ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಲಿಬಿಲಿ ಮನಸ್ಸಿನಿಂದಲೇ ಸ್ಥಿರತೆ, ಸಾವಿನ ನೆರಳಲ್ಲೇ ಬದುಕಿನ ಚಿಗುರು ಕೊನರುತ್ತದೆ!!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಗ್ರೀಕ್ ಭಾಷೆಯಲ್ಲಿ ಸಾವಿಗೆ ಥಾನಾಟೋಸ್ ಎನ್ನುತ್ತಾರೆ. ಸ್ಪ್ಯಾನಿಷ್ ಭಾಷೆಯಲ್ಲಿ ಇದಕ್ಕೆ ಮ್ಯೂರ್ತೆ ಎನ್ನುತ್ತಾರೆ. ಇಟಾಲಿಯನ್ ನಲ್ಲಿ ಮೊರ್ತೆ. ಹೀಗೆ ಬೇರೆ ಬೇರೆ ಭಾಷೆಯಲ್ಲಿ ಸಾವು ಎನ್ನುವ ಅರ್ಥ ಕೊಡುವ ಪದಕ್ಕೆ ಬೇರೆ ಬೇರೆ ಹೆಸರು, ಮತ್ತು ಉಚ್ಚಾರಣೆ. ಸಾವು ಎನ್ನುವುದು ಜಗತ್ತಿನೆಲ್ಲೆಡೆ ನೀಡುವ ದುಃಖ ಒಂದೇ ರೀತಿಯದು. ಆದರೆ ಅದನ್ನ ತೋರ್ಪಡಿಸುವ ವಿಧಾನದಲ್ಲಿ ಅದೆಷ್ಟು ಬದಲಾವಣೆ ! ಇಲ್ಲಿಗೆ ಬಂದು ದಶಕವಾದರೂ ನಾನು ಯಾರೊಬ್ಬರ ಅಂತಿಮ ಕ್ರಿಯೆಯಲ್ಲಿ ಭಾಗವಹಿಸುವ ಅವಕಾಶವನ್ನ ಪಡೆದಿರಲಿಲ್ಲ.

ಅದು 2009ರ ಒಂದು ದಿನ. ತಿಂಗಳು ಮತ್ತು ಸರಿಯಾದ ದಿನಾಂಕ ಮರೆತು ಹೋಗಿದೆ. ಸ್ನೇಹಿತ ಫ್ರಾನ್ಸಿಯ ತಾತ ಈ ಲೋಕದ ಆಟಕ್ಕೆ ಆದಿಯೋಸ್ ಹೇಳಿ ಹೊರಟಿದ್ದರು. ಫ್ರಾನ್ಸಿ ತಾತನ ಫ್ಯೂನರಲ್ ಗೆ ಹೋಗುವ ಬಗ್ಗೆ ಹೇಳಿದಾಗ ನಾನು ತಕ್ಷಣ ಅವನಲ್ಲಿ ನಾನು ಕೂಡ ಜೊತೆ ಬರಬಹುದೇ ಎಂದು ವಿನಂತಿಸಿದೆ. ನೀನು ಬರಬಹದು ಆದರೆ ನಮ್ಮಲ್ಲಿ ಒಂದಷ್ಟು ಕಟ್ಟಳೆಗಳಿವೆ ಅವನ್ನ ಪಾಲಿಸಬೇಕಾಗುತ್ತದೆ ಎಂದನಾತ. ಫ್ಯೂನರಲ್ ಗೆ ಹೋಗುವರು ಗಾಢವಾದ ಬಣ್ಣದ ಪ್ಯಾಂಟ್ ಮತ್ತು ಶರ್ಟ್ ಧರಿಸಬೇಕಾಗುತ್ತದೆ. ಟಿ ಶರ್ಟ್ , ನಿಕ್ಕರು ಅಥವಾ ಜೀನ್ಸ್ ಪ್ಯಾಂಟ್ ಧರಿಸಿ ಹೋಗುವಂತಿಲ್ಲ.

ಜಗತ್ತಿನಲ್ಲಿ ಕೆಟ್ಟದ್ದು ಎಷ್ಟಿದೆಯೋ ಅದರ 100 ಪಟ್ಟು ಒಳ್ಳೆಯದೂ ಇದೆ!ಜಗತ್ತಿನಲ್ಲಿ ಕೆಟ್ಟದ್ದು ಎಷ್ಟಿದೆಯೋ ಅದರ 100 ಪಟ್ಟು ಒಳ್ಳೆಯದೂ ಇದೆ!

ಗಾಢವಾದ ಬಣ್ಣದ ಯಾವುದಾದರೂ ಬಟ್ಟೆ ಎಂದು ಹೇಳುತ್ತಾರೆ. ಆದರೆ ಇಲ್ಲಿ ನೂರಕ್ಕೆ ನೂರು ಜನ ಕಪ್ಪು ಪ್ಯಾಂಟ್ ಮತ್ತು ಕಪ್ಪು ಶರ್ಟ್ ಧರಿಸಿ ಬರುತ್ತಾರೆ. ಪರಿಚಿತರಾಗಿದ್ದರೆ ಸತ್ತವರ ಕುಟುಂಬದ ಸದಸ್ಯರ ಕೈ ಹಿಡಿದು ಒಂದೆರೆಡು ಸಾಂತ್ವನದ ಮಾತು ಹೇಳುತ್ತಾರೆ. ಅವರೇನು ಹೇಳಿದರು ಎನ್ನುವುದು ಪಕ್ಕದಲ್ಲಿ ನಿಂತವರಿಗೂ ಕೇಳಿಸುವುದಿಲ್ಲ ಅಷ್ಟೊಂದು ಮೆಲು ಧ್ವನಿಯಲ್ಲಿ ಮಾತನಾಡುತ್ತಾರೆ. ಪರಿಚಿತರಲ್ಲದಿದ್ದರೆ (ಉದಾಹರಣೆಗೆ ನನ್ನ ಕೇಸ್ ನಲ್ಲಿ ನನಗೆ ಫ್ರಾನ್ಸಿಯ ಮನೆಯ ಇತರ ಸದಸ್ಯರು ಪರಿಚಯವಿರಲಿಲ್ಲ.) ಕುಟುಂಬದ ಸದಸ್ಯರು ಕಂಡಾಗ ಸಣ್ಣ ನಗೆ ಬಿರಬೇಕು.

Barcelona Memories Column By Rangaswamy Mookanahalli Part 31

ಅಚ್ಚರಿ ಅನ್ನಿಸುತ್ತದೆ ಅವರು ಸಾವಿನ ದುಃಖದಲ್ಲಿದ್ದರೆ ನಾವು ನಗುವುದು ಹೇಗೆ ? ನಗು ಎಂದರೆ ಅದು ನಗುವಲ್ಲ , ಪ್ಲೀಸ್ ಟೇಕ್ ಕೇರ್ ಎನ್ನುವ ನೋಟದ ನಗು. ಇನ್ನು ಸತ್ತವರು ಯಾವುದೇ ವಯಸ್ಸಿನವರಿರಲಿ ಜೋರಾಗಿ ಅಳುವುದು ಇಲ್ಲಿನ ಜನ ಮಾಡುವುದಿಲ್ಲ. ಅದೆಲ್ಲವನ್ನ ಮೊದಲೇ ಮಾಡಿ ಮುಗಿಸಿರುತ್ತಾರೋ ಏನೋ ನನಗೆ ತಿಳಿಯದು. ಒಮ್ಮೆ ಪಬ್ಲಿಕ್ ಸೇರಿದರೆ ಅಲ್ಲಿಗೆ ಮುಗಿಯಿತು. ಬಹಳ ಗಂಭೀರವಾಗಿ ವರ್ತಿಸುತ್ತಾರೆ ವಿನಃ ಅಳುವುದು , ಕೂಗಾಟ , ಕಿರುಚಾಟ ಇಲ್ಲವೇ ಇಲ್ಲ. ಇನ್ನು ಎಲ್ಲರೂ ಕಣ್ಣಿಗೆ ಕಪ್ಪು ಕನ್ನಡಕವನ್ನ ಸಹಿತ ಹಾಕಿರುತ್ತಾರೆ. ಹೀಗಾಗಿ ಯಾರ ಮನಸ್ಸಿನ ಭಾವನೆಯನ್ನ ಸಹ ಓದಲು ಆಗುವುದಿಲ್ಲ.

ಇಲ್ಲಿ ಸಾವು ಕೂಡ ತುಂಬಾ ಖರ್ಚಿನ ಬಾಬ್ತು. ಬಹಳಷ್ಟು ಜನ ಬದುಕಿರುವಾಗಲೇ ಫ್ಯೂನರಲ್ ಇನ್ಶೂರೆನ್ಸ್ ಮಾಡಿಸಿ ಅದಕ್ಕೆ ಪ್ರೀಮಿಯಂ ಕೂಡ ಕಟ್ಟಲು ಶುರು ಮಾಡಿರುತ್ತಾರೆ. ಇಲ್ಲಿ ಸಾಮಾನ್ಯವಾಗಿ ಶವವನ್ನ ಮರದ ಪೆಟ್ಟಿಗೆಯಲ್ಲಿ ಇಟ್ಟು ಅದನ್ನ ನೆಲದಲ್ಲಿ ಹೊಳಲಾಗುತ್ತದೆ. ಮರದ ಶವ ಪೆಟ್ಟಿಗೆ 3 ರಿಂದ ಶುರುವಾಗಿ 25/30 ಸಾವಿರ ಯುರೋ ತನಕ ಬೆಲೆ ಇರುತ್ತದೆ. ಇನ್ನು ಅದನ್ನ ಹೊಳಲು ನೆಲಕ್ಕೆ ಕೂಡ 25/50 ಸಾವಿರ ಯುರೋ ಖರ್ಚಾಗುತ್ತದೆ. ಮುಕ್ಕಾಲು ಪಾಲು ಜನ ಇಷ್ಟೊಂದು ದುಡ್ಡನ್ನ ಸಾವಿನ ನಂತರ ಖರ್ಚು ಮಾಡಲು ಇಷ್ಟಪಡುವುದಿಲ್ಲ .

ಹೀಗಾಗಿ 2/3 ಸಾವಿರ ಯುರೋ ಪೆಟ್ಟಿಗೆಯಲ್ಲಿ ಇಟ್ಟು ಇನ್ನೊಂದೆರೆಡು ಸಾವಿರ ಕೊಟ್ಟು ನಮ್ಮ ಬ್ಯಾಂಕ್ ಲಾಕರ್ ನಂತೆ ಕಾಣುವ ಗೋಡೆಗೆ ಅಂಟಿಕೊಂಡಿರುವ ಆರು ಅಡಿ ಉದ್ದ, ಮೂರಡಿ ಅಗಲದ ಕ್ಯಾಬಿನ್ ನಲ್ಲಿರಿಸುತ್ತಾರೆ. ಎಲ್ಲಕ್ಕಿಂತ ಹೆಚ್ಚಿನ ಆಶ್ಚರ್ಯವಾದದ್ದು ಶವಪೆಟ್ಟಿಗೆಯನ್ನ ಹೀಗೆ ಕ್ಯಾಬಿನ್ ಅಥವಾ ನೆಲದಲ್ಲಿ ಇರಿಸುವಾಗ ಚಪ್ಪಾಳೆ ಹೊಡೆಯುತ್ತಾರೆ. ಕೆಲವರು ಬ್ರಾವೊ (ಬ್ರೇವ್ - ಧೈರ್ಯಶಾಲಿ ಎನ್ನುವ ಅರ್ಥ ) ಎಂದು ಮೆಲುದನಿಯಲ್ಲಿ ಹೇಳುತ್ತಾರೆ. ಸತ್ತವರ ಆತ್ಮ ಬೇಸರಿಸಿಕೊಳ್ಳದೆ ಹೋಗಲಿ ಎನ್ನುವ ಕಾರಣದಿಂದ ಅಳುವುದು , ಕೂಗಾಡುವುದು ಮಾಡುವುದಿಲ್ಲ.

ನಿನ್ನ ಬದುಕನ್ನ ನೀನು ಚನ್ನಾಗಿ ಸಾಗಿಸಿದೆ , ನೀನೊಬ್ಬ ಧೈರ್ಯವಂತ ಎನ್ನುವ ಅರ್ಥ ಬರುವಂತೆ ಕೆಲವೊಮ್ಮೆ ಬ್ರಾವೊ ಎನ್ನುವ ಪದದ ಉಚ್ಚಾರಣೆ ಕೂಡ ಮಾಡುತ್ತಾರೆ. ಶವಪೆಟ್ಟಿಗೆ ಇಡುವಷ್ಟು ಸಮಯ ಅಂದರೆ 2/3 ನಿಮಿಷ ಚಪ್ಪಾಳೆ ತಟ್ಟುತ್ತಲೆ ಇರುತ್ತಾರೆ. ಇಲ್ಲಿ ಒಟ್ಟು ಮೂರು ಹಂತಗಳಿವೆ . ಮೊದಲನೆಯದು ಮೇಲೆ ಹೇಳಿದಂತೆ ನಡೆಯುತ್ತದೆ . ಪಾದ್ರಿ ಕೆಲವೊಂದು ಬೈಬಲ್ ನ ಕೆಲವೊಂದು ಮಂತ್ರಗಳನ್ನ ಹೇಳುತ್ತಾರೆ. ಎರಡನೆಯದು ಕೆಲವೊಂದು ಮನೆತನೆಗಳು ಸತ್ತ ವ್ಯಕ್ತಿಯ ಬಗ್ಗೆ ಒಂದಷ್ಟು ಮಾತುಕತೆಯನ್ನ , ಸಂತಾಪ ಸೂಚಕ ಸಭೆಯನ್ನ ಇಟ್ಟು ಕೊಳ್ಳುತ್ತವೆ.

ಸತ್ತವರ ಕುಟುಂಬದವರು ಸತ್ತ ವ್ಯಕ್ತಿಯ ಬಗ್ಗೆ ಮಾತನಾಡುತ್ತಾರೆ. ಮುಕ್ಕಾಲು ಪಾಲು ಸತ್ತ ವ್ಯಕ್ತಿಯ ಗುಣಗಾನ ಮಾಡಲಾಗುತ್ತದೆ. ನಂತರ ಸತ್ತ ವ್ಯಕ್ತಿಯ ಸನಿಹದ ಸ್ನೇಹಿತರು ಮಾತನಾಡುತ್ತಾರೆ. ಅದೂ ಕೂಡ ಸತ್ತ ವ್ಯಕ್ತಿಯ ಹೊಗಳಿಕೆಯಾಗಿರುತ್ತದೆ. ಮೂರನೆಯದು ಫ್ಯೂನರಲ್ ಗೆ ಬಂದವರಿಗೆ ಒಂದಷ್ಟು ಆಹಾರ ಮತ್ತು ವೈನ್ ವ್ಯವಸ್ಥೆಯನ್ನ ಮಾಡಲಾಗಿರುತ್ತದೆ. ಅದನ್ನ ಸೇವಿಸಿ ಎಲ್ಲರೂ ತಮ್ಮ ಮನೆಯತ್ತ ಹೋಗುತ್ತಾರೆ. ಮೇಲಿನ ಮೂರು ಹಂತಗಳು ಆರ್ಥಿಕವಾಗಿ ಸಬಲರಾಗಿದ್ದ ಕುಟುಂಬದಲ್ಲಿ ಮಾತ್ರ ನಡೆಯುತ್ತದೆ. ಮುಕ್ಕಾಲು ಪಾಲು ಜನ ಮೊದಲೇ ಹಂತವನ್ನ ಮಾಡಿ ಮುಗಿಸುತ್ತಾರೆ.

 ನಮ್ಮ ನಂಬಿಕೆ ಇನ್ನೊಬ್ಬರ ನಂಬಿಕೆಯನ್ನ ಎಂದೂ ಕದಡಬಾರದು! ನಮ್ಮ ನಂಬಿಕೆ ಇನ್ನೊಬ್ಬರ ನಂಬಿಕೆಯನ್ನ ಎಂದೂ ಕದಡಬಾರದು!

ಉಳಿದಂತೆ ಪ್ರತಿವರ್ಷ ನವೆಂಬರ್ 1ರಂದು ' ದಿಯಾ ದೆ ತೊದೊಸ್ ಲೋಸ್ ಸಾಂತೋಸ್ ' ( Día de Todos los Santos) ಎನ್ನುವ ಹಬ್ಬವನ್ನ ಆಚರಿಸುತ್ತಾರೆ. ಇದು ಥೇಟ್ ನಮ್ಮಲ್ಲಿನ ' ಪಿತೃಪಕ್ಷ ' ದ ಪ್ರತಿರೂಪ. ಇಲ್ಲಿ ತಿಥಿ ಎನ್ನುವುದಿಲ್ಲ ಆದರೆ ಪ್ರತಿ ವರ್ಷ ನವೆಂಬರ್ 1ರಂದು ಸತ್ತ ತಮ್ಮ ಎಲ್ಲಾ ಪ್ರೀತಿ ಪಾತ್ರರ ಅಥವಾ ಪೂರ್ವಜರ ನೆನೆಯುತ್ತಾರೆ. ಅವರ ಸಮಾಧಿಯ ಬಳಿ ಹೂಗುಚ್ಚವನ್ನ ಇರಿಸುವುದು ಬಹಳ ಸಾಮಾನ್ಯ. ಬಹಳಷ್ಟು ಜನ ಸತ್ತವರಿಗೆ ಅತ್ಯಂತ ಪ್ರೀತಿ ಪಾತ್ರವಾದ ಊಟ , ತಿಂಡಿ ಅಥವಾ ಸಿಗರೇಟು , ವೈನ್ ಕೂಡ ಸಮಾಧಿಯ ಬಳಿ ಇಡುತ್ತಾರೆ.

ಅಂದಿನ ದಿನ ಸ್ಮಶಾಣಕ್ಕೆ ಸರಕಾರ ವಿಶೇಷ ಬಸ್ಸುಗಳ ಸೌಕರ್ಯವನ್ನ ಕೂಡ ಮಾಡಿಕೊಡುತ್ತದೆ. ನಮ್ಮ ಪಿತೃಪಕ್ಷದಲ್ಲಿ ಕೂಡ ನಾವು ಮಾಡುವುದು ಇದನ್ನೇ ಅಲ್ಲವೇ ? ಇಲ್ಲಿ ಕೂಡ ಸಾವಿನ ನಂತರ ಮೃತ ಆತ್ಮದ ಬಗ್ಗೆ ಬಹಳಷ್ಟು ನಂಬಿಕೆ , ಮೂಢನಂಬಿಕೆಗಳು ಇವೆ. ಕರೋನ ಕಾಲಘಟ್ಟದಲ್ಲಿ ಸರಿಯಾಗಿ ಅಂತಿಮ ವಿದಾಯ ಸಿಗದ ಆತ್ಮಗಳು ತೊಳಲಾಡುತ್ತಿರುತ್ತವೆ ಎನ್ನುವುದು ಬಹಳಷ್ಟು ಜನರ ನಂಬಿಕೆ.

ಗಲಿಬಿಲಿಯಾದ ಮನಸ್ಸಿನಿಂದಲೇ ಸ್ಥಿರತೆ ಹುಟ್ಟಿ ಬರುತ್ತದೆ, ಆತಂಕದ ಬಸುರಿನಿಂದಲೇ ನಿಶ್ಚಯದ ಕೃತಿ ಬರುತ್ತದೆ, ಸಾವಿನ ನೆರಳಲ್ಲೇ ಬದುಕಿನ ಚಿಗುರು ಕೊನರುತ್ತದೆ, ನಿರಾಸೆಯ ಮಡುವಿನಿಂದಲೇ ಶ್ರದ್ಧೆಯ ಸಂದೇಶ ಉಕ್ಕಿ ಬರುತ್ತದೆ ಎನ್ನುವುದರಲ್ಲಿ ಅತೀವ ನಂಬಿಕೆ ಮತ್ತು ಶ್ರದ್ದೆಯನ್ನ ಹೊಂದಿರುವ ನನಗೆ ಮನುಷ್ಯ ಬದುಕಿದ್ದಾಗ ಅವರನ್ನ ಗೌರವ ಮತ್ತು ಘನತೆಯಿಂದ ನಡೆಸಿಕೊಂಡಿದ್ದೆ ಆದರೆ ಅವರ ಸಾವು ಅಥವಾ ಅವರ ಆತ್ಮ ನಮ್ಮನ್ನ ಎಂದೂ ಕಾಡದು ಎನ್ನುವ ವಿಶ್ವಾಸ.

ಹೆಚ್ಚು ಕಡಿಮೆ ನಾವೆಲ್ಲಾ ಒಂದೇ ಎನ್ನುವ ಮೇಲಿನ ಅನುಭವದೊಂದಿಗೆ ಇನ್ನೊಂದು ಘಟನೆಯನ್ನ ಕೂಡ ಹಂಚಿಕೊಳ್ಳುತ್ತೇನೆ . ದಿನ ಬೆಳಿಗ್ಗೆ 5.30ಕ್ಕೆ ಎದ್ದು 6 ಘಂಟೆಗೆ ಜಾಗಿಂಗ್ ಹೊರಟರೆ ಬರುವುದು 7ಕ್ಕೆ , ಬೇಸಿಗೆಯಲ್ಲಿ ಸರಿ ,ಚಳಿಗಾಲದಲ್ಲಿ ? ವಾತಾವರಣ ಹೇಗೆ ಇರಲಿ ನಾನು ನನ್ನ ದಿನಚರಿ ಬದಲಿಸಿದವನಲ್ಲ . ಹೀಗೆ 2010ರ ಒಂದು ದಿನ , ತಾಪಮಾನ-1, ನಿತ್ಯದಂತೆ ಎದ್ದು ,ಓಡಿ, ನಂತರ ಇಲ್ಲಿನ ಸರಕಾರಿ ಕಛೇರಿಗೆ ಬೇಟಿ ಕೊಟ್ಟು ,ಕೆಲಸ ಮುಗಿದ ನಂತರ ಕಾಫಿ ಬಾರ್ ಹೊಕ್ಕೆ , ಹೋಸೆ ಅಲ್ಲಿ ಕೆಲಸ ಮಾಡುವನ ಹೆಸರು.

 ಬದುಕೆಂದರೆ ಇಷ್ಟೇ? ತಾನೊಂದು ನೆನೆದರೆ ಮಾನವ, ಬೇರೊಂದು ಬಗೆಯುವುದು ದೈವ! ಬದುಕೆಂದರೆ ಇಷ್ಟೇ? ತಾನೊಂದು ನೆನೆದರೆ ಮಾನವ, ಬೇರೊಂದು ಬಗೆಯುವುದು ದೈವ!

ಅವನೊಂದಿಗೆ ಮಾತಿಗಿಳಿದೆ ,ಬೇಸಿಗೆಯಿರಲಿ ,ಚಳಿಗಾಲವಾಗಲಿ ಆತ ನಿತ್ಯ ಬೆಳಿಗ್ಗೆ 4ಘಂಟೆಗೆ ಕೆಲಸಕ್ಕೆ ಹಾಜರ್ . ಕಳೆದ 25ವರ್ಷದಿಂದ ಇದೆ ಅವನ ದಿನಚರಿ !!., ನನ್ನ ಖುಷಿಗೆ ನಾನು ಎದ್ದು ಓಡುವುದಕ್ಕೂ ,ಕೆಲಸ ಮಾಡಲೇ ಬೇಕೆಂಬ ಕಟ್ಟುಪಾಡಿಗಾಗಿ ಏಳುವುದಕ್ಕೂ ತುಂಬಾನೇ ವ್ಯತ್ಯಾಸವಿದೆ.ಚಳಿಯಿರಲಿ ಬಿಸಿಲಿರಲಿ ನಾನು ಓಡುವುದು ತಪ್ಪಿಸಿಲ್ಲ ಅ ಬಗ್ಗೆ ನನಗಿದ್ದ ಹೆಮ್ಮೆ (ಆಹಂಕಾರ ?)ಗೆ ಹೋಸೆಯ ಮಾತು ನಾಟಿತು.

ಜಗತ್ತಿನ ಯಾವುದೇ ಭಾಗದಲ್ಲಿ ನಾವು ವಾಸಿಸಲಿ ಆ ಭಗವಂತನ ಕರುಣೆ, ಒಂದಷ್ಟು ಅದೃಷ್ಟದ ಜೊತೆ ಇರದಿದ್ದರೆ ಬದುಕು ಪೂರ್ಣ ಹೋರಾಡುತ್ತಲೆ ಇರಬೇಕು. ವಿದೇಶ ಅದರಲ್ಲೂ ಯೂರೋಪು ಅಥವಾ ಅಮೆರಿಕಾ ಎಂದತಕ್ಷಣ ಅಲ್ಲಿನ ಎಲ್ಲರ ಬದುಕೂ ಬಹಳ ಸುಂದರ , ಅಲ್ಲಿನ ಎಲ್ಲರೂ ಸ್ಥಿತಿವಂತರು , ಹಣವಂತರು ಎನ್ನುವ ಭಾವನೆ ನಮ್ಮಲ್ಲಿ ಬಹಳಷ್ಟು ಜನರಿಗಿದೆ , ಅದು ಶುದ್ಧ ಸುಳ್ಳು ಎನ್ನುವುದನ್ನ ಹೇಳುವುದಕ್ಕೆ ಇದನ್ನ ಉಲ್ಲೇಖಿಸಬೇಕಾಯ್ತು.

ಅಲ್ಲಿನವರಿಗೆ ಹಣವೇನೂ ಗಿಡದಲ್ಲಿ ಬಿಡುವುದಿಲ್ಲ . ಹಾಗೆ ನೋಡಲು ಹೋದರೆ , ಭಾರತೀಯ ಮಧ್ಯಮ ವರ್ಗ ಅನುಭವಿಸುತ್ತಿರುವ ಸವಲತ್ತುಗಳನ್ನ ಜಗತ್ತಿನ ಇತರ ಯಾವುದೇ ದೇಶದ ಜನ ಅನುಭವಿಸಲು ಸಾಧ್ಯವಿಲ್ಲ. ಮನೆಗೆಲಸವರು , ಡ್ರೈವರ್ ಇವೆಲ್ಲ ಅಲ್ಲಿ ಸಾಹುಕಾರರು ಮಾತ್ರ ಭರಿಸಬಹುದಾದ ಖರ್ಚುಗಳು. ಇನ್ನೊಂದು ನಾವೆಲ್ಲಾ ಸೇಮ್ ಆದರೂ ನಮ್ಮ ವರ್ತನೆಯಲ್ಲಿ ಇರುವ ಬದಲಾವಣೆಯನ್ನ ಹೇಳಿ ಈ ವಾರದ ಬರಹಕ್ಕೆ ವಿರಾಮ ಹಾಕುವೆ.

ಬೆಂಗಳೂರಿನಲ್ಲಿ ಮಕ್ಕಳು ಶಾಲೆಗೆ ಹೋಗಲು 6.30/7/7.30ರ ಬೆಳಿಗ್ಗೆ ಸಮಯ ಸ್ಕೂಲ್ ಬಸ್ ಕಾಯುತ್ತಾ ನಿಂತಿರುವುದು ಸಾಮಾನ್ಯ ದೃಶ್ಯ . ಬಹುಪಾಲು ಮಕ್ಕಳು ಬೆಳಿಗ್ಗೆ ತಿಂಡಿ ತಿನ್ನದೇ ಹೊರಡುತ್ತಾರೆ , ಪಕ್ಕದಲ್ಲಿ ಇರುವ ಶಾಲೆ ಸರಿಯಿಲ್ಲ ಎನ್ನುವ ಕಾರಣ ಕೊಡುವ ಪೋಷಕರು ಮಕ್ಕಳ ಕಳಿಸುವುದು 10/12 ಕಿಲೋಮೀಟರ್ ದೂರದ ಶಾಲೆಗೆ ! ವಿಜಯನಗರದಲ್ಲಿ ಇರುವ ಮಗು ಅಲ್ಲೇ ಇರವ ಶಾಲೆಗೆ ಹೋಗದೆ (ಕಳಿಸದೆ ) ನಾಗರಭಾವಿ ಶಾಲೆಗೆ ಬರುತ್ತೆ , ಇಲ್ಲಿನ ಮಗು ವಿಜಯನಗರ ಶಾಲೆಗೆ!!

 ಎಲ್ಲರಿಗೂ ಕನಸಿನಲ್ಲಿ ಕನ್ಯೆಯರು ಬಂದರೆ ನನಗೆ ಮೊಸರನ್ನ ಬರುತ್ತಿತ್ತು!! ಎಲ್ಲರಿಗೂ ಕನಸಿನಲ್ಲಿ ಕನ್ಯೆಯರು ಬಂದರೆ ನನಗೆ ಮೊಸರನ್ನ ಬರುತ್ತಿತ್ತು!!

ಯೂರೋಪಿನ ಬಹುತೇಕ ದೇಶಗಳಲ್ಲಿ ಬೆಳಗಿನ ತಿಂಡಿ ಮಿಸ್ ಮಾಡಬೇಡಿ ಎಂದು ಕೋಟ್ಯಂತರ ಯುರೋ ಖರ್ಚು ಮಾಡಿ ಜಾಹಿರಾತು ನೀಡುತ್ತಿವೆ . ಅಲ್ಲಿ ಮಕ್ಕಳು ಹೆಚ್ಚೆಂದರೆ 3ಕಿಲೋಮೀಟರ್ ಅಂತರ (ವಾಸಿಸುವ ಮನೆಯಿಂದ ) ದಲ್ಲಿ ಇರುವ ಶಾಲೆ ಸೇರಬಹುದು , ದೂರದ ಶಾಲೆ ಸೇರಲು ಬಯಸಿದರೆ ಮನೆ ಅಲ್ಲೇ ಮಾಡಬೇಕು. ನೀವು ತಿಪ್ಪರಲಾಗ ಹಾಕಿದರೂ ನಿಮ್ಮ ಮನೆಯ ಮೂರು ಕಿಲೋಮೀಟರ್ ಪರಿಧಿ ಮೀರಿದ ಶಾಲೆಯನ್ನ ಅವರು ನೀಡುವುದಿಲ್ಲ. ಇಲ್ಲಿ ಶಿಕ್ಷಣ ಉಚಿತ. 99 ಪ್ರತಿಶತ ಜನ ಉಚಿತ ಶಾಲೆಗೆ ಸೇರಿಸುತ್ತಾರೆ. ಉಳಿದೊಂದು ಪ್ರತಿಶತ ಪ್ರೈವೆಟ್ ಸ್ಕೂಲ್ ಹುಡುಕಿಕೊಳ್ಳುತ್ತಾರೆ.

ಎಲ್ಲಾ ದೇಶಗಳಲ್ಲೂ ವ್ಯವಸ್ಥೆಯಲ್ಲಿ ಒಂದಷ್ಟು ಲೋಪದೋಷಗಳು ಇದ್ದೆ ಇರುತ್ತವೆ. ಎಲ್ಲೆಲ್ಲಿ ಮನುಷ್ಯರಿದ್ದಾರೆ ಅಲ್ಲಿ ಇಂತಹ ತಪ್ಪುಗಳು ಸಹಜ. ನಾವು ಭಾರತೀಯರು ಬಹುಬೇಗ ವಿದೇಶಿಯರ ಬಗ್ಗೆ ಇಲ್ಲದ ನಂಬಿಕೆ ಬೆಳಸಿಕೊಂಡು ಬಿಡುತ್ತೇವೆ. ಅಲ್ಲಿನ ದೇಶ , ಜನ ಮಾಡಿದ್ದು ಬೆಸ್ಟ್ ಎನ್ನುವ ಭಾವನೆ ಬೆಳಸಿಕೊಳ್ಳುತ್ತೇವೆ. ನಮ್ಮ ದೇಶವನ್ನ ಅವರೊಂದಿಗೆ ಹೋಲಿಕೆ ಮಾಡಿಕೊಂಡು ಹಳಿಯಲು ಶುರು ಮಾಡುತ್ತೇವೆ . ನಾವು ಬದಲಾವಣೆ ಬಯಸುತ್ತೇವೆ ನಿಜ ಆದರೆ ಆ ಬದಲಾವಣೆ ಮಾತ್ರ ನನ್ನಿಂದಲೇ ಶುರುವಾಗಲಿ ಎನ್ನುವ ಮನೋಭಾವ ಮಾತ್ರ ಇನ್ನೂ ಕಾಣುತ್ತಿಲ್ಲ.

English summary
Barcelona Memories Column By Rangaswamy Mookanahalli Part 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X