್ ಗಳಲ್ಲಿ ಇದು ಸಾಧ್ಯವಿಲ್ಲ ಆದರೆ ಸಣ್ಣ ಪುಟ್ಟ ಅಂಗಡಿಯಲ್ಲಿ, ಸಗಟು ವ್ಯಾಪಾರದಲ್ಲಿ ಇದನ್ನ ಕಾಣಬಹುದು. ದಕ್ಷಿಣ ಯೂರೋಪಿನ ಮುಕ್ಕಾಲು ಪಾಲು ದೇಶಗಳಲ್ಲಿ ಇದು ಸಾಮಾನ್ಯ. ಇಂಗ್ಲೆಂಡ್, ಜರ್ಮನಿಗಳಲ್ಲಿ ಕೂಡ ಇದು ಪೂರ್ಣ ಇಲ್ಲ ಎನ್ನುವಂತಿಲ್ಲ. ನಾರ್ದಿಕ್ ದೇಶಗಳು ಮಾತ್ರ ಈ ವಿಷಯದಲ್ಲಿ ಬೇರೆಯ ದರ್ಜೆಯಲ್ಲಿವೆ.

ದೂರದಲ್ಲಿರುವ ಬೆಟ್ಟ ಸಮತಟ್ಟವಾಗಿ ಕಾಣುತ್ತದೆ. ದೂರದಿಂದ ಅದನ್ನ ಹತ್ತುವುದು ಕೂಡ ಬಹಳ ಸುಲಭ ಎನ್ನುವ ಭಾವನೆಯನ್ನ ನೀಡುತ್ತದೆ. ನಿಜದ ಅರಿವು ಆಗ ಬೇಕೆಂದರೆ ಅದರ ಹತ್ತಿರ ಹೋಗಬೇಕು . ಹತ್ತಿರದಿಂದ ಬೆಟ್ಟದ ಮೇಲಿರುವ ಕಲ್ಲುಮುಳ್ಳುಗಳು ದುರ್ಗಮ ರಸ್ತೆ ಕಾಣ ಸಿಗುತ್ತದೆ. ದೂರದಿಂದ ಅಂದುಕೊಂಡಷ್ಟು ಸುಲಭವಾಗಿ ಅದನ್ನ ಹತ್ತಲು ಸಾಧ್ಯವಿಲ್ಲ ಎನ್ನುವ ಅರಿವಾಗುತ್ತದೆ ಕೂಡ.

ಅಂದರೆ ದೂರದಿಂದ ಬಹಳ ಸುಂದರವಾಗಿ ಮತ್ತು ಸುಲಭವಾಗಿ ಕಂಡ ಬೆಟ್ಟ ಹತ್ತುವುದು ಕಂಡಷ್ಟು ಸುಲಭವಲ್ಲ ಎನ್ನುವುದು ಹತ್ತಿರ ಹೋಗಿ ಪ್ರಯತ್ನಿಸಿದ ಮೇಲಷ್ಟೇ ಗೊತ್ತಾಗುತ್ತದೆ .ವಿದೇಶಗಳ ಬಗ್ಗೆ ನಮ್ಮ ಭಾವನೆ ಕೂಡ ಹೀಗೆಯೆ , ಅನುಭವಕ್ಕೆ ಬರುವ ತನಕ ಎಲ್ಲವೂ ಸುಂದರವಾಗೇ ಇರುತ್ತದೆ. ಅಂದ ಮಾತ್ರಕ್ಕೆ ವಿದೇಶದಲ್ಲಿ ಯಾವುದೂ ಸರಿಯಿಲ್ಲ ಎನ್ನವುದು ಇಲ್ಲಿನ ಉದ್ದೇಶ ಕೂಡ ಅಲ್ಲ. ಎಲ್ಲಾ ಸಮಾಜದಲ್ಲೂ ಅದರದೇ ಆದ ನೋವು ಮತ್ತು ನಿಲುವುಗಳು ಇರುತ್ತವೆ ಎಂದು ಹೇಳುವುದಷ್ಟೇ ಉದ್ದೇಶ.

ಇದನ್ನ ಸ್ಪಾನಿಶರು La luz de adelante es la que alumbra (ಲ ಲೂಸ್ ದೆ ಅದೇಲಂತೆ ಈಸ್ ಲ ಕೆ ಅಲುಮ್ಬರ ) ಎಂದರು . ಅರ್ಥ ಇಲ್ಲಿಯೂ ಸೇಮ್ ! ' ಎದುರುಗಡೆಯ ಬೆಳಕು ಹೆಚ್ಚು ಪ್ರಕಾಶಿಸುತ್ತದೆ' ಎನ್ನುವುದು ಯಥಾವತ್ತು ಅನುವಾದ .

ಪೆಸೆಟಾದಿಂದ ಯುರೋ ಬದಲಾವಣೆ ತಂದಿಟ್ಟಿದ್ದ ಹಣದುಬ್ಬರದ ಕಥೆ!ಪೆಸೆಟಾದಿಂದ ಯುರೋ ಬದಲಾವಣೆ ತಂದಿಟ್ಟಿದ್ದ ಹಣದುಬ್ಬರದ ಕಥೆ!

ನಮ್ಮ ಬಳಿ ಏನಿರುತ್ತದೆ ಅದು ಯಾವಾಗಲೂ ಬೆಲೆ ಕಡಿಮೆ. ನಮ್ಮ ಕೈಗೆ ಯಾವುದು ಎಟುಕುವುದಿಲ್ಲ ಅದು ಯಾವಾಗಲೂ ಹೆಚ್ಚು ಬೆಲೆ ಅನ್ನಿಸುತ್ತದೆ. ಅದು ಸಿಕ್ಕ ಮೇಲೆ ಬೇರೆಯದೇ ಕಥೆ. ಇರಲಿ, ಮನುಷ್ಯನ ಮೂಲಭೂತ ಗುಣವೇ ಹಾಗೆ ಎದುರು ಮನೆಯ ಬಲ್ಬ್ ಹೆಚ್ಚು ಹೊಳೆಯುತ್ತದೆ . ಎದುರುಮನೆಯಾತನಾ ಕಾರು, ಮನೆ, ಎಲ್ಲವೂ ಚನ್ನಾಗಿ ಕಾಣುತ್ತದೆ. ನಮ್ಮ ವಸ್ತು ಮಾತ್ರ ಮಬ್ಬು ಮಬ್ಬು! ಇದಕ್ಕೆ ಹಿತ್ತಲ ಗಿಡ ಮದ್ದಲ್ಲ ಎನ್ನುವುದು. ಹಿಂದಿ ಭಾಷಿಕರು ಘರ್ ಕ ಮುರ್ಗಿ ದಾಲ್ ಬರಾಬರ್ ಎನ್ನುತ್ತಾರೆ . ಇವೆಲ್ಲಾ ಏನೇ ಇರಲಿ ಅರ್ಥ ಮಾತ್ರ ಒಂದೇ ., ನಾವೆಲ್ಲಾ ಒಂದೇ, ನಮ್ಮ ಭಾವನೆಯೊಂದೇ!.

ಮೆಕ್ಸಿಕೋ ದೇಶದಲ್ಲಿ ಸಹ ಸ್ಪ್ಯಾನಿಷ್ ಭಾಷೆ ಮಾತನಾಡುತ್ತಾರೆ, ಅಲ್ಲಿ Nunca falta un pelo en la sopa. (ನುಂಕ ಫಾಲ್ತಾ ಉನ್ ಫೆಲೊ ಇನ್ ಲ ಸೊಪ ) ಅಂದರೆ ಸೂಪಿನಲ್ಲಿ ಸಾದಾ ಒಂದು ಕೂದಲು ಇದ್ದೆ ಇರುತ್ತೆ ಎಂದರ್ಥ . ನಿಜವಾದ ಅರ್ಥ ಮಾತ್ರ ಸೇಮ್ ! ಬಾಯಿ ಚಪ್ಪರಿಸುವ ಸೂಪು ಇದ್ದರು ಅದರಲ್ಲಿ ಸಿಕ್ಕ ಕೂದಲು ಹೇಗೆ ಪೂರ್ಣ ಆಸ್ವಾದನೆಗೆ ಕಲ್ಲು ಹಾಕುತ್ತೋ ಹಾಗೆ ಬದುಕಲ್ಲಿ ಕೂಡ ಪೂರ್ಣ ಸುಖ, ಸಂತೋಷ ಎನ್ನುವುದಿಲ್ಲ. ದೇಶ ಯಾವುದೇ ಇರಲಿ ಬದುಕು ಕಷ್ಟ ಸುಖಗಳ ಮಿಶ್ರಣ ಎನ್ನುವುದನ್ನ ಈ ಮಾತು ಹೇಳುತ್ತದೆ.

ನಮ್ಮಲ್ಲಿ ಇಂದಿಗೂ ವಿದೇಶ ಎಂದರೆ ಅಲ್ಲಿನ ಎಲ್ಲವೂ ಉತ್ತಮ ಗುಣಮಟ್ಟದ್ದು, ಅಲ್ಲಿನ ಜನರು ನಮ್ಮಂತಲ್ಲ ಎನ್ನುವ ಹಲವು ಭಾವನೆಗಳನ್ನ ಇಟ್ಟು ಕೊಂಡಿದ್ದಾರೆ. ಅದು ಸುಳ್ಳು, ಎಲ್ಲೆಡೆಯೂ ಒಳ್ಳೆಯವರು ,ಕೆಟ್ಟವರು ಇದ್ದೆ ಇರುತ್ತಾರೆ. ಒಳಿತು ಅಥವಾ ಕೆಡುಕು ಮಾಡುವ ಜನರನ್ನ ಲೆಕ್ಕದಲ್ಲಿ ಇಟ್ಟು ಕೊಂಡು ದೇಶದ ಬಗ್ಗೆಯೇ ಹಗುರವಾಗಿ ಮಾತನಾಡುವುದು ಉತ್ತಮ ಸಂಸ್ಕಾರವಂತರ ಲಕ್ಷಣವಲ್ಲ. ಸ್ಪೇನ್ ನಲ್ಲಿ ಕಡು ಕಷ್ಟದಲ್ಲಿ , ಬಡತನದಲ್ಲಿ ಜೀವನ ಸಾಗಿಸುತ್ತಿರುವ ವ್ಯಕ್ತಿಗಳಿಗೆ ಲೆಕ್ಕವಿಲ್ಲ , ಹಾಗೆಯೆ ಬಡ ರಾಷ್ಟ್ರಗಳು ಎಂದು ಹೆಸರಾದ ಆಫ್ರಿಕಾದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿರುವ ಜನರ ಸಂಖ್ಯೆಗೂ ಕಡಿಮೆಯಿಲ್ಲ.

Recommended Video

A Big Salute To Our Front Line Workers | Covid Warriors | Oneindia Kannada

ಅಡುಗೆಗೆ ಹೇಗೆ ಚಿಟಿಕೆ ಉಪ್ಪು ರುಚಿ ಕೊಡುತ್ತದೆ, ಹಾಗೆಯೇ ಮನುಷ್ಯನ ಜೀವನಕ್ಕೆ ಒಂದಂಶ ಅದೃಷ್ಟವೂ ಬೇಕು. ಆಗ ದೇಶ ಯಾವುದಾದರೂ ನೆಮ್ಮದಿಯ ಬದುಕು ನಮ್ಮದಾಗುತ್ತದೆ.

English summary
Barcelona Memories Column By Rangaswamy Mookanahalli Part 65
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X