ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ನಾವು ಪಡೆದು ಬಂದದ್ದು ಅನುಭವಿಸದೇ ಬೇರೆ ದಾರಿ ಯಾವುದಿದೆಯಿಲ್ಲಿ?

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಎರಡು ಸಾವಿರದ ಮೂರನೇ ಇಸವಿಯಿಂದ ಬಾರ್ಸಿಲೋನಾ ಕ್ಕೆ ಬರುವ ವಲಸಿಗರ ಸಂಖ್ಯೆಯಲ್ಲಿ ಬಹಳ ಹೆಚ್ಚಳ ಕಂಡು ಬರಲು ಶುರುವಾಯ್ತು. ಲ್ಯಾಟಿನ್ ಅಮೇರಿಕಾದಿಂದ ಬಂದ ವಲಸಿಗರಿಗೆ ಭಾಷೆ ಸಮಸ್ಯೆಯಾಗುತ್ತಿರಲಿಲ್ಲ . ಆದರೆ ಬಾಂಗ್ಲಾ ಮತ್ತು ಪಾಕಿಸ್ತಾನದಿಂದ ಬಹಳಷ್ಟು ಜನ ವಲಸೆ ಬರಲು ಶುರು ಮಾಡಿದರು. ಹೀಗೆ ಬಂದ ವಲಸಿಗರಲ್ಲಿ ಒಂದು ಪ್ರತಿಶತ ಕೂಡ ವಿಮಾನದ ಮೂಲಕ , ಕಾನೂನು ರೀತಿ ಬಂದವರಲ್ಲ. ಪ್ರತಿಯೊಬ್ಬ ವಲಸಿಗನದು ಒಂದೊಂದು ಕಥೆ.

ಪಾಕಿಸ್ತಾನದಿಂದ ಬಾರ್ಸಿಲೋನಾಗೆ ಕರೆತರಲು ಬರೋಬ್ಬರಿ ಎಂಟು ಲಕ್ಷ ಪಾಕಿಸ್ತಾನಿ ರೂಪಾಯಿಯನ್ನ ಅವರು ಏಜೆಂಟ್ ಗೆ ನೀಡಬೇಕಿತ್ತು. ಇಂತಹ ಏಜೆಂಟ್ಗಳು ಅವರನ್ನ ರಷ್ಯಾಕ್ಕೆ ಕರೆತಂದು ಅಲ್ಲಿ ಮೂರ್ನಾಲ್ಕು ತಿಂಗಳು ಇರಿಸುತ್ತಿದ್ದರಂತೆ , ಅನಂತರ ಸಮಯ ನೋಡಿ ಉಕ್ರೈನ್ ಮೂಲಕ ಹಂಗರಿ ದೇಶವನ್ನ ತಲುಪಿ ಅಲ್ಲಿಂದ ಆಸ್ಟ್ರಿಯಾ, ಇಟಲಿ ನಂತರ ಫ್ರಾನ್ಸ್ ಕೊನೆಗೆ ಸ್ಪೇನ್ ತಲುಪಿಸುತ್ತಿದ್ದರು. ಸ್ಪೇನ್ ತಲುಪುವುದಕ್ಕೆ ಕೆಲವೊಬ್ಬ ವಲಸಿಗರು ಎರಡು ವರ್ಷ ತೆಗೆದುಕೊಂಡಿದ್ದಾರೆ.

ಬೀನಾಳ ಬದುಕಿನ ದಿಕ್ಕನ್ನೇ ಬದಲಾಯಿಸಿದ ಮುಂಬೈನ ಆ ವರ್ಷಧಾರೆ!ಬೀನಾಳ ಬದುಕಿನ ದಿಕ್ಕನ್ನೇ ಬದಲಾಯಿಸಿದ ಮುಂಬೈನ ಆ ವರ್ಷಧಾರೆ!

ಯೂರೋಪಿನಲ್ಲಿ ಇಟಲಿ, ಗ್ರೀಸ್ , ಸ್ಪೇನ್ ಮತ್ತು ಪೋರ್ಚುಗಲ್ ದೇಶಗಳು ಮಾನವತೆಯ ಆಧಾರದ ಮೇಲೆ ಒಂದಷ್ಟು ವಲಸಿಗರಿಗೆ ಬಾಗಿಲು ತೆರೆಯುತ್ತಿದ್ದವು. ವರ್ಷ ಅಥವಾ ಎರಡು ವರ್ಷದಲ್ಲಿ ಒಂದಷ್ಟು ಸಮಯ ಇಂತಹ ಒಂದು ಅವಕಾಶವನ್ನ ಕಲ್ಪಿಸುತ್ತಿದ್ದರು. ಎಲ್ಲಾ ದೇಶಗಳು ಒಟ್ಟಿಗೆ ಇಂತಹ ಅವಕಾಶವನ್ನ ನೀಡುತ್ತಿರಲಿಲ್ಲ ಬದಲಿಗೆ ಎಲ್ಲಾ ದೇಶಗಳೂ ಬೇರೆ ಬೇರೆ ಸಮಯದಲ್ಲಿ ಇಂತಹ ಒಂದು ವ್ಯವಸ್ಥೆಯನ್ನ ಕಲ್ಪಿಸುತ್ತಿದ್ದವು. ಹೀಗಾಗಿ ಯಾವ ದೇಶ ವರ್ಷದ ಯಾವ ತಿಂಗಳಲ್ಲಿ ಬಾಗಿಲು ತೆರೆದಿದೆ ಎನ್ನವುದನ್ನ ಅವಲಂಬಿಸಿ ವಲಸಿಗರು ಸಾಗುವ ದೇಶಗಳ ಪಟ್ಟಿ ಬದಲಾಗುತ್ತದೆ.

Barcelona Memories Coloumn By Rangaswamy Mookanahalli Part 9

ಆಲಿ ಎನ್ನುವವನು ಬಾಂಗ್ಲಾದೇಶಿ. ವಯಸ್ಸು ಐವತ್ತರ ಆಸುಪಾಸು ಅನ್ನಿಸುತ್ತದೆ. ಅವನಿಗೆ ತನ್ನ ನಿಖರ ವಯಸ್ಸೆಷ್ಟು ಎನ್ನುವುದು ಕೂಡ ಗೊತ್ತಿರಲಿಲ್ಲ. ಡಾಕ್ಯುಮೆಂಟ್ ನಲ್ಲಿ ಇದ್ದ ದಿನಾಂಕ ಸರಿಯೇ ತಪ್ಪೇ ಎನ್ನುವುದು ಕೂಡ ಅವನಿಗೆ ತಿಳಿದಿರಲಿಲ್ಲ . ಎಲ್ಲಕ್ಕಿಂತ ಮುಖ್ಯವಾಗಿ ಅದು ಅವನಿಗೆ ಬೇಕಿರಲೂ ಇಲ್ಲ. ಆಲಿ ಬಾಂಗ್ಲಾದೇಶ ಬಿಟ್ಟವನು ಬಾರ್ಸಿಲೋನಾ ತಲುಪುವಷ್ಟರಲ್ಲಿ ಎರಡು ವರ್ಷ ಹಿಡಿಯಿತಂತೆ ! ಆಮೇಲೆ ಮೂರು ವರ್ಷ ಅವನಿಗೆ ಇಲ್ಲಿನ ರೆಸಿಡೆನ್ಸಿ ಪರ್ಮಿಟ್ ಪಡೆದುಕೊಳ್ಳುವುದರಲ್ಲಿ ಕಳೆದು ಹೋಯ್ತು.

ಕೆಲಸ ಮಾಡಿ ಮನೆಗೆ ಮತ್ತು ಬಾರ್ಸಿಲೋನಾ ಗೆ ಬರಲು ಮಾಡಿದ ಸಾಲ 8ಲಕ್ಷ ತೀರಿಸುವ ವೇಳೆಗೆ ಎಂಟು ವರ್ಷವಾಗಿತ್ತು. ಎಂಟು ವರ್ಷದ ನಂತರ ಆಲಿ ಬಾಂಗ್ಲಾದೇಶಕ್ಕೆ ಹೊರಟಾಗ ಅದೇನೂ ಯುದ್ದ ಗೆದ್ದ ಸಾರ್ಥಕತೆ ಅವನ ಮುಖದಲ್ಲಿತ್ತು. ಆಲಿ ಬಹಳ ನಿಯತ್ತಿನ ಮನುಷ್ಯ. ಬಹಳವೇ ಧರ್ಮಭೀರು. ಎರಡು ಸಾವಿರದ ಐದರಿಂದ ಎರಡುಸಾವಿರದ 14ರ ವರೆಗೆ ನಮ್ಮ ಮನೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನ ಆಲಿ ತಂದು ಕೊಡುತ್ತಿದ್ದ.

ನಾನು ರಮ್ಯ ಸೂಪರ್ ಮಾರ್ಕೆಟ್ ನಲ್ಲಿ ಮನೆಗೆ ಬೇಕಾದ ವಸ್ತುಗಳನ್ನ ವಾರಕೊಮ್ಮೆ ತರುತ್ತಿದ್ದೆವು. ಅಕ್ಕಿ , ಬೇಳೆ , ಜೊತೆಗೆ ಹಸಿರು ಮೆಣಸಿನಕಾಯಿ , ಕೊತ್ತಂಬರಿ , ಜೀರಿಗೆ , ಸಾಸಿವೆಯಂತಹ ಭಾರತೀಯ ಅಡುಗೆಯಲ್ಲಿ ಬಳಸುವ ಪದಾರ್ಥಗಳನ್ನ ಆಲಿ ತಂದುಕೊಡುತ್ತಿದ್ದ . ನಾವಿದ್ದ ಕಡೆ ಇದ್ದ ಬಹುತೇಕ ಏಶಿಯನ್ ಸ್ಟೋರ್ ಗಳನ್ನ ನಡೆಸುತಿದ್ದದ್ದು ಪಾಕಿಸ್ತಾನಿಗಳು ಅಥವಾ ಬಾಂಗ್ಲಾದೇಶಿಗಳು, ಅಲ್ಲೊಂದು ಇಲ್ಲೊಂದು ಭಾರತೀಯ ಪಂಜಾಬಿ ಅಂಗಡಿಗಳು ಕೂಡ ಇದ್ದವು.

 ನಾಳೆಯ ಗುಟ್ಟು ಬಿಟ್ಟು ಕೊಡದ ಬದುಕು ಅಚ್ಚರಿಗಳ ಸಾಗರ! ನಾಳೆಯ ಗುಟ್ಟು ಬಿಟ್ಟು ಕೊಡದ ಬದುಕು ಅಚ್ಚರಿಗಳ ಸಾಗರ!

ಆಲಿ ಬಾಂಗ್ಲಾದೇಶಕ್ಕೆ ಹೋಗುವ ಮುನ್ನಾ ಒಂದು ದಿನ ರಂಗ ಭಾಯ್ ನಮ್ಮ ಜೀವನ ನಮ್ಮ ಶತ್ರುವಿಗೂ ಬೇಡ ಎಂದ. ಏನಾಯ್ತು ಆಲಿ ಎಂದದ್ದಕ್ಕೆ ನನ್ನ ಮಗ ನನ್ನ ಗುರುತು ಹಿಡಿಯಲಿಲ್ಲ ಎಂದು ಬಹಳ ವೇದನೆ ಪಟ್ಟುಕೊಂಡ. ಆಲಿ ತಾನು ಸವೆದು ತನ್ನ ಕುಟುಂಬಕ್ಕೆ ಅನ್ನ , ಆಶ್ರಯ ನೀಡಿದ. ಮಗಳನ್ನ ಮೆಡಿಕಲ್ ಓದಿಸುತ್ತಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಂಡು ತಿರುಗುತ್ತಿದ್ದ . 2014ರಲ್ಲಿ ಬಾಂಗ್ಲಾಗೆ ಹೋದವನು ಮತ್ತೆ ವಾಪಸ್ಸು ಬರಲಿಲ್ಲ. ನಾಲ್ಕೈದು ತಿಂಗಳ ನಂತರ ಬಾಂಗ್ಲಾದೇಶಿ ಅಂಗಡಿಗಳಲ್ಲಿ ಅವನ ಬಗ್ಗೆ ವಿಚಾರಿಸಲು ಶುರು ಮಾಡಿದೆ. ಕೊನೆಗೊಂದು ಅಂಗಡಿಯಲ್ಲಿ ಅವನ ಮನೆಯನ್ನ ಶೇರ್ ಮಾಡುತ್ತಿದ್ದ ಇನ್ನೊಬ್ಬ ಬಾಂಗ್ಲಾದೇಶಿಯ ನಂಬರ್ ಸಿಕ್ಕಿತು.

ಆಲಿ ಬಾಂಗ್ಲಾದೇಶದಕ್ಕೆ ಹೋದವನು ಪಾರ್ಶ್ವವಾಯುವಿಗೆ ತುತ್ತಾಗಿದ್ದಾನೆ ಎನ್ನುವ ವಿಷಯ ತಿಳಿಯಿತು. ಅವನನ್ನ ಬಲ್ಲವರಿಂದ ಮತ್ತು ಇತರ ಮೂಲಗಳಿಂದ ಒಂದಷ್ಟು ಹಣವನ್ನ ಸಂಗ್ರಹಿಸಿ (ಸಾವಿರ ಯುರೋ ಎಂದು ನೆನಪು ) ಆಲಿಗೆ ಕಳಿಸಿದೆವು. ಒಂದೆರೆಡು ಬಾರಿ ಫೋನ್ ನಲ್ಲಿ ಅವನೊಂದಿಗೆ ಮಾತನಾಡಿದೆ. ' ರಂಗ ಭಾಯ್ ಮನುಷ್ಯ ದುಡಿಯುತ್ತಿರಬೇಕು , ಹಣ ಗಳಿಸುತ್ತಿರಬೇಕು ಇಲ್ಲದಿದ್ದರೆ ಅವನಿಗೆ ಇಸ್ರತ್ ಇರುವುದಿಲ್ಲ ' ಎನ್ನುತ್ತಿದ್ದ. ಆಲಿ ಅವನ ಕುಟುಂಬಕ್ಕೆ ಎಟಿಎಂ ಮಷೀನ್ ಆಗಿದ್ದನಷ್ಟೆ. ಮಷಿನ್ ನಲ್ಲಿ ಹಣ ಬರುವುದು ನಿಂತ ಮೇಲೆ ಮಷೀನ್ ಗೆ ಬೆಲೆ ಎಲ್ಲಿದೆ ?

' ನೀನು ಇದ್ದರೆ ವಾಸಿ ಕಣೋ , ನೀನಿಲ್ಲ ಅಂದರೆ , ಆಲಿ ಬಾಯ್ ಅಂದರ್ ಆವೋ ಪಾನಿ ಪೀಕೇತು ಜಾವೋ ' ಅಂದರೂ ನೈ ಬಾಬಿ ಎನ್ನುವುದು ಬಿಟ್ಟು ಇನ್ನೇನೂ ಹೇಳುವುದಿಲ್ಲ , ಕತ್ತೆತ್ತಿ ಕೂಡ ನೋಡುವುದಿಲ್ಲ , ಅಯ್ಯೋ ಪಾಪ ಆಲಿಗೆ ಹೀಗಾಗಬಾರದಿತ್ತು ಎಂದು ರಮ್ಯ ನೊಂದುಕೊಂಡಳು. 2015ರ ವೇಳೆಗೆ ಆಲಿ ಸತ್ತು ಹೋದ ಎನ್ನುವ ಸುದ್ದಿ ಕೂಡ ತಲುಪಿತು. ಬಾಂಗ್ಲಾದೇಶದ ಯಾವುದೋ ಊರಲ್ಲಿ ಸರಿಯಾಗಿ ದಿನಾಂಕ ಕೂಡ ತಿಳಿಯದ ದಿನದಲ್ಲಿ ಹುಟ್ಟಿದ ಆಲಿ ಗೂ ನನಗೂ ಎಲ್ಲಿಯ ಋಣಾನುಬಂಧ ? ಅಷ್ಟಕ್ಕೂ ನಾನೇನು ಅವನಿಗೆ ನೂರಾರು ಯುರೋ ಕೊಡುತ್ತಿರಲಿಲ್ಲ. ತಿಂಗಳಿಗೆ 20 ಅಥವಾ 50 ಯುರೋ ಮನೆಗೆ ಸಾಮಾನು ತಂದುಕೊಡುತ್ತಿದ್ದಕ್ಕೆ ಭಕ್ಷೀಸ್ ರೂಪದಲ್ಲಿ ನೀಡುತ್ತಿದೆ ಅಷ್ಟೇ , ಸಂಕೋಚದ ಮುದ್ದೆಯಾದ ಅವನು ಅದನ್ನ ಬೇಡ ಎಂದು ನಿರಾಕರಿಸುತ್ತಿದ್ದ.

ಇಂತಹ 'ಆಲಿ ' ಗಳ ಸಂಖ್ಯೆ ಯೂರೋಪ್ ನಲ್ಲಿ ಅಸಂಖ್ಯ. ಇಂತಹ ಜನರ ಜೊತೆಗೆ ಗೊತ್ತಿಲ್ಲದೇ ಒಂದಷ್ಟು ಸಂಖ್ಯೆಯಲ್ಲಿ ಉಗ್ರರು ಕೂಡ ನುಸುಳುತ್ತಾರೆ. ಯಾರು ಒಳ್ಳೆಯವರು ? ಯಾರು ಕೆಟ್ಟವರು ? ಇಂತಹ ಸ್ಥಿತಿಯನ್ನ ನಿರ್ಮಿಸಿದವರು ಯಾರು ? ಇಷ್ಟೆಲ್ಲಾ ನೋವಿಗೆ ಕಾರಣರಾರು ?

 ವಲಸೆ ಎಂದರೆ 'ಹೊಲಸು 'ಎನ್ನುವಂತೆ ಮಾಡಿದ್ದು ವಲಸಿಗರು! ವಲಸೆ ಎಂದರೆ 'ಹೊಲಸು 'ಎನ್ನುವಂತೆ ಮಾಡಿದ್ದು ವಲಸಿಗರು!

ಒಂದು ದಿನ ಬಾದಲೂನಾ ನಗರದಲ್ಲಿರುವ ಲಾಲಜಿ ಇಂಡಿಯನ್ ಮತ್ತು ಪಾಕಿಸ್ತಾನಿ ರೆಸ್ಟೋರೆಂಟ್ ಒಂದರಲ್ಲಿ ಊಟ ಮಾಡಲು ಕುಳಿತ್ತಿದೆವು. ಇಲ್ಲಿ ಒಂದು ವಿಷಯವನ್ನ ಹೇಳಿ ಮುಂದುವರಿಸುತ್ತೇನೆ. ಸಾಮಾನ್ಯವಾಗಿ ಯೂರೋಪಿನಲ್ಲಿ ಭಾರತೀಯರು ನಡೆಸುವ ಹೋಟೆಲ್ ಗಳ ಸಂಖ್ಯೆ ಕಡಿಮೆ. ಇಂದಿಗೆ ಒಂದಷ್ಟು ಬದಲಾವಣೆಯಾಗಿದೆ , ಆದರೂ ಬಹುತೇಕ ಹೋಟೆಲ್ ಅಥವಾ ರೆಸ್ಟೋರೆಂಟ್ ಗಳು ನಡೆಸುವುದು ಪಾಕಿಸ್ತಾನಿ ಅಥವಾ ಬಾಂಗ್ಲಾದೇಶಿಗಳು. ಅವರ ಹೋಟೆಲ್ ಮುಂದೆ ಪಾಕಿಸ್ತಾನಿ ಎಂದು ಹಾಕಿದರೆ ಲೋಕಲ್ ನಿಂದ ಹಿಡಿದು ಟೂರಿಸ್ಟ್ ಗಳು ಹೋಟೆಲ್ ಒಳಗೆ ಬರುವುದಿಲ್ಲ ಎನ್ನುವ ಕಾರಣಕ್ಕೆ ಇಂಡಿಯನ್ ಕ್ಯೂಸಿನ್ ಎಂದು ಹಾಕುತ್ತಾರೆ.

ಇದ್ದುದರಲ್ಲಿ ನೇಪಾಳಿಗೆಳು ವಾಸಿ. ಧೈರ್ಯವಾಗಿ ನೇಪಾಳಿ ರೆಸ್ಟೋರೆಂಟ್ ಎಂದು ಹಾಕಿಕೊಳ್ಳುತ್ತಾರೆ. ಹೀಗೆ ಪಾಕಿಸ್ತಾನಿ ಮಾಲೀಕನ ಹೋಟೆಲ್ ಒಂದರಲ್ಲಿ ಊಟಕ್ಕೆ ಕುಳಿತಿದ್ದೆವು. ಒಬ್ಬ ವ್ಯಕ್ತಿ ಒಂದು ಪಿಜ್ಜಾ ಡೆಲಿವೆರಿಗೆ ಬಳಸುವ ಬ್ಯಾಗ್ ಒಂದನ್ನ ಹಿಡಿದು ಒಳಬಂದ, ನಂತರ ಒಂದಷ್ಟು ದುಡ್ಡನ್ನ ಹೋಟೆಲ್ ಮಾಲಿಕನಿಗೆ ನೀಡಿ , ಟೇಬಲ್ ಒಂದರಲ್ಲಿ ಕುಳಿತು ನಮ್ಮನ್ನ ನೋಡಲು ಶುರು ಮಾಡಿದ. ಮೊದಮೊದಲು ನಾವಷ್ಟು ಗಮನವನ್ನ ಕೊಡಲಿಲ್ಲ. ' ಅವನಿಗೆ ಹಸಿವಾದಂತಿದೆ , ಒಮ್ಮೆ ವಿಚಾರಿಸಿ ನೋಡು ' ಎಂದಳು ರಮ್ಯ.

ಅವನನ್ನ ಮಾತನಾಡಿಸಿದಾಗ ತಿಳಿದದ್ದು ಅವನು ಇನ್ನು ಕಾನೂನು ಬಾಹಿರವಾಗಿ ನೆಲೆ ನಿಂತಿರುವ ವಲಸಿಗ, ಮೂಲತಃ ಪಾಕಿಸ್ತಾನಿ. ಲಾಲಾಜಿ ಹೋಟೆಲ್ ನಲ್ಲಿ ನಿತ್ಯವೂ 20/30 ಸಮೋಸ ತೆಗೆದುಕೊಂಡು ಹೋಗಿ ಅದನ್ನ ಪಾಕಿಸ್ತಾನಿ , ಬಾಂಗ್ಲಾದೇಶೀಯರು ಹೆಚ್ಚಾಗಿ ಇರುವ ಜಾಗದಲ್ಲಿ ಮಾರಿಕೊಂಡು ಬರುವ ಕೆಲಸವನ್ನ ಮಾಡುತ್ತಾ ದಿನ ಕಳೆಯುತ್ತಿದ್ದ. 10/15 ಯುರೋ ಅವನ ದಿನದ ಸಂಪಾದನೆ !! ಇದರಲ್ಲಿ ಅವನ ಜೀವನ ನಡೆಯಬೇಕು.

ಹೀಗೆ ರೆಸಿಡೆನ್ಸಿ ಪರ್ಮಿಟ್ ಇಲ್ಲದೆ 8 ವರ್ಷದಿಂದ ಅಲೆಮಾರಿ ಬದುಕನ್ನ ಸವೆಸುತ್ತಿದ್ದ ಅವನು ಅನ್ನವನ್ನ ತಿಂದು ಆರು ತಿಂಗಳಾಗಿತ್ತಂತೆ, ಬಾಯ್ ಮಾಫ್ ಕರ್ನಾ ಆಪ್ ಲೋಗ್ ಬಿರಿಯಾನಿ ಕಾ ರಹತಾ ಇಸ್ಲೀಯೇ ದೇಖಾ ... ಮಾಫ್ ಕರ್ನಾ ' ಎಂದನಾತ. ಇಂದಿಗೆ ಅವನ ಹೆಸರು ಮರೆತು ಹೋಗಿದೆ. ಅವನಿಗೆ ಒಂದು ಪ್ಲೇಟು ಚಿಕನ್ ಬಿರಿಯಾನಿ ಕೊಡಿಸಿದೆ. ಆರು ತಿಂಗಳಿಂದ ಬೆಳಿಗ್ಗೆ ಮಧ್ಯಾಹ್ನ , ರಾತ್ರಿ ಒಂದು ಅಥವಾ ಎರಡು ಸಮೋಸ ತಿಂದು ನೀರು ಕುಡಿದು ಮಲಗುವುದು ಮಾಮೂಲಾಗಿ ಬಿಟ್ಟಿದೆ. ಸಮೋಸ ಎಂದರೆ ವಾಕರಿಕೆ , ವಾಂತಿ ಬರುತ್ತದೆ ಎಂದವನ ಕಣ್ಣಲ್ಲಿ ಬಿರಿಯಾನಿ ತಿನ್ನುವಾಗ ಒಂದಷ್ಟು ಹೊಳಪು ಕಂಡಿತು.

 ನಮ್ಮೆಲ್ಲಾ ಭಿನ್ನತೆಗಳ ನಡುವೆ ಕೂಡ ನಮ್ಮನ್ನ ಬೆಸೆಯುವ ಕೊಂಡಿಗಳು ಬೇಕಾದಷ್ಟಿವೆ! ನಮ್ಮೆಲ್ಲಾ ಭಿನ್ನತೆಗಳ ನಡುವೆ ಕೂಡ ನಮ್ಮನ್ನ ಬೆಸೆಯುವ ಕೊಂಡಿಗಳು ಬೇಕಾದಷ್ಟಿವೆ!

ಯೂರೋಪು ಎಂದರೆ , ಅಥವಾ ಅಮೇರಿಕಾ ಎಂದಾಕ್ಷಣ ಅಲ್ಲಿ ಎಲ್ಲವೂ ಸುಂದರ ಎನ್ನುವ ಭಾವನೆಯಿಂದ ಸಾಕಷ್ಟು ಜನ ವಲಸೆ ಹೋಗುತ್ತಾರೆ. ಅಲ್ಲಿನ ನೆಲದ ಬಗ್ಗೆ ಅರಿವಿಲ್ಲದ , ವಿಧ್ಯಾಭ್ಯಾಸವಿಲ್ಲದ ಮುಕ್ಕಾಲು ಪಾಲು ವಲಸಿಗರ ಕಥೆಯಿದು. ಇಲ್ಲಿ ನೋವುಂಡವರು ಊರಿಗೆ ಹೋದಾಗ ಸುಣ್ಣ ಬಣ್ಣ ಹಚ್ಚಿ ಸುಖವನ್ನ ವರ್ಣಿಸುತ್ತಾರೆ. ಹೀಗಾಗಿ ಯೂರೋಪಿನಲ್ಲಿ ದೊಡ್ಡ ಮಟ್ಟದಲ್ಲಿ ಬಾಂಗ್ಲಾ , ಪಾಕಿಸ್ತಾನ ಮತ್ತು ನಮ್ಮ ಪಂಜಾಬಿಗಳನ್ನ ಹೀಗೆ ವರ್ಷಾನುಗಟ್ಟಲೆ ಅಲ್ಲಿಯೂ ಇಲ್ಲದ , ಇಲ್ಲಿಯೂ ಇಲ್ಲದ ತ್ರಿಶಂಕು ಬದುಕನ್ನ ಬದುಕುವುದನ್ನ ಕಾಣಬಹದು.

ಹೆಗ್ಗಣ ದೇಶಾಂತರ ಹೋದರೂ ನೆಲವನ್ನ ಕೊರೆಯುವುದು ತಪ್ಪುವುದಿಲ್ಲ ಎನ್ನುವ ಮಾತು , ಪಾಪಿ ಸಮುದ್ರ ಹೊಕ್ಕರೆ ಮೊಣಕಾಲುದ್ದ ನೀರು ಎನ್ನುವ ಗಾದೆ ಮಾತುಗಳು ಇಂತಹ ಸನ್ನಿವೇಶಕ್ಕೆ ತಕ್ಕಹಾಗಿವೆ. ಕೊನೆಗೂ ನಾವು ಪಡೆದು ಬಂದದ್ದು ಅನುಭವಿಸದೇ ಬೇರೆ ದಾರಿ ಯಾವುದಿದೆಯಿಲ್ಲಿ ?

English summary
Barcelona Memories Coloumn By Rangaswamy Mookanahalli Part 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X