ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕೆಂದರೆ ಹೀಗೆ ಅಲ್ವಾ ? ಗೊತ್ತಿಲ್ಲದೇ ಬಾಂಧ್ಯವ್ಯಗಳು ಬೆಸೆದು ಕೊಂಡು ಬಿಡುತ್ತವೆ

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ನೀವು ಎಲ್ಲಿ ಹುಟ್ಟಿದ್ದು ? ಎನ್ನುವ ಪ್ರಶ್ನೆಗೆ ನಾವೆಲ್ಲರೂ ಬಹಳ ಖುಷಿಯಿಂದ ನಾವು ಹುಟ್ಟಿದ ಊರಿನ ಹೆಸರು ಹೇಳುತ್ತೇವೆ ಅಲ್ವಾ ? ಮಗು ಏರ್ ಬಾರ್ನ್ ಅಥವಾ ಸ್ಕೈ ಬಾರ್ನ್ ಆದರೆ ? ಅಂದರೆ ಮಗು ವಿಮಾನದಲ್ಲಿ ಪ್ರಯಾಣ ಮಾಡುವಾಗ ಹುಟ್ಟಿದ್ದರೆ ? ಆ ಮಗುವಿನ ಹುಟ್ಟೊರು ಯಾವುದು ಅಂತ ನಮೂದಿಸುವುದು ? ಇಂತಹ ಒಂದು ಸನ್ನಿವೇಶದ ಬಗ್ಗೆ ನಾನು ಯೋಚಿಸಿರಲಿಲ್ಲ . ನಿತ್ಯ ರಾತ್ರಿ ಊಟವಾದ ಬಳಿಕ ಅನ್ನಿ ಜೊತೆ ಪಾರ್ಕ್ ನಲ್ಲಿ ಎರಡು ಕಿಲೋಮೀಟರ್ ವಾಕ್ ಮಾಡುವುದು ಅಭ್ಯಾಸ .

ಆಗವಳು ಕೇಳುವ ಪ್ರಶ್ನೆಗಳು ಅನೇಕ. ನಿನ್ನೆಯ ಪ್ರಶ್ನೆ ಮಗು ವಿಮಾನದಲ್ಲಿ ಹುಟ್ಟಿದರೆ ಯಾವ ಊರು ಅಂತ ಹೇಳಬೇಕು ? ಅನ್ನುವುದು . ಇದರ ಬಗ್ಗೆ ಒಂದಷ್ಟು ಸಂಶೋಧನೆ ಮಾಡಿದಾಗ ತಿಳಿದದ್ದು ನಿಮಗಾಗಿ ಇಲ್ಲಿದೆ . ಸಾಮನ್ಯವಾಗಿ ತುಂಬು ಗರ್ಭಿಣಿಯರನ್ನ ವಿಮಾನದಲ್ಲಿ ಪ್ರಯಾಣ ಮಾಡಲು ಬಿಡುವುದಿಲ್ಲ . ಹೀಗಾಗಿ ಇಂತಹ ಘಟನೆಗಳು ಬಹಳ ಕಡಿಮೆ . 1929 ರಿಂದ ಇಲ್ಲಿಯವರೆಗೆ ಒಂದಷ್ಟು ಡಜನ್ ಮಕ್ಕಳು ವಿಮಾನದಲ್ಲಿ ಹುಟ್ಟಿದ್ದಾರೆ .

ನಮ್ಮ 'ಊರಹಬ್ಬ' ಇಲ್ಲಾಗಿದೆ, 'ಫಿಯೆಸ್ತಾ ದೆ ಬಾರಿಯೋ' ! ನಮ್ಮ 'ಊರಹಬ್ಬ' ಇಲ್ಲಾಗಿದೆ, 'ಫಿಯೆಸ್ತಾ ದೆ ಬಾರಿಯೋ' !

ಎಷ್ಟು ವಾರದ ವರೆಗೆ ಬಿಡಬೇಕು ಎನ್ನುವುದು ಆಯಾ ವಿಮಾನ ನೆಡೆಸುವ ಸಂಸ್ಥೆಗಳಿಗೆ ಬಿಟ್ಟದ್ದು . ಕೆಲವು ಸಂಸ್ಥೆಗಳು 28ವಾರದ ನಂತರ ಬಿಡುವುದಿಲ್ಲ , ಕೆಲವು ನಿಗದಿತ ದಿನಾಂಕಕ್ಕೆ ಒಂದುವಾರ ಮುಂಚಿನ ವರೆಗೆ ಬಿಡುತ್ತವೆ . ಆಫ್ಕೋರ್ಸ್ ಡಾಕ್ಟರ್ ಸರ್ಟಿಫಿಕೇಟ್ ಇರಬೇಕು .

Barcelona Memories Column By Rangaswamy Mookanahalli Part 42

ಹಾಗೊಮ್ಮೆ ಮಗು ಮಿಡ್ ಏರ್ ನಲ್ಲಿ ಜನಿಸಿದರೆ ಹಲವಾರು ಸಾಧ್ಯತೆಗಳಿವೆ . ಅವೆಂದರೆ :-

ಸಾಧ್ಯತೆ -1) ಅಪ್ಪ ಅಮ್ಮನ ದೇಶ ಯಾವುದು ಅದನ್ನ ಮಗುವಿನ ಹುಟ್ಟೂರು ಅಥವಾ ಹುಟ್ಟಿದ ದೇಶ ಎನ್ನುವುದು.

ಸಾಧ್ಯತೆ 2) ಮಗು ಜನಿಸಿದಾಗ ವಿಮಾನ ಯಾವ ದೇಶದ ಏರ್ ಸ್ಪೇಸ್ ನಲ್ಲಿತ್ತು ಆ ದೇಶದಲ್ಲಿ ಹುಟ್ಟಿದ್ದು ಎನ್ನುವುದು . ಜಗತ್ತಿನಲ್ಲಿ ಹಲವಾರು ದೇಶಗಳು ಆ ದೇಶದ ಸರಹದ್ದಿನಲ್ಲಿ ಹುಟ್ಟಿದ ಮಕ್ಕಳನ್ನ ತನ್ನ ದೇಶದ ಪ್ರಜೆಗಳು ಎಂದು ಗುರುತಿಸುತ್ತದೆ .

ಸಾಧ್ಯತೆ 3) ವಿಮಾನ ಸಂಸ್ಥೆ ಯಾವ ದೇಶದಲ್ಲಿ ನೊಂದಾಯಿತವಾಗಿರುತ್ತದೆ ಮಗು ಆ ದೇಶಕ್ಕೆ ಸೇರಿದ್ದು ಎನ್ನುವ ಘಟನೆಗಳು ಕೂಡ ಇವೆ . ವಿಮಾನದಲ್ಲಿ ಮಗು ಹುಟ್ಟುವುದು ಬಹಳ ವಿರಳ ಹೀಗಾಗಿ ಇಲ್ಲಿ ಮಗುವಿನ ಹುಟ್ಟೊರು ಮತ್ತು ಪೌರತ್ವದ ಬಗ್ಗೆ ಸಾಕಷ್ಟು ಗೊಂದಲವಿದೆ . ಮೇಲೆ ಹೇಳಿದ ಮೂರು ಸಾಧ್ಯತೆಗಳಲ್ಲಿ ಒಂದು ಮಗುವಿಗೆ ದಕ್ಕುತ್ತದೆ .

ಇನ್ನು ಹೀಗೆ ವಿಮಾನದಲ್ಲಿ ಹುಟ್ಟಿದ ಮಗುವಿಗೆ ಜೀವಮಾನ ಪೂರ್ತಿ ಏರ್ ಟಿಕೆಟ್ ಫ್ರೀ ಸಿಗುತ್ತೆ ಅನ್ನುವುದು ಶುದ್ಧ ಸುಳ್ಳು . ಅವರ ಪ್ರತಿ ಜನ್ಮ ದಿನ ವಿಮಾನ ಸಂಸ್ಥೆ ಫ್ರೀ ಟಿಕೆಟ್ ಕೊಟ್ಟ ಉದಾಹರಣೆ ಇದೆ . ಒಂದಷ್ಟು ಮೈಲ್ಸ್ (ಕ್ರೆಡಿಟ್ ಕಾರ್ಡ್ ಪಾಯಿಂಟ್ಸ್ ತರ ) ಮಗುವಿನ ಹೆಸರಲ್ಲಿ ನೀಡುವುದು ಉಂಟು . ಹೀಗೆ ಹಲವಾರು ಉಡುಗೊರೆ ಸಿಗುತ್ತದೆ . ಆದರೆ ಅದಾವುದು ಕೊಡಲೇ ಬೇಕು ಎನ್ನುವ ಲೆಕ್ಕದಲ್ಲ . ಇದೆಲ್ಲ ಆಯಾ ವಿಮಾನ ಯಾನ ಸಂಸ್ಥೆಗಳನ್ನ ಅವಲಂಬಿಸಿದೆ .

ಜೆಟ್ ಏರ್ವೇಸ್ ನಲ್ಲಿ 2017ರಲ್ಲಿ ಒಂದು ಮಗು ಜನಿಸಿತ್ತು . ಜೆಟ್ ಏರ್ವೇಸ್ ಆ ಮಗುವಿಗೆ ಜೀವಮಾನ ಪೂರಾ ಫ್ರೀ ಟಿಕೆಟ್ ಕೊಡುವುದಾಗಿ ಘೋಷಿಸಿತ್ತು . ಆದರೇನು ಇದೀಗ ಜೆಟ್ ಏರ್ವೇಸ್ ಸಂಸ್ಥೆಯೇ ಇಲ್ಲವಲ್ಲ . ನೀವೇನೇ ಹೇಳಿ ಸ್ವಾಮಿ ಹುಟ್ಟಿದ ಊರು ಯಾವುದು ಅಂದರೆ ನಮ್ಮೂರ ಹೆಸರು ಹೇಳುವುದರಲ್ಲಿ ಬರುವ ಮಜಾ ಮಿಡ್ ಏರ್ ಅಥವಾ ಏರ್ ಬಾರ್ನ್ ಎನ್ನುವುದರಲ್ಲಿ ಬರುವುದಿಲ್ಲ ಅಲ್ವಾ ?

ಇದೆಲ್ಲಾ ಸರಿ ಇಷ್ಟೊಂದು ಪೀಠಿಕೆ ಏಕೆ ಎಂದಿರಾ ? ಅದಕ್ಕೂ ಕಾರಣವಿದೆ. ನಾನು ವಾಸವಿದ್ದ ಕತಲೂನ್ಯದಲ್ಲಿ ಕೂಡ ಇಂತಹುದೇ ಒಂದು ನಿಯಮ ಉಂಟು. ಈ ರಾಜ್ಯದಲ್ಲಿ ಹುಟ್ಟಿದ ಮಗುವನ್ನ ಅವರು ತಮ್ಮ ರಾಜ್ಯದ ಮಗು ಎಂದು ಪರಿಗಣಿಸುತ್ತಾರೆ. ಅಂದರೆ ಅಪ್ಪ-ಅಮ್ಮ ವಲಸಿಗರಾಗಿದ್ದರೂ ಕೂಡ , ಅವರ ಬಳಿ ಲೀಗಲ್ ರೆಸಿಡೆನ್ಸಿಯಲ್ ಸ್ಟೇಟಸ್ ಇದ್ದರೆ ಸಾಕು . ಈ ನೆಲದಲ್ಲಿ ಹುಟ್ಟಿದ ಮಗುವನ್ನ ಈ ದೇಶದ , ರಾಜ್ಯದ ಪ್ರಜೆ ಎಂದು ಕರೆಯುತ್ತಾರೆ.

ಹೀಗಾಗಿ ಮಗುವಿಗೆ ಬೇರೆ ಯಾವುದೇ ರೀತಿಯ ಅಡಚಣೆಗಳಿಲ್ಲದೆ ಇಲ್ಲಿನ ಪೌರತ್ವವನ್ನ ನೀಡಲಾಗುತ್ತದೆ. ಹೀಗಾಗಿ ಅನನ್ಯ ಹುಟ್ಟಿದ್ದಾಗ ಇಲ್ಲಿನ ವೈದ್ಯರು ಮಗುವನ್ನ ಕೈಗಿಡುತ್ತಾ ಇನ್ನೊಬ್ಬಳು ಕತಲಾನಾ ಹುಟ್ಟಿದಳು ಎಂದಿದ್ದರು. ಉಳಿದಂತೆ ಸ್ಪ್ಯಾನಿಷ್ ಭಾಷೆಯನ್ನ ಮಾತನಾಡಲು ಬಾರದ ದೇಶದಿಂದ ಹೋದ ವಲಸಿಗರು ಹತ್ತು ವರ್ಷ ಅಲ್ಲಿ ಜೀವನ ಮಾಡಬೇಕು , ಅಲ್ಲಿನ ಸಮಾಜಕ್ಕೆ ಹೊಂದಿಕೊಳ್ಳಬೇಕು , ಕೆಲಸ ಮಾಡುತ್ತಿರಬೇಕು , ನ್ಯಾಯಯುತವಾಗಿ ತೆರಿಗೆಯನ್ನ ಸಲ್ಲಿಸುತ್ತಿರಬೇಕು .

Barcelona Memories Column By Rangaswamy Mookanahalli Part 42

ಇಷ್ಟೆಲ್ಲಾ ಸರಿಯಾಗಿದೆ ಎಂದರೆ ಆಗ ನೀವು ಈ ದೇಶದ ಪೌರತ್ವಕ್ಕೆ ಅರ್ಹರು . ಅಂದ ಮಾತ್ರಕ್ಕೆ ಎಲ್ಲವೂ ಬೇಗ ಆಗಿಬಿಡುತ್ತದೆ ಎನ್ನುವಂತಿಲ್ಲ. ನೀವು ಕೇವಲ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹರು ಅಷ್ಟೇ ! ಆ ನಂತರದ್ದು ಇನ್ನೊಂದು ಸಾಹಸಗಾಥೆ . ಅರ್ಜಿ ಸಲ್ಲಿಸುವಾಗ ನಾವು ಹುಟ್ಟಿದ ದಿನದಿಂದ ಎಲ್ಲೆಲ್ಲಿ ವಾಸವಿಗಿದ್ದೆವು ಆಯಾ ಸ್ಥಳಗಳಿಂದ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ತೆಗೆದು ಕೊಡಬೇಕು.

ನಮ್ಮ ಬರ್ತ್ ಸರ್ಟಿಫಿಕೇಟ್ ಕೂಡ ನೀಡಬೇಕು. ಸಾಧಾರಣವಾಗೇ ಇವೆಲ್ಲವೂ ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿರುತ್ತದೆ. ಇದನ್ನ ಸ್ಪ್ಯಾನಿಷ್ ಭಾಷೆಗೆ ಅನುವಾದ ಮಾಡಿಸಿ ಅದನ್ನ ನೋಟರಿ ಮಾಡಿಸಿ ನೀಡಬೇಕು. ಆ ನಂತರ ಅವರು ಇದನ್ನ ಪರಿಶೀಲಿಸುತ್ತಾರೆ. ಈ ಪರಿಶೀಲನೆಗೆ ಬರೋಬ್ಬರಿ 18/22 ತಿಂಗಳು ತೆಗೆದುಕೊಳ್ಳುತ್ತಾರೆ. ಇವೆಲ್ಲದರಲ್ಲೂ ನೀವು ಉತ್ತೀರ್ಣರಾದರೆ ಆ ನಂತರ ಒಂದು ಲಿಖಿತ ಮತ್ತು ಮೌಖಿಕ ಪರೀಕ್ಷೆ ಇರುತ್ತದೆ .

ಅಮ್ಮನ ಮುಖದ ಮೇಲೆ ಮೂಡಿ ಮಾಯವಾಗುತ್ತಿದ್ದ ನಗುವನ್ನ ಮರೆಯುವುದು ಹೇಗೆ ?ಅಮ್ಮನ ಮುಖದ ಮೇಲೆ ಮೂಡಿ ಮಾಯವಾಗುತ್ತಿದ್ದ ನಗುವನ್ನ ಮರೆಯುವುದು ಹೇಗೆ ?

ಇಲ್ಲೇನಿದ್ದರೂ ವಲಸಿಗ ಯಾವ ಮಟ್ಟದಲ್ಲಿ ಸ್ಪ್ಯಾನಿಷ್ ಸಮಾಜದಲ್ಲಿ ಬೆರೆತಿದ್ದಾನೆ ಎನ್ನುವುದರ ಪರೀಕ್ಷೆಯಾಗುತ್ತದೆ. ದೇಶದಲ್ಲಿ ಯಾವ ನದಿಗಳಿವೆ , ಮಂತ್ರಿಗಳ ಹೆಸರು , ಪ್ರಸಿದ್ಧ ಕವಿಗಳ ಹೆಸರು , ಆಟಗಾರರ ಹೆಸರು ಇತ್ಯಾದಿಗಳನ್ನ ಕೇಳುತ್ತಾರೆ. ಒಟ್ಟಿನಲ್ಲಿ ನಮ್ಮ ಭಾಷಾ ಪ್ರಾವೀಣ್ಯತೆ ಮತ್ತು ಸಮಾಜದಲ್ಲಿನ ಪ್ರಮುಖ ವಿಷಯಗಳ ಬಗೆಗಿನ ಜ್ಞಾನ ಎರಡನ್ನೂ ಪರೀಕ್ಷಿಸಿ ' ಸರಿ ನೀನು ಇನ್ನು ಮುಂದೆ ನಮ್ಮಲ್ಲಿ ಒಬ್ಬ , ಅರ್ಥಾತ್ ನೀನಿನ್ನು ಸ್ಪ್ಯಾನಿಷ್ ' ಎಂದು ಹೇಳುವಷ್ಟರಲ್ಲಿ 3/4 ವರ್ಷ ಕಳೆದಿರುತ್ತದೆ.

ಅಂದರೆ ಕನಿಷ್ಠ 14/15 ವರ್ಷ ಈ ನೆಲದಲ್ಲಿ ವಾಸ ಮಾಡಿದರೆ ಮಾತ್ರ ಇಲ್ಲಿನ ಪೌರತ್ವ ಗಳಿಸಬಹದು. ನನಗಿನ್ನೂ ಸರಿಯಾಗಿ ನೆನಪಿದೆ , ನಾನು ಬಾರ್ಸಿಲೋನಾ ಸೇರಿದ ನಂತರ ನನ್ನ ಮೊದಲ ಕೆಲಸದ ದಿನ ' ಕೊಮೊ ತೇ ಯಾಮಾಸ್ ?' ಎಂದು ಕೇಳಿದವಳು ಅಂದಿನ ಸಹೋದ್ಯೋಗಿ ಎವಾ (ಇಂಗ್ಲಿಷ್ ನಲ್ಲಿ ಇವಾ ). ನನಗೆ ಅಂದಿಗೆ ಅದೇನು ಎಂದು ಅರ್ಥವಾಗಲಿಲ್ಲ. ನೇಮ್ ., ನೇಮ್ .. ಯುರ್ ನೇಮ್ ಎಂದು ತನಗೆ ತಿಳಿದ ಇಂಗ್ಲಿಷ್ನಲ್ಲಿ ಕೇಳಿದ್ದಳು. ನಾನು ಹೇಳಿದ್ದೆ.
https://kannada.oneindia.com/column/rangaswamy/barcelona-memories-column-by-rangaswamy-mookanahalli-part-39-227904.html

ಹೀಗೆ ಶುರುವಾದ ನಮ್ಮ ಗೆಳೆತನ ಅದನ್ನ ಮೀರಿ ಬೆಸೆದು ಕೊಂಡಿತು. ಸಹೋದರಿಯರಿಲ್ಲ ಎನ್ನುವ ನೋವನ್ನ , ಕೊರತೆಯನ್ನ ತುಂಬಿದವಳು ಎವಾ. ಸ್ಪ್ಯಾನಿಷ್ ಭಾಷೆಯನ್ನ ಸರಾಗವಾಗಿ ಕಲಿಯಲು ಕಾರಣರಾದ ಇಬ್ಬರು ವ್ಯಕ್ತಿಗಳನ್ನ ಜೀವನ ಪೂರ್ತಿ ಮರೆಯುವಂತಿಲ್ಲ . ಒಬ್ಬ ಗೆಳೆಯ ಸಾಲ್ವದೂರ್ , ಇನ್ನೊಬ್ಬಳು ಗೆಳತೀ , ಸಹೋದರಿ ಎವಾ. ಆ ದಿನಗಳಲ್ಲಿ ಮನಸ್ಸಿನಲ್ಲಿ ಭಾರಿ ನೋವು , ಬೇಸರ ತುಂಬಿರುತ್ತಿತ್ತು.ಭಾಷೆ ಬಾರದ , ಸ್ನೇಹಿತರೂ , ಬಂಧು ಬಳಗ ಏನೂ ಇಲ್ಲದ, ತಿನ್ನಲು ನನಗೆ ಬೇಕಾದ ಆಹಾರ ಕೂಡ ಸಿಗದ ದೇಶದಲ್ಲಿ ಬದುಕುವುದು ಅದಕ್ಕೆ ಕಾರಣವಾಗಿತ್ತು.

ತೀರಾ ಒಂಟಿ ಎನ್ನುವ ಭಾವನೆ ಕಾಡಿದ್ದು ಆ ದಿನಗಳಲ್ಲಿ . ಅಂತಹ ಕಷ್ಟದ ದಿನಗಳಲ್ಲಿ ಕೈ ಹಿಡಿದು ನಡೆಸಿದ್ದು ಎವಾ ಮತ್ತು ಸಾಲ್ವದೂರ್. ಅಣ್ಣನೋ , ಅಕ್ಕನೋ ಆಗಬೇಕಂದರೆ ಅದು ರಕ್ತ ಹಂಚಿಕೊಂಡೆ ಹುಟ್ಟಿರಬೇಕು ಎಂದೇನಿಲ್ಲ ಎನ್ನುವುದರ ಅನುಭವ ಮಾಡಿಸಿದ್ದು ಇವರಿಬ್ಬರು. ಅದರಲ್ಲೂ ಇವಾಳ ಋಣವನ್ನ ತೀರಿಸುವುದು ಹೇಗೆ ? ಸ್ಪೇನ್ ದೇಶದ ರೆಸಿಡೆನ್ಸಿ ಪರ್ಮಿಟ್ ಗೆ ಭಾಷೆ ಬಾರದ ನನ್ನ ಜೊತೆ ಬಹಳಷ್ಟು ಬಾರಿ ಸಿಟಿ ಮುನಿಸಿಪಲ್ ಕಾರ್ಪೋರೇಶನ್ ಗೆ , ಪೊಲೀಸ್ ಸ್ಟೇಷನ್ ಗೆ ತಿರುಗಿದ್ದಾಳೆ.

ವಾರದ ಐದು ದಿನ ಹೇಗೋ ಕಳೆದು ಹೋಗುತ್ತಿತ್ತು , ವಾರಾಂತ್ಯ ಕಳೆಯುವುದು ಬಹಳ ಕಷ್ಟವಾಗುತ್ತಿತ್ತು . ಆಗೆಲ್ಲಾ ಕೂಡ ಎವಾ ಅವಳ ಗಂಡ ಹೋಸೆ ಲೂಯಿಸ್ ಜೊತೆಯಲ್ಲಿ ಸಮಯ ಕಳೆದದ್ದು ಮರೆಯುವಂತಿಲ್ಲ . ಹಾಗೆಯೆ ಮೋನ್ಸ್ರಾತ್ ಬೆಟ್ಟದ ತಪ್ಪಲಲ್ಲಿ ಮನೆಯನ್ನ ಮಾಡಿದ್ದ ಸಾಲ್ವ ಕೂಡ ಬಹಳಷ್ಟು ವಾರಾಂತ್ಯ ಒಂಟಿತನಕ್ಕೆ ಸಾಥ್ ನೀಡಿದ ಗೆಳೆಯ. ಇಂದಿಗೂ ಇವರಿಬ್ಬರೊಡನೆ ಬಾಂಧ್ಯವ ಹಾಗೆ ಮುಂದುವರಿದಿದೆ.

ಎವಾ ಕೇವಲ ಗೆಳತಿಯಾಗಿ , ಸಹೋದ್ಯೋಗಿಯಾಗಿ ಉಳಿದುಕೊಳ್ಳದೆ ಸಹೋದರಿಯಾಗಿ ಉಳಿದುಕೊಳ್ಳಲು ಕಾರಣ , ಆಕೆಯ ಗುಣ. ವಲಸಿಗ ಎನ್ನುವ ತಾರತಮ್ಯ ಮಾಡದೆ. ವಿಶ್ವಾಸದಿಂದ ಕಂಡಳು. ರಮ್ಯ ಮತ್ತು ನಾನು ಹಲವಾರು ಬಾರಿ ಮಗುವನ್ನ ಸ್ಪೇನ್ ನೆಲದಲ್ಲಿ ಬರ ಮಾಡಿಕೊಳ್ಳಬೇಕೆ ಅಥವಾ ಭಾರತಕ್ಕೆ ಮರಳಬೇಕೆ ಎನ್ನುವಾಗೆಲ್ಲ ನಮ್ಮ ಮುಂದೆ ಬರುತ್ತಿದ್ದ ಪ್ರಶ್ನೆ , ಇಲ್ಲೇನಾದರೂ ಹೆಚ್ಚು ಕಡಿಮೆಯಾದರೆ ನಮಗಾರು ಗತಿ ಎನ್ನುವುದು.

ಆ ದಿನಗಳಲ್ಲಿ ಇದೊಂದು ಅತ್ಯಂತ ಜಟಿಲ ಪ್ರಶ್ನೆಯಾಗಿತ್ತು. ರಮ್ಯಳ ಜೊತೆ ವೈದ್ಯರನ್ನ ಕಾಣಲು ಕೂಡ ಎವಾ ಜೊತೆಯಾಗುತ್ತಿದ್ದಳು . ಅನನ್ಯ ಸ್ಪೇನ್ ದೇಶದ ಪ್ರಜೆಯಾಗಲು ಎವಾ ನೀಡಿದ ಧೈರ್ಯ , ಸಹಕಾರ ಕೂಡ ಕಾರಣ. ಮೊದಲ ದಿನ ಭಾಷೆ ಬಾರದ ಒಬ್ಬ ವಲಸಿಗ ಹುಡುಗನಿಗೆ ಬೆಂಬಲ ನೀಡಿದ್ದು ಮರೆಯುವಂತಿಲ್ಲ. ಮುಂದಿನ ಕೆಲವೇ ಕೆಲವು ವರ್ಷಗಳಲ್ಲಿ ನನಗೆ ಸ್ಪೇನ್ ದೇಶದ ವಲಸೆ ನೀತಿಗಳು ಬಾಯಿಪಾಠ ಆದವು.

ಹತ್ತಾರು ಜನ ವಲಸೆ ನೀತಿಯ ಬಗ್ಗೆ ನನ್ನ ಕೇಳುವ ಮಟ್ಟಕ್ಕೆ ಜ್ಞಾನವನ್ನ ವೃದ್ಧಿಸಿಕೊಂಡೆ. ಇಂದಿಗೂ ಸ್ಪೇನ್ , ಜೊತೆಗೆ ಯೂರೋಪಿನ ವಲಸೆ ನೀತಿಯಲ್ಲಿ ಅತೀವ ಆಸಕ್ತಿ ಉಳಿದುಕೊಂಡಿದೆ. ಕಲಿಕೆ ಮುಂದುವರಿದಿದೆ. ನಿನ್ನೆ ಅಂದರೆ ಆಗಸ್ಟ್ ತಿಂಗಳ ಮೊದಲ ದಿನ ವಿಶ್ವ ಸ್ನೇಹಿತರ ದಿನವಂತೆ , ಹೀಗಾಗಿ ಇಷ್ಟೆಲ್ಲಾ ಬರೆಯುವಂತಾಯ್ತು. ಬದುಕೆಂದರೆ ಹೀಗೆ ಅಲ್ವಾ ? ಗೊತ್ತಿಲ್ಲದೇ ಬಾಂಧ್ಯವಗಳು ಬೆಸೆದು ಕೊಂಡು ಬಿಡುತ್ತವೆ.

English summary
Barcelona Memories Column By Rangaswamy Mookanahalli Part 42,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X