• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹೊರಗಿನಿಂದ ಎಷ್ಟೇ ಪ್ರೇರೇಪಣೆ ಸಿಕ್ಕರೂ ಅದು ಮನಸ್ಸಿನ ಕೂಗಿಗೆ ಸಮವಲ್ಲ!

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಸ್ಪೇನ್ ದೇಶದ ಬಾರ್ಸಿಲೋನಾ ನಗರವನ್ನ ಕೆಲಸದ ನಿಮಿತ್ತ ತಲುಪಿದಾಗ ನನಗೆ 23 ವರ್ಷ 3 ತಿಂಗಳಾಗಿತ್ತು. ಅದಕ್ಕೆ ಮುಂಚೆ ಮೂರು ತಿಂಗಳು ದುಬೈ ನಲ್ಲಿ ಕೆಲಸ ಮಾಡಿದ ಅನುಭವ ನನ್ನ ಜೊತೆಗಿತ್ತು. ಭಾರತದಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡುವ ಅವಕಾಶ ಸಿಗಲಿಲ್ಲ ಅದು ಬೇರೆ ಮಾತು. ದುಬೈ ನಲ್ಲಿ ಮೂರು ತಿಂಗಳ ಅವಧಿಯಲ್ಲಿ ಬರೋಬ್ಬರಿ 6 ಕೆಜಿ ದೇಹ ತೂಕ ಹೆಚ್ಚಾಯ್ತು . ದುಬೈ ನ ಊಟದ ಸವಿಯನ್ನ ಬಲ್ಲವನೇ ಬಲ್ಲ. ಜಗತ್ತನ್ನ ಕಂಡಿರದ ನನಗೆ ದುಬೈ ಅಂದಿಗೆ ಮಾಯಾಲೋಕದಂತೆ ಕಂಡಿತ್ತು .

ಇಪ್ಪತ್ತು , ಮೂವತ್ತು ಹೆಜ್ಜೆಗೆ ಒಂದೊಂದು ಹೋಟೆಲ್ ಅಥವಾ ಮೆಸ್ಸ್ ಕಾಣಸಿಗುತ್ತಿತ್ತು . ಅಂದಿನ ದಿನದಲ್ಲಿ 180 ರಿಂದ 250 ಧಿರಾಮ್ ನೀಡಿದರೆ ಸಾಕು ತಿಂಗಳು ಪೂರ್ತಿ ಎರಡು ಹೊತ್ತು ಹೊಟ್ಟೆ ಬಿರಿಯುವಷ್ಟು ಊಟವನ್ನ ಹಾಕುತ್ತಿದ್ದರು. ತಿಂಗಳಿದೊಂದು ಹೊಸ ಹೋಟೆಲ್ ರುಚಿ , ಸಾಲದಕ್ಕೆ ಒಂದು ಧಿರಾಮ್ ನೀಡಿದರೆ 220 ಎಂಎಲ್ ನ ಪೆಪ್ಸಿ ಟಿನ್ ಸಿಗುತ್ತಿತ್ತು . ತಿಂದು ಕುಡಿದು ದೇಹ ತೂಕ ಉತ್ತರದ ಕಡೆಗೆ ಮುಖ ಮಾಡಿತ್ತು . ಬೆಂಗಳೂರಿನಲ್ಲಿದ್ದಾಗಲೇ ದೇಹದ ತೂಕ 114 ಅಥವಾ 120 ತಲುಪಿತ್ತು . ದುಬೈ ಸೇರಿ ಅದು ಇನ್ನು ಹೆಚ್ಚಾಯ್ತು , ಹೀಗಿದ್ದಾಗ ಅಚಾನಕ್ಕಾಗಿ ನನ್ನ ಸಂಸ್ಥೆ ಬಾರ್ಸಿಲೋನಾ ಗೆ ವರ್ಗಾವಣೆ ಮಾಡಿತು.

ಕಾಶ್ಮೀರ , ಪಾಕಿಸ್ತಾನ , ಕೊನೆಗೆ ಇರಾನ್ , ಇರಾಕ್ , ಸೋಮಾಲಿಯಾ ಆದರೂ ಸರಿ , ಎಲ್ಲಿಗಾದರೂ ಸರಿಯೇ ನಾನು ಕೆಲಸ ಮಾಡಲು ಸಿದ್ದ ನನಗೆ ಹಣ ಬೇಕು , ಹೆಚ್ಚು ಹಣ ನೀಡಿದರೆ ಎಲ್ಲಿಗಾದರೂ ಸರಿ ಹೋಗಲು ಸಿದ್ದ ಎನ್ನುವ ನನ್ನ ನಿಲುವನ್ನ ಆಡಳಿತ ಮಂಡಳಿಗೆ ತಿಳಿಸಿದ್ದೆ. ಅಂದಿನ ದಿನದಲ್ಲಿ ಅಂತಲ್ಲ ಇಂದಿಗೂ ಸ್ಪೇನ್ ದೇಶಕ್ಕೆ ಹೋಗಲು ಭಾರತೀಯರು ಅದರಲ್ಲೂ ದಕ್ಷಿಣ ಭಾರತೀಯರು ಒಪ್ಪುವುದಿಲ್ಲ . ಕಾರಣ ಭಾಷೆ .

ಇಲ್ಲಿ ಇಂದಿಗೂ ಇಂಗ್ಲಿಷ್ ಎಂದರೆ ಅದು ಏಲಿಯನ್. ಜೊತೆಗೆ ಭಾರತೀಯರ ಸಂಖ್ಯೆ ಕೂಡ ಕಡಿಮೆಯಿರುವುದರಿಂದ ಸಾಮಾಜಿಕ ಜೀವನ ಸೊನ್ನೆಗೆ ಹತ್ತಿರ. ಸಂಸ್ಥೆಯ ಹಲವಾರು ಹಿರಿಯ ಉದ್ಯೋಗಿಗಳು ಅಲ್ಲಿಗೆ ಹೋಗಿ ತಿಂಗಳೊಪ್ಪತ್ತಿನಲ್ಲಿ ವಾಪಸ್ಸು ದುಬೈ ಸೇರಿದ್ದರು. ಹೀಗೆ ವಾಪಸ್ಸು ಬಂದವರು ಸಾಕಷ್ಟು ಊಹಾಪೋಹಗಳನ್ನ ಕೂಡ ಹರಡಿ ಬಿಟ್ಟಿದ್ದರು. ಹೀಗೆ ಸ್ಪೇನ್ ಗೆ ಕಳಿಸುವ ಪಟ್ಟಿಯಲ್ಲಿ ಆಡಳಿತ ಮಂಡಳಿಗೆ ನಾನೇನು ಪ್ರಥಮ ಆಯ್ಕೆಯಾಗಿರಲಿಲ್ಲ . ನನಗಿಂತ ಬಹಳಷ್ಟು ಸೀನಿಯರ್ ಒಂದಿಬ್ಬರು ಬೇಡ ಎಂದ ಮೇಲೆ ಕೊನೆಯ ಆಯ್ಕೆಯಾಗಿ ನನ್ನನ್ನ ಆರಿಸಿದ್ದರು.

ಬದುಕು ಎಷ್ಟು ವಿಚಿತ್ರ ನೋಡಿ , ಹೀಗೆ ಅಂದು ಬಾರ್ಸಿಲೋನಾ ಅವಕಾಶ ಕೈ ಚಲ್ಲಿದ ಆ ಇಬ್ಬರು ಇಂದಿಗೂ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ. ತಮ್ಮ ಅಂದಿನ ತೀರ್ಮಾನಕ್ಕೆ ಇಂದು ತಮ್ಮನ್ನ ತಾವೇ ಶಪಿಸಿಕೊಳ್ಳುತ್ತಿದ್ದಾರೆ . ನನ್ನದು ಅಂದಿನಿಂದ ಇಂದಿಗೂ ಒಂದೇ ಮಂತ್ರ ನಾವಾಗೇ ಯಾವುದನ್ನ ಬೆನ್ನಟ್ಟಿ ಹೋಗಬಾರದು , ಕೈಗೆ ಬಂದ ಅವಕಾಶವನ್ನ ಬಿಡದೆ ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳಬೇಕು ಎನ್ನುವುದು .

ನಮ್ಮ ಮಾತೃ ಭಾಷೆಯನ್ನ ಪ್ರೀತಿಸಬೇಕು, ಹಾಗೆಂದು ಬೇರೆ ಭಾಷೆಯನ್ನ ದ್ವೇಷಿಸಬಾರದು ನಮ್ಮ ಮಾತೃ ಭಾಷೆಯನ್ನ ಪ್ರೀತಿಸಬೇಕು, ಹಾಗೆಂದು ಬೇರೆ ಭಾಷೆಯನ್ನ ದ್ವೇಷಿಸಬಾರದು

ಬಾರ್ಸಿಲೋನಾ ತಲುಪಿದ ನಂತರ ಪ್ರಥಮ ಒಂದೆರೆಡು ವಾರ ಅಕ್ಕಿ , ಬೇಳೆ ಇತ್ಯಾದಿಗಳು ಎಲ್ಲಿ ಸಿಗುತ್ತವೆ ಎನ್ನುವುದನ್ನ ತಿಳಿಯುವುದರಲ್ಲಿ ಕಳೆದು ಹೋಯ್ತು . ಒಂದೆರೆಡು ತಿಂಗಳಲ್ಲಿ ಇಲ್ಲಿನ ವಾತಾವರಣಕ್ಕೆ ಮನಸ್ಸು ಮತ್ತು ದೇಹ ಹೊಂದಿಕೊಂಡಿತು . ನಂತರ ನಿಧಾನಕ್ಕೆ ಇಲ್ಲಿನ ಜಗತ್ತನ್ನ ಗಮನಿಸಲು ಶುರು ಮಾಡಿದೆ. ಬಹಳಷ್ಟು ಜನ ಬೆಳಿಗ್ಗೆ ಓಡುವುದು , ಸೈಕ್ಲಿಂಗ್ , ವಾಕಿಂಗ್ ಮಾಡುತ್ತಿರುವುದು ಕಣ್ಣಿಗೆ ಬಿತ್ತು .

ಮೆಟ್ರೋ ರೈಲಿನಲ್ಲಿ ಸಾವಧಾನವಾಗಿ ಕುಳಿತು ಪುಸ್ತಕವನ್ನ ಓದುವ ಸಂಪ್ರದಾಯ ಕೂಡ ಇಲ್ಲಿರುವುದು ಗಮನಕ್ಕೆ ಬಂದಿತು. ನನ್ನ ಅಗಾಧ ದೇಹವನ್ನ ಕುರಿತು ಯಾರೂ ಲೇವಡಿ ಮಾಡದಿದ್ದರೂ ಒಮ್ಮೆ ನನ್ನ ನೋಡಿ ಮುಂದೆ ಹೋಗುತ್ತಿದ್ದರು. ನಾನು ಭಾರತೀಯ , ಇವರಂತೆ ಬಿಳಿಯನಲ್ಲ ಹೀಗಾಗಿ ನನ್ನನ್ನ ಮಾಡುತ್ತಾರೆ ಎನ್ನುವುದು ನನ್ನ ತಿಳುವಳಿಕೆಯಾಗಿತ್ತು . ಆದರೆ ಅದು ಸುಳ್ಳು ಎನ್ನುವುದು ನಂತರ ಗೊತ್ತಾಯ್ತು .

ಬಾರ್ಸಿಲೋನಾ ಸೇರಿ ಮೂರು ವರ್ಷ ಸೇರಿದ ನಂತರ ಅಂದರೆ 2003ರ ಪ್ರಾರಂಭದಲ್ಲಿ ಒಂದು ಕಿಲೋಮೀಟರ್ ನಡೆದರೆ ಸಾಕು ಬೆನ್ನು ನೋವು ಪ್ರಾರಂಭವಾಗುತ್ತಿತ್ತು . ನಾನು ನೋವು ಎಂದಾಗೆಲ್ಲಾ ಸಹೋದ್ಯೋಗಿ ಮೊಂತ್ಸಿ ' ಆಸ್ಪಿರಿನ್ ' ಮಾತ್ರೆಯನ್ನ ನೀಡುತ್ತಿದ್ದಳು .ಇಲ್ಲಿ ವೈದ್ಯರನ್ನ ಕೇಳದೆ ಆಸ್ಪಿರಿನ್ ಸೇವಿಸುವ ಪರಿಪಾಠವಿದೆ. ಕೊನೆಗೆ ಈ ನೋವಿಗೆ ಕಾರಣ ನನ್ನ ದೇಹ ತೂಕ ಎನ್ನುವುದು ಅರಿವಿಗೆ ಬಂದಿತು. ಅಂದಿನಿಂದ ವೇಗವಾಗಿ ನಡೆಯಲು ಶುರು ಮಾಡಿದೆ. ತಿನ್ನಿತ್ತಿದ್ದ ಊಟದಲ್ಲಿ ಅರ್ಧ ಕಡಿಮೆ ಮಾಡಿದೆ. ಇದು ಬಹಳ ಸರಳ ಲೆಕ್ಕಾಚಾರ .

ನಮ್ಮದೊಂದು ಖಾತೆಯಿದೆ ಎಂದುಕೊಳ್ಳಿ. ಅದು ಕ್ಯಾಲೋರಿ ಖಾತೆ . ನಾವು ನಿತ್ಯ ದೇಹಕ್ಕೆ 2,500 ಕ್ಯಾಲೋರಿ ಡೆಪಾಸಿಟ್ ಮಾಡಿದರೆ ದೇಹ ಅದಕ್ಕೆ ಬೇಕಾದ 1.900 ಕ್ಯಾಲೋರಿ ಬಳಸಿಕೊಂಡಿತು ಎಂದುಕೊಳ್ಳಿ , ಉಳಿದ 600 ಜಮಾವಣೆಯಾಗುತ್ತದೆ. ನಿತ್ಯವೂ ಹೀಗೆ ಆದರೆ ಜಮಾವಣೆ ಹೆಚ್ಚಾಗುತ್ತದೆ . ಅದೇ ಕೊಬ್ಬು , ಜಮಾವಣೆ ಹೆಚ್ಚಾಗಿ ಆಗುವುದು ಸೊಂಟ , ಪೃಷ್ಠ ಮತ್ತು ಹೊಟ್ಟೆಯ ಭಾಗದಲ್ಲಿ, ಹೀಗೆ ಜಮಾವಣೆ ಹೆಚ್ಚಾದಷ್ಟು ಕಷ್ಟ ಹೆಚ್ಚು . ಹಣದ ವಿಚಾರದಲ್ಲಿ ಕೂಡ ಇದು ಸತ್ಯ. ಯಾವುದೇ ಆಗಿರಲಿ ಹಿತವಾಗಿ ಮಿತವಾಗಿ ಇರಬೇಕು.

ಜಮಾವಣೆ ಹೆಚ್ಚಾದಾಗ ನಾವು ನಿತ್ಯ ಮಾಡುವ ಡೆಪಾಸಿಟ್ ಕಡಿಮೆ ಮಾಡಬೇಕು . ಅಂದರೆ ಊಟ ಕಡಿಮೆ ಮಾಡಬೇಕು. ಮತ್ತು ಒಂದಷ್ಟು ಖರ್ಚು ಮಾಡಬೇಕು , ಅಂದರೆ ನಡೆದಾಟ , ಓಡಾಟ ಹೆಚ್ಚು ಮಾಡಬೇಕು. 2,500ರ ಬದಲು 1,500 ಡೆಪಾಸಿಟ್ ಮಾಡಿ 600 ರಿಂದ 800 ಖರ್ಚು ಮಾಡಿದರೆ ಒಂದೆರೆಡು ವರ್ಷದಲ್ಲಿ ಜಮಾವಣೆ ತಾನಾಗೇ ಖಾಲಿಯಾಗುತ್ತದೆ . ನನ್ನ ವಿಷಯದಲ್ಲೂ ಹೀಗೆ ಆಯ್ತು. ಎರಡು ವರ್ಷದಲ್ಲಿ ದೇಹದ 45ಕೆಜಿ ತೂಕವನ್ನ ಯಾವುದೇ ಅಡ್ಡದಾರಿ ಹಿಡಿಯದೇ , ಶಸ್ತ್ರ ಚಿಕಿತ್ಸೆಗೆ ಒಳಗಾಗದೆ ಸಹಜವಾಗಿ ಕಳೆದುಕೊಂಡೆ.

ಎರಡು ವರ್ಷದ ನಂತರ ಜಾಗಿಂಗ್ ಶುರು ಮಾಡಿದೆ. ನನ್ನ ಜೀವನದ ಅತ್ಯಂತ ಸುಂದರ ದಿನಗಳವು. ಹತ್ತಾರು ಕಿಲೋಮೀಟರ್ ನಿಲ್ಲದೆ ಓದುವ ಸಾಮರ್ಥ್ಯ ವನ್ನ ಗಳಿಸಿಕೊಂಡೆ. ಮನೆಗೆ ಒಂದೆರಡು ಕಿಲೋಮೀಟರ್ ದೂರದಲ್ಲಿರುವ ಸಂತ ಜೆರೋಮಿ ದೆ ಲ ಮೊಂತ್ರಾ ಎನ್ನುವ ಬೆಟ್ಟವನ್ನ ಕೂಡ ಓಡಿಕೊಂಡು ಹತ್ತುತ್ತಿದ್ದೆ. ವಾರಾಂತ್ಯದಲ್ಲಿ ಬೀಚ್ ನಲ್ಲಿ ಓಟ. ಅರವತ್ತು ಕಿಲೋಮೀಟರ್ ಅಡೆತಡೆಯಿಲ್ಲದೆ ಸುಂದರ ಬೀಚ್ ನನ್ನ ಮನೆಯಿಂದ ಕೇವಲ ಒಂದೆರಡು ಕಿಲೋಮೀಟರ್ ದೂರದಲ್ಲಿತ್ತು.

ಅನುಭವಕ್ಕಿಂತ ದೊಡ್ಡ ದೇವರಿಲ್ಲ , ಅನುಭವವೇ ಜೀವನ.. ಉಳಿದದ್ದೆಲ್ಲಾ ಶೂನ್ಯ! ಅನುಭವಕ್ಕಿಂತ ದೊಡ್ಡ ದೇವರಿಲ್ಲ , ಅನುಭವವೇ ಜೀವನ.. ಉಳಿದದ್ದೆಲ್ಲಾ ಶೂನ್ಯ!

ಹೀಗೆ ಶನಿವಾರ ಮತ್ತು ಭಾನುವಾರ 18 ರಿಂದ 20 ಕಿಲೋಮೀಟರ್ ಕ್ರಮಿಸಿ ಬರುತ್ತಿದ್ದೆ. ರಮ್ಯ ಜೊತೆಯಾದ ನಂತರವೂ ಈ ಪರಿಪಾಠ ನಿಲ್ಲಲಿಲ್ಲ . ಮೊದಮೊದಲು ನನ್ನ ಹುಚ್ಚಾಟ ನೋಡಿ ರಮ್ಯಳಿಗೆ ಬೇಸರವಾಗುತ್ತಿತ್ತು , ನಂತರ ಬೆಟ್ಟ ಹತ್ತುವುದು , ದೇಹ ದಣಿಯುವವರೆಗೂ ಬೀಚ್ ನಲ್ಲಿ ಓಡುವುದು ಅವಳಿಗೂ ಅಭ್ಯಾಸವಾಯ್ತು .

ನಾವಿದ್ದ ಬಡಾವಣೆ ಬಾರ್ಸಿಲೋನಾ ನಗರದಿಂದ 7 ಕಿಲೋಮೀಟರ್ ದೂರದಲ್ಲಿತ್ತು . ಬಾದಲೂನಾ ಎನ್ನುವ ಈ ಪುಟಾಣಿ ನಗರದಲ್ಲಿ ಲ್ಯಾಟಿನ್ , ಚೀನಿಯರು , ಪಾಕಿಸ್ತಾನಿಗಳು ಮತ್ತು ಬಾಂಗ್ಲಾದೇಶಿಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿದ್ದರು . ಒಂದಷ್ಟು ಭಾರತೀಯರೂ ಕೂಡ ಇದ್ದರು,ಅವರು ಪಂಜಾಬಿಗಳು ಎಂದು ಹೇಳುವ ಅವಶ್ಯಕತೆ ಇದೆಯೇ ? ದಕ್ಷಿಣ ಭಾರತೀಯರ ಸಂಖ್ಯೆ ನಗಣ್ಯ .

ಪ್ರತಿ ವರ್ಷ ಬಾದಲೂನಾ ದಲ್ಲಿ 5, 10, 22 ಮತ್ತು 42 ಕಿಲೋಮೀಟರ್ ಓಟವನ್ನ ಏರ್ಪಡಿಸುತ್ತಿದ್ದರು. ಅಲ್ಲಿ ಬೇಕೆಂದರೂ ಕೂಡ ಒಬ್ಬ ಏಷ್ಯಾನ್ ಪ್ರಜೆ ಕಾಣಲು ಸಿಗುತ್ತಿರಲಿಲ್ಲ . ಚೀನಿಯರಿಗೆ ಕ್ಷಮತೆಯೇನೂ ಇತ್ತು. ಆದರೆ ಅವರು ಅಂದಿಗೂ ಮತ್ತು ಇಂದಿಗೂ ತಮ್ಮ ಕಮ್ಯುನಿಟಿ ಬಿಟ್ಟು ಬೇರೆಯವರ ಕೋಟೆಗೆ ಹೊಂದಿಕೊಂಡು ಬಾಳುವುದು ಕಲಿತಿಲ್ಲ . ಹೀಗಾಗಿ ಚೀನಿಯರು ಅಲ್ಲಿ ಕಾಣಲು ಸಿಗುತ್ತಿರಲಿಲ್ಲ. ಇನ್ನು ದಕ್ಷಿಣ ಏಷ್ಯಾ ದವರ ಕಥೆಯನ್ನ ಹೇಳದಿರುವುದೇ ವಾಸಿ , ವಾರಾಂತ್ಯದಲ್ಲಿ ಪಕೋಡ , ಪರಾಟ ತಿಂದು ಗಡದ್ದಾಗಿ ನಿದ್ರೆ ತೆಗೆಯುವ ಜನರೇ ಹೆಚ್ಚಾಗಿದ್ದರು.

ನಾನು ಹತ್ತು ಕಿಲೋಮೀಟರ್ ನಿಲ್ಲದೆ ಓಡುವ ಕ್ಷಮತೆಯನ್ನ ಬೆಳಸಿಕೊಂಡ ನಂತರ ಇಲ್ಲಿನ 5ಕೆ ಯಲ್ಲಿ ಪಾಲ್ಗೊಂಡಿದ್ದೆ . ನಿತ್ಯ ಹತ್ತು ಕಿಲೋಮೀಟರ್ ಓಡಿದ್ದರೂ ಕೂಡ ಮನಸ್ಸಿನಲ್ಲಿ ಭಯ ಇದ್ದೆ ಇತ್ತು . ಇದನ್ನ ನಾನು ಪೂರ್ಣಗೊಳಿಸಲು ಸಾಧ್ಯವೇ ? ಎನ್ನುವ ಅಳುಕು ಕಾಡುತ್ತಿತ್ತು. ನನ್ನ ಸಂಶಯವನ್ನ ಅಂದು ಗೆದ್ದಿದ್ದೆ. ನಾನೇನು ಪ್ರಥಮ ಐದರಲ್ಲಿ ಹೋಗಲಿ ಹತ್ತರಲ್ಲಿ ಕೂಡ ಸ್ಥಾನ ಪಡೆಯಲಿಲ್ಲ. ಆದರೆ ಸಪೂರ್ಣಗೊಳಿಸಿದ ತೃಪ್ತಿ ಮನಸ್ಸಿನಲ್ಲಿತ್ತು . ಪಾರ್ಟಿಸಿಪೇಶನ್ ಸರ್ಟಿಫಿಕೇಟ್ ಗೆ ಮನಸ್ಸು ಹಿಗ್ಗಿ ಹಿರೇಕಾಯಿಯಾಗಿತ್ತು.

ಆ ನಂತರ ಒಂದು ವರ್ಷವೂ ತಪ್ಪಿಸಲಿಲ್ಲ . ಹಾಫ್ ಮ್ಯಾರಥಾನ್ ಓದುವ ಕ್ಷಮತೆಯನ್ನ ಗಳಿಸಿಕೊಂಡೆ . ಅದು ಸಾಧ್ಯವಾದದ್ದು ನನ್ನ ಮನಸ್ಸಿಗೆ ಮಾಡಬೇಕು ಎಂದು ಬಂದ ಕಾರಣದಿಂದ , ಇದಕ್ಕೂ ಮುಂಚೆ ಪೀಣ್ಯ ದಲ್ಲಿ ರಸ್ತೆಯಲ್ಲಿ ಹೋಗುವರೆಲ್ಲ ಬಿಟ್ಟಿ ಉಪದೇಶ ಕೊಡುತ್ತಿದ್ದರು. ಇದರರ್ಥ ಬಹಳ ಸರಳ ಸಾವಿರ ಜನ ಸಾವಿರ ಹೇಳಲಿ , ಅದು ನಮ್ಮ ಮನಸ್ಸಿನಲ್ಲಿ ಉತ್ಪತ್ತಿಯಾಗಬೇಕು. ಯಾವುದೇ ಬಯಕೆ ನಮ್ಮಲ್ಲಿ ಹುಟ್ಟಿದರೆ ಮತ್ತು ಅದಮ್ಯವಾಗಿ ಕಾಡಿದರೆ ಮಾತ್ರ ಅದು ಕಾರ್ಯರೂಪಕ್ಕೆ ಬರುತ್ತದೆ . ಹೊರಗಿನ ಜನ ಎಷ್ಟೇ ಪ್ರೇರೇಪಿಸಿದರೂ ಅದು ಒಳಗಿನ ಕೂಗಿಗೆ ಎಂದೂ ಸಮವಲ್ಲ .

ದೇಹದ ತೂಕ ಇಳಿದಿತ್ತು , 26/27 ಹರಯ . ದೇಹ ಮತ್ತು ಮನಸ್ಸು ಸದಾ ಭೂಮಿಗಿಂತ ಎರಡಡಿ ಮೇಲೆ ತೇಲಾಡುತ್ತಿತ್ತು . ಮೆಟ್ರೋ ಸ್ಟೇಷನ್ ನಲ್ಲಿ ಎಲೆವೇಟರ್ ಬಳಸುತ್ತಿರಲಿಲ್ಲ , ಎಲ್ಲಿ ಮೆಟ್ಟಿಲು ಕಂಡರೂ ಅದನ್ನ ಕ್ಷಣ ಮಾತ್ರದಲ್ಲಿ ಲೀಲಾಜಾಲವಾಗಿ ಹತ್ತಿ ಬಿಡುತ್ತಿದ್ದೆ. ನಡಿಗೆಯ ವೇಗ ಎಷ್ಟು ಹೆಚ್ಚಾಗಿತೆಂದರೆ ಬಹಳಷ್ಟು ಜನ ಗೆಳೆಯರು ನೀನು ನಿಧಾನವಾಗಿ ನಡೆದರೆ ನಿನ್ನ ಜೊತೆ ಬರುತ್ತೇವೆ ಎನ್ನುವಷ್ಟು! ಮಾಡುವ ಕೆಲಸದಲ್ಲಿ ಕೂಡ ಅಡತಡೆಯಿಲ್ಲದೆ ಯಶಸ್ಸು ಸಿಗುತ್ತಾ ಹೋಯ್ತು ಹೀಗಿದ್ದಾಗ ಆತ್ಮವಿಶ್ವಾಸ ಉತ್ತರಾಭಿಮುಖವಾಗಿ ವೇಗವಾಗಿ ಸಾಗುತ್ತಿತ್ತು .

ಹೀಗಿದ್ದಾಗ ಒಂದು ದಿನ ಲ ರಾಂಬ್ಲಾ ದಲ್ಲಿ ಒಂದಷ್ಟು ಹುಡುಗರು (ಕಲಾವಿದರು ) ದೇಹವನ್ನ ಗಾಳಿಯಲ್ಲಿ ಎರಡು ಅಥವಾ ಮೂರು ಸುತ್ತು ತಿರುಗಿಸಿ ನೆಲಕ್ಕೆ ಎಗರಿ ಬೀಳುತ್ತಿದ್ದರು . ರಸ್ತೆ ವಿಭಜಕಕ್ಕೆ ಇಟ್ಟಿರುವ ಪುಟಾಣಿ ಕಬ್ಬಿಣದ ಬ್ಯಾರಿಕೇಡ್ ಮೇಲೆ ಕಾಲೂರಿ ಗಾಳಿಯಲ್ಲಿ ಹಾರಿ ನೆಲಕ್ಕೆ ಬೀಳುವುದು ಕೂಡ ಮಾಡುತ್ತಿದ್ದರು .

ನನ್ನ ದೇಹ ತೂಕ ಕಡಿಮೆಯಾಗಿತ್ತು ನಿಜ . ಮೊದಲಿಗಿಂತ ಕ್ಷಮತೆ ಕೂಡ ಹೆಚ್ಚಾಗಿತ್ತು ..., ಆದರೆ ... ಖಂಡಿತ ದೇಹವನ್ನ ಗಾಳಿಯಲ್ಲಿ ತೂರಿಸಿ ನೆಲಕ್ಕೆ ಬೀಳಿಸುವಷ್ಟು ಕ್ಷಮತೆ ಮತ್ತು ಅಭ್ಯಾಸ ಎರಡೂ ಇರಲಿಲ್ಲ . ಬಟ್ ಆತ್ಮವಿಶ್ವಾಸ ಇದೆಯಲ್ಲ ಅದು ಇದೆಲ್ಲವನ್ನ ಲೆಕ್ಕ ಹಾಕುವುದಿಲ್ಲ. ರಸ್ತೆ ವಿಭಜಕದ ಮೇಲೆ ಬಲಗಾಲು ಊರಿ ದೇಹವನ್ನ ಗಾಳಿಗೆ ಚಿಮ್ಮಿದೆ , ಕಾಲೂರುವಾಗ ಕ್ಲಕ್ ಎನ್ನುವ ಶಬ್ದ ಹೊರಟಿತು . ನೆಲಕ್ಕೆ ಲ್ಯಾಂಡ್ ಆಗಲಿಲ್ಲ ಉರುಳಿ ಬಿದ್ದೆ. ಬಲಗಾಲು ಅಲುಗಾಡಿಸಲು ಆಗದಷ್ಟು ಅಸಾಧ್ಯ ನೋವು. ಬಲಗಾಲ ಮಂಡಿ ಸಡಿಲ ಗೊಂಡಿತ್ತು .

ಕೆಲವರಿಗೆ ಭುಜ ಕುಸಿಯುತ್ತದೆ ಅಲ್ಲವೇ ? ಹಾಗೆ ನನಗೆ ಮಂಡಿ ಕುಸಿದಿತ್ತು . ನಿಲ್ಲಲು ಆಗುತ್ತಿರಲಿಲ್ಲ . ಎರಡೂ ಕೈಯಿಂದ ಬಲಗಾಲ ಮಂಡಿಯನ್ನ ಸ್ವಸ್ಥಾನಕ್ಕೆ ಕೂರಿಸಿದೆ. ವೈದ್ಯರ ಬಳಿಗೆ ಹೋಗಲಿಲ್ಲ ಎರಡು ಮೂರು ದಿನದಲ್ಲಿ ಸರಿಯಾಯ್ತು. ಇಂದಿಗೂ ವರ್ಷಕ್ಕೂ , ಎರಡು ವರ್ಷಕ್ಕೂ ಒಮ್ಮೆ ನನ್ನ ಕಾಲು ಕೈ ಕೊಡುತ್ತಿರುತ್ತದೆ . ಆದರೂ ಇಂದಿಗೂ ನಿತ್ಯ ಹತ್ತಾರು ಕಿಲೋಮೀಟರ್ ಓಟ ಅಥವಾ ನಡಿಗೆಯಿಲ್ಲದೆ ದಿನ ಮುಕ್ತಾಯವಾಗುವುದಿಲ್ಲ . ಹಾಗೊಮ್ಮೆ ನಡೆಯದಿದ್ದರೆ ಮನಸ್ಸಿನಲ್ಲಿ ದೊಡ್ಡ ಯುದ್ಧ ನಡೆಯುತ್ತದೆ , ಅಪರಾಧಿ ಭಾವ ಕಾಡುತ್ತದೆ. ಹೀಗಾಗಿ ನನ್ನದು ಇಂದಿಗೂ ನಿಲ್ಲದ ಓಟ .

English summary
Barcelona Memories Coloumn By Rangaswamy Mookanahalli Part 14,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X