• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಲ್ಸೊಟ್ಸ್ ! ಸುಟ್ಟ ಈರುಳ್ಳಿ ತಿನ್ನುವುದೂ ಇಲ್ಲಿ ಸಡಗರ !!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಬಳಿ ಇರುವ ಪುಟಾಣಿ ಹಳ್ಳಿ ಹೊಸೂರು. ಅದು ಅಮ್ಮನ ತವರು. ಬಾಲ್ಯದ ದಿನಗಳು ಕಳೆದದ್ದು ಪ್ರಾಥಮಿಕ ಶಿಕ್ಷಣ ಪಡೆದದ್ದು ಕೂಡ ಈ ಊರಿನಲ್ಲಿ ಎನ್ನುವುದು ಇಂದಿಗೆ ಮನಸ್ಸಿಗೆ ಮುದ ನೀಡುತ್ತದೆ. ನಮ್ಮ ಮನೆಯ ಪಕ್ಕಕ್ಕೆ ಹೊಂದಿಕೊಂಡು ಹಸುಗಳನ್ನ ಕಟ್ಟಲು ಕೊಟ್ಟಿಗೆಯನ್ನ ನಿರ್ಮಿಸಲಾಗಿತ್ತು. ಕೊಟ್ಟಿಗೆಯ ಪಕ್ಕದಲ್ಲಿ ಸ್ನಾನದ ಕೋಣೆ . ದೊಡ್ಡದೊಂದು ಹಂಡೆಯನ್ನ ಸಿಮೆಂಟು ಹಾಕಿ ಕಟ್ಟಿದ್ದರು , ಕೆಳಗೆ ಕಡ್ಡಿ , ಮರದ ತುಂಡು , ತೆಂಗಿನಕಾಯಿ ಚಿಪ್ಪು ಇತ್ಯಾದಿಗಳನ್ನ ತುಂಬಲು ಜಾಗವನ್ನ ಬಿಟ್ಟಿದ್ದರು.

ಅಲ್ಲಿಗೆ ಅಗ್ನಿ ಸ್ಪರ್ಶವಾದರೆ ಸಾಕು ದಿನ ಪೂರ್ತಿ ಹಂಡೆಯಲ್ಲಿ ಬಿಸಿ ನೀರು ನಮಗೆ ಸಿಗುತ್ತಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಕೊಟ್ಟೆಗೆಯನ್ನ ಹಾದು ಇನ್ನೂರು ಮೀಟರ್ ದೂರದಲ್ಲಿ ತಾತ ಶಂಕುಸ್ಥಾಪನೆ ಮಾಡಿದ ಶ್ರೀ ರಂಗನಾಥ ಸ್ವಾಮಿ ದೇವಾಲಯ ಕೂಡ ನಮ್ಮ ಮನೆಯ ಪ್ರಾಂಗಣದಲ್ಲಿ , ಮನೆಗೆ ಹೊಂದಿ ಕೊಂಡಂತೆ ಇತ್ತು.

ಗಲಿಬಿಲಿ ಮನಸ್ಸಿನಿಂದಲೇ ಸ್ಥಿರತೆ, ಸಾವಿನ ನೆರಳಲ್ಲೇ ಬದುಕಿನ ಚಿಗುರು ಕೊನರುತ್ತದೆ!!ಗಲಿಬಿಲಿ ಮನಸ್ಸಿನಿಂದಲೇ ಸ್ಥಿರತೆ, ಸಾವಿನ ನೆರಳಲ್ಲೇ ಬದುಕಿನ ಚಿಗುರು ಕೊನರುತ್ತದೆ!!

ಮನೆಯಲ್ಲಿ ಬೆಳಗ್ಗಿನ ಉಪಹಾರಕ್ಕೆ ಎಂದು ಇಂದಿನ ದಿನಗಳ ರೀತಿಯಲ್ಲಿ ತಿಂಡಿ ತಯಾರಾಗುತ್ತಿರಲಿಲ್ಲ . ಅಂದಿಗೆ ಅವಲಕ್ಕಿ ಬೆಲ್ಲದ ಜೊತೆಗೆ ಒಂದಷ್ಟು ಹಾಲು ಬೆರೆಸಿ ನೀಡುತ್ತಿದ್ದರು , ಇಲ್ಲದಿದ್ದರೆ ರಾಗಿ ಹುರಿಯಿಟ್ಟಿಗೆ ಕಾಯಿ ಮತ್ತು ಬೆಲ್ಲ ಸೇರಿಸಿ ಕೊಡುತ್ತಿದ್ದರು. ಉಪ್ಪಿಟ್ಟು , ಇಡ್ಲಿ ಅಥವಾ ದೋಸೆ ಮಾಡಿದ ದಿನ ಮನೆಯಲ್ಲಿ ಹಬ್ಬದ ಸಡಗರ. ಇವೆಲ್ಲವನ್ನೂ ಮೀರಿದ ಒಂದಷ್ಟು ದಿನಗಳು ಇರುತ್ತಿದ್ದವು , ಆ ದಿನಗಳಲ್ಲಿ ಮನೆಯಲ್ಲಿ ಬೆಳಿಗ್ಗೆ ತಿನ್ನಲು ಏನೂ ಸಿಗುತ್ತಿರಲಿಲ್ಲ.

ಆಗೆಲ್ಲಾ ಸದ್ದಿಲ್ಲದೇ ಅಡುಗೆಮನೆಯಿಂದ ನಾಲ್ಕೈದು ಆಲೂಗೆಡ್ಡೆ , ಈರುಳ್ಳಿ , ಟೊಮೊಟೊ ತೆಗೆದುಕೊಂಡು ಹೋಗಿ ಬಿಸಿ ನೀರು ಕಾಯಿಸುವ ಒಲೆಯಲ್ಲಿ ಹಾಕುತ್ತಿದ್ದೆವು . ಒಂದೈದು ನಿಮಿಷದಲ್ಲಿ ಅವುಗಳು ಚನ್ನಾಗಿ ಸುಟ್ಟು ಸುತ್ತಮುತ್ತ ಪರಿಮಳವನ್ನ ಬೀರಲು ಶುರು ಮಾಡುತ್ತಿದ್ದವು. ಹಸಿ ಮೆಣಸಿನಕಾಯಿ , ಉಪ್ಪು ಹಾಕಿ ಅದಕ್ಕೆ ಒಂದಷ್ಟು ನಿಂಬೆ ಹಣ್ಣಿನ ರಸವನ್ನ ಬೆರೆಸಿ ಚನ್ನಾಗಿ ಅದನ್ನ ಅರೆದು ಒಂದು ರೀತಿಯ ಪೇಸ್ಟ್ ತಯಾರಿ ಮಾಡಿಕೊಂಡಿರುತ್ತಿದ್ದೆವು .

ನಿಮಗೆಲ್ಲಾ ಆಶ್ಚರ್ಯ ಅನ್ನಿಸಬಹದು ನಾವು ಆಲೂಗೆಡ್ಡೆ , ಈರುಳ್ಳಿ ಇತ್ಯಾದಿಗಳನ್ನ ತೆಗೆದು ಅದನ್ನ ಅಲ್ಲೇ ತಿನ್ನಲು ಶುರು ಮಾಡುತ್ತಿದ್ದೆವು. ಅದನ್ನ ಹೊರಗೆ ತಂದು ಸಾವಧಾನವಾಗಿ ತಿನ್ನುವ ವ್ಯವಧಾನ ಕೂಡ ನಮಗಿರುತ್ತಿರಲಿಲ್ಲ . ಅಜ್ಜಿ ಯಾವಾಗಲೂ ಅಯ್ಯೋ ಮುಂಡೇವಾ ಅದನ್ನ ಹೊರಕ್ಕೆ ತೆಗೆದುಕೊಂಡು ಹೋಗಿ ದೇವಸ್ಥಾನದ ಜಗುಲಿಯ ಮೇಲೆ ತಿನ್ನಿ ಎನ್ನುವ ಆದೇಶವನ್ನ ಹೊರಡಿಸುತ್ತಿದ್ದಳು . ಆದರೆ ಅದು ನಮ್ಮ ಕಿವಿಗೆ ಎಂದೂ ಬೀಳಲಿಲ್ಲ. ಸಮಯಕ್ಕೆ ತಕ್ಕಂತೆ ನೆಲಗಡಲೆ , ಕಡಲೇಕಾಯಿ , ಗೆಣಸು ಕೂಡ ಈ ಜಾಗವನ್ನ ಆಕ್ರಮಿಸುತ್ತಿದ್ದವು.

ಇಷ್ಟೆಲ್ಲಾ ಜ್ಞಾಪಕ ಮತ್ತೆ ಮರುಕಳಿಸಲು ಕಾರಣ ನಿನ್ನೆ ನಮ್ಮ ಮನೆಯಲ್ಲಿ ಇದೆ ರೀತಿ , ಚೀಸ್ , ಪನೀರ್ , ಆಲೂಗೆಡ್ಡೆ ಇತ್ಯಾದಿಗಳ ಸುಟ್ಟು ತಿಂದೆವು , ಇದರ ಜೊತೆಗೆ ಬಾರ್ಸಿಲೋನಾ ನೆನಪು ಕೂಡ ಹಸಿರಾಯ್ತು. ಕತಲೂನ್ಯ ಪ್ರಾಂತ್ಯದಲ್ಲಿನ ಆಹಾರ ಪದ್ದತಿಯ ಪ್ರಮುಖ ಭಾಗ ಕಲ್ಸೊಟ್ಸ್ . ಅತ್ಯಂತ ಚಳಿಯ ತಿಂಗಳುಗಳು ಎಂದು ಹೆಸರಾಗಿರುವ ಜನವರಿಯಿಂದ ಏಪ್ರಿಲ್ ತಿಂಗಳವರೆಗೆ ಇಲ್ಲಿನ ಜನ ಪೈರು ಸಮೇತ ಇರುವ ಈರುಳ್ಳಿಯನ್ನ ಸುಟ್ಟು ತಿನ್ನುತ್ತಾರೆ. ಇದಕ್ಕೆ ಕಲ್ಸೊಟ್ಸ್ ಎನ್ನುತ್ತಾರೆ.

ನಿಮಗೆ ಗೊತ್ತಿರಲಿ ಕತಲೂನ್ಯ ಸ್ಪೇನ್ ದೇಶದ ಇತರ ರಾಜ್ಯಗಳಿಗಿಂತ ಹೆಚ್ಚು ಸಂಪತ್ಭರಿತ ರಾಜ್ಯ. ಇಲ್ಲಿನ ಭಾಷೆ ಕತಲಾನ್ , ಇದು ಸ್ಪ್ಯಾನಿಷ್ ಮತ್ತು ಫ್ರೆಂಚ್ ಭಾಷೆಯನ್ನ ಬೆರೆಸಿದಂತಿದೆ , ಸ್ಪ್ಯಾನಿಷ್ ಭಾಷೆಗಿಂತ ಫ್ರೆಂಚ್ ಭಾಷೆಗೆ ಒಂದೆರೆಡು ಹೆಜ್ಜೆ ಹೆಚ್ಚು ಹತ್ತಿರ ಎನ್ನಬಹದು. ಜನರು ಕೂಡ ಸ್ಪೇನ್ ದೇಶದ ಇತರ ರಾಜ್ಯಗಳಿಗಿಂತ ಹೆಚ್ಚು ಭಿನ್ನ. ಸ್ಪೇನ್ ದೇಶದ ಜನರಲ್ಲಿ ಕಾಣುವ ಸಾಮಾನ್ಯ ಗುಣಗಳಾದ , ಕಾಂತಾರ್ (ಹಾಡುವುದು ) ಕೊಮೆರ್ (ತಿನ್ನುವುದು ) ಮತ್ತು ಬೈಲಾರ್ (ಕುಣಿಯುವುದು , ಡ್ಯಾನ್ಸ್ ) ಬೆಬೇರ್ (ಕುಡಿಯುವುದು ) ಇಲ್ಲಿನ ಜನಗಳಲ್ಲಿ ಸ್ವಲ್ಪ ಕಡಿಮೆ. ಹೀಗಾಗಿ ಸ್ಪೇನ್ ದೇಶದ ಇತರ ರಾಜ್ಯದ ಜನರು ಕತಲಾನರು ಎಂದರೆ ಸ್ವಲ್ಪ ಸೀರಿಯಸ್ ಜನ , ರೀಸರ್ವ್ಡ್ ಎನ್ನುವ ಭಾವನೆಯನ್ನ ಬೆಳಸಿಕೊಂಡಿದ್ದಾರೆ.

ಜಗತ್ತಿನಲ್ಲಿ ಕೆಟ್ಟದ್ದು ಎಷ್ಟಿದೆಯೋ ಅದರ 100 ಪಟ್ಟು ಒಳ್ಳೆಯದೂ ಇದೆ!ಜಗತ್ತಿನಲ್ಲಿ ಕೆಟ್ಟದ್ದು ಎಷ್ಟಿದೆಯೋ ಅದರ 100 ಪಟ್ಟು ಒಳ್ಳೆಯದೂ ಇದೆ!

ಕತಲಾನರು ತಮಗೆ ಅಂಟಿರುವ ಈ ಹಣೆಪಟ್ಟಿಯನ್ನ ಸುಳ್ಳು ಎಂದು ಸಿದ್ದ ಮಾಡಲು ಹುಟ್ಟಿಕೊಂಡಿರುವ ಸೋಶಿಯಲ್ ಗ್ಯಾದರಿಂಗ್ ಈರುಳ್ಳಿ ಸುಟ್ಟು ತಿನ್ನುವ ಕಾರ್ಯಕ್ರಮ. ಸಾಮಾನ್ಯವಾಗಿ ಯಾರದಾದರು ಒಬ್ಬರ ತೋಟದ ಮನೆಯಲ್ಲಿ , ಅಥವಾ ಬೆಟ್ಟ ಗುಡ್ಡಗಳಲ್ಲಿ ಇಂತಹ ಒಂದು ಕಾರ್ಯಕರ್ಮವನ್ನ ಏರ್ಪಡಿಸುತ್ತಾರೆ. ಕತಲಾನರು ತಮ್ಮ ವಿದೇಶಿ ಮಿತ್ರರನ್ನ ತಪ್ಪದೆ ಈ ಕಾರ್ಯಕರ್ಮಕ್ಕೆ ಕರೆದುಕೊಂಡು ಹೋಗುತ್ತಾರೆ.

Barcelona Memories Column By Rangaswamy Mookanahalli Part 32

ತಾವು ಕೂಡ ಜನರೊಂದಿಗೆ ಹಮ್ಮುಬಿಮ್ಮು ಇಲ್ಲದೆ ಬೇರೆಯಬಲ್ಲೆವು ಎನ್ನುವುದನ್ನ ತೋರಿಸಲು ಕತಲಾನರು ಹಾಡುತ್ತಾರೆ , ಕುಣಿಯುತ್ತಾರೆ , ಕುಡಿಯುತ್ತಾರೆ , ಆಫ್ಕೋರ್ಸ್ ಸುಟ್ಟ ಈರುಳ್ಳಿ ಜೊತೆಗೆ , ಮಾಂಸವನ್ನ ಕೂಡ ಸುಡುತ್ತಾರೆ , ಅವುಗಳನ್ನ ತರಹಾವರಿ ಸಾಸ್ ಗಳಲ್ಲಿ ಅದ್ದಿ ತಿನ್ನುತ್ತಾರೆ . ಜೊತೆಗೆ ವೈನ್ ಮತ್ತು ಬಿಯರ್ ಸಾಥ್ ಇದ್ದೆ ಇರುತ್ತದೆ. ನಿಮಗೆ ಆಶ್ಚರ್ಯ ಅನ್ನಿಸಬಹದು 'ನೀರು' ಕುಡಿಯುವ ನನ್ನಂತಹವರ ಸಂಖ್ಯೆ ಇಲ್ಲವೇ ಇಲ್ಲ ಎನ್ನಬಹದು.

ಇಲ್ಲಿಗೆ ಬಂದ ಪ್ರಥಮ ದಿನಗಳಲ್ಲಿ ಇಂತಹ ಒಂದು ಕಲ್ಸೊಟ್ಸ್ ತಿನ್ನುವ ಕಾರ್ಯಕ್ರಮಕ್ಕೆ ನಾನೂ ಹೋಗಿದ್ದೆ. ಆ ನಂತರ ಪ್ರತಿ ವರ್ಷ ಅದು ಅಲಿಖಿತ ನಿಯಮವಾಗಿ ಹೋಯ್ತು ಅದು ಬೇರೆ ವಿಷಯ , ಆದರೆ ಪ್ರಥಮ ಅನುಭವ ಎಂದಿಗೂ ಸ್ಪೆಷಲ್ ಅಲ್ವಾ ? ಅವರೇನೋ ಈರುಳ್ಳಿಯ ನಂತರ ಮಾಂಸ ಇತ್ಯಾದಿಗಳನ್ನ ತಿನ್ನುತ್ತಾರೆ ನನ್ನ ಗತಿಯೇನು ? ಎನ್ನುವ ಭಯವನ್ನ ಹೋಗಲಾಡಿಸಿದ್ದು ಕಾಸ ಆಸಿಯಾದಲ್ಲಿ ಪರಿಚಯವಾಗಿದ್ದ ಗೆಳತಿ/ಸಹೋದರಿ ಬೇತಿ.

ಇಡೀ ಬದನೆಕಾಯಿಯನ್ನ , ಆಲೂಗೆಡ್ಡೆಯನ್ನ ಕೂಡ ಈರುಳ್ಳಿಯ ಜೊತೆಗೆ ಸುಟ್ಟು ಕೊಟ್ಟಿದ್ದರು , ಅದರ ಮೇಲೆ ಉಪ್ಪು ಮತ್ತು ಕರಿಮೆಣಸಿನ ಕಾಳು ಪುಡಿಯನ್ನ ಉದಿರಿಸಿ ತಿಂದ ನೆನಪು ಅಂದು ನನ್ನ ಬಾಲ್ಯದ ನೆನಪಿಗೆ ತಳುಕು ಹಾಕುವಂತೆ ಮಾಡಿತ್ತು.

ಸ್ಪೇನ್ ತಲುಪುವುದಕ್ಕೆ ಮುಂಚೆ ನನ್ನ ಪ್ರಪಂಚದಲ್ಲಿ ನಾನಿದ್ದೆ , ನನಗೆ ಹೊರಗಿನ ಪ್ರಪಂಚದ ಕಿಂಚಿತ್ತೂ ಜ್ಞಾನವಿರಲಿಲ್ಲ. ಯಾರೋ ಟೈಮ್ ಮಷೀನ್ ನಲ್ಲಿ ನನ್ನ ಸ್ಪೇನ್ ದೇಶಕ್ಕೆ ತಂದು ಬಿಟ್ಟ ಅನುಭವ, ಈ ರೀತಿ ಈರುಳ್ಳಿ ಇತ್ಯಾದಿಯನ್ನ ಸುಟ್ಟು ತಿನ್ನುವುದಕ್ಕೆ ಬಾರ್ಬಿಕ್ಯೂ ಎನ್ನುತ್ತಾರೆ ಎನ್ನುವುದು ಕೂಡ ತಿಳಿಯದಷ್ಟು ಅಜ್ಞಾನ ನನ್ನದಾಗಿತ್ತು. ಅದಕ್ಕೆ ಈ ಹೆಸರು ಎನ್ನುವುದು ಗೊತ್ತಿರಲಿಲ್ಲ ಆದರೆ ಬಾಲ್ಯದಲ್ಲೇ ಈ ರೀತಿ ಸುಟ್ಟು ತಿನ್ನುವುದರ ಮಜಾ ಮಾತ್ರ ಅರಿತು ಕೊಂಡಿದ್ದೆ.

 ನಮ್ಮ ನಂಬಿಕೆ ಇನ್ನೊಬ್ಬರ ನಂಬಿಕೆಯನ್ನ ಎಂದೂ ಕದಡಬಾರದು! ನಮ್ಮ ನಂಬಿಕೆ ಇನ್ನೊಬ್ಬರ ನಂಬಿಕೆಯನ್ನ ಎಂದೂ ಕದಡಬಾರದು!

ನಿಜ ಹೇಳಬೇಕೆಂದರೆ ಕತಲಾನರು ಸ್ನೇಹ ಮಾಡುವುದಕ್ಕೆ ಮುಂಚೆ ಮಾತ್ರ ಒಂದಷ್ಟು ಸೀರಿಯಸ್ ಎನ್ನಿಸುತ್ತದೆ. ಸ್ನೇಹ ಗಟ್ಟಿಯಾದಂತೆಲ್ಲ ಅವರು ಕೂಡ ಎಲ್ಲರಂತೆ ಬೇರೆಯಬಲ್ಲರು ಎನ್ನುವುದು ತಿಳುವಳಿಕೆಗೆ ಬರುತ್ತದೆ. ಇನ್ನೊಂದು ಬಹಳ ಮುಖ್ಯ ಅಂಶವೆಂದರೆ ಕತಲಾನರು ಉಳಿದ ಸ್ಪ್ಯಾನಿಷ್ ಜನರಿಗಿಂತ ಹೆಚ್ಚು ಉಳಿಕೆಯಲ್ಲಿ ನಂಬಿಕೆಯನ್ನ ಇಟ್ಟವರು , ಹೀಗಾಗಿ ಸ್ಪ್ಯಾನಿಷ್ ದೇಶದ ಇತರ ರಾಜ್ಯದ ಜನರು ಇವರನ್ನ 'ತಕಾನ್ಯೋ' ಎಂದು ಕರೆಯುತ್ತಾರೆ. ತಕಾನ್ಯೋ ಎಂದರೆ ಜಿಪುಣ ಎನ್ನುವ ಅರ್ಥವನ್ನ ಕೊಡುತ್ತದೆ.

ಇದಕ್ಕೆ ಸಂಬಂಧಿಸಿದಂತೆ ಇನ್ನೊಂದು ಪುಟ್ಟ ಕಥೆಯಿದೆ. ಯಾರಾದರೂ ವಿದೇಶಿಯರು ಸ್ಪೇನ್ ದೇಶಕ್ಕೆ ಪ್ರವಾಸಕ್ಕೆ ಎಂದು ಬಂದರೆ ಮತ್ತು ಅವರು ಸ್ಪೇನ್ ದೇಶದ ದಕ್ಷಿಣದ ದೊಡ್ಡ ರಾಜ್ಯ ಅಂದಲುಸಿಯಾ ರಾಜ್ಯಕ್ಕೆ ಭೇಟಿಯನ್ನ ನೀಡಿದ್ದರೆ ಮತ್ತು ರಸ್ತೆಯಲ್ಲಿ ಯಾರನ್ನಾದರೂ ವಿಳಾಸ ಕೇಳಿದರೆ ಅಲ್ಲಿನ ಜನ ಕೈ ಹಿಡಿದು ವಿಳಾಸಕ್ಕೆ ತಲುಪಿಸಿ ಬರುತ್ತಾರೆ , ಇದೆ ಕೆಲಸವನ್ನ ನೀವು ದೇಶದ ರಾಜಧಾನಿ ಮಾಡ್ರಿಡ್ ನಲ್ಲಿ ಮಾಡಿದರೆ , ಅಲ್ಲಿನ ಜನ ಒಂದೆರೆಡು ಹೆಜ್ಜೆ ನಿಮ್ಮೊಂದಿಗೆ ಹಾಕಿ ಇತ್ತ ಹೋಗಬೇಕು ಎನ್ನುವುದನ್ನ ನಿಮಗೆ ತೋರಿಸಿ ಹೋಗುತ್ತಾರೆ.

ಇದೆ ಕೆಲಸವನ್ನ ನೀವು ಕತಲೂನ್ಯ ದಲ್ಲಿ ಮಾಡಿದರೆ , ಗೊತ್ತಿಲ್ಲವೆಂದೂ ಅಥವಾ ಹೆಚ್ಚೆಂದರೆ ಎಡಕ್ಕೋ ಅಥವಾ ಬಲಕ್ಕೋ ತಿರುಗಿ ಎಂದು ಹೇಳಿ ಹೋಗಿಬಿಡುತ್ತಾರೆ ಎನ್ನವುದು ಕೂಡ ಇಲ್ಲಿನ ಜನರಲ್ಲಿ ಕತಲಾನರು ಎಂದರೆ ಅಷ್ಟೊಂದು ಸ್ನೇಹ ಜೀವಿಗಳಲ್ಲ ಎನ್ನುವುದನ್ನ ತಿಳಿಸಲು ಸೃಷ್ಟಿಸಿದ ಕಥೆ. ಕತಲಾನರು ಸ್ನೇಹಜೀವಿಗಳೇ ಅದರಲ್ಲಿ ಸಂಶಯವಿಲ್ಲ , ಆದರೆ ಅಂದಲೂಸಿಯನ್ನರು ಮಾತ್ರ ಅತ್ಯಂತ ಮೃದು ಸ್ವಭಾವದ , ಭಾವುಕ ಜೀವಿಗಳು ಎನ್ನುವುದನ್ನ ಕಣ್ಣಾರೆ ಕಂಡು ಅನುಭವಿಸಿದ್ದೇನೆ.

ಆ ಅನುಭವದ ಆಧಾರದ ಮೇಲೆ ಮೇಲಿನ ಕಥೆಗೆ ಇನ್ನೊಂದು ಸಾಲು ಸೇರಿಸಲು ಇಚ್ಛೆ ಪಡುತ್ತೇನೆ. ಅಂದಲೂಸಿಯನ್ನರು ಯಾರಾದರೂ ವಿಳಾಸ ಕೇಳಿದರೆ ಅವರನ್ನ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಹೋಗಿ ಅವರು ತಲುಪಬೇಕಾದ ಜಾಗಕ್ಕೆ ತಲುಪಿಸಿ ಬರುವಂತವರು ! ಕಂಡು ಕೇಳರಿಯದ ಅಪರಿಚಿತನನ್ನ ಹೀಗೆ ನಡೆಸಿಕೊಳ್ಳುವ ಇವರು ಅವರಲ್ಲಿ ಒಬ್ಬನಾದವನನ್ನ ಹೇಗೆ ನಡೆಸಿಕೊಳ್ಳಬಹದು ? ಎನ್ನುವ ಊಹೆಯನ್ನ ನಿಮಗೆ ಮಾಡಿಕೊಳ್ಳಲು ಬಿಡುತ್ತೇನೆ.

ಕತಲಾನ್ ಮತ್ತು ಅಂದಲೂಸಿಯ ಎರಡೂ ರಾಜ್ಯಗಳಲ್ಲಿ ಸಾಕಷ್ಟು ಸ್ನೇಹಿತರನ್ನ ಹೊಂದಿದ್ದೇನೆ .ಅಂದಲೂಸಿಯನ್ನರು ಅತ್ಯಂತ ಭೋಳೆ ಸ್ವಭಾವದವರು , ಸ್ವಭಾವತಃ ಸೋಷಿಯಲಿಸ್ಟ್ಗಳು , ಸಮಾಜವಾದದಲ್ಲಿ ಅತ್ಯಂತ ಹೆಚ್ಚು ನಂಬಿಕೆಯನ್ನ ಹೊಂದಿದವರು. ಇವರಿಗೆ ಹೋಲಿಸಿ ನೋಡಿದರೆ ಕತಲಾನ್ ಗಳು ಕ್ಯಾಪಿಟಲಿಸ್ಟ್ ಗಳು , ವಿಚಾರವಂತರು , ಅಳೆದು ತೂಗಿ ನಿರ್ಧಾರವನ್ನ ತೆಗೆದುಕೊಳ್ಳುವ ಜನ , ಅಂದಲೂಸಿಗಳಷ್ಟು ಭಾವುಕರಲ್ಲ.

ಜನವರಿ 2021ರಲ್ಲಿ ಕತಲೂನ್ಯ ರಾಜ್ಯದ ಜನಸಂಖ್ಯೆ 75 ಲಕ್ಷ 22 ಸಾವಿರದ 596. ಇದು ಸ್ಪೇನ್ ದೇಶದ ಜನಸಂಖ್ಯೆಯ 16 ಪ್ರತಿಶತ . ಇಷ್ಟೊಂದು ಪುಟಾಣಿ ಜನಸಂಖ್ಯೆ ಹೊಂದಿರುವ ರಾಜ್ಯ ದಶಕಗಳಿಂದ ಸ್ವತಂತ್ರವಾಗುವ ಕನಸನ್ನ ಕಾಣುತ್ತ ಬಂದಿದೆ. ಕತಲೂನ್ಯ ಇಸ್ ನಾಟ್ ಸ್ಪೇನ್ ಎನ್ನುವುದು ಇವರ ಘೋಷಣೆ. ಸ್ಪೇನ್ ದೇಶದ ರೀತಿ ರಿವಾಜುಗಳನ್ನ ತಿರಸ್ಕರಿಸಿ ಎಲ್ಲದಕ್ಕೂ ತಮ್ಮದೇ ರೀತಿ ರಿವಾಜುಗಳನ್ನ ಕೂಡ ಇವರು ಸೃಷ್ಟಿಸಿಕೊಂಡಿದ್ದಾರೆ .

ಇಲ್ಲಿನ ರಾಜ್ಯದ ಸರಹದ್ದಿನಲ್ಲಿ ಹುಟ್ಟಿದ ಮಕ್ಕಳೆಲ್ಲಾ ಕತಲೂನ್ಯರು ಎನ್ನುವುದು ಕೂಡ ಇವರ ಪರಿಪಾಠ. ಅನನ್ಯ 2009ರಲ್ಲಿ ಬಾರ್ಸಿಲೋನಾ ನಗರದ ಕಾನ್ರುತಿ ಎನ್ನುವ ಆಸ್ಪತ್ರೆಯಲ್ಲಿ ಹುಟ್ಟಿದಾಗ , ಪ್ರಸೂತಿ ಮಾಡಿದ ವೈದ್ಯರು ನನ್ನ ಕೈಗೆ ಅನ್ನಿಯನ್ನ ಇಟ್ಟು , ಇನ್ನೊಬ್ಬಳು 'ಕತಲಾನ' ಹುಟ್ಟಿದ್ದಳು , 74 ಲಕ್ಷದ 29 ಸಾವಿರದ 418ನೇ ಪ್ರಜೆ ಇವಳು ಎನ್ನುವಾಗ ಅವರ ಕಣ್ಣಲ್ಲಿ ಕಂಡ ತಮ್ಮ ರಾಜ್ಯದ (ಅವರ ಪ್ರಕಾರ ದೇಶದ ) ಬಗೆಗಿನ ಅಪರಿಮಿತ ಅಭಿಮಾನ ವರ್ಣಿಸುವುದು ಅಸಾಧ್ಯ. ಇಲ್ಲಿನ ಎಲ್ಲಾ ಪ್ರಜೆಗಳ ಒಟ್ಟು ಅಭಿಮಾನ ಈ ರಾಜ್ಯವನ್ನ ಬೇರೆ ರಾಜ್ಯಕ್ಕಿಂತ ವಿಶಿಷ್ಟವಾಗಿಸಿದೆ.

English summary
Barcelona Memories Column By Rangaswamy Mookanahalli Part 32.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X