ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊಟ ತನ್ನಿಚ್ಚೆ , ನೋಟ ಪರರಿಚ್ಚೆ !! ಇದರ ಅರ್ಥ ತಿಳಿಯಲು ಬಹಳ ವರ್ಷಗಳು ಬೇಕಾಯಿತು

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ನಾವು ಮಾಡುವ ಊಟ ನಮ್ಮಿಚ್ಚೆಗೆ ಅಂದರೆ ನಮ್ಮ ಇಷ್ಟದಂತೆ ಮಾಡಬೇಕು , ಆದರೆ ನಾವು ತೊಡುವ ಬಟ್ಟೆ ನಾಲ್ಕು ಜನರ ಇಚ್ಚೆಗೆ ಅಂದರೆ ನಾಲ್ಕು ಜನರಿಗೆ ಇಷ್ಟವಾಗುವಂತೆ ತೊಡಬೇಕು ಎನ್ನುವುದು ಆಡು ಮಾತು. ಈ ಮಾತನ್ನ ನನ್ನಜ್ಜಿ ಬಹಳ ಬಾರಿ ಹೇಳಿದ್ದರು. ಆದರೆ ನನಗೆ ಇದರ ನಿಜವಾದ ಅರ್ಥವೇನು ? ಎನ್ನುವುದು ತಿಳಿಯಲು ಬಹಳ ವರ್ಷಗಳು ಬೇಕಾಯಿತು. ಭಾರತದಲ್ಲಿ ಇರುವವರೆಗೆ ಇದರ ಅರ್ಥ ತಿಳಿಯಲೇ ಇಲ್ಲ ಎನ್ನುವುದು ಉತ್ಪ್ರೇಕ್ಷೆ ಮಾತಲ್ಲ. ಇಲ್ಲಿರುವವರೆಗೆ ಈ ಮಾತಿನ ಅರ್ಥ ತಿಳಿಯುವ ಸಂದರ್ಭ ಬರಲಿಲ್ಲ ಎನ್ನುವುದು ಮಾತ್ರ ಸತ್ಯ.

ಸ್ಪೇನ್ ನಲ್ಲಿ ಕಪ್ಪೆ , ಹಾವು , ಶಂಖದ ಹುಳ ತಿನ್ನುವುದು ಕಾಮನ್ ,ಇದರ ಜೊತೆಗೆ ಹಂದಿ , ಕುರಿ , ಹಸು ಕೂಡ ತೀರಾ ಸಾಮಾನ್ಯ. ಕುದುರೆ ಮಾಂಸ , ಮೊಲದ ಮಾಂಸ ಕೂಡ ತಿನ್ನುತ್ತಾರೆ. ಕುದುರೆ ಮಾಂಸ ಎಲ್ಲೆಡೆ ಸಿಗುವುದಿಲ್ಲ , ಅದನ್ನ ಮಾಡುವ ವಿಶೇಷ ರೆಸ್ಟೋರೆಂಟ್ ಗಳಿವೆ ಜನರು ಇಂತಹ ರೆಸ್ಟುರೆಂಟ್ಗಳಿಗೆ ಬಯಸಿ ಹೋಗಿ ತಿನ್ನುತ್ತಾರೆ. ಹೀಗೆ ತರಹಾವರಿ ಪ್ರಾಣಿಗಳನ್ನ ತಿನ್ನುವುದು ಇಲ್ಲಿ ಮಾಮೂಲು. ಆದರೆ ಇಲ್ಲಿನ ಜನ ನಾಯಿ ಮತ್ತು ಬೆಕ್ಕನ್ನ ತಿನ್ನುವುದಿಲ್ಲ. ಅವರೆಡೂ ಪ್ರಾಣಿಗಳನ್ನ ಡೊಮೆಸ್ಟಿಕ್ ಪೆಟ್ ಅಥವಾ ಸಾಕು ಪ್ರಾಣಿಯನ್ನಾಗಿ ಸಾಕುತ್ತಿರುವುದರ ಫಲಿತಾಂಶವಿರಬಹದು.

ತುಂಬಿದ ಹೊಟ್ಟೆ , ತಿನ್ನುವ ಊಟ ಮನಸ್ಸಿಗೆ ಮುದ ನೀಡಬೇಕೇ ವಿನಃ ನೋವಾಗಬಾರದುತುಂಬಿದ ಹೊಟ್ಟೆ , ತಿನ್ನುವ ಊಟ ಮನಸ್ಸಿಗೆ ಮುದ ನೀಡಬೇಕೇ ವಿನಃ ನೋವಾಗಬಾರದು

ನನಗೆ ತೀರಾ ಅಚ್ಚರಿ ಅನ್ನಿಸಿದ್ದು ಮಾತ್ರ ನಾವು ಬಸವನ ಹುಳು ಅಥವಾ ಶಂಖದ ಹುಳು ಎನ್ನುವ , ನೆಲೆದಲ್ಲಿ ತೆವಳುವ ಈ ಪುಟಾಣಿ ಜೀವಿಯನ್ನ ನಾವು ಹಸಿ ಕಡಲೆಕಾಯಿಯನ್ನ ಉಪ್ಪಿನಲ್ಲಿ ಹಾಕಿ ಬೇಯಿಸಿ ಚಪ್ಪರಿಸಿ ತಿನ್ನುವುದಿಲ್ಲವೇ ಥೇಟ್ ಅದೇ ರೀತಿ ತಿನ್ನುತ್ತಾರೆ. ಕೆಲವರು ಬಾಯಿ ಹಾಕಿ ಶಂಖದ ಒಳಗಿರುವ ಜೀವಿಯನ್ನ ಹೀರಿ ಚಪ್ಪರಿಸಿದರೆ ಕೆಲವರು ಅದಕ್ಕೆಂದೇ ಇಟ್ಟಿರುವ ಸಣ್ಣ ಕಡ್ಡಿಯನ್ನ ಶಂಖದಲ್ಲಿ ತೂರಿಸಿ , ಬೆಂದ ಆ ಜೀವವನ್ನೆ ಹೆಕ್ಕಿ ತಿನ್ನುತ್ತಾ ಜೊತೆಗೆ ತಮ್ಮಿಷ್ಟದ ಬಿಯರ್ ಕುಡಿಯುತ್ತಾರೆ. ಸಾಮಾನ್ಯವಾಗಿ ಈ ರೀತಿ ಬೇಯಿಸಿದ ಶಂಖದ ಹುಳುಗಳು ಸಾಯಂಕಾಲದ ಸ್ನಾಕ್ಸ್ !

Barcelona Memories Column By Rangaswamy Mookanahalli Part 49

ಅರವತ್ತಕ್ಕೂ ಹೆಚ್ಚು ದೇಶಗಳನ್ನ ಸುತ್ತಿದ ನನಗೆ ಅತ್ಯಂತ ಆಶ್ಚರ್ಯವಾಗುವುದು , ನಾವು ಯಾವುದನ್ನ 'ಥು ' ಎಂದು ಅಸಹ್ಯ ಪಡುತ್ತೇವೆ ಅಂತಹವುಗಳನ್ನ ಕೂಡ ಜಗತ್ತಿನ ಯಾವುದೋ ಮೂಲೆಯಲ್ಲಿ ಜನ ಚಪ್ಪರಿಸಿ ತಿನ್ನುತ್ತಿರುತ್ತಾರೆ. ಹುಡುಗನಾಗಿದ್ದಾಗ ನಮ್ಮ ಊರಿಗೆ ಬರುತಿದ್ದ ಚಿಳ್ಳೆಕ್ಯಾತರು ಎನ್ನುವವರು ಬೆಕ್ಕನ್ನ ಹಿಡಿದು ಬಡಿದು ತಿನ್ನುತ್ತಿದ್ದರು. ಇದೆ ಚಿಳ್ಳೆಕ್ಯಾತರು ಇಲಿ ತಿನ್ನುವುದು ಕೂಡ ಕಂಡಿದ್ದೇನೆ . ಇವರು ಊರಿಗೆ ಬಂದರು ಎನ್ನುವುದು ಆ ಬೆಕ್ಕುಗಳಿಗೆ ಹೇಗೆ ತಿಳಿಯುತ್ತಿತ್ತು ? ಎನ್ನುವುದು ಇಂದಿಗೂ ಯಕ್ಷ ಪ್ರಶ್ನೆ .

ಬೀಡಾಡಿ ಬೆಕ್ಕುಗಳು ಇವರ ಮೊದಲ ಟಾರ್ಗೆಟ್ . ಒಟ್ಟಿನಲ್ಲಿ ಒಮ್ಮೆ ಊರಿಗೆ ಬಂದರು ಎಂದರೆ ಸಾಕು ಕನಿಷ್ಠ ಡಜನ್ ಬೆಕ್ಕುಗಳನ್ನ ಹಿಡಿದು ಮೂಟೆಯಲ್ಲಿ ಕಟ್ಟಿಕೊಳ್ಳದೆ ಹೋಗುತ್ತಿರಲಿಲ್ಲ. ನೆಲದಲ್ಲಿ ಯಾವುದಾದರೊಂದು ಬಿಲವನ್ನ ನೋಡಿ ಅದಕ್ಕೆ ಸಾಕಷ್ಟು ಒಣ ಹುಲ್ಲನ್ನ ತುಂಬಿ ಅದಕ್ಕೆ ಬೆಂಕಿ ಹಚ್ಚುತ್ತಿದ್ದರು. ಸ್ವಲ್ಪ ದೂರದಲ್ಲಿ ಇರುತ್ತಿದ್ದ ಇನ್ನೊಂದು ಬಿಲವನ್ನ ಕೂಡ ಹೀಗೆ ಮಾಡಿ ಮುಚ್ಚುತ್ತಿದ್ದರು. ಹದಿನೈದು ನಿಮಿಷದಲ್ಲಿ ನೆಲವನ್ನ ಅಗೆದು ಹತ್ತಾರು ಇಲಿಗಳನ್ನ ಕೂಡ ತೆಗೆಯುತ್ತಿದ್ದರು. ಎಲ್ಲವುಗಳ ಬಾಲವನ್ನ ಕಟ್ಟಿ ಒಂದು ಚೀಲಕ್ಕೆ ಹಾಕಿಕೊಂಡು ಏನೂ ಆಗಿಲ್ಲವೇನೂ ಎನ್ನುವಂತೆ ಹೋಗುತ್ತಿದ್ದರು.

ಬಾಲಕರಾಗಿದ್ದ ನಮಗೆ ಇದನ್ನ ಇವರೇನು ಮಾಡುತ್ತಾರೆ ಎಂದು ನೋಡುವ ಕೆಟ್ಟ ಕುತೊಹಲ. ನಾನು , ದರ್ಜಿ ಮನೆವರ ಹುಡುಗ ಭಾಸ್ಕರ ( ಈ ಭಾಸ್ಕರ ಸಿರಾ ದಲ್ಲಿ ವೈದ್ಯನಾಗಿ ಪ್ರಾಕ್ಟಿಸ್ ಮಾಡುತ್ತಿದ್ದನಂತೆ , ಇವನನ್ನ ಒಮ್ಮೆ ಭೇಟಿ ಮಾಡುವುದು ಬಾಕಿಯಿದೆ ) ಪುರೋಹಿತರ ಮನೆಯ ಚಂದ್ರಮೌಳಿ ಅಂದಿಗೆ ನನ್ನ ಪಾರ್ಟನರ್ಸ್ ಇನ್ ಕ್ರೈಂ . ಚಂದ್ರಮೌಳಿ ಬೆಂಗಳೂರಿನ ಕೋಟಿಗೂ ಮೀರಿದ ಜನರ ನಡುವೆ ಬದುಕನ್ನ ಕಟ್ಟಿಕೊಂಡಿದ್ದಾನೆ ಎನ್ನುವ ಸುದ್ದಿ ಇತ್ತೀಚಿಗೆ ಸಿಕ್ಕಿದೆ , ಇವನನ್ನ ಕೂಡ ಒಮ್ಮೆ ಭೇಟಿಯಾಗುವುದು ಬಾಕಿಯಿದೆ. ಇರಲಿ .

ಹೀಗೆ ಒಮ್ಮೆ ನಾವು ಮೂವರೂ ಶರ್ಲಾಕ್ ಹೋಮ್ಸ್ ನ ತಳಿಗಳ ಹಾಗೆ ಚಿಳ್ಳೆಕ್ಯಾತರನ್ನ ಹಿಂಬಾಲಿಸಿದ್ದೆವು . ಯಾವ ಬ್ಯಾಗಿನಲ್ಲಿ ಬೆಕ್ಕುಗಳನ್ನ ತುಂಬಿದ್ದರೂ ಆ ಬ್ಯಾಗಿನ ಮೇಲೆ ದೊಡ್ಡ ದೊಣ್ಣೆಯಿಂದ ಮನಸೋ ಇಚ್ಛೆ ಹೊಡೆಯುತ್ತಿದ್ದರು. ಬೆಕ್ಕುಗಳ ಆಕ್ರಂದನ ಇಂದಿಗೂ ಕಿವಿಯಲ್ಲಿದೆ. ನಂತರದ್ದು ಅವುಗಳ ಚರ್ಮ ಸುಲಿದು , ಹೊಟ್ಟೆ ಬಗೆದು , ಬೇಯಿಸಿ ತಿನ್ನುವ ಕ್ರಿಯೆ . ಜಗತ್ತು ಅದೆಷ್ಟು ವಿಚಿತ್ರ ಎಂದದ್ದು ಈ ವಿಷಯಕ್ಕೆ , ಸ್ಪೇನ್ ನಲ್ಲಿ ಬೆಕ್ಕು ತಿನ್ನುವುದು ನಿಷಿದ್ಧ. ಅಂದ ಮಾತ್ರಕ್ಕೆ ಕಾನೂನು ಪ್ರಕಾರ ನಿಷಿದ್ಧ ಎಂದುಕೊಳ್ಳುವುದು ಬೇಡ .

 ಶಿಕ್ಷೆ ಇಲ್ಲದೆ ಶಿಕ್ಷಣ ಕಲಿಸುವುದು ಹೇಗೆ? ನಿಟ್ಟುಸಿರು ಬಿಟ್ಟ ಆತನ ಮುಖ ಮಸ್ತಕದಲ್ಲಿ ಇನ್ನೂ ಹಸಿರು ಶಿಕ್ಷೆ ಇಲ್ಲದೆ ಶಿಕ್ಷಣ ಕಲಿಸುವುದು ಹೇಗೆ? ನಿಟ್ಟುಸಿರು ಬಿಟ್ಟ ಆತನ ಮುಖ ಮಸ್ತಕದಲ್ಲಿ ಇನ್ನೂ ಹಸಿರು

ಇಲ್ಲಿನ ಜನ ಬೆಕ್ಕು ತಿನ್ನುವುದಿಲ್ಲ. ಬೆಕ್ಕು ತಿನ್ನುವುದು ಕೇಳಿ ಥೇಟ್ ಸಸ್ಯಾಹಾರಿಗಳು ಮೈ ಮುಖ ಕಿವುಚುವಂತೆ ಕಿವುಚುತ್ತಾರೆ. ನಾಯಿಯ ವಿಷಯದಲ್ಲಿ ಕೂಡ ಸೇಮ್ ! ಇನ್ನು ಚೀನಿಯರು , ಕೊರಿಯನ್ನರು ನಾವು ಹನುಮಾನ್ ಎಂದು ಪೂಜಿಸುವ ಕೋತಿಯನ್ನ ಕೂಡ ಬಿಡುವುದಿಲ್ಲ. ಹಸಿ ರಕ್ತ ಕುಡಿಯುವ ಜನರನ್ನ ನಾನು ಬಹಳಷ್ಟು ನೋಡಿದ್ದೇನೆ. ಪ್ರಾಣಿ ವಧೆಯ ಸಮಯದಲ್ಲಿ ಸೂರುವ ರಕ್ತವನ್ನ ಹಿಡಿದು ನಂತರ ಅದನ್ನ ಪ್ರತ್ಯೇಕವಾಗಿ ಮಾರುತ್ತಾರೆ. ಜೊತೆಗೆ ಹಲವರು ಈ ರಕ್ತವನ್ನ ಎಣ್ಣೆಯಲ್ಲಿ ಕರಿದು ಕೂಡ ಸೇವಿಸುತ್ತಾರೆ.

ಇನ್ನು ಹೆಚ್ಚಾಗಿ ಚೀನಿಯರ ಬಗ್ಗೆ ಬರೆಯುವುದಿಲ್ಲ. ಜಗತ್ತಿನ ಬಹುತೇಕ ದೇಶದ ಜನರು ಅಸಹ್ಯ ಪಟ್ಟುಕೊಳ್ಳುವ ಜಿರಳೆಯನ್ನ ಕೂಡ ಆಸ್ವಾದಿಸಿ ತಿನ್ನುವ ಜನರಿವರು. ನಿಮಗೆ ತಿಳಿದಿರಲಿ , ಯೂರೋಪನ್ನ ನಿಧಾನವಾಗಿ ಚೀನಿಯರು ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿದ್ದಾರೆ . ಬಾರ್ಸಿಲೋನಾ ನಗರದ ಬಹುತೇಕ ಬಾರ್ ಬಿಸಿನೆಸ್ ಇಂದು ಚೀನಿಯರ ಕೈಲಿದೆ. ಇಲ್ಲಿನ ಜನರು ಕಷ್ಟ ಪಟ್ಟು ಕೆಲಸ ಮಾಡಲು ಬಯಸದೆ ಇರುವುದು , ಏನೇ ಸಿಕ್ಕರೂ ಸರಿ ಮಾಡುತ್ತೇವೆ ಎನ್ನುವ ಮನೋಭಾವದ ಚೀನಿಯರು ಇವತ್ತಿನ ಇಂದಿನ ಪರಿಸ್ಥಿತಿಗೆ ಕಾರಣ.

ಸಾಮಾನ್ಯವಾಗಿ ಬಹಳ ಕಷ್ಟದ ಕೆಲಸ ಬಂದರೆ ಇಲ್ಲಿನ ಜನ ' ಈಸ್ ಉನ್ ತ್ರಬಾಹೊ ದೆ ಚಿನೋ ' ಎನ್ನುವುದು ಸಾಮಾನ್ಯ . ಅಂದರೆ ಇದು ನನ್ನ ಕೆಲಸವಲ್ಲ ಇದು ಒಬ್ಬ ಚೀನಿ ಪ್ರಜೆಯ ಕೆಲಸ ಎನ್ನುವಂತೆ ಮಾತನಾಡುವುದು ಇಲ್ಲಿ ಸಾಮಾನ್ಯ. ಮೊದಲೇ ಹೇಳಿದಂತೆ ಬಾರ್ ಮತ್ತು ರೆಸ್ಟುರೆಂಟ್ ವ್ಯಾಪಾರದಲ್ಲಿ ಬಹಳಷ್ಟು ಚೀನಿಯರು ಹೊಕ್ಕಿದ್ದಾರೆ. ನನ್ನ ಪರಿಚಯದ ಹಿರಿಯ ನಾಗರೀಕ ಅಂತೊನಿಯೊ ಎನ್ನುವ ವಕೀಲರೊಬ್ಬರು ' ರಂಗ ನೀನು ಒಬ್ಬ ಚೀನಿ ಪ್ರಜೆ ಸತ್ತಿದ್ದ ಕಂಡಿದ್ದೀಯ ? ' ಎನ್ನುವ ಪ್ರಶ್ನೆಯನ್ನ ಕೇಳುತ್ತಿದ್ದರು.ನನಗೆ ಏನು ಉತ್ತರ ಹೇಳಬೇಕು ಎನ್ನುವುದು ತಿಳಿಯದೆ ಇಲ್ಲ ಸರ್ ನಾನು ನೋಡಿಲ್ಲ ಎನ್ನುತ್ತಿದ್ದೆ.

ಅದಕ್ಕವರು ' ಯೋ ತಾಮ್ ಪೊಕೊ ' ಎನ್ನುತ್ತಿದ್ದರು . ಅಂದರೆ ನಾನು ಕೂಡ ನೋಡಿಲ್ಲ ಎನ್ನುವ ಅರ್ಥ. ಅವರು ಈ ಮಾತನ್ನ ವಿಢಂಬನೆಗೆ ಬಳಸುತ್ತಿದ್ದರು. ಅಂದರೆ ಚೀನಿಯರು ಸತ್ತರೆ ಅವರನ್ನ ಕೂಡ ಬೇಯಿಸಿ ಜನರಿಗೆ ತಿನ್ನಲು ಕೊಟ್ಟಿರುವ ಸಾಧ್ಯತೆ ಇದೆ. ಹೀಗಾಗಿ ನಮ್ಮ ಕಣ್ಣಿಗೆ ಚೀನಿಯರು ಸತ್ತರು ಎಂದು ಕಾರ್ಯಕ್ರಮ ನೋಡಲು ಅವಕಾಶ ಸಿಕ್ಕಿಲ್ಲ ಎನ್ನುವ ಅರ್ಥದಲ್ಲಿ ಹೇಳುತ್ತಿದ್ದರು. ಮುಂದುವರೆದು ನೀನು ಚೀನಿ ರೆಸ್ಟುರೆಂಟ್ ನಲ್ಲಿ ಊಟ ಮಾಡಿದ್ದೀರಾ ಎಂದ ಮೇಲೆ ನಾನು ಬೆಕ್ಕು , ನಾಯಿ , ಕೋತಿ ತಿಂದಿಲ್ಲ ಎಂದು ಪ್ರಮಾಣಿಸಿ ಹೇಳಲು ಬರುವುದಿಲ್ಲ , ಅವರು ಯಾವ ಮಾಂಸದ ಜೊತೆಗೆ ಬೆರೆಸಿ ಹಾಕಿರುತ್ತಾರೆ ಬಲ್ಲವರಾರು ? ಎನ್ನುವ ಮಾತುಗಳನ್ನ ಸ್ವಲ್ಪ ಗಂಭೀರವಾಗಿ ಹೇಳುತ್ತಿದ್ದರು. ನನ್ನ ಉಸಿರಿರುವರೆಗೆ ನಾನು ಬೇರೆಡೆ ಮಾಂಸ ತಿನ್ನುವುದಿಲ್ಲ ಎನ್ನುತ್ತಿದ್ದರು.

ಇಲ್ಲಿಗೆ ಬಂದ ಪ್ರಥಮ ದಿನಗಳು ಭಾಷೆ ಕೂಡ ಬಾರದ ನನ್ನ ಪಾಡು ಹೇಗಿರಬಹದು ? ಎನ್ನುವ ಅರಿವು ನಿಮ್ಮದಾಯಿತು ಎಂದು ಕೊಳ್ಳುವೆ. ಅದೆಷ್ಟೇ ನಾನು ವೇರ್ದುರ ಎಂದು ಕಿರುಚಿಕೊಂಡರು ಕೂಡ ಇವರಿಗೆ ಅದು ಅರ್ಥವಾಗುತ್ತಿರಲಿಲ್ಲ. ಮಾಂಸದ ತುಂಡು ತೆಗೆದು ಹಾಕಿ ತಿನ್ನು ಎನ್ನುವ ಬಿಟ್ಟಿ ಉಪದೇಶಗಳನ್ನ ನಾನು ಹಲವಾರು ಬಾರಿ ಕೇಳಿದ್ದೇನೆ. ಅದು ಅಷ್ಟು ಸುಲಭವಾಗಿರಲಿಲ್ಲ ನನಗೆ ! ಇದರ ಜೊತೆಗೆ ನಾನು ಅನುಭವಿಸಿದ ಅಥವಾ ಎದುರಿಸಿದ ಇನ್ನೊಂದು ಸಮಸ್ಯೆ ಹಾಕುವ ಬಟ್ಟೆಯದು .

ಇಲ್ಲಿನ ಜನ ಅಂದರೆ ಸ್ಪ್ಯಾನಿಷ್ ಮತ್ತು ಯೂರೋಪಿಯನ್ನರು ಹೊಟ್ಟೆ ಖಾಲಿ ಬೇಕಾದರೂ ಇಟ್ಟು ಕೊಳ್ಳುತ್ತಾರೆ ಆದರೆ ತಾವು ಹಾಕುವ ಬಟ್ಟೆಗೆ ಮಾತ್ರ ಖರ್ಚು ಮಾಡುವುದು ತಪ್ಪಿಸುವುದಿಲ್ಲ. ಔಟ್ ಡೇಟೆಡ್ ಎಂದು ನನ್ನ ಹಂಗಿಸುವುದು ಸಾಮಾನ್ಯವಾಗಿತ್ತು . ಅಣ್ಣ ನಿನ್ನ ತಿಂಗಳ ಮೊದಲ ವೇತನ ಎಷ್ಟೇ ಇರಲಿ ಅದನ್ನ ಪೂರ್ಣ ಬಟ್ಟೆಯ ಮೇಲೆ ಖರ್ಚು ಮಾಡು ಎನ್ನುವುದು ನೆನಪಿಗೆ ಬಂದಿತ್ತು. ನಿಜವಾಗಿ ಹೇಳಬೇಕೆಂದರೆ ಬಟ್ಟೆಯ ಮೇಲೆ ಮಾಡುವುದು ಖರ್ಚಲ್ಲ ಅದು ಒಂದು ರೀತಿಯ ಹೂಡಿಕೆಯೇ ಸರಿ .

 ಯಾವದೇ ದೇಶದ ಹೆಣ್ಣಾಗಿರಲಿ ಆಕೆ ಬಯಸುವುದು ಬೆಚ್ಚನೆಯ ಪ್ರೀತಿ, ಭದ್ರತೆ ಮಾತ್ರ ! ಯಾವದೇ ದೇಶದ ಹೆಣ್ಣಾಗಿರಲಿ ಆಕೆ ಬಯಸುವುದು ಬೆಚ್ಚನೆಯ ಪ್ರೀತಿ, ಭದ್ರತೆ ಮಾತ್ರ !

ಹೀಗೆ ದೂರದೂರಿನಲ್ಲಿ ಭಾಷೆ ಬಾರದ ನೆಲದಲ್ಲಿ ಊಟ ತನ್ನಿಚ್ಚೆ , ನೋಟ ಪರರಿಚ್ಚೆ ಎನ್ನುವುದರ ಅರ್ಥವನ್ನ ಉದಾಹರೆಣೆ ಸಹಿತ ಕಂಡುಕೊಂಡೆ . ಅದೆಷ್ಟೇ ಕಷ್ಟಗಳು ಎದುರಾದರೂ ನನ್ನ ಹೊಟ್ಟೆಗೆ , ದೇಹಕ್ಕೆ , ಮನಸ್ಸಿಗೆ ಒಗ್ಗದ ಆಹಾರವನ್ನ ತಿನ್ನದೇ ನನ್ನತನವನ್ನ ಉಳಿಸಿಕೊಂಡಿದ್ದು ಮುಂದಿನ ದಿನಗಳಲ್ಲಿ ಈ ಸಮಾಜದಲ್ಲಿ ಗೌರವವನ್ನ ಇಮ್ಮಡಿ ಮಾಡಿ ಕೊಟ್ಟಿತು. ಊಟದ ವಿಷಯದಲ್ಲಿ ನನ್ನ ನಿಲುವು ಬಹಳಷ್ಟು ವಿಸ್ತಾರಗೊಂಡಿತು.

ಸಸ್ಯಾಹಾರಿಯಾಗಿ ಎಂದು ಯಾರನ್ನೂ ಒತ್ತಾಯಿಸುವುದಿಲ್ಲ. ಅಂತೆಯೇ ಮಾಂಸಾಹಾರ ಸೇವೆನೆ ನಾನಂತೂ ಮಾಡುವುದಿಲ್ಲ , ನಮ್ಮದಲ್ಲದ ಆಹಾರವನ್ನ ಇತರರ ನೋಯಿಸದೆ ನವಿರಾಗಿ ನಿರಾಕರಿಸುವ ಹಂತಕ್ಕೆ ಬದುಕು ಬಂದು ನಿಂತಿದೆ. ಇಂತಹ ಸಂದರ್ಭಗಳಲ್ಲಿ ಅಜ್ಜಿ ಹೇಳಿದ ಊಟ ತನ್ನಿಚ್ಚೆ ಎನ್ನುವ ಮಾತು ಮತ್ತೆ ಮತ್ತೆ ನೆನಪಾಗುತ್ತಿರುತ್ತದೆ.

English summary
Barcelona Memories Column By Rangaswamy Mookanahalli Part 49
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X