ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಸೆಟಾದಿಂದ ಯುರೋ ಬದಲಾವಣೆ ತಂದಿಟ್ಟಿದ್ದ ಹಣದುಬ್ಬರದ ಕಥೆ!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಬದುಕು ವಿಚಿತ್ರಗಳ ಆಗರ. ನಾವು ಬಹಳ ಆಸೆಯಿಂದ ಹೀಗಾಗಬಹುದು ಎನ್ನುವ ವಿಷಯ ದಕ್ಕದೆ ಹೋಗಬಹುದು. ಏನನ್ನೂ ಅಪೇಕ್ಷಿಸದೆ ನಮ್ಮ ಪಾಡಿಗೆ ನಾವಿದ್ದಾಗ ಬದುಕು ಬಹಳಷ್ಟು ನಮ್ಮೆಡೆಗೆ ಅದು ನೂಕಬಹುದು. ಆದರೂ ಕೊನೆಗೆ ನಮಗೆ ದಕ್ಕಿದ್ದು ಮಾತ್ರ ನಮ್ಮದು ಎನ್ನದೆ ವಿಧಿಯಿಲ್ಲ.ಸ್ಪೇನ್ ದೇಶಕ್ಕೆ ಹೋಗಿ ವರ್ಷ ಕಳೆಯುವುದರಲ್ಲಿ ಅಲ್ಲಿನ ಹಳೆಯ ಹಣ ' ಪೆಸೆಟಾ' ವನ್ನ ತೆಗೆದು ಹಾಕಿ ಅದರ ಬದಲಿಗೆ ಯುರೋ ಎನ್ನುವ ಹಣವನ್ನ ಚಾಲನೆಗೆ ತಂದರು.

ನನಗಿನ್ನೂ ಚನ್ನಾಗಿ ನೆನಪಿದೆ ಅದು ಜನವರಿ 2002, ವರ್ಷದ ಪ್ರಥಮ ದಿನದಿಂದ ಯುರೋ ಹಣವನ್ನ ಜನತೆಗೆ ಉಪಯೋಗಿಸಲು ಹೇಳಲಾಯಿತು. ಮುಂದಿನ ಆರು ತಿಂಗಳು ಅಂದರೆ ಜೂನ್ 2002ರ ವರೆಗೆ ಎರಡೂ ಹಣವನ್ನ ಮಾರುಕಟ್ಟೆಯಲ್ಲಿ ವಿನಿಮಯವನ್ನಾಗಿ ಉಪಯೋಗಿಸಬಹುದು ಎಂದು ಹೇಳಲಾಯಿತು. ಅಂದರೆ ಪೆಸೆಟಾ ಇದ್ದವರು ಅದನ್ನ ನೀಡಿ ಎಲ್ಲೆಡೆ ಖರೀದಿ ಮಾಡಬಹುದಿತ್ತು. ಜನವರಿ 1, 1999ರಲ್ಲೇ ಯುರೋ ಹಣವನ್ನ ಬೋರ್ಡುಗಳಲ್ಲಿ ಹಾಕಲಾಗುತ್ತಿತ್ತು.

'ಹಣೆಬರಹ, ಪೂರ್ವ ಜನ್ಮದ ಕರ್ಮ ಅಥವಾ ಡೆಸ್ಟಿನಿ' ಎನ್ನುವ ಪದಗಳ ಸೃಷ್ಟಿ'ಹಣೆಬರಹ, ಪೂರ್ವ ಜನ್ಮದ ಕರ್ಮ ಅಥವಾ ಡೆಸ್ಟಿನಿ' ಎನ್ನುವ ಪದಗಳ ಸೃಷ್ಟಿ

ಆದರೆ ಅದು ಜನರ ನಡುವೆ ಬಳಕೆಗೆ ಬಂದದ್ದು ಮಾತ್ರ ಜನವರಿ 1,2002ರಿಂದ. ಪೆಸೆಟಾ ಇರುವವರೆಗೆ ಸ್ಪೇನ್ ಒಂದು ಸುಂದರ ಹಳ್ಳಿ . ಜನ ಉಂಡುಟ್ಟು ಖುಷಿಯಾಗಿದ್ದರು. ಯುರೋ ಹಣ ಬಂದಿತು ಮನುಷ್ಯರ ಮುಖದಲ್ಲಿನ ನಗುವನ್ನ ಕಸಿದು ಬಿಟ್ಟಿತು. ಇದಕ್ಕೆ ಪ್ರಮುಖ ಕಾರಣವೇನು ಗೊತ್ತೇ ? ವಿನಿಮಯ ದರ. ಹೌದು ಯೂರೋಪಿಯನ್ ಒಕ್ಕೊಟ್ಟದ ಎಲ್ಲಾ ದೇಶಗಳ ಹಣವನ್ನ ಒಂದು ಯುರೋಗೆ ಇಷ್ಟು ಎಂದು ನಿಗದಿಪಡಿಸಲಾಯಿತು. ಉದಾಹರಣೆಗೆ ಸ್ಪ್ಯಾನಿಷ್ ಪೆಸೆಟಾ ವನ್ನ ಒಂದು ಯುರೋ ಗೆ 166.386 ( ನೂರಾ ಅರವತ್ತಾರು ಪೆಸೆಟಾ 386 ಸೆಂಟಿಮೋಸ್ ).

Barcelona Memories Column By Rangaswamy Mookanahalli Part 62

ಗಮನಿಸಿ ಸ್ಪೇನ್ ದೇಶದ ಯಾವುದೇ ಭಾಗದಲ್ಲಿ ಕಾಫಿ ಸಾಮನ್ಯವಾಗಿ 90ಪೆಸೆಟಾ , ಹೆಚ್ಚೆಂದರೆ 100ಪೆಸೆಟಾ ಒಂದು ಕಪ್ಪಿಗಿತ್ತು. ಯುರೋ ಬಂದ ನಂತರ ಅದು ಒಂದು ಯೂರೋಗೆ ಬದಲಾಗಿ ಹೋಯಿತು. ಅಂದರೆ ಯೂರೋಪಿನ ಉನ್ನತಿ ಹೊಂದಿದ ದೇಶಗಳಾದ ಜರ್ಮನಿ , ಫ್ರಾನ್ಸ್ ಗಳ ಮಟ್ಟಕ್ಕೆ ಖರ್ಚು ಹೆಚ್ಚಿಗೆ ಆಗಿಬಿಟ್ಟಿತು. ಆದರೆ ಜನರ ವೇತನ ಮಾತ್ರ ಪೆಸೆಟಾದಲ್ಲಿದ್ದನ್ನ ಯೂರೋಗೆ ಬದಲಿಸಿ ನೀಡಲಾಗುತ್ತಿತ್ತು. ಖರ್ಚು ಜನರ ಅನುಮತಿ ಕೇಳದೆ 66 ಪ್ರತಿಶತ ದಿಂದ 75 ಪ್ರತಿಶತದ ವರೆಗೆ ಹೆಚ್ಚಾಗಿ ಬಿಟ್ಟಿತು. ಜನ ಗಾಬರಿ ಬಿದ್ದರು.

ಇದಾವುದೂ ಹೇಳಿ ಮಾಡಿದ್ದಲ್ಲ . ಅಚಾನಕ್ಕಾಗಿ ಆಗಿದ್ದು. ಜನ ವರ್ಷಗಳ ತನಕ ವಸ್ತುವಿಗೆ ನೀಡುವ ಹಣವನ್ನ ಪೆಸೆಟಾದಲ್ಲಿ ಲೆಕ್ಕ ಹಾಕಿ , ಅಯ್ಯೋ ಇದು ದುಬಾರಿ ಎನ್ನುವ ಉದ್ಘಾರವನ್ನ ಹೊರಡಿಸುತ್ತಿದ್ದರು. ಹೊಸ ತಲೆಮಾರಿನ ಜನರು ಇದಕ್ಕೆ ಸಲ್ಪ ಬೇಗ ಒಗ್ಗಿಕೊಂಡರು. ಹಳೆ ತಲೆಮಾರಿನ ಜನ ಯುರೋವನ್ನ ಬಹಳಷ್ಟು ಶಪಿಸಿದರು. ಹೆಚ್ಚಿನ ವೇತನ ಗಳಿಸಲು ಇದ್ದ ಒಂದೇ ದಾರಿಯೆಂದರೆ ಕೆಲಸ ಬಿಡುವುದು ಮತ್ತು ಹೊಸ ಕೆಲಸದಲ್ಲಿ ಹೆಚ್ಚಿನ ವೇತನವನ್ನ ಕೇಳುವುದು. ಅಂದಿನ ದಿನದಲ್ಲಿ ಬಹುತೇಕರಿಗೆ ಹೀಗೆ ಮಾಡದೆ ದಾರಿಯಿರಲಿಲ್ಲ.

ಒಂದಷ್ಟು ಜನ ಇದ್ದ ಸಂಸ್ಥೆಯಲ್ಲೇ ಹೆಚ್ಚಿನ ವೇತನವನ್ನ ಕೂಡ ಪಡೆದುಕೊಂಡರು. ಒಟ್ಟಿನಲ್ಲಿ ಪೆಸೆಟಾ ಇಂದ ಯುರೋಗೆ ಬದಲಾದ ವ್ಯವಸ್ಥೆಯಲ್ಲಿ ಒಂದು ವರ್ಗದ ಜನ ನೋವು ತಿಂದುರುವುದು ಸತ್ಯ. ಭಾರತದ ಅದ್ಯಾವುದೋ ಹಳ್ಳಿಯ ಒಂದು ಮೂಲೆಯಲ್ಲಿ ಜನಿಸಿದ , ಸ್ಪೇನ್ ಎನ್ನುವ ದೇಶವಿದೆ ಎನ್ನುವ ಲವಲೇಶ ಸಾಮಾನ್ಯ ಜ್ಞಾನವಿಲ್ಲದ ನನ್ನನ್ನ ಇದೆಲ್ಲಾ ನೋಡಲು , ಸಾಕ್ಷಿಯಾಗಲು ದೈವ ನಿರ್ಧರಿಸಿತ್ತು.

ಬುಗುರಿ , ಕುಂಟೆಬಿಲ್ಲೆ ಬಿಟ್ಟು ಕೊಡದ ಯೂರೋಪು ಎನ್ನುವ ಹಳ್ಳಿ! ಬುಗುರಿ , ಕುಂಟೆಬಿಲ್ಲೆ ಬಿಟ್ಟು ಕೊಡದ ಯೂರೋಪು ಎನ್ನುವ ಹಳ್ಳಿ!

ಅಂದಿನ ದಿನದಲ್ಲಿ ತರಕಾರಿ ಮಾರುಕಟ್ಟೆಯಿಂದ ಅತಿ ದೊಡ್ಡ ಸೂಪರ್ ಮಾರ್ಕೆಟ್ ವರೆಗೆ ಎಲ್ಲೆಡೆ ಎಲ್ಲಾ ಪದಾರ್ಥಗಳ ಬೆಲೆಯನ್ನ ಯೂರೋದಲ್ಲಿ ಇಷ್ಟು , ಪೆಸೆಟಾ ದಲ್ಲಿ ಇಷ್ಟು ಎಂದು ನಮೂದಿಸಿರುತ್ತಿದ್ದರು. ಪ್ರತಿ ಖರೀದಿ ಕೂಡ ಸಾಮಾನ್ಯಕ್ಕಿಂತ ಹೆಚ್ಚಿನ ಸಮಯವನ್ನ ತೆಗೆದುಕೊಳ್ಳುತ್ತಿತ್ತು . ಈ ಮಧ್ಯ ಯುರೋ ನಾಣ್ಯದ ಕಡಿಮೆ ಡೆಸಿಮಲ್ ಗಳನ್ನ ಸೆಂಟಿಮೋಸ್ ಎನ್ನಲಾಗುತ್ತದೆ ,ಇದು ಹಿತ್ತಾಳೆ ಉಪಯೋಗಿಸಿ ಮುದ್ರಿಸಲಾಗುತ್ತದೆ. ಇದು ಚರ್ಮಕ್ಕೆ ಹಾನಿಕಾರಕ ಎನ್ನುವ ಹುಯಲು ಕೂಡ ಹಬ್ಬಿತ್ತು. ಅದು ಅಷ್ಟೇ ವೇಗದಲ್ಲಿ ಕಡಿಮೆ ಕೂಡ ಆಯ್ತು.

ಬಹಳಷ್ಟು ಜನ ನೆನಪಿಗಾಗಿ ಪೆಸೆಟಾ ನಾಣ್ಯವನ್ನ ಇಂದಿಗೂ ಇಟ್ಟುಕೊಂಡಿದ್ದಾರೆ. ಪೆಸೆಟಾ ದಲ್ಲಿ ಒಂದು ಪೆಸೆಟಾ ದಿಂದ ಉಂಟು. 25ಪೆಸೆಟಾದ ನಾಣ್ಯದ ಮಧ್ಯದಲ್ಲಿ ಒಂದು ಸಣ್ಣ ರಂಧ್ರ ಕೂಡ ಇತ್ತು. ಇಂದಿಗೂ ಒಂದು 25ಪೆಸೆಟಾ ನಾಣ್ಯವನ್ನ ನಾನು ಕೂಡ ಜತನದಿಂದ ಕಾಪಿಟ್ಟುಕೊಂಡಿದ್ದೇನೆ. ಸಮಯ ಎನ್ನುವುದು ಅದೆಷ್ಟು ಬೇಗ ಕಳೆದು ಹೋಗುತ್ತದೆ. ಆ ನಾಣ್ಯ ನನ್ನ ಕೈಗೆ ಬರುವುದಕ್ಕೆ ಮುಂಚೆ ಸವೆಸಿರುವ ದಾರಿಯ ಕಥೆಯನ್ನ ಅದೇ ನಾಣ್ಯ ಹೇಳುವಂತಿದ್ದರೆ ? ಅದೊಂದು ಭವ್ಯ ಕಥೆಯಾಗುತ್ತಿತ್ತು.

ಸ್ಪೇನ್ ಬಿಟ್ಟು ಭಾರತಕ್ಕೆ ಬಂದು ಐದು ವರ್ಷವಾದರೂ ಅಲ್ಲಿನ ನೆನಪುಗಳು ಮಾತ್ರ ಮಾಸಿಲ್ಲ. ಕರೋನ ಕಾರಣದಿಂದ ಕಳೆದ ಎರಡು ವರ್ಷ ಅಲ್ಲಿಗೆ ಪಯಣ ಮಾಡಲಾಗಲಿಲ್ಲ. ಆದರೇನು ಅಲ್ಲಿನ ಬದುಕು ಮತ್ತು ಭಾಷೆ ಎರಡೂ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಿದೆ. ಸಾಮಾನ್ಯವಾಗಿ ಜನ ಕನ್ನಡ ಮಾತನಾಡುವಾಗ ಇಂಗ್ಲಿಷ್ ಪದಗಳನ್ನ ಬಳಸುವುದು ಸಾಮಾನ್ಯವಾಗಿ ಬಿಟ್ಟಿದೆ. ಸ್ಪೇನ್ ದೇಶದಲ್ಲಿ ಒಂದೂವರೆ ದಶಕಕ್ಕೂ ಹೆಚ್ಚಿನ ಬದುಕು ನಮ್ಮ ಬಾಳಿನಲ್ಲಿ ಆ ಭಾಷೆಯನ್ನ ಕನ್ನಡದ ಜೊತಗೆ ಬಳಸುವಂತೆ ಮಾಡಿದೆ.

ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ಕನ್ನಡದ ಜೊತೆಗೆ ನಮಗೆ ಅರಿವಿಲ್ಲದೆ ಸ್ಪ್ಯಾನಿಷ್ ಪದಗಳು ಬೆರೆಕೆಯಾಗಿ ಬಳಸುತ್ತೇವೆ. ಕತಲಾನ್ ಪದಗಳು ಕೂಡ ಇವುಗಳಲ್ಲಿ ಬೆರೆಕೆಯಾಗುತ್ತವೆ. ನೀನು ಹೇಳಿದ್ದರಲ್ಲಿ ಅರ್ಥವಿದೆ ಎಂದು ಒಬ್ಬರು ಹೇಳಿದ್ದನ್ನ ಅನುಮೋದಿಸಲು ರಮ್ಯ ಮತ್ತು ನನ್ನ ನಡುವಿನ ಸಂಭಾಷಣೆಯಲ್ಲಿ 'ತಿಯನೆ ರಾಸೊನ್ ' ಎಂದು ಅಥವಾ 'ತೆನ್ ರಾವ್' ಎನ್ನುವ ಪದವನ್ನ ಬಳಸುತ್ತೇವೆ. ಆಮೇಲೆ ಎನ್ನುವುದಕ್ಕೆ ಇಂತೋನ್ಸೆಸ್ ಎನ್ನುವ ಪದ ನಮಗರಿವಿಲ್ಲದೆ ಬಳಸುತ್ತೇವೆ.

ಲೆಟ್ಸ್ ಗೋ ಎನ್ನುವುದಕ್ಕೆ ವಾಮೋಸ್ ಎನ್ನುವುದು , ಮನಸ್ಸಿಗೆ ಹಚ್ಚಿಕೊಳ್ಳಬೇಡ ಎನ್ನುವುದಕ್ಕೆ ನೋ ಪಸನಾದ ಎನ್ನುವುದು ಕೂಡ ಅರಿವಿಲ್ಲದೆ ಬಳಕೆಯಾಗುವ ಪದಗಳು. ಹೀಗೆ ಒಂದಲ್ಲ ನೂರಾರು ಸ್ಪ್ಯಾನಿಷ್ ಪದಗಳು ನಮ್ಮ ಕನ್ನಡದ ಜೊತೆಗೆ ಬೆರೆತು ಸುಖವಾಗಿ ಸಹಬಾಳ್ವೆ ನಡೆಸುತ್ತಿವೆ. ಮುಕ್ಕಾಲು ಪಾಲು ಈ ರೀತಿಯ ಸ್ಪ್ಯಾನಿಷ್ ಮಿಶ್ತ್ರಿತ ಕನ್ನಡವನ್ನ ನಮ್ಮದೇ ಭಾಷೆ ಎನ್ನುವಂತೆ ಒಗ್ಗಿಕೊಂಡಿದೆ. ಕೆಲವೊಮ್ಮೆ ಎಲ್ಲರ ಮುಂದೆ ಸಣ್ಣ ಧ್ವನಿಯಲ್ಲಿ ರಮ್ಯಳನ್ನ ಈಗೇನು ಮಾಡೋಣ ಎನ್ನುವ ಪ್ರಶ್ನೆ ಕೇಳಲು ಸಹ ಸ್ಪ್ಯಾನಿಷ್ ಸಹಾಯ ಮಾಡಿದೆ , ಮಾಡುತ್ತಿದೆ.

ಯೂರೋಪಿಯನ್ನರು ಎಂದಾಕ್ಷಣ ಅವರೇನೂ ಅನ್ಯ ಗ್ರಹದವರಲ್ಲ!ಯೂರೋಪಿಯನ್ನರು ಎಂದಾಕ್ಷಣ ಅವರೇನೂ ಅನ್ಯ ಗ್ರಹದವರಲ್ಲ!

ಅನನ್ಯಾಳಿಗೆ 18 ತಿಂಗಳು ತುಂಬುವ ವೇಳೆಗೆ ಅವಳನ್ನ ಮನೆಯ ಹತ್ತಿರದಲ್ಲಿದ್ದ ಪ್ರಿ ಸ್ಕೂಲ್ ಗೆ ಹಾಕಿದೆವು. ಅನ್ನಿ ಎರಡೂವರೆ ವರ್ಷದ ಮಗುವಾದರೂ ಮಾತು ಸ್ಪಷ್ಟವಾಗಿ ಆಡುತ್ತಿರಲಿಲ್ಲ. ರಮ್ಯಳಿಗೆ ಇದು ಹೊಸ ತಲೆನೋವು ತಂದಿತು. ಇದಕ್ಕೆ ಕಾರಣ ನಮಗೆ ಇತ್ತೀಚಿಗೆ ಗೊತ್ತಾಗಿದೆ. ಅನನ್ಯಾಳಿಗೆ ಸ್ಪ್ಯಾನಿಷ್ , ಕತಲಾನ್ ಭಾಷೆಗಳು ಹೊರಗಿನ ಪ್ರಪಂಚದಲ್ಲಿ ಕಿವಿಗೆ ಬೀಳುತ್ತಿದ್ದವು. ನಾನು ಕನ್ನಡ ಬಿಟ್ಟು ಬೇರೆ ಭಾಷೆ ಅವಳೊಂದಿಗೆ ಮಾತನಾಡಿದ್ದೆ ಇಲ್ಲ , ರಮ್ಯಾಳಿಗೆ ಅನನ್ಯ ಇಂಗ್ಲಿಷ್ ಕಲಿಯದಿದ್ದರೆ ? ಎನ್ನುವ ಭಯ. ಹೀಗಾಗಿ ಅವಳು ಸದಾ ಇಂಗ್ಲಿಷ್ ನಲ್ಲಿ ಸಂವಹನ ನಡೆಸುತ್ತಿದ್ದಳು.

ಅನನ್ಯಳನ್ನ ನಾನು ಏಶಿಯನ್ ಸೂಪರ್ ಮಾರ್ಕೆಟ್ ಗೆ ಕರೆದುಕೊಂಡು ಹೋದರೆ ಅಲ್ಲಿ ಇರುತ್ತಿದ್ದ , ಬಾಂಗ್ಲಾ ಅಥವಾ ಪಾಕಿಸ್ತಾನಿ ಜನರ ಜೊತೆಗೆ ಅಥವಾ ನಮ್ಮ ಪಂಜಾಬಿ ಜನರ ಜೊತೆಗೆ ಬಳಸುತ್ತಿದ್ದ ಭಾಷೆ ಹಿಂದಿ. ಐದಾರು ಭಾಷೆಯನ್ನ ಕೇಳುತ್ತಿದ್ದ ಅವಳ ಮೆದುಳು ಎಲ್ಲವನ್ನ ಗ್ರಹಿಸುತ್ತಿತ್ತು . ಹೀಗಾಗಿ ಯಾವುದೇ ಭಾಷೆಯನ್ನ ಅವಳು ಮಾತನಾಡುತ್ತಿರಲಿಲ್ಲ. ಅಪ್ಪ , ಅಮ್ಮ , ಅಜ್ಜಿ ,ತಾತ ಜೊತೆಗೆ ಚಿಕ್ಕಪ್ಪ , ಚಿಕ್ಕಮ್ಮ ಎನ್ನುವುದನ್ನ ಬಿಟ್ಟು ಆಕೆ ಆಡಿದ ಮೊದಲ ಪದ ' ಶುಕ್ರಿಯ ' ಏಶ್ಯನ್ ಮಾರ್ಕೆಟ್ ಪ್ರಭಾವವದು.

ಪ್ರಿ ಸ್ಕೂಲ್ ಗೆ ಹೋಗಿ ಬಂದ ಮೊದಲ ದಿನವೇ ' ಪಪ್ಪಾ ಸುವಮ್ಮೆ ಅರ್ರಿವ " ಎಂದಿದ್ದಳು. ಅಪ್ಪ ನನ್ನ ಎತ್ತಿಕೋ ಎನ್ನುವ ಅರ್ಥ ನೀಡುವ ವಾಕ್ಯವದು. ಬಾಲ್ಯದಲ್ಲಿ ಭಾಷೆ ಯಾವುದೇ ಇರಲಿ ಅದೆಷ್ಟು ಸರಾಗವಾಗಿ ಕಲಿತು ಬಿಡಬಹುದು ಅಲ್ಲವೇ ? ಗ್ರಾಮರ್ ಹಂಗಿಲ್ಲದೆ ಆಟ ಆಡುತ್ತ ಕಲಿಯುವ ರೀತಿ ನನ್ನ ಮಟ್ಟಿಗೆ ಇಂದಿಗೂ ಉತ್ತಮ. ಅನನ್ಯಳನ್ನ ಶಾಲೆಯವತಿಯಿಂದಲೇ ಈಜಿಗೆ ಕೂಡ ಕರೆದುಕೊಂಡು ಹೋಗುತ್ತಿದ್ದರು. ಶಾಲೆಗೆ ಬಿಡುವುದು ನನ್ನ ಕೆಲಸವಾಗಿತ್ತು. ಅವಳನ್ನ ಶಾಲೆಗೆ ಬಿಟ್ಟು ಹೋಗುವುದು ನನ್ನ ಜೀವನದ ಅತಿ ದೊಡ್ಡ ಕಷ್ಟದ ಕೆಲಸವಾಗಿತ್ತು.

ಕಣ್ಣು ಪೂರ್ತಿ ನೀರು ತುಂಬಿಕೊಂಡು ' ರಂಗ ಹೋಗಬೇಡ ' ಎಂದವಳು ಹೇಳುವಾಗ ನನ್ನ ಕಣ್ಣು ಕೂಡ ಒದ್ದೆಯಾಗಿ ಬಿಡುತ್ತಿತ್ತು. ರಮ್ಯಳದು ಸುಲಭ ಕೆಲಸ. ಮಕ್ಕಳನ್ನ ಪಿಕ್ ಮಾಡುವುದು ಸುಲಭ, ಅವು ಖುಷಿಯಾಗಿ ನಗುತ್ತಾ ಬರುತ್ತವೆ. ನಮಗೆ ಗೊತ್ತಿಲ್ಲದೇ ನಮ್ಮ ಮಕ್ಕಳು ಅದೆಷ್ಟು ವೇಗವಾಗಿ ಬೆಳೆದು ಬಿಡುತ್ತವೆ ಅಲ್ಲವೇ ? ಇಲ್ಲಿನ ಮಕ್ಕಳು ಗುರು ಹಿರಿಯರು ಅಥವಾ ಇನ್ನ್ಯಾರೆ ಇರಲಿ ಮೊದಲ ಹೆಸರಿನಿಂದ ಕರೆಯುವುದು ವಾಡಿಕೆ ಮಾಡಿಕೊಂಡಿವೆ. ಗುರುಗಳನ್ನ ಕೂಡ ತೀರಾ ಕ್ಯಾಶುಯಲ್ ಆಗಿ ಮಾತನಾಡಿಸುತ್ತಾರೆ.

ಅವತ್ತಿಗೆ ಅಮ್ಮ ಏನೂ ಹೇಳುತ್ತಾಳೆ ಎನ್ನುವುದು ಬಿಟ್ಟರೆ ಆ ಪದಗಳ ಅರ್ಥ ತಿಳಿದಿರಲೇ ಇಲ್ಲಅವತ್ತಿಗೆ ಅಮ್ಮ ಏನೂ ಹೇಳುತ್ತಾಳೆ ಎನ್ನುವುದು ಬಿಟ್ಟರೆ ಆ ಪದಗಳ ಅರ್ಥ ತಿಳಿದಿರಲೇ ಇಲ್ಲ

ಒಯ್ಯೇ ಪ್ರೊಫೆ ಎನ್ನುವುದು ಅಥವಾ ಒಯ್ಯೇ ಜೊತೆಗೆ ಹೆಸರನ್ನ ಹಿಡಿದು ಕರೆಯುವುದು ಕೂಡ ಇಲ್ಲಿ ಸಾಮಾನ್ಯ. ನಿಮಗೆಲ್ಲಾ ಗೊತ್ತಿರಲಿ ಸ್ಪೇನ್ ದೇಶದಲ್ಲಿ ನಗ್ನತೆ ಎನ್ನುವುದು ಕಾನೂನು ಬದ್ಧವಾಗಿದೆ. ಅಂದರೆ ಪಬ್ಲಿಕ್ ನ್ಯೂಡಿಟಿ ಇಲ್ಲಿ ಕಾನೂನು ಬದ್ಧವಾಗಿದೆ. ರಸ್ತೆಯಲ್ಲಿ ಅಥವಾ ಬೀಚ್ ನಲ್ಲಿ ಪೂರ್ಣ ನಗ್ನರಾಗಿ ಓಡಾಡುವುದು ಇಲ್ಲಿ ಅಪರಾಧವಲ್ಲ. ಹುಟ್ಟಿನಿಂದ ನಗ್ನತೆಯ ಬಗ್ಗೆ ವಿಶೇಷತೆ ಬೆಳಸಿಕೊಳ್ಳದ ಇಲ್ಲಿನ ಮಕ್ಕಳಿಗೆ ಅದೊಂದು ಬದುಕುವ ರೀತಿ.

ಯೂರೋಪಿನ ಇತರ ದೇಶದಲ್ಲಿ ಸಮ್ಮತ ಸಂಭೋಗಕ್ಕೆ 14ವರ್ಷ ವಾಗಿರಬೇಕು. ಆದರೆ ಸ್ಪೇನ್ ದೇಶದಲ್ಲಿ ಈ ವಯಸ್ಸು ಕೇವಲ 13ಆಗಿದ್ದರೆ ಸಾಕು. 18ತುಂಬಿದರೂ ಪಾರ್ಟ್ನರ್ ಇಲ್ಲವೆನ್ನುವುದು ಇಲ್ಲಿ ಅಸಮತೋಲದ ಜೀವನ ಎನ್ನುವಂತೆ ಕಾಣುತ್ತಾರೆ. ಹೀಗಾಗಿ ಬಹುತೇಕ ದಕ್ಷಿಣ ಭಾರತೀಯರು ಸ್ಪೇನ್ ನಿಂದ ಗುಳೆ ಹೊರಟು ಇಂಗ್ಲೆಂಡ್ ಅಥವಾ ಅಮೇರಿಕಾ ಸೇರುತ್ತಾರೆ.

ಇವತ್ತು ಜಗತ್ತು ಒಂದು ಪುಟ್ಟ ಹಳ್ಳಿಯಂತಾಗಿದೆ , ಒಳ್ಳೆಯದು ಹರಡುವುದು ಸಮಯ ತೆಗೆದುಕೊಳ್ಳುತ್ತದೆ , ಆದರೆ ಕೆಟ್ಟದ್ದು ಅಥವಾ ವಯೋಸಹಜ ಆಟೋಟಗಳು ಮಾತ್ರ ಅತಿ ವೇಗದಲ್ಲಿ ದೇಶ , ಭಾಷೆ , ಸರಹದ್ದುಗಳ ಮೀರಿ ಹರಡುತ್ತದೆ . ದೇಶಕ್ಕೇನೂ ಸರಹದ್ದು , ಬೌಂಡರಿ ನಿರ್ಮಾಣ ಮಾಡಬಹುದು , ಸದ್ದಿಲ್ಲದೇ ನಿಮ್ಮ ಮನೆಯ ಮಲಗುವ ಕೋಣೆಗೆ ದಾಂಗುಡಿ ಇಡುವ ಇಂಟರ್ನೆಟನ್ನು ಏನು ಮಾಡುವಿರಿ ? ಮಕ್ಕಳೊಂದಿಗೆ ಸಂವಹನ , ಅವರೊಂದಿಗೆ ಹೆಚ್ಚಿನ ಸಮಯ ವ್ಯವಯಿಸುವುದೊಂದೇ ಇದಕ್ಕೆ ಮದ್ದು.

English summary
Barcelona Memories Column By Rangaswamy Mookanahalli Part 62
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X