ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಳಿಸಿಕೊಳ್ಳಿ.. ಗೋಡೆಗೂ ಕಿವಿ ಭಾರತದಲ್ಲಿ ಮಾತ್ರವಲ್ಲ ಸ್ಪೇನ್ ನಲ್ಲೂ ಇದೆ!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ದೂರದಲ್ಲಿರುವ ಬೆಟ್ಟ ಸಮತಟ್ಟವಾಗಿ ಕಾಣುತ್ತದೆ . ದೂರದಿಂದ ಅದನ್ನ ಹತ್ತುವುದು ಕೂಡ ಬಹಳ ಸುಲಭ ಎನ್ನುವ ಭಾವನೆಯನ್ನ ನೀಡುತ್ತದೆ . ನಿಜದ ಅರಿವು ಆಗ ಬೇಕೆಂದರೆ ಅದರ ಹತ್ತಿರ ಹೋಗಬೇಕು . ಹತ್ತಿರದಿಂದ ಬೆಟ್ಟದ ಮೇಲಿರುವ ಕಲ್ಲುಮುಳ್ಳುಗಳು ದುರ್ಗಮ ರಸ್ತೆ ಕಾಣ ಸಿಗುತ್ತದೆ . ದೂರದಿಂದ ಅಂದುಕೊಂಡಷ್ಟು ಸುಲಭವಾಗಿ ಅದನ್ನ ಹತ್ತಲು ಸಾಧ್ಯವಿಲ್ಲ ಎನ್ನುವ ಅರಿವಾಗುತ್ತದೆ ಕೂಡ . ಅಂದರೆ ದೂರದಿಂದ ಬಹಳ ಸುಂದರವಾಗಿ ಮತ್ತು ಸುಲಭವಾಗಿ ಕಂಡ ಬೆಟ್ಟ ಹತ್ತುವುದು ಕಂಡಷ್ಟು ಸುಲಭವಲ್ಲ ಎನ್ನುವುದು ಹತ್ತಿರ ಹೋಗಿ ಪ್ರಯತ್ನಿಸಿದ ಮೇಲಷ್ಟೇ ಗೊತ್ತಾಗುತ್ತದೆ .

ಜಗತ್ತಿನೆಲ್ಲೆಡೆ ಮನುಷ್ಯನ ಸ್ವಭಾವ ಒಂದೇ, ಇಲ್ಲಿ ಸರಿ ಇಲ್ಲ , ಇಲ್ಲಿನ ವ್ಯವಸ್ಥೆ ಸರಿಯಾಗಿ ಪಾಲಿಸುತ್ತಿಲ್ಲ ಎಂದು ಹೋಗುವುದಾದರೂ ಎಲ್ಲಿಗೆ ? ಇಲ್ಲಿಂದ ತುಂಬಾ ಚನ್ನಾಗಿ ಕಾಣುವ ಇತರ ಪ್ರದೇಶದ ವ್ಯವಸ್ಥೆಯ ನಿಜ ಬಣ್ಣ ಅಲ್ಲಿಗೆ ಹೋದ ಮೇಲಷ್ಟೇ ಗೊತ್ತಾಗುವುದು ಅಲ್ಲವೇ ?

ನಾವೆಲ್ಲಾ ಹೆಸರಿಗಷ್ಟೇ ಬೇರೆ ಬೇರೆ ! ನಮ್ಮ ಭಾವನೆಯ ಮೂಲ ಮಾತ್ರ ಒಂದೇ !! ನಾವೆಲ್ಲಾ ಹೆಸರಿಗಷ್ಟೇ ಬೇರೆ ಬೇರೆ ! ನಮ್ಮ ಭಾವನೆಯ ಮೂಲ ಮಾತ್ರ ಒಂದೇ !!

ನಮ್ಮ ಬಳಿ ಏನಿರುತ್ತದೆ ಅದು ಯಾವಾಗಲೂ ಬೆಲೆ ಕಡಿಮೆ . ನಮ್ಮ ಕೈಗೆ ಯಾವುದು ಎಟುಕುವುದಿಲ್ಲ ಅದು ಯಾವಾಗಲೂ ಹೆಚ್ಚು ಬೆಲೆ ಅನ್ನಿಸುತ್ತದೆ . ಅದು ಸಿಕ್ಕ ಮೇಲೆ ಬೇರೆಯದೇ ಕಥೆ . ಇರಲಿ . ಮನುಷ್ಯನ ಮೂಲಭೂತ ಗುಣವೇ ಹಾಗೆ ಎದುರು ಮನೆಯ ಬಲ್ಬ್ ಹೆಚ್ಚು ಹೊಳೆಯುತ್ತದೆ . ಎದುರು ,ಮನೆಯವನ ಕಾರು , ಮನೆ , ಎಲ್ಲವೂ ಚನ್ನಾಗಿ ಕಾಣುತ್ತದೆ . ನಮ್ಮ ವಸ್ತು ಮಾತ್ರ ಮಬ್ಬು ಮಬ್ಬು !

Barcelona Memories Coloumn By Rangaswamy Mookanahalli Part 19

ಇಷ್ಟೆಲ್ಲಾ ಹೇಳುವ ಉದ್ದೇಶ ಇಲ್ಲಿ , ಬಾರ್ಸಿಲೋನಾ ದಲ್ಲಿ ಕೂಡ ಥೇಟ್ ನಾವು ಭಾರತದಲ್ಲಿ ಮಾತನಾಡಿಕೊಳ್ಳುವಂತೆ , ಇಲ್ಲಿನ ರಾಜಕಾರಿಣಿಗಳನ್ನ , ಇಲ್ಲಿನ ವ್ಯವಸ್ಥೆಯನ್ನ ಹೀಯಾಳಿಸಿ ಮಾತನಾಡಿ ಕೊಳ್ಳುತ್ತಾರೆ . ಪಕ್ಕದ ಜರ್ಮನಿಯ ಅಥವಾ ಫ್ರಾನ್ಸ್ , ಇಂಗ್ಲೆಂಡ್ ದೇಶಗಳ ಗುಣಗಾನ ಮಾಡುತ್ತಾರೆ. ನಮ್ಮ ದೇಶದಲ್ಲಿ ಭ್ರಷ್ಟಾಚಾರ ಜಾಸ್ತಿ , ಅವಕಾಶಗಳು ಕಡಿಮೆ ಎನ್ನುವ ವರಾತನವನ್ನ ನಾನು ಕೇಳಿ ಬೇಸತ್ತು ಹೋಗಿದ್ದೇನೆ .

ಯಾವುದನ್ನ ಸ್ಥಳೀಯರು ಸರಿಯಿಲ್ಲ ಎಂದು ದೂರುತ್ತಾರೆ , ಅಲ್ಲಿನ ವ್ಯವಸ್ಥೆಯಲ್ಲಿ ವಲಸಿಗರು ಹೇಗೆ ಯಶಸ್ಸು ಪಡೆಯುತ್ತಾರೆ ? ಎನ್ನುವ ನನ್ನ ಪ್ರಶ್ನೆಗೆ ನನ್ನ ಸ್ಥಳೀಯ ಸ್ನೇಹಿತರ ಬಳಿ ಉತ್ತರವಿರಲಿಲ್ಲ . ಈ ಮಾತು ಇಲ್ಲಿಗೂ ನಿಜ . ಕನ್ನಡಿಗರಿಗೆ ಕೆಲಸವಿಲ್ಲ ಎಂದು ನಾವು ದೂರುತ್ತೇವೆ. ಆದರೆ ಯೋಚಿಸಿ ನೋಡಿ ಕೆಲಸವಿಲ್ಲದ ಮೇಲೆ ಅದೇಕೆ , ಉತ್ತರ ಪ್ರದೇಶ , ಬಿಹಾರ ಮತ್ತಿತರ ರಾಜ್ಯದಿಂದ ಜನ ಬೆಂಗಳೂರಿಗೆ ಬರುತ್ತಿದ್ದಾರೆ. ಇದು ನಮ್ಮಲಿರುವ ಕೊರತೆ. ಅದನ್ನ ಮುಚ್ಚಿಡಲು ನಾವು ವ್ಯವಸ್ಥೆಯನ್ನ ದೂಷಿಸಲು ಪ್ರಾರಂಭಿಸುತ್ತೇವೆ. ಇರಲಿ

ಜಗತ್ತಿನ ಒಂದು ಭಾಗ ಚೆನ್ನಾಗಿ ಬಾಳಬೇಕೆಂದರೆ ಉಳಿದರ್ಧವೇಕೆ ಸಾಯಬೇಕು? ಕ್ರೂಜ್ ಶಿಪ್ಪಿನ ಕಥೆ! ಜಗತ್ತಿನ ಒಂದು ಭಾಗ ಚೆನ್ನಾಗಿ ಬಾಳಬೇಕೆಂದರೆ ಉಳಿದರ್ಧವೇಕೆ ಸಾಯಬೇಕು? ಕ್ರೂಜ್ ಶಿಪ್ಪಿನ ಕಥೆ!

ಇಲ್ಲಿನ ಜನರಿಗೆ ಗಾಸಿಪ್ ಬಹಳ ಇಷ್ಟ. ಇಲ್ಲಿನ ರಾಜ ಮನೆತನ ಊಸಿದ್ದು , ಕೆಮ್ಮಿದ್ದು , ಕೊತದ್ದು , ನಿಂತದ್ದು ಎಲ್ಲವೂ ಇಲ್ಲಿ ರಾಷ್ಟೀಯ ಸುದ್ದಿಗಳು. ಅಂದಹಾಗೆ ನಿಮಗೆ ಗೊತ್ತಿರಲಿ ಸ್ಪೇನ್ ದೇಶದಲ್ಲಿ ಗಣತಂತ್ರವಿದೆ , ಆದರೂ ಇದು ಜಗತ್ತಿನಲ್ಲಿ ಇಂದಿಗೂ ಗುರುತಿಸಿಕೊಂಡಿರುವುದು ರೈನೊ ದೆ ಸ್ಪಾನ್ಯ ಅಂದರೆ ಕಿಂಗ್ಡಮ್ ಆಫ್ ಸ್ಪೇನ್ ಎಂದು. ಇಲ್ಲಿ ಜನ ಸಾಮಾನ್ಯರು ಎದುರುಗಿದ್ದಾಗ ಅತ್ಯಂತ ಸುಭಗರಂತೆ ಮಾತನಾಡುತ್ತಾರೆ.

ಅವರು ಹೋದ ನಂತರ ಅವರ ಹುಳುಕನ್ನ ತನಗೆ ವಿಶ್ವಾಸವಿರುವ ವ್ಯಕ್ತಿಯ ಮುಂದೆ ಹೇಳಿಕೊಂಡು ಗಂಟೆ ಗಟ್ಟಲೆ ಮಾತನಾಡುತ್ತಾರೆ. ಇದು ಇಲ್ಲಿ ಸಾಮಾನ್ಯ. ಎಲ್ಲಾ ಮಾತನಾಡಿದ ನಂತರ 'ಕಾದ ಉನೊ ಕೊಮೊ ಏಸ್' ಎಂದರೆ ಪ್ರತಿಯೊಬ್ಬರು ಒಂದೊಂದು ತರಹ ಎಂದು ಸಾರಿಸುವ ಮಾತನಾಡಿ ಮಾತಿಗೆ ಇತಿಶ್ರೀ ಹಾಡುವುದು ಕೂಡ ಸಾಮಾನ್ಯ.

Barcelona Memories Coloumn By Rangaswamy Mookanahalli Part 19

ನಮ್ಮಲ್ಲಿ ರಹಸ್ಯ ಮಾತುಕತೆ ನೆಡೆಯುವಾಗ ಮಾತುಕತೆಯಲ್ಲಿ ತೊಡಗಿರುವ ಇಬ್ಬರಲ್ಲಿ ಒಬ್ಬರು ' ಶ್ .. ಮೆಲ್ಲಗೆ ಮಾತನಾಡು ಇಲ್ಲಿ ಗೋಡೆಗೂ ಕಿವಿಯಿದೆ ' ಎನ್ನುವ ಮಾತನ್ನ ಇಂದಿಗೂ ಆಡುವುದು ಕೇಳಿದ್ದೇವೆ . ಕೆಲವೊಮ್ಮೆ ನಮ್ಮಲ್ಲಿ ಯಾರಾದರೊಬ್ಬರು ಈ ಪದವನ್ನ ತಮ್ಮ ಜೀವನದ ಪಯಣದಲ್ಲಿ ಉಪಯೋಗಿಸಿರಲಿಕ್ಕೂ ಸಾಕು . ಇದಕ್ಕೆ ಹೆಚ್ಚು ಅರ್ಥ ವಿವರಣೆ ನೀಡುವ ಗೋಜಿಲ್ಲ . ಏಕೆಂದರೆ ಇದು ಅತ್ಯಂತ ಸರಳವಾದ ಮತ್ತು ಅತ್ಯಂತ ಜನಪ್ರಿಯ ಆಡುಮಾತು .

ಏನಾದರು ರಹಸ್ಯ ಅಥವಾ ಗುಟ್ಟಿನ ವಿಷಯವನ್ನ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ಹೇಳುವ ಸಂಧರ್ಭಕ್ಕಿಂತ ಅವರಿಬ್ಬರೂ ಇರುವ ಸ್ಥಳ ಈ ಆಡುಮಾತನ್ನ ಬಳಸಲು ಪ್ರೇರೇಪಿಸುತ್ತದೆ . ಉದಾಹರಣೆಗೆ ಇಂತಹ ಗುಟ್ಟಿನ ವಿಚಾರ ಇಬ್ಬರಲ್ಲೊಬ್ಬರ ವಿಶ್ವಾಸಕ್ಕೆ ಪಾತ್ರವಾದ ಜಾಗದಲ್ಲಿ ಆಗುತ್ತಿದ್ದರೆ ಈ ಮಾತನ್ನ ಬಳಸುವ ಪ್ರಮೇಯವೇ ಬರುತ್ತಿರಲಿಲ್ಲ . ಅಂದರೆ ರಹಸ್ಯ ಮಾತುಕತೆ ಇಬ್ಬರು ವ್ಯಕ್ತಿಗಳ ವಿಶ್ವಸಾರ್ಹ ಸ್ಥಳವಲ್ಲದಲ್ಲಿ ನೆಡೆದಾಗ ಇಬ್ಬರಲ್ಲಿ ಯಾರಾದರೊಬ್ಬರು ಸ್ವಲ ಧ್ವನಿ ಎತ್ತರಿಸಿ ಮಾತನಾಡಿದರೆ ' ಮೆಲ್ಲಗೆ ಇಲ್ಲಿ ಗೋಡೆಗೂ ಕಿವಿಯಿದೆ ' ಎನ್ನುವ ಉದ್ಗಾರ ಸಹಜವಾಗೇ ಹೊರಡುತ್ತದೆ .

ಈ ಆಡುನುಡಿ ಎಲ್ಲಿ ? ಹೇಗೆ ? ಮತ್ತು ಯಾಕೆ ? ಶುರುವಾಯಿತು ಎನ್ನುವುದಕ್ಕೆ ನನ್ನ ಬಳಿ ನಿಖರ ಉತ್ತರವಿಲ್ಲ . ಆದರೆ ಸ್ಪಾನಿಷ್ ಭಾಷೆಯಲ್ಲಿ ಸಹ ಇಂತಹ ಒಂದು ಅತ್ಯಂತ ಪ್ರಸಿದ್ಧ ಆಡುಮಾತಿದೆ . ಅವರು Hay ropa tendida (ಹಾಯ್ ರೋಪ ತೆಂದಿದ ) ಎನ್ನುತ್ತಾರೆ . ಅಂದರೆ ಇಬ್ಬರ ಮಾತು ಕೇಳಿಸಿಕೊಳ್ಳಲು ಮೂರನೇ ವ್ಯಕ್ತಿ ಕಾಣದಿದ್ದರೂ ಅವನ 'ಬಟ್ಟೆ ಇಲ್ಲಿ ಬಿದ್ದಿದೆ ' ಎನ್ನುವ ಅರ್ಥದಲ್ಲಿದೆ . ರಹಸ್ಯದ ಅಥವಾ ಇನ್ನೊಬ್ಬರಿಗೆ ತಿಳಿಸುವ ಅವಶ್ಯಕತೆ ಇಲ್ಲದ ಮಾತನಾಡುವಾಗ ಜಾಗರೂಕರಾಗಿರಬೇಕು ಎನ್ನುವುದು ಅರ್ಥ.

ನಾನು-ನೀವು -ಅವರು, ಯಾರಾದರೇನು? ಎಲ್ಲರೂ ಒಂದಲ್ಲ ಒಂದು ನಂಬಿಕೆಯಲ್ಲಿ ಬಂಧಿಗಳೇ ಅಲ್ಲವೇನು ? ನಾನು-ನೀವು -ಅವರು, ಯಾರಾದರೇನು? ಎಲ್ಲರೂ ಒಂದಲ್ಲ ಒಂದು ನಂಬಿಕೆಯಲ್ಲಿ ಬಂಧಿಗಳೇ ಅಲ್ಲವೇನು ?

ಈ ಆಡುಮಾತು ಹೇಗೆ ಬಂತು ಅನ್ನುವುದಕ್ಕೆ ಸ್ನೇಹಿತ ಫ್ರಾನ್ಸಿ ಒಂದು ಕಥೆಯನ್ನ ಹೇಳಿದ. ಒಂದು ಜೈಲಿನಲ್ಲಿದ್ದ ಕೈದಿಗಳು ಹೇಗಾದರೂ ಮಾಡಿ ಜೈಲಿನಿಂದ ಪರಾರಿ ಆಗಬೇಕೆನ್ನುವ ಒಂದು ಮಾಸ್ಟರ್ ಪ್ಲಾನ್ ಮಾಡುತ್ತಿದ್ದರಂತೆ , ಅವರ ನಡುವೆ ಪ್ಲಾನ್ ಬಗ್ಗೆ ಮಾತುಕತೆ ನೆಡೆಯುತ್ತಿದ್ದಾಗ ಒಬ್ಬ ಕೈದಿ ಸ್ವಲ್ಪ ದೂರದಲ್ಲಿ ಬಂದಿಖಾನೆಯ ಅಧಿಕಾರಿಯ ಬಟ್ಟೆ ನೆಲದ ಮೇಲೆ ಬಿದ್ದದ್ದ ನೋಡಿದಂತೆ 'ಹಾಯ್ ರೋಪ ತೆಂದಿದ' ಎಂದನಂತೆ.

ಅಂದರೆ ಅಧಿಕಾರಿಯ ಬಟ್ಟೆ ಇಲ್ಲಿದೆ, ಇದರರ್ಥ ಅಧಿಕಾರಿ ಕೂಡ ಅಕ್ಕಪಕ್ಕದಲ್ಲೇ ಇರುತ್ತಾನೆ ನಾವು ಮಾತನಾಡುವಾಗ ಜಾಗರೋಕರಾಗಿರಬೇಕು ಎನ್ನುವ ಅರ್ಥದಲ್ಲಿ ಹೇಳಿದನಂತೆ . ಅಂದಿನಿಂದ ಈ ಮಾತು ಅದೆಷ್ಟು ಜನಪ್ರಿಯವಾಗಿದೆ ಎಂದರೆ ಇಂದಿಗೂ ಕಛೇರಿಯಲ್ಲಿ ತಮ್ಮ ಬಾಸ್ ಬಗ್ಗೆ ಏನಾದರೂ ಗೇಲಿ ಮಾಡುವಾಗ ಯಾರಾದರೂ ಈ ನುಡಿಯನ್ನ ಬಳಸುತ್ತಾರೆ .

ಕೆಲಸ ಯಾವುದೇ ಇರಲಿ ನಾವು ಅದನ್ನ ಪೂರ್ಣ ಗೊಳಿಸುವಲ್ಲಿ, ಯಶಸ್ಸು ಪಡೆಯುವಲ್ಲಿ ವಿಫಲವಾದರೆ ತಕ್ಷಣ ನಾವು ಅದಕ್ಕೆ ಕಾರಣ ಹುಡುಕಿ ಯಾರನ್ನಾದರೂ ಆ ಸೋಲಿಗೆ ಕಟ್ಟಿಬಿಡುತ್ತೇವೆ . ಸೋಲಿಗೆ ಕಾರಣ ಏನೇ ಇರಲಿ ಸೋತಿದ್ದು ನನ್ನಿಂದ ಎನ್ನುವದನ್ನ ಮಾತ್ರ ಮನುಷ್ಯ ಒಪ್ಪಲಾರ. ಇದೊಂದು ಜಾಗತಿಕ ಸಮಸ್ಯೆ . ಮನುಷ್ಯ ಮೂಲದಲ್ಲಿ ಒಂದೇ ಎನ್ನವುದಕ್ಕೆ ಇನ್ನೊಂದು ತಾಜಾ ಉದಾಹರಣೆ . ಕೈಬರಹ ಚನ್ನಾಗಿಲ್ಲ ಎಂದು ಹೆತ್ತವರೊ ಅಥವಾ ಗುರುಗಳೋ ಹೇಳಿದರೆ ಮುಗಿಯಿತು ತಕ್ಷಣ ಪೆನ್ನಿನ ಮೇಲೆ ಗೂಬೆ ಕೂರಿಸುವುದು ಸಾಮಾನ್ಯ .

ಕೊನೆಗೆ ಪೆನ್ನಲ್ಲದಿದ್ದರೆ ಇಂಕು ಅಥವಾ ಹಾಳೆ ಯಾವುದಾದರೂ ಸರಿಯೇ ತಪ್ಪು ಅವುಗಳದ್ದೇ ಬರೆದ ನನ್ನದಲ್ಲ ಎನ್ನುವ ಭಾವನೆ ಚಿಕ್ಕ ವಯಸ್ಸಿನಿಂದ ಬೆಳೆಸಿಕೊಂಡು ಬಂದು ಬಿಡುತ್ತೇವೆ . ಇಲ್ಲಿನ ಬಹುತೇಕರು ಕೂಡ ಇದೆ ರೀತಿಯವರು. ನನ್ನ ಪ್ರಾರಂಭದ ದಿನದಲ್ಲಿ ಕೀಲಿಮಣೆ (ಕೀ ಬೋರ್ಡ್ ) ನಿಂದ ಎಲ್ಲವೂ ಸ್ಪ್ಯಾನಿಷ್ ಮಯ. ಇಂಗ್ಲಿಷ್ ಕೀಲಿಮಣೆಯಲ್ಲಿರುವುದನ್ನ ನೆನಪಿಸಿಕೊಂಡು ಅಂದಾಜಿನಲ್ಲಿ ಟೈಪ್ ಮಾಡುತ್ತಿದ್ದೆ.

ನನಗೆ ಅಲ್ಲಿನ ಕೆಲಸ ಬದುಕಿನ ಅವಶ್ಯಕತೆ ಇತ್ತು. ಅಡ್ಜಸ್ಟ್ ಆಗುತ್ತಿಲ್ಲ ಎಂದು ಬಿಟ್ಟು ಬರುವುದು ನನ್ನ ಮುಂದೆ ಇದ್ದ ಬಹಳ ಸುಲಭ ಆಯ್ಕೆಯಾಗಿತ್ತು. ಆದರೆ ಅಲ್ಲಿ ನೆಲೆ ನಿಂತು , ಭಾಷೆ ಕಲಿತು , ಬದುಕು ಕಟ್ಟಿಕೊಳ್ಳುವುದು ಕಠಿಣವಾಗಿತ್ತು. ಯಾವುದು ನಮಗೆ ಕಷ್ಟ ಅನ್ನಿಸುವುದಿಲ್ಲ ಅಲ್ಲಿ ನಮಗೆ ಹೆಚ್ಚಿನದೇನೂ ಬದುಕಿನಲ್ಲಿ ಗಿಟ್ಟುವುದಿಲ್ಲ. ಕಷ್ಟಪಟ್ಟು ಗಳಿಸಿದ್ದು ನೀಡುವ ಸುಖವೇ ಬೇರೆ.

ಅಂದಿಗೆ ಅಲ್ಲಿನ ಭಾಷೆಯನ್ನ ಅಥವಾ ಅಲ್ಲಿನ ಅಬ್ದುಕಿನ ರೀತಿಯನ್ನ ಯಾವುದು ಇಲ್ಲದಿದ್ದರೆ ಕೊನೆಗೆ ಅಲ್ಲಿನ ಚಳಿಯನ್ನ ಹೀಗೆ ಯಾವುದಾದರೊಂದು ನೆಪವನ್ನ ಹೇಳಿ ನಾನು ಮರಳಿ ದುಬೈ ಅಥವಾ ಭಾರತಕ್ಕೆ ಮರಳಿ ಹೋಗುವುದು ಕಷ್ಟವೇನೂ ಆಗಿರಲಿಲ್ಲ. ನನಗಿಂತ ಮುಂಚೆ ಸ್ಪೇನ್ ಗೆ ಹೋದವರು ತಿಂಗಳೊಪ್ಪತ್ತಿನಲ್ಲಿ ಮರಳಿ ಹೋದ ಉದಾಹರಣೆಗಳು ಬಹಳಷ್ಟು ಇದ್ದವು.

ಹೆಚ್ಚಿನ ವ್ಯಾಸಂಗಕ್ಕೆ ಎಂದು ಸ್ಪೇನ್ ಗೆ ಬರುವ ಭಾರತೀಯ ವಿದ್ಯಾರ್ಥಿಗಳದು ಕೂಡ ಇದೆ ಕಥೆ. ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲಾಗದೆ ಅಮೆರಿಕಾ, ಇಂಗ್ಲೆಂಡ್ ಅಥವಾ ಇನ್ನಿತರ ದೇಶಗಳಿಗೆ ಪಲಾಯನ ಮಾಡುತ್ತಾರೆ. ದೃಡತೆಯನ್ನ ಚಿಕ್ಕಂದಿನಿಂದ ಕಲಿಸಬೇಕು , ಇಲ್ಲವೇ ಬದುಕಿನಲ್ಲಿ ಬೇರೆಯ ಆಯ್ಕೆಗಳು ಇರಬಾರದು. ನನಗೆ ದೃಢತೆ ಇರಲಿಲ್ಲ. ಹಾಗೆಯೇ ನನ್ನ ಮುಂದೆ ಆಯ್ಕೆಗಳು ಕೂಡ ಇರಲಿಲ್ಲ.

ಹೀಗಾಗಿ ಗಟ್ಟಿಯಾಗಿ ನೆಲೆ ನಿಲ್ಲಲು ಸಾಧ್ಯವಾಯಿತು. ಸ್ಪೇನ್ ಮತ್ತು ಭಾರತದ ನಡುವೆ ಸಾಂಸ್ಕೃತಿಕ ಕೊಂಡಿಯಂತೆ ಕೆಲಸ ಮಾಡುವ ಅವಕಾಶ ನನ್ನದಾಯಿತು. ಸ್ಪ್ಯಾನಿಷ್ ಗಾದೆಗಳು ಎನ್ನುವ ಪುಸ್ತಕವನ್ನ ಗೆಳೆಯ ರವಿ ಇಂಗ್ಲಿಷ್ ನಲ್ಲಿ ಬರೆದು ಕೊಟ್ಟರು. ಆ ಮೂಲಕ ಅದು ಇಂಗ್ಲಿಷ್ ಓದಬಲ್ಲ ನನ್ನ ಸ್ಪ್ಯಾನಿಷ್ ಸ್ನೇಹಿತರನ್ನ ಕೂಡ ತಲುಪಿತು. ಮುಂಬೈ ನಲ್ಲಿರುವ ಸ್ಪ್ಯಾನಿಷ್ ರಾಯಭಾರಿ ಕಚೇರಿಗೂ ಪುಸ್ತಕ ತಲುಪಿ , ಅವರು ಕೂಡ ಈ ಕಾರ್ಯಕ್ಕೆ ಮೆಚ್ಚುಗೆಯನ್ನ ಸೂಚಿಸಿದರು.

ಇಷ್ಟೆಲ್ಲಾ ಅನುಭವ, ಸ್ಪಷ್ಟ ನಿಲುವುಗಳು , ಭದ್ರವಾದ ಬದುಕು ಒಂದು ದಿನದಲ್ಲಿ ಸಿಕ್ಕದ್ದಲ್ಲ. ಅದರ ಹಿಂದೆ ಪರಿಶ್ರಮವಿದೆ. ಬಹಳಷ್ಟು ವೇಳೆಯಿದೆ. ನಾವು ತಿಂದ ಅನ್ನ ಅರಗಲು ನಾಲ್ಕು ತಾಸು ಬೇಕು ಅಲ್ಲವೇ ? ಅಂದ ಮೇಲೆ ಬಯಸಿದ ಬದುಕನ್ನ ಕಟ್ಟಿಕೊಳ್ಳಲು ಕೂಡ ಸಮಯ ಬೇಕಲ್ಲವೇ ? ನಾವು ಹೇಗೆ ಇರಲಿ , ಎಲ್ಲೇ ಇರಲಿ ನಮಗೇನು ಬೇಕು ಎನ್ನುವ ಸ್ಪಷ್ಟ ಚಿತ್ರಣ ಮನಸ್ಸಿನಲ್ಲಿ ಮೂಡಿಬಿಟ್ಟರೆ ಸಾಕು , ಅದರ ಜೊತೆಗೆ ನಡೆಸುವ ಪಯಣ ನಾವು ಬಯಸಿದ ಜಾಗಕ್ಕೆ ನಮ್ಮನ್ನ ಕರೆದೊಯ್ಯುತ್ತದೆ.

English summary
Barcelona Memories Coloumn By Rangaswamy Mookanahalli Part 19,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X