ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾಷೆ ಬಾರದ ದೇಶದಲ್ಲಿ ಶುರುವಾಯ್ತು ಬದುಕು !

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಮೇ 22, 1999ರಂದು ಬೆಂಗಳೂರಿನಿಂದ ಬಾಂಬೆಗೆ ಹೊರಟ ದಿನ . ನನಗೆ ಬಾಂಬೆಯಿಂದ ದುಬೈಗೆ ಏರ್ ಟಿಕೆಟ್ ಸಂಸ್ಥೆ ನೀಡಿತ್ತು . ಎರಡು ದಿನ ಮುಂಚೆ ಹೊರಟದ್ದು ಬಾಂಬೆಯ ಲೋಕಲ್ ಟ್ರೈನ್ ನಲ್ಲಿ ಪಯಣಿಸಿ ಅಲ್ಲಿನ ಅನುಭವ ಪಡೆಯಬೇಕು ಎನ್ನುವ ಉದ್ದೇಶದಿಂದ , ನನ್ನ ಉದ್ದೇಶವನ್ನ ಈಡೇರಿಸಿಕೊಂಡೆ . ಅದರ ಬಗ್ಗೆ ವಿವರವಾಗಿ ಮತ್ತೊಮ್ಮೆ ಬರೆಯುವೆ .

ದುಬೈನಲ್ಲಿ ಹೆಚ್ಚು ದಿನ ಅನ್ನ ನೀರಿನ ಋಣವಿರಲಿಲ್ಲ , ಅದೇ ವರ್ಷ ಸೆಪ್ಟೆಂಬರ್ 3ರಂದು ಪ್ರಥಮ ಬಾರಿಗೆ ಬಾರ್ಸಿಲೋನಾ ನೆಲವನ್ನ ಸ್ಪರ್ಶಿಸಿದಾಗ ಆ ನೆಲದಲ್ಲಿ ನನ್ನವರು ಎನ್ನುವರು ಯಾರೂ ಇರಲಿಲ್ಲ ! . ಭಾಷೆ ಗೊತ್ತಿಲ್ಲ , ಆಗಿನ್ನೂ ಗೂಗೆಲ್ ಮ್ಯಾಪ್ ಇರಲಿಲ್ಲ . ಅಲ್ಲಿ ಎಲ್ಲವೂ ಸ್ಪ್ಯಾನಿಷ್ ಮಯ . ಹೀಗಾಗಿ ಎಡ ಎನ್ನುವುದಕ್ಕೆ ಇಸ್ಕಿಯರ್ದ ಎಂದೂ ಬಲಕ್ಕೆ -ರೆಚ್ಚ ಎಂದೂ ಕರೆಯುತ್ತಾರೆ ಎನ್ನುವುದೂ ಕೂಡ ತಿಳಿದಿರಲಿಲ್ಲ . ಎಡಕ್ಕೆ ತಿರುಗಿದರೆ ಎಲ್ಲಿಗೆ ಹೋಗುತ್ತೇನೆ , ಬಲಕ್ಕೆ ತಿರುಗಿದರೆ ಎಲ್ಲಿಗೆ ಹೋಗುತ್ತದೆ ? ಉಹೂ ಲವಲೇಶ ಜ್ಞಾನವಿರಲಿಲ್ಲ . ಹೀಗೆ ಗೊತ್ತಿರದ ನೆಲದಲ್ಲಿ ಆತ್ಮವಿಶ್ವಾಸದಿಂದ ಹೆಜ್ಜೆ ಊರುವುದಿದೆಯಲ್ಲ ಆದರಲ್ಲಿ ಸಿಕ್ಕುವ ಕಿಕ್ ಬೇರೆ ಯಾವುದರಲ್ಲೂ ಸಿಕ್ಕುವುದಿಲ್ಲ ಎನ್ನುವುದು ನಂತರದ ದಿನಗಳಲ್ಲಿ ತಿಳಿಯಿತು . ಆದರೆ ಅಂದಿನಗಳಲ್ಲಿ ದಾರಿ ತಪ್ಪಿದರೆ ? ಎನ್ನುವ ಅವ್ಯಕ್ತ ಭಯವಂತೂ ಇದ್ದೆ ಇರುತ್ತಿತ್ತು .

ವೈಲ್ಡ್‌ಲೈಫ್‌ ಫೋಟೋಗ್ರಾಫಿ ಪ್ರಶಸ್ತಿ ಗೆದ್ದ ಸ್ಪೇನಿನ ಬಾಲಕ ಆಂಡ್ರ್ಯೂಸ್ವೈಲ್ಡ್‌ಲೈಫ್‌ ಫೋಟೋಗ್ರಾಫಿ ಪ್ರಶಸ್ತಿ ಗೆದ್ದ ಸ್ಪೇನಿನ ಬಾಲಕ ಆಂಡ್ರ್ಯೂಸ್

ನನ್ನ ಸಂಸ್ಥೆಯಿದ್ದದ್ದು ಬಾರ್ಸಿಲೋನಾ ನಗರದಿಂದ 7/8 ಕಿಲೋಮೀಟರ್ ದೂರದಲ್ಲಿರುವ ಬಾದಲೋನಾ ಎನ್ನುವ ನಗರದಲ್ಲಿ . ಅದು ಬಾರ್ಸಿಲೋನಾದ ಸಬ್ ಅರ್ಬ್ ಪ್ರದೇಶವಾಗಿತ್ತು . ಮೊದಲ ಒಂದು ವಾರ ಪಾರ್ಕ್ ಅವೆನ್ಯೂ ಎನ್ನುವ ಹೋಟೆಲ್ ನಲ್ಲಿ ತಂಗಿದ್ದೆ . ನಂತರ ಸಂಸ್ಥೆ ನನಗಾಗಿ 3ಬೆಡ್ ನ ಒಂದು ಸುಂದರ ಮತ್ತು ಸುಸಜ್ಜಿತ ಫರ್ನಿಶ್ಡ್ ಅಪಾರ್ಟ್ಮೆಂಟ್ ಕಾದಿರಿಸಿತ್ತು . ಅಲ್ಲಿ ಒಂಟಿ ಜೀವನ ಶುರುವಾಯ್ತು . ಇಲ್ಲಿ ತರಹಾವರಿ ಮೊಸರು ಸಿಗುತ್ತದೆ . ಹೀಗಾಗಿ ಯಾವುದೇ ಹಣ್ಣಿನ ರುಚಿಯಿಲ್ಲದ ಸಾಮಾನ್ಯ ಮೊಸರು ಕೊಳ್ಳುವುದು ಸವಾಲಿನ ಸಂಗತಿ .

Barcelona Memories Column By Rangaswamy Mookanahalli Part 1

ಹೀಗೆ ಅಕ್ಕಿ , ಬೇಳೆ , ರವೆ ಹುಡುಕಿಕೊಳ್ಳುವಷ್ಟರಲ್ಲಿ ಹದಿನೈದು ದಿನ ಕಳೆದು ಹೋಗಿತ್ತು . ವಾರದ ಐದು ದಿನ ಹೇಗೋ ಕಳೆದು ಹೋಗುತ್ತಿತ್ತು , ಕಾರಣ ಆಫೀಸ್ ಇರುತ್ತಿತ್ತು . ಶನಿವಾರ ಮತ್ತು ಭಾನುವಾರ ಕಳೆಯುವುದು ಹೇಗೆ ? ಹದಿನೈದು ನಿಮಿಷ ಅಮ್ಮನೊಂದಿಗೆ , ತಮ್ಮನೊಂದಿಗೆ ಮಾತನಾಡಿದರೆ ಅಲ್ಲಿಗೆ ಮುಗಿಯಿತು . ಉಳಿದ ಸಮಯ ಏನು ಮಾಡುವುದು ? ಆಫೀಸ್ ನಲ್ಲಿ ಇಂಟರ್ನೆಟ್ ಇತ್ತು . ಮನೆಯಲ್ಲಿ ಹಾಕುವ ಮಟ್ಟಕ್ಕೆ ಇನ್ನೂ ಸಮಾಜ ಬೆಳದಿರಲಿಲ್ಲ . ನಂತರದ 2/3 ವರ್ಷದಲ್ಲಿ ಸಾಕಷ್ಟು ಬದಲಾವಣೆ ಆಗಿ ಹೋಯ್ತು .

ಹೀಗೆ ಸಾಕಷ್ಟು ಸಮಯ ಇರುತ್ತಿತ್ತು , ಹೊರಗೆ ತಿರುಗಾಡಲು ಭಾಷೆ ಬಾರದು , ಜೊತೆಗೆ ಬಡತನದಿಂದ ಬಂದ ನನಗೆ ಒಂದು ತರಹದ ಕೀಳಿರಿಮೆ , 125ಕೇಜಿ ತೂಗುವ ದೇಹ ಬೇರೆ . ಹೇಗೋ ಬಾರ್ಸಿಲೋನಾ ತಲುಪಿ ಬಿಟ್ಟಿದ್ದೇನೆ . ಆದರೆ ಅಲ್ಲಿನ ವಾತಾವರಣ ಮತ್ತು ಸಂಸ್ಕೃತಿಗೆ ಹೊಂದಿಕೊಳ್ಳಲು ಆಗುತ್ತಿರಲಿಲ್ಲ . ವಾರಾಂತ್ಯದಲ್ಲಿ ಅದೆಷ್ಟು ಬಾರಿ ಅತ್ತಿದ್ದೇನೆ ನನಗೆ ಗೊತ್ತಿಲ್ಲ . ಇದೊಂತರ ಸಮುದ್ರದಲ್ಲಿ ಇದ್ದಹಾಗೆ , ಸುತ್ತಲೂ ನೀರಿದೆ ಆದರೆ ಕುಡಿಯಲು ಬಾರದು , ನನ್ನ ಸುತ್ತಮುತ್ತಾ ಜನರಿದ್ದಾರೆ ಆದರೆ ನನಗೆ ಅವರೊಂದಿಗೆ ಸಂವಹನ ಮಾಡಲು ಆಗದು ! ಅವರಾರೂ ನನ್ನವರಲ್ಲ . ಆಳುತ್ತಾ ಕೊತರೆ ನನಗೆ ನಷ್ಟ , ಅವಕಾಶ ಕೈ ತಪ್ಪಿ ಹೋಗುತ್ತದೆ .

ಕೊರೊನಾ: ಯುರೋಪ್ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆಕೊರೊನಾ: ಯುರೋಪ್ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ ವಿಶ್ವ ಆರೋಗ್ಯ ಸಂಸ್ಥೆ

ಜಗತ್ತಿಗೇನು ? ಅದು ಯಾರು ಇರಲಿ ಬಿಡಲಿ ತನ್ನ ಪಾಡಿಗೆ ತಾನು ನಡೆಯುತ್ತಿರುತ್ತದೆ . ಭಗವಂತ ನೀಡಿರುವ ಇಂತಹ ಸಮಯವನ್ನ ಉಪಯೋಗಿಸಿಕೊಂಡು ಅದನ್ನ ನನ್ನ ಬೆಳವಣಿಗೆಗೆ ಬಳಸಿಕೊಳ್ಳುವುದರಲ್ಲಿ ಜಾಣತನವಿದೆ ಎನ್ನುವ ಅರಿವು ಬೇಗ ಆಯ್ತು . ಅದಕ್ಕೆ ಕಾರಣ ವಾಪಸು ಹೋಗುವುದಾದರೂ ಎಲ್ಲಿಗೆ ? ಮರಳಿ ಪೀಣ್ಯ ಸ್ಲಂ ಗೆ ? ನನ್ನ ಬಳಿ ಆಯ್ಕೆಗಳಿರಲಿಲ್ಲ . ಆಯ್ಕೆ ಇದ್ದರೆ ನಾನು ವರ್ಷದಲ್ಲಿ ವಾಪಸ್ಸು ಬರುತ್ತಿದ್ದೆನೋ ಏನೋ ಗೊತ್ತಿಲ್ಲ . ಈಸಬೇಕು ಇದ್ದು ಜೈಸಬೇಕು ಎನ್ನುವ ದಾಸರ ಮಂತ್ರ ನನ್ನ ಮಂತ್ರವಾಗಿತ್ತು .

ಜಗತ್ತಿನ ಈ ಪ್ರದೇಶದಲ್ಲಿ ಆಗಸ್ಟ್ ತಿಂಗಳು ಪ್ರತಿ ಪ್ರಜೆಗೂ ರಜೆ ಸಿಗುತ್ತದೆ . ಸಂಬಳ ದುಪ್ಪಟ್ಟು . ಡಿಸೆಂಬರ್ 3ವಾರ ರಜೆ , ಮತ್ತೆ ಸಂಬಳ ದುಪ್ಪಟ್ಟು . ಹೀಗಾಗಿ ಇಲ್ಲಿ ವರ್ಷದಲ್ಲಿ ಹತ್ತು ತಿಂಗಳು ಕೆಲಸ 14 ತಿಂಗಳ ಸಂಬಳ . ಆರ್ಥಿಕವಾಗಿ ಸಬಲನನ್ನಾಗಿಸಿದ ಆ ದಿನಗಳನ್ನ ಮರೆಯುವುದಾದರೂ ಹೇಗೆ . ತಿಂಗಳಲ್ಲಿ ಅಲ್ಲಿನ ವಾತಾವರಣಕ್ಕೆ ಬಹಳ ಒಗ್ಗಿ ಕೊಂಡಿದ್ದೆ . ಆಫೀಸ್ ನಲ್ಲಿ ಮೊನ್ಸಿ ಮತ್ತು ಎವಾ ಮತ್ತು ಅಲೆಹಾನ್ದ್ರೋ ಮೂವರೂ ಒಂದೊಂದು ಪ್ಯಾಕೆಟ್ ಸಿಗರೇಟು ಸೇವಿಸುತ್ತಿದ್ದರು . ವಾರಾಂತ್ಯದಲ್ಲಿ ನನಗೆ ತಲೆನೋವು ಬರುತ್ತಿತ್ತು . ಈ ಮೂವರು ಬಿಡುತ್ತಿದ್ದ ಸಿಗರೇಟು ಹೊಗೆ ಇಲ್ಲದೆ ದೇಹ ನಿಕೋಟಿನ್ ಬಯಸುತ್ತಿತ್ತು ಇದು ಒಂದು ಕಾರಣವಾದರೆ , ಅಲಹಾನ್ದ್ರೋ ಸ್ಪ್ಯಾನಿಷ್ , ಉಳಿದ ಮೊನ್ಸಿ ಮತ್ತು ಎವಾ ಕತಲಾನ್ ಭಾಷೆಯನ್ನ ಮಾತನಾಡುತ್ತಿದ್ದರು . ನನಗೆ ಎರಡೂ ಹೊಸತು . ಹೊಸ ಭಾಷೆ ಕಲಿಯುವಾಗ ತಲೆ ನೋವು ಸಹಜ .ಇದು ಇನ್ನೊಂದು ಕಾರಣವಾಗಿತ್ತು.

ನಾವು ಮಲೆಯಾಳಿಯನ್ನ ಮಲ್ಲು ಎನ್ನುತ್ತೇವೆ , ತೆಲುಗಿನವನ್ನ ಗುಲ್ಟಿ ಎನ್ನುತ್ತೇವೆ ., ಹೀಗೆ ಒಂದು ದೇಶದಲ್ಲಿ ಇದ್ದೆ ನಾವು ಹೀಗೆ ಮಾಡುತ್ತೇವೆ . ಇನ್ನು ನನ್ನ ಬಗ್ಗೆ ಅವರುಗಳು ಆಡಿಕೊಂಡು ನಕ್ಕಿರಲು ಬಹಳಷ್ಟು ಕಾರಣಗಳಿದ್ದವು . ಗಂಧ , ಕುಂಕುಮದ ನನ್ನ ಹಣೆ , ನನ್ನ ಡೊಳ್ಳು ಹೊಟ್ಟೆ , 25ಕ್ಕೆ 43ರ ಲುಕ್ಕು , ಭಾಷೆ ಬೇರೆ ಬರುತ್ತಿಲ್ಲ . ಹೋಹ್ ಇನ್ನು ಹಲವಾರು ಕಾರಣಗಳು . ಅಲೆಹಾನ್ದ್ರೋ ಫೈನಾನ್ಸ್ ಡಿಪಾರ್ಟ್ಮೆಂಟ್ ಹೆಡ್ . ಅವನ ಸಾಧನೆ ಏನೆಂದರೆ ಆತ ಇಂಗ್ಲೆಂಡ್ ನಲ್ಲಿ ವಿದ್ಯಾಭ್ಯಾಸ ಮಾಡಿ ಬಂದಿದ್ದ , ಹೀಗಾಗಿ ಇಂಗ್ಲಿಷ್ ಮಾತನಾಡಲು ಬಲ್ಲ ಏಕೈಕ ವ್ಯಕ್ತಿ ಆ ಸಂಸ್ಥೆಯಲ್ಲಿ ಅವನೊಬ್ಬನೇ . ಅವನಿಗೆ ನನ್ನ ಬರುವಿಕೆಯಿಂದ ಅಭದ್ರತೆ ಕಾಡ ತೊಡಗಿತು . ನಾನು ಬೇಗ ಸ್ಪ್ಯಾನಿಷ್ ಕಲಿತರೆ ಅವನ ಕೆಲಸಕ್ಕೆ ಸಂಚಕಾರ ಎನ್ನುವಂತೆ ವರ್ತಿಸುತ್ತಿದ್ದ . ಎವಾ ಸಹೋದರಿಯಿಲ್ಲದ ನನಗೆ ಸಹೋದರಿಯಾಗಿ ಬಂದಳು . ವಾರಾಂತ್ಯದಲ್ಲಿ ಕೂಡ ಅವಳ ಗಂಡನ ಜೊತೆಗೆ ನನ್ನ ಸುತ್ತಾಡಲು ಕರೆದುಕೊಂಡು ಹೋಗುತ್ತಿದ್ದಳು . ಅನನ್ಯ ಹುಟ್ಟಿದ ದಿನ ಕೂಡ ಆಸ್ಪತ್ರೆಯಲ್ಲಿ ಜೊತೆಗಿದ್ದಳು . ಇಂದಿಗೂ ನಮ್ಮ ಸಂಬಂಧ ಹಸಿರಾಗಿದೆ . ಇರಲಿ .

ಕೊರೊನಾ ಅಂದ ತಕ್ಷಣ ಎಲ್ಲವೂ ಕೆಟ್ಟದಲ್ಲ !ಅದು ವಿಶ್ವ ವ್ಯವಸ್ಥೆಯ ರಿಸೆಟ್ ಬಟನ್ !!ಕೊರೊನಾ ಅಂದ ತಕ್ಷಣ ಎಲ್ಲವೂ ಕೆಟ್ಟದಲ್ಲ !ಅದು ವಿಶ್ವ ವ್ಯವಸ್ಥೆಯ ರಿಸೆಟ್ ಬಟನ್ !!

ಡಿಸೆಂಬರ್ ನಲ್ಲಿ ಸಂಸ್ಥೆಯ ಉದ್ಯೋಗಿಗಳನ್ನ ರಾತ್ರಿಯೂಟಕ್ಕೆ ಕರೆದುಕೊಂಡು ಹೋಗುವುದು ವಾಡಿಕೆ . ಊಟದ ನಂತರ ಸಂಸ್ಥೆ ಎಲ್ಲರಿಗೂ ಕ್ರಿಸ್ಮಸ್ ಗಿಫ್ಟ್ ನೀಡುವುದು ಕೂಡ ಇಲ್ಲಿನ ವಾಡಿಕೆ . ಹೀಗೆ ನಾನು ಬಾರ್ಸಿಲೋನಾ ತಲುಪಿದ ನಾಲ್ಕು ತಿಂಗಳಿಗೆ ಸಂಸ್ಥೆಯ ಎಲ್ಲಾ ಉದ್ಯೋಗಿಗಳ ಜೊತೆಗೆ ಊಟಕ್ಕೆ ಹೋಗುವ ಅವಕಾಶ ಸಿಕ್ಕಿತು . ಇಲ್ಲಿ ಗಂಡು -ಗಂಡು ಹಸ್ತಲಾಘವ ಕೊಟ್ಟು ಕೊಂಡರೆ , ಹೆಣ್ಣು -ಗಂಡಿಗೆ ಎರಡೂ ಕೆನ್ನೆಯ ಮೇಲೆ ಮೃದುವಾಗಿ ಚುಂಬಿಸುವುದು ಕಸ್ಟಮ್ . ಇಲ್ಲಿಯೂ ಎವಾ ನನ್ನ ಕೈ ಹಿಡಿದು ನೆಡೆಸಿದವಳು . ನನ್ನಲಿದ್ದ ಮುಖೇಡಿತನವನ್ನ ಹೋಗಲಾಡಿಸಿ , ಟೇಬಲ್ ಮ್ಯಾನರ್ಸ್ ಕಲಿಸಿದವಳು ಆಕೆ . ಹೀಗೆ ಊಟಕ್ಕೆ ಎಲ್ಲರೂ ಕುಳಿತ್ತಿದ್ದೆವು .

ಅದು ನನಗೆ ಮೊದಲ ಅನುಭವ . ಉದ್ದನೆಯ ದೊಡ್ಡ ಟೇಬಲ್, ಎರಡೂ ಬದಿಯಲ್ಲಿ ಕುಳಿತಿರುವ ಸಹೋದ್ಯೋಗಿಗಳು ಮತ್ತು ಅವರ ಕುಟುಂಬ . ನನಗೆ ಸಣ್ಣಗೆ ನಡುಕ . ನಾನು ಸಸ್ಯಾಹಾರಿ , ಮೊಟ್ಟೆ ಕೂಡ ತಿನ್ನದವನು , ಬೇರೆ ಏನೂ ಕೊಟ್ಟರೆ ಹೇಗೆ ? ಎನ್ನುವ ಧಾವಂತ ಒಂದು ಕಡೆ , ಬೇರೆ ಸಹೋದ್ಯೋಗಿ ಹೆಣ್ಣು ಮಕ್ಕಳ ಚುಂಬನವನ್ನ ಹೇಗೆ ತಪ್ಪಿಸ್ಕೊಳ್ಳುವುದು ಎನ್ನುವುದು ಇನ್ನೊಂದು ಕಡೆ . ಊಟಕ್ಕೆ ನನಗೆ ಆಲೂಗೆಡ್ಡೆ , ಬದನೇಕಾಯಿ , ಚೀಸ್, ಅಲ್ಕಾಚೋಫಾ ಮತ್ತಿತರ ತರಕಾರಿ , ಹಲವು ಹಣ್ಣನ್ನ ಸುಟ್ಟು (ಬಾರ್ಬಿಕ್ಯೂ ) ಇಟ್ಟಿದ್ದರು . ಊಟ ಸಾಗುತ್ತಿತ್ತು . ವಾನ್ ಪಾಸ್ತೋರ್ ಏನ್ನುವ ಸಹೋದ್ಯೋಗಿ ' ರಂಗಾ ಕೇ ತಾಲ್ ಬಾ ಕೋಮಿದ ' (ರಂಗ ಊಟ ಹೇಗೆ ಸಾಗುತ್ತಿದೆ ? ಎನ್ನುವ ಅರ್ಥ ) ಎಂದು ಕೇಳಿದರು .

ನಾನು 'ಬಿಯೆನ್ ' (ಚನ್ನಾಗಿದೆ ) ಹೇಳುವ ಮುಂಚೆ ಹೋಸೆ ಎನ್ನುವ ವ್ಯಕ್ತಿ ' ಎಲ್ ಏಸ್ ತೋರ್ಪೆ , ನೋ ಲೋ ಇಂತಿಯೆಂದೇ ಕ್ಯಾಸ್ತೆಯಾನೊ ' ಎಂದ . (ಅವನೊಬ್ಬ ಬೆಪ್ಪ ಅವನಿಗೆ ಸ್ಪ್ಯಾನಿಷ್ ಭಾಷೆ ಬರುವುದಿಲ್ಲ -ಎನ್ನುವ ಅರ್ಥ ) ನನಗರ್ಥವಾಯಿತು . ಆದರೂ ಸುಮ್ಮನಿದ್ದೆ . ಆತ ಮತ್ತೆ 'ವೆರ್ದಾ ರಂಗ ತು ನೋಂಬ್ರೆ ಏಸ್ ತೋರ್ಪೆ ' (ರಂಗ ನಿನ್ನ ಹೆಸರು ಬೆಪ್ಪ ಅಲ್ವಾ ? ) ಎಂದು ನನ್ನನ್ನ ಕೆಣಕಿದ . ಈ ಬಾರಿ ನಾನು ಹೆಚ್ಚು ಉದ್ವೇಗಕ್ಕೆ ಒಳಗಾಗದೆ ' ಹೋಸೆ , ಯೋ ನೋ ಪ್ರಗುಂತೆ ತು ನೋಂಬ್ರೆ , ಫೊರ್ ಕೆ ರಿಪಿತೆಸ್ ತು ನೋಂಬ್ರೆ ( ಹೋಸೆ ನಾನು ನಿನ್ನ ಹೆಸರನ್ನ ಕೇಳಲಿಲ್ಲ ಪದೇ ಪದೇ ನಿನ್ನ ಹೆಸರನ್ನ ಏಕೆ ಉಚ್ಛರಿಸುತ್ತಿರುವೆ ? ) ಎಂದು ಕೇಳಿದೆ .

ಅಲ್ಲಿದ್ದವರೆಲ್ಲಾ ಚಪ್ಪಾಳೆ ತಟ್ಟಿದರು . ಹೋಸೆಯ ಮುಖ ಚಿಕ್ಕದಾಯಿತು . ಅದು ನನ್ನ ಪ್ರಥಮ ಸ್ಪ್ಯಾನಿಷ್ ಸಂಭಾಷಣೆ . ನಾಲ್ಕು ತಿಂಗಳ ಕಾಲ ಎಲ್ಲರನ್ನ ನೋಡುತ್ತಾ ,ಅವರ ಉಚ್ಚಾರಣೆ ಕೇಳುತ್ತಾ , ಮನೆಯಲ್ಲಿ ಸ್ಪ್ಯಾನಿಷ್ ಟೀವಿ ನೋಡುತ್ತಾ , ಓದುತ್ತ ಕಲಿತದ್ದು ಸಾರ್ಥಕವಾಗಿತ್ತು . ಸ್ಪ್ಯಾನಿಷ್ ನಂತರದ ದಿನಗಳಲ್ಲಿ ಉಸಿರಾಗಿ ಹೋಯ್ತು . ಕನ್ನಡ ಬಳಕೆ ದಿನದಿಂದ ದಿನಕ್ಕೆ ಕುಸಿಯುತ್ತ ಹೋಯ್ತು . ಮಾತನಾಡುವುದಾದರೂ ಯಾರೊಂದಿಗೆ ?

ತಿಂಗಳು ಉರುಳುತ್ತಾ ಹೋದಂತೆ , ಅಲಹಾನ್ದ್ರೋ ಕೆಲಸ ಬಿಟ್ಟು ಹೋದ . ಅನಾಯಾಸವಾಗಿ ಅಕೌಂಟ್ಸ್ ಮತ್ತು ಫೈನಾನ್ಸ್ ಮುಖ್ಯಸ್ಥನ ಸ್ಥಾನ ನನಗೆ ಸಿಕ್ಕಿತು . ನಿಧಾನವಾಗಿ ಗ್ರಾಹಕರೊಂದಿಗೆ ಫೋನ್ ಸಂಭಾಷಣೆ ಕೂಡ ಮಾಡಲು ಶುರು ಮಾಡಿದೆ . ಹೀಗೆ ನೂರಾರು ಜನ ಅಲ್ಲಿ ಪರಿಚಿತರಾದರು.

English summary
Barcelona Memories Column By Rangaswamy Mookanahalli Part 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X