ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಚಲ್ತಾ ಹೈ' ಎನ್ನುವ ಉಡಾಫೆ ಸ್ವಭಾವ ಬಿಟ್ಟರೆ ನಾವು ಯಾರಿಗಿಂತ ಕಡಿಮೆಯಿಲ್ಲ !

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ವರ್ಷಕ್ಕೊಂದು ಅಥವಾ ಎರಡು ಬಾರಿ ಬೆಂಗಳೂರಿಗೆ ಹೋಗುವುದೆಂದರೆ ಏನೋ ಖುಷಿ. ಇಪ್ಪತ್ನಾಲ್ಕು ವರ್ಷದ ನೆನಪುಗಳ ಗಂಟು ಮರೆತು ಹೋಗುವಷ್ಟು ಚಿಕ್ಕವೇನಲ್ಲ ಬಿಡಿ. ಬೆಂಗಳೂರಿಗೆ ಬಂದ ಎರಡನೇ ದಿನವೇ ನಾಲಗೆಯ ಚಪಲ ತೀರಿಸುವ ಸಲುವಾಗಿ ದೌಡಾಯಿಸಿದ್ದೆ ಶಾಂತಿಸಾಗರಕ್ಕೆ. ಈ ಮನುಷ್ಯನೇ ವಿಚಿತ್ರ, ತನ್ನೆಲ್ಲಾ ಅಭ್ಯಾಸಗಳ ಒಟ್ಟು ಮೊತ್ತ, ನೆನಪುಗಳ ಸುತ್ತಲೋ ಮನಸ್ಸು ಗಿರಿಕಿ ಹಾಕಿ, ಮತ್ತೆ ಮತ್ತೆ ಅದೇ ನೆನಪಿನ ಆನಂದವನ್ನು ಪಡೆಯಲು ಬಯಸುತ್ತದೆ. ಅದು ಸಹಜ ಕೂಡ.

ಶಾಲೆ, ಕಾಲೇಜು ಕಲಿಯುವರಿಗೆಲ್ಲ ಸ್ನೇಹಿತರೊಂದಿಗೆ ದೋಸೆ, ಇಡ್ಲಿ ಮೆಲ್ಲುತ್ತಾ ಕಳೆದ ಆ ನೆನಪುಗಳು ಮತ್ತೆ ಶಾಂತಿಸಾಗರಕ್ಕೆ ನನ್ನ ಎಳೆತಂದಿದ್ದವು. ಅದೇ ಇಡ್ಲಿ, ದೋಸೆ, ಅದೇ ರುಚಿ.. ಆಹಾ.. ಒಮ್ಮೆಲೇ ಎಷ್ಟು ಪುಣ್ಯವಂತರು ಇಲ್ಲಿ ಬದುಕುವ ಜನ, ನಿತ್ಯವೂ ಇಷ್ಟು ರುಚಿಯಾದ ಊಟ ತಿನ್ನುತ್ತಾರಲ್ಲಾ ಅನ್ನಿಸಿ, ಲೈಟ್ ಆಗಿ ಹೊಟ್ಟೆಕಿಚ್ಚು ಕೂಡ ಬಂತು. ತಿಂಡಿಯೆಲ್ಲಾ ತಿಂದಾದ ನಂತರ ಮೂತ್ರ ವಿಸರ್ಜಿಸಿ ಬರುತ್ತೇನೆಂದು ಹೇಳಿಹೊರಟೆ.

'ಸೋಭ್ರೆ ಮೇಸ ' - ಊಟದ ಮಧ್ಯದ ಮಾತುಕತೆ! ಮಾತು ಸ್ಪ್ಯಾನಿಶರ ಬಹು ಪ್ರಮುಖ ಗುಣ !! 'ಸೋಭ್ರೆ ಮೇಸ ' - ಊಟದ ಮಧ್ಯದ ಮಾತುಕತೆ! ಮಾತು ಸ್ಪ್ಯಾನಿಶರ ಬಹು ಪ್ರಮುಖ ಗುಣ !!

ಆಗಲೇ ರಮ್ಯ ಉಸುರಿದಳು ಗುಂಡು ತುಂಬಾ ಅವಸರ ಆಗಿದ್ರೆ ಮಾತ್ರ ಹೋಗು. ಇಲ್ಲಾಂದ್ರೆ ಇನ್ನೊಂದು ಘಂಟೆಯಲ್ಲಿ ಮನೆ ಸೇರ್ತೀವಿ'. ನಾನು ಅವಳ ಮಾತಿಗೆ ಉತ್ತರಿಸದೆ ಟಾಯ್ಲೆಟ್ ಹುಡುಕಿ ಹೊರಟೆ. ಟಾಯ್ಲೆಟ್ ಪ್ರವೇಶಿಸುತ್ತಿದ್ದಂತೆ ತೀರ ಗಬ್ಬು ವಾಸನೆ ಮೂಗಿಗಡರಿತು, ತಿಂದ ಆಹಾರ ಯಾವ ದ್ವಾರದಿಂದ ನನ್ನ ಹೊಟ್ಟೆ ಸೇರಿತ್ತೋ, ಅದೇ ದ್ವಾರದಿಂದ ರಭಸವಾಗಿ ಹೊರಬಿದ್ದವು, ಇಡ್ಲಿ, ದೋಸೆ ತುಂಡುಗಳು ಬಡ್ಡಿ ಮಗ್ನೆ, ಅಗಿದಗಿದು ನಮ್ಮನ್ನು ಜಗಿದೆಯಲ್ಲಾ, ಈಗ ಅನುಭವಿಸು ಎಂದು ನಕ್ಕಂತೆ ಅನ್ನಿಸಿತು.

Barcelona Memories Column By Rangaswamy Mookanahalli Part 64

ಮರುಘಳಿಗೆಯಲ್ಲೇ ರಮ್ಯಳ ಮಾತು ಕೇಳಬೇಕಾಗಿತ್ತು, ಆಗ ಹೀಗಾಗುತ್ತಿರಲಿಲ್ಲ ಅನ್ನಿಸಿ ಮನಸ್ಸು ಪಿಚ್ಚೆನ್ನಿಸಿತು. ಬಾಯಿತೊಳೆದುಕೊಂಡು (ಕಷ್ಟಪಟ್ಟು) ನಮ್ಮ ಟೇಬಲ್ ಬಳಿ ಬಂದಾಗ, ಏನಾಯಿತೆಂದು ನನಗೆ ಹೇಳುವ ಪ್ರಮೇಯವೇ ಬರಲಿಲ್ಲ. ಅಮ್ಮ-ರಮ್ಯ ನನ್ನ ಮುಖದಲ್ಲಿ ಎಲ್ಲಾ ಬರೆದಿರುವಂತೆ, ಅದನ್ನು ಅವರು ಓದಿರುವಂತೆ ಕಂಡರು. ರಮ್ಯ ಮಾತ್ರ ನನ್ನ ಮಾತು ಯಾಕೆ ಕೇಳಲಿಲ್ಲ ಅಂತ ಹಂಗಿಸಲಿಲ್ಲ.

ಬದಲಾಗಿ ಗುಂಡು ಕಾಫಿ ಏನಾದ್ರೂ ಕುಡಿತೀಯಾ' ಅಂತ ಕೇಳಿದ್ಲು. ಜಗಮಗಿಸುವ ಹೋಟೆಲ್ಲು, ಮಾಲ್‍ಗಳು, ಪಿ.ವಿ.ಆರ್.ಗಳು ಬಂದರೆ ಸಾಕೆ? ಮೂಲ ಸೌಕರ್ಯಗಳಿಗೆ ಯಾಕಿಷ್ಟು ಅಸಡ್ಡೆ? ಕೇವಲ ಶಾಂತಿಸಾಗರ್ ಒಂದೇ ಅಲ್ಲಾ, ತಿಂಗಳ ಅವಧಿಯಲ್ಲಿ ಕನಿಷ್ಠ ಹತ್ತಾರು ಹೆಸರಾಂತ ಹೋಟೆಲ್, ಆಸ್ಪತ್ರೆಗಳನ್ನು ತಡಕಾಡಿದ ನನಗೆ ಆದ ಅನುಭವ ಮಾತ್ರ ಶಾಂತಿ ಸಾಗರದ್ದೇ. ಎಲ್ಲಾ ಕಡೆಯೂ ಅಷ್ಟೇ, ಟಾಯ್ಲೆಟ್‍ಗಳೆಂದರೆ ಅಸಡ್ಡೆ, ಮೂಗು ಮುಚ್ಚಿ ಮುಗಿಸಿ ಬರುವ ಕ್ರಿಯೆ...!

ಎಷ್ಟು ಬೇಡವೆಂದರೂ ಬಾರ್ಸಿಲೋನದ ಕಾಫಿ ಬಾರುಗಳು, ಮಾಲ್‍ಗಳು, ಥಿಯೇಟರುಗಳು ನೆನಪಾದವು. ಮಾಲ್‍ಗಳು ಪಿ.ವಿ.ಆರ್.ಗಳು ಇರುವುದರಿಂದ ಅದರ ತೂಕ, ಘನತೆ ಹೆಚ್ಚಿದವರಂತೆ ತಿರುಗಾಡುವ ಹುಡುಗ-ಹುಡುಗಿಯರು ಈ ಟಾಯ್ಲೆಟ್‍ನಲ್ಲಿ ಹೇಗೆ ಪ್ರವೇಶಿಸುತ್ತಾರೋ ನಾನು ಕಾಣೆ..! ಎಲ್ಲಕ್ಕೂ ಸಮಾಜವನ್ನು, ಸರಕಾರವನ್ನು, ವ್ಯವಸ್ಥೆಯನ್ನು ದೂರುವುದನ್ನು ಅಭ್ಯಾಸಮಾಡಿಕೊಂಡಿರುವ ಜನ ನಾವು. ಸಣ್ಣ ಸಣ್ಣ ಕೆಲಸಗಳನ್ನು, ವಿಷಯಗಳನ್ನು ನಿರ್ಲಕ್ಷಿಸುವ ಬದಲು ನಿಯತ್ತಾಗಿ ಅವುಗಳ ಬಗ್ಗೆ ಗಮನ ಹರಿಸಿದರೆ ಸಾಕು, ಬದಲಾವಣೆ ತನ್ನಷ್ಟಕ್ಕೆ ತಾನೇ ಅಗುತ್ತದೆ ಅನ್ನಿಸಿತು.

ಪೆಸೆಟಾದಿಂದ ಯುರೋ ಬದಲಾವಣೆ ತಂದಿಟ್ಟಿದ್ದ ಹಣದುಬ್ಬರದ ಕಥೆ!ಪೆಸೆಟಾದಿಂದ ಯುರೋ ಬದಲಾವಣೆ ತಂದಿಟ್ಟಿದ್ದ ಹಣದುಬ್ಬರದ ಕಥೆ!

ಜನತಾ ಹೋಟೆಲ್ ಮರೆಯೋದು ಅಸಾಧ್ಯ. ಕೆಲವೊಂದು ನೆನಪುಗಳು ಜೀವನದಲ್ಲಿ ಆ ರೀತಿ ಪ್ರಭಾವ ಬೀರುತ್ತವೆ. ಅಕಸ್ಮಾತ್ ಆ ನೆನಪು ಬಾಲ್ಯದೊಂದಿಗೆ ತಾಳೆ ಹಾಕಿಕೊಂಡಿದ್ದರೆ ಮುಗಿಯಿತು, ಮರೆಯುವ ಮಾತೇ ಇಲ್ಲ. 87 ರಿಂದ 89 ನನ್ನ ಹೈಸ್ಕೂಲು ದಿನಗಳು. ಒಂದೊಂದು ದಿನಗಳೂ ಒಂದೊಂದು ಮಹಾಕಾವ್ಯಗಳೇ ನನ್ನ ಪಾಲಿಗೆ. ಪಟ್ಟ ಆನಂದಕ್ಕೆ, ನಲಿದಾಡಿದ ಆ ದಿನಗಳಿಗೆ ಲೆಕ್ಕ ಮಾಡಿದ್ದರೆ ಕುವೆಂಪುರವರ ರಾಮಾಯಣ ದರ್ಶನಂನಷ್ಟೇ ದಪ್ಪ ಪುಸ್ತಕವಾಗುತ್ತಿತ್ತೇನೋ.

ಇರಲಿ, ಅಂದಿನ ಆ ನೆನಪುಗಳು, ಜನತಾ ಹೋಟೆಲ್ಲಿನ ರವೆ ಇಡ್ಲಿ, ಮಸಾಲ ದೋಸೆ ನನ್ನನ್ನು ಸರಿಸುಮಾರು 11,000 ಕಿಲೋ ಮೀಟರು ದೂರದಿಂದಲೂ ಇಂದಿಗೂ ಸೆಳೆಯುವ ಆಕರ್ಷಣೆ ಉಳಿಸಿಕೊಂಡಿದೆ. ಅಂದಮೇಲೆ 8-10 ಕಿಲೋ ಮೀಟರ್ ನಾಗರಬಾವಿ ಯಾವ ಮಹಾದೂರ..! ಸೆಳೆದೇ ಬಿಟ್ಟಿತು ಒಂದು ಶನಿವಾರ, ನನ್ನ ಜೊತೆಗೆ ಅಮ್ಮ-ರಮ್ಯ..! ಮಲ್ಲೇಶ್ವರಂನ ರಸ್ತೆ ಬದಿಗಳಲ್ಲಿ ಓಡಾಡುವುದೇ ಒಂದು ಆನಂದ.

ದೋಸೆ, ಕಾಫಿ ಹಿತವಾಗಿ ಬೆರತ ಸುವಾಸನೆ ಗಾಳಿಯಲ್ಲಿ ಪಸರಿಸಿ ನಡೆದಾಡುವವರ ಮೂಗಿನ ಹೊಳ್ಳೆಯ ಸೇರಿ ಎಂತಹವರನ್ನೂ ಹೋಟೆಲ್ಲಿಗೆ ಎಳೆದು ತರುವ ಅಗಾಧ ಶಕ್ತಿ. ಮೆಚ್ಚಿ ತಲೆದೂಗಲೇಬೇಕು. ತೂಕ ಹೆಚ್ಚಿದ ಮೇಲೆ ತಲೆ ಕೆರೆದುಕೊಳ್ಳುವುದು ಇದ್ದದ್ದೇ. ಅದು ಇಲ್ಲಿ ಸ್ಥಾನ ಪಡೆಯುವುದಿಲ್ಲ. ಹಾಗೆಯೇ ಹೂವುಗಳ ಸುವಾಸನೆ ಬಗ್ಗೆ ಹೇಳದಿದ್ದರೆ ಹೇಗೆ? ಒಟ್ಟಿನಲ್ಲಿ ಮಲ್ಲೇಶ್ವರಂನಲ್ಲಿ ಓಡಾಡಿ ಆನಂದ ಪಡಬೇಕು, ಆಸ್ವಾದಿಸಬೇಕು.

ಜನತಾ ಹೋಟೆಲ್ ಪ್ರವೇಶಿಸಿ, ಆರಾಮವಾಗಿ ವಿರಮಿಸಿ, ನಾನು ಇಡ್ಲಿಯನ್ನು, ಅಮ್ಮ ಮಸಾಲದೋಸೆಯನ್ನು, ರಮ್ಯ ಖಾಲಿ ದೋಸೆಯನ್ನು ತಿನ್ನಲು ಸಜ್ಜಾದೆವು. ನಮ್ಮ ಪಕ್ಕದ ಟೇಬಲ್ ಸರ್ವ್ ಮಾಡುವ ಮಾಣಿ ಕೈತಪ್ಪಿ ಏನೋ ಬೀಳಿಸಿದ. ಶುರುವಾಯ್ತು ನೋಡಿ ಸಹಸ್ರನಾಮ. ಗಲ್ಲಾ ಪೆಟ್ಟಿಗೆಯ ಮೇಲೆ ಕೂತ ಆಸಾಮಿ, ಬಹುಶಃ ಮಾಲೀಕನಿರಬಹುದು. ಏಯ್, ಸರಿಯಾಗೆ ಸರ್ವ್ ಮಾಡೋಕೆ ಬರಲ್ವಾ? ಇಲ್ಲೇನು ತರಿಯೋಕೆ ಬಂದಿದಿಯಾ?' ಇನ್ನೂ ಏನೇನೋ ತೀರವೇ ತುಚ್ಚವಾದ ಪದಗಳಿಂದ ಆ ವ್ಯಕ್ತಿಯನ್ನು ನಿಂದಿಸತೊಡಗಿದ.

'ಹಣೆಬರಹ, ಪೂರ್ವ ಜನ್ಮದ ಕರ್ಮ ಅಥವಾ ಡೆಸ್ಟಿನಿ' ಎನ್ನುವ ಪದಗಳ ಸೃಷ್ಟಿ'ಹಣೆಬರಹ, ಪೂರ್ವ ಜನ್ಮದ ಕರ್ಮ ಅಥವಾ ಡೆಸ್ಟಿನಿ' ಎನ್ನುವ ಪದಗಳ ಸೃಷ್ಟಿ

ಸುತ್ತಲ ಜನರೆಲ್ಲಾ ಯಾವುದಕ್ಕೂ ಪ್ರತಿಕ್ರಿಯಿಸದೆ ತಮ್ಮಪಾಡಿಗೆ ತಾವು ತಿನ್ನುವುದರಲ್ಲಿ ಮಗ್ನರಾಗಿದ್ದರು. ನನ್ನ ಮನಸ್ಸು ಮಾತ್ರ ಬಾರ್ಸಿಲೋನಾದ ನೆನಪುಗಳೊಂದಿಗೆ ಬೆಸುಗೆ ಹಾಕತೊಡಗಿತು. ಅಕಸ್ಮಾತ್ (ಈ ರೀತಿ ಆಗೋದೇ ಇಲ್ಲ, ಅದಕ್ಕೆ ಅಕಸ್ಮಾತ್ ಪದ ಬಳಸಿದೆ) ಬಾರ್ಸಿಲೋನಾದಲ್ಲಿ ಏನಾದ್ರೂ ಮಾಲೀಕ ಈ ರೀತಿ ಕಿರುಚಾಡಿದ್ರ್ರೆ, ಕಾರ್ಮಿಕ ಸರಾಸರಿ ವರ್ಷದ ವೇತನ ಪಡೆದು ಮನೆಯಲ್ಲಿ ವಿರಮಿಸುತ್ತಿದ್ದ, ಸಾಲದ್ದಕ್ಕೆ ಸರ್ಕಾರ ಆತನ ಮನಸ್ಥಿತಿ ಬಗ್ಗೆ ವರದಿ ಒಪ್ಪಿಸಲು ತಿಂಗಳಿಗೊಮ್ಮೆ ಮನೋವೈದ್ಯರನ್ನು ಕಳಿಸುತ್ತಿದ್ದರು.

ಮಾಲೀಕನ ಅದೃಷ್ಟ ಕೆಟ್ಟು ಮನೋ ವೈದ್ಯನೇನಾದರೂ ಇನ್ನೊಂದು ವರ್ಷ ಈತ ಮಾನಸಿಕವಾಗಿ ಪೂರ್ಣ ಫಿಟ್ ಆಗಲ್ಲ ಕೆಲಸಮಾಡಲು ಅಂತ ಸರ್ಟಿಫಿಕೇಟ್ ಕೊಟ್ಟರೆ ಮುಗಿಯಿತು ಮಾಲೀಕನಿಗೆ ಸಜೆ, ಕಾರ್ಮಿಕನಿಗೆ ಭತ್ಯೆಯೊಂದಿಗೆ ರಜೆ. ಅಷ್ಟೊಂದು ಗ್ರಾಹಕರೆದುರು ತನ್ನ ಕಾರ್ಮಿಕನನ್ನು ಈ ರೀತಿ ಹೀನಾಯ ಪದಗಳಿಂದ ನಿಂದಿಸುವ ಹಕ್ಕನ್ನು ಇವರಿಗೆ ಕೊಟ್ಟವರಾರು? ಬಡವನಾಗಿ ಹುಟ್ಟಿದ್ದೇ ಆತನ ಪಾಪವೆ? ಇಷ್ಟಕ್ಕೂ ಮಾಡಿದ ಮಹಾಪರಾಧವಾದರೂ ಏನು? ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಒಮ್ಮಲೇ ಮುತ್ತಿಗೆ ಹಾಕಿದ್ದರಿಂದಲೋ ಏನೋ ಇಡ್ಲಿ ರುಚಿಸಲಿಲ್ಲ. ಅಮ್ಮ, ರಮ್ಯರ ಸ್ಥಿತಿ ನನಗಿಂತ ಭಿನ್ನವಾಗಿರಲಿಲ್ಲ ಎಂಬುದು ಅವರ ಮುಖವೇ ಹೇಳುತ್ತಿತ್ತು.

ಮನಸ್ಸಿಗೆ ತಟ್ಟುವ ಒಂದು ಘಟನೆ ಹೇಳ್ತೀನಿ, 2014 ಫೆಬ್ರವರಿ ಮಧ್ಯದಲ್ಲಿ ನನ್ನ ಕಚೇರಿಗೆ ಹೊಸದಾಗಿ ಫ್ರಾನಸೆಸಿಯ' ಎಂಬಾಕೆ ಕೆಲಸಕ್ಕೆ ಸೇರಿದಳು. ಆಕೆಗೆ ಕೊಟ್ಟಿದ್ದು ಆರು ತಿಂಗಳ ವರ್ಕ್ ಕಾಂಟ್ರಾಕ್ಟ್'. ಈ ಭಾಗದಲ್ಲಿ ಬಹುಶಃ ಹೀಗೆ ಆರು ತಿಂಗಳು, ವರ್ಷ, ಎರಡು ವರ್ಷ, ಕೆಲಸಕ್ಕೆ ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳುತ್ತಾರೆ. ಜೀವಾವಧಿ' ಕೆಲಸದ ಕಾಂಟ್ರಾಕ್ಟ್ ಇರುವವರ ಸಂಖ್ಯೆ ಬಹಳ ಕಡಿಮೆ.

ವಾರ ಕೆಲಸ ಮಾಡಿದ ಆಕೆ, ಮರುವಾರ ಬಂದವಳೇ ತನಗೆ ಕೂರಲು ಆಗುತ್ತಿಲ್ಲ ತೊಡೆಯ ಭಾಗದಲ್ಲಿ ಸಣ್ಣ ಕುರುವಾಗಿದೆ ಎಂದು ಡಾಕ್ಟರ್ ಸರ್ಟಿಫಿಕೇಟ್ ಕೊಟ್ಟು ಹೋದವಳು ಮಾರ್ಚ್ 18ರವರೆಗೆ ಮುಖ ತೋರಿಸಿಲ್ಲ. ಆಗಾಗ ಫೋನ್ ಮಾಡಿ ವಿಚಾರಿಸಿದರೆ, ಆದಾಗ ಬರ್ತೀನಿ ಅಂತ ನವಿರಾಗಿ ಹೇಳುತ್ತಿದ್ದಳು. ಇದೂ - ಜನತಾ ಹೋಟೆಲ್ಲಿನ ಮಾಣಿಯ ಘಟನೆ ಎರಡೂ ಮನದಲ್ಲಿ ಭತ್ತ ಕುಟ್ಟಿದಂತೆ ಕುಟ್ಟುತ್ತಲೇ ಇದೆ. ಎಲ್ಲಾ ಮಾಧ್ಯಮಗಳಲ್ಲೂ ಅಮೆರಿಕಾದಿಂದ, ಯೂರೋಪಿನಿಂದ ಭಾರತೀಯರು ವಾಪಸ್ಸು ಬರುತ್ತಿದ್ದರೆ, ಅವರೆಲ್ಲರ ಕಣ್ಣು ಬೆಂಗಳೂರ ಮೇಲೆ' ಇನ್ನೂ ಏನೇನೋ ರಂಗು ರಂಗಾಗಿ ವರ್ಣಿಸಿ ಬರೆಯುತ್ತಾರೆ. ಹತ್ತು ಸಾವಿರ ವೇತನ ಬಂದರೆ ಸಾಕೆ? ಮಾನವತೆಯೇ ಇಲ್ಲದೆ ಮೇಲೆ?

ಜನತಾ ಹೋಟೆಲ್ಲಿನ ಮಾಣಿ ಮಾತ್ರ ಅಷ್ಟಕ್ಕೆಲ್ಲಾ ಉಗಿಸಿಕೊಂಡು ನಿಮಿಷ ಕೂಡ ಬ್ರೇಕ್ ತೆಗೆದುಕೊಳ್ಳದೆ ಕೆಲಸದಲ್ಲಿ ತೊಡಗುತ್ತಾನೆ..! ಹತ್ತನೇ ತರಗತಿ ಮುಗಿದು ಮೊದಲನೇ ಪಿ.ಯು.ಸಿ.ಗೆ ಕಾಲಿಡುವುದಕ್ಕೆ ಮುಂಚಿನಿಂದ ಉಪಯೋಗಿಸಲು ಪ್ರಾರಂಭಿಸಿದ್ದೆ ಕನ್ನಡಕವನ್ನು. ಸರಿ ಸುಮಾರು ಹದಿನೆಂಟು ವರ್ಷದ ಸಂಗಾತಿ, ದೇಹದ ಒಂದು ಅವಿಭಾಜ್ಯ ಅಂಗವೇ ಆಗಿಹೋಗಿರುವ ಈ ಕನ್ನಡಕವೆಂಬ ಗೆಳತಿಯನ್ನು ಬಿಡುವುದೆಂದು ತೀರ್ಮಾನಿಸುವುದು ಕಷ್ಟವೇ ಆಗಿತ್ತು.

ಲೇಜಿಕ್ಸ್ ಸರ್ಜರಿಯೆಂಬ 10-12 ನಿಮಿಷದ ಶಸ್ತ್ರಕ್ರಿಯೆಯಿಂದ ನಮ್ಮ ಕಣ್ಣ ದೃಷ್ಟಿ ಸಾಧಾರಣವಾಗಿಸಬಹುದಂತೆ..! ಇದನ್ನು ನಾಲ್ಕಾರು ವರ್ಷದ ಹಿಂದೆಯೇ ಕೇಳಿದ್ದೆ. ಆದರೆ ನಾನು ಮಾಡಿಸಿಕೊಳ್ಳಬೇಕು ಅಂತ ಅನಿಸಿರಲಿಲ್ಲ. ಯಾಕೆ ಅಂತ ಗೊತ್ತಿಲ್ಲ. ಈ ಭಾರಿ ಇದ್ದಕ್ಕಿದ್ದಂತೆ ಈ ಆಸೆ ಗರಿಗೆದರಿ, ಸರಿ ಅದನ್ನು ನೋಡಿಯೇ ಬಿಡುವ ಎಂಬ ಭಾವದಲ್ಲಿ ನಾರಾಯಣ ನೇತ್ರಾಲಯಕ್ಕೆ ಅಮ್ಮನೊಂದಿಗೆ ಪ್ರವೇಶಿಸಿದೆ. ಪ್ರವೇಶ ದ್ವಾರದಲ್ಲೇ ನಮ್ಮನ್ನು ನವಿರಾಗಿ ತಡೆದು ರೋಗಿಯ ಗುರುತಿನ ಚೀಟಿ ಕೇಳಿದರು.

ಇಲ್ಲವೆಂದಾಗ ಪ್ರಥಮ ಭೇಟಿಯೇ ಎಂದು ಪ್ರಶ್ನಿಸಿ, ಹಣ ಪಡೆದು ಹದಿನೈದು ನಿಮಿಷದಲ್ಲಿ ಸಣ್ಣ ಲ್ಯಾಮಿನೇಟ್ ಮಾಡಿದ ಕಾರ್ಡ್ ನೀಡಿದರು. ಅದು ಗುರುತಿನ ಚೀಟಿ. ನನ್ನನ್ನು ಡಾ. ಆನಂದ್ ಎಂಬವರ ಬಳಿಗೆ ಕಳುಹಿಸಿಕೊಟ್ಟರು. ಡಾ. ಆನಂದ್ ಅವರನ್ನು ಭೇಟಿ ಮಾಡುವುದಕ್ಕೆ ಮುಂಚೆ ಹತ್ತಾರು ಮಂದಿ ನನ್ನ ಕಣ್ಣನ್ನು ಪರೀಕ್ಷಿಸಿದರು. ಅಲ್ಲಿ ಕೆಲಸ ಮಾಡುವ ಬಹುಮಂದಿ ಹುಡುಗರು ಕನ್ನಡಿಗರು. ಸಹೃದಯಿಗಳು. ತುಂಬ ವಿನಯದಿಂದ ಮಾತನಾಡಿಸಿದರು.

ಎಷ್ಟೆಂದರೆ ಕೆಲವೊಮ್ಮೆ ನಾನೇನು ಬೆಂಗಳೂರಿನಲ್ಲೇ ಇರುವೆನೋ ಎಂದು ಅನುಮಾನ ಬರುವಷ್ಟು. ಮನಸ್ಸು ಹಕ್ಕಿಯಂತೆ ಹಾರಲು ಇನ್ನೇನು ಬೇಕು ಹೇಳಿ. ಸರಿಸುಮಾರು ಎರಡು ಗಂಟೆ ಅವರಿವರು ತಪಾಸಣೆ ನಡೆಸಿ ಕೊನೆಗೆ ಡಾ. ಆನಂದ್ ಬಳಿಗೆ ನನ್ನನ್ನು ಕರೆದೊಯ್ದರು. ಆನಂದ್‍ರವರ ರೂಂ ಪ್ರವೇಶಿಸುತ್ತಿದ್ದಂತೆ ಗುಡ್ ಮಾರ್ನಿಂಗ್ ಡಾಕ್ಟರ್' ಎಂದೆ. ಅಚ್ಚರಿಯಿಂದ ತಲೆಯೆತ್ತಿ ಧ್ವನಿ ಬಂದತ್ತ ದೃಷ್ಟಿ ಹಾಯಿಸಿದರು. ಗುಡ್ ಮಾರ್ನಿಂಗ್' ಬನ್ನಿ ಕುಳಿತುಕೊಳ್ಳಿ ಅಂದರು.

Recommended Video

South Africa ಹಾಗು India ನಡುವಿನ ಮೂರನೇ ಪಂದ್ಯಕ್ಕೆ Kohli ಸಿದ್ಧ! | Oneindia Kannada

ಐದಾರು ನಿಮಿಷ ನನ್ನ ಕಣ್ಣನ್ನು ಬೆಳಕು' ಹಿಡಿದು ನೋಡಿ ಲೇಜಿಕ್ಸ್ ಮಾಡಬಹುದು. ಆದ್ರೆ ರೇಟಿನಾ ಸ್ಪೆಷಲಿಸ್ಟ್ ಹತ್ರ ಒಮ್ಮೆ ಸೆಕಂಡ್ ಒಪಿನಿಯನ್ ತಗೊಳ್ಳೊದು ಒಳ್ಳೆಯದು ಅಂದರು. ಸರಿ ಹಾಗೇ ಆಗಲಿ ಅಂದಳು ಅಮ್ಮ. ರೇಟಿನಾ ಸ್ಪೆಷಲಿಸ್ಟ್ ನೋಡಿದವರು ಡ್ಯೂ ಟು ಮಯೋಫಿಯ ಬಲಗಣ್ಣಿನಲ್ಲಿ ರಂಧ್ರ ಆಗಿದೆ. ಆದರೆ ಅದೇನೂ ಸೀರಿಯಸ್ ಅಲ್ಲ. ಲೇಸರ್ ಟ್ರೀಟ್‍ಮೆಂಟ್ ನೀಡಿ ಅದನ್ನು ಮುಚ್ಚುತ್ತೇವೆ' ಅಂದರು. ಸರಿ ಅನ್ನದೆ ನಮ್ಮ ಬಳಿ ಬೇರೆ ಯಾವುದೇ ದಾರಿ ಇರಲಿಲ್ಲ. ಒಮ್ಮೆ ಶರಣೆಂದು ಬಂದಾಯಿತು, ನಂಬಿ ಕೆಟ್ಟವರಿಲ್ಲವೋ ಎಂಬ ದಾಸರ ಪದವು ಜ್ಞಾಪಕಕ್ಕೆ ಬಂದು ಸರಿಯೆಂದೆವು.

ಲೇಸರ್ ಟ್ರೀಟ್‍ಮೆಂಟ್ ಕೂಡ ಐದಾರು ನಿಮಿಷವಷ್ಟೇ, ಸ್ವಲ್ಪ ನೋವಾಯಿತು. ಆದರೆ ತಡೆಯಲಾಗದಷ್ಟೇನಲ್ಲ. ನನ್ನನು ಆಪರೇಷನ್ ರೂಂಗೆ ಕರೆದೊಯ್ದರು. ಆಪರೇಷನ್ ರೂಂಗೆ ಪ್ರವೇಶಿಸುವ ಮೊದಲು ನನ್ನ ಕೈಗೆ ಇಂಗ್ಲಿಷಿನಲ್ಲಿದ್ದ ಒಂದು ಹಾಳೆಯನ್ನು ಕೊಟ್ಟರು. ಅದರಲ್ಲಿ ಸಹಿ ಹಾಕಿ ಸಾರ್ ಅಂದ್ರು. ನನ್ನ ಜೀವದ ಗೆಳತಿ ಕನ್ನಡಕವಿಲ್ಲದೆ ಓದುವುದು ಕಷ್ಟವೇ ಆಯಿತು. ಅಮ್ಮ - ರಮ್ಯ ಕೂಡ ಜೊತೆಯಲ್ಲಿಲ್ಲ, ಕಷ್ಟಪಟ್ಟು ಓದತೊಡಗಿದೆ. ಅದರಲ್ಲಿದ್ದ ಸಾರಾಂಶ ಇಷ್ಟು :

ಡಾ. ಆನಂದ್ ಆಪರೇಷನ್‍ಗೂ ಮೊದಲೇ ಇದರಲ್ಲಿನ ಸಾಧಕ-ಬಾಧಕಗಳನ್ನು ರೋಗಿಗೆ ವಿವರವಾಗಿ ತಿಳಿಸಿರುತ್ತಾರೆ. ಈ ಸಂಬಂಧ ಮರುಪರೀಕ್ಷೆ ಮಾಡಬೇಕಾಗಬಹುದು, ಕಣ್ಣು ನವೆಯಾಗಬಹುದು, ದೃಷ್ಟಿ ಪೂರ್ಣ ಸರಿಹೋಗದೆ ಇರಬಹುದು. ಹೀಗಾದಾಗ ರೋಗಿ ಎರಡನೇ ಬಾರಿ ಆಪರೇಷನ್ ಮಾಡಿಸಿಕೊಳ್ಳಲು ಕೂಡ ಒಪ್ಪಿರುತ್ತಾರೆ ಇತ್ಯಾದಿ ಇತ್ಯಾದಿ. ಮನಸ್ಸು ಯುದ್ಧ ಸಾರೆಂದಿತು. ಬುದ್ದಿ ನಿಧಾನಿಸು ಎಂದಿತು. ಆ ಪೇಪರ್ ಕೊಟ್ಟವನನ್ನು ಉದ್ದೇಶಿಸಿ ಏನ್ರಿ ಇದು ಕೊನೆ ಘಳಿಗೆಯಲ್ಲಿ ಕೈಗೆ ಇಂಥ ಶಾಕ್ ಕೊಟ್ರಲ್ರಿ' ಅಂದೆ. ಅಯ್ಯೋ ಅದೇನೂ ಇಲ್ಲಾ ಸಾರ್, ಜಸ್ಟ್ ಫಾರ್ಮಾಲಿಟಿ, ನೀವೇನೂ ಯೋಚನೆ ಮಾಡಬೇಡಿ, ಸಹಿ ಹಾಕಿ ಅಂದ.

ಎಲ್ಲವೂ ಸುಖಾಂತ್ಯ ಕಂಡಿತು. ಇದೆ ತಪ್ಪು ಬಾರ್ಸಿಲೋನಾ ದಲ್ಲಿ ಆಗಿದ್ದರೆ ನನ್ನ ಬ್ಯಾಂಕ್ ಬ್ಯಾಲೆನ್ಸ್ ಬಹಳ ಹೆಚ್ಚಿರುತ್ತಿತ್ತು. ಎಷ್ಟೆಂದರೂ ನಾವು ಭಾರತೀಯರು ಮಾರ್ಜಿನ್ ಆಫ್ ಎರರ್ ಸ್ವಲ್ಪ ಹೆಚ್ಚು ಬಿಡುವುದು ನಮ್ಮ ರಕ್ತದಲ್ಲೇ ಇದೆಯಲ್ಲವೇ ?

English summary
Barcelona Memories Column By Rangaswamy Mookanahalli Part 64,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X