ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಫಿ ಎನ್ನುವ ನಾಲ್ಕು ದಶಕದ ಸಂಗಾತಿಯ ಪುರಾಣ! ಇದು ಇಲ್ಲದಿದ್ದರೆ..

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಈ ಕಾಫಿ ಎನ್ನುವ ದ್ರಾವಣ ಇರದಿದ್ದರೆ ? ಇಂತಹ ಪ್ರಶ್ನೆ ಕೇಳಿಕೊಳ್ಳುವುದು ಕೂಡ ಬಹಳ ಕಷ್ಟದ ಕೆಲಸ ನನಗೆ ಮತ್ತು ನನ್ನಂತ ಹಲವರಿಗೆ . ಇದಕ್ಕೆ ಮುಖ್ಯ ಕಾರಣ ನಾನು ಅಷ್ಟೊಂದು ಕಾಫಿ ಪ್ರಿಯ . ನಾನು ಮೂರು ವರ್ಷದ ಮಗುವಾಗಿದ್ದಾಗ ನಮ್ಮಜ್ಜಿ ತನ್ನ ಕಾಫಿಯ ಲೋಟದಲ್ಲಿ ಅವರ ಹೆಬ್ಬೆರಳ ಅದ್ದಿ ಅದನ್ನ ನನ್ನ ಬಾಯಿಗೆ ಇಡುತ್ತಿದ್ದರಂತೆ . ನಾನು ಅದನ್ನ ಚಪ್ಪರಿಸಿ ಇನ್ನಷ್ಟು ನೀಡು ಎನ್ನುವಂತೆ ಕುಣಿಯುತ್ತಿದ್ದನಂತೆ .

ಅಮ್ಮನಿಗೆ, ಮಕ್ಕಳಿಗೆ ಅಷ್ಟು ಬೇಗ ಕಾಫಿ ಕೊಡಬಾರದು ಎನ್ನುವ ಭಾವನೆ . ಅಜ್ಜಿಗೂ ಕುಡಿಯಲು ಬಿಡು ಏನಾಗುತ್ತೆ ? ಎನ್ನುವ ಧೋರಣೆ. ಕೊನೆಗೂ ಗೆದ್ದದ್ದು ಅಜ್ಜಿಯ ಧೋರಣೆ !! . ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ವಾದ ಮಾಡುವುದು ಈ ಬರಹದ ಉದ್ದೇಶವಲ್ಲ . ಸೊ ಐದಾರು ವರ್ಷದ ವಯಸ್ಸಿಗೆ ದೊಡ್ಡವರಂತೆ ಕಾಫಿ ಹೀರಲು ಶುರು ಮಾಡಿದ್ದೆ . ಹೀಗಾಗಿ ಈ ಅಭ್ಯಾಸ ಅಥವಾ ಚಟ ಬರೋಬ್ಬರಿ ನಾಲ್ಕು ದಶಕದ ಸಂಗಾತಿ . ನೀರು ಬಿಟ್ಟರೆ ನಾನು ಹೆಚ್ಚು ಕುಡಿದಿರುವುದು ಕಾಫಿಯನ್ನ ಅಂತ ಯಾವ ಸಂಕೋಚವಿಲ್ಲದೆ ಹೇಳಬಹದು .

ಕಣ್ಣಿಗೆ ಕಾಣುವ ಆನೆಯೇ ಲೆಕ್ಕವಿಲ್ಲ ,ಇನ್ನು ಪಾದದಡಿಯ ಕಾಣದ ಇರುವೆ ಯಾವ ಲೆಕ್ಕ?ಕಣ್ಣಿಗೆ ಕಾಣುವ ಆನೆಯೇ ಲೆಕ್ಕವಿಲ್ಲ ,ಇನ್ನು ಪಾದದಡಿಯ ಕಾಣದ ಇರುವೆ ಯಾವ ಲೆಕ್ಕ?

ಸ್ಪೇನ್ ಸೇರಿದ ಮೊದಲ ದಿನಗಳಲ್ಲಿ ನನ್ನ ಸಹೋದ್ಯೋಗಿಗಳು ನಾವು ನೋಡುತ್ತೇವೆ ಅದೆಷ್ಟು ದಿನ ನೀನು ಸಸ್ಯಹಾರಿಯಾಗಿ ಮತ್ತು ಬಿಯರ್ ಅಥವಾ ಆಲ್ಕೋಹಾಲ್ ಮುಟ್ಟದೆ ಜೀವನ ನೆಡೆಸುತ್ತೀಯ ಎನ್ನುವ ನೇರಾನೇರ ಸವಾಲನ್ನ ಹಾಕಿದ್ದರು . ಅವರ ಸವಾಲನ್ನ ಸ್ವೀಕರಿಸಿ ಒಂದೂವರೆ ದಶಕಕ್ಕೂ ಹೆಚ್ಚು ಅಲ್ಲಿನ ವಾಸದಲ್ಲಿ ಒಂದು ಹನಿ ಬಿಯರ್ ಕೂಡ ಸೇವಿಸದೇ ಮೊಟ್ಟೆಯನ್ನ ಕೂಡ ತಿನ್ನದೇ ಇದ್ದದ್ದು ಅವರ ಕಣ್ಣಲ್ಲಿ ನನ್ನ ಬಗ್ಗೆ ಹೆಚ್ಚಿನ ಹೆಮ್ಮೆ.

 Barcelona Memories Column By Rangaswamy Mookanahalli Part 35

ನಮ್ಮತನ ಬಿಡದಿದ್ದರೆ ಗೌರವ ತಾನಾಗೇ ಬರುತ್ತದೆ . ಊಟ ತಿಂಡಿ ವಿಚಾರದಲ್ಲಿ ಬದಲಾವಣೆ ಮಾಡಿಕೊಳ್ಳದ ನಾನು ಅವರ ಭಾಷೆ ಮತ್ತಿರರ ಒಳ್ಳೆಯ ಜೀವನ ಶೈಲಿಯನ್ನ ಬೇಗನೆ ಅಡಾಪ್ಟ್ ಮಾಡಿಕೊಂಡೆ . ಬಾರ್ಸಿಲೋನಾ ದಲ್ಲಿ ಹೆಜ್ಜೆ ಹೆಜ್ಜೆಗೂ ಬಾರ್ ಗಳು ಕಾಣ ಸಿಗುತ್ತವೆ . ಅವೆಲ್ಲಾ ಸ್ಪ್ಯಾನಿಷ್ 'ತಾಪಸ್ ಬಾರ್ ' ಗಳು . ಇಲ್ಲಿ ಕಾಫಿ ಕೂಡ ಸಿಗುತ್ತದೆ . ಸ್ಪೇನ್ ನಲ್ಲಿ ಕೆಫೆ ಕೋನ್ ಲೇಚೆ ಅಂದರೆ ಹಾಲಿನೊಂದಿಗೆ ಕಾಫಿ ಕೊಡಿ ಎಂದರೆ ಕೊಡುವುದು 250/300 ಮಿಲಿ ಲೀಟರ್ ಕಾಫಿ .

ಇಲ್ಲಿನ ಕಾಫಿ ಅತ್ಯಂತ ರುಚಿಕರ . ನಮ್ಮ ಫಿಲ್ಟರ್ ಕಾಫಿಯನ್ನ ಹೋಲುತ್ತದೆ . ಎಲ್ಲವೂ ಫ್ರೆಶ್ . ಮಷೀನ್ ಮೇಲೆ ಕಾಫಿ ಬೀಜವಿರುತ್ತದೆ . ಅದು ಪುಡಿಯಾಗಿ ಇನ್ನೊಂದು ಡಬ್ಬದಲ್ಲಿ ಶೇಖರವಾಗಿರುತ್ತದೆ . ಅದನ್ನ ತೆಗೆದು ನಮ್ಮ ಕಣ್ಣ ಮುಂದೆ ಡಿಕಾಕ್ಷನ್ ಆಗಿ ಪರಿವರ್ತಿಸಿ ಬಿಸಿ ಬಿಸಿ ಹಾಲನ್ನ ಬೆರೆಸಿ ಕೊಡುತ್ತಾರೆ . ಭಾರತದಲ್ಲಿ ಕಾಫಿ ಅಷ್ಟೊಂದು ಕೊಡುವುದಿಲ್ಲ . ಹೆಚ್ಚನೆಂದರೆ 150 ಅಥವಾ 200 ಮಿಲಿ ಲೀಟರ್ ಕೊಡುತ್ತಾರೆ . ಹೋಟೆಲ್ ಗಳಲ್ಲಿ 100 ಮಿಲಿ ಲೀಟರ್ ಇಲ್ಲಿ ಸಾಮಾನ್ಯ . ಇದು ಸ್ಪೇನ್ ನಲ್ಲಿ 300 ಮಿಲಿ ಲೀಟರ್ ! .

ಪ್ರಾರಂಭದಲ್ಲಿ ಇದೇನು ಇಷ್ಟೊಂದು ಕಾಫಿ ಎನ್ನಿಸುತ್ತಿತ್ತು . ಆಮೇಲೆ ಅದು ಅಭ್ಯಾಸವಾಗಿ ಹೋಯ್ತು . ಹೀಗೆ ಬಾರ್ಸಿಲೋನಾ ದಲ್ಲಿನ ಪ್ರಥಮ ದಿನಗಳಲ್ಲಿ ಆಹಾರವಿಲ್ಲದೆ ಒದ್ದಾಡಿದ ದಿನಗಳಲ್ಲಿ ಒಂದಷ್ಟು ನೆಮ್ಮದಿ ಕೊಟ್ಟದ್ದು ಕಾಫಿ . ಭಾರತಕ್ಕೆ ಸನಿಹವಾದ ನಾನೂ ಯಾವುದೇ ಚಿಂತೆ ಇಲ್ಲದೆ ಸೇವಿಸಬಹುದಾಗಿದ್ದ ಏಕೈಕ ದ್ರಾವಣ ಕಾಫಿಯಾಗಿತ್ತು . ಶಾಲೆಗೆ ಹೋಗದೆ ಸ್ಪ್ಯಾನಿಷ್ ಕಲಿಕೆಯನ್ನ ಸರಾಗ ಮಾಡಿದ್ದು ಕೂಡ ಅಪರೋಕ್ಷವಾಗಿ ಕಾಫಿ.

 Barcelona Memories Column By Rangaswamy Mookanahalli Part 35

ಕಾಫಿ ಬಾರ್ ಗಳಲ್ಲಿ ವಾರಾಂತ್ಯ ಗಳಲ್ಲಿ ಗಂಟೆಗಟ್ಟಲೆ ಕೂತು ಅಲ್ಲಿನ ಸ್ಥಳೀಯರೊಂದಿಗೆ ಮಾತನಾಡಿ ಕಲಿತದ್ದು . ಈ ಕಾರಣಕ್ಕೆ ನನಗೆ ಸ್ಪ್ಯಾನಿಷ್ ಲೋಕಲ್ ಅಕ್ಸೆನ್ಟ್ ಬರುತ್ತದೆ ಎನ್ನುವ ಹೆಮ್ಮೆ ನನ್ನದು . ಹೇಗೆ ಬ್ರಿಟನ್ ಇಂಗ್ಲಿಷ್ ಮಾತನಾಡುವುದು ಬೇರೆ ರೀತಿ ಇರುತ್ತದೆ , ಹೇಗೆ ಅಮೆರಿಕನ್ ಉಚ್ಚಾರಣೆ ಬೇರೆ ಇರುತ್ತದೆ , ಹಾಗೆ ಸ್ಪ್ಯಾನಿಷ್ ಕೂಡ ದೇಶದಿಂದ ದೇಶಕ್ಕೆ ಮಾತನಾಡುವ ರೀತಿ ಬೇರೆಯಿದೆ .

ಸ್ಪೇನ್ ಸ್ಪ್ಯಾನಿಷ್ ಭಾಷೆಯ ಉಗಮ ಸ್ಥಾನ . ನನ್ನದು ಸ್ಪೇನ್ ಶೈಲಿಯ ಮಾತು . ನಿಮಗೆ ಗೊತ್ತಿರಲಿ ಇಂದಿಗೆ ಸ್ಪ್ಯಾನಿಷ್ ಜಗತ್ತಿನ 27 ದೇಶಗಳಲ್ಲಿ ಆಡಳಿತ ಭಾಷೆಯಾಗಿದೆ . ಕಾಫಿ ವಿಷಯದಲ್ಲಿ ಯೂರೋಪಿನ ದೇಶಗಳು ಸೇಫ್ ಹೆವೆನ್ . ಮುಕ್ಕಾಲು ಪಾಲು ಯೂರೋಪಿಯನ್ನರು ಕಾಫಿ ಪ್ರಿಯರು . ಇತ್ತೀಚಿಗೆ ಗ್ರೀನ್ ಟೀ ಹಾವಳಿ ಸ್ವಲ್ಪ ಹೆಚ್ಚಾಗಿದೆ . ಅದು ಬೇರೆ ವಿಷಯ . ಕಾಫಿ ಬೆಲೆಯೂ ಅಷ್ಟೇ ದೇಶದಿಂದ ದೇಶಕ್ಕೆ ಒಂದಷ್ಟು ಬದಲಾವಣೆ ಇದ್ದೆ ಇದೆ .

 ನಾಯಿ ಸಾಕುವುದು ಶೋಕಿಯಲ್ಲ ! ಅದರ ಕಕ್ಕವನ್ನ ಎತ್ತುವುದು ಇಲ್ಲಿ ಶಿಷ್ಟಾಚಾರ !! ನಾಯಿ ಸಾಕುವುದು ಶೋಕಿಯಲ್ಲ ! ಅದರ ಕಕ್ಕವನ್ನ ಎತ್ತುವುದು ಇಲ್ಲಿ ಶಿಷ್ಟಾಚಾರ !!

ಇದರ ಜೊತೆಗೆ ಕಾಫಿ ನೀಡುವ ವಿಧಾನದಲ್ಲೂ ಕೂಡ ಬದಲಾವಣೆ ಇದೆ . ಬಾರ್ಸಿಲೋನಾ ದಲ್ಲಿ ಕಾಫಿ ಮಾತ್ರ ಕೊಡುತ್ತಾರೆ . ಅಂದಲೂಸಿಯಾ ಎನ್ನುವ ರಾಜ್ಯಕ್ಕೆ ಹೋದರೆ ಅಲ್ಲಿ ಕಾಫಿ ಜೊತೆಗೆ ಒಂದೆರೆಡು ಬಿಸ್ಕತ್ ನೀವು ಕೇಳದೆ ಡಿಫಾಲ್ಟ್ ನೀಡುತ್ತಾರೆ . ಪೋರ್ಚುಗಲ್ ಕಥೆಯೂ ಸೇಮ್ . ಕೇಳದೆ ಬಿಸ್ಕತ್ ಕಾಫಿಗೆ ಜೊತೆಯಾಗುತ್ತೆ . ಇನ್ನು ಫ್ರಾನ್ಸ್ ಕಥೆ ಬೇರೆ . ಇಲ್ಲಿ ಕಾಫಿಗಿಂತ ಕೆಫೆಚಿನೋ ಜಾಸ್ತಿ ಸೇವಿಸುತ್ತಾರೆ .

ಕಾಫಿಯ ಜೊತೆ ಲೈಟಾಗಿ ಚಾಕೋಲೇಟ್ ಬೆರೆಸಿರುತ್ತಾರೆ . ಜರ್ಮನಿ , ಸ್ವಿಸ್ ಹೀಗೆ ದೇಶ ಯಾವುದೇ ಇರಲಿ ಕಾಫಿಯಂತೂ ಸಿಗುತ್ತದೆ . ಅದು ಚನ್ನಾಗಿ ಕೂಡ ಇರುತ್ತದೆ . ಸ್ವಿಸ್ ದೇಶದ್ದು ಸ್ವಲ್ಪ ವಿಚಿತ್ರ ಕಥೆ . ಇಲ್ಲಿ ಸ್ಟಾರ್ ಬಕ್ಸ್ ಸಾಮಾನ್ಯ ಕಾಫಿ ಬಾರ್ ನಂತೆ ಎಲ್ಲೆಡೆ ಇದೆ . ಲೋಕಲ್ ಬಾರ್ ನಲ್ಲಿ ಸಿಗುವ ಕಾಫಿಗಿಂತ ಕಡಿಮೆ ಬೆಲೆಯಲ್ಲಿ ಸ್ಟಾರ್ ಬಕ್ಸ್ ನಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ . ಜಗತ್ತಿನೆಲ್ಲೆಡೆ ಇದು ಉಲ್ಟಾ ! ಲೋಕಲ್ ಬಾರ್ಗಳಲ್ಲಿ ಕಡಿಮೆ ಇರುತ್ತದೆ . ಇಲ್ಲಿ ಮಾತ್ರ ಲೋಕಲ್ ಬಾರ್ ಗಳು ಹೆಚ್ಚು ಪ್ರಸಿದ್ಧ .

ಕಾಫಿಯ ರುಚಿಯಲ್ಲೂ ಒಂದಷ್ಟು ಬದಲಾವಣೆ ಅಲ್ಲಿನ ಜನರ ಟೇಸ್ಟ್ ಪ್ರಿಫೆರನ್ಸ್ ಮೇಲೆ ಬದಲಾಗುತ್ತದೆ . ಹೀಗಾಗಿ ಬಾರ್ ಹೊಕ್ಕು ಕಾಫಿ ಕೊಡಿ ಎನ್ನುವ ನಿವೇದನೆ ಇಟ್ಟರೆ ಮರುಕ್ಷಣದಲ್ಲಿ ಹಾಲು ಬಿಸಿ ಎಷ್ಟಿರಬೇಕು ? ಸ್ಟ್ರಾಂಗ್ ಅಥವಾ ಲೈಟ್ ? ವಿಥ್ ಕೆಫೆಯಿನ್ ಅಥವಾ ವಿಥೌಟ್ ? ಹೀಗೆ ಹಲವಾರು ಪ್ರಶ್ನೆ ಕೇಳುತ್ತಾರೆ . ಎರಡು ದಿನ ಅಲ್ಲಿಗೆ ಹೋದರೆ ಸಾಕು ಪ್ರಶ್ನೆಗಳು ಇರುವುದಿಲ್ಲ ! ನಿಮ್ಮ ಅಭಿರುಚಿ ಅವರಿಗೆ ಗೊತ್ತಾಗಿರುತ್ತದೆ . ಕುಳಿತೆಡೆಗೆ ಕಾಫಿ ತಂದಿಟ್ಟು , ಆಸ್ವಾದಿಸಿ ಎನ್ನುವ ಮಾತನ್ನ ತಪ್ಪದೆ ಹೇಳಿ ಹೋಗುತ್ತಾರೆ .

ಹೀಗೆ ಬಾರ್ಸಿಲೋನಾದ ಬಾರ್ ಒಂದರಲ್ಲಿ ಕಾಫಿ ಜೊತೆ ಸಮೋಸದಂತೆ ಕಾಣುವ ಒಂದು ಖಾದ್ಯವನ್ನ ತರಿಸಿ ಬೇಸ್ತು ಬಿದ್ದಿದ್ದೆ ! ಥೇಟ್ ನಮ್ಮ ಸಮೋಸದಂತೆ ಕಂಡು ನನಗೆ ಮೋಸ ಮಾಡಿದ ಖಾದ್ಯದ ಹೆಸರು 'ಎಂಪಾನದಿಯ' . ಹಲವಾರು ಕಡೆಗಳಲ್ಲಿ ಇದು ನಮ್ಮ ಕಡುಬಿನ ಅಣ್ಣ ತಮ್ಮನೇನೂ ಎನ್ನುವ ಸಂಶಯ ಬರುವಂತೆ ಕೂಡ ಮಾಡಿ ಇಟ್ಟಿರುತ್ತಾರೆ. ಹೊರ ನೋಟಕ್ಕಷ್ಟೆ ಹೀಗೆ ಕಾಣುತ್ತದೆ. ಅದರ ಹೊಟ್ಟೆಯೊಳಗೆ ತುಂಬಿರುವುದು ಮಾಂಸ .

ನನ್ನಂತಹ ಪುಳಚಾರಿಗರಿಗೆ ಇದರಿಂದ ನಯಾಪೈಸಾ ಪ್ರಯೋಜನವಿಲ್ಲ. ಅದೊಂದು ದಿನ ಬೆಳಿಗ್ಗೆ ಹೊಟ್ಟೆ ಬೇರೆ ಚುರ್ ಎನ್ನುತ್ತಿತ್ತು , ಜೊತೆಗೆ ನಿತ್ಯವೂ ಬೊಕತ್ತಾ ತಿಂದು ಬೇಸರ ಕೂಡ ಆಗಿತ್ತು , ಕಾಫಿಯ ಜೊತೆಗೆ ಹೊಸ ಸಂಗಾತಿ ಇರಲಿ ಎಂದು ತರಿಸಿದ್ದು ಸಮೋಸದಂತೆ ಕಾಣುವ ಎಂಪಾನದಿಯ ಎನ್ನುವ ಖಾದ್ಯ. ಆಸೆಯಿಂದ ಬಾಯಿಗಿಡುವ ಮೊದಲು ಅದನ್ನ ಪ್ಲೇಟಿನಲ್ಲಿ ಮುರಿದಾಗ ಅದು ತನ್ನ ರಹಸ್ಯವನ್ನ ಬಿಟ್ಟು ಕೊಟ್ಟಿತು.

ಅದರ ಜೊತೆಯಲ್ಲೇ ಅಯ್ಯೋ ಮಂಕೆ ಸಮುದ್ರದ ನೀರು ಸಿಹಿಯಿರಬಹದು ಎಂದು ಭಾವಿಸುವ ಮಟ್ಟದ ಮೂರ್ಖತನ ನಿನ್ನದು ಎಂದು ಮನಸ್ಸು ಚುಚ್ಚಿತು. ಇದು ಹೇಳಿಕೇಳಿ ಮಾಂಸಾಹಾರಿ ದೇಶ , ಕೇಳಿದರೂ ಪೂರ್ಣ ವೆಜೆಟೇರಿಯನ್ ಸಿಗದು , ಇನ್ನು ಕೇಳದ ನನಗಾಗಿ ಸಮೋಸ ತಯಾರಿಸಿ ಇಟ್ಟಿರುತ್ತಾರೆ ಎಂದು ನಂಬಿದ ನನ್ನ ಬಗ್ಗೆ ನನಗೆ ನಗು ಬಂದಿತ್ತು. ಬಾರ್ಸಿಲೋನಾ ನಗರದಲ್ಲಿ ನೆಲೆ ನಿಂತು ಒಂದಷ್ಟು ವರ್ಷಗಳಾದ ಮೇಲೆ ಆರ್ಥಿಕವಾಗಿ ಒಂದಷ್ಟು ಶಕ್ತಿ ಬಂದ ಮೇಲೆ ಯೂರೋಪಿನ ಇತರೆ ನಗರಗಳನ್ನ ಸುತ್ತಲು ಶುರು ಮಾಡಿದೆ.

ಹೀಗೆ ಒಬ್ಬಂಟಿ ಹೋಗುವಾಗ ಕಾಣದ ಊರುಗಳಲ್ಲಿ ನನ್ನ ಹೊಟ್ಟೆಯ ಹಸಿವನ್ನ ತಣಿಸಿ , ಬದುಕಿಸಿದ್ದು ಕಾಫಿ ಮತ್ತು ಬ್ರೆಡ್ಡು. ಇವುಗಳ ಜೊತೆಗೆ ಹಣ್ಣುಗಳನ್ನ ಕೂಡ ಮರೆಯುವಂತಿಲ್ಲ . ಯೂರೋಪಿನ ಎಲ್ಲೆಡೆ ಸಿಗುವ ಸ್ಟ್ರಾಬೆರ್ರಿ ನನಗಿಷ್ಟವಾದ ಹಣ್ಣು. ಅದೆಷ್ಟು ಕೇಜಿ ಸ್ಟ್ರಾಬೆರಿಯನ್ನ ಸ್ವಾಹಾ ಮಾಡಿದ್ದೇನೆ ಎನ್ನುವ ಲೆಕ್ಕವನ್ನ ಇಡಲಾಗಲಿಲ್ಲ. ಸ್ಟ್ರಾಬೆರ್ರಿ ಜೊತೆಗೆ ಒಂದಷ್ಟು ಸಲಾಡ್ ಗೆ ಬಳಸುವ ಟೊಮೊಟೊ ಹಣ್ಣು ಮತ್ತು ಫ್ರೆಶ್ ಚೀಸ್ ಬೆರೆಸಿ ಅದರ ಮೇಲೆ ಒಂದಷ್ಟು ಉಪ್ಪು ಮತ್ತು ಆಲಿವ್ ಆಯಿಲ್ ಹಾಕಿ ಬೆರೆಸಿ ತಿಂದರೆ ಸ್ವರ್ಗಕ್ಕೆ ಮೂರೇ ಗೇಣು !! ಅಂದಹಾಗೆ ಫ್ರೆಶ್ ಚೀಸ್ ಗೆ ಸ್ಪ್ಯಾನಿಷ್ ನಲ್ಲಿ ಕೇಸೂ ಫ್ರೆಸ್ಕೋ ಎನ್ನುತ್ತಾರೆ. ಸ್ಟಾಬ್ರೆರ್ರಿ ಗೆ ಫ್ರೆಸಾ ಎನ್ನುವ ಹೆಸರನ್ನ ದಯಪಾಲಿಸಿದ್ದಾರೆ.

 ಕಲ್ಸೊಟ್ಸ್ ! ಸುಟ್ಟ ಈರುಳ್ಳಿ ತಿನ್ನುವುದೂ ಇಲ್ಲಿ ಸಡಗರ !! ಕಲ್ಸೊಟ್ಸ್ ! ಸುಟ್ಟ ಈರುಳ್ಳಿ ತಿನ್ನುವುದೂ ಇಲ್ಲಿ ಸಡಗರ !!

ಯೂರೋಪಿನ ಯಾವುದೇ ನಗರವಿರಲಿ, ಅಲ್ಲೆಲ್ಲ ಹಣ್ಣು , ಹಾಲು ಮತ್ತು ಫ್ರೆಶ್ ಚೀಸ್ ಹೇರಳವಾಗಿ ಮತ್ತು ಇದ್ದುದರಲ್ಲಿ ಕೈಗೆಟುಕುವ ಬೆಲೆಯಲ್ಲಿ ಸಿಗುತ್ತವೆ. ನಿತ್ಯ ಜೀವನವನ್ನ ಈ ನಗರಗಳಲ್ಲಿ ಮಾಡುವವರು ತಮಗೆ ಬೇಕಾದ ಆಹಾರ ಪದಾರ್ಥಗಳನ್ನ ಹುಡುಕಿಕೊಳ್ಳುವುದು ಲೇಸು, ಉಳಿದಂತೆ ಪ್ರವಾಸಿಯಾಗಿ ಬಂದವರು ಅದರಲ್ಲೂ ಸಸ್ಯಾಹಾರಿಗಳು ಊಟಕ್ಕೆ ಹೆಚ್ಚಿನ ಮಹತ್ವ ನೀಡದೆ ಕೈಗೆಟುವ ಹಣ್ಣು , ಚೀಸ್ ಮತ್ತು ಬ್ರೆಡ್ಡುಗಳನ್ನ ತಿಂದು ಆರಾಮಾಗಿ ಜೀವಿಸಬಹದು.

ಫ್ರೆಶ್ ಚೀಸ್ ಜೊತೆಗೆ ಒಂದಷ್ಟು ಜೇನುತುಪ್ಪ ಕೂಡ ಸೇರಿಸಿ ಅದನ್ನ ಸುಟ್ಟ ಬ್ರೆಡ್ ಮೇಲೆ ಹಾಕಿಕೊಂಡು ತಿನ್ನುವುದರ ಮಜಾ ಬಲ್ಲವನೇ ಬಲ್ಲ . ಆಹಾರ ಎನ್ನುವುದು ಬಹಳ ಮುಖ್ಯ ಆದರೆ ವಾರ , ಹದಿನೈದು ದಿನದ ಪ್ರವಾಸದ ಸಮಯದಲ್ಲಿ ಆದಷ್ಟೂ ಕಡಿಮೆ ತಿನ್ನವುದು , ದೇಹವನ್ನ ಹಗುರವಾಗಿ ಇಟ್ಟು ಕೊಳ್ಳುವುದು , ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯ. ಆರೋಗ್ಯ ತಪ್ಪಿದರೆ ಎಲ್ಲಾ ಪ್ಲಾನ್ಗಳು ಕೂಡ ಬಿಲ ಸೇರುತ್ತವೆ.

ನನ್ನ ಮಟ್ಟಿಗೆ ನನ್ನ ಮೊದಲ ದಿನಗಳಲ್ಲಿ ಕಾಫಿ ಲೈಫ್ ಲೈನ್ ಆಗಿತ್ತು . ಇಂದಿಗೂ ಒಳ್ಳೆಯ ಕಾಫಿ ಹುಡುಕಿಕೊಂಡು ಒಳ್ಳೆಯ ಹೋಟೆಲ್ ಭೇಟೆ ನಿಲ್ಲದೆ ನೆಡದಿದೆ . ಟೀ -ಕಾಫಿ ಪ್ರಿಯರಲ್ಲಿ ಶೈವ ಮತ್ತು ವೈಷ್ಣವರ ನಡುವಿನ ಮಟ್ಟದ ಜಟಾಪಟಿ ಇದೆ ಎನ್ನುವುದು ಕೂಡ ನನಗೆ ತಿಳಿದದ್ದು ಇತ್ತೀಚಿಗೆ. ನಮ್ಮ ಮನೆಯ ಹೋಮ್ ಮಿನಿಸ್ಟರ್ ಟೀ ಪ್ರಿಯೆ . ಹೀಗಾಗಿ ದಿನದಲ್ಲಿ ಒಂದು ಬಾರಿಯಾದರೂ ಟೀ ಸಮಾರಾಧನೆ ಕೂಡ ಮನೆಯಲ್ಲಿ ಆಗುತ್ತದೆ. ಟೀ ಕೂಡ ಬದುಕಿನಲ್ಲಿ ಸ್ಥಾನ ಪಡೆದುಕೊಂಡಿದೆ.

ಅಲ್ಲಾರಿ ನೀವೇ ಹೇಳಿ ಹೆಂಡತಿಯನ್ನ ಎದುರು ಹಾಕಿಕೊಂಡು ಖುಷಿಯಾಗಿ ಬದುಕಿರುವ ಒಂದು ಗಂಡು ಪ್ರಾಣಿ ಈ ಭೂಮಿಯ ಮೇಲೆ ಇರುವ ಉದಾಹರಣೆ ಇದೆಯಾ ? ಹೀಗಾಗಿ ಕಟ್ಟರ್ ಕಾಫಿ ಅಭಿಮಾನಿಯಾಗಿದ್ದ ನಾನು ಮೇಲೊಡೌನ್ ಆಗಿದ್ದೇನೆ. ನೀವು ಕೂಡ ಹೆಚ್ಚು ಯೋಚಿಸದೆ ಟೀ ಅಥವಾ ಕಾಫಿ ಯಾವುದೋ ಒಂದು ಕುಡಿಯುತ್ತ ಈ ಬರಹ ಆಸ್ವಾದಿಸಿ .

English summary
Barcelona Memories Column By Rangaswamy Mookanahalli Part 35
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X