ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವದೇ ದೇಶದ ಹೆಣ್ಣಾಗಿರಲಿ ಆಕೆ ಬಯಸುವುದು ಬೆಚ್ಚನೆಯ ಪ್ರೀತಿ, ಭದ್ರತೆ ಮಾತ್ರ !

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಬೆಂಗಳೂರಿನಲ್ಲಿ ಮಕ್ಕಳು ಶಾಲೆಗೆ ಹೋಗಲು ಬೆಳಿಗ್ಗೆ ಏಳಕ್ಕೆಲ್ಲ ಸ್ಕೂಲ್ ಬಸ್ ಕಾಯುತ್ತಾ ನಿಂತಿರುವುದು ಸಾಮಾನ್ಯ ದೃಶ್ಯವಾಗಿತ್ತು. ಕೊರೊನಾ ಇದಕ್ಕೆ ಬ್ರೇಕ್ ಕೊಟ್ಟಿದೆ. ಆದರೆ ಕೊರೊನಾ ಪೂರ್ವ ಬಹುಪಾಲು ಮಕ್ಕಳು ಬೆಳಿಗ್ಗೆ ತಿಂಡಿ ತಿನ್ನದೇ ಹೊರಟು ಬಿಡುತ್ತಿದ್ದವು. ಪಕ್ಕದಲ್ಲಿ ಇರುವ ಶಾಲೆ ಸರಿಯಿಲ್ಲ ಎನ್ನುವ ಕಾರಣ ಕೊಡುವ ಪೋಷಕರು ಮಕ್ಕಳ ಕಳಿಸುವುದು 10/12 ಕಿಲೋಮೀಟರ್ ದೂರದ ಶಾಲೆಗೆ ! ವಿಜಯನಗರದಲ್ಲಿ ಇರುವ ಮಗು ಅಲ್ಲೇ ಇರವ ಶಾಲೆಗೆ ಹೋಗದೆ (ಕಳಿಸದೆ ) ನಾಗರಭಾವಿ ಶಾಲೆಗೆ ಬರುತ್ತೆ , ಇಲ್ಲಿನ ಮಗು ವಿಜಯನಗರ ಶಾಲೆಗೆ ! ಇದೊಂದು ಉದಾಹರಣೆ ಮಾತ್ರ, ಭಾರತದ ಬಹುತೇಕ ನಗರಗಳಲ್ಲಿ ಇದು ಸಾಮಾನ್ಯ. ಪೋಷಕರು ಯೋಚನಾ ಲಹರಿ ದೇಶದ ಎಲ್ಲಾ ಭಾಗದಲ್ಲೂ ಸೇಮ್!

ಯೂರೋಪಿನ ಬಹುತೇಕ ದೇಶಗಳಲ್ಲಿ ಬೆಳಗಿನ ತಿಂಡಿ ಮಿಸ್ ಮಾಡಬೇಡಿ ಎಂದು ಕೋಟ್ಯಂತರ ಯುರೋ ಖರ್ಚು ಮಾಡಿ ಜಾಹಿರಾತು ನೀಡುತ್ತಿವೆ . ಅಲ್ಲಿ ಮಕ್ಕಳು ಹೆಚ್ಚೆಂದರೆ ವಾಸಿಸುವ ಮನೆಯಿಂದ 3 ಕಿಲೋಮೀಟರ್ ಅಂತರದಲ್ಲಿ ಇರುವ ಶಾಲೆ ಸೇರಬಹುದು. ದೂರದ ಶಾಲೆ ಸೇರಲು ಬಯಸಿದರೆ ಮನೆ ಅಲ್ಲೇ ಮಾಡಬೇಕು. ಇದು ಅಲ್ಲಿ ಸರಕಾರ ಮಾಡಿರುವ ನಿಯಮ. ಮಕ್ಕಳು ಶಾಲೆಯಿಂದ ಮತ್ತು ಮನೆಯಿಂದ ಬಹುದೂರ ಇರುವುದು ಒಳ್ಳೆಯದಲ್ಲ ಎನ್ನುವುದು ಇಲ್ಲಿನ ಸರಕಾರದ ಯೋಚನೆ.

 ಕೆಲಸ ಎನ್ನುವುದು ಕೊರಳಿಗೆ ಬಿಗಿದ ನೇಣಿನ ಕುಣಿಕೆಯಾಗಬಾರದು! ಸಿಯಂಪ್ರೆ ಆಯ್ ಮನ್ಯಾನ !! ಕೆಲಸ ಎನ್ನುವುದು ಕೊರಳಿಗೆ ಬಿಗಿದ ನೇಣಿನ ಕುಣಿಕೆಯಾಗಬಾರದು! ಸಿಯಂಪ್ರೆ ಆಯ್ ಮನ್ಯಾನ !!

ಇದನ್ನ ಸರಕಾರ ಒಮ್ಮುಖವಾಗಿ ತೆಗೆದುಕೊಂಡ ನಿರ್ಧಾರ ಎಂದುಕೊಂಡರೆ ಅದು ತಪ್ಪು. ಹತ್ತಾರು ಕಮಿಟಿಗಳು , ಮನಶಾಸ್ತ್ರಜ್ಞರು ಕುಳಿತು ಸಾಧಕ ಭಾದಕಗಳನ್ನ ಚರ್ಚಿಸಿ ಸರಕಾರಕ್ಕೆ ನೀಡಿದ ಸಲಹೆ ಮೇರೆಗೆ ತೆಗದುಕೊಂಡ ತೀರ್ಮಾನ. ಮೊದಲೇ ಹೇಳಿದಂತೆ ಇದು ಕೇವಲ ಸ್ಪೇನ್ ಒಂದೇ ಅಂತಲ್ಲ , ಬಹುತೇಕ ಯೂರೋಪಿಯನ್ ದೇಶಗಳಲ್ಲಿ ಈ ಪದ್ದತಿಯನ್ನ ಅಳವಡಿಸಿಕೊಂಡಿದ್ದಾರೆ.

Barcelona Memories Column By Rangaswamy Mookanahalli Part 46

ನಮ್ಮಲ್ಲಿ ಎಲ್ಲವನ್ನೂ ಸರಕಾರ ಮಾಡಲಿ ಎಂದು ಕಾಯ್ದು ಕುಳಿತು ಕೊಳ್ಳುವಂತಿಲ್ಲ, ಇಷ್ಟು ದೊಡ್ಡ ದೇಶದಲ್ಲಿ ಎಲ್ಲವೂ ಸರಕಾರ ಮಾಡಲಿ ಎಂದು ಕಾಯುವುದು ತರವೂ ಅಲ್ಲ . ನಮ್ಮ ಮಕ್ಕಳನ್ನ ಹತ್ತಿರದ ಶಾಲೆಗೆ ಸೇರಿಸುವ ನಿರ್ಧಾರ ನಮ್ಮ ಕೈಲಿದೆ ಅಲ್ಲವೇ ? ಹೀಗೆ ನಮ್ಮ ಮಕ್ಕಳನ್ನ ನಮ್ಮ ಮನೆಯ ಹತ್ತಿರದ ಶಾಲೆಗೆ ಸೇರಿಸುವುದರಿಂದ :

1) ನಿಮ್ಮ ಮಕ್ಕಳು ನಿಮ್ಮ ಏರಿಯಾ ದಲ್ಲೇ ಇರುತ್ತವೆ
2) ಸಾಯಂಕಾಲ ನಿಮ್ಮ ಮಕ್ಕಳಿಗೆ ಆಟ ಆಡಲು ಸಿಗುವ ಮಕ್ಕಳು , ಶಾಲೆಯ ಮಕ್ಕಳು ಸೇಮ್ .., ದೇ ವಿಲ್ ಜೆಲ್ ವೆಲ್ .
3) ಬೆಂಗಳೂರಿನ ಅಥವಾ ಮತ್ತ್ಯಾವುದೇ ನಗರಗಳ ಬೃಹತ್ ಸಮಸ್ಯೆ ಟ್ರಾಫಿಕ್ ! ಅದು ಸ್ವಲ್ಪವಾದರೂ ಕಡಿಮೆಯಾಗುತ್ತದೆ.
4) ಎಲ್ಲಕ್ಕೂ ಮುಖ್ಯ ನಿಮ್ಮ ಮಕ್ಕಳಿಗೆ ಆಟ ಆಡಲು ಟೈಮ್ ಸಿಕ್ಕುತ್ತೆ . ಟ್ರಾಫಿಕ್ ನಲ್ಲಿ , ಟ್ರಾವೆಲ್ ನಲ್ಲಿ ಅವರ ಸಮಯ ಏಕೆ ವ್ಯಯ ಆಗಬೇಕು ?

ನಾವು ಬದಲಾವಣೆ ಬಯಸುತ್ತೇವೆ. ಆದರೆ ಆ ಬದಲಾವಣೆಯ ಪ್ರಾರಂಭ ಮಾತ್ರ ನಮ್ಮಿಂದ ಆಗಲಿ ಎನ್ನುವ ಮನಸ್ಥಿತಿ ಮಾತ್ರ ಇನ್ನೂ ನಮ್ಮದಾಗಿಲ್ಲ. ಬದಲಾಗಲು ಇಷ್ಟ ಪಡದಿದ್ದರೆ ಹೇಗೆ ? ಪ್ರಯತ್ನದಿಂದ ಪರಮಾತ್ಮ ಪಡೆಯಬಹುದು . ಇರಲಿ

 ಬದಲಾವಣೆ ಜಗದ ನಿಯಮ! ಮೇಲೇರಿದ್ದು ಕೆಳಗೆ ಬರಲೇ ಬೇಕಲ್ಲವೇ? ಬದಲಾವಣೆ ಜಗದ ನಿಯಮ! ಮೇಲೇರಿದ್ದು ಕೆಳಗೆ ಬರಲೇ ಬೇಕಲ್ಲವೇ?

ಸ್ಪೇನ್ ನ ಬಾರ್ಸಿಲೋನಾ ದಿಂದ ಇಂಗ್ಲೆಂಡ್ ನ ಲಂಡನ್ ಗೆ ಸರಿಸುಮಾರು 1 ಘಂಟೆ 40ನಿಮಿಷದ ವಿಮಾನ ಪ್ರಯಾಣ . ಇಂಗ್ಲೆಂಡ್ ದೇಶಕ್ಕೆ, ಲಂಡನ್ ನಗರಕ್ಕೆ ಇಷ್ಟು ಹತ್ತಿರವಿದ್ದೂ ಬಾರ್ಸಿಲೋನಾದಲ್ಲಿ ಇಂಗ್ಲಿಷ್ಗೆ ಬೆಲೆ ಇಲ್ಲ ! ಇಲ್ಲಿನ ಬಹುಪಾಲು ಮಕ್ಕಳು ಅಂದರೆ ತೊಂಬತ್ತು ಪ್ರತಿಶತಕ್ಕೂ ಹೆಚ್ಚು ಮಕ್ಕಳು ಸರಕಾರಿ ಶಾಲೆಗೆ ಹೋಗುತ್ತಾರೆ. ಸರಕಾರಿ ಶಾಲೆಯಲ್ಲಿ ಸ್ಪ್ಯಾನಿಷ್ ಅಥವಾ ಕತಲಾನ್ ಭಾಷೆಯಲ್ಲಿ ಬೋಧಿಸಲಾಗುತ್ತದೆ. ಇಂಗ್ಲಿಷ್ ಕೇವಲ ಒಂದು ಭಾಷೆಯಾಗಿ ಕಲಿಸಲಾಗುತ್ತದೆ. ಹೀಗಾಗಿ ಇಲ್ಲಿನ ಜನತೆಗೆ ಇಂಗ್ಲಿಷ್ ಭಾಷೆಯ ಜ್ಞಾನ ಅಷ್ಟಕಷ್ಟೇ.

ಉಳಿದ ಕೆಲವೇ ಕೆಲವು ಮಕ್ಕಳು ಖಾಸಗಿ ಶಾಲೆಗೆ ಹೋಗುತ್ತವೆ. ಖಾಸಗಿ ಶಾಲೆಯಲ್ಲಿ ಶುಲ್ಕ ಅತಿ ಹೆಚ್ಚು. ಸಾಮಾನ್ಯ ಜನರು ಇದನ್ನ ಭರಿಸಲು ಸಾಧ್ಯವಿಲ್ಲ. ಇಂಗ್ಲಿಷ್ ಭಾಷೆಯ ಮಹತ್ವ ಇತ್ತೀಚಿಗೆ ಸ್ಪ್ಯಾನಿಷ್ ಜನಕ್ಕೂ ಗೊತ್ತಾಗುತ್ತಿದೆ. ನಾನು ದೇಶ ಬಿಟ್ಟು ಹೋಗುವುದಿಲ್ಲ ಎನ್ನುವುದಾದರೆ ಸ್ಪ್ಯಾನಿಷ್ ಸಾಕು, ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಹೋಗಿ ಬದುಕುತ್ತೇನೆ ಎನ್ನುವುದಾದರೆ ಇಂಗ್ಲಿಷ್ ಬೇಕು ಎನ್ನುವ ಪರಿಜ್ಞಾನ ಅವರಿಗೂ ಬಂದಿದೆ. ಹೀಗಾಗಿ ಇತ್ತೀಚಿಗೆ ತಮ್ಮ ಮಕ್ಕಳು ಇಂಗ್ಲಿಷ್ ಕಲಿಯಲಿ ಎನ್ನುವ ಆಸೆ ಹೊಸ ತಂದೆ ತಾಯಿಯರದು.

ಆದರೆ ಅದಕ್ಕೆ ಹೆಚ್ಚು ಹಣ ಖರ್ಚಾಗುತ್ತದೆ. ಖರ್ಚಿಲ್ಲದೆ ಇದನ್ನ ಸಾಧ್ಯವಾಗಿಸುವ ಬಗೆಯನ್ನ ಒಂದಷ್ಟು ಕಮ್ಯುನಿಟಿ ಗ್ರೂಪ್ ಗಳು ಕಂಡು ಕೊಂಡಿವೆ. ಲಂಡನ್ ನಲ್ಲಿ ಯಾರೊ ತಂದೆ ತಾಯಿಯರು ತಮ್ಮ ಮಕ್ಕಳು ಸ್ಪ್ಯಾನಿಷ್ ಕಲಿಯಲಿ ಅನ್ನುವ ಆಸೆ ಹೊಂದಿರುತ್ತಾರೆ. ಸರಿ ಲಂಡನ್ ನ ಮಕ್ಕಳು ಬಾರ್ಸಿಲೋನಾ ಗೆ , ಇಲ್ಲಿನ ಮಕ್ಕಳು ಅಲ್ಲಿಗೆ ಬೇಸಿಗೆ ರಜದಲ್ಲಿ ಪೂರ್ಣ ಎರಡು ತಿಂಗಳು ಸ್ಥಾನ ಬದಲಾಯಿಸಿಕೊಳ್ಳುತ್ತಾರೆ. ಅಲ್ಲಿನ ರೀತಿ ನೀತಿಗೆ ಹೊಂದಿ ಕೊಂಡು , ಆ ಮನೆಯ ಕಟ್ಟಳೆಗಳನ್ನ ಒಪ್ಪಿಕೊಂಡು ಮಕ್ಕಳು ಇರಬೇಕಾಗುತ್ತದೆ.

 ಮುಜೆ ಔರ್ ತೋಡಾ 'ಗಟ್ಟಿ ಚಟ್ನಿ' ಚಾಯಿಯೇ ! ಕನ್ನಡ ಉಳಿಸುವುದು ನಮ್ಮ ಕೈಲಿದೆ !! ಮುಜೆ ಔರ್ ತೋಡಾ 'ಗಟ್ಟಿ ಚಟ್ನಿ' ಚಾಯಿಯೇ ! ಕನ್ನಡ ಉಳಿಸುವುದು ನಮ್ಮ ಕೈಲಿದೆ !!

ಇದರಿಂದ ಸ್ಪ್ಯಾನಿಷ್ ಬಾರದ ಮಕ್ಕಳು ಸ್ಥಳೀಯ ಸ್ಪಾನಿಷರಿಂದ ಸ್ಪ್ಯಾನಿಷ್ ಕಲಿಯುತ್ತಾರೆ. ಇಂಗ್ಲಿಷ್ ಬಾರದ ಮಕ್ಕಳು ಸ್ಥಳೀಯ ಬ್ರಿಟಿಷರಿಂದ ಇಂಗ್ಲಿಷ್ ಕಲಿಯುತ್ತವೆ. ಎರಡೂ ಕಡೆಯ ಪೋಷಕರಿಗೆ ಹೊಸದಾಗಿ ಹಣ ವೆಚ್ಚವಾಗಿದ್ದು ಕೇವಲ ಏರ್ ಟಿಕೆಟ್ ಹಣ ಮಾತ್ರ ! ಗಮನಿಸಿ ಈ ರೀತಿಯ ಎಕ್ಸ್ಚೇಂಜ್ ಪ್ರೋಗ್ರಾಮ್ ನಲ್ಲಿ ಭಾಗವಹಿಸುವರು ನೆಂಟರಲ್ಲ , ಹೋಗಲಿ ತೀರಾ ಪರಿಚಯದವರು ಅಲ್ಲ. ಬಟ್ ಈ ರೀತಿಯ ಒಂದು ಹೊಸ ಸಂಬಂಧ ಬೆಳೆಯುತ್ತೆ , ಮಗು ಹೆಣ್ಣು ಅಥವಾ ಗಂಡು ಎನ್ನುವ ಭೇದಭಾವ ಕೂಡ ಇಲ್ಲ .

ಇಷ್ಟಲ್ಲ ಆಗುವುದು ನಂಬಿಕೆಯಿಂದ , ಜಗತ್ತು ನೆಡೆಯುತ್ತಿರುವುದು ನಂಬಿಕೆಯಿಂದ , ನಂಬಿಕೆಗೆ ತತ್ವಾರ ಬಂದರೆ ? ಯಾವುದೇ ದೇಶವನ್ನಾಗಲಿ ಅಥವಾ ಆಯಾ ದೇಶದ ರೀತಿ ನೀತಿಗಳನ್ನ ತುಲನೆ ಮಾಡುವುದು ಸರಿಯಲ್ಲ ಎನ್ನುವುದು ನನ್ನ ನಂಬಿಕೆ. ಆದರೂ , ಬೇಡವೆಂದರೂ ಕೆಲ ದಿನಗಳ ಹಿಂದೆ ನಡೆದ ಮೈಸೂರಿನ ಅತ್ಯಾಚಾರ ಪ್ರಕರಣ ನೆನಪಿಗೆ ಬರುತ್ತದೆ. ಎಲ್ಲಕ್ಕೂ ಹೆಣ್ಣನ್ನೇ ಮತ್ತು ಹೆಣ್ಣನ್ನ ಮಾತ್ರವೇ ಪ್ರಶ್ನಿಸುವ ನಮ್ಮ ಸಮಾಜ ಬದಲಾಗುವುದೆಂದು ಎಂದು ಮನಸ್ಸು ರೋಧಿಸುತ್ತದೆ.

ನಮ್ಮ ಚಿಂತೆನಗಳು ಬದಲಾಗದೆ ಸಮಾಜ ಬದಲಾವಣೆ ಸಾಧ್ಯವಿಲ್ಲ. ಶಾಲೆಗೆ ಹೋದ ಮಗು ಸುಖವಾಗಿ ಬಂದರೆ ಸಾಕು ಎನ್ನುವಷ್ಟು, ಸುತ್ತಾಡಲು ಹೋದ ಮಗಳು ಖುಷಿಯಾಗಿ ತಿರುಗಿ ಬಂದರೆ ಸಾಕು ಎನ್ನುವ ಸಮಾಜದಲ್ಲಿ ಹೊಸ ಭಾಷೆ ಕಲಿಕೆಗೆ ಎಕ್ಸ್ಚೇಂಜ್ ಪ್ರೋಗ್ರಾಮ್ ಗಳನ್ನ ಸೃಷ್ಟಿಸುವುದು ಸದ್ಯದ ಮಟ್ಟಿಗಂತೂ ಸಾಧ್ಯವಿಲ್ಲದ ಮಾತು ಎನ್ನಿಸುತ್ತಿದೆ.

ಇನ್ನೊಂದು ಅಚ್ಚರಿ ತರಿಸುವ ಮತ್ತು ನಾವು ಬದಲಾಗಬೇಕು ಎನ್ನಿಸುವ ವಿಷಯವನ್ನ ಕೂಡ ಇಲ್ಲಿ ಹಂಚಿಕೊಳ್ಳುವೆ. ಸ್ಪೇನ್ ನಲ್ಲಿ ಅತ್ಯಾಚಾರ ಪ್ರಕರಣಗಳು ಇಲ್ಲವೆಂದಲ್ಲ, ಅಲ್ಲಿಯೂ ಇಂತಹ ಘಟನೆಗಳು ಅಲ್ಲೊಂದಿ ಇಲ್ಲೊಂದು ನಡೆಯುತ್ತವೆ. ಆದರೆ ಅಲ್ಲಿ ಹೆಣ್ಣನ್ನ ಮಾತ್ರ ಪ್ರಶ್ನಿಸುವುದಿಲ್ಲ. ಅದ್ಯಾಕೆ ಆ ವೇಳೆಯಲ್ಲಿ ಹೋಗಿದ್ದೆ ? ಅಂತಹ ಡ್ರೆಸ್ ಹಾಕಿದ್ದೆ ? ಇತ್ಯಾದಿ ಪ್ರಶ್ನೆಗಳನ್ನ ಸಮಾಜ ಕೇಳುವುದಿಲ್ಲ. ಅದಕ್ಕೆಂದು ನ್ಯಾಯಾಲಯವಿದೆ. ಜನ ತೀರ್ಪನ್ನ ಕೊಡುವುದಿಲ್ಲ.

ಹೀಗೆ ಅತ್ಯಾಚಾರ ಇರಬಹದು ಅಥವಾ ಟೆರರಿಸಂ ಅಥವಾ ಇನ್ನ್ಯಾವುದೇ ಆರೋಪವನ್ನ ಹೊತ್ತ ವ್ಯಕ್ತಿಯ ಮುಖವನ್ನ ರಾಜಾರೋಷವಾಗಿ ಮಾಧ್ಯಮಗಳು ಬಿತ್ತರಿಸುತ್ತದೆ. ಅಚ್ಚರಿ ಎನ್ನಿಸುವಂತೆ ಆರೋಪಿಯ ಪಕ್ಕದಲ್ಲಿ ನಿಂತ ಪೋಲೀಸರ ಮುಖವನ್ನ ಬ್ಲರ್ ಮಾಡಿ ತೋರಿಸುತ್ತದೆ. ಫೋಟೋ ಇರಬಹದು ಅಥವಾ ವಿಡಿಯೋ ಇದು ಇಲ್ಲಿನ ಮಾಧ್ಯಮಗಳು ನಡೆಸಿಕೊಂಡು ಬಂದಿರುವ ಪರಿಯಿದು. ಇವರ ಲೆಕ್ಕಾಚಾರ ಬಹಳ ಸರಳ , ಆರೋಪಿಯ ಮುಖ ಜನರಿಗೆ ತಿಳಿದಿರಬೇಕು.

ಹೀಗಾಗಿ ಆತ ಮತ್ತೊಮ್ಮೆ ಅಂತಹ ಅಪರಾಧ ಮಾಡಲು ಸಾಧ್ಯವಿಲ್ಲ ಎನ್ನುವುದು, ಇನ್ನು ಪೋಲೀಸರ ಮುಖವನ್ನ ಬ್ಲರ್ ಮಾಡುವುದು ಮುಂದಿನ ದಿನದಲ್ಲಿ ಆರೋಪಿಯ ಮನೆಯವರು ಅಥವಾ ಬೇರೆ ಯಾರಾದರೂ ಅವರ ಮೇಲೆ ದ್ವೇಷ ಸಾಧನೆ ಮಾಡದಿರಲಿ ಎನ್ನುವ ಉದ್ದೇಶ. ನಮ್ಮಲ್ಲಿ ಇದಕ್ಕೆ ತದ್ವಿರುದ್ದ ! ಆರೋಪಿಗಳ ಹೆಸರು ಕೂಡ ಹೇಳಲು ನಮ್ಮ ವ್ಯವಸ್ಥೆ ತಿಣುಕುತ್ತದೆ. ಅಲ್ಲಿ ಕೂಡ ಜಾತಿ , ಧರ್ಮ ಇತ್ಯಾದಿಗಳ ಲೆಕ್ಕಾಚಾರ ಶುರುವಾಗುತ್ತದೆ.

ಆರೋಪಿಗೆ ಯಾವುದೇ ಧರ್ಮ ಅಥವಾ ಜಾತಿಯಿಲ್ಲ , ಆತ ಕೇವಲ ದುಷ್ಟ ಎಂದು ಮತ್ತೆ ಪ್ರಲಾಪ ಕೂಡ ಶುರುವಿಟ್ಟುಕೊಳ್ಳುತ್ತದೆ. ಎಲ್ಲಿಯವರೆಗೆ ನಾವು ಡಾಂಬಿಕತೆಯನ್ನ ಬಿಡುವುದಿಲ್ಲ ಅಲ್ಲಿಯವರೆಗೆ ನಾವು ಸಮಾಜವಾಗಿ ಉದ್ದಾರವಾಗುವುದು ಸಾಧ್ಯವಿಲ್ಲದ ಮಾತು. ಹೀಗೆ ಆರೋಪಿಯ ಹೆಸರನ್ನ ಕೂಡ ಹೇಳದ ವ್ಯವಸ್ಥೆ , ಕೇಳದ ಜನ ಮಾತ್ರ ಹೆಣ್ಣು ಮಗಳ ಕುಲ ಗೋತ್ರ , ಜಾತಕ ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತಾರೆ ! ಅದು ಅವರ ಹಕ್ಕು ಎನ್ನುವಂತೆ ವರ್ತಿಸುತ್ತಾರೆ !! ಎಲ್ಲಾ ಪ್ರಶೆಗಳೂ ನೋವು ತಿಂದ ಆ ಹೆಣ್ಣು ಮಗಳಿಗೆ ಮಾತ್ರ !! ಇದು ನಮ್ಮ ಸಮಾಜ.

ಆರೋಪಿಯ ಐಡೆಂಟಿಟಿ ಮುಚ್ಚಿಡುವುದು, ಜನ ಸಮಾಜಕ್ಕೆ ಹೆದರಿ ಕೇಸು ದಾಖಲಿಸಿದೆ ಇರುವುದು ಇನ್ನಷ್ಟು ಅಪರಾಧಕ್ಕೆ ಕಾರಣವಾಗುತ್ತದೆ. ಮೈಸೂರಿನ ಅಪರಾಧಿಗಳು ಇಂತಹ ಪ್ರಕರಣ ನಾವು ಮಾಡಿರುವುದು ಮೊದಲೇನಲ್ಲ ಬಹಳಷ್ಟು ಬಾರಿ ಮಾಡಿದ್ದೇವೆ ಆದರೆ ಸಿಕ್ಕಿಹಾಕಿಕೊಂಡದ್ದು ಮಾತ್ರ ಮೊದಲು ಎನ್ನುವ ಹೇಳಿಕೆ ನೀಡಿದ್ದಾರೆ. ಇದು ಆದದ್ದು ಏಕೆ ಎನ್ನುವುದನ್ನ ಪ್ರಶ್ನಿಸಿಕೊಂಡು ನೋಡಿ ? ಸಮಾಜವನ್ನ ದೊಷಿಸುವ ಮುನ್ನ ಒಂದಷ್ಟು ಯೋಚಿಸಿ ನೋಡಿ .

ಇದಾಗಿದ್ದು ನಮ್ಮಿಂದ ! ಹೌದಲ್ಲವೇ ? ನಾವು ಶೀಲವೆಂದರೆ ಅದು ಕೇವಲ ಹೆಣ್ಣಿಗೆ ಎನ್ನುವಂತೆ ಭಾವನೆ ಬಿತ್ತಿರುವುದು ಇದಕ್ಕೆ ಕಾರಣ. ಯಾರನ್ನೂ ನಿಂದಿಸುವ ಮುನ್ನಾ ಕೇವಲ ನಮ್ಮ ಪರಿಧಿಯಲ್ಲಿ ಬರುವರು ಮಾತ್ರ ನಮ್ಮವರಲ್ಲ , ಬೇರೆಯವರು ಕೂಡ ಅಲ್ಲವೇ ? ನಮ್ಮ ಪರಿಧಿಯಲ್ಲಿ ಇರುವಂತೆ ಆಕೆ ಯಾರಿಗೂ ತಂಗಿ , ಅಕ್ಕ , ಅಮ್ಮ , ಮಗಳು , ಗೆಳತಿ , ಹೆಂಡತಿ ಆಗಿರುತ್ತಾಳೆ, ಇಷ್ಟು ಸಾಮಾನ್ಯ ಜ್ಞಾನ ನಮ್ಮದಾಗಿರಲಿ.

ಇದೆಲ್ಲಾ ಬರೆಯುವ ಉದ್ದೇಶ ನಾವು ಪಾಶ್ಚಾತ್ಯರನ್ನ ತೆಗೆಳುವುದು ಮಾಡುತ್ತೇವೆ. ಕೆಲವು ಭಾರತೀಯ ಪುರುಷರು ಎಲ್ಲಾ ಪಾಶ್ಚಾತ್ಯ ಮಹಿಳೆಯರು 'ಈಸಿಲಿ ಅವೈಲಬಲ್' ಎನ್ನುವ ರೀತಿಯಲ್ಲಿ ಮಾತನಾಡುವುದನ್ನ , ವ್ಯವಹರಿಸುವನ್ನ ಕಣ್ಣಾರೆ ಕಂಡ ಅನುಭವ ನನ್ನದು. ಸ್ವಾಮಿ ನಿಮ್ಮ ಅನಿಸಿಕೆ ತಪ್ಪು. ಹೆಣ್ಣು ಯಾವ ದೇಶದ ಹೆಣ್ಣಾಗಿರಲಿ ಆಕೆ ಬಯಸುವುದು ಬೆಚ್ಚನೆಯ ಪ್ರೀತಿ ಮತ್ತು ಭದ್ರತೆಯನ್ನ ಮಾತ್ರ ! ಹೆಣ್ಣನ್ನ ಕೀಳಾಗಿ ಕಾಣುವ ಯಾವ ಸಮಾಜವೂ ಉದ್ಧಾರವಾಗುವುದಿಲ್ಲ.

ಹೆಣ್ಣು ಗಂಡು ಬದುಕಿನ ರಥದ ಎರಡು ಚಕ್ರಗಳು , ಎಲ್ಲಕ್ಕೂ ಮುಖ್ಯವಾಗಿ ದೈಹಿಕ ವ್ಯತ್ಯಾಸ ಬಿಟ್ಟರೆ ಆತ್ಮವೊಂದೇ ಅಲ್ಲವೇ ? ಇದನ್ನೇ ಭಾರತೀಯ ಸಂಸ್ಕೃತಿ ಹೇಳುವುದು ಅಲ್ಲವೇ ? ನಾವು ಬೇರೆ ದೇಶದ ಜನರನ್ನ ನೋಡಿ ಕಲಿಯುವುದು ಬೇಡ , ನಮ್ಮ ಸಂಸ್ಕಾರಗಳನ್ನ ಒಂದಷ್ಟು ಮೆಲಕು ಹಾಕಿದರೆ ಮತ್ತು ಅದನ್ನ ಕಾರ್ಯರೂಪಕ್ಕೆ ತಂದರೆ ಅಷ್ಟು ಸಾಕು. ಇದನ್ನ ಮಾಡಬೇಕಾಗಿರುವ ವಿದ್ಯಾಲಯಗಳು ಒಂದು ಘಟನೆಯನ್ನ ನೋಡಿ ಆರೂವರೆ ಮೇಲೆ ಹೆಣ್ಣು ಮಕ್ಕಳು ಹೊರಗೆ ಹೋಗುವಂತಿಲ್ಲ ಎಂದು ಷರಾ ಹೊರಡಿಸುತ್ತದೆ.

ಸಮಾಜ ಮೌನವಾಗಿ ಸಮ್ಮತಿಸುತ್ತದೆ. ಬದಲಾವಣೆ ಎನ್ನುವುದು ಸದಾ ಮರೀಚಿಕೆಯಾಗಿ ಉಳಿದು ಹೋಗುತ್ತದೆ. ಭೌಗೋಳಿಕವಾಗಿ ವಾಸಸ್ಥಾನ ಬದಲಾಗುವುದರಿಂದ ಎಷ್ಟೆಲ್ಲಾ ಬದಲಾವಣೆಗಳಾಗುತ್ತವೆ ಎನ್ನವುದು ಅಚ್ಚರಿ ಹುಟ್ಟಿಸುತ್ತದೆ. ನಾವು ಬದಲಾಗದೆ ವ್ಯವಸ್ಥೆ ಬದಲಾಗದು ಎನ್ನುವುದು ನನ್ನ ಗಟ್ಟಿ ನಂಬಿಕೆ.

English summary
Barcelona Memories Column By Rangaswamy Mookanahalli Part 46,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X