ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕು ನಮ್ಮ ಅನುಭವಗಳ ಒಟ್ಟು ಮೊತ್ತ, ಇಂದಿಗೆ ನಿಷಿದ್ಧ ಅನ್ನಿಸಿದ್ದು ನಾಳೆ ಪ್ರಸಿದ್ಧವಾಗಬಹದು!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಬಾರ್ಸಿಲೋನಾ ದಲ್ಲಿನ ಮೊದಲ ದಿನಗಳು ಮತ್ತು ತಿಂಗಳುಗಳು ಮರೆಯುವುದು ಸಾಧ್ಯವೇ ಇಲ್ಲ. ಅದಕ್ಕೆ ಕಾರಣ ಬಹಳ ಸರಳ. ಸುತ್ತಮುತ್ತಲೂ ಬಹಳ ಜನರಿದ್ದರೂ ನನಗೆ ಮಾತನಾಡಲು ಮಾತ್ರ ಯಾರೂ ಇರಲಿಲ್ಲ. ಐದಾರು ತಿಂಗಳಲ್ಲಿ ಭಾಷೆ ಒಂದು ಹಂತಕ್ಕೆ ಬಂದಿತ್ತು. ಆದರೆ ನಾನು ಕೆಲಸ ಮಾಡುವ ಸಂಸ್ಥೆ ನನಗೆ ವರ್ಕ್ ಪರ್ಮಿಟ್ ವೀಸಾ ನೀಡಿರಲಿಲ್ಲ. ಪ್ರತಿ ಮೂರು ತಿಂಗಳಿಗೆ ಬಾರ್ಸಿಲೋನಾ ದಿಂದ ದುಬೈಗೆ ಹೋಗುವುದು ಅಲ್ಲೊಂದು ವಾರವಿದ್ದು ಮತ್ತೆ ಟೂರಿಸ್ಟ್ ವೀಸಾ ದಲ್ಲಿ ಬಾರ್ಸಿಲೋನಾ ಸೇರಿಕೊಳ್ಳುವುದು.

ಹೀಗೆ ಒಟ್ಟು ಮೂರು ಬಾರಿ ಯಾತ್ರೆಯಾಯ್ತು. ಸ್ಪೇನ್ ನಲ್ಲಿರುವ ಸ್ಟಾಫ್ ನನ್ನ ಒಪ್ಪಿಕೊಳ್ಳುತ್ತದೆಯೋ ಇಲ್ಲವೋ ಎನ್ನವುದು ಮ್ಯಾನೇಜ್ಮೆಂಟ್ ಅವರ ಅನುಮಾನ ಹೀಗಾಗಿ ಒಂದು ವರ್ಷಗಳ ಕಾಲ ಸ್ಪೇನ್ ನಲ್ಲಿ ನೆಲಸಿ ಕೂಡ ಅಲ್ಲಿಯ ರೆಸಿಡೆಂಟ್ ಎನ್ನಿಸಿಕೊಳ್ಳಲು ಆಗಿರಲಿಲ್ಲ . ಕೊನೆಗೂ ನನ್ನ ಸಂಸ್ಥೆ ನನಗೆ ವರ್ಕ್ ಕಮ್ ರೆಸಿಡೆನ್ಸಿ ಪರ್ಮಿಟ್ ಗೆ ಅಪ್ಲೈ ಮಾಡಿದರು.

ಬದುಕೆಂದರೆ ಇಷ್ಟೇ.. ಎಲ್ಲವನ್ನ ಮೀರಿ ನಮ್ಮನ್ನ ಬೆಸೆಯುತ್ತದೆ ಯಾವುದೋ ಒಂದು ಶಕ್ತಿ ಬದುಕೆಂದರೆ ಇಷ್ಟೇ.. ಎಲ್ಲವನ್ನ ಮೀರಿ ನಮ್ಮನ್ನ ಬೆಸೆಯುತ್ತದೆ ಯಾವುದೋ ಒಂದು ಶಕ್ತಿ

ತಿಂಗಳಲ್ಲಿ ಅದು ಒಪ್ಪಿತವಾಗಿ ನನಗೆ ಅಲ್ಲಿನ ಸ್ಥಳೀಯ ಪಟ್ಟ ಸಿಕ್ಕಿತು. ಹೀಗೆ ಸ್ಥಳೀಯ ಎಂದು ಅನ್ನಿಸಿಕೊಳ್ಳಲು ಮಾಡಬೇಕಾದ ಪ್ರಥಮ ಕೆಲಸ ನಾವು ವಾಸಿಸುವ ಸ್ಥಳದ ಮುನಿಸಿಪಾಲಿಟಿ (ಇದನ್ನ ಇಲ್ಲಿ ಅಜುಂದಮೆನ್ತೊ ಎನ್ನುತ್ತಾರೆ ) ಹೋಗಿ ನೊಂದಾಯಿಸಿಕೊಳ್ಳಬೇಕು. ಹೀಗೆ ನಾನು ಇಂತಹ ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದು ನೊಂದಾಯಿಸಿಕೊಳ್ಳುವ ಪ್ರಕ್ರಿಯೆಗೆ ಸ್ಪ್ಯಾನಿಷ್ ನಲ್ಲಿ ಎಂಪದ್ರನಾರ್ ಅಥವಾ ಎಂಪದ್ರಮಿಯಂತೋ ಎನ್ನುತ್ತಾರೆ.

Barcelona Memories Coloumn By Rangaswamy Mookanahalli Part 4

ಜ್ವಾನ್ ಪಾಸ್ತೋರ್ ಎನ್ನುವ ವ್ಯಕ್ತಿ ಅಂದಿಗೆ ನಮ್ಮ ಸಂಸ್ಥೆಯ ಮಾರ್ಕೆಟಿಂಗ್ ಹೆಡ್ . ಈತನೂ ಕೂಡ ಕಡಿಮೆ ಸಮಯದಲ್ಲಿ ಒಳ್ಳೆಯ ಸ್ನೇಹಿತರಾದರು. ಪ್ರಥಮ ಬಾರಿಗೆ ನನ್ನನ್ನ ಮುನಿಸಿಪಾಲಿಟಿ ಕಚೇರಿಗೆ ಕರೆದುಕೊಂಡು ಹೋಗಿ ನೊಂದಾವಣಿ ಕಾರ್ಯದಲ್ಲಿ ಸಹಾಯ ಮಾಡಿದ್ದು ಇಂದಿಗೂ ನನಗೆ ನೆನಪಿದೆ. ಅಂದು ಅಲ್ಲಿನ ರೀತಿ ನೀತಿಗಳ ಎಳ್ಳಷ್ಟೂ ಅರಿವಿರಲಿಲ್ಲ .

ಮುಂಬರುವ ದಿನಗಳಲ್ಲಿ ಸ್ವತಃ ಅಲ್ಲಿನ ಸ್ಥಳೀಯರೇ ಲೇಬರ್ ಲಾ ಕುರಿತು ಏನಾದರೂ ಸಂಶವಿದ್ದರೆ ರಂಗನನ್ನ ಕೇಳಿ ಎನ್ನುವ ಮಟ್ಟಕ್ಕೆ ನನ್ನ ಜ್ಞಾನ ಅಭಿವೃದ್ಧಿ ಆಗುತ್ತದೆ ಎನ್ನುವುದು ಅಂದಿಗೆ ತಿಳಿದಿರಲಿಲ್ಲ. ಬದುಕೆಂದರೆ ಇಷ್ಟೇ ಅಲ್ವಾ ? ಆಸಕ್ತಿಯಿಂದ ಕಲಿಯುತ್ತಾ ಹೋದರೆ ಜಗತ್ತಿನ ಯಾವ ಭಾಗವಾದರೂ ಸರಿಯೇ ಅದು ನಮ್ಮ ನೆಲೆಯಾಗುತ್ತದೆ .

ಭಾಷೆ ಬಾರದ ದೇಶದಲ್ಲಿ ಶುರುವಾಯ್ತು ಬದುಕು ! ಭಾಷೆ ಬಾರದ ದೇಶದಲ್ಲಿ ಶುರುವಾಯ್ತು ಬದುಕು !

ಹೀಗೆ ಇಲ್ಲಿನ ರೆಸಿಡೆನ್ಸಿ ಸಿಗುವ ವೇಳೆಗೆ ಇಲ್ಲಿ ನಾನಾಗಲೇ ವರ್ಷ ಕಳೆದಿದ್ದೆ. ಭಾಷೆಯ ಮೇಲೆ ಬದುಕಿನ ಮೇಲೆ ಒಂದು ಹಂತದ ಹಿಡಿತ ಬಂದಿತ್ತು. ಆದರೂ ಶನಿವಾರ ಮತ್ತು ಭಾನುವಾರ ಬಂದರೆ ಹಿಂಸೆ ಶುರುವಾಗುತ್ತಿತ್ತು. ವೇಳೆ ಕಳೆಯುವುದು ಬಹಳ ಕಷ್ಟದ ಕೆಲಸವಾಗಿತ್ತು. ಹೀಗೆ ' ಲಾ ರಾಂಬ್ಲಾ' ದಲ್ಲಿ ಅಡ್ಡಾಡುವಾಗ ಸಿಕ್ಕವನು ಹೈದರಬಾದಿನ ನಿವಾಸಿ ಶ್ರೀಧರ್ ಎನ್ನುವ ಹುಡುಗ . ಸ್ಟೂಡೆಂಟ್ ಆಗಿ ಬಂದವನು ವೀಸಾ ಮುಗಿದ ನಂತರ ವಾಪಸ್ಸು ಹೋಗದೆ ಬಾರ್ಸಿಲೋನಾ ದಲ್ಲಿ ಉಳಿದುಕೊಂಡಿದ್ದ.

Barcelona Memories Coloumn By Rangaswamy Mookanahalli Part 4

ಸಾಲದಕ್ಕೆ ಕೆಲಸ ಕೂಡ ಮಾಡುತ್ತಿದ್ದ. ಹೀಗೆ ಅಂದಿನ ದಿನದಲ್ಲಿ ಪೊಲೀಸರ ಕೈಗೆ ಸಿಗದೇ ಮೂರು ವರ್ಷಗಳ ಕಾಲ ಸ್ಪೈನಿನಲ್ಲಿ ವಾಸಿಸಿದಕ್ಕೆ ಪುರಾವೆ ಕೊಟ್ಟರೆ ಅಂತವರಿಗೆ ಮಾನವತೆ ಆಧಾರದ ಮೇಲೆ ಅಲ್ಲಿನ ರೆಸಿಡೆನ್ಸಿ ಕೊಡುತ್ತಿದ್ದರು . ಅಂದಿಗೆ ಇವನು ನನ್ನ ಬಾಳಿಗೆ ಆಶಾಕಿರಣ. ಅವನೊಂದಿಗೆ ಹಿಂದಿಯಲ್ಲಿ ಸಂಭಾಷಿಸುತ್ತ ಶನಿವಾರ ಮತ್ತು ಭಾನುವಾರ ವೇಳೆ ಕಳೆಯುತ್ತಿದ್ದೆ . ಬೆಳಿಗ್ಗೆ ಸಾಮಾನ್ಯವಾಗಿರುತ್ತಿದ್ದ ಈ ಹಡುಗ ರಾತ್ರಿಯಾದರೆ ಸಾಕು ಡಿಸ್ಕೋ , ಪಬ್ ಇತ್ಯಾದಿಗಳ ಕಡೆಗೆ ಸಾಗಿಬಿಡುತ್ತಿದ್ದ.

ಇಲ್ಲಿನ ಬದುಕು ಇಂತಹ ಅನೇಕ ಹುಡುಗರನ್ನ ಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡು ಬಿಟ್ಟಿತ್ತು. ಯಾವುದು ಸರಿ ಯಾವುದು ತಪ್ಪು ಎನ್ನುವ ಪರಿಜ್ಞಾನವನ್ನ ಇಂತಹ ಪರಿಸ್ಥಿತಿಯಲ್ಲಿ ಕಳೆದುಕೊಳ್ಳುವುದು ಸುಲಭ. ಸ್ವಲ್ಪ ದಿನದಲ್ಲಿ ಈತನಿಗೆ ಕೂಡ ರೆಸಿಡೆನ್ಸಿ ಸಿಕ್ಕಿತು . ಬಾರ್ಸಿಲೋನಾ ಗಿಂತ ಹೆಚ್ಚಿನ ಹಣವನ್ನ ದುಡಿಯಬಹದು ಎಂದು ತೆನೆರೀಫ್ ಐಲ್ಯಾಂಡ್ ಗೆ ಹೋಗುತ್ತೇನೆ ಎನ್ನುವುದು ಇವನ ಜಪವಾಗಿತ್ತು.

ತೆನೆರೀಫ್ ಸ್ಪೇನ್ ದೇಶಕ್ಕೆ ಸೇರಿದ ಒಂದು ಐಲ್ಯಾಂಡ್ . ಜಗತ್ತಿನಾದ್ಯಂತ ಇಲ್ಲಿಗೆ ಟೂರಿಸ್ಟ್ ಗಳು ಬರುತ್ತಾರೆ. ಇಲ್ಲಿ ಟ್ರಾಪಿಕಲ್ ವಾತಾವರಣವಿದೆ. ವರ್ಷಪೂರ್ತಿ ಅತ್ತ ಚಳಿಯೂ ಅಲ್ಲ ಇತ್ತ ಸೆಕೆಯೂ ಅಲ್ಲ ಎನ್ನುವಂತ ಹಿತಕರ ವಾತಾವರಣ. ವರ್ಷದಲ್ಲಿ ಕೇವಲ ಒಂದೆರೆಡು ತಿಂಗಳು ಮಾತ್ರ ಸ್ವಲ್ಪ ಚಳಿ ಜಾಸ್ತಿಯಾಗುತ್ತದೆ . ಉಳಿದಂತೆ ಇಲ್ಲಿ ಸದಾ ಪ್ರವಾಸಿಗರು ತುಂಬಿರುತ್ತಾರೆ.

ಒಂದು ದಿನ ಬಂದವನೇ ದಯಮಾಡಿ ನನಗೆ ತೆನರಿಫೆಗೆ ಟಿಕೆಟ್ ಬುಕ್ ಮಾಡಿಕೊಡು ನನಗೆ ಇಲ್ಲಿರಲು ಸಾಧ್ಯವಿಲ್ಲವೆಂದ , ಅವನ ಬೇಡಿಕೆಯಂತೆ ಟಿಕೆಟ್ ತೆಗೆದು ಅವನ ಕೈಗಿತ್ತಿದ್ದೆ. ಅಂದು ಟಿಕೆಟ್ ಗೆ ಕೂಡ ದುಡ್ಡಿರದ ಶ್ರೀಧರ ತೆನೆರೀಫ್ ಐಲ್ಯಾಂಡ್ ನಲ್ಲಿ ಸ್ನೇಹಿತನ ಮನೆಯಲ್ಲಿ ಉಳಿದುಕೊಂಡು ಹತ್ತಾರು ತಿಂಗಳು ಕಷ್ಟಪಟ್ಟು ನಂತರ ಬಾಡಿಗೆಗೆ ಹಿಡಿದು ನನ್ನ ಹಣವನ್ನ ವಾಪಸ್ಸು ಮಾಡಿ ಇಲ್ಲಿಗೆ ವಾರಾಂತ್ಯದಲ್ಲಿ ಬಂದು ಹೋಗು ಎನ್ನುತ್ತಿದ್ದ.

ಹೀಗೆ ನಾಳಿನ ಬದುಕಿನ ಬಗ್ಗೆ ಏನೂ ಭರವಸೆಯಿಲ್ಲದ ಹುಡುಗ ಇಂದು ಅಲ್ಲಿ ತನ್ನದೇ ಒಂದು ಸೊವಿನೀರ್ ಶಾಪ್ ಹೊಂದಿದ್ದಾನೆ. ಐದಾರು ಜನರಿಗೆ ಕೆಲಸ ನೀಡಿದ್ದಾನೆ. ಕುಡಿತ , ಸಿಗರೇಟು ಕಡಿಮೆ ಮಾಡು ಎನ್ನುವ ನನ್ನ ಮಾತಿಗೆ ಅವನು ಎಂದೂ ಸೊಪ್ಪು ಹಾಕಿರಲಿಲ್ಲ. ಇವತ್ತು ಅದನ್ನ ಬಿಡದೆ ವಿಧಿಯಿಲ್ಲ ಎನ್ನುವ ಮಟ್ಟಕ್ಕೆ ತಲುಪಿದ್ದಾನೆ.

ಇವನ ಜೊತೆಯಲ್ಲಿ ಇನ್ನೊಬ್ಬ ಮಲೆಯಾಳಿ ಹುಡುಗ ಕೂಡ ಪರಿಚಯವಾಗಿದ್ದ ಅವನೇ ಶಿಬು ಕುರಿಯನ್ . ಕೆಲಸವಿಲ್ಲದೆ ಅಲ್ಲಿಲ್ಲಿ ಅಲೆಯುತ್ತಿದ್ದ , ಕೈಗೆ ಸಿಕ್ಕ ಸಣ್ಣ ಪುಟ್ಟ ಕೆಲಸಗಳಿಂದ ಬರುತ್ತಿದ್ದ ಹಣದಲ್ಲಿ ಜೀವನ ಸಾಗಿಸುತ್ತಿದ್ದ. ಆದರೆ ಶೋಕಿಗೆ ಎಂದೂ ಬರವಿರಲಿಲ್ಲ . ನಮ್ಮ ಶಶಿ ತರೂರ್ ಕೂಡ ನಾಚಬೇಕು ಹಾಗೆ ಅಕ್ಸೆನ್ಟ್ ಹಾಕಿ ಇಂಗ್ಲಿಷ್ ಮಾತನಾಡುತ್ತಿದ್ದ .

ಮೊದಲೇ ಅವನಾಡುವ ಮಾತು ಸರಿಯೇ ತಪ್ಪೇ ತಿಳಿಯದ ಸ್ಪ್ಯಾನಿಶರಿಗೆ ಶಿಬು ಇಂಗ್ಲಿಷ್ ಎಲ್ಲಿಂದ ಅರ್ಥವಾದೀತು. ವಿದೇಶದಲಿದ್ದರೆ ಸಾಕು ಅವೇನೇನೂ ದೊಡ್ಡ ಬುದ್ದಿವಂತ ಎಂದುಕೊಳ್ಳುವರ ಸಂಖ್ಯೆ ಇಂದಿಗೆ ಇಳಿಮುಖವಾಗಿದೆ. ಅಂದಿಗೆ ಇನ್ನೂ ಆಗಿರಲಿಲ್ಲ . ಹೀಗಾಗಿ ಶಿಬುಗೂ ಹುಡುಗಿ ಸಿಕ್ಕಳು . ಅದೂ ಸಾಫ್ಟ್ವೇರ್ ! ಹೆಂಡತಿಯ ಹಣದಲ್ಲಿ ಶಿಬು ಸುಖವಾಗಿ ಜೀವನ ನಡೆಸಲು ಶ್ರು ಮಾಡಿದ್ದ.

ಹೇಗೂ ಇಂತವರ ಸಹಾಯದಿಂದ ಎರಡು ವರ್ಷ ಕಳೆದೆ. ಮಾತನಾಡಲು ಯಾರಾದರೂ ಬೇಕಲ್ಲ . 2011ರ ಮಧ್ಯದ ವೇಳೆಗೆ ಶ್ರೀನಿವಾಸ್ ನರಸಿಂಹ ಐಯಂಗಾರ್ ದುಬೈ ನಿಂದ ನಾನು ಕೆಲಸ ಮಾಡುವ ಸಂಸ್ಥೆಗೆ ವರ್ಗಾವಣೆಯಾಗಿ ಬಂದ . ಇವನು ಬಂದ ಮೇಲೆ ಜೀವನದಲ್ಲಿ ಬೇಜಾರು ಎನ್ನುವುದು ಕಡಿಮೆಯಾಯ್ತು, ಸ್ಪೇನ್ ಇಂಗ್ಲಿಷ್ ಅಕ್ಷರದಲ್ಲಿ ಎಸ್ ತೆಗೆದು ಬಿಟ್ಟರೆ ಉಳಿಯುವುದು ಪೈನ್ ಅಂದರೆ ನೋವು.

ನಮ್ಮದಲ್ಲದ ಜಾಗದಲ್ಲಿ , ಭಾಷೆ ಬಾರದ ಊರಿನಲ್ಲಿ ಯಾರ ಸಹಾಯವೂ ಇಲ್ಲದೆ ಬದುಕು ಕಟ್ಟಿಕೊಳ್ಳುವುದು ಸುಲಭದ ಮಾತಲ್ಲ . ಶ್ರೀನಿ ನಾನು ಎರಡು ವರ್ಷ ಫ್ಲಾಟ್ ಕೂಡ ಹಂಚಿಕೊಂಡು ಬದುಕುತ್ತಿದ್ದೆವು . ಶ್ರೀನಿ ನನಗೆ ಶಾಲೆಯಲ್ಲೂ ಒಂದು ವರ್ಷ ಜೂನಿಯರ್ ಹೀಗಾಗಿ ನಮ್ಮದು ಅಂದಿಗೆ ಕನಿಷ್ಠ ಹತ್ತು ವರ್ಷದ ಪರಿಚಯ. ಇಂದಿಗೆ ಅದು 30ವರ್ಷ ಮೀರಿದೆ. ಇರಲಿ .

ಇಲ್ಲಿ ಒಂದು ಸಣ್ಣ ಸಮಸ್ಯೆ ಶುರವಾಯ್ತು. ರಸ್ತೆಯಲ್ಲಿ ಹಲವು ಶಾಲೆಗೆ ಹೋಗುವ ಬಾಲಕರು ನಮ್ಮನ್ನ ನೋಡಿ ' ಮಾರಿಕೊನೆಸ್ ' ಎಂದು ಕಿರುಚುತ್ತಿದ್ದರು. ನನಗೆ ಸ್ಪ್ಯಾನಿಷ್ ಭಾಷೆ ಬರುತ್ತಿತ್ತು ಆದರೆ ನಿತ್ಯವೂ ಒಂದಲ್ಲ ಒಂದು ವಿಷಯವನ್ನ ಕಲಿಯುತ್ತಲೇ ಇದ್ದೆ . ನನಗೆ ಈ ಪದದ ಅರ್ಥ ಗೊತ್ತಿರಲಿಲ್ಲ . ನೇರವಾಗಿ ಹೋಗಿ ಸಹೋದ್ಯೋಗಿಯ ಬಳಿ ಈ ಪದದ ಅರ್ಥವೇನು ಎಂದು ಕೇಳಿದೆ. ಮಾರಿಕೊನ್ ಎಂದರೆ ಇಂಗ್ಲಿಷ್ ನ ' ಗೇ ' ಎಂದು ಅವನು ಹೇಳಿದ.

ಎರಡು ಸಾವಿರದ ಒಂದು , ಎರಡರ ಸಮಯದಲ್ಲೂ ಇಲ್ಲಿನ ಸಮಾಜ ಇಬ್ಬರು ಗಂಡಸರು ಜೊತೆಯಾಗಿ ಹೋದರೆ ಮಾರಿಕೊನ್ , ಮಾರಿಕೊನೆಸ್ ಎನ್ನವುದು ಸಾಮಾನ್ಯವಾಗಿತ್ತು . ಇಲ್ಲಿ ಇಬ್ಬರು ಗಂಡಸರು ಎಷ್ಟೇ ಗಳಸ್ಯ ಕಂಠಸ್ಯವಾಗಿರಲಿ ಒಬ್ಬರ ಕೈ ಒಬ್ಬರು ಹಿಡಿಯುವಂತಿಲ್ಲ , ಹೆಗಲ ಮೇಲೆ ಕೈ ಹಾಕಿದರೆ ಮುಗಿದೇ ಹೋಯ್ತು . ನಾವಿಬ್ಬರೂ ಒಟ್ಟೊಟ್ಟಿಗೆ ಓಡಾಡುವುದು , ಆತ್ಮೀಯತೆಯಿಂದ ಇರುವುದು ಕಂಡು ನಮ್ಮ ಕಟ್ಟಡದಲ್ಲಿ ವಾಸಿಸುವ ಕಮ್ಯುನಿಟಿಯವರು ಮತ್ತು ಅಕ್ಕಪಕ್ಕದವರು ನಮ್ಮನ್ನ ಸಲಿಂಗಿಗಳು ಎಂದು ತೀರ್ಮಾನಿಸಿ ಬಿಟ್ಟಿದ್ದರು .

ಅಯ್ಯೋ ಸ್ವಾಮಿ ನಾವು ಹಾಗಲ್ಲ , ನಾವು ಬಾಲ್ಯ ಸ್ನೇಹಿತರು , ನಮ್ಮ ದೇಶದಲ್ಲಿ ಸ್ನೇಹಿತರು ಹೀಗೆ ಇರುವುದು ತೀರಾ ಸಾಮಾನ್ಯ ಎಂದು ಬಿಲ್ಡಿಂಗ್ ಕಮ್ಯುನಿಟಿಯವರಿಗೆ ಹೇಳಬೇಕಾಯ್ತು . ಆಮೇಲೆ ಅವರೂ ಕೂಡ ಒಂದಷ್ಟು ರಿಸರ್ಚ್ ಮಾಡಿದ್ದಾರೆ. ನಮ್ಮಿಂದ ತಪ್ಪಾಯ್ತು ಕ್ಷಮಿಸಿ ಎಂದರು. ಅಷ್ಟೊತ್ತಿಗೆ ನಮ್ಮ ಇಮೇಜ್ (!??) ಡ್ಯಾಮೇಜ್ ಆಗಿತ್ತು .

ಆಮೇಲೆ ಶ್ರೀನಿ ನಾನು ಒಟ್ಟಿಗೆ ಹೋಗುತ್ತಿರಲಿಲ್ಲ . ಇಬ್ಬರಲ್ಲಿ ಒಬ್ಬರು ಮೊದಲು ಮನೆ ಬಿಡುವ ಅಭ್ಯಾಸ ಮಾಡಿಕೊಂಡೆವು . ಬದುಕು ಎಷ್ಟು ವಿಚಿತ್ರ ನೋಡಿ ಇವತ್ತಿಗೆ ಸ್ಪೇನ್ ನಲ್ಲಿ ಯಾವುದೇ ಕಟ್ಟುಪಾಡಿಲ್ಲ , ಅಮೆರಿಕಾದ ಹಲವು ರಾಜ್ಯಗಳಲ್ಲಿ ಗೇ ಮ್ಯಾರೇಜ್ ಇಂದಿಗೂ ಲೀಗಲ್ ಅಲ್ಲ ಅಂತಹವರು ರಾಜಾರೋಷವಾಗಿ ಸ್ಪೇನ್ ಗೆ ಬಂದು ಮದುವೆಯಾಗುತ್ತಾರೆ .

ಸಮಯದ ಆಟದ ಮುಂದೆ ಯಾವುದೂ ನಿಲ್ಲುವುದಿಲ್ಲ. ಕೇವಲ ಹತ್ತಾರು ವರ್ಷದ ಹಿಂದೆ ಮಾರಿಕೊನ್ ಎಂದು ಆಡಿಕೊಂಡು ನಗುತ್ತಿದ್ದ ಸಮಾಜ ಬದಲಾಗಿದೆಯೇ ? ಸಲಿಂಗ ವಿವಾಹ ಕಾನೂನು ಮಾನ್ಯತೆಯೇನೂ ಪಡೆದಿದೆ ಆದರೆ ಇಂದಿಗೂ ಅಲ್ಲಿನ ಜನ ಸಾಮಾನ್ಯನ ದೃಷ್ಟಿಯಲ್ಲಿ ಇದು ಒಪ್ಪಿತವಾಗಿಲ್ಲ. ಸಮಾಜದ ಒಂದು ವರ್ಗ ಮಾತ್ರ ಇದಕ್ಕೆ ಸೊಪ್ಪು ಹಾಕುವುದಿಲ್ಲ . ಅಂದಹಾಗೆ ಇಲ್ಲಿ ಈಗ ನಾನು 'ಗೇ ' ಎಂದು ಹೇಳಿಕೊಳ್ಳುವುದು ಹೊಸ ಫ್ಯಾಷನ್ .

ಬದುಕು ನಮ್ಮ ಅನುಭವಗಳ ಒಟ್ಟು ಮೊತ್ತ . ಅಂದಿಗೆ ಬೇಸರವಾದರೂ ಅದು ಒಂದು ಅನುಭವ. ನೆನಪಿಸಿಕೊಂಡು ನಗುವ ಅನುಭವ. ಇಂದಿಗೆ ಶ್ರೀನಿ ಸಿಕ್ಕಾಗೆಲ್ಲಾ ಈ ಘಟನೆ ನೆನಸಿಕೊಂಡು ಹೊಟ್ಟೆ ಹುಣ್ಣಾಗುವಂತೆ ನಗುತ್ತೇವೆ.

English summary
Barcelona Memories Coloumn By Rangaswamy Mookanahalli Part 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X