ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕೆಂದರೆ ಇಷ್ಟೇ? ತಾನೊಂದು ನೆನೆದರೆ ಮಾನವ, ಬೇರೊಂದು ಬಗೆಯುವುದು ದೈವ!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಅದು 2003/2004ರ ಸಮಯ. ಬಾರ್ಸಿಲೋನಾ ನಗರ ಮಾತ್ರವಲ್ಲ , ಸ್ಪೇನ್ ಮತ್ತಿತ್ತರ ಎಲ್ಲಾ ಯೂರೋಪಿಯನ್ ದೇಶಗಳಲ್ಲಿ ಮನೆಗಳ ಬೆಲೆ ಗಗನವನ್ನ ಮುಟ್ಟಿ ಮೇಲೇರುತ್ತಿದ್ದ ಸಮಯ. ಈಗ ಬಿಟ್ಟು ಬಿಟ್ಟರೆ ಮುಂದೇನು ? ಇದೆ ಬೆಲೆಗೆ ಸಿಗುವುದಿಲ್ಲ ಎನ್ನುವ ವಿಚಿತ್ರ ಹಪಹಪಿಕೆ ಜನರಲ್ಲಿ ಆಗಲೇ ಬೇರೂರಿತ್ತು. ಸಾಲದಕ್ಕೆ ಈ ದಿನಗಳಲ್ಲಿ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗರಿಗೆ ಕೂಡ ಒಂದೂವರೆ ಲಕ್ಷ ಯುರೋ ಸಾಲ ಕೊಟ್ಟು ಮನೆಯನ್ನ ಅವನ ತಲೆಗೆ ಕಟ್ಟುತ್ತಿದ್ದರು .

ಇಂತಹ ಸಾಲಗಳಿಗೆ ನಿಂಜಾ ಸಾಲ ಎನ್ನುತ್ತಾರೆ. ಅಮೇರಿಕಾದಲ್ಲಿ ಈ ರೀತಿಯ ಸಾಲವನ್ನ ಕೊಟ್ಟು ಜನತೆಯನ್ನ ಸಾಲಗಾರರನ್ನಾಗಿಸಿ ಯಶಸ್ವಿಯಾಗಿದ್ದರು. ಅದೇ ಅಲೆ ಯೂರೋಪಿಗೂ ಬಂದಿತ್ತು. ಇದೆ ದಿನಗಳಲ್ಲಿ ನನ್ನ ಉದ್ಯೋಗದ ಉತ್ತುಂಗವನ್ನ ಏರುತ್ತಿದ್ದ ಕಾಲ. ಕೈ ತುಂಬಾ ಸಂಬಳ , ಬೆಂಗಳೂರಿನಲ್ಲಿ ಮನೆ ಮಾಡಿದ್ದಾಗಿತ್ತು. 2005ರಲ್ಲಿ ಮದುವೆಯಾಗಿ ರಮ್ಯ ಬಾಳಿಗೆ ಬರುವ ಮುನ್ಸೂಚನೆ ಕೂಡ 2004ರಲ್ಲೇ ಸಿಕ್ಕಿತ್ತು.

ಎಲ್ಲರಿಗೂ ಕನಸಿನಲ್ಲಿ ಕನ್ಯೆಯರು ಬಂದರೆ ನನಗೆ ಮೊಸರನ್ನ ಬರುತ್ತಿತ್ತು!!ಎಲ್ಲರಿಗೂ ಕನಸಿನಲ್ಲಿ ಕನ್ಯೆಯರು ಬಂದರೆ ನನಗೆ ಮೊಸರನ್ನ ಬರುತ್ತಿತ್ತು!!

ಬಾಳಸಂಗಾತಿಯನ್ನ ಬಾಡಿಗೆ ಮನೆಗೆ ಕರೆದುಕೊಂಡು ಹೋಗುವುದು ಏಕೆ ? ಎನ್ನುವ ಭಾವನೆ ನನ್ನ ಲೆಕ್ಕಾಚಾರದ ಮನಸ್ಸಿಗೆ ಒಂದಷ್ಟು ಗ್ರಹಣ ಹಿಡಿಸಿ ಬಿಟ್ಟಿತ್ತು. ಸರಿ ಬಾರ್ಸಿಲೋನಾ ದಲ್ಲಿ ಮನೆಯನ್ನ ಕೊಳ್ಳುವುದು ಎಂದು ನಿರ್ಧಾರ ಮಾಡಿಬಿಟ್ಟೆ. ಈ ನಿರ್ಧಾರಕ್ಕೆ ಬರುವ ದಿನಗಳಲ್ಲಿ ನಾನು ವಾಸಿಸುತ್ತಿದ್ದ ಮನೆಯನ್ನ ಒಲಂಪಿಕ್ ಆಟಗಾರರಿಗೆ ಎಂದು 2002ರಲ್ಲಿ ಕಟ್ಟಿದವಾಗಿದ್ದವು. ಬಾರ್ಸಿಲೋನಾ ಮಹಾನಗರಿಯಲ್ಲಿ 1992ರಲ್ಲಿ ಒಲಂಪಿಕ್ ಕ್ರೀಡೆಗಳನ್ನ ಆಯೋಜನೆ ಮಾಡಲಾಗಿತ್ತು .

ಅಂದಿಗೆ ಇಡೀ ವಿಶ್ವದ ಕಣ್ಣು ಬಾರ್ಸಿಲೋನಾ ನಗರದ ಮೇಲಿತ್ತು . ಅದೇ ದಿನಗಳಲ್ಲಿ ನಾನು ಇನ್ನು ಪಿಯುಸಿ ಮಾಡುತ್ತಿದ್ದ ಹುಡುಗ , ಪೀಣ್ಯ ಸ್ಲಂ ನಲ್ಲಿ ವಾಸ. ಮನೆಯಲ್ಲಿ ಇದ್ದದ್ದು ಆಸ್ಕರ್ ಹೆಸರಿನ ಕಪ್ಪು ಬಿಳಪು ಟಿವಿ . ಅದರಲ್ಲಿ ಕೂಡ ಪೂರ್ಣ ಚಿತ್ರವೆಲ್ಲಿ ಬರುತ್ತಿತ್ತು ? ಚಿತ್ರಗಳು ನೃತ್ಯ ಮಾಡಿದಂತೆ ಬರುತ್ತಿದ್ದವು. ಅಣ್ಣ ಮನೆಯ ಮಹಡಿಯನ್ನ ಹತ್ತಿ ಆಂಟೆನಾ ಸರಿ ಮಾಡಲು ಸೂಚಿಸುತ್ತಿದ್ದರು . ನಾನೂ ಅಥವಾ ರಾಮನೂ ಮಹಡಿಯನ್ನ ಹತ್ತಿ ಆಂಟೆನಾ ದಶ ದಿಕ್ಕುಗಳಿಗೆ ತಿರುಗಿಸುತ್ತಿದ್ದೆವು.

Barcelona Memories Column By Rangaswamy Mookanahalli Part 28

ಟಿವಿಯಲ್ಲಿ ಚಿತ್ರ ನೃತ್ಯ ಮಾಡುವುದು ನಿಲ್ಲಿಸಿದ ತಕ್ಷಣ , ಅಣ್ಣ ಅಥವಾ ಕಾಂತ ಆಂಟೆನವನ್ನ ಅಲ್ಲಿಗೆ ನಿಲ್ಲಿಸುವಂತೆ ಕೂಗಿ ಹೇಳುತ್ತಿದ್ದರು. ಕೆಲವೊಮ್ಮೆ ಅವರು ಕೂಗು ಕೇಳುವ ಮುಂಚೆಯೇ ನಾವು ಅದನ್ನ ಮತ್ತೆ ತಿರುಗಿಸಿ ಬಿಡುತ್ತಿದ್ದೆವು . ಹೀಗಾಗಿ ಇದೊಂದು ಸಾಹಸ ಕಾರ್ಯವಾಗಿತ್ತು. ಕೊನೆಗೂ ನಮ್ಮ ಪ್ರಹಸನ ಮುಗಿಸಿ , ಅಲ್ಪ ಸ್ವಲ್ಪ ಒಲಂಪಿಕ್ ಹೈಲೈಟ್ ನೋಡುವುದು ಅಂದಿನ ದಿನಗಳಲ್ಲಿ ಜೀವಮಾನದ ಸಾಧನೆ ಎನ್ನುವಂತ್ತಿತ್ತು.

ಅಂದಿಗೆ ನಾನು ಮುಂದಿನ ಕೇವಲ 7ವರ್ಷದಲ್ಲಿ ಬಾರ್ಸಿಲೋನಾ ತಲುಪುತ್ತೇನೆ ಎಂದು ಯಾರೇ ಹೇಳಿದ್ದರೂ ಅವರನ್ನ ನಾನು ನಂಬುತ್ತಿರಲಿಲ್ಲ . ಬದಲಿಗೆ ಅವರನ್ನ ಕಿಚಾಯಿಸಿ ನಗುತ್ತಿದೆ ಖಂಡಿತ .
ಕೊನೆಗೂ ಬದುಕೆಂದರೆ ಇಷ್ಟೇ ಅಲ್ವಾ ? ನಾವೊಂದು ಬಗೆದರೆ ದೈವವೊಂದು ಬಗೆಯಿತು ಎನ್ನುವಂತೆ ನನ್ನ ಹಣೆಬರಹ , ದೈವೇಚ್ಛೆ ಬಾರ್ಸಿಲೋನಾ ನಗರಕ್ಕೆ ನನ್ನ ಬಿಸಾಡಿತ್ತು . ಇರಲಿ , ವಿಷಯಕ್ಕೆ ಬರೋಣ . ಮನೆಯನ್ನ ಖರೀದಿಸುವುದು ಎನ್ನುವುದನ್ನ ನಿರ್ಧರಿಸಿ ಆಗಿತ್ತು .

ಅದಕ್ಕೆ ಬೇಕಾದ 30 ಪ್ರತಿಶತ ಮುಂಗಡ ಹಣವನ್ನ ಕೂಡ ಸಿದ್ದ ಮಾಡಿಕೊಂಡು ಆಗಿತ್ತು . ಹೇಗೂ ಬ್ಯಾಂಕುಗಳು ಸುಲಭವಾಗಿ ಸಾಲ ಕೊಡುತ್ತಿದ್ದವು . ಅಂದಿಗೆ 3.8ಪ್ರತಿಶತ ಬಡ್ಡಿ . ಇದು ಭಾರತೀಯರಿಗೆ ಸಕತ್ ಕಿಕ್ ಕೊಡುತ್ತಿದ್ದ ವಿಷಯ. ಭಾರತದಲ್ಲಿ ಇದೆ ಸಮಯದಲ್ಲಿ ಹತ್ತು ಅಥವಾ ಹನ್ನೆರಡು ಪ್ರತಿಶತ ಗೃಹ ಸಾಲದ ಮೇಲೆ ಬಡ್ಡಿ ದರವಿತ್ತು . ಮನೆಯ ಹುಡುಕಾಟ ಶುರು ಮಾಡಿದೆ.

 ಪ್ರಕೃತ್ತಿ, ದೈವವೆನ್ನಿ ಬದುಕನ್ನ ಚೆನ್ನಾಗಿ ಕಟ್ಟಿಕೊಳ್ಳಲು ಒಂದು ಅವಕಾಶ ಕೊಟ್ಟೇ ಕೊಡುತ್ತದೆ ಪ್ರಕೃತ್ತಿ, ದೈವವೆನ್ನಿ ಬದುಕನ್ನ ಚೆನ್ನಾಗಿ ಕಟ್ಟಿಕೊಳ್ಳಲು ಒಂದು ಅವಕಾಶ ಕೊಟ್ಟೇ ಕೊಡುತ್ತದೆ

ತಮ್ಮ ಲಕ್ಷ್ಮಿ ಕಾಂತ ಕೂಡ ನನ್ನ ಈ ಕಾರ್ಯದಲ್ಲಿ ಕೈ ಜೋಡಿಸಿದ. ರಮ್ಯ ಬಾರ್ಸಿಲೋನಾಗೆ ಬರುವ ಮುಂಚೆ ಮನೆಯನ್ನ ಕೊಂಡು ಕೊಳ್ಳಬೇಕು ಎನ್ನುವ ಅಸೆ ಪೂರ್ಣವಾಯ್ತು. ಮೂರು ಕೊಠಡಿಯ ಅಪಾರ್ಟ್ಮೆಂಟ್ ಅಂದಿಗೆ ಎರಡು ಲಕ್ಷ ನಲವತ್ತು ಸಾವಿರ ಯುರೋ ಕೊಟ್ಟು ಖರೀದಿ ಮಾಡಿದಾಯ್ತು . 2007ರಲ್ಲಿ ಅಮೇರಿಕಾದಲ್ಲಿ ಉಂಟಾದ ಬ್ಯಾಂಕ್ ಕುಸಿತ , 2009ರ ವೇಳೆಗೆ ಯೂರೋಪಿಗೆ ಬಡಿಯಿತು .

ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ 2004ರಲ್ಲಿ ಎರಡು ಲಕ್ಷ ನಲವತ್ತು ಸಾವಿರ ಯುರೋ ಬೆಲೆಯ ಮನೆ ಕುಸಿತ ಕಂಡು 2010ರ ವೇಳೆಗೆ ತೊಂಬತ್ತು ಸಾವಿರ ಯುರೋ ಗೆ ಇಳಿದಿತ್ತು . ಇಲ್ಲಿಯವರೆಗಿನ ಹೂಡಿಕೆ ಜೀವನದಲ್ಲಿ ನಾನು ಕಂಡ ಪ್ರಥಮ ಸೋಲು ಅಥವಾ ಸವಾಲು ಇದಾಗಿತ್ತು . ಇದನ್ನ ಹೇಗೆ ಬಗೆ ಹರಿಸಿಕೊಳ್ಳುವುದು ? ಎನ್ನುವ ಚಿಂತೆ ಶುರುವಾಗಿತ್ತು . ಇಲ್ಲಿಯವರೆಗೆ ಒಂದು ಕಂತನ್ನ ಕೂಡ ನಿಧಾನ ಮಾಡದೆ ಸರಿಯಾಗಿ ಕಟ್ಟಿ ನನ್ನ ಕ್ರೆಡಿಟ್ ರೇಟಿಂಗ್ ಚನ್ನಾಗಿ ಇಟ್ಟು ಕೊಂಡಿದ್ದೆ .

ಅಲ್ಲದೆ ಇದು ಜೀವನದಲ್ಲಿ ಮಾಡಿದ ಮೊದಲ ಮತ್ತು ಕೊನೆಯ ಸಾಲವಾಗಿತ್ತು ಕೂಡ. ಈ ಮನೆಯನ್ನ ಬ್ಯಾಂಕಿನವರಿಗೆ ಹಿಂತಿರುಗಿಸಿದರೆ ಹೇಗೆ ? ಈ ಯೋಚನೆ ಬಂದ ನಂತರ ಬ್ಯಾಂಕಿನ ಅಧಿಕಾರಿಗಳ ಜೊತೆಗೆ ಮಾತನಾಡಿದೆ . ಸಾಮಾನ್ಯವಾಗಿ ಯಾರು ಕಂತು ಕಟ್ಟಲು ಸಾಧ್ಯವಿಲ್ಲ ಅಥವಾ ಡಿಫಾಲ್ಟಾರ್ಸ್ ಆಗಿರುತ್ತಾರೆ ಅವರಿಂದ ಬ್ಯಾಂಕಿಗೆ ಮನೆಯನ್ನ ಮಟ್ಟುಗೋಲು ಹಾಕಿಕೊಳ್ಳುತ್ತದೆ .

ನನ್ನ ವಿಷಯದಲ್ಲಿ ಎಲ್ಲವೂ ಸರಿಯಿದ್ದೂ ನಾನೇ ಮುಂದಾಗಿ ಬ್ಯಾಂಕಿನವರ ಬಳಿ ಹೋಗಿದ್ದೆ. ಇದು ಅವರಿಗೆ ಅತ್ಯಂತ ಆಶ್ಚರ್ಯ ತರಿಸಿತ್ತು . ಅಂತಾರಾಷ್ಟ್ರೀಯ ವಿದ್ಯಮಾನಗಳನ್ನ ಸದಾ ಗಮನದಲ್ಲಿರಿಸಿಕೊಳ್ಳುವ ನನ್ನ ಜಾಯಮಾನ ನನಗೆ ಆಸರೆಯಾಗಿತ್ತು . ಬ್ಯಾಂಕಿನವರು ಒಬ್ಬ ವ್ಯಾಲ್ಯೂವರ್ನನ್ನ ಮನೆಯ ಮೌಲ್ಯ ಅಳೆಯಲು ಕಳಿಸಿತು . ಹೀಗೆ ಬಂದ ವ್ಯಾಲ್ಯೂವರ್ ಉತ್ತಮ ಬೆಲೆಯನ್ನ ನೀಡಿ ಹೋದ.

 ಬೆಂಗಳೂರು ಬದಲಾಗಿರುವುದು ಕೇವಲ ಕೆಲವೇ ಕೆಲವರಿಗೆ, ಅವನಿಗಲ್ಲ! ಬೆಂಗಳೂರು ಬದಲಾಗಿರುವುದು ಕೇವಲ ಕೆಲವೇ ಕೆಲವರಿಗೆ, ಅವನಿಗಲ್ಲ!

ಹೀಗಾಗಿ ಬ್ಯಾಂಕು ನನ್ನ ಮನೆಯನ್ನ ಹೆಚ್ಚಿನ ಪ್ರಶ್ನೆ ಕೇಳದೆ ವಾಪಸ್ಸು ಪಡೆದು ನನ್ನನ್ನ ಸಾಲದಿಂದ ಮುಕ್ತವಾಗಿಸಿತು . ಇದಾಗಿ ಹತ್ತು ತಿಂಗಳಲ್ಲಿ ನನ್ನಂತೆ ಬ್ಯಾಂಕಿಗೆ ಮನೆ ವಾಪಸ್ಸು ನೀಡಲು ದೊಡ್ಡ ದಂಡು ಸಿದ್ದವಾಗಿತ್ತು. ಬ್ಯಾಂಕು ಹೀಗೆಲ್ಲ ವಾಪಸ್ಸು ತೆಗೆದುಕೊಳ್ಳಲು ಸಾಧ್ಯವಿಲ್ಲ , ಕಂತು ಕಟ್ಟಿ ಎನ್ನುವ ಫರ್ಮಾನು ಹೊರಡಿಸಿತು. ಹೀಗೆ ಬಹಳಷ್ಟು ಜನ ಲಕ್ಷ ಯೂರೋಗಳಷ್ಟು ಕುಸಿತ ಕಂಡ ಮನೆಗೆ ಅಂದರೆ ಇಲ್ಲದ ಮೌಲ್ಯದ ಮನೆಗೆ ಕಂತು ಕಟ್ಟುತ್ತಿದ್ದರು .

ಹೀಗೆ ನಾನು ಮನೆಯನ್ನ ಬ್ಯಾಂಕಿಗೆ ಕೊಟ್ಟು ಕೈ ತೊಳೆದು ಕೊಂಡ ಒಂದೂವರೆ ವರ್ಷದ ನಂತರ , ಬ್ಯಾಂಕಿನವರು ಅದೇ ಮನೆಯನ್ನ ಪುನಃ ಕೊಳ್ಳಲು ಇಚ್ಚಿಸುವುದಾದರೆ 85ಸಾವಿರ ಯೂರೋಗೆ ಕೊಡಲು ತಯಾರು ಎನ್ನುವ ಆಫರ್ ಕೊಟ್ಟರು. ಯೂರೋಪು 2004 ರಿಂದ 2010ರಲ್ಲಿ ಅದೆಂತಹ ಆರ್ಥಿಕ ಕುಸಿತ ಕಂಡಿರಬಹದು ಎನ್ನುವುದರ ಸಣ್ಣ ಉದಾಹರಣೆಯನ್ನ ನಿಮ್ಮ ಮುಂದೆ ಇಟ್ಟಿದ್ದೇನೆ .

ವಾರಾಂತ್ಯ ಬಂದರೆ ಸಾಕು ನಾನು ರಮ್ಯ ಹೆಗಲಿಗೆ ಬ್ಯಾಗ್ ಏರಿಸಿ ದೇಶ ಸುತ್ತಲು ಹೊರಟು ಬಿಡುತ್ತಿದ್ದೆವು. ಹೀಗೆ 2005 ರಿಂದ 2009 ಜನವರಿಯವರಿಗೆ ಹಕ್ಕಿಗಳಂತೆ ಓಡಾಡಿಕೊಂಡಿದ್ದ ನಮ್ಮ ಬಾಳಿಗೆ ಅನನ್ಯ ಬರುವ ಸೂಚನೆ ಸಿಕ್ಕಿದ್ದು ಜನವರಿ 2009ರಲ್ಲಿ . ಇಲ್ಲಿ ಭಾರತಕ್ಕಿಂತ ಒಂದಷ್ಟು ಬದಲಾವಣೆಯಿದೆ. ಅಂದರೆ ಸತಿ ಪತಿ ಅಪ್ಪ ಅಮ್ಮನಾಗಿ ಬದಲಾಗುತ್ತಾರೆ ಎನ್ನುವುದು ತಿಳಿದ ನಂತರ ಒಂದು ವಾರ ' ಅಪ್ಪ ಅಮ್ಮನ ಕಾರ್ಯ ನಿರ್ವಹಿಸುವ' ಬಗ್ಗೆ ಆಸ್ಪತ್ರೆಯವರೇ ಒಂದು ಸಣ್ಣ ಸೆಮಿನಾರ್ ನಡೆಸುತ್ತಾರೆ.

ಇದು ಕಡ್ಡಾಯ ಯಾರೂ ತಪ್ಪಿಸುವಂತಿಲ್ಲ. ಸರಕಾರವೂ ಈ ವಿಷಯದಲ್ಲಿ ಸಾಥ್ ನೀಡುತ್ತದೆ. ಮೂರು ತಿಂಗಳ ವೇಳೆಗೆ ಗರ್ಭವನ್ನ ಪರೀಕ್ಷಿಸಿ ಮಗು ಹೆಣ್ಣೋ ಅಥವಾ ಗಂಡೋ ಎನ್ನುವುದನ್ನ ಕೂಡ ಹೇಳುತ್ತಾರೆ. ಮಗುವಿನ ಹೆಸರನ್ನ ಇಟ್ಟು ಕೊಳ್ಳಲು ಕೂಡ ಸೂಚಿಸುತ್ತಾರೆ. ನಾವು ಮಗುವಿನ ಹೆಸರನ್ನ ಹೇಳಿದರೆ ಸಾಕು , ಮಗುವಿನ ಹೆಸರಲ್ಲಿ ಆ ತಕ್ಷಣವೇ ಒಂದು ಹೆಲ್ತ್ ಬುಕ್ ಸಿದ್ದ ಪಡಿಸುತ್ತಾರೆ.

ಪ್ರತಿ ಬಾರಿ ತಪಾಸಣೆಗೆ ಹೋದಾಗ ಮಗುವಿನ ಬೆಳವಣಿಗೆಯನ್ನ ದಾಖಲಿಸುತ್ತ ಹೋಗುತ್ತಾರೆ. ಇದೊಂದು ವಿಶೇಷ ಅನುಭವ. ಇನ್ನು ಇಲ್ಲಿ ಅಂದರೆ ಬಾರ್ಸಿಲೋನಾ ದಲ್ಲಿ ಅಪ್ಪನನ್ನ ಕೂಡ ವೈದ್ಯರ ಜೊತೆಗೆ ಹೆರಿಗೆಯಲ್ಲಿ ಭಾಗವಹಿಸಲು ಬಿಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಕೂಡ ಈ ರೀತಿಯ ವ್ಯವಸ್ಥೆ ಶುರುವಾಗಿದೆ ಎನ್ನುವುದನ್ನ ನಾನು ಕೇಳಿದ್ದೇನೆ . ನಮ್ಮ ಮಹಾಭಾರತದಲ್ಲಿ ಅಭಿಮನ್ಯ ತಾಯಿಯ ಗರ್ಭದಲ್ಲಿ ಕುಳಿತು ಕೃಷ್ಣ ಹೇಳಿದ ಚಕ್ರವೂಹ್ಯ ಬೇಧಿಸುವ ಕತೆಯನ್ನ ಕೇಳಿದ್ದ ಎನ್ನುವ ಉಲ್ಲೇಖವಿದೆ.

ದಿನಾ ಉಪ್ಪಿಟ್ಟು ತಿನ್ನುವ ನಾನು ಆಕೆಗೆ ಅನ್ಯಗ್ರಹ ಜೀವಿಯಂತೆ ಕಂಡೆ!ದಿನಾ ಉಪ್ಪಿಟ್ಟು ತಿನ್ನುವ ನಾನು ಆಕೆಗೆ ಅನ್ಯಗ್ರಹ ಜೀವಿಯಂತೆ ಕಂಡೆ!

Recommended Video

ವೀಕೆಂಡ್‌ ಕರ್ಫ್ಯೂ ನಂತರ ಮತ್ತೆ ಜನರಿಂದ ತುಂಬಿ ಹೋದ ಸಿಟಿ ಮಾರ್ಕೆಟ್ | Oneindia Kannada

ಇದನ್ನ ನಾವು ಎಷ್ಟು ನಂಬುತ್ತೇವೆ ಎನ್ನುವುದನ್ನ ಇಲ್ಲಿ ನಾನು ವಿವರಿಸಲು ಹೋಗುವುದಿಲ್ಲ . ಬಾರ್ಸಿಲೋನಾ ದಲ್ಲಿ ಮಾತ್ರ ಮಗುವಿಗೆ ಮೂರು ತಿಂಗಳ ಗರ್ಭದಲ್ಲೇ ಹೆಸರು ಇಡಲು ಹೇಳುತ್ತಾರೆ. ಇದು ಕಡ್ಡಾಯವಲ್ಲ . ಮುಂದಿನ ತಪಾಸನೆಗಳಲ್ಲಿ ವೈದ್ಯರು ಮಗುವನ್ನ ಹೆಸರಿಸಿ ಮಾತನಾಡಿಸುತ್ತಾರೆ. ಅಪ್ಪ ಅಮ್ಮನಿಗೂ ಮಗುವಿನ ಹೆಸರಿಡಿದು ಮಾತನಾಡಿಸಲು ಹೇಳುತ್ತಾರೆ. ಅನನ್ಯ ಈ ಭೂಮಿಗೆ ಸೆಪ್ಟೆಂಬರ್ 15ಕ್ಕೆ ಬರಬಹದು ಎಂದು ವೈದ್ಯರು ಒಂದು ದಿನವನ್ನ ಹೇಳಿದ್ದರು.

ಆದರೆ ಅನನ್ಯ ಸೆಪ್ಟೆಂಬರ್ 18, 2009ರಂದು ನಮ್ಮ ಬಾಳಿಗೆ ಬಂದಳು. ಅನನ್ಯ ಬರುವವರೆಗೆ ನಮ್ಮ ಮನೆಯಲ್ಲಿ ಹೆಣ್ಣು ಮಗು ಇರಲಿಲ್ಲ. ಹೀಗಾಗಿ ಭಾರತದಿಂದ ಅಪ್ಪ ಅಮ್ಮ , ಅತ್ತೆ ಬಂದಿದ್ದರು. ಅಂದಿಗೆ ನನ್ನ ತಮ್ಮ ಡಾ . ಲಕ್ಷ್ಮೀಕಾಂತ ಪ್ಯಾರಿಸ್ ಯೂನಿವೆರ್ಸಿಟಿಯಲ್ಲಿ ಮೇಷ್ಟ್ರಾಗಿ ಕೆಲಸ ಮಾಡುತ್ತಿದ್ದ , ಮಧ್ಯಾಹ್ನ ಎರಡು ಗಂಟೆಗೆ 8 ನಿಮಿಷ ಮುಂಚೆ ಅನನ್ಯಳ ಆಗಮನವಾಗಿದೆ ಎನ್ನುವ ವಿಷಯ ತಿಳಿದು , ಸಾಯಂಕಾಲ ಆರೂವರೆಗೆ ಪ್ಯಾರಿಸ್ ನಿಂದ ಬಾರ್ಸಿಲೋನಾಗೆ ಬಂದಿದ್ದ.

ಹೇಗಾದರೂ ಸರಿಯೇ ಅನ್ನಿಯನ್ನ ಅಂದೇ ನೋಡಬೇಕು ಎನ್ನುವುದು ನಮ್ಮ ಮನೆಯಲ್ಲಿ ಹೆಣ್ಣು ಮಗುವಿನ ಬರುವಿಕೆಗೆ ಅದೆಷ್ಟು ಕಾತರದಿಂದ ಇದ್ದೆವು ಎನ್ನುವುದನ್ನ ಹೇಳುವುದಕ್ಕೆ ಬರೆಯಬೇಕಾಯ್ತು. ದಿನ ಕಳೆದಂತೆ ಅನ್ನಿ ನಮ್ಮ ಬದುಕನ್ನ , ಬದುಕಿನ ಅರ್ಥವನ್ನ ಪೂರ್ಣವಾಗಿ ಬದಲಾಯಿಸಿ ಬಿಟ್ಟಳು. ವಾರಂತ್ಯ ಬಂದರೆ ಸಾಕು ಸುತ್ತಲು ಹೋಗುವ ನಮ್ಮ ಪರಿಪಾಠಕ್ಕೆ ಒಂದಷ್ಟು ಕಡಿವಾಣ ಬಿದ್ದಿತು .

ಜೊತೆಗೆ ಒಂದು ಮಗುವನ್ನ ಸಾಕುವುದು ಅದೆಷ್ಟು ಕಷ್ಟ ಎನ್ನುವುದು ಕೂಡ ಗೊತ್ತಾಗುತ್ತಾ ಹೋಯ್ತು . ಅಪ್ಪ , ಅಮ್ಮ ಮತ್ತು ಅತ್ತೆ ಮೂರ್ನಾಲ್ಕು ತಿಂಗಳು ಇದ್ದು ಭಾರತಕ್ಕೆ ಮರಳಿ ಹೋದರು. ಅನ್ನಿ ನಾನು ಮತ್ತು ರಮ್ಯ ಮೂವರ ಜೀವನ ಶುರುವಾಗಿತ್ತು. ರಾತ್ರಿಯೆಲ್ಲಾ ಕೇಕೆ ಹಾಕಿ ನಗುತ್ತಿದ್ದ ಅನ್ನಿ ಎಂದಿಗೂ ಜಾಗರಣೆ ಮಾಡಿರದ ನಮಗೆ ಅದನ್ನೂ ಮಾಡಿಸಿದಳು. ಅನ್ನಿಯ ಸ್ನಾನ , ಇತ್ಯಾದಿ ಕೆಲಸಗಳನ್ನ ರಮ್ಯ ಒಬ್ಬಳೇ ಮಾಡಲು ಸಾಧ್ಯವಿರಲಿಲ್ಲ .

ಹೀಗಾಗಿ ನಾವು ಒಬ್ಬ ಮೆಯ್ಡ್ ಇಟ್ಟು ಕೊಳ್ಳಲು ನಿರ್ಧಾರ ಮಾಡಿದೆವು. ಹೀಗೆ ಮೊದಲಿಗೆ ಬಂದ ಪಾಕಿಸ್ತಾನಿ ಮೆಯ್ಡ್ ಆ ನಂತರ ಬಂದ ಸೌತ್ ಅಮೆರಿಕನ್ ಮೆಯ್ಡ್ ಕಥೆಯನ್ನ ಅವರೊಂದಿಗಿನ ಘಟನೆಗಳನ್ನ ಮುಂದಿನವಾರ ಹಂಚಿಕೊಳ್ಳುವೆ .

English summary
Barcelona Memories Column By Rangaswamy Mookanahalli Part 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X