ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೂಕ ಇಳಿಸಿಕೊಳ್ಳಲು ಸರಳ ಉಪಾಯ ಏನಾದರೂ ಇದೆಯಾ?

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ದೂರದಲ್ಲಿರುವ ಬೆಟ್ಟ ಸಮತಟ್ಟವಾಗಿ ಕಾಣುತ್ತದೆ . ದೂರದಿಂದ ಅದನ್ನ ಹತ್ತುವುದು ಕೂಡ ಬಹಳ ಸುಲಭ ಎನ್ನುವ ಭಾವನೆಯನ್ನ ನೀಡುತ್ತದೆ . ನಿಜದ ಅರಿವು ಆಗ ಬೇಕೆಂದರೆ ಅದರ ಹತ್ತಿರ ಹೋಗಬೇಕು . ಹತ್ತಿರದಿಂದ ಬೆಟ್ಟದ ಮೇಲಿರುವ ಕಲ್ಲುಮುಳ್ಳುಗಳು ದುರ್ಗಮ ರಸ್ತೆ ಕಾಣ ಸಿಗುತ್ತದೆ . ದೂರದಿಂದ ಅಂದುಕೊಂಡಷ್ಟು ಸುಲಭವಾಗಿ ಅದನ್ನ ಹತ್ತಲು ಸಾಧ್ಯವಿಲ್ಲ ಎನ್ನುವ ಅರಿವಾಗುತ್ತದೆ ಕೂಡ .

ಅಂದರೆ ದೂರದಿಂದ ಬಹಳ ಸುಂದರವಾಗಿ ಮತ್ತು ಸುಲಭವಾಗಿ ಕಂಡ ಬೆಟ್ಟ ಹತ್ತುವುದು ಕಂಡಷ್ಟು ಸುಲಭವಲ್ಲ ಎನ್ನುವುದು ಹತ್ತಿರ ಹೋಗಿ ಪ್ರಯತ್ನಿಸಿದ ಮೇಲಷ್ಟೇ ಗೊತ್ತಾಗುತ್ತದೆ . ಹಾಗೆಯೇ ಸಂಬಂಧಗಳೂ ಕೂಡ ! ದೂರದಿಂದ ಬಹಳ ಸುಂದರ ಎನ್ನಿಸುವ ಸಂಬಂಧಗಳು ಹತ್ತಿರವಾದಾಗ ಹಳಸುತ್ತವೆ . ಇದನ್ನ ಸಾಂಕೇತಿಕವಾಗಿ ನಮ್ಮ ಹಿರಿಯರು ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂದರು.

 ಖಂಡಾಂತರ ಮಾಡುವುದರಿಂದ ಕತ್ತೆ ಕುದುರೆಯಾಗದೆ ಇರಬಹದು, ಆದರೆ ಜೀವನಶೈಲಿ? ಖಂಡಾಂತರ ಮಾಡುವುದರಿಂದ ಕತ್ತೆ ಕುದುರೆಯಾಗದೆ ಇರಬಹದು, ಆದರೆ ಜೀವನಶೈಲಿ?

ಇದನ್ನ ನಮ್ಮ ಹಿರಿಯರು ಆಡು ಭಾಷೆಯಲ್ಲಿ ' ದೂರವಿದ್ದರೆ ಪರಿಮಳ , ಹತ್ತಿರ ಬಂದರೆ ವಾಸನೆ ' ಎಂದು ಕೂಡ ಕರೆಯುತ್ತಾರೆ . ಅರ್ಥ ಬಹಳ ಸರಳ ಯಾವುದು ದೂರದಿಂದ ಸುಂದರವಾಗಿಯೂ , ಎಲ್ಲವೂ ಸರಿಯಾಗಿದೆ ಎನ್ನುವಂತೆ ಕಾಣುತ್ತದೆಯೋ ಅದು ಹತ್ತಿರದಿಂದ ಬೇರೆಯದೇ ರೀತಿಯ ನೋಟವನ್ನ ಒದಗಿಸುತ್ತದೆ. ನಾವೆಂದು ಕೊಂಡಂತೆ ನಮ್ಮಲ್ಲಿ ಮಾತ್ರ ಅವ್ಯವಸ್ಥೆ ಇಲ್ಲ ಎಲ್ಲೆಡೆಯೂ ಅಷ್ಟೇ ಅಲ್ಲವೇ ?

Barcelona Memories Column By Rangaswamy Mookanahalli Part 38

ಜಗತ್ತಿನೆಲ್ಲೆಡೆ ಮನುಷ್ಯನ ಸ್ವಭಾವ ಒಂದೇ, ಇಲ್ಲಿ ಸರಿ ಇಲ್ಲ , ಇಲ್ಲಿನ ವ್ಯವಸ್ಥೆ ಸರಿಯಾಗಿ ಪಾಲಿಸುತ್ತಿಲ್ಲ ಎಂದು ಹೋಗುವುದಾದರೂ ಎಲ್ಲಿಗೆ ? ಇಲ್ಲಿಂದ ತುಂಬಾ ಚನ್ನಾಗಿ ಕಾಣುವ ಇತರ ಪ್ರದೇಶದ ವ್ಯವಸ್ಥೆಯ ನಿಜ ಬಣ್ಣ ಅಲ್ಲಿಗೆ ಹೋದ ಮೇಲಷ್ಟೇ ಗೊತ್ತಾಗುವುದು ಅಲ್ಲವೇ ? ಹಾಗೆಯೇ ದೂರದ ಸಂಬಂಧಗಳು ಚನ್ನಾಗಿಯೇ ಇರುತ್ತವೆ ಅವುಗಳ ನೈಜ್ಯತೆ ತಿಳಿಯುವುದು ಹತ್ತಿರ ಬಂದಾಗಲೇ ಎನ್ನುವುದನ್ನ ಕೂಡ ಸ್ಪೇನ್ ಜೀವನ ಕಲಿಸಿತು.

ಇದನ್ನ ಸ್ಪಾನಿಶರು La luz de adelante es la que alumbra (ಲ ಲೂಸ್ ದೆ ಅದೇಲಂತೆ ಈಸ್ ಲ ಕೆ ಅಲುಮ್ಬರ ) ಎಂದರು . ಅರ್ಥ ಇಲ್ಲಿಯೂ ಸೇಮ್ ! ' ಎದುರುಗಡೆಯ ಬೆಳಕು ಹೆಚ್ಚು ಪ್ರಕಾಶಿಸುತ್ತದೆ' ಎನ್ನುವುದು ಯಥಾವತ್ತು ಅನುವಾದ. ನಮ್ಮ ಬಳಿ ಏನಿರುತ್ತದೆ ಅದು ಯಾವಾಗಲೂ ಬೆಲೆ ಕಡಿಮೆ . ನಮ್ಮ ಕೈಗೆ ಯಾವುದು ಎಟುಕುವುದಿಲ್ಲ ಅದು ಯಾವಾಗಲೂ ಹೆಚ್ಚು ಬೆಲೆ ಅನ್ನಿಸುತ್ತದೆ . ಅದು ಸಿಕ್ಕ ಮೇಲೆ ಬೇರೆಯದೇ ಕಥೆ . ಇರಲಿ .

 ಅಣ್ಣ ನಮ್ಮೊಡನೆ ದೈಹಿಕವಾಗಿಲ್ಲ, ಆದರೆ ಅಣ್ಣನ ಇಷ್ಟವಾದ ಹಾಡು ಪ್ಲೇ ಆಗುತ್ತಿದೆ ಅಣ್ಣ ನಮ್ಮೊಡನೆ ದೈಹಿಕವಾಗಿಲ್ಲ, ಆದರೆ ಅಣ್ಣನ ಇಷ್ಟವಾದ ಹಾಡು ಪ್ಲೇ ಆಗುತ್ತಿದೆ

ಮನುಷ್ಯನ ಮೂಲಭೂತ ಗುಣವೇ ಹಾಗೆ ಎದುರು ಮನೆಯ ಬಲ್ಬ್ ಹೆಚ್ಚು ಹೊಳೆಯುತ್ತದೆ . ಎದುರುಮನೆಯಾತನಾ ಕಾರು , ಮನೆ , ಎಲ್ಲವೂ ಚನ್ನಾಗಿ ಕಾಣುತ್ತದೆ . ನಮ್ಮ ವಸ್ತು ಮಾತ್ರ ಮಬ್ಬು ಮಬ್ಬು ! ಇದಕ್ಕೆ ಹಿತ್ತಲ ಗಿಡ ಮದ್ದಲ್ಲ ಎನ್ನುವುದು . ಹಿಂದಿ ಭಾಷಿಕರು ಘರ್ ಕ ಮುರ್ಗಿ ದಾಲ್ ಬರಾಬರ್ ಎನ್ನುತ್ತಾರೆ . ಇವೆಲ್ಲಾ ಏನೇ ಇರಲಿ ಅರ್ಥ ಮಾತ್ರ ಶೇಮ್ !. ಇಷ್ಟೆಲ್ಲಾ ಪೀಠಿಕೆ ಏಕೆಂದರೆ ಬರೋಬ್ಬರಿ 125 ಕೆಜಿ ತೋಗುತ್ತಿದ್ದ ನಾನು ದೇಹದ ತೂಕವನ್ನ ಇಳಿಸಲು ಮನೆಯ ಬಳಿಯಿದ್ದ ಜಿಮ್ ಸೇರಿಕೊಂಡೆ , ದೇಹವನ್ನ ದಂಡಿಸಿ ಒಂದು ಆಕಾರಕ್ಕೆ ತರುವುದು ಮೂಲ ಉದ್ದೇಶವಾಗಿತ್ತು.

ಬೆಳಿಗ್ಗೆ ಆರರ ಬ್ಯಾಚಿಗೆ ಹಾಜರ್ ಆಗುತ್ತಿದ್ದೆ. ಬೆಳಿಗ್ಗೆ ಬೇಗ ಏಳುವುದು ಅಭ್ಯಾಸ ಜೊತೆಗೆ ಬೆಳಗಿನ ಬ್ಯಾಚಿನಲ್ಲಿ ಜನಸಂದಣಿ ಕಡಿಮೆ ಎನ್ನುವುದು ಕಾರಣ. ತ್ರೆಡ್ಮಿಲ್ಲ್ ಮೇಲೆ ಮೊದಲಿಗೆ ನಡೆಯುವುದು ಮಾಡಿ ನಂತರ ಓಡುವುದು ಅಭ್ಯಾಸ ಮಾಡಿಕೊಂಡೆ , ಹತ್ತಾರು ಕಿಲೋಮೀಟರ್ ಓಡುವ ಸಾಮರ್ಥ್ಯವನ್ನ ಕೂಡ ಪಡೆದುಕೊಂಡೆ. ಹೀಗೆ ಜಿಮ್ ಸೇರಿ ಎಂಟತ್ತು ತಿಂಗಳಾಗಿರಬಹದು ಆಗ ಸಿಕ್ಕವರು ಪಾಕೊ ಮತ್ತು ಆನಿ , ಇಬ್ಬರೂ ಸತಿಪತಿಗಳು. ಆನಿ ವಿಮಾನದಲ್ಲಿ ಪರಿಚಾರಿಕೆಯ (ಏರ್ ಹೋಸ್ಟೆಸ್ ) ಕೆಲಸದಲ್ಲಿ ತೊಡಗಿಕೊಂಡಿದ್ದವಳು, ಪಾಕೊ ಫಿಟ್ನೆಸ್ ಮತ್ತು ಹೆಲ್ತ್ ಸಲಹೆಗಾರನಾಗಿ ವೃತ್ತಿಯಲ್ಲಿ ತೊಡಗಿಕೊಂಡಿದ್ದ.

ಇಲ್ಲಿನ ಜನ ವ್ಯಕ್ತಿ ಇದ್ದ ಹಾಗೆ ಒಪ್ಪಿಕೊಳ್ಳುತ್ತಾರೆ. ಒಂದು ದಿನವೂ ನನ್ನ ದೇಹದ ಬಗ್ಗೆ ಹಗುರವಾಗಿ ಮಾತನಾಡಿ ನನ್ನ ಮನಸನ್ನ ನೋಯಿಸಲಿಲ್ಲ. ಬೆಳಗಿನ ಆ ಬ್ಯಾಚಿನಲ್ಲಿ ಇರುತ್ತಿದ್ದದ್ದು ಕೇವಲ ಆರೆಂಟು ಜನ ಮಾತ್ರ. ನಾನು ಸ್ಕಿಪ್ಪಿಂಗ್ ಮಾಡಲು ಶುರು ಮಾಡಿದರೆ ಅಥವಾ ಓಡಲು ಶುರು ಮಾಡಿದರೆ ಸಾಕು ' ವಾಮೋಸ್ ರಾಕಿ ' ( ಕಮಾನ್ ರಾಕಿ ) ಎಂದು ಹುರುದುಂಬಿಸುವ ಕೆಲಸವನ್ನ ಮಾಡುತ್ತಿದ್ದರು.

 ಕಾಫಿ ಎನ್ನುವ ನಾಲ್ಕು ದಶಕದ ಸಂಗಾತಿಯ ಪುರಾಣ! ಇದು ಇಲ್ಲದಿದ್ದರೆ.. ಕಾಫಿ ಎನ್ನುವ ನಾಲ್ಕು ದಶಕದ ಸಂಗಾತಿಯ ಪುರಾಣ! ಇದು ಇಲ್ಲದಿದ್ದರೆ..

ನಿನ್ನಿಂದ ಇದು ಸಾಧ್ಯ ಎನ್ನುವ ಪ್ರೋತ್ಸಾಹದಾಯಕ ಮಾತುಗಳನ್ನ ಸದಾ ಆಡುತ್ತಿದ್ದರು. ಭಾಷೆಯ ವಿಷಯದಲ್ಲಿ ಕೂಡ ಸೇಮ್ , ಮೊದಲ ದಿನಗಳಲ್ಲಿ ತಪ್ಪು ಮಾತನಾಡಿದರೂ ಅದನ್ನ ಎಂದೂ ಹೇಳಿ ನಕ್ಕವರಲ್ಲ ಈ ಜನ , ಬದಲಿಗೆ ಇದನ್ನ ಹೀಗೆ ಉಚ್ಚಾರಣೆ ಮಾಡಬೇಕು ಎಂದವರೇ ಹೆಚ್ಚು. ಪಾಕೊ ಮಾತು ಆನಿ ನಿಧಾನವಾಗಿ ಒಳ್ಳೆಯ ಸ್ನೇಹಿತರಾದರು. ಆ ನಂತರದ್ದು ವ್ಯಾಪಾರ. ಅದು ನನಗೆ ಆ ದಿನಗಳಲ್ಲಿ ಅರಿವಿಗೆ ಬರಲಿಲ್ಲ. ಪಾಕೊ ಹರ್ಬಲ್ ಲೈಫ್ ನ ಪದಾರ್ಥಗಳನ್ನ ಮಾರಾಟ ಮಾಡುತ್ತಿದ್ದ .

ನೀನು ತಿನ್ನುವ ಆಹಾರದಲ್ಲಿ ಏನೇನೂ ಇಲ್ಲ , ಪ್ರೊಟೀನ್ ಬಹಳ ಮುಖ್ಯ , ಈ ಪದಾರ್ಥಗಳನ್ನ ಸೇವಿಸಿದರೆ ನೀನು ನನ್ನಂತೆ ಆಗಬಹದು ಎನ್ನುವ ಆಮಿಷವನ್ನ ಕೂಡ ತೋರಿಸಿದ. ದೇಹ ಒಂದು ಆಕಾರಕ್ಕೆ ಬರುತ್ತಿತ್ತು. ಆ ವಯಸ್ಸಿನಲ್ಲಿ ಸಿಕ್ಸ್ ಪ್ಯಾಕ್ಸ್ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ ? ರಾತ್ರಿ ಕನಸಿನಲ್ಲಿ ಸಿಕ್ಸ್ ಪ್ಯಾಕ್ ಪಡೆದು ಆನಂದಿಸಿದೆ. ಪಾಕೊ ಹೇಳಿದ ಪದಾರ್ಥಗಳನ್ನ ಸೇವಿಸಲು ಶುರು ಮಾಡಿದೆ. ಭಾರತೀಯ ತಿಂಡಿ , ಆಹಾರ ಪದಾರ್ಥಗಳು ತಿನ್ನಲು ಯೋಗ್ಯವಲ್ಲ ಎನ್ನುವ ಮಟ್ಟಕ್ಕೆ ನಾನು ಬ್ರೈನ್ ವಾಶ್ ಆಗಿದ್ದೆ.

ಒಂದು ವರ್ಷಗಳ ಕಾಲ ಹರ್ಬಲ್ ಲೈಫ್ ಸೇವನೆ ಮಾಡಿದೆ. ಆ ನಂತರ ಅವರಿಬ್ಬರೂ ಅಚಾನಕ್ಕಾಗಿ ಜಿಮ್ ಗೆ ಬರುವುದು ಬಿಟ್ಟರು. ಬಾರ್ಸಿಲೋನಾ ಬಿಟ್ಟು ಬೇರೆ ಯಾವುದೋ ನಗರಕ್ಕೆ ಹೋದರಂತೆ ! ಈ ರೀತಿಯ ಬಿಸಿನೆಸ್ ಮಾಡುವರ ಕಥೆ ಹೀಗೆ ಎಂದು ಆ ಮೇಲೆ ತಿಳಿಯಿತು. ಒಂದು ಕಡೆ ಇವರು ನೆಲೆ ನಿಲುವುದಿಲ್ಲ , ಯಾರಿಗಾದರೂ ಸೈಡ್ ಎಫೆಕ್ಟ್ ಆದರೆ ? ಈ ಘಟನೆ ನಡೆದದ್ದು 2003ರಲ್ಲಿ , 2007ರ ವೇಳೆಗೆ ವಾರ್ಷಿಕ ಹೆಲ್ತ್ ಚೆಕ್ ಅಪ್ ನಲ್ಲಿ ನನ್ನ ಪ್ಲೇಟ್ಲೆಟ್ ಮಿಲಿಯನ್ ಲೆಕ್ಕದಲ್ಲಿತ್ತು .

ಒಂದು ಲಕ್ಷ ಇಪ್ಪತ್ತು ಸಾವಿರದಿಂದ ನಾಲ್ಕೂವರೆ ಲಕ್ಷದ ಆಸುಪಾಸಿನಲ್ಲಿ ಇರಬೇಕಾದ ಪ್ಲೇಟ್ಲೆಟ್ 14ಲಕ್ಷಕ್ಕೆ ಏರಿತ್ತು. 2007 ರಿಂದ 2017ರ ವರೆಗೆ ಹೆಚ್ಚು ಕಡಿಮೆ ಸಂಖ್ಯೆ ಅಷ್ಟೇ ಇರುತ್ತಿತ್ತು. ಕಡಿಮೆ ಆಗಲೇ ಇಲ್ಲ. ಭಾರತಕ್ಕೆ ಮರಳಿ ಮತ್ತೆ ಪೂರ್ಣವಾಗಿ ನಮ್ಮ ಆಹಾರ ಪದ್ದತಿಯನ್ನ ಅಪ್ಪಿಕೊಂಡ ಮೇಲೆ ಇದು ಸಾಕಷ್ಟು ಇಳಿಯಿತು. ಇಂದಿಗೂ ನನ್ನ ದೇಹದಲ್ಲಿ ಪ್ಲೇಟ್ಲೆಟ್ ಸಂಖ್ಯೆ ನಿಗದಿತ ಸಂಖ್ಯೆಗಿಂತ ಒಂದೆರಡು ಲಕ್ಷ ಹೆಚ್ಚಿದೆ.

 ಕಣ್ಣಿಗೆ ಕಾಣುವ ಆನೆಯೇ ಲೆಕ್ಕವಿಲ್ಲ ,ಇನ್ನು ಪಾದದಡಿಯ ಕಾಣದ ಇರುವೆ ಯಾವ ಲೆಕ್ಕ? ಕಣ್ಣಿಗೆ ಕಾಣುವ ಆನೆಯೇ ಲೆಕ್ಕವಿಲ್ಲ ,ಇನ್ನು ಪಾದದಡಿಯ ಕಾಣದ ಇರುವೆ ಯಾವ ಲೆಕ್ಕ?

ಈಗ ನೀವು ಮತ್ತೊಮ್ಮೆ ಮೊದಲಿನ ಸಾಲುಗಳನ್ನ ಓದಿ . ಇಲ್ಲಿ ಕೂಡ ಎಲ್ಲಾ ತರಹದ ಜನರು ಇದ್ದಾರೆ. ಮೊದಲ ದಿನಗಳಲ್ಲಿ ನಮಗೆ ಎಲ್ಲರೂ ಒಳ್ಳೆಯವರಂತೆ , ಒಂದೇ ತರಹ ಕಾಣುತ್ತಾರೆ. ವರ್ಷಗಳು ಕಳೆದಂತೆ ಹತ್ತಾರು ದೇಶದ ಜನರನ್ನ ನಿಖರವಾಗಿ ಇವರು ಇಂತಹುದೇ ದೇಶಕ್ಕೆ ಸೇರಿದವರು ಎಂದು ಗುರುತಿಸುವ ಶಕ್ತಿಯನ್ನ ಪಡೆದು ಕೊಂಡದ್ದು ಬೇರೆಯ ಕಥೆ. ಇದರ ಜೊತೆಗೆ ಇನ್ನೊಂದು ವಿಷಯವನ್ನ ಸಹ ಇಲ್ಲಿ ಪ್ರಸ್ತಾಪಿಸಲು ಇಷ್ಟ ಪಡುತ್ತೇನೆ.

ಇಲ್ಲಿನ ಜಿಮ್ ಗಳಲ್ಲಿ ಜನ ಸ್ನಾನದ ಮನೆಗೆ ತಮ್ಮ ಮನೆಯಲ್ಲಿ ಹೇಗೆ ಬಟ್ಟೆಬಿಚ್ಚಿ ಪೂರ್ಣ ನಗ್ನರಾಗಿ ಸ್ನಾನ ಮಾಡುತ್ತಾರೆ ಹಾಗೆ ಸ್ನಾನ ಮಾಡುತ್ತಾರೆ. ಅದೆಷ್ಟೇ ವರ್ಷ ಜೀವಿಸಿದರೂ ಈ ವ್ಯವಸ್ಥೆಗೆ ಒಗ್ಗಿಕೊಳ್ಳುವ ತಾಕತ್ತು ಮಾತ್ರ ಬರಲಿಲ್ಲ ನೋಡಿ. ಜಿಮ್ ಮುಗಿಸಿ , ಟವೆಲ್ ನಲ್ಲಿ ಮೈ ತೀಡಿಕೊಂಡು , ಐನೂರು ಮೀಟರ್ ದೂರದಲ್ಲಿದ್ದ ಮನೆ ಸೇರಿ ಸ್ನಾನ ಮಾಡುತ್ತಿದ್ದೆ.

ಮೂರು ವರ್ಷ ಜಿಮ್ಗೆ ಮಣ್ಣು ಹೊತ್ತು ಅದನ್ನ ಬಿಟ್ಟು ಬಿಟ್ಟೆ ! ಆದರೆ ಕಸರತ್ತು ಮಾಡುವುದು , ದೇಹವನ್ನ ದಂಡಿಸುವುದು ಮಾತ್ರ ಬಿಡಲಿಲ್ಲ. ಬಾರ್ಸಿಲೋನಾ ನಗರದಲ್ಲಿರುವ ವಿಶಾಲವಾದ ಪಾರ್ಕುಗಳು , ಸಂತ ಜೆರೋಮಿ ಬೆಟ್ಟ , ಬೀಚುಗಳು ನನ್ನ ಓಟದ , ನಡಿಗೆಯ ದಾರಿಗಳಾದವು. ಇದರ ಜೊತೆಗೆ ಬದುಕು ಕೂಡ ಪಾಠ ಕಲಿಸಿತು. ಯಾರು ಎಷ್ಟೇ ಕಸರತ್ತು ಮಾಡಲಿ , ನಾವು ಸೇವಿಸುವ ಆಹಾರದಲ್ಲಿ ಶಿಸ್ತು ಮತ್ತು ಕಟ್ಟುಪಾಡುಗಳನ್ನ ವಿಧಿಸಿಕೊಳ್ಳದೆ ಹೋದರೆ ತೂಕ ಇಳಿಯುವುದಿಲ್ಲ ಎನ್ನುವುದು ಅನುಭವ ಕಲಿಸಿದ ಪಾಠ.

ಇದನ್ನ ಇಲ್ಲಿನ ಜನ ಬಹಳ ಸರಳವಾಗಿ ' ಮಾಸ್ ಎಲ್ ಪಾತೋ , ಮೆನುಸ್ ಅಲ್ ಪ್ಲಾತೋ ' ಎನ್ನುತ್ತಾರೆ. ಅಂದರೆ ಹೆಚ್ಚು ಹೆಜ್ಜೆಯನ್ನ ಹಾಕಬೇಕು , ತಟ್ಟೆಯಲ್ಲಿ ಕಡಿಮೆ ಆಹಾರವಿರಬೇಕು ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಕಡಿಮೆ ತಿನ್ನು , ಹೆಚ್ಚು ಶ್ರಮ ಪಡು ಎನ್ನುವ ಸರಳ ಸೂತ್ರವನ್ನ ಪಾಲಿಸಿದರೆ ಸಾಕು, ತೂಕ ತಾನಾಗೇ ಇಳಿಯುತ್ತದೆ. ಇಂತಹ ಸರಳ ಸೂತ್ರವನ್ನ ಪಾಲಿಸುತ್ತ , ನಮ್ಮ ಆಹಾರ ಪದ್ದತಿಯನ್ನ ಗೌರವಿಸುತ್ತ ನಡೆದರೆ ಸಾಕು.

ಇದನ್ನ ಬಿಟ್ಟು ಜಗತ್ತಿನಲ್ಲಿ ಬಹಳಷ್ಟು ಜನರು ಲೈಫ್ ಕೋಚ್ , ಫಿಟ್ನೆಸ್ ಕೋಚ್ ಇತ್ಯಾದಿ ಹೆಸರುಗಳಲ್ಲಿ ಅವರು ಬದುಕನ್ನ ಕಟ್ಟಿಕೊಳ್ಳುತ್ತಾರೆ. ಆದರೆ ನಿಮಗವರ ಅವಶ್ಯಕತೆಯಿದೆಯೇ ? ಎನ್ನುವುದನ್ನ ನೀವು ಕೇಳಿಕೊಳ್ಳಬೇಕು. ಕೊನೆಗೂ ಸಾವಿರ ಜನ ಸಾವಿರ ಟಿಪ್ಸ್ ಕೊಡಲಿ , ಅವನೆಲ್ಲಾ ಜಾರಿಗೆ ತರುವುದು ನೀವು , ಅದಕ್ಕೆ ಬೇಕಾದ ದೃಢ ಮನಸ್ಸು ನಿಮಗಿರಬೇಕು. ಸರಿಯಾದ ಆಹಾರ ಕ್ರಮದ ಜೊತೆಗೆ ಒಂದಷ್ಟು ದೇಹ ದಂಡಿಸಿ ಬಿಟ್ಟರೆ ಅಷ್ಟು ಸಾಕು ಎನ್ನುವುದನ್ನ ನಾನು ಅನುಭವದಿಂದ ಕಂಡುಕೊಂಡಿದ್ದೇನೆ.

ಸ್ಪೇನ್ ಅಂತಲ್ಲ , ಭಾರತ ಅಂತಲ್ಲ , ಜಗತ್ತಿನೆಲ್ಲೆಡೆ ನಮ್ಮ ಅಜ್ಞಾನವನ್ನ ಬಂಡವಾಳ ಮಾಡಿಕೊಂಡು ಬದುಕನ್ನ ಕಟ್ಟಿಕೊಳ್ಳುವವರ ಸಂಖ್ಯೆ ಹೆಚ್ಚು ಕಡಿಮೆ ಇದ್ದೆ ಇರುತ್ತದೆ. ಇಂತಹ ಗಾಳಗಳಿಗೆ ನಾವು ಮೀನಾಗಬೇಕೆ ? ಬೇಡವೇ ? ಎನ್ನುವ ತೀರ್ಮಾನ ನಾವೇ ಮಾಡಬೇಕು. 24/25ರ ಹರಯದಲ್ಲಿ ನಾನು ಈ ರೀತಿಯ ಗಾಳಕ್ಕೆ ಮೀನಾಗಿದ್ದೆ. ಪುಣ್ಯಕ್ಕೆ ಹೆಚ್ಚಿನ ಡ್ಯಾಮೇಜ್ ಮಾಡಿಕೊಳ್ಳದೆ ಹೊರಬಂದೆ , ಇಂದಿಗೆ ಸರಳ ಆಹಾರ ಪದ್ಧತಿ ಮತ್ತು ನಿಯಮಿತ ಕಸರತ್ತು ಬದುಕನ್ನ ಸುಂದರವಾಗಿಸಿದೆ. ವೆಯ್ಟ್ ಲಾಸ್ ಎನ್ನುವ ಕ್ರಾಶ್ ಕೋರ್ಸುಗಳಿಗೆ ಸೇರುವ ಮುನ್ನ ಒಂದಷ್ಟು ಜಾಗ್ರತೆಯಿರಲಿ ಎನ್ನುವ ಉದ್ದೇಶದಿಂದ ಬರೆದಿದ್ದೇನೆ. ತೀರ್ಮಾನ ನಿಮ್ಮದು. ನೆನೆಪಿರಲಿ ವೆಯ್ಟ್ ಲಾಸ್ಗೆ ಶಾರ್ಟ್ ಕಟ್ ಇಲ್ಲ .

English summary
Barcelona Memories Column By Rangaswamy Mookanahalli Part 38
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X