• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಖಂಡಾಂತರ ಮಾಡುವುದರಿಂದ ಕತ್ತೆ ಕುದುರೆಯಾಗದೆ ಇರಬಹದು, ಆದರೆ ಜೀವನಶೈಲಿ?

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಬಾರ್ಸಿಲೋನಾದಲ್ಲಿ ಬಹಪಾಲು ಜನರು ಶ್ವಾನಪ್ರಿಯರು. ಒಂದು ನಾಯಿ ಇರುವುದು, ಸಾಕುವುದು ಅತಿ ಸಾಮಾನ್ಯ ಎನ್ನಬಹದು. ಉಳಿದಂತೆ ಕೆಲವರು ತಮ್ಮ ಮನೆಯಲ್ಲಿ ಐದಾರು ನಾಯಿಗಳನ್ನ ಸಾಕುವುದು ಕೂಡ ಕಾಣಸಿಗುತ್ತದೆ. ಇಲ್ಲಿನ ಅತಿ ದೊಡ್ಡ ಸಮಸ್ಯೆ ಒಂಟಿತನ. ಇದರಿಂದ ಹೊರಬರಲು ಬಹುತೇಕರು ನಾಯಿಯನ್ನ ಸಾಕುತ್ತಾರೆ. ಹಿರಿಯ ನಾಗರಿಕರಲ್ಲಿ ಒಂದಕ್ಕಿಂತ ಹೆಚ್ಚಿನ ನಾಯಿಯನ್ನ ಸಾಕುವ ಅಭ್ಯಾಸ ಸ್ವಲ್ಪ ಹೆಚ್ಚು ಎಂದು ಹೇಳಬಹದು.

ಇಲ್ಲಿ ಇನ್ನೊಂದು ವಿಚಿತ್ರ ಗೀಳಿನ ಜನರನ್ನ ಕೂಡ ನಾವು ಕಾಣಬಹದು. ನಾಯಿಗಳ ಜೊತೆಗೆ ಮನೆಯಲ್ಲಿ ಕಸವನ್ನ ಸಂಗ್ರಹಿಸಿಡುವ ಗೀಳು ಇವರದ್ದು. ಎಷ್ಟೋ ಬಾರಿ ಅವರ ಮನೆಯಿಂದ ಬರುವ ಕೆಟ್ಟ ವಾಸನೆಯನ್ನ ಸಹಿಸಲಾಗದೆ ಅಕ್ಕಪಕ್ಕದವರು ದೂರು ನೀಡಿದ ಉದಾಹರಣೆಗಳು ಮತ್ತು ಈ ವಿಷಯಗಳು ನ್ಯಾಷನಲ್ ನ್ಯೂಸ್ ಆದದ್ದು ಕೂಡ ನೋಡಿದಕ್ಕೆ ನಾನು ಸಾಕ್ಷಿಯಾಗಿದ್ದೇನೆ. ಇಲ್ಲಿ ನಾಯಿ ಸಾಕಲು ಅನುಮತಿ ಪತ್ರದ ಅಗತ್ಯವಿದೆ.

ಅಣ್ಣ ನಮ್ಮೊಡನೆ ದೈಹಿಕವಾಗಿಲ್ಲ, ಆದರೆ ಅಣ್ಣನ ಇಷ್ಟವಾದ ಹಾಡು ಪ್ಲೇ ಆಗುತ್ತಿದೆಅಣ್ಣ ನಮ್ಮೊಡನೆ ದೈಹಿಕವಾಗಿಲ್ಲ, ಆದರೆ ಅಣ್ಣನ ಇಷ್ಟವಾದ ಹಾಡು ಪ್ಲೇ ಆಗುತ್ತಿದೆ

ಯಾವ ನಾಯಿಗಳ ತೂಕ 9ಕೆಜಿಗಿಂತ ಕಡಿಮೆಯಿರುತ್ತದೆ ಅಂತಹ ನಾಯಿಗಳನ್ನ ಸಾಕಲು ಅನುಮತಿ ಪತ್ರದ ಅಗತ್ಯವಿಲ್ಲ. ಒಂಬತ್ತು ಕೆಜಿ ದೇಹ ತೂಕ ಮೀರಿದ ಎಲ್ಲಾ ನಾಯಿಗಳನ್ನ ಸಾಕಲು ಅನುಮತಿ ಪತ್ರದ ಅಗತ್ಯವಿರುತ್ತದೆ. ಉಳಿದಂತೆ ಇಲ್ಲಿನ ಸರಕಾರ ಕೆಲವು ತಳಿಗಳ ನಾಯಿಗಳನ್ನ ಡೇಂಜರಸ್ ಅಥವಾ ಅಪಾಯಕಾರಿ ಎನ್ನುವ ವರ್ಗಿಕರಣಕ್ಕೆ ಸೇರಿಸಿದೆ. ಹೀಗಾಗಿ ಈ ಪಟ್ಟಿಯಲ್ಲಿರುವ ನಾಯಿಗಳನ್ನ ಸಾಕಲಿ ವಿಶೇಷ ಅನುಮತಿ ಪತ್ರದ ಅಗತ್ಯ ಕೂಡ ಇರುತ್ತದೆ.

ನಾಯಿಗಳಿಗೆ ನಿಗದಿತ ಲಸಿಕೆಗಳನ್ನ ಹಾಕಿಸುವುದು ಮತ್ತು ಅದನ್ನ ಆರೋಗ್ಯವಾಗಿ ಇಟ್ಟುಕೊಳ್ಳುವುದು ಕೂಡ ಮಾಲೀಕರ ಕೆಲಸ. ಹೀಗೆ ಅಪಾಯಕಾರಿ ಹಣೆಪಟ್ಟಿ ಹೊತ್ತ ನಾಯಿಗಳನ್ನ ಬೀದಿಯಲ್ಲಿ ಅಥವಾ ಪಾರ್ಕ್ ನಲ್ಲಿ ಬೀಡಾಡಿ ಓಡಾಡಲು ಬಿಡುವಂತಿಲ್ಲ. ಹಾಗೊಮ್ಮೆ ಬಿಟ್ಟು ಅದರಿಂದ ಹೆದರಿದ ಅಥವಾ ಅದರಿಂದ ತೊಂದರೆಗೆ ಒಳಗಾದ ವ್ಯಕ್ತಿ ಕೇಸು ದರ್ಜು ಮಾಡುವುದು ಕೂಡ ಸಾಮಾನ್ಯ.

ಇಷ್ಟೆಲ್ಲಾ ಕಟ್ಟುಪಾಡುಗಳು ಇದ್ದರೂ ಕೆಲವರು ಲೈಸೆನ್ಸ್ ಪಡೆಯುವುದಿಲ್ಲ. ಅನುಮತಿ ಪತ್ರದ ಪಡೆಯಲಿಲ್ಲ ಎನ್ನುವುದು ಏಕೆ ಮುಖ್ಯವಾಗುತ್ತದೆ ಎಂದರೆ ಹೀಗೆ ಅನುಮತಿ ಪತ್ರ ಪಡೆಯದ ಎಷ್ಟೋ ಜನ ತಮ್ಮ ನಾಯಿ ಸಾಕುವ ಶೋಕಿ ಇಳಿದ ನಂತರ ಅವುಗಳನ್ನ ದೂರದಲ್ಲೆಲ್ಲೂ ಬಿಟ್ಟು ಬರುತ್ತಾರೆ. ಹೀಗೆ ನಾಯಿಯನ್ನ ಅನಾಥ ಮಾಡಿದವರು ಯಾರು ? ಎಂದು ಹುಡುಕಲು ಸಾಧ್ಯವಾಗುವುದಿಲ್ಲ. ಪರವಾನಿಗೆ ಇದ್ದವರು ಕೆಲವೊಮ್ಮೆ ನಾಯಿಯ ಪೋಷಣೆ ಮಾಡುವುದು ಸಾಧ್ಯವಿಲ್ಲ ಎಂದಾಗ ಬೇರೆ ಯಾರಿಗಾದರೂ ದತ್ತು ಕೊಟ್ಟು ಬಿಡುತ್ತಾರೆ.

ನಿಮಗೆಲ್ಲಾ ತಿಳಿದಿರಲಿ , ಸ್ಪೇನ್ ನಲ್ಲಿ ನಮ್ಮ ಭಾರತದಂತೆ ಬೀದಿ ನಾಯಿಗಳಿಲ್ಲ ! ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ತಮ್ಮ ನಾಯಿಯನ್ನ ಬೀದಿಗೆ ಬಿಡುತ್ತಾರೆ. ಅವುಗಳು ಕೂಡ ಬಹುಬೇಗ ರೆಸ್ಕ್ಯೂ ಟೀಮ್ ಅವರಿಂದ ಉಪಚರಿಸಲ್ಪಟ್ಟು ಯಾವುದಾದರೂ ಎನ್ ಜಿ ಓ ಮೂಲಕ ಶ್ವಾನ ಪ್ರೇಮಿಗಳ ಮನೆಗೆ ದತ್ತು ನೀಡಲಾಗುತ್ತದೆ. ಹೀಗೆ ತನ್ನ ಮಾಲೀಕನಿಂದ ಬೀದಿಗೆ ದೂಡಲ್ಪಟ್ಟ ನಾಯಿಗಳು ಮತ್ತೊಮ್ಮೆ ಇನ್ನೊಬ್ಬ ಮನುಷ್ಯನನ್ನ ನಂಬುವುದಕ್ಕೆ ಕಷ್ಟವಾಗುತ್ತದೆಯಂತೆ , ಹೀಗಾಗಿ ಅವಕ್ಕೆ ಸಾಮಾನ್ಯ ನಾಯಿಗಿಂತ ಹೆಚ್ಚಿನ ಪ್ರೀತಿ ಮತ್ತು ವಿಶ್ವಾಸದ ಅವಶ್ಯಕತೆ ಇರುತ್ತದೆ.

ಕಾಫಿ ಎನ್ನುವ ನಾಲ್ಕು ದಶಕದ ಸಂಗಾತಿಯ ಪುರಾಣ! ಇದು ಇಲ್ಲದಿದ್ದರೆ.. ಕಾಫಿ ಎನ್ನುವ ನಾಲ್ಕು ದಶಕದ ಸಂಗಾತಿಯ ಪುರಾಣ! ಇದು ಇಲ್ಲದಿದ್ದರೆ..

ಹೀಗಾಗಿ ಮೊದಲು ಇವುಗಳನ್ನ ನಾಯಿ ಸಂರಕ್ಷಣಾ ಕೇಂದ್ರದಲ್ಲಿ ಇರಿಸಿಕೊಂಡು ಅವಕ್ಕೆ ಬೇಕಾದ ಪ್ರೀತಿಯನ್ನ ಮತ್ತು ವಿಶ್ವಾಸವನ್ನ ಧಾರೆಯೆರೆಲಾಗುತ್ತದೆ. ಅಲ್ಲದೆ ಇಂತಹ ನಾಯಿಗಳನ್ನ ದತ್ತು ಪಡೆಯುವರಿಗೆ ನಾಯಿಯ ಮನಸ್ಥಿತಿ ಮತ್ತು ಅದಕ್ಕೆ ನೀಡಬೇಕಾಗಿರುವ ಪ್ರೀತಿ , ಗಮನ ಎಲ್ಲವನ್ನೂ ತಿಳಿಸಿ ಹೇಳಲಾಗುತ್ತದೆ. ದತ್ತು ಪಡೆಯುವರ ಸಾಚಾತನದ ಪ್ರಮಾಣ ಸಿದ್ಧವಾದರೆ ನಾಯಿ ಅವರದಾಗುತ್ತದೆ.

ನಾಯಿ ಬೀದಿಬದಿಯಲ್ಲಿ ಯಾವ ಸ್ಥಿತಿಯಲ್ಲಿ ಸಿಕ್ಕಿತು ಮತ್ತು ಅದನ್ನ ಹೇಗೆ ಪುನರುಜ್ಜೀವನ ಗೊಳಿಸಿದೆವು ಎನ್ನುವುದನ್ನ ಒಂದೆರಡು ನಿಮಿಷದ ವಿಡಿಯೋ ಮಾಡಿ ಜಾಹೀರಾತಿನಂತೆ ಹರಿಬಿಡುತ್ತಾರೆ. ಈ ನಾಯಿಗೆ ಸರಿಯಾದ ಸೂರಿನ ಅವಶ್ಯಕತೆಯಿದೆ ಎನ್ನುವ ಒಕ್ಕಣೆಯನ್ನ ಕೊನೆಯಲ್ಲಿ ಹಾಕುತ್ತಾರೆ. ಮನೆಯಲ್ಲಿ ಮೊದಲೇ ನಾಯಿ ಇದ್ದವರು , ಮೊದಲ ನಾಯಿಯ ಮಾಲೀಕರಾಗಲು ಇಚ್ಛೆ ಪಟ್ಟವರು , ಇತರ ಸಂವೇದನಾಶೀಲ ಸಹೃದಯರು ನಾಯಿಯನ್ನ ತಮ್ಮದಾಗಿಸಿಕೊಂಡು ಅದಕ್ಕೊಂದು ಉತ್ತಮ ಜೀವನವನ್ನ ನೀಡುತ್ತಾರೆ.

ಇಲ್ಲಿಗೆ ಬಂದ ಪ್ರಥಮ ದಿನಗಳಲ್ಲಿ ಕಾರಿನ ಹಿಂಬದಿಯನ್ನ ಪೂರ್ಣ ತಮ್ಮ ಆಸನವನ್ನಾಗಿಸಿ ಕೊಂಡು ಪವಡಿಸುವ ನಾಯಿಗಳನ್ನ ಕಂಡಾಗೆಲ್ಲ ' ಇವುಗಳು ಅದೃಷ್ಟ ಮಾಡಿ ಇಲ್ಲಿ ಹುಟ್ಟಿವೆ ' ಎಂದುಕೊಳ್ಳುತ್ತಿದ್ದೆ. ಅದರ ಜೊತೆಗೆ ನಾವು ಭಾರತದಲ್ಲಿ ಯಾರೊಬ್ಬರ ಜೀವನದಲ್ಲಿ ಅತಿ ಹೆಚ್ಚು ಕಷ್ಟ ಬಂದು ಬದುಕಲು ತಿಣುಕುತಿದ್ದರೆ ' ಅವನ ಜೀವನ ನಾಯಿ ಬಾಳಾಗಿದೆ ' ಎನ್ನುವುದು ನೆನಪಿಗೆ ಬಂದು, ಸಮಾಜದಲ್ಲಿನ ವ್ಯತ್ಯಾಸಗಳನ್ನ ನೆನಪಿಸುತ್ತಿದ್ದವು.

ಇವತ್ತಿಗೆ ಭಾರತದಲ್ಲೂ ಬಹಳಷ್ಟು ಬದಲಾವಣೆಯಾಗಿದೆ. ವಿವಿಧ ದೇಶಗಳ ವಿವಿಧ ತಳಿಯ ನಾಯಿಗಳು ನಮ್ಮ ಮನೆಯನ್ನ ತುಂಬಿವೆ. ಆ ನಾಯಿಗಳು ಬದುಕುತ್ತಿದ್ದ ವಾತಾವರಣ ಇಲ್ಲಿನ ವಾತಾವರಣದಲ್ಲಿ ಸಾಮ್ಯತೆಯಿಲ್ಲ. ಆದರೇನು ನಮ್ಮ ಜನಕ್ಕೆ ವಿದೇಶಿ ತಳಿಯ ನಾಯಿಗಳನ್ನ ಸಾಕುವುದರಲ್ಲಿ ಹೆಚ್ಚಿನ ಮಮಕಾರ. ಮನುಷ್ಯ ಅಥವಾ ನಾಯಿ ವಿದೇಶಿ ಅದರಲ್ಲೂ ಅದು ಯೂರೋಪು ಅಥವಾ ಅಮೆರಿಕಾದ್ದು ಆದರೆ ಕೇಳುವುದಿನ್ನೇನು ? ಬಹಳಷ್ಟು ಬದಲಾವಣೆ ಕಂಡಿರುವ ಭಾರತ ವಿದೇಶಿ ವ್ಯಾಮೋಹದಿಂದ ಹೊರಬರುವುದು ಬಾಕಿಯಿದೆ . ನೀವೇನಂತೀರಾ ?

ನಾಯಿ ಸಾಕಬೇಕು ಅಂತ ನನಗೆಂದೂ ಅನ್ನಿಸಲಿಲ್ಲ. ಪೀಣ್ಯದಲ್ಲಿ ಇರುವಾಗ ನಮಗೆ ಎಲ್ಲವೂ ಕೈ ಬಾಯಿ ಎನ್ನುವ ಸ್ಥಿತಿಯಲ್ಲಿರುವಾಗ ನಾಯಿ ಬೇರೆ ಎಲ್ಲಿಂದ ಸಾಕುವುದು? ಬಾರ್ಸಿಲೋನಾ ಗೆ ಬಂದು ಆರ್ಥಿಕವಾಗಿ ಸಬಲವಾದ ಮೇಲೂ ಕೂಡ ನನಗೆ ನಾಯಿ ಸಾಕಬೇಕು ಅಂತ ಮಾತ್ರ ಅನ್ನಿಸಲಿಲ್ಲ . ಆದರೆ ನನ್ನ ಸಹೋದರ ರಾಮನಿಗೆ ನಾಯಿ ಸಾಕಬೇಕು ಎನ್ನುವ ಹುಚ್ಚು . ಅಣ್ಣನ ಬಳಿ ನಾಯಿ ಸಾಕಲು ಒಂದಲ್ಲ ಹತ್ತಾರು ಬಾರಿ ಒಪ್ಪಿಗೆಯನ್ನ ಪಡೆಯಲು ಯತ್ನಿಸಿ ವಿಫಲನಾಗಿದ್ದ.

 ಕಣ್ಣಿಗೆ ಕಾಣುವ ಆನೆಯೇ ಲೆಕ್ಕವಿಲ್ಲ ,ಇನ್ನು ಪಾದದಡಿಯ ಕಾಣದ ಇರುವೆ ಯಾವ ಲೆಕ್ಕ? ಕಣ್ಣಿಗೆ ಕಾಣುವ ಆನೆಯೇ ಲೆಕ್ಕವಿಲ್ಲ ,ಇನ್ನು ಪಾದದಡಿಯ ಕಾಣದ ಇರುವೆ ಯಾವ ಲೆಕ್ಕ?

ಒಂದು ದಿನ ಅವನಿಗೆಲ್ಲಿ ಸಿಕ್ಕಿತೋ ಭಗವಂತ ಬಲ್ಲ , ಒಂದು ನಾಯಿ ಮರಿಯನ್ನ ಹಿಡಿದು ತಂದಿದ್ದ. ಅದರ ವಿಶೇಷತೆಯೇನೆಂದರೆ ಅದು ಎತ್ತರವಿರಲಿಲ್ಲ ಅದೊಂದು ಕುಬ್ಜ ನಾಯಿ ಅದರ ಉದ್ದ ಮಾತ್ರ ಸಾಮಾನ್ಯ ನಾಯಿಗಿಂತ ಬಹಳ ಹೆಚ್ಚು. ಅದ್ಯಾವ ತಳಿಯ ನಾಯಿ ಎನ್ನುವುದು ಗೊತ್ತಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ರಾಮನಿಗೆ ಆ ನಾಯಿ ಮರಿ ಎಲ್ಲಿ ಸಿಕ್ಕಿತು ? ಎನ್ನುವುದು ನಾಯಿಯ ತಳಿಗಿಂತ ದೊಡ್ಡ ಪ್ರಶ್ನೆಯಾಗಿತ್ತು. ರಾಮ ದಿನಕ್ಕೊಂದು ಕತೆಯನ್ನ ಕಟ್ಟಿ ಹೇಳುತ್ತಿದ್ದ.

ಒಂದು ದಿನ ಸ್ನೇಹಿತನ ಮನೆಯಲ್ಲಿ ಮರಿ ಹಾಕಿತ್ತು , ಅವನು ಕೊಟ್ಟ ಎಂದರೆ , ಇನ್ನೊಂದು ದಿನ ರಸ್ತೆಯಲ್ಲಿ ಒಂಟಿಯಾಗಿತ್ತು , ಅಯ್ಯೋ ಪಾಪ ಎನ್ನಿಸಿತು ಅದಕ್ಕೆ ತೆಗೆದುಕೊಂಡು ಬಂದೆ ಎನ್ನುತ್ತಿದ್ದ. ವಿಷಯ ಯಾವುದೇ ಇರಲಿ ಅವನು ಎಂದೂ ನಿಖರವಾಗಿ ಇದ್ದದ್ದ ಇದ್ದ ಹಾಗೆ ಹೇಳಿದವನಲ್ಲ. ಅದು ಅವನು ಬೇಕೆಂದು ಮಾಡುತ್ತಿರಲಿಲ್ಲ , ಅದು ಅವನ ನೇಚರ್. ಇವತ್ತಿಗೂ ಅವನು ಬದಲಾಗಿಲ್ಲ . ಇರಲಿ

ಮೊದಲ ದಿನ ನಾಯಿಯನ್ನ ನೋಡಿದ ಅಣ್ಣ ಅಂದ ಮಾತು ಇಂದಿಗೂ ಕಿವಿಯಲ್ಲಿ ಗುಯ್ಯ್ ಎನ್ನುತ್ತಿದೆ. ನೀವು ಮೂರು ಜನರಿದ್ದಿರಿ ಇದನ್ನ ಬೇರೆ ಎಲ್ಲಿಂದ ಸಾಕುವುದು ? ಅಣ್ಣನಿಗೆ ನಾಯಿಯನ್ನ ಸಾಕುವುದು ಇಷ್ಟವಿರಲಿಲ್ಲ . ಆದರೆ ರಾಮನಿಗೆ ನಾಯಿಯೆಂದರೆ ಪಂಚಪ್ರಾಣ. ಕೊನೆಗೆ ಅಣ್ಣನಿಗೆ ಏನನ್ನಿಸಿತೋ ಸುಮ್ಮನಾದರು. ರಾಮ ಅಣ್ಣನ ಮೌನವನ್ನ ಒಪ್ಪಿಗೆಯೆಂದು ಭಾವಿಸಿದ. ನಾಯಿಗೆ ನಾಮಕರಣವನ್ನ ಕೂಡ ಮಾಡಿದ. ನಾಯಿಯ ಹೆಸರು ' ಡೋರಾ' ಎಂದಿಟ್ಟಿದ್ದ.

ಪುಟಾಣಿ ಮರಿಯಂತಿದ್ದ ಡೋರಾ ವರ್ಷದಲ್ಲಿ ಸಾಕಷ್ಟು ಉದ್ದವಾಗಿ ಬೆಳೆಯಿತು. ಎತ್ತರ ಮಾತ್ರ ಅಷ್ಟಕಷ್ಟೇ . ರಾಮ ನಾಯಿಯನ್ನ ಬಹಳವಾಗಿ ಹಚ್ಚಿ ಕೊಂಡಿದ್ದ. ರಾತ್ರಿ ಅದನ್ನ ಮನೆಯ ಹೊರಗೆ ಕಟ್ಟಿ ಹಾಕಲಾಗುತ್ತಿತ್ತು. ನಮ್ಮ ಕಿಷ್ಕಿಂದೆ ಮನೆಯಲ್ಲಿ ಅದಕ್ಕೆಲ್ಲಿ ಜಾಗ ಹೊಂಚುವುದು ? ಇತರ ನಾಯಿಗಳ ಕಾಟಕ್ಕೋ ಅಥವಾ ಹೊರಗಿನ ವಾತಾವರಣದ ಭಯವೂ ತಿಳಿಯದು ಡೋರಾ ಆಗಾಗ ಕ್ಯುಗುಡುತಿತ್ತು. ಅದು ಜೋರಾಗಿ ಉಸಿರಾಡಿದರೆ ಸಾಕು ರಾಮ ಎದ್ದು ಬಾಗಿಲು ತೆರೆದು ಡೋರಾ , ಕುನ್ನಾ ಏನಾಯ್ತು ಎಂದು ಅದನ್ನ ರಮಿಸುತ್ತಿದ್ದ.

 ನಾಯಿ ಸಾಕುವುದು ಶೋಕಿಯಲ್ಲ ! ಅದರ ಕಕ್ಕವನ್ನ ಎತ್ತುವುದು ಇಲ್ಲಿ ಶಿಷ್ಟಾಚಾರ !! ನಾಯಿ ಸಾಕುವುದು ಶೋಕಿಯಲ್ಲ ! ಅದರ ಕಕ್ಕವನ್ನ ಎತ್ತುವುದು ಇಲ್ಲಿ ಶಿಷ್ಟಾಚಾರ !!

ಅವನು ಎದ್ದು ಬಾಗಿಲು ತೆರೆದರೆ ಅದು ನಮ್ಮ ನಿದ್ರೆಗೆ ಭಂಗ ತರುತ್ತಿತ್ತು . ಒಂದೆರೆಡು ದಿನವಾದರೆ ಹೇಗೋ ಸಹಿಸಿಕೊಳ್ಳಬಹದು. ರಾಮನದು ಇದು ನಿತ್ಯದ ಪರಿಪಾಠವಾಯ್ತು. ವಿಷಯ ಅಣ್ಣನ ಗಮನಕ್ಕೆ ಬರುವುದಕ್ಕೂ ಹೆಚ್ಚಿನ ಸಮಯ ಹಿಡಿಯಲಿಲ್ಲ. ಅಲ್ಲದೆ ರಾಮನಿಗೆ ಓದಿನ ಕಡೆ ಗಮನ ಕಡಿಮೆಯಾಯ್ತು. ಇದನ್ನೆಲ್ಲಾ ನೋಡಿದ ಅಣ್ಣ ರಾಮನನ್ನ ಕರೆದು ನೋಡು ನಿನ್ನ ಗಮನವೆಲ್ಲಾ ಅದರ ಕಡೆಗೆ ಹೋಗುತ್ತಿದ್ದೆ , ಅಲ್ಲದೆ ನಾವಿರುವ ಸ್ಥಿತಿಯಲ್ಲಿ ಆ ನಾಯಿಯನ್ನ ಚನ್ನಾಗಿ ನೋಡಿಕೊಳ್ಳಲು ಕೂಡ ಸಾಧ್ಯವಿಲ್ಲ ಇತ್ಯಾದಿ ಅವನಿಗೆ ಬುದ್ದಿ ಮಾತು ಹೇಳಿದರು.

ರಾಮ ನಾಯಿಯನ್ನ ಎಲ್ಲಾದರೂ ಬಿಟ್ಟು ಬರುತ್ತೇನೆ ಎಂದು ಅಣ್ಣನಿಗೆ ಮಾತು ಕೊಟ್ಟ. ಪಾಪ ಹೇಳಿದಂತೆ ಅದನ್ನ ಕಿಲೋಮೀಟರ್ ಗಟ್ಟಲೆ ದೂರದಲ್ಲಿ , ನನಗೆ ನೆನಪಿರುವಂತೆ ಟಿವಿಎಸ್ ಕ್ರಾಸ್ ನಲ್ಲಿ ಬಿಟ್ಟು ಬಂದ. ಆ ದಿನವೆಲ್ಲಾ ಕುಳಿತು ಬಹಳಷ್ಟು ಅತ್ತ. ಡೋರನಿಗೆ ಯಾವ ನಾಯಿಗಳು ಕಚ್ಚಿರುತ್ತವೋ ಎಂದು ಬಹಳಷ್ಟು ನೆನದು ದುಃಖಿಸಿದ. ಪ್ರಮಾಣ ಮಾಡಿ ಹೇಳುತ್ತೇನೆ ಅಂದಿಗೆ ನನಗೇನೂ ಅನ್ನಿಸಲೇ ಇಲ್ಲ .

ಅದರ ಬದುಕಿನ ಬಗ್ಗೆ ಎಂಪಥಿ ಇರಲಿ ಸಿಂಪಥಿ ಕೂಡ ಹುಟ್ಟಿರಲಿಲ್ಲ . ನನಗೆ ಮಾನಸಿಕ ಸಂಬಂಧದ ಅರ್ಥ ಗೊತ್ತಿರಲಿಲ್ಲ ಅನ್ನಿಸುತ್ತದೆ. ಒಂದೇ ದಿನದಲ್ಲಿ ಡೋರಾ ಮನೆ ಬಾಗಿಲಿಗೆ ವಾಪಸ್ಸು ಬಂದಿದ್ದ . ರಾಮನ ಖುಷಿಗೆ ಪಾರವೇ ಇಲ್ಲ ಎನ್ನುವಂತಾಗಿತ್ತು. ವಾರ ಕಳೆಯುವುದರಲ್ಲಿ ಮತ್ತೆ ನಾಯಿಯನ್ನ ಎಲ್ಲಾದರೂ ಬಿಡಬೇಕು ಎನ್ನುವ ಅಪ್ಪಣೆ ಅಣ್ಣ ಹೊರಡಿಸುತ್ತಾರೆ. ಅವತ್ತಿನ ದಿನದ ಸನ್ನಿವೇಶಗಳು , ಪರಿಸ್ಥಿತಿ ನೆನದು , ಡೋರಾ ಏನಾಗಿರಬಹದು ? ಎನ್ನುವ ಯೋಚನೆ ಇಂದು ನನ್ನ ಹೈರಾಣಾಗಿಸುತ್ತಿದೆ.

ಯಾರೋ ಹೇಳಿದರು ನಾಯಿಯನ್ನ ನೀರು ದಾಟಿಸಿ ಬಿಡಬೇಕು , ಇಲ್ಲವಾದರೆ ನಾಯಿಯನ್ನ ತುಂಬಾ ಜನನಿಬಿಡ ಪ್ರದೇಶದಲ್ಲಿ ಬಿಟ್ಟು , ಎಲ್ಲಾದರೂ ಕೈಕಾಲು ತೊಳೆದು ಕೊಂಡು ಬಂದರೆ ಸಾಕು ಅದು ಮರಳಿ ವಾಸನೆಯನ್ನ ಹಿಡಿದು ಬರಲಾಗದು ಎಂದು , ರಾಮನಿಗೆ ಅದನ್ನ ಬಿಟ್ಟು ಬರುವ ಚೈತನ್ಯ ಉಳಿದಿರಲಿಲ್ಲ. ಕಾಂತ ಮತ್ತು ನಾನು ಅದನ್ನ ಮೂರ್ನಾಲ್ಕು ಕಿಲೋಮೀಟರ್ ದೂರದಲ್ಲಿ ಬಿಟ್ಟು , ಕೈ ಕಾಲು ತೊಳೆದು ಬಂದೆವು. ಡೋರಾ ವಾಪಸ್ಸು ಬರಲಿಲ್ಲ .

ವಾಸನೆ ಸಿಗಲಿಲ್ಲವೋ ಅಥವಾ ಇಂತಹ ಭಾವನೆಯಿಲ್ಲದ ಮನಷ್ಯರ ಮನೆಗೆ ನಾನು ಹೋಗುವುದಿಲ್ಲ ಎಂದು ನಿರ್ಧರಿಸಿದನೋ ? ಗೊತ್ತಿಲ್ಲ . ಅಂತೂ ಅವನು ಮತ್ತೆ ಬರಲಿಲ್ಲ . ಆಗೆಲ್ಲಾ ತಿಳುವಳಿಕೆ ಇಲ್ಲದ ವಯಸ್ಸು , ಅನುಭವಿಲ್ಲದ , ಸಂವೇದನೆ ಅರ್ಥ ಗೊತ್ತಿಲ್ಲದ ಮನಸ್ಸು . ಇಂದು ನಾವು ಆ ನಾಯಿಯನ್ನ ಬಿಟ್ಟು ಬಂದ ನಂತರ ಅದಕ್ಕೇನಾಯಿತು ? ಎನ್ನುವುದು ನೆನೆದಾಗೆಲ್ಲ ಕರುಳು ಚುರ್ರ್ ಎನ್ನುತ್ತದೆ.

ಕೊರೊನಾ ಸಮಯದಲ್ಲಿ ಮಕ್ಕಳಿಗೆ ಟೈಮ್ ಪಾಸ್ ಆಗುತ್ತಿಲ್ಲ ಅಥವಾ ಜೊತೆಗಿರಲಿ ಎಂದು ತಂದ ನಾಯಿಗಳ ಭವಿಷ್ಯ ಕರೋನ ನಂತರ ಬೀದಿ ಪಾಲಾಗಬಹುದೇ ? ಎನ್ನುವ ಪ್ರಶ್ನೆ ಮನಸ್ಸಿನಲ್ಲಿ ಅಳುಕನ್ನ ಹುಟ್ಟುಹಾಕುತ್ತಿದೆ.

English summary
Barcelona Memories Column By Rangaswamy Mookanahalli Part 37
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X