ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ 'ಊರಹಬ್ಬ' ಇಲ್ಲಾಗಿದೆ, 'ಫಿಯೆಸ್ತಾ ದೆ ಬಾರಿಯೋ' !

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಸ್ಪೇನ್ ದೇಶದಲ್ಲಿ ಕಾಸ್ಟೈಲ್ ಯೀ ಲಿಯಾನ್ ಎನ್ನುವ ರಾಜ್ಯವಿದೆ, ಇಲ್ಲಿ ವಾಯದೋಲಿದ್ ಎನ್ನುವ ಪ್ರಮುಖ ನಗರವಿದೆ. ( ರಾಜಧಾನಿ ಎಂದು ಘೋಷಿಸಿಲ್ಲ ) ಈ ರಾಜ್ಯ ಪೋರ್ಚುಗಲ್ ದೇಶದೊಂದಿಗೆ ಸರಹದ್ದು ಹಂಚಿಕೊಂಡಿದೆ . ವಾಯದೋಲಿದ್ ನಗರದಿಂದ ಈಶಾನ್ಯ ದಿಕ್ಕಿಗೆ 55 ಕಿಲೋಮೀಟರ್ ಪ್ರಯಾಣಿಸಿದರೆ ಸಿಗುವ ಊರಿನ ಹೆಸರು ಊರೇನ್ಯ . ಏನಪ್ಪಾ ವಿಶೇಷ ಊರೇನ್ಯದ್ದು ಎಂದಿರಾ ?

ಮಜಾ ಇರೋದು ಅಲ್ಲೇ ಯೂರೋಪಿನ ಬೆಲ್ಜಿಯಂ , ಹಾಲೆಂಡ್ ಮತ್ತು ಫ್ರಾನ್ಸ್ ದೇಶಗಳಲ್ಲಿ ಬುಕ್ ವಿಲೇಜ್ ಉಂಟು ! ಸ್ಪೇನ್ ದೇಶದ ಊರೇನ್ಯ Villa del Libro ಅಂದರೆ ಗ್ರಂಥಾಲಯಗಳ ಹಳ್ಳಿ !! ಎಂದು ಪ್ರಸಿದ್ದಿ ಪಡೆದಿದೆ. ಮುಕ್ಕಾಲು ಪಾಲು ಯೂರೋಪಿನ ಹಳ್ಳಿ ಮತ್ತು ನಗರಗಳಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಗಳ ಸಂಖ್ಯೆ ಅತಿ ಹೆಚ್ಚು ಆದರೆ ಇಲ್ಲಿ ಬಾರ್ ಮತ್ತು ರೆಸ್ಟೋರೆಂಟ್ ಸಂಖ್ಯೆಗಿಂತ ಗ್ರಂಥಾಲಯ ಗಳ ಸಂಖ್ಯೆ ಹೆಚ್ಚು .

ಅಮ್ಮನ ಮುಖದ ಮೇಲೆ ಮೂಡಿ ಮಾಯವಾಗುತ್ತಿದ್ದ ನಗುವನ್ನ ಮರೆಯುವುದು ಹೇಗೆ ?ಅಮ್ಮನ ಮುಖದ ಮೇಲೆ ಮೂಡಿ ಮಾಯವಾಗುತ್ತಿದ್ದ ನಗುವನ್ನ ಮರೆಯುವುದು ಹೇಗೆ ?

ಮಕ್ಕಳಿಗಾಗಿ Story Museum ಇದೆ . ಅಲೈಸ್ ಇನ್ ವಂಡರ್ ಲ್ಯಾಂಡ್ ಸಿಂಡ್ರೆಲಾ .. ತಂಬಲಿನಾ .... ಹೀಗೆ ಪಟ್ಟಿ ಸಾಗುತ್ತೆ . ಮಕ್ಕಳ ಕಲ್ಪನೆಗೆ ಇಲ್ಲಿ ಹೆಚ್ಚು ಒತ್ತು . ' ಇಮ್ಯಾಜಿನೇಷನ್ ಇಸ್ ಮೊರ್ ಇಂಪಾರ್ಟೆಂಟ್ ದಾನ್ ನಾಲೆಡ್ಜ್ ' ಎನ್ನುವ ಐನ್ಸ್ಟೀನ್ ಮಾತು ಇಲ್ಲಿ ಬರಿ ಅಕ್ಷರದಲ್ಲಿ ಉಳಿಯದೆ ಕಾರ್ಯರೂಪಕ್ಕೆ ಬಂದಿದೆ . ಹಾಲೆಂಡ್ , ಫ್ರಾನ್ಸ್ ಮತ್ತು ಸ್ಪೇನ್ ನ ಪುಸ್ತಕಗಳ ನಗರಕ್ಕೆ ಭೇಟಿ ಕೊಡಲು ಸಾಧ್ಯವಾಗಿಲ್ಲವಾದರೆ ಬೇಸರಿಸುವುದು ಬೇಡ! ಭಿಲಾರ್, ಮಹಾರಾಷ್ಟ್ರದ ಸತಾರ ಜಿಲ್ಲೆಯ ಪುಟ್ಟ ಗ್ರಾಮ ಇದು "ಪುಸ್ತಕಾಂಚೆ ಗಾಂವ್" ಎಂದು ಪ್ರಸಿದ್ದಿ ಪಡೆದಿದೆ .

Barcelona Memories Column By Rangaswamy Mookanahalli Part 41

ಇಲ್ಲಿ 25ಕ್ಕೂ ಹೆಚ್ಚು ಸ್ಥಳಗಳನ್ನು ಪುಸ್ತಕಗಳನ್ನು ಓದುವ ಸ್ಥಳವಾಗಿ ಮಾರ್ಪಾಡು ಮಾಡಲಾಗಿದೆ ಮತ್ತು ಸುಮಾರು ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಈ ಹಳ್ಳಿಯನ್ನ ವಿವಿಧ ಕಲಾವಿದರು ಸೇರಿ ಅಂದವಾಗಿ ಚಿತ್ರಿಸಿ ಗ್ರಂಥಾಲಯಯದ ಘನತೆ ಹೆಚ್ಚಿಸಿದ್ದಾರೆ . ಇಲ್ಲಿ ಹದಿನೈದು ಸಾವಿರಕ್ಕೂ ಮೀರಿದ ಮರಾಠಿ ಪುಸ್ತಕಗಳ ದಾಸ್ತಾನಿದೆ , ಒಟ್ಟು ಪುಸ್ತಕಗಳ ಸಂಖ್ಯೆ ಎರಡು ಕೋಟಿ !! . ಓದುಗರಿಗೆ ಆರಾಮಾಗಿ ಕೂರುವ ವ್ಯವಸ್ಥೆ ಕೂಡ ಮಾಡಲಾಗಿದೆ . ಇರಲಿ ವಿಷಯಾಂತರವಾಗುವುದು ಬೇಡ.

ಇಲ್ಲಿನ ಜನರಲ್ಲಿ ಓದುವ ಹವ್ಯಾಸ ಹೆಚ್ಚಾಗಿದೆ. ನಗರದ ಮೆಟ್ರೋಗಳಲ್ಲಿ ನೀವು ಪ್ರಯಾಣಿಸಿದರೆ ಪುಸ್ತಕವನ್ನ ಕೈಲಿಡಿದು ಅದರಲ್ಲಿ ಮುಳುಗಿ ಹೋಗುವರ ಸಂಖ್ಯೆ ಬಹಳ ಹೆಚ್ಚು. ಇತ್ತೀಚಿನ ದಿನಗಳಲ್ಲಿ ಮೊಬೈಲ್ ರಾಕ್ಷಸ ಈ ಜಾಗವನ್ನ ಆಕ್ರಮಿಸುತ್ತಿರುವುದನ್ನ ನಾವು ಕಾಣಬಹದು. ಇನ್ನು ಶಾಲೆಯಲ್ಲಿ ಕಲಿಕೆಯೂ ಅಷ್ಟೇ , ಮಕ್ಕಳ ಬೇಕು ಬೇಡ ಮತ್ತು ಅವರ ಇಚ್ಚೆಗಳನ್ನ ಅರಿತು ಅದರಲ್ಲಿ ಅವರಿಗೆ ಪ್ರೋತ್ಸಾಹವನ್ನ ನೀಡುತ್ತಾರೆ. ಇಷ್ಟೆಲ್ಲಾ ಸವಲತ್ತುಗಳು ನೀಡಿಯೂ ಬಹಳಷ್ಟು ಜನ ಹೆಚ್ಚಿನ ವ್ಯಾಸಂಗದಲ್ಲಿ ಆಸಕ್ತಿ ತೋರಿಸದೆ ಇರುವುದು ಆಶ್ಚರ್ಯ ಹುಟ್ಟಿಸುತ್ತದೆ.

ಇಲ್ಲಿ ಇನ್ನೊಂದು ಅಂಶವನ್ನ ಕೂಡ ತಿಳಿಸಲು ಬಯಸುತ್ತೇನೆ. ಇಲ್ಲಿ ಯೂನಿವೆರ್ಸಿಟಿ ಡಿಗ್ರಿ ಪಡೆಯದವರು ಕೂಡ ತಮಗೆ ವಹಿಸಿದ ಕೆಲಸವನ್ನ ಅಚ್ಚುಕಟ್ಟಾಗಿ ಮಾಡುತ್ತಾರೆ. ಯೂನಿವೆರ್ಸಿಟಿಯಲ್ಲಿ ಪಡೆದ ಡಿಗ್ರಿಗೂ ಮನುಷ್ಯನ ಸಾಮಾನ್ಯಜ್ಞಾನ ಮತ್ತು ಕೆಲಸ ಮಾಡಲು ಇರುವ ತವಕಕ್ಕೂ ಸಂಬಂಧವಿಲ್ಲ ಎನ್ನುವುದನ್ನ ಇವರು ಸಾಬೀತು ಮಾಡಿದ್ದಾರೆ. ಇಲ್ಲಿನ ಜನರ ಇನ್ನೊಂದು ಅತಿ ಮುಖ್ಯ ಗುಣವೆಂದರೆ , ನಗರದ ಯಾವುದೇ ಜಾಗವನ್ನ ಇತರಿರಿಗೆ ಬಿಟ್ಟು ಕೊಟ್ಟು ತೆಪ್ಪಗಿಲ್ಲದೆ ಇರುವುದು.

ಅಂದರೆ ಸಾಮಾನ್ಯವಾಗಿ ಯಾವುದೇ ದೊಡ್ಡ ನಗರದಲ್ಲಿ ವಲಸಿಗರು ಒಂದೆಡೆ ವಾಸಿಸಲು ಶುರು ಮಾಡುತ್ತಾರೆ. ನಿಧಾನವಾಗಿ ಸ್ಥಳೀಯರು ಅಲ್ಲಿಂದ ಕಾಲು ಕೀಳುತ್ತಾರೆ. ಇದು ವಿಶ್ವದ ಎಲ್ಲಾ ದೊಡ್ಡ ನಗರಗಳ ಕಥೆ. ಇಲ್ಲಿನ ಜನರು ಮಾತ್ರ ಇದಕ್ಕೆ ಸೊಪ್ಪು ಹಾಕುವವರಲ್ಲ. ಇಲ್ಲಿಯೂ ಲ್ಯಾಟಿನೋ ಜನರು , ಆಫ್ರಿಕನ್ನರು , ಏಷ್ಯನ್ನರು ಹೀಗೆ ಹಲವಾರು ಪ್ರದೇಶಗಳ ಜನ ಒಂದೆಡೆ ವಾಸಿಸಲು ಶುರು ಮಾಡಿದ್ದಾರೆ. ವ್ಯತ್ಯಾಸವೆಂದರೆ , ಇಲ್ಲಿನ ಸ್ಥಳಸ್ಥರು ಇಂತಹ ಎಲ್ಲಾ ಬಡಾವಣೆಗಳಿಗೂ ಎಗ್ಗಿಲ್ಲದೆ ನುಗ್ಗುತ್ತಾರೆ.

ವರ್ಷದಲ್ಲಿ ಒಂದೆರೆಡು ಬಾರಿ ' ಫಿಯೆಸ್ತಾ ದೆ ಬಾರಿಯೋ' ಎನ್ನುವ ಹೆಸರಿನಲ್ಲಿ ವಲಸಿಗರನ್ನ ಕೂಡ ಸೇರಿಸಿಕೊಂಡು ಕುಣಿದು ಕುಪ್ಪಳಿಸುತ್ತಾರೆ. ಒಟ್ಟಿನಲ್ಲಿ ವಲಸಿಗರು ಕೂಡ ಇಲ್ಲಿನ ಸಂಸ್ಕೃತಿಯೊಂದಿಗೆ ಬೆರೆಯಬೇಕು ಎನ್ನುವುದು ಉದ್ದೇಶ. ಹೀಗೆ ಇವರೊಂದಿಗೆ ಇದ್ದೂ ಇವರಂತಾಗದೆ ಇದ್ದರೆ ಆಗ ಮಾತ್ರ ಒಂದಷ್ಟು ನೋವು ಅನುಭವಿಸಬೇಕಾಗುತ್ತದೆ. ಇಲ್ಲಿ ಎಲ್ಲಕ್ಕಿಂತ ಮುಖ್ಯವಾಗಿ ಅವರ ಭಾಷೆಯಲ್ಲಿ ಮಾತನಾಡಬೇಕು ಆಗ ಅರ್ಧ ಯುದ್ಧ ಗೆದ್ದಂತೆ.

 ಇಲ್ಲದಾಗ ಹಸಿವು ಹೆಚ್ಚು! ಇದ್ದಾಗ ನೂರೆಂಟು ಅಡ್ಡಿ, ಸಾವಿರ ಕಾರಣ! ಇಲ್ಲದಾಗ ಹಸಿವು ಹೆಚ್ಚು! ಇದ್ದಾಗ ನೂರೆಂಟು ಅಡ್ಡಿ, ಸಾವಿರ ಕಾರಣ!

ಯಾವುದೇ ಸಮಾಜದಲ್ಲಿ ಅಲ್ಲಿನ ಭಾಷೆಯಲ್ಲಿ ವ್ಯವಹರಿಸಿದರೆ ನಾವು ಅವರಲ್ಲಿ ಒಬ್ಬರು ಎನ್ನುವ ಭಾವನೆ ಇಬ್ಬರಿಗೂ ಬರುತ್ತದೆ. ' ಫಿಯೆಸ್ತಾ ದೆ ಬಾರಿಯೋ'ಎಂದರೆ , ಬಡಾವಣೆಯ ಹಬ್ಬ ಎಂದರ್ಥ. ನಮ್ಮಲ್ಲಿ ನಡೆಸುವ ಊರಹಬ್ಬವನ್ನ ಇದು ನೆನಪಿಸುತ್ತದೆ. ಬಡಾವಣೆಯ ಜನರೆಲ್ಲಾ ಒಂದೆಡೆ ಕಲೆತು , ಕುಡಿತ , ಕುಣಿತದಲ್ಲಿ ಸಮಯವನ್ನ ಕಳೆಯುತ್ತಾರೆ. ಸಾಮೂಹಿಕವಾಗಿ ಅಡುಗೆ ತಿಂಡಿಗಳ ತಯಾರಿಸುವಿಕೆ ಮತ್ತು ತಿನ್ನುವಿಕೆ ಬಡಾವಣೆಯಲ್ಲಿ ಹಬ್ಬದ ವಾತಾವರಣವನ್ನ ಸೃಷ್ಟಿಸುತ್ತದೆ.

ಕೆಲವೊಮ್ಮೆ ಸಣ್ಣ ಪುಟ್ಟ ಸ್ಪರ್ಧೆಗಳು ಕೂಡ ಏರ್ಪಡಿಸುತ್ತಾರೆ. ಸಾಯಂಕಾಲದವರೆಗೂ ನಿಲ್ಲದ ತಿಂಡಿ , ತೀರ್ಥಗಳ ವಿತರಣೆ ನಡೆಯುತ್ತಲೇ ಇರುತ್ತದೆ. ಬಡಾವಣೆಯ ಕಮಿಟಿಯವರು ಇಂತಹ ಕಾರ್ಯಕ್ರಮವನ್ನ ಹಮ್ಮಿಕೊಳ್ಳುತ್ತಾರೆ. ಬಡಾವಣೆಯ ಜನ ತಮಗೆ ಬೇಕಾದ ಊಟ ತಿಂಡಿ ಮತ್ತು ಪಾನಿಯವನ್ನ ಹಣವನ್ನ ಪಾವತಿಸಿ ಕೊಳ್ಳಬೇಕಾಗುತ್ತದೆ. ಮೊದಲೇ ಮನೆಯಲ್ಲಿ ಅಡುಗೆ ತಿಂಡಿಗಳನ್ನ ಅಷ್ಟಾಗಿ ಮಾಡದ ಸ್ಪ್ಯಾನಿಶರು ಇಂತಹ ದಿನಗಳಲ್ಲಿ ಇನ್ನಷ್ಟು ಬಿಡುಬೀಸು.

ಎಲ್ಲಕ್ಕೂ ಹೆಚ್ಚಿನ ಖುಷಿ ನೀಡುವ ವಿಚಾರವೆಂದರೆ ಹತ್ತು ಹದಿನೈದು ಜನರಿಗಿಂತ ಹೆಚ್ಚಿನ ಜನರು ಸೇರಿದರೆ ಸಾಕು ಅಲ್ಲೊಂದು ಆಂಬುಲೆನ್ಸ್ ,ಒಂದು ಪೊಲೀಸ್ ಪಹರೆ ವಾಹನ ಬಂದು ನಿಂತು ಬಿಡುತ್ತದೆ. ಕಾರ್ಯಕ್ರಮ ಮುಗಿದ ಒಂದೆರೆಡು ತಾಸಿನಲ್ಲಿ ಇಲ್ಲಿ ಇಂತಹ ಕಾರ್ಯಕ್ರಮ ನಡೆದಿತ್ತು ಎಂದು ಹೇಳಲು ಕೂಡ ಆಗದಷ್ಟು ಸ್ವಚ್ಛ ಮಾಡಿ ಬಿಡುತ್ತಾರೆ. ಚಳಿಯ ದಿನಗಳಲ್ಲಿ ಹೆಚ್ಚಿನ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಲು ಆಗದ ಸಮಯದಲ್ಲಿ ಇಂತಹ ಸಾಮಾಜಿಕ ಕೂಟಗಳನ್ನ ಏರ್ಪಡಿಸುತ್ತಾರೆ. ಚಳಿಗಾಲದಲ್ಲಿ ಇಲ್ಲಿ ನಿಜಕ್ಕೂ ಸಮಯ ಕಳೆಯುವುದು ಕಷ್ಟವೇ ಸರಿ.

ಬೇಸಿಗೆಯಲ್ಲಿ ಇಲ್ಲಿನ ಜನರು ಮೈಗೆ ಸನ್ ಕ್ರೀಮ್ ಹಚ್ಚಿಕೊಂಡು ಕಡಲ ತೀರದಲ್ಲಿ (ಸ್ಪ್ಯಾನಿಷ್ ಭಾಷೆಯಲ್ಲಿ ಪ್ಲಾಯ ಎನ್ನುತ್ತಾರೆ , ಆದರೆ ಬೀಚ್ ಎನ್ನುವ ಅರ್ಥ) ಜಗತ್ತನ್ನ ಮರೆತು ಮಲಗಿ ಬಿಡುತ್ತಾರೆ. ಹಣ್ಣು , ಬೊಕತ್ತಾ ಮತ್ತು ಸೇರ್ವೆಸ (ಸರ್ವೆಸ ಎಂದರೆ ಬಿಯರ್ ಎಂದರ್ಥ)ದಲ್ಲಿ ಜನ ದಿನವನ್ನ ಕಳೆದು ಬಿಡುತ್ತಾರೆ. ಮಧ್ಯಾಹ್ನ ಪಾಂಗಿತವಾಗಿ ಊಟವನ್ನ ಮಾಡುವ ಜನರು ಸಲಾಡ್ ಮತ್ತು ಗ್ಯಾಸ್ಪ್ಯಾಚೊ ಎನ್ನುವ ಸೂಪ್ ಸೇವಿಸುತ್ತಾರೆ.

ಬೇಸಿಗೆಯಲ್ಲಿ ನೀರನ್ನ ಹೆಚ್ಚಾಗಿ ಕುಡಿಯಿರಿ , ನೆರಳಿನಲ್ಲಿ ಸಲ್ಪ ಸುಧಾರಿಸಿಕೊಳ್ಳಿ ಎಂದು ಟಿವಿ ನ್ಯೂಸ್ ನಲ್ಲಿ ಕೂಡ ಹೇಳುವುದು ಇಲ್ಲಿನ ವಿಶೇಷ. ಇಲ್ಲಿನ ಜನರೂ ಕೂಡ ಜಗತ್ತಿನ ಎಲ್ಲಾ ದೇಶದ ಜನರಂತೆ ಗಾಸಿಪ್ ಮಾಡುವುದನ್ನ ಇಷ್ಟಪಡುತ್ತಾರೆ. ಐದಾರು ಜನರ ಗುಂಪಿದ್ದರೆ , ಆಗ ಗುಂಪಿನಲ್ಲಿ ಇಲ್ಲದ ವ್ಯಕ್ತಿಯ ಗುಣಾವಗುಣಗಳ ಬಗ್ಗೆ ಮಾತು ಸಾಗುತ್ತದೆ. ಇಲ್ಲಿನ ಜನ ಎಂದೂ ವ್ಯಕ್ತಿಯನ್ನ ನೇರವಾಗಿ ಕನ್ಫ್ರಾಂಟ್ ಮಾಡುವುದಿಲ್ಲ. ಅಂದರೆ ಅವರು ಇದ್ದಾಗ ಎಲ್ಲವೂ ಸರಿಯಿದೆ ಎಂದೇ ಮಾತನಾಡುತ್ತಾರೆ.

ಅಪ್ಪಿತಪ್ಪಿಯೂ ಅವರ ಅವಗುಣವನ್ನ ಅವರ ಮುಖಕ್ಕೆ ಹೇಳುವುದಿಲ್ಲ. ಸಮಾನ ಮನಸ್ಕ ಸ್ನೇಹಿತರು ಸಿಕ್ಕಾಗ ಇದರ ಬಗ್ಗೆ ಚರ್ಚಿಸುತ್ತಾರೆ. ಆದರೆ ಯಾರೂ ಅದನ್ನ ತಿದ್ದಿಕೊಳ್ಳುವಂತೆ ಸೂಚಿಸುವುದಿಲ್ಲ. ಬೆನ್ನ ಹಿಂದೆ ಮಾತ್ರ ಎಲ್ಲರೂ ಅವರ ತಪ್ಪಿನ ಬಗ್ಗೆ ಮಾತನಾಡುತ್ತಾರೆ. ಇದರರ್ಥ ಇಷ್ಟೇ , ಯಾರಿಗೂ ಅವರ ಮುಂದೆ ಕೆಟ್ಟವರು ಎನ್ನಿಸಿಕೊಳ್ಳಲು ಇಷ್ಟವಿಲ್ಲ. ಅಪಾರ್ಟ್ಮೆಂಟ್ ನಲ್ಲಿ ಮ್ಯೂಸಿಕ್ ಜೋರಾಗಿ ಹಾಕಿದ್ದರೆ ನಿಮ್ಮ ಮನೆಯ ಬಾಗಿಲನ್ನ ತಟ್ಟಿ ಮ್ಯೂಸಿಕ್ ಸೌಂಡ್ ಕಡಿಮೆ ಮಾಡಿ ಎನ್ನುವುದನ್ನ ಹೇಳುವುದು ಆ ಬಡಾವಣೆಯಲ್ಲಿ ಗಸ್ತು ತಿರುಗುವ ಪೊಲೀಸ್ ! ಪಕ್ಕದ ಮನೆಯವರು ಎಂದಿಗೂ ಬಂದು ಹೇಳುವುದಿಲ್ಲ.

ಎಲ್ಲರೊಂದಿಗೂ ಚನ್ನಾಗಿರಬೇಕು ಎನ್ನುವುದು ಇಲ್ಲಿನ ಸಮಾಜದ ಅಲಿಖಿತ ನಿಯಮ. ನಿಮ್ಮ ಬಗ್ಗೆ ಇಷ್ಟವಿಲ್ಲದಿದ್ದರೂ ನಿಮ್ಮ ಮುಂದೆ ಬಹಳಷ್ಟು ಖುಷಿಯಾಗಿ , ಸಂತೋಷದಿಂದ ಮಾತನಾಡುವುದು ಕೂಡ ಇಲ್ಲಿನ ಜನರ ಇನ್ನೊಂದು ಗುಣ. ಹೆಚ್ಚಾಗಿ ಹೀಗೆ ಯಾರನ್ನಾದರೂ ಇಷ್ಟಪಡದ ಜನ ಅವರ ವಿರುದ್ಧ ಕಮ್ಯುನಿಟಿಯಲ್ಲಿ ದೂರು ನೀಡಿರುತ್ತಾರೆ, ಆದರೆ ಆ ವ್ಯಕ್ತಿಯೊಂದಿಗೆ ನೇರಾನೇರ ಸಂಬಂಧ ಮಾತ್ರ ಬಾಡದಂತೆ ನೋಡಿಕೊಳ್ಳುತ್ತಾರೆ.

ಇದು ನನಗೆ ಸ್ವಲ್ಪ ವಿಚಿತ್ರ ಎನ್ನಿಸಿದ ವಿಷಯ. ಕಮ್ಯುನಿಟಿಯಲ್ಲಿ ಹೀಗೆ ನಡೆದುಕೊಳ್ಳುವ ಜನ ವೈಯಕ್ತಿಕ ಬದುಕಿನಲ್ಲಿ ಮಾತ್ರ ಸಣ್ಣಪುಟ್ಟ ವ್ಯತ್ಯಾಸಗಳಿಗೆ ಬೇರ್ಪಡುವುದು , ವಿಚ್ಚೇದನ ಪಡೆಯುವುದು ಕೂಡ ನನ್ನ ಮಟ್ಟಿಗೆ ಅಚ್ಚರಿ. ನನಗೆ ಇಲ್ಲಿ ಬದುಕಿದ ಒಂದೂವರೆ ದಶಕ ಯಾವುದೇ ಸಮಸ್ಯೆಯಾಗಲಿಲ್ಲ ! ಎಲ್ಲಕ್ಕೂ ಮುಖ್ಯವಾಗಿ ನನಗೆ ಈ ರೇಸಿಸಂ ಎನ್ನುವ ಬೂತಪ್ಪ ಮಾತ್ರ ಕಾಡಲಿಲ್ಲ. ಇದಕ್ಕೆ ಬಹುಮುಖ್ಯ ಕಾರಣ ನಾನು ಇಲ್ಲಿನ ಜನರ ಮನೋಭಾವವನ್ನ ಅರಿತುಕೊಂಡದ್ದು.

 ತೂಕ ಇಳಿಸಿಕೊಳ್ಳಲು ಸರಳ ಉಪಾಯ ಏನಾದರೂ ಇದೆಯಾ? ತೂಕ ಇಳಿಸಿಕೊಳ್ಳಲು ಸರಳ ಉಪಾಯ ಏನಾದರೂ ಇದೆಯಾ?

ಇವರ್ಯಾರು ಯಾರನ್ನೂ ನೇರವಾಗಿ ಎದುರಿಸುವುದಿಲ್ಲ ಎನ್ನುವುದನ್ನ ನಾನು ಬಹುಬೇಗ ಕಂಡುಕೊಂಡ ವಿಷಯ. ಅದು ನನ್ನ ಪ್ರಮುಖ ಅಸ್ತ್ರವಾಯ್ತು. ಇದನ್ನ ನಾನು ನನ್ನ ಒಳಿತಿಗೆ ಎಷ್ಟು ಬೇಕೋ ಅಷ್ಟರಮಟ್ಟಿಗೆ ಊಪಯೋಗಿಸಿಕೊಂಡೆ. ಇದಕ್ಕೆ ಪೂರಕವಾಗಿ ನಡೆದ ಒಂದು ಘಟನೆಯನ್ನ ಹೇಳಿದರೆ ಇದೇನು ಎನ್ನುವುದು ನಿಮಗೆ ಹೆಚ್ಚು ಅರ್ಥವಾಗುತ್ತದೆ. ಬಹಳ ದಿನಗಳಂತೆ , ಅಂದು ಕೂಡ ಬ್ಯಾಂಕಿಗೆ ಹೋಗಿದ್ದೆ. ಅಂದು ನನಗೆ ಐನೂರು ಯುರೋ ನೋಟಿಗೆ ಚಿಲ್ಲರೆ ಬೇಕಿತ್ತು.

ನಿಮಗೆ ತಿಳಿದಿರಲಿ 500 ಯುರೋ ನೋಟು ಯೂರೋಪಿನಲ್ಲೇ ಅತಿ ದೊಡ್ಡ ಡಿನಾಮಿನೇಷನ್ ಹೊಂದಿರುವ ನೋಟು. ಭಾರತದ ರೂಪಾಯಿ ಲೆಕ್ಕದಲ್ಲಿ ಈ ಒಂದು ನೋಟು 44/45 ಸಾವಿರ ರೂಪಾಯಿ!! ನನ್ನ ಭಾಷೆಯನ್ನ ಕೇಳಿ ಯಾರಿಗೂ ನಾನು ಹೊರಗಿನವನು ಎನ್ನಿಸುತ್ತಿರಲಿಲ್ಲ , ಅಷ್ಟರಮಟ್ಟಿಗೆ ಲೋಕಲ್ ಅಕ್ಸೆನ್ಟ್ ಸ್ಪ್ಯಾನಿಷ್ ಮಾತನಾಡುವುದು ಕಲಿತಿದ್ದೆ. ಬ್ಯಾಂಕಿನ ಕ್ಯಾಶಿಯರ್ ತಲೆ ಎತ್ತದೆ ' ಏನು ಬೇಕು ' ಎಂದು ಕೇಳಿದ್ದ, ನಾನು ಚೇಂಜ್ ಬೇಕು ಎಂದು ಹೇಳಿದೆ, ಸರಿ ನೋಟು ಕೊಡು ಎಂದವನು ಮುಖ ನೋಡಿ , ಒಂದೆರೆಗಳಿಗೆ ವಿಚಲಿತನಾದ , ಕ್ಷಮಿಸಿ , ಚೇಂಜ್ ಇಲ್ಲ ಎಂದ.

ಅಂದಿನ ದಿನಗಳಲ್ಲಿ ಏಶಿಯನ್ ಮತ್ತು ಆಫ್ರಿಕನ್ ಮೂಲದವರು ಹೆಚ್ಚಾಗಿ ಐನೂರರ ಕಳ್ಳ ನೋಟನ್ನ ಚಲಾವಣೆ ಮಾಡುತ್ತಿದ್ದರು. ಇದು ನನಗೆ ಗೊತ್ತಿತ್ತು. ನಾನು ಸ್ವಲ್ಪ ಧ್ವನಿ ಏರಿಸಿ , ಏಕೆ ನನ್ನ ಬಣ್ಣ ನೋಡಿದ ತಕ್ಷಣ ನೋಟಿಗೆ ಚೇಂಜ್ ಇಲ್ಲದೆ ಹೋಯ್ತಾ ? ಎಂದು ವ್ಯಂಗವಾಗಿ ಕೇಳಿದೆ. ಬೇಕಿದ್ದರೆ ಎಲ್ಲವನ್ನೂ ತಪಾಸಣೆ ಮಾಡಿ , ಆದರೆ ನನಗೆ ಚೇಂಜ್ ಬೇಕೇಬೇಕು ಎಂದೇ, ನನ್ನ ಮಾತು ಅವನಿಗೆ ನಾಟಿತು. ಆತ ತಾನು ಕುಳಿತ ಸ್ಥಳದಿಂದ ಎದ್ದು ಬಂದು ಕೈ ಹಿಡಿದು ' ದಯವಿಟ್ಟು ಬಣ್ಣದ ಮಾತನಾಡಬೇಡ , ನಾವೆಲ್ಲಾ ಒಂದೇ ' ಎಂದ. ನೋಟನ್ನ ಪರೀಕ್ಷಿಸಿ ನನಗೆ ಚೇಂಜ್ ಕೂಡ ನೀಡಿದ.

ಒಂದೂವರೆ ದಶಕದಲ್ಲಿ ಇಂತಹ ಹತ್ತಾರು ಘಟನೆಗೆ ಸಾಕ್ಷಿಯಾದೆ , ಎಲ್ಲಡೆಯೂ ನನ್ನ ಟ್ರಿಕ್ ವರ್ಕ್ ಆಗುತ್ತಿತ್ತು ಎನ್ನುವುದನ್ನ ವಿಶೇಷವಾಗಿ ಹೇಳಬೇಕಿಲ್ಲವಷ್ಟೆ ?

English summary
Barcelona Memories Column By Rangaswamy Mookanahalli Part 41
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X