• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಾನು-ನೀವು -ಅವರು, ಯಾರಾದರೇನು? ಎಲ್ಲರೂ ಒಂದಲ್ಲ ಒಂದು ನಂಬಿಕೆಯಲ್ಲಿ ಬಂಧಿಗಳೇ ಅಲ್ಲವೇನು ?

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ನಮಗೆ ಗೊತ್ತಿರದ ನೆಲ, ಭಾಷೆ,ಜನರ ನಡುವೆ ಒಂದಷ್ಟು ಜಾಗ ಮಾಡಿಕೊಂಡು, ಅಲ್ಲಿಯವರೂ ಕೂಡ ಹುಡುಗ ಪರವಾಗಿಲ್ಲ ಎನ್ನುವಂತೆ ಬದುಕಿದರೆ ಅದಕ್ಕಿಂತ ಸಂತೋಷ ಏನಿದ್ದೀತು?ಅಲ್ಲವೇ? ಯಶಸ್ಸು ಎನ್ನುವುದು ಬಹಳ ಸಾಪೇಕ್ಷವಾದದ್ದು. ದೊಡ್ಡವರ ಮನೆಯಲ್ಲಿ ಹುಟ್ಟಿದ ಮಕ್ಕಳಿಗೆ ಬೇಕಾದ ಎಲ್ಲಾ ಸವಲತ್ತುಗಳೂ ಇರುತ್ತದೆ. ಆದರೆ ಇಲ್ಲದವರ ಮನೆಯಲ್ಲಿ ಜನಿಸಿದ ಮಗು ತನ್ನ ಸ್ವ ಸಾಮರ್ಥ್ಯದಿಂದ ಒಂದು ಪೆನ್ಸಿಲ್ ಗಳಿಸಿದರೂ ಅದು ಯಶಸ್ಸು.

ಹೀಗಾಗಿ ಯಶಸ್ಸು ಎನ್ನುವ ಪದಕ್ಕೆ ನಿಖರವಾದ ಅರ್ಥವನ್ನ ಹುಡುಕಲು ಹೋಗಬಾರದು. ಅದು ವ್ಯಕ್ತಿಯಿಂದ ವ್ಯಕ್ತಿಗೆ , ಸಮಯಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ. ನಾವು ಮಾಡು ಕೆಲಸದ ಮೇಲೆ ಮಾತ್ರ ನಮ್ಮ ಅಧೀನದಲ್ಲಿ ಅದೂ ತಕ್ಕಮಟ್ಟಿಗೆ ಇರುತ್ತದೆ. ಉಳಿದಂತೆ ನಮ್ಮ ಕೈ ಮೀರಿದ ಇಲ್ಲಿನ ಆಟದಲ್ಲಿ ನಾವು ವಹಿಸಿದ ಪಾತ್ರವನ್ನ ನಿಭಾಯಿಯಿಸದೆ ಬೇರೆ ಯಾವ ದಾರಿಯಿದೆ?

ಹೊರಗಿನಿಂದ ಎಷ್ಟೇ ಪ್ರೇರೇಪಣೆ ಸಿಕ್ಕರೂ ಅದು ಮನಸ್ಸಿನ ಕೂಗಿಗೆ ಸಮವಲ್ಲ!ಹೊರಗಿನಿಂದ ಎಷ್ಟೇ ಪ್ರೇರೇಪಣೆ ಸಿಕ್ಕರೂ ಅದು ಮನಸ್ಸಿನ ಕೂಗಿಗೆ ಸಮವಲ್ಲ!

ಬಾರ್ಸಿಲೋನಾ ಗೆ ಬಂದಾ ಹೊಸತರಲ್ಲಿ ಸಂಸ್ಥೆ ನೀಡಿದ್ದ ಫ್ಲಾಟ್ ನಲ್ಲಿ ಜೀವನದ ಬಂಡಿ ಸಾಗುತ್ತಿತ್ತು . ಹೊಸತರಲ್ಲಿ ಎಲ್ಲದಕ್ಕೂ ಸಹಾಯ ಮಾಡುತ್ತಿದ್ದ ಸಂಸ್ಥೆ ಆ ನಂತರದ ದಿನಗಳಲ್ಲಿ ನಿಭಾಯಿಸಿಕೊಳ್ಳ ಬಲ್ಲ ಎಂದು ನನ್ನ ಪಾಡಿಗೆ ಬಿಟ್ಟು ಬಿಟ್ಟಿತು. ಹೊಸ ಫ್ಲಾಟ್ ಹುಡುಕುವುದು ಕಷ್ಟವೇನೂ ಆಗಲಿಲ್ಲ. ಆದರೆ ಇಲ್ಲಿ ಅಷ್ಟು ಸುಲಭವಾಗಿ ಅಂದರೆ ಭಾರತದಲ್ಲಿ ಕೊಟ್ಟಷ್ಟು ಸುಲಭವಾಗಿ ಬಾಡಿಗೆಗೆ ಕೊಡುವುದಿಲ್ಲ.

ಆಗ ಪರಿಚಯವಾದವರೇ ಅಂತೊನಿಯೊ. ಸಿನ್ಯೋರ್ ಎಂದರೆ ಸರ್ ಎನ್ನವುದಕ್ಕೆ ಪರ್ಯಾಯ ಪದ. ಹೀಗಾಗಿ ಇವರನ್ನ ಸಿನ್ಯೋರ್ ಅಂತೊನಿಯೊ ಎಂತಲೇ ಕರೆಯುತ್ತಿದ್ದೆ. ವೃತ್ತಿಯಿಂದ ವೈದ್ಯರಾದ ಇವರು ರಿಯಲ್ ಎಸ್ಟೇಟ್ ಏಜೆಂಟ್ ಕೂಡ ಆಗಿದ್ದರು. ಮತ್ತೆ ಇಲ್ಲಿ ಇನ್ನೊಂದು ವಿಷಯವನ್ನ ಹೇಳಲು ಬಯಸುತ್ತೇನೆ. ಇಲ್ಲಿ ಸಿಕ್ಕ ಸಿಕ್ಕವರೆಲ್ಲ ರಿಯಲ್ ಎಸ್ಟೇಟ್ ಏಜೆಂಟ್ ಆಗುವಂತಿಲ್ಲ.

ಅದಕ್ಕೂ ಕೂಡ ಒಂದಷ್ಟು ಸಮಯ ವ್ಯಯಿಸಿ ತರಬೇತಿ ಪಡೆದು ನೊಂದಾವಣಿ ಮಾಡಿಸಿಕೊಂಡಿರಬೇಕು. ಇಲ್ಲಿ ಎಲ್ಲದಕ್ಕೂ ತರಬೇತಿ ಇರಲೇ ಬೇಕು. ಕೊನೆಗೆ ಕಸ ಗುಡಿಸುವುದಕ್ಕೂ ಕೂಡ ಒಂದು ತರಬೇತಿ ಪಡೆದು ಅಲ್ಲಿಂದ ಒಂದು ಸರ್ಟಿಫಿಕೇಟ್ ಪಡೆದಿರಬೇಕು. ನಾನು ಉತ್ಪ್ರೇಕ್ಷೆ ಮಾಡುತ್ತಿಲ್ಲ . 'ಕುರ್ಸೊ ದೆ ಲಿಂಪಿಯೆಸ ' ಎಂದರೆ ಕ್ಲೀನಿಂಗ್ ಕೋರ್ಸ್ ಎಂದರ್ಥ. ಇಲ್ಲಿನ ಜನ ಎಲ್ಲಾ ವಿಷಯದಲ್ಲೂ ಅಚ್ಚುಕಟ್ಟು , ಜೊತೆಗೆ ಮೆಥಾಡಿಕಲ್. ಹೇಳಿದ ಕೆಲಸವನ್ನ ನಿಷ್ಠೆಯಿಂದ ಮಾಡಿ ಮುಗಿಸುತ್ತಾರೆ. ಗೊತ್ತಿಲ್ಲದಿದ್ದರೆ ನನಗೆ ತಿಳಿಯದು ಎಂದು ನೇರಾನೇರ ಹೇಳುತ್ತಾರೆ. ಇರಲಿ

 ನಮ್ಮ ಮಾತೃ ಭಾಷೆಯನ್ನ ಪ್ರೀತಿಸಬೇಕು, ಹಾಗೆಂದು ಬೇರೆ ಭಾಷೆಯನ್ನ ದ್ವೇಷಿಸಬಾರದು ನಮ್ಮ ಮಾತೃ ಭಾಷೆಯನ್ನ ಪ್ರೀತಿಸಬೇಕು, ಹಾಗೆಂದು ಬೇರೆ ಭಾಷೆಯನ್ನ ದ್ವೇಷಿಸಬಾರದು

ಸಿನ್ಯೋರ್ ಅಂತೊನಿಯೊ ಅವರ ಸಹಾಯದಿಂದ ಬಾಡಿಗೆಗೆ ಸಿಕ್ಕ ಫ್ಲಾಟ್ ಒಲಂಪಿಕ್ ಆಟಗಾರರಿಗೆ ಎಂದು ಕಟ್ಟಿಸಿದ ನೂರಾರು ಫ್ಲಾಟ್ ಗಳಲ್ಲಿ ಒಂದು. ಇಲ್ಲಿ ಬಾಡಿಗೆ ಪಡೆಯುವವರು ತಮ್ಮ ವರಮಾನದ ಖಾತ್ರಿ ಮಾಡಿ ಕೊಡಬೇಕು. ಅಂದರೆ ಮೂರು ತಿಂಗಳ ವೇತನ ಪಟ್ಟಿಯನ್ನ ನೀಡಬೇಕು. ಕೆಲವೊಮ್ಮೆ ಬ್ಯಾಂಕ್ ಗ್ಯಾರಂಟಿ ಕೂಡ ಕೇಳುತ್ತಾರೆ. ಜೊತೆಗೆ ಮೂರು ತಿಂಗಳ ಬಾಡಿಗೆಯನ್ನ ಮುಂಗಡ ಹಣವನ್ನಾಗಿ ನೀಡಬೇಕು.

ಇದು ಡೆಪಾಸಿಟ್ ಮನಿ , ಮನೆಯನ್ನ ಬಿಟ್ಟು ಹೋಗುವಾಗ ವಾಪಸ್ಸು ನೀಡುತ್ತಾರೆ. ಒಂದು ತಿಂಗಳ ಬಾಡಿಗೆ ಹಣವನ್ನ ಕಮಿಷನ್ ನೀಡಬೇಕಾಗುತ್ತದೆ. ಹೀಗಾಗಿ ಇಲ್ಲಿ ಬಾಡಿಗೆಗೆ ಫ್ಲಾಟ್ ತೆಗೆದುಕೊಳ್ಳುವುದು ಕೂಡ ದೊಡ್ಡ ವಿಷಯ. ಅದಕ್ಕೆ ಬಹುತೇಕರು ಬೇರೊಬ್ಬರ ಮನೆಯಲ್ಲಿ ರೂಮ್ ಶೇರಿಂಗ್ ನಲ್ಲಿ ವಾಸ ಮಾಡುತ್ತಾರೆ. ಬಾರ್ಸಿಲೋನಾ ದಲ್ಲಿ ಜೀವಿಸಲು ಶುರು ಮಾಡಿ ಕೇವಲ ಐದು ವರ್ಷದಲ್ಲಿ ಫ್ಲಾಟ್ ಕೊಂಡುಕೊಂಡೆ.

ಅದು 1992ರ ಸಮಯ , ಆಗ ನಾನಿನ್ನು ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ಸಮಯ. ಹತ್ತನೆಯ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ ನನಗೆ ಇಂಗ್ಲಿಷ್ ಅಂದರೆ ಒಂದು ರೀತಿಯ ಭಯ. ಓದಲು , ಬರೆಯಲು ಬರುತ್ತಿತ್ತು . ಮಾತನಾಡಲು ಅದೂ ಆತ್ಮವಿಶ್ವಾಸದಿಂದ ಮಾತನಾಡುಲು ಬರುತ್ತಿರಲಿಲ್ಲ. ಪ್ರಥಮ ಪಿಯುಸಿ ಕಾಮರ್ಸ್ ಗೆ ಸೇರಿದ್ದೇನೆ , ಆದರೆ ಅಂದಿಗೆ ನನಗೆ ಕಾಮರ್ಸ್ ಸ್ಪೆಲ್ಲಿಂಗ್ ಕೂಡ ಬರುತ್ತಿರಲಿಲ್ಲ.

ಕಮಾಡಿಟಿ , ಕನ್ಸೆಂಟ್ , ಇತ್ಯಾದಿ ಪದಗಳನ್ನ ಕನ್ನಡದಲ್ಲಿ ಬರೆದುಕೊಂಡು ಆ ನಂತರ ಡಿಕ್ಷನರಿ ಸಹಾಯದಿಂದ ಕಲಿಯುತ್ತ ಹೋದೆ. ಅಂದಿನ ದಿನದಲ್ಲಿ ನಮ್ಮ ಮನೆಯಲ್ಲಿ ಆಗಷ್ಟೇ ಹೊಸದಾಗಿ ತಂದ ಕಪ್ಪು ಬಿಳುಪು ಟಿವಿ ಇತ್ತು. ಅಕ್ಕಪಕ್ಕದ ಐದಾರು ಮನೆಯ ಜನ ನಮ್ಮ ಮನೆಯನ್ನ ಅವರದೇ ಮನೆ ಎನ್ನುವಂತೆ ಬಳಸುತ್ತಿದ್ದರು. ನಮ್ಮ ಮನೆಯಲ್ಲಿ ಟಿವಿ ಇಲ್ಲದ ಸಮಯದಲ್ಲಿ ನಾವು ಅದೇ ಕೆಲಸವನ್ನ ಮಾಡಿದ್ದೆವು.

ಆ ದಿನಗಳಲ್ಲಿ ಸಾಯಂಕಾಲ ಟಿವಿಯಲ್ಲಿ ಅನುದಿನದ ಒಲಂಪಿಕ್ ಕ್ರೀಡೆಯ ಮುಖ್ಯಾಂಶಗಳನ್ನ ತೋರಿಸುತ್ತಿದ್ದರು. ಅದನ್ನ ಬಿಟ್ಟ ಬಾಯಿ ಬಿಟ್ಟು ನೋಡುತ್ತಾ ಕುಳಿತ್ತಿರುತ್ತಿದ್ದೆವು. ಪೀಣ್ಯದ ಅದ್ಯಾವುದೋ ಹೆಸರಿಲ್ಲದ ಕಾರ್ಖಾನೆಯಲ್ಲಿ ಲೇಥ್ ಮಷೀನ್ ಆಪರೇಟರ್ ಆಗಿ ದುಡಿಯುತ್ತಿದ್ದ ರಾಜಣ್ಣ ಎನ್ನುವರು ಅಂದಿಗೆ ನಮ್ಮ ನೆರೆಯವರಾಗಿದ್ದರು. ಸಾಯಂಕಾಲ ನಮ್ಮ ಮನೆಯಲ್ಲಿ ಕೂತು ಟಿವಿ ನೋಡುವುದಲ್ಲದೆ ಎಕ್ಸ್ಪರ್ಟ್ ಕಾಮೆಂಟರಿ ಕೂಡ ನೀಡುತ್ತಿದ್ದರು.

ಒಲಂಪಿಕ್ ಕ್ರೀಡೆಗಳಲ್ಲಿ ಈಜು ಕೂಡ ಒಂದು ಅಲ್ಲವೇ , ಹೆಣ್ಣು ಮಕ್ಕಳು ಸ್ವೀಮ್ಸ್ ಸೂಟಿನಲ್ಲಿ ಬಂದಾಗೆಲ್ಲ ' ಏನ್ ಸಾರ್ ಲೇಡಿಸು .., ಪಿಚ್ಚರ್ ನಲ್ಲಿ ಓಕೆ , ರಿಯಲ್ ಲೈಫ್ನಲ್ಲೂ ಹಿಂಗೆಲ್ಲಾ ಉಂಟಾ ' ಎನ್ನುವ ಉದ್ಘಾರ ತೆಗೆಯುತ್ತಿದ್ದರು . ಆ ದಿನಗಳಲ್ಲಿ ಮುಂದಿನ ಏಳು ವರ್ಷದಲ್ಲಿ ನಾನು ಬಾರ್ಸಿಲೋನಾ ನಗರದ ವಾಸಿಯಾಗುತ್ತೇನೆ ಎನ್ನುವ ಕಿಂಚಿತ್ತೂ ವಿಶ್ವಾಸ ಇರಲಿಲ್ಲ. ಬದುಕು ಮೂರಾಬಟ್ಟೆಯಾಗುವುದಿಲ್ಲ ಎನ್ನುವ ನಂಬಿಕೆ ಮಾತ್ರ ಅಗಾಧವಾಗಿತ್ತು. ಆ ನಂಬಿಕೆಯ ಜೀವನದ ಬಂಡವಾಳ.

 ಅನುಭವಕ್ಕಿಂತ ದೊಡ್ಡ ದೇವರಿಲ್ಲ , ಅನುಭವವೇ ಜೀವನ.. ಉಳಿದದ್ದೆಲ್ಲಾ ಶೂನ್ಯ! ಅನುಭವಕ್ಕಿಂತ ದೊಡ್ಡ ದೇವರಿಲ್ಲ , ಅನುಭವವೇ ಜೀವನ.. ಉಳಿದದ್ದೆಲ್ಲಾ ಶೂನ್ಯ!

ಬದುಕೆಂದರೆ ಹೀಗೆ ಅಲ್ವಾ ? ಅದು ಬಹಳ ವಿಚಿತ್ರಗಳನ್ನ ಕೂಡ ಸಾಧ್ಯ ಎನ್ನುವಂತೆ ಮಾಡುತ್ತದೆ. ಸಾಧ್ಯವಾಗುವ ಎಷ್ಟೋ ಸುಲಭ ಕೆಲಸಗಳು ಕೂಡ ಕೈಗೂಡದೆ ಹೋಗುತ್ತದೆ. ಯಾವುದೇ ನಗರದಲ್ಲಿ ವಾಸಿಸಲಿ ಅಲ್ಲಿನ ಜನರ ಸಂಪರ್ಕವನ್ನ , ಹೆಚ್ಚಿನ ನೆಟ್ ವರ್ಕ್ ವೃದ್ಧಿಸಕೊಳ್ಳುವ ಕಾರ್ಯವನ್ನ ಮಾಡುವುದು ನನಗೆ ಇಷ್ಟದ ಕೆಲಸಗಳಲ್ಲಿ ಒಂದು , ಸಿನ್ಯೋರ್ ಅಂತೊನಿಯೊ ಬಳಿ ಯಾವುದೇ ಮನೆ ಬಾಡಿಗೆಗೆ ಅಥವಾ ಮಾರಾಟಕ್ಕೆ ಬಂದರೆ ಅವರು ಮೊದಲ ಕರೆ ನನಗೆ ಮಾಡುತ್ತಿದ್ದರು.

' ಒಯ್ಯೇ , ರಂಗಾ ತೆನೆಮೊಸ್ ಉನ್ ಪಿಸೊ ಪರ ಅಲ್ಕಿಲ್ಲೆರ್ ' ಎಂದೂ ಅಥವಾ 'ತೆನೆಮೊಸ್ ಪರ ವೆಂತ' ಎಂತಲೋ ಕರೆ ಮಾಡುತ್ತಿದ್ದರು. ( ಮನೆ ಬಾಡಿಗೆಗೆ ಇದೆ ಅಥವಾ ಮಾರಾಟಕ್ಕೆ ಇದೆ ಎನ್ನುವ ಅರ್ಥ ) ಅರವತ್ತು ದಾಟಿದ್ದ ಅಂತೊನಿಯೊ ಲೀಗಲ್ ಕೆಲಸಗಳು ಏನೇ ಇರಲಿ ಮಾಡಿ ಕೊಡುತ್ತಿದ್ದರು. ಪ್ರತಿ ಸಲ ಕೆಲಸವಾದ ಮೇಲೆ ನಾನು ಬೇಡವೆಂದರೂ ಕರೆದುಕೊಂಡು ಹೋಗಿ ಊಟ ಕೊಡಿಸುತ್ತಿದ್ದರು.

ಮನುಷ್ಯ ಮೂಲದಲ್ಲಿ ಒಂದೇ ಎನ್ನುವುದು ಇಲ್ಲಿನ ಬದುಕು ನನಗೆ ಕಲಿಸಿದ ಮಹಾನ್ ಪಾಠ. ಉದಾಹರಣೆ ನೋಡಿ ಅಂತೊನಿಯೊ ಎನ್ನುವುದು ಗಂಡಸಿನ ಹೆಸರು , ಅದೇ ಅಂತೋನಿಯ ಎಂದರೆ ಅದು ಹೆಂಗಸಿನ ಹೆಸರು. ಇದೆ ರೀತಿ ಫೆರ್ನಾಂದೋ ಎಂದರೆ ಗಂಡಸು , ಫೆರ್ನಾಂದ ಎಂದರೆ ಅದು ಹೆಂಗಸಿನ ಹೆಸರು. ನಮ್ಮಲ್ಲಿ ಕೂಡ ಹೀಗೆ ಅಲ್ಲವೇ ? ಮುನಿಯಪ್ಪ - ಮುನಿಯಮ್ಮ , ವೆಂಕಪ್ಪ -ವೆಂಕಮ್ಮ .., ಹೀಗೆ ಹತ್ತಾರು ನಿದರ್ಶನಗಳನ್ನ ನೀಡಬಹದು.

ಅಲ್ಲದೆ ನಮ್ಮ ಕಡೆ ಸರ್ ನೇಮ್ ಅಥವಾ ಕುಟುಂಬದ ಹೆಸರು ಹೇಗೆ ಉಳ್ಳಾಗಡ್ಡಿ , ಭಟ್ಟ , ಗೌಡ ಇತ್ಯಾದಿಗಳಿವೆ ಹಾಗೆ ಇಲ್ಲಿ ಕೂಡ ಉಂಟು. ಸ್ಪೇನ್ ದೇಶದ ಅಂದಿನ ಪ್ರೆಸಿಡೆಂಟ್ ಹೋಸೆ ಲೂಯಿಸ್ ರೋಡ್ರಿಗೇಸ್ ಜಪಾತೆರೊ. ಜಪಾತೆರೊ ಅಂದರೆ ಚಪ್ಪಲಿ ತಯಾರಿಸುವನು ಎಂದರ್ಥ. ನಮ್ಮಲ್ಲಿ ಹೇಗೆ ಅನೇಕ ನಂಬಿಕೆ , ಮೂಢನಂಬಿಕೆಗಳಿವೆ ಅಂತೆಯೇ ಇವರಲ್ಲಿ ಕೂಡ ಹಲವಾರು ನಂಬಿಕೆಗಳಿವೆ.

ಇಲ್ಲಿನ ಜನರು ಯಾವುದನ್ನೂ , ಯಾರನ್ನೂ ಬಹುಬೇಗ ಹಣೆಪಟ್ಟಿ ಅಂಟಿಸಿ , ಇದಿಷ್ಟೇ ಎಂದು ಷರಾ ಹೊರಡಿಸುವುದಿಲ್ಲ. ಇಲ್ಲಿನ ಸಮಾಜದಲ್ಲಿ Sobre los gustos no hay nada escrito (ಸೊಬ್ರೆ ಲಾಸ್ ಗುಸ್ತೋಸ್ ನೋ ಹಾಯ್ ನಾದ ಎಸ್ಕ್ರಿತೊ ) ಎನ್ನುತ್ತಾರೆ . ಅಂದರೆ ಇಷ್ಟಗಳ ಬಗ್ಗೆ ಇಷ್ಟೇ ಸರಿ ಎಂದು ಏನೂ ಬರೆದಿಟ್ಟಿಲ್ಲ ಎಂದರ್ಥ. ಪ್ರತಿಯೊಬ್ಬರಿಗೂ ಅವರದೇ ಅದ ಇಷ್ಟಗಳಿರುತ್ತವೆ. ಹೀಗಾಗಿ ನಮಗೆ ಇಷ್ಟವಾದದ್ದು ಅವರಿಗೆ ಇಷ್ಟವಾಗಬೇಕು ಎನ್ನುವಂತಿಲ್ಲ ಎನ್ನುವ ನಿಯಮವನ್ನ ಈ ಸಮಾಜ ಪಾಲಿಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಒಂದು ಸಣ್ಣ ಘಟನೆಯನ್ನ ಹೇಳಿ ಇಂದಿನ ಬರಹವನ್ನ ನಿಲ್ಲಿಸುವೆ .

 ಎಲ್ಲಿಯ ಬಾರ್ಸಿಲೋನಾ? ಎಲ್ಲಿಯ ಮೈಸೂರು? ಆದರೂ..ನೆನಪಿರಲಿ ಕಾಗತಿಯೋ ಎಲ್ಲಿಯ ಬಾರ್ಸಿಲೋನಾ? ಎಲ್ಲಿಯ ಮೈಸೂರು? ಆದರೂ..ನೆನಪಿರಲಿ ಕಾಗತಿಯೋ

ಬಾರ್ಸಿಲೋನಾ ಗೆ ಬಂದ ಹೊಸತು ನನಗೆ ಅಡುಗೆ ಮಾಡಿ ಅಭ್ಯಾಸವಿಲ್ಲ . ಮೊದಲು ಮಾಡಲು ಕಲಿತದ್ದು ಉಪ್ಪಿಟ್ಟು ! ನಂತರ ಹಾಗೂ ಹೀಗೂ ಮಾಡಿ ಹೊಟ್ಟೆಯೆಂಬ ಎಂದೂ ತುಂಬದ ಉಗ್ರಾಣವ ತುಂಬಿಸಲು ಹಲವಾರು ಖಾದ್ಯಗಳ ಮಾಡಲು ಕಲಿತೆ ಅದು ಬೇರೆಯ ಕಥೆ . ಆದರೂ ಮದುವೆಯಾಗುವವರೆಗೆ ಉಪ್ಪಿಟ್ಟು ತಿನ್ನದ ದಿನವಿಲ್ಲ . ಮಾಡಲು ಬಹಳ ಸುಲಭ ಅಲ್ಲದೆ ಅದನ್ನ ಮಾಡಲು ಹೆಚ್ಚು ಪಾತ್ರೆಯ ಅವಶ್ಯಕತೆಯಿಲ್ಲ . ಮಾಡುವುದು ಮತ್ತು ತಿನ್ನುವುದು ಒಂದಾದರೆ ಮಾಡಿದ ಪಾತ್ರೆ ತೊಳೆಯುವುದು ಇನ್ನೊಂದು ದೊಡ್ಡ ಯುದ್ಧ

ಹೀಗಾಗಿ ಉಪಿಟ್ಟು ಮಾಡಲು ಶುರುವಾದದ್ದು ನಂತರದ ದಿನಗಳಲ್ಲಿ ಮುಂದಿನ ಆರೇಳು ವರ್ಷ ಅದಿಲ್ಲದ ದಿನವಿಲ್ಲ ಎನ್ನುವಂತಾಯಿತು . ಕೆಲವರಿಗೆ ಉಪಿಟ್ಟು ಎಂದರೆ ಅಲರ್ಜಿ ! ಅದನ್ನ ತಿನ್ನುವುದಿರಲಿ ಅದರ ಹೆಸರು ಕೇಳಿದರೆ ಸಾಕು ಮುಖ ಕಿವುಚಿ ಎದ್ದೋಡ್ಡುತ್ತಾರೆ !!. ಇದು ಕೇವಲ ಉಪ್ಪಿಟ್ಟಿಗೆ ಸೀಮಿತ ಎನ್ನುವುದಾದರೆ ಅದು ತಪ್ಪು ! ಏಕೆಂದರೆ ನಮಗೆ ಅತಿ ಇಷ್ಟವಾದ ತಿಂಡಿ ಅಥವಾ ಊಟ ಇನ್ನೊಬ್ಬರಿಗೆ ಎಳ್ಳಷ್ಟೂ ರುಚಿಸದೆ ಹೋಗಬಹದು.

ಒಮ್ಮೆ ಹೀಗೆ ಆಯ್ತು , ಬೆಂಗಳೂರಿನಿಂದ ಅಮ್ಮ ಮಾಡಿ ಕೊಟ್ಟ ಕೋಡುಬಳೆಯನ್ನ ನನ್ನ ಸಹೋದ್ಯೋಗಿ ಅಲೆಕ್ಸ್ ಗೆ ಕೊಟ್ಟೆ , ಏನಿದು ಅಂದನಾತ , ನಾನು ಕೋಡುಬಳೆ ಎಷ್ಟು ಪ್ರಸಿದ್ಧ ತಿಂಡಿ ಎನ್ನುವುದನ್ನ ವಿವರಿಸಿದೆ. ಕೊನೆಗೂ ನನ್ನ ಮಾತಿನಿಂದ ಪ್ರೇರಿತನಾಗಿ ಒಂದು ತುಂಡು ಕೋಡುಬಳೆ ತಿಂದವನು ಅರೆಕ್ಷಣದಲ್ಲಿ ತುಬುಕ್ ಎಂದು ಉಗಿದ . ಆತನಿಗೆ ಕೋಡುಬಳೆ ಇಷ್ಟವಾಗಲಿಲ್ಲ . ಅಮ್ಮ ಮಾಡುವ ಕೋಡುಬಳೆ ನಮ್ಮ ಬಳಗದಲ್ಲಿ ಜಗತ್ವಿಖ್ಯಾತಿ ಆದರೂ ಅದು ಅಲೆಕ್ಸ್ ಗೆ ರುಚಿಸಲಿಲ್ಲ .

ಇಂದು ಇಷ್ಟವಾದ ರುಚಿ ನಾಳೆ ಇಷ್ಟವಾಗದೇ ಹೋಗಬಹದು ಅಲ್ಲವೇ ? ಹೀಗಾಗಿ ನಿಖರವಾಗಿ ಜಗತ್ತಿನಲ್ಲಿ ಇಷ್ಟು ರುಚಿಯಿದೆ ಎಂದು ಲೆಕ್ಕವಿಡಲು ತಾನೇ ಹೇಗೆ ಸಾಧ್ಯ ? ಜಗತ್ತಿನಲ್ಲಿ ಒಬ್ಬರಂತೆ ಒಬ್ಬರಿಲ್ಲ , ಒಬ್ಬರ ರುಚಿ ಒಬ್ಬರದಲ್ಲ . ಹೌದು ಒಬ್ಬರಂತೆ ಒಬ್ಬರಿಲ್ಲ ಹೀಗಾಗಿ ಉತ್ತಮ ಬದುಕಿಗೆ ಒಂದಷ್ಟು ಹೊಂದಾವಣಿಕೆ ಬೇಕು. ನಾವೆಲ್ಲಾ ಮೂಲದಲ್ಲಿ ಒಂದೇ ಆಗಿದ್ದರೂ ನಮಗೆ ನಮ್ಮದೇ ಅದ ಬೇಕು ಬೇಡಗಳಿವೆ .

ಇವೆಲ್ಲವುಗಳ ನಡುವೆ ನಾವು ನಂಬುವ ಅನೇಕ ವಿಷಯಗಳು ಕೂಡ ಒಂದೇ ಆಗಿವೆ. ನಮ್ಮನ್ನ ಬೆಸೆಯುವ ವಿಷಯಗಳನ್ನ ಗಮನಿಸುತ್ತಾ ಹೋದರೆ ಅವೇ ಕಾಣಸಿಗುತ್ತವೆ. ಕೊನೆಗೂ ನಮ್ಮನ್ನ ಕಾಪಾಡುವುದು ನಮ್ಮ ನಂಬಿಕೆಗಳು ಮಾತ್ರ .ಯಾರ ನಂಬಿಕೆ ಶ್ರೇಷ್ಠ ಎನ್ನುವ ಪ್ರಶ್ನೆಯೇ ಕಾದಾಟಕ್ಕೆ ಕಾರಣ . ನಾನು -ನೀವು -ಅವನು ಯಾರಾದರೇನು ? ಎಲ್ಲರೂ ಒಂದಲ್ಲ ಒಂದು ನಂಬಿಕೆಯಲ್ಲಿ ಬಂಧಿಗಳೇ ಅಲ್ಲವೇನು ?

English summary
Barcelona Memories Coloumn By Rangaswamy Mookanahalli Part 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X