ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ದೀಪಾವಳಿಯ ತಮ್ಮ, ಸ್ಪೇನ್ನ ಮೆರ್ಸೆ (merce) ಹಬ್ಬ !!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಅವರು ಯೂರೋಪಿಯನ್ನರು ಬಹಳ ಮುಂದುವರೆದ ಜನ , ಅವರು ತಮ್ಮ ಪುರಾತನ ರೀತಿ ನೀತಿಗಳನ್ನ ಪಾಲಿಸುತ್ತಾರೆಯೇ ? ಎನ್ನುವ ಪ್ರಶ್ನೆ ನಿಮ್ಮಲ್ಲಿ ಬಂದಿರುತ್ತದೆ. ನಿಮಗೆಲ್ಲಾ ತಿಳಿದಿರಲಿ ಯೂರೋಪು ಇಂದಿಗೂ ತನ್ನತನವನ್ನ ಬಿಟ್ಟು ಕೊಡದ ಒಂದು ಪುಟಾಣಿ ಹಳ್ಳಿ. ಜಗತ್ತು ತಂತ್ರಜ್ಞಾನದ ಸಹಾಯದಿಂದ ಹೆಚ್ಚು ಮುಂದುವರಿದಂತೆಲ್ಲಾ ಇವರು ಮಾತ್ರ ತಮ್ಮ ಹಳೆಯ ಕಾಲದ ಆಚರಣೆಗಳನ್ನ ಇನ್ನಷ್ಟು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ಎಲ್ಲಕ್ಕಿಂತ ಅತ್ಯಂತ ಖುಷಿ ಕೊಡುವ ವಿಷಯವೆಂದರೆ , ಹೊಸ ತಲೆಮಾರಿನ ಜನತೆ ಕೂಡ ಇಂತಹ ಹಬ್ಬ , ಆಚರಣೆಗಳಲ್ಲಿ ಬಹಳ ಆಸ್ಥೆಯಿಂದ ಭಾಗವಹಿಸುವುದು. ಹೊಸತು ಬಂತೆಂದು ಹಳೆತನ್ನ ಬಿಡುವ ಅದನ್ನ ಹಳೆತನ್ನ ಹೀಯಾಳಿಸುವ ಮನಸ್ಥಿತಿ ಇಲ್ಲಿಲ್ಲ ! ಹಳೆಬೇರು , ಹೊಸ ಚಿಗುರು ಇದ್ದರೆ ಜೀವನ ಸೊಗಸು ಎನ್ನುವ ಮಂತ್ರವನ್ನ ಇವರು ಪಾಲಿಸುತ್ತಿದ್ದಾರೆ. ಸ್ಪೇನ್ ಹಬ್ಬಗಳ ವಿಷಯದಲ್ಲಿ ಥೇಟ್ ಭಾರತವೇ ಸರಿ ! ವರ್ಷದಲ್ಲಿ ಕಡಿಮೆಯೆಂದರೂ 25 ದಿನವನ್ನ ಒಂದಲ್ಲ ಒಂದು ಹಬ್ಬದ ಹೆಸರೇಳಿ ರಜಾ ಎಂದು ಇಲ್ಲಿ ಘೋಷಿಸಲಾಗುತ್ತದೆ.

 ಊಟ ತನ್ನಿಚ್ಚೆ , ನೋಟ ಪರರಿಚ್ಚೆ !! ಇದರ ಅರ್ಥ ತಿಳಿಯಲು ಬಹಳ ವರ್ಷಗಳು ಬೇಕಾಯಿತು ಊಟ ತನ್ನಿಚ್ಚೆ , ನೋಟ ಪರರಿಚ್ಚೆ !! ಇದರ ಅರ್ಥ ತಿಳಿಯಲು ಬಹಳ ವರ್ಷಗಳು ಬೇಕಾಯಿತು

ಅವರು ಕ್ರಿಶ್ಚಿಯನ್ನರು ಅವರಿಗೆ ಕ್ರಿಸ್ಮಸ್ ದೊಡ್ಡ ಮತ್ತು ಒಂದೇ ಹಬ್ಬ ಎಂದು ನೀವು ತಿಳಿದಿದ್ದರೆ ಅದು ತಪ್ಪು . ಇವರು ಕೂಡ ಹಬ್ಬಗಳಲ್ಲಿ ನಮ್ಮನ್ನ ಹೋಲುತ್ತಾರೆ. ಹಬ್ಬದ ದಿನಗಳಲ್ಲಿ ಊಟ ಹೆಚ್ಚಾಗಿ , ಅಯ್ಯೋ ತೂಕ ಹೆಚ್ಚಾಗುತ್ತದೆ ಎಂದು ಇಲ್ಲಿನ ಜನ ಕೂಡ ಗೊಣಗುವುದು ಸಾಮಾನ್ಯ. ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಇತಿಹಾಸ ಕೂಡ ಇದೆ , ಅಲ್ಲದೆ ಪ್ರತೀ ಹಬ್ಬದಲ್ಲೂ ನಮ್ಮಲ್ಲಿ ಇದ್ದಂತೆ ಹಲವಾರು ಆಚರಣೆಯಿದೆ. ಜಗತ್ತಿಗೆ ಮಾತ್ರ ಕ್ರಿಸ್ಮಸ್ ಕಣ್ಣಿಗೆ ಕಾಣುತ್ತದೆ. ಇಲ್ಲಿನ ಜನರು ಕೂಡ ಕರ್ಮ ಸಿದ್ದಂತಾದಲ್ಲಿ ನಂಬಿಕೆಯನ್ನ ಇಟ್ಟಿದ್ದಾರೆ.

Barcelona Memories Column By Rangaswamy Mookanahalli Part 50

ನಮ್ಮಲ್ಲಿ ಇದ್ದಂತೆ ಜಾತಕ ಇಲ್ಲದಿದ್ದರೂ ಭವಿಷ್ಯವನ್ನ ನಂಬುತ್ತಾರೆ. ಇಲ್ಲಿ ಕೂಡ ಅವರಿರುವ ಪರಿಸ್ಥಿತಿ ಕೆಲಸ ಮಾಡುತ್ತದೆ. ಎಲ್ಲವೂ ಚನ್ನಾಗಿ ನಡೆಯುತ್ತಿದ್ದರೆ ಯಾರು ಬೇಡ ಎನ್ನುವಂತೆ ಬದುಕುತ್ತಾರೆ. ಸಂಕಟ ಬಂದಾಗ ವೆಂಕಟರಮಣ ಎನ್ನುವುದು ಕೇವಲ ಭಾರತದಲ್ಲಿ ಮಾತ್ರವಲ್ಲ ಅದು ಜಾಗತಿಕ. ಭವಿಷ್ಯ , ಟಾರೋಟ್ ಹೀಗೆ ಎಲ್ಲವನ್ನೂ ನಂಬುತ್ತಾರೆ. ಇನ್ನೊಂದು ಮುಖ್ಯ ವಿಷಯವೇನು ಗೊತ್ತೇ ? ನಾವು ಹೇಗೆ ಪ್ರತಿಯೊಂದು ತಿಂಗಳಿಗೂ ನಮ್ಮದೇ ಆದ ಮಾಸಗಳ ಹೆಸರಿನಲ್ಲಿ ಕರೆಯುತ್ತೇವೆ , ನಮ್ಮದೇ ಆದ ಕಾಲೆಂಡರ್ ಬಳಸುತ್ತೇವೆ ಹಾಗೆ ಇಲ್ಲಿ ಇವರು ಕೂಡ ಪ್ರತಿಯೊಂದು ತಿಂಗಳಿಗೂ ತಮ್ಮದೇ ಆದ ಹೆಸರುಗಳಲ್ಲಿ ಕರೆಯುತ್ತಾರೆ.

ತುಂಬಿದ ಹೊಟ್ಟೆ , ತಿನ್ನುವ ಊಟ ಮನಸ್ಸಿಗೆ ಮುದ ನೀಡಬೇಕೇ ವಿನಃ ನೋವಾಗಬಾರದು ತುಂಬಿದ ಹೊಟ್ಟೆ , ತಿನ್ನುವ ಊಟ ಮನಸ್ಸಿಗೆ ಮುದ ನೀಡಬೇಕೇ ವಿನಃ ನೋವಾಗಬಾರದು

ಇಂಗ್ಲಿಷ್ ಕಾಲೆಂಡರ್ ಅಥವಾ ಜಗತ್ತು ಒಪ್ಪಿಕೊಂಡಿರುವ ಜನವರಿಯಿಂದ ಡಿಸೆಂಬರ್ ಕಾಲೆಂಡರ್ ಕೇವಲ ವ್ಯವಹಾರಿಕವಾಗಿ ಬಳಕೆಗೆ ಉಳಿಸಿಕೊಂಡಿದ್ದಾರೆ. ಉಳಿದಂತೆ ತಮ್ಮದೇ ಆದ ಕಾಲೆಂಡರ್ ಪ್ರಕಾರ ಕೆಲಸ ಕಾರ್ಯಗಳನ್ನ ನಡೆಸುತ್ತಾರೆ. ಕೆಲವೊಂದು ಹಬ್ಬಗಳು ವರ್ಷದ ಅದೇ ತಿಂಗಳು ಮತ್ತು ದಿನಗಳಲ್ಲಿ ಆಚರಿಸಿದರೆ , ಕೆಲವೊಂದು ಹಬ್ಬಗಳ ದಿನಾಂಕ ಬದಲಾಗುತ್ತದೆ. ಇವರು ಕೂಡ ನಕ್ಷತ್ರಗಳ ಚಲನೆಯ ಆಧಾರದ ಮೇಲೆ ತಮ್ಮ ಕ್ಯಾಲೆಂಡರ್ ತಯಾರಿಸಿರುವುದರಿಂದ ಹೀಗಾಗುತ್ತದೆ.

Barcelona Memories Column By Rangaswamy Mookanahalli Part 50

ಪ್ರತಿ ವರ್ಷ ಸೆಪ್ಟೆಂಬರ್ ಅಂತ್ಯದ ವೇಳೆಗೆ (18 ರಿಂದ 24 ) ಬಾರ್ಸಿಲೋನಾ ದಲ್ಲಿ ಮೆರ್ಸೆ (merce ) ಎನ್ನುವ ಹಬ್ಬ ಐದು ದಿನಗಳ ಕಾಲ ನಡೆಯುತ್ತೆ , ಇದು ನಮ್ಮ ದೀಪಾವಳಿಯ ತಮ್ಮ !! , ಹೌದು ರೀ ನಿಮ್ಮ ಊಹೆ ಸರಿ ಇದೆ , ಪಟಾಕಿ ಸಖತ್ ಹೊಡೆಯುತ್ತಾರೆ !. ಹಬ್ಬಕ್ಕೆ ಮೂರ್ನಾಲ್ಕು ದಿನ ಮುಂಚೆಯೇ ಪಾರ್ಕ್ನಲ್ಲಿ ಪಟಾಕಿ ಮಾರುವ ಅಂಗಡಿ ಠಿಕಾಣಿ ಹೂಡಿರುತ್ತೆ , ಮಕ್ಕಳು ಹೆತ್ತವರ ಕೈ ಹಿಡಿದು ಪಟಾಕಿ ಕೊಳ್ಳಲು ಹೋಗುವ ರೀತಿ ಎಲ್ಲಡೆ ಸೇಮ್ !!

ಶಿಕ್ಷೆ ಇಲ್ಲದೆ ಶಿಕ್ಷಣ ಕಲಿಸುವುದು ಹೇಗೆ? ನಿಟ್ಟುಸಿರು ಬಿಟ್ಟ ಆತನ ಮುಖ ಮಸ್ತಕದಲ್ಲಿ ಇನ್ನೂ ಹಸಿರು ಶಿಕ್ಷೆ ಇಲ್ಲದೆ ಶಿಕ್ಷಣ ಕಲಿಸುವುದು ಹೇಗೆ? ನಿಟ್ಟುಸಿರು ಬಿಟ್ಟ ಆತನ ಮುಖ ಮಸ್ತಕದಲ್ಲಿ ಇನ್ನೂ ಹಸಿರು

ನಮ್ಮಲ್ಲಿ ಆದಂತೆ ಮುಖ ಬೆಲೆಯ ಪಟಾಕಿಯನ್ನ ಐವತ್ತು , ಅರವತ್ತು ಪ್ರತಿಶತ ಡಿಸ್ಕೌಂಟ್ ನಲ್ಲಿ ಮಾರುತ್ತಾರೆ. ಜನರು ತಮ್ಮ ಜೇಬಿನ ತಾಕತ್ತಿನ ಪ್ರಕಾರ ಪಟಾಕಿಯನ್ನ ಕೊಳ್ಳುತ್ತಾರೆ. ನಮ್ಮಲ್ಲಿ ಆದಂತೆ ದಿನದಲ್ಲಿ ಕೂಡ ಪಟಾಕಿ ಸದ್ದು ಕೇಳಿಬರುತ್ತದೆ. ಆದರೆ ರಾತ್ರಿಯಲ್ಲಿ ಹೆಚ್ಚು ಸದ್ದು , ಹೆಚ್ಚು ಜೀವಂತಿಕೆ ಪಡೆದುಕೊಳ್ಳುತ್ತದೆ. ನಮ್ಮಲ್ಲಿ ದೀಪಾವಳಿ ಸಮಯದಲ್ಲಿ ನರಕ ಚತುರ್ದಶಿ , ಬಳಿ ಪಾಡ್ಯಮಿ , ಲಕ್ಷ್ಮಿ ಪೂಜೆ ಹೀಗೆ ಆಚರಿಸುತ್ತೇವೆ ಅಲ್ಲವೇ , ಬಲಿ ಚಕ್ರವರ್ತಿ ತನ್ನ ನಾಗರಿಕರು ಹೇಗೆ ಜೀವಿಸುತ್ತಿದ್ದಾರೆ ಎಂದು ನೋಡಲು ಬರುತ್ತಾನೆ ಎನ್ನುವ ನಂಬಿಕೆ ಕೂಡ ಇದೆ . ಹಾಗೆಯೇ ಇಲ್ಲಿ Mare de Deu de la Mercè, ಎನ್ನುವ ಋಷಿ ( ಸಂತ ) ಯ ಗೌರವಿಸುವ , ನೆನಪಿಸಿಕೊಳ್ಳುವ ಸಲುವಾಗಿ 1902ರಿಂದ ಈ ರಿವಾಜು ಶುರುವಾಗಿದೆ .

ನಮ್ಮಲ್ಲಿ ದೀಪಾವಳಿಯಲ್ಲಿ ಏನು ಮಾಡುತ್ತಾರೆ ಎನ್ನುವುದು ಗೊತ್ತಿದೆಯಷ್ಟೆ , ಮೆರ್ಸೆ ಹಬ್ಬದಲ್ಲಿ ಏನೇನು ಮಾಡ್ತಾರೆ ?? ಹಬ್ಬದ ಆಚರಣೆ ಏನು ಎನ್ನುವ ಕುತೂಹಲವಿದ್ದರೆ , ಅದಕ್ಕೆ ಮುಂದಿನ ಸಾಲುಗಳಲ್ಲಿ ವಿವರಣೆಯಿದೆ.

1)Correfoc - Fire Run : - ಮಕ್ಕಳಿಗೆ ಹಾಗು ವಯಸ್ಕರರಿಗೆ ಹೀಗೆ ಎರಡು ರೀತಿಯಲ್ಲಿ ಇದನ್ನ ವಿಭಾಗಿಸಲಾಗುತ್ತದೆ . ಹೆಸರೇ ಹೇಳುವಂತೆ ರಸ್ತೆಯಲ್ಲಿ ಎಲ್ಲಂದರೆ ಅಲ್ಲಿ ಪಟಾಕಿ ಹಚ್ಚಿ ಇಟ್ಟಿರುತ್ತಾರೆ , ಅವುಗಳ ಗಮನಿಸಿ ಹೆದರದೆ , ಬೆದರದೆ ಓಡಬೇಕು ಅಷ್ಟೇ . ಇನ್ನು ಕೆಲವು ಕಡೆಗಳಲ್ಲಿ ಪಟಾಕಿ ಜೊತೆಗೆ ರಸ್ತೆಯಲ್ಲಿ ಬೆಂಕಿಯನ್ನ ಸಹ ಹಾಕಿರುತ್ತಾರೆ. ಅಲ್ಲಲ್ಲಿ ಜಾಗ ಮಾಡಿಕೊಂಡು ಬೆಂಕಿಯಿಂದ ಬಚಾವಾಗುತ್ತ ಓಡಬೇಕಾಗುತ್ತದೆ. ವಯಸ್ಕರರಿಗೆ ಇದರ ಜೊತೆ ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನ ಕೂಡ ಫೈರ್ ವರ್ಕ್ ನಲ್ಲಿ ತೊಡಗಿರುತ್ತಾರೆ , ಹೀಗಾಗಿ ಇದು ಇನ್ನಷ್ಟು ಕಷ್ಟಕರ. ಇದರಲ್ಲಿ ಎಲ್ಲಾ ಜನರೂ ಭಾಗವಹಿಸಬೇಕು ಅಥವಾ ಭಾಗವಹಿಸಬೇಕು ಎನ್ನುವ ಕಡ್ಡಾಯವೇನಿಲ್ಲ. ಅವರವರ ದೈಹಿಕ ತಾಕತ್ತು ಇಚ್ಚೆಗೆ ಅನುಗುಣವಾಗಿ ಜನರು ಇದರಲ್ಲಿ ಪಾಲ್ಗೊಳ್ಳುತ್ತಾರೆ.

Barcelona Memories Column By Rangaswamy Mookanahalli Part 50

2)Castellers - Human Towers :- ಹೆಸರೇ ಹೇಳುವಂತೆ ಒಬ್ಬರ ಮೇಲೊಬ್ಬರು ನಿಂತು ನಿಧಾನವಾಗಿ ದೊಡ್ಡ ಗೋಡೆಯನ್ನ ಕಟ್ಟುತ್ತಾರೆ. ಕೆಳಗಿನ ಸಾಲಿನಲ್ಲಿ ಹತ್ತು ಜನರಿದ್ದರೆ ನಂತರದ ಹಂತದಲ್ಲಿ ಆ ಸಂಖ್ಯೆ ಕಡಿಮೆಯಾಗುತ್ತದೆ. ಹೀಗೆ ಕೊನೆಗೆ ಗುಂಪಿನ ಚಿಕ್ಕ ಹುಡುಗ ಎಲ್ಲರಿಗಿಂತ ಮೇಲೆ ನಿಂತು ಜನರಿಗೆ ಕೈ ಬಿಸುತ್ತಾನೆ . ಇದು ಅತ್ಯಂತ ಶ್ರಮದಾಯಕ , ಒಬ್ಬರ ನಿಗಾ ಕಡಿಮೆ ಆದರೂ ಎಲ್ಲರೂ ಬೀಳುವುದು ಖಂಡಿತ . ಹೀಗಾಗಿ ಇದು ಕೇವಲ ದೈಹಿಕ ಶಕ್ತಿಯ ಜೊತೆಗೆ ಮಾನಸಿಕ ಸಿದ್ಧತೆಯನ್ನ ಕೂಡ ಬಯಸುತ್ತದೆ. ಸ್ಪೇನ್ ದೇಶದಲ್ಲಿ ಈ ಹಬ್ಬದ ಸಮಯದಲ್ಲಿ ಇದನ್ನ ಬಹಳಷ್ಟು ಕಡೆ ಏರ್ಪಡಿಸುತ್ತಾರೆ. ಈ ಹಬ್ಬದ ಹೊರತಾಗಿ ಕೂಡ ಹ್ಯೂಮನ್ ಟವರ್ ಕಟ್ಟುವುದು ಸ್ಪೇನ್ ನಲ್ಲಿ ಸಾಮಾನ್ಯ.

3)Gigantes (Giants Parade) :- ರಾಜ , ರಾಣಿ ಯರ ದೊಡ್ಡ ಪ್ರತಿಮೆಗಳ ಹೊಳಗೆ ಜನರು ಹೊಕ್ಕು ಅವುಗಳನ್ನು ರಸ್ತೆಯಲ್ಲಿ ಮೆರವಣಿಗೆ ಮಾಡುತ್ತಾರೆ ಇವರ ಹಿಂದೆ ಮುಂದೆ , ಡೋಲು ಭಾರಿಸುತ್ತ ಒಂದಷ್ಟು ಜನರ ಗುಂಪು ನೆಡೆದು ಹೋಗುತ್ತದೆ. ಸ್ಪೇನ್ ನ ರಾಜ ರಾಣಿಯರ ಮುಖವನ್ನ ಹೋಲುವ ದೊಡ್ಡ ಬೊಂಬೆಗಳ ಜೊತೆಗೆ , ಇತರ ಪ್ರಸಿದ್ಧ ವ್ಯಕ್ತಿಗಳನ್ನ ಹೋಲುವ ಬೊಂಬೆಗಳನ್ನ ಕೂಡ ಇತ್ತೀಚೆಗೆ ಮೆರವಣಿಗೆಯಲ್ಲಿ ತರುತ್ತಿದ್ದಾರೆ.

ಇದಿಷ್ಟೇ ಅಲ್ಲ ಕಣ್ರೀ , ನಿಮಗೆ ಆಶ್ಚರ್ಯ ಅನ್ನಿಸುವ ವಿಷಯ ಕೂಡ ಇದೆ . ನಮ್ಮಲ್ಲಿ ಪ್ರಾಣಿದಯಾ ಸಂಘದವರು ಪಟಾಕಿ ಹೊಡೆಯುವುದರಿಂದ ನಾಯಿಗಳಿಗೆ ಭಯವಾಗುತ್ತದೆ , ಪರಿಸರ ಹಾಳಾಗುತ್ತದೆ ಎಂದಂತೆ , ಇಲ್ಲಿಯೂ ಪ್ರಾಣಿದಯಾ ಸಂಘದವರು ನಾಯಿಗಳು ಬೆಚ್ಚಿಬೀಳುತ್ತವೆ ಹೀಗಾಗಿ ಪಟಾಕಿ ಹೊಡೆಯಬೇಡಿ ಅಂತ ಫರ್ಮಾನು ಹೊರಡಿಸುತ್ತಾರೆ . ಇನ್ನಷ್ಟು ಮಂದಿ ಪರಿಸರ ಅಂತ ಶುರು ಮಾಡುತ್ತಾರೆ. ಕೆಲವೊಂದು ವಿಷಯಗಳು ಜಾಗತಿಕ . ಆದರೆ ಇಲ್ಲಿನ ಬಹುತೇಕ ಜನರು ಇದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ. ಅಚ್ಚರಿ ಎನ್ನುವಂತೆ ಹಬ್ಬದ ಹಿಂದೆ ಮುಂದೆ ಶತ್ರುವಾಗುವ ಇಂತಹ ವರಾತಗಳು ಆ ನಂತರದ ದಿನಗಳಲ್ಲಿ ನಿಂತು ಹೋಗುತ್ತವೆ.

ಇನ್ನು ಹಬ್ಬದ ದಿನಗಳಲ್ಲಿ ತಯಾರಾಗುವ ಖಾದ್ಯಗಳ ಬಗ್ಗೆ ಹೇಳದಿದ್ದರೆ ಹೇಗೆ ? ನಮ್ಮಲ್ಲಿ ತಿನ್ನುವಂತೆ ಗೆಣಸನ್ನ ಸುಡುವುದು ಅಥವಾ ಬೇಯಿಸಿ ತಿನ್ನುವುದು ಕೂಡ ಸಾಮಾನ್ಯ. ಮನೆ ಮನೆಗಳಲ್ಲಿ ಹತ್ತಾರು ರೀತಿಯ ಮಾಂಸದ ಖಾದ್ಯಗಳು ತಯಾರಾಗುತ್ತವೆ. ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿ ಹೇಗೆ ಒಬ್ಬಟ್ಟು , ಇತ್ಯಾದಿ ವಿಶೇಷ ಖಾದ್ಯಗಳನ್ನ ಪ್ರಸಿದ್ಧ ಅಂಗಡಿಗಳಿಂದ ಕೊಂಡು ತರುತ್ತೇವೆ ಹಾಗೆ ಇಲ್ಲಿಯ ಜನರು ಕೂಡ ಅಂಗಡಿಯಿಂದ ಕೊಂಡು ತರುತ್ತಾರೆ. ಹಳೆಯ ತಲೆಮಾರಿನ ಜನ ಎಷ್ಟೇ ಕಷ್ಟವಾದರೂ ಸರಿಯೇ ಮನೆಯಲ್ಲೇ ಮಾಡ್ಡುವುದಕ್ಕೆ ಜೈ ಎನ್ನುತ್ತಾರೆ.

ಹಬ್ಬದ ನಂತರ ಆಫೀಸ್ ನಲ್ಲಿ , ದಾರಿಯಲ್ಲಿ ಸಿಕ್ಕ ಜನ ಎಲ್ಲರದೂ ಒಂದೇ ಮಾತು , ಹಬ್ಬದ ಊಟ ಜಾಸ್ತಿಯಾಗಿದೆ , ನಾನು ಒಂದಷ್ಟು ತೂಕವನ್ನ ಪಡೆದುಕೊಂಡಿದ್ದೇನೆ ಎನ್ನುವುದು ಆ ಮಾತು. ಆಮೇಲೆ ಮಾತು ಹೇಗೆ ಡಯಟ್ ಮಾಡಬೇಕು , ತೂಕವನ್ನ ಹೇಗೆ ಕಂಟ್ರೋಲ್ ಮಾಡಬೇಕು ಎನ್ನುವುದಾಗಿರುತ್ತದೆ. ಹೇಳಿಕೇಳಿ ಇಲ್ಲಿನ ಜನ ದೈಹಿಕವಾಗಿ ಸದೃಢರಾಗಿರುವುದಕ್ಕೆ ಹೆಚ್ಚಿನ ಮಹತ್ವವನ್ನ ನೀಡುತ್ತಾರೆ. ಹೀಗಾಗಿ ಇಂತಹ ಮಾತುಗಳು ಇಲ್ಲಿ ಅತಿ ಸಾಮಾನ್ಯ.

ಇನ್ನಷ್ಟು ಜನ ಹಬ್ಬದ ಸಮಯದಲ್ಲಿ ಕ್ಯಾಲೋರಿ , ಡಯಟ್ ಎನ್ನುವುದನ್ನ ನೋಡಬಾರದು , ಜೀವನದ ಆ ಕ್ಷಣವನ್ನ ಪೂರ್ಣವಾಗಿ ಆಸ್ವಾದಿಸಿ ಬಿಡಬೇಕು ಎನ್ನುವ ತತ್ವದವರು. ಒಟ್ಟಿನಲ್ಲಿ ನೀವು ಎಲ್ಲಿಂದ ಎಲ್ಲಿಗೆ ಹೋಗಿ , ನೀವು ಒಪ್ಪಿ ಅಥವಾ ಬಿಡಿ ಜನರು ದೇಶ-ಭಾಷೆ -ವೇಷದಿಂದ ಮಾತ್ರ ಬದಲಾಗಬಹುದು ಮುಕ್ಕಾಲು ಪಾಲು ಭಾವನೆಗಳಿವೆಯಲ್ಲ ಅವು ಮಾತ್ರ ಎಲ್ಲಿಂದ ಎಲ್ಲೇ ಹೋಗಿ ಸೇಮ್ !

English summary
Barcelona Memories Column By Rangaswamy Mookanahalli Part 50, ನಮ್ಮ ದೀಪಾವಳಿಯ ತಮ್ಮ, ಸ್ಪೇನ್ನ ಮೆರ್ಸೆ (merce) ಹಬ್ಬ !!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X