ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬದುಕೆಂದರೆ ಇಷ್ಟೇ.. ಎಲ್ಲವನ್ನ ಮೀರಿ ನಮ್ಮನ್ನ ಬೆಸೆಯುತ್ತದೆ ಯಾವುದೋ ಒಂದು ಶಕ್ತಿ

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಬಾರ್ಸಿಲೋನಾ ಸೇರಿ ಆರೇಳು ತಿಂಗಳು ಕಳೆದಿತ್ತು. ವ್ಯವಹಾರಿಕ ಸ್ಪ್ಯಾನಿಷ್ ಮಾತುಕತೆ ಜೊತೆಯಾಗಿತ್ತು. ಆಗ ನಮ್ಮ ಸಂಸ್ಥೆಗೆ ಹೊಸದಾಗಿ ಏರಿಯಾ ಸೇಲ್ಸ್ ಮ್ಯಾನ್ ಆಗಿ ಸೇರಿಕೊಂಡವರು ಸಾಲ್ವಾದೂರ್. ನಿತ್ಯ ಭಾಷೆಯಲ್ಲಿ ಸಾಲ್ವ. ಈತ ಸ್ಪೈನಿನ ಹೆಸರುವಾಸಿ ರಾಜ್ಯ ಅಂದಲೂಸಿಯಾ ಮೂಲದವರು. ಇಲ್ಲಿ ಇವುಗಳನ್ನ ರಾಜ್ಯ ಎನ್ನುವುದಿಲ್ಲ ಬದಲಿಗೆ ಪ್ರಾವಿನ್ಸಿಯ ಎಂದು ಕರೆಯುತ್ತಾರೆ. ಒಟ್ಟು ಐವತ್ತು ಪ್ರಾವಿನ್ಸಿಯಗಳಿವೆ. ಸೇವುಟ , ಮೆಲಿಯಾ ಮತ್ತು ಸೊಬೆರಾನಿಯ ಗಳನ್ನ ಪ್ರಾವಿನ್ಸಿಯ ಎಂದು ಪರಿಗಣಿಸಿಲ್ಲ.

ಕತಲೂನಿಯ ನಮ್ಮ ಮಹಾರಾಷ್ಟ್ರವಿದಂತೆ , ಬಾರ್ಸಿಲೋನಾ ಮುಂಬೈ ! ಹೀಗೆ ಹೇಳಲು ಕಾರಣ ಮ್ಯಾಡ್ರಿಡ್ ಸ್ಪೈನಿನ ರಾಜಧಾನಿಯಾದರೂ ಬಾರ್ಸಿಲೋನಾ ಮಾಡ್ರಿಡ್ ಗಿಂತ ಹೆಚ್ಚು ಪ್ರಸಿದ್ಧ ಮತ್ತು ವೈಬ್ರೆನ್ಟ್ . ಇದನ್ನ ಸ್ಪೈನಿನ ಕಮರ್ಷಿಯಲ್ ಕ್ಯಾಪಿಟಲ್ ಅಥವಾ ಫೈನಾನ್ಸಿಯಲ್ ಕ್ಯಾಪಿಟಲ್ ಅಂತಲೂ ಕರೆಯಬಹುದು. ಸಾಲ್ವ ಅಂದಲೂಸಿಯಾ ಪ್ರಾವಿನ್ಸಿಯ ಮೂಲದವರು.

ಭಾಷೆ ಬಾರದ ದೇಶದಲ್ಲಿ ಶುರುವಾಯ್ತು ಬದುಕು !ಭಾಷೆ ಬಾರದ ದೇಶದಲ್ಲಿ ಶುರುವಾಯ್ತು ಬದುಕು !

ಇಲ್ಲಿ ಲ್ಯಾಟಿನ್ ಸಂಸ್ಕೃತಿ ಅತಿ ಹೆಚ್ಚು . ಲ್ಯಾಟಿನ್ ಸಂಸ್ಕೃತಿಯ ಪ್ರಮುಖ ಲಕ್ಷಣಗಳು ಕೊಮೆರ್ (ತಿನ್ನುವುದು ) ಬೆಬೆರ್ (ಕುಡಿಯುವುದು ) ಮತ್ತು ಬೈಲಾರ್ (ಕುಣಿಯುವುದು ಅಥವಾ ಡಾನ್ಸ್ ) . ಜೀವನವನ್ನ ಪೂರ್ಣ ಪ್ರಮಾಣದಲ್ಲಿ ಆಸ್ವಾದಿಸಬೇಕು . ಈ ದೇಹದ ಮೂಲಕ ಅದೆಷ್ಟು ಸುಖ ಪಡೆಯಲು ಸಾಧ್ಯವೋ ಅಷ್ಟನ್ನ ಪಡೆದುಬಿಡಬೇಕು ಎನ್ನುವ ಸಿದ್ದಾಂತ ಇವರದು.

Barcelona Memories Coloumn By Rangaswamy Mookanahalli Part 3

ಹೀಗೆ ಜೀವನದ ರಸಾಸ್ವಾದನೆಯಲ್ಲಿ ತೊಡಗುವ ಇಲ್ಲಿನ ಜನರು ತುಂಬಾ ಕರುಣೆಯುಳ್ಳವರು. ಸಿಂಪಥಿಗಿಂತ ಎಂಪತಿಯಲ್ಲಿ ನಂಬಿಕೆಯಿಟ್ಟವರು. ಬೇರೆಯವರ ಕಷ್ಟಕ್ಕೆ ಬಹಳ ಮರುಗುವವರು. ನಿಜವಾದ ಸೊಷಿಯಲಿಸಂ ಏನೆಂದು ತಿಳಿಯಬೇಕಾದರೆ ಇಲ್ಲಿ ಬಂದು ನೋಡಬೇಕು . ಇಂತಹ ಭಾವನೆಗಳನ್ನ ಇಟ್ಟು ಕೊಂಡ ಮೇಲೆ ಆ ರಾಜ್ಯದಲ್ಲಿ ಹೆಚ್ಚಿನ ಕಾರ್ಖಾನೆಗಳು , ಅಭಿವೃದ್ಧಿ ಅಷ್ಟಕಷ್ಟೇ ಎಂದು ಬಿಡಿಸಿ ಹೇಳಬೇಕಾದ ಅವಶ್ಯಕತೆ ಇಲ್ಲವೆಂದು ಕೊಳ್ಳುವೆ . ಸಾಲ್ವ ಹುಡುಗನಾಗಿದ್ದಾಗ ಸ್ಪೇನ್ ಇವತ್ತಿನಂತೆ ಮುಂದುವರೆದ ದೇಶವಾಗಿರಲಿಲ್ಲ.

ತುಂಡು ಬ್ರೆಡ್ಡು ತಿಂದು ಹೊಟ್ಟೆ ತುಂಬಾ ನೀರು ಕುಡಿದು ಮಲಗುತ್ತಿದ್ದೆವು , 13ನೇ ವಯಸ್ಸಿಗೆ ದುಡಿಯಲು ಶುರು ಮಾಡಿದ್ದೆ ಎಂದು ಹಳೆಯ ನೆನಪಿನ ಬುತ್ತಿಯನ್ನ ಸಾಲ್ವ ನನ್ನೆದುರು ಹರಡಿ ಕುಳಿತ ದಿನಗಳಿಗೆ ಲೆಕ್ಕವಿಲ್ಲ. ಹೀಗೆ ಅಂದ ಲೂಸಿಯಾ ರಾಜ್ಯದಿಂದ ಕತಲೂನ್ಯ ರಾಜ್ಯಕ್ಕೆ ಟ್ರೈನ್ ನಲ್ಲಿ ಬಂದಾಗ ಇವರನ್ನ ಇಳಿಯಲು ಬಿಡದೆ ಇಲ್ಲಿನ ಲೋಕಲ್ ಪೊಲೀಸ್ ಲಾಠಿಯಲ್ಲಿ ಹೊಡೆದು ವಾಪಸ್ಸು ಕಳಿಸಿದ್ದರಂತೆ , ಹೀಗೆ ಒಂದೇ ದೇಶದಲ್ಲಿದ್ದು ಕೂಡ ನಾವು ವಲಸೆಯ ಹಿಂದಿನ ನೋವನ್ನ ಬಲ್ಲೆವು ಎನ್ನುವುದು ಸಾಲ್ವನ ಮಾತು. ಇದೆ ಕಾರಣಕ್ಕೆ ಸಾಲ್ವ ನನ್ನೊಂದಿಗೆ ಬಹಳ ಕನೆಕ್ಟ್ ಆಗಿರಬಹದು.

ಪರಿಚಯವಾದ ಒಂದೆರೆಡು ತಿಂಗಳಲ್ಲೇ ಸಾಲ್ವ ಹೆಚ್ಚು ಆಪ್ತವಾಗಿಬಿಟ್ಟರು. ಹೀಗೆ ಬಹು ವಚನ ಬಳಸಲು ಕಾರಣ ಆತ ನನಗಿಂತ ಕನಿಷ್ಠ 20 ವರ್ಷ ವಯೋಮಾನದಲ್ಲಿ ಹಿರಿಯ. ಅಚ್ಚರಿ ಎಂದರೆ ಸ್ಪೇನ್ ನಲ್ಲಿ ಈ ರೀತಿ ಬಹು ವಚನದಲ್ಲಿ ಮಾತನಾಡಿಸುವುದು ಜನರಿಗೆ ಇಷ್ಟವಾಗುವುದಿಲ್ಲ. ಸಾಮಾನ್ಯ ಜೀವನದಲ್ಲಿ ಎಲ್ಲರನ್ನೂ ಏಕ ವಚನದಲ್ಲಿ ಮಾತನಾಡಿಸುವುದು ಸಂಪ್ರದಾಯವಾಗಿ ಹೋಗಿದೆ. ಉನ್ನತ ಹುದ್ದೆಯಲ್ಲಿರುವವರನ್ನ , ಹೆಚ್ಚು ವಯಸ್ಸಾದವರನ್ನ ಮಾತ್ರ ಬಹು ವಚನದಲ್ಲಿ ಮಾತನಾಡಿಸಬೇಕು.

ಸಾಲ್ವ ವಾರಾಂತ್ಯದಲ್ಲಿ ಅನೇಕ ಬಾರಿ ಆತನ ಮನೆಗೆ ಕರೆದುಕೊಂಡು ಹೋಗಿ ಒಳ್ಳೆಯ ಊಟವನ್ನ ತಯಾರಿಸಿ ಬಡಿಸುತ್ತಿದ್ದರು, ಎಸ್ಪಿನಾಕಸ್ ಕೋನ್ ಗಾರ್ಬಾನ್ಝೋ ( ಸ್ಪಿನಾಚ್ ಮತ್ತು ಕಾಬುಲ್ ಕಡಲೆ ) ತಯಾರಿಸುವುದು ನಾನು ಕಲಿತದ್ದು ಈತನಿಂದ. ವರ್ಜಿನ್ ಎಕ್ಸ್ಟ್ರಾ ಆಲಿವ್ ಆಯಿಲ್ ಬಳಸಿ ಈ ಖಾದ್ಯವನ್ನ ತಯಾರಿಸಿ ಚಪಾತಿ ಜೊತೆಗೆ ತಿಂದರೆ ಸ್ವರ್ಗಕ್ಕೆ ಮೂರುಗೇಣು ಅಲ್ಲ ಸ್ವರ್ಗವೇ ಸಿಕ್ಕಂತೆ ! ಬಿಸಿ ಬಿಸಿ ಬಾಸ್ಮತಿ ಅನ್ನದ ಜೊತೆಗೆ ಬೆರೆಸಿ ತಿಂದರೆ ಸ್ವರ್ಗದಿಂದ ಮೇಲಕ್ಕೆ ಮೂರುಗೇಣು !!

ಹೀಗೆ ಒಂದು ದಿನ ಊಟ ಮಾಡಿ ಆರಾಮಾಗಿ ಕುಳಿತಿದ್ದೆವು . ಊಟದ ನಂತರ ಒಂದು ಕೊರ್ತದೋ ( ಸಣ್ಣ ಕಾಫಿ , ಹಾಲಿಲ್ಲದ ಸಕ್ಕರೆ ಕಡಿಮೆ ಇರುವ ಕಾಫಿ ) ಹೀರುವುದು ಕೂಡ ಇಲ್ಲಿನ ಸಂಪ್ರದಾಯ. ಭರ್ಜರಿ ಊಟದ ನಂತರ ಸಾಲ್ವ ಕೊರ್ತದೋ ಕೈಗಿಡುತ್ತಾ ' ರಂಗ , ಕೀಯರೋ ಪ್ರಗುಂತಾತ್ರೆ ಊನ ಕೊಸ , ಸಿ ಪುದೆ ? ( ರಂಗ , ನಿನ್ನ ಒಂದು ವಿಷಯವನ್ನ ಕೇಳಬೇಕು ಅಂತತಿದ್ದೀನಿ , ಕೇಳಬಹುದೇ ? - ಎನ್ನುವ ಅರ್ಥ ) ಎಂದರು . ನಾನು ಅದೆಲಾಂತೆ , ಪ್ರಗುನ್ತಮೇ ( ಗೋ ಅಹೆಡ್ , ಆಸ್ಕ್ ಮೀ ಎಂದರ್ಥ ) ಎಂದೇ. ನಿಜ ಹೇಳು ಈಗ ನಿನ್ನ ಮನೆಯಲ್ಲಿ , ಅಂದರೆ ಭಾರತ ನಿನ್ನ ಮನೆಯಲ್ಲಿ ಎಲ್ಲರೂ ಹೊಟ್ಟೆ ತುಂಬಾ ಊಟ ಮಾಡುತ್ತಾ ಇದ್ದಾರಾ ? ಎನ್ನುವ ಪ್ರಶ್ನೆಯನ್ನ ಕೇಳಿದನಾತ .

ನನಗೆ ಅಚ್ಚರಿಯಾಯ್ತು ' ಏಕೆ ಈ ಪ್ರಶ್ನೆಯನ್ನ ಕೇಳುತ್ತಿದ್ದೀಯ ?' ಎಂದು ಮರು ಪ್ರಶ್ನಿಸಿದೆ. ಭಾರತದ ಬಗ್ಗೆ ಅಂದಿಗೆ 2001ರ ಸಮಯದಲ್ಲಿ ಇಲ್ಲಿ ಸಿಗುತ್ತಿದ್ದ ವರದಿಗಳನ್ನ ನೋಡಿದರೆ ಎಂತವರಿಗಾದರು ಇಂತಹ ಪ್ರಶ್ನೆ ಕೇಳಬೇಕು ಅನ್ನಿಸುವುದು ಸಹಜವಾಗಿತ್ತು. ಸಾಲ್ವ ನನಗೆ ಸಹಾಯ ಮಾಡಲು ಬಯಸಿ ಈ ಪ್ರಶ್ನೆಯನ್ನ ಕೇಳಿದ್ದರು. ನನಗೇನೂ ಆಗಿಲ್ಲ , ನಾವು ಉಂಡುಟ್ಟು ಸಂತೋಷವಾಗಿದ್ದೇವೆ ಎನ್ನುವ ತನಕ ಆತ ಬಿಡಲಿಲ್ಲ. ಆತನ ಪ್ರೀತಿ ದೊಡ್ಡದು. ಇಂದಿಗೂ ಆತ ನನ್ನ ಪರಿವಾರದ ಸದಸ್ಯ. ಎಲ್ಲೋ ಹುಟ್ಟಿ ಎಲ್ಲೋ ಬೆಳದ , ವಿಬಿನ್ನ ಸಾಂಸ್ಕೃತಿಕ ನೆಲಗೆಟ್ಟಿನಲ್ಲಿ ಬೆಳೆದ ನಮ್ಮನ್ನ ಅದ್ಯಾವ ಶಕ್ತಿ ಬೆಸೆಯಿತು ? ಅದೇಕೆ ಬೆಸೆಯಿತು ಎನ್ನುವುದು ಉತ್ತರಿಸಲಾಗದೆ ಉಳಿದುಕೊಳ್ಳುವ ಪ್ರಶ್ನೆಗಳಲ್ಲಿ ಒಂದು.

ಮೊದಲೇ ಹೇಳಿದಂತೆ ಇಲ್ಲಿಯದು ಲ್ಯಾಟಿನ್ ಸಂಸ್ಕಾರ. ಸಾಲ್ವನಿಗೆ ಐವತ್ತು ವರ್ಷ ತುಂಬಿದಾಗ ಆಫೀಸ್ ಸಹೋದ್ಯೋಗಿಗಳೆಲ್ಲ ಸೇರಿ ಅವನಿಗೆ ಒಂದು ಪಾರ್ಟಿ ಇಟ್ಟಿದ್ದರು. ಸಾಯಂಕಾಲ ಆರರಿಂದ ಏಳೂವರೆಗೆ ವರೆಗೆ ಪಾರ್ಟಿ . ನೆನಪಿರಲಿ ಇಲ್ಲಿ ಸಾಮಾನ್ಯವಾಗಿ ಕೆಲಸದ ವೇಳೆಕಚೇರಿಗಳಿಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 1.30 ಮತ್ತು ಸಂಜೆ 4ರಿಂದ 7.30ರ ವರೆಗೆ. ಹೀಗೆ ಒಂದು ಮೈಲಿಗಲ್ಲು ಅಂದರೆ 25 , 50 , 75 ವರ್ಷಗಳನ್ನ ಪೂರೈಸಿದರೆ ವಿಶೇಷ ಪಾರ್ಟಿ ಇರುತ್ತದೆ. ಅದು ನನಗೆ ಗೊತ್ತಿರಲಿಲ್ಲ. ಅವತ್ತು ಇಬ್ಬರು ಸ್ಟ್ರಿಪ್ಪರ್ ಹುಡುಗಿಯರನ್ನ ಕರೆಸಿದ್ದರು. ಆಫೀಸ್ ಆವರಣದಲ್ಲಿ ಡಿಸ್ಕೋ ವಾತಾವರಣ ಸೃಷ್ಟಿಸಿಬಿಟ್ಟರು. ಬೀದಿ ಬದಿಯಲ್ಲಿ ಹೋಗುವನಿಂದ ಎಲ್ಲರಿಗೂ ' ಸಾರ್ , ಸಾರ್ ' ಎಂದು ಗೊಡ್ಡು ಸಲಾಮು ಹೊಡೆದು ಹೊಡೆದು ಬೆಳೆದಿದ್ದ ಜೀವಕ್ಕೆ ಇದೊಂದು ಹೊಸ ಪ್ರಪಂಚ , ಹೊಸ ನೋಟ ದಕ್ಕಿಸಿಕೊಟ್ಟಿತ್ತು.

 ಯಾರ ಜೊತೆಗಿರುತ್ತೇವೆ ಅವರೇ ಅಣ್ಣ , ತಮ್ಮ , ಬಂಧು-ಬಳಗ ! ಯಾರ ಜೊತೆಗಿರುತ್ತೇವೆ ಅವರೇ ಅಣ್ಣ , ತಮ್ಮ , ಬಂಧು-ಬಳಗ !

ಸಾಲ್ವ ಮೃದು ಹೃದಯಿ , ಉತ್ತಮ ಗೆಳೆಯ ಎಲ್ಲವೂ ಸರಿ , ಆದರೆ ದಿನಕ್ಕೆ ಒಂದು ಪ್ಯಾಕ್ ಸಿಗರೇಟು , ನಿತ್ಯವೂ ಆಲ್ಕೋಹಾಲ್ , ಬಿಯರ್ ಇಲ್ಲದೆ ಸೂರ್ಯ ಹುಟ್ಟುವುದು , ಮುಳುಗುವುದು ಎರಡೂ ಇವನ ಜೀವನದಲ್ಲಿ ಇಲ್ಲ . ಈ ಮಾತು ಬಹತೇಕ ಸ್ಪಾನಿಷರಿಗೂ ಅನ್ವಯ. ನಮ್ಮ ತಪ್ಪನ್ನ ಭಗವಂತ ಬೇಕಾದರೂ ಕ್ಷಮಿಸಿಯಾನು ಆದರೆ ನಮ್ಮ ನರಮಂಡಳ? ಅದು ಕ್ಷಮಿಸುವುದಿಲ್ಲ . ಅದು ನಮ್ಮ ತಪ್ಪಿಗೆ ಶಿಕ್ಷಿಸುತ್ತದೆ. ಸಾಲ್ವನಿಗೆ ತನ್ನ 55ರ ಹರಯದಲ್ಲಿ ಈ ಶಿಕ್ಷೆ ಸಿಕ್ಕಿತು. ಆತನಿಗೆ ಸ್ಟ್ರೋಕ್ ಆಯ್ತು. ನಾಲ್ಕೈದು ದಿನದಲ್ಲಿ ಜ್ಞಾನ ಬಂತು , ಆದರೆ ಆತನಿಗೆ ಯಾರೂ ನೆನಪಿಲ್ಲ .

ತನ್ನ ಹೆಂಡತಿ , ಮಗ , ಮಗಳು ಉಹೂ ಯಾರನ್ನೂ ಆತ ಗುರುತಿಸಲು ವಿಫಲನಾದ. ವೈದ್ಯರು ಆತನಿಗೆ ಅದೆಷ್ಟು ಜನರ ಪರಿಚವಿದೆ , ಒಡನಾಟವಿದೆ ಅವರೇನಲ್ಲ ಕರೆಯಿರಿ , ಹೆಚ್ಚು ಹೆಚ್ಚು ಮುಖ ನೋಡುತ್ತಾ ಖಂಡಿತ ಯಾವುದಾದರೊಂದು ಮುಖ ನೋಡಿ ಆತನಿಗೆ ನೆನಪು ಮರಳಿ ಬರುವ ಸಾಧ್ಯತೆಯಿದೆ ಎಂದರಂತೆ , ಹೀಗಾಗಿ ಸಾಲ್ವನ ಮಗ ಜೂನಿಯರ್ ಸಲ್ವಾ ( ಇವನು ನನಗಿಂತ 15ವರ್ಷ ಚಿಕ್ಕವನು - ಇಂದಿಗೂ ನನ್ನ ಉತ್ತಮ ಗೆಳೆಯ ) ಫೋನ್ ಮಾಡಿ ರಂಗ ಡಾಕ್ಟರ್ ಹೀಗೆ ಹೇಳಿದ್ದಾರೆ ನೀನು ಬರಲು ಸಾಧ್ಯವೇ ಎಂದ.

ಈ ಮುಂಚೆ ಸಾಲ್ವನನ್ನ ನೋಡಲು ಹೋದಾಗ ಅವೈನ್ಗೆ ಇನ್ನು ಪ್ರಜ್ಞೆ ಬಂದಿರಲಿಲ್ಲ. ದೂರದಿಂದ ಮಲಗಿದ್ದ ದೇಹವನ್ನ ನೋಡಿ ಬಂದಿದ್ದೆನಷ್ಟೆ , ಖಂಡಿತ ಬರುತ್ತೇನೆ ಎಂದೇ. ಮರು ದಿನ ಹೇಳಿದ ಸಮಯಕ್ಕೆ ಹೋಗಿದ್ದೆ, ಸಾಲ್ವನ ಮಗ ಜೂನಿಯರ್ , ಸಾಲ್ವನ ಹೆಂಡತಿ ನನ್ನೊಂದಿಗೆ ವಾರ್ಡ್ ಗೆ ಬಂದರು . ಅಲ್ಲಿದ್ದ ನರ್ಸ್ ' ಒಯ್ಯೇ ಸಾಲ್ವ . ಸಾವೆಸ್ ಕಿಯೆನ್ ಏಸ್ ಎಸ್ತೇ ಹೊಂಬ್ರೇ ? ( ಹೇ , ಸಾಲ್ವ ಈತನಾರು ನಿನಗೆ ಗೊತ್ತೇ ? ಎನ್ನುವ ಅರ್ಥ ) ನನ್ನ ಮುಖವನ್ನ ದಿಟ್ಟಿಸಿ ನೋಡಿದ ಸಾಲ್ವನ ಮುಖದಲ್ಲಿ ಒಂದು ಸಣ್ಣ ನಗು ಕಾಣಿಸಿತು ., ಜೊತೆಗೆ ಸಿ .. ಸಿ .. ಏಸ್ ಮೀ ಅಮಿಗೋ ರಂಗ ದೆ ಲ ಇಂದಿಯ ( ಯಸ್ ಯಸ್ ಇವನು ನನ್ನ ಸ್ನೇಹಿತ ರಂಗ , ಇಂಡಿಯಾದವನು ) ಎಂದರು.

ಭಗವಂತನ ಕೃಪೆ ದೊಡ್ಡದು. ಆತನಿಗೆ ನಿಧಾನವಾಗಿ ಆ ನಂತರ ನೆನಪುಗಳು ಬರತೊಡಗಿದವು. ಸಾಲ್ವನ ಹೆಂಡತಿ ಮಕ್ಕಳು ನನ್ನಿಂದ ಅವನಿಗೆ ನೆನಪುಗಳು ಮರಳಿದವು ಎಂದು ನನಗೆ ಇನ್ನಿಲ್ಲದ ಗೌರವ ಕೊಟ್ಟರು. ಸಾಲ್ವನಿಗೆ ಇಂದಿಗೆ 65 , ಚನ್ನಗಿದ್ದಾರೆ , ನಾನು ಫೋನ್ ಮಾಡದಿದ್ದರೆ ವಾರಕ್ಕೂ , ಹದಿನೈದು ದಿನಕ್ಕೂ ಇಂದಿಗೂ ಫೋನ್ ಮಾಡುವುದು ಮಾತ್ರ ಬಿಟ್ಟಿಲ್ಲ. ಬದುಕೆಂದರೆ ಇಷ್ಟೇ ಎಲ್ಲವನ್ನ ಮೀರಿ ನಮ್ಮನ್ನ ಬೆಸೆಯುತ್ತದೆ ಯಾವುದೋ ಒಂದು -ಆ ಶಕ್ತಿಗೆ ನಮಸ್ಕಾರ.

English summary
Barcelona Memories Coloumn By Rangaswamy Mookanahalli Part 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X